Thursday, 7 November 2019

ಜಗದ ಸೃಷ್ಟಿಯ ಪೌರಾಣಿಕ ಕತೆಗಳು - 3

ಜಗವ ಸೃಷ್ಟಿಸಿದ ಪಂಕು ಮತ್ತು ನುಗು
ಆದಿಯಲ್ಲಿಎಲ್ಲೆಲ್ಲೂ ಶೂನ್ಯವೆ ಇತ್ತು. ಜೊತೆಗೊಂದು ಮೊಟ್ಟೆಯೊಂದಿತ್ತು. ಆ ಮೊಟ್ಟೆಯೊಳಗೆ ಕತ್ತಲಿತ್ತು. ಅದರಲ್ಲಿ ಕತ್ತಲಲ್ಲದೇ ಅದು ದಟ್ಟವಾದ ಅಸ್ತವ್ಯಸ್ತತೆಯ ತಬ್ಬಿಬ್ಬಿನ ಗೊಂದಲದ ಸುಳಿಯ ತಾಣವಾಗಿತ್ತು. ಸುಳಿಯು ತಣ್ಣಗಾಗಿ, ಗೊಂದಲ ಒಂದು ಹದಕ್ಕೆ ಬಂದಾಗ, ಆಕಾರವೊಂದು ರೂಪ ತಳೆಯತೊಡಗಿತ್ತು. ಅದು ಗುಜ್ಜಾರಿಗಿಡ್ಡನ ರೂಪದಲ್ಲಿ ಹೊರಬಂದಾಗ ಅದನ್ನು `ಪಂಕು' ಎಂದು ಕರೆಯಲಾಗುತ್ತಿತ್ತು. 
ನಿಧಾನವಾಗಿ `ಪಂಕು'ವಿನಲ್ಲಿ ಉಸಿರಾಟ ಆರಂಭವಾಗಿತ್ತು. ಅದು ಮಿಸುಕಾಡತೊಡಗಿತು. `ಪಂಕು'ವಿಗೆ ಜೀವ ಬಂದಿತ್ತು! ಮೈ ಮುರಿದು ಕಣ್ಣುಬಿಟ್ಟು ನೋಡಿದ `ಪಂಕು' ಕತ್ತಲಕೂಪದೊಳಗೆ ತಾನು ಸಿಕ್ಕಿ ಹಾಕಿಕೊಂಡಿದ್ದೇನೆ ಎನ್ನಿಸಿತು. ಮೊಟ್ಟೆಯ ಕವಚಕ್ಕೆ ಜೋರಾಗಿ ತಿವಿದಾಗ, ಅದು ಬಿರುಕುಬಿಟ್ಟು ಬಾಯಿ ತೆರೆಯಿತು. `ಯಿನ್' ಹೆಸರಿನ ಹಗುರವಾದ ಬೆಳಕಿನ ಕಣಗಳು `ಪಂಕು'ವಿನ ತಲೆಯ ಮೇಲೆ ಸಾಗಿ ಆಗಸವನ್ನು ರಚಿಸಿದವು. ಮತ್ತೆ `ಯಂಗ್' ಹೆಸರಿನ ಭಾರವಾದ ಕಣಗಳು `ಪಂಕು'ವಿನ ಕೆಳಗೆ ಕಲೆತು ನೆಲವಾಯಿತು.
ಆ ನೆಲದ ಮೇಲೆ - ಭೂಮಿಯ ಮೇಲೆ ಎದ್ದು ನಿಲ್ಲಲು ನೋಡಿದರೆ `ಪಂಕು'ವಿನ ಬೆನ್ನು ಆಕಾಶಕ್ಕೆ ಬಡಿಯುತ್ತಿತ್ತು. ನೇರವಾಗಿ ನಿಲ್ಲಲಾಗದ `ಪಂಕು', ಭೂಮಿಯ ಮೇಲೆ ಕಾಲುಗಳನ್ನು ಭದ್ರವಾಗಿರಿಸಿ ಎರಡೂ ಕೈಗಳ ಅಂಗೈಯನ್ನೆತ್ತಿ ಆಕಾಶವನ್ನು ಎತ್ತಿ ಹಿಡಿದ. ತನ್ನ ಬಲವನ್ನೆಲ್ಲಾ ಕೂಡಿಸಿ ಆಕಾಶವನ್ನು ಮೇಲೆ ತಳ್ಳಿದಾಗ, `ಪಂಕು'ವಿಗೆ ಸರಾಗವಾಗಿ ಸುಮ್ಮನೆ ಎದ್ದು ನಿಲ್ಲಲು ಸಾಧ್ಯವಾಯಿತು. 
ಹೀಗೆ ಆದರೆ, ಎಷ್ಟು ಹೊತ್ತು ಆಕಾಶವನ್ನು ಕೈ ಹಿಡಿದು ಹೊತ್ತು ನಿಲ್ಲುವುದು? ಅದನ್ನು ಕೈಬಿಟ್ಟರೆ, ಧಡಾರ್‌ ಎಂದು ಅವನ ಮೇಲೇ ಬಿದ್ದು ಅವನನ್ನು ಅಪ್ಪಚ್ಚಿ ಮಾಡುವ ಸಾಧ್ಯತೆ ಇದ್ದೇ ಇತ್ತು. ದಿನವೂ ಹಗಲು ಮಂಜನ್ನು ತಿನ್ನಲಾರಂಭಿಸಿದ `ಪಂಕು', ಆಗಸ ಮೈಮೇಲೆ ಬಿದ್ದರೇನು ಮಾಡುವುದು ಎಂದು ರಾತ್ರಿಯಲ್ಲಿ ನಿದ್ದೆಯನ್ನೇ ಮಾಡಲಿಲ್ಲ. ನಿಧಾನವಾಗಿ ಅವನ ಬೆಳವಣಿಗೆ ಆರಂಭವಾಯಿತು. ವಾರಕ್ಕೆ ಎಪ್ಪತ್ತು ಅಡಿಗಳಂತೆ ಅವನ ಬೆಳವಣಿಗೆಯಿಂದ ಅವನ ಎತ್ತರ ಹೆಚ್ಚುತ್ತಾ ಹೋಯಿತು. ಅದೇ ಬಗೆಯಲ್ಲಿ ಭೂಮಿ ಮತ್ತು ಆಕಾಶಗಳ ನಡುವಿನ ಅಂತರವೂ ಹೆಚ್ಚಾಗುತ್ತಾ ಸಾಗಿತು. ಹದಿನೆಂಟು ಸಾವಿರ ವರ್ಷಗಳ ನಂತರ ಭೂಮಿ ಮತ್ತು ಆಕಾಶಗಳ ಅಂತರದಲ್ಲಿ ಅಪಾರವಾದ ಹೆಚ್ಚಳ ಕಂಡಿತ್ತು. `ಇನ್ನು, ಆಕಾಶ ಮೈಮೇಲೆ ಬೀಳುವ ಭಯವಿಲ್ಲ' ಎಂಬ ಧೈರ್ಯ `ಪಂಕು'ವಿನಲ್ಲಿ ಮೂಡಿತು. 
`ಪಂಕು'ವಿಗೆ ತುಂಬಾ ತುಂಬಾ ದಣಿವಾಗಿತ್ತು. ಆಕಾಶವನ್ನು ಹೊತ್ತು ಹೊತ್ತು ಮೇಲೆ ತಳ್ಳಿ ತಳ್ಳಿ ಅವನ ಕೈಗಳು ಮತ್ತು ಕಾಲುಗಳು ನೋವಿನಿಂದ ಕುಂಯಿಗುಡ ತೊಡಗಿದ್ದವು. ನಿಧಾನವಾಗಿ ಆಗಸದ ಕೈ ಬಿಟ್ಟ `ಪಂಕು' ಕಾಲುಗಳನ್ನು ಮಡಚಿ ನೆಲಕ್ಕೆ ಕುಂಡಿ ಊರಿ ಕುಳಿತುಕೊಂಡ. ಹಾಗೆಯೇ ನೆಲದ ಮೇಲೆ ಮೈ ಒರಗಿಸಿ, ನಿರಂತರವಾಗಿ ಕಣ್ಣುಬಿಟ್ಟು ನಿಂತಿದ್ದ `ಪಂಕು', ರೆಪ್ಪೆಗಳನ್ನು ಮುಚ್ಚುತ್ತಾ ನಿದ್ದೆಗೆ ಶರಣಾದ. ನೆಲಕ್ಕೆ ಒರಗುತ್ತಿದ್ದಂತೆಯೇ ಗಾಢ ನಿದ್ರೆ ಆವರಿಸಿಬಿಟ್ಟಿತು.
ದುರಾದೃಷ್ಟ, `ಪಂಕು'ವಿಗೆ ಮತ್ತೆ ಎಚ್ಚರವೇ ಆಗಲಿಲ್ಲ. ಅವನು ಮಲಗಿದ್ದಲ್ಲಿಯೇ ಮರಣಿಸಿದ್ದ. ಅವನ ದೇಹವು ಪ್ರಪಂಚವಾಗಿ ಮಾರ್ಪಟ್ಟಿತು. ಅವನ ತಲೆ ಮತ್ತು ಕಾಲುಗಳು ಪೂರ್ವ ಮತ್ತು ಪಶ್ಚಿಮದ ಪವಿತ್ರಘಟ್ಟದ ಶ್ರೇಣಿಗಳಾದವು. ಅದೆ ಬಗೆಯಲ್ಲಿ, ಎಡಬಲದ ಕೈಗಳು ಉತ್ತರ ಮತ್ತು ದಕ್ಷಿಣದ ಪವಿತ್ರ ಪರ್ವತ ಶ್ರೇಣಿಗಳಾದವು. ಅವನ ಮುಂಡವು ಭೂಮಿಯ ಮಧ್ಯ ಪ್ರದೇಶದ ಪವಿತ್ರ ಪರ್ವತಗಳ ಸಾಲು ರೂಪ ತಾಳಿತು. ಈ ಎಲ್ಲಾ ಸಕಲ ಪರ್ವತ ಶ್ರೇಣಿಗಳ ತುದಿಗಳು ಸ್ವರ್ಗವನ್ನುಎತ್ತಿ ಹಿಡಿಯುವ ಆಧಾರ ಕಂಬಗಳಾದವು. 
ಮತ್ತೆ `ಪಂಕು'ವಿನ ತಲೆಯ ಮೇಲಿದ್ದ ಕೂದಲುಗಳು ಗ್ರಹಗಳ ಮತ್ತು ನಕ್ಷತ್ರಗಳ ರೂಪ ಪಡೆದವು. ಅವನ ಎಡಗಣ್ಣು ಸೂರ್ಯನಾದರೆ, ಬಲಗಣ್ಣು ಚಂದ್ರನಾಯಿತು. `ಪಂಕು'ವಿನ ದೇಹದ ಮಾಂಸ ಭೂಮಿಗೆ ಮಣ್ಣಾಯಿತು. ಇದಲ್ಲದೇ ಅವನ ಹಲ್ಲು ಮತ್ತು ಮೂಳೆಗಳು ಅಮೌಲ್ಯವಾದ ಪಚ್ಚೆ, ರತ್ನಗಳ, ಬಗೆ ಬಗೆಯ ಅದಿರು ಮತ್ತು ಲೋಹಗಳಾದವು. `ಪಂಕು'ವಿನ ಮೈ ಮೇಲಿನ ರೋಮಗಳು ಮರಗಳು, ಗಿಡಗಂಟಿಗಳು ಹಾಗೂ ಹೂವುಗಳಾದವು. ಅವನ ಮೃತದೇಹದ ಮೇಲೆ ಹರಿದಾಡುತ್ತಿದ್ದ ಹುಳುಹುಪ್ಪಡಿಗಳು, ಬಗೆಬಗೆಯ ಕೀಟಗಳ, ಪ್ರಾಣಿಗಳ ಪಕ್ಷಿಗಳ ಸ್ವರೂಪ ಪಡೆದವು. `ಪಂಕು'ವಿನ ದೇಹದಲ್ಲಿ ಹರಿದಾಡುತ್ತಿದ್ದ ರಕ್ತ ಬಾವಿ, ಕೆರೆ, ಹೊಳೆ, ಹಳ್ಳ, ನದಿಗಳ ಹಾಗೂ ಸಮುದ್ರದ ನೀರಾಯಿತು. ಅವನ ಉಸಿರಾಟದ ದೆಸೆಯಿಂದ ಆಗಲೇ ಗಾಳಿ ಮತ್ತು ಮೋಡಗಳು ಅಸ್ತಿತ್ವ ತಾಳಿದ್ದವು, ಅವನ ಶ್ರಮದ ಬೆವರು ಮಳೆ ಹನಿಗಳಾಗಿದ್ದವು ಮತ್ತೆ ಅವನ ಧ್ವನಿ ಗುಡುಗು ಮಿಂಚಿನರೂಪ ಪಡೆದಿದ್ದವು.
`ಪಂಕು'ವಿನ ದೇಹದ ಪಳೆಯುಳಿಕೆಗಳಿಂದ ಸುಂದರವಾದ ಪ್ರಪಂಚವೊಂದು ಅಸ್ತಿತ್ವದಲ್ಲಿ ಬಂದುದನ್ನು ದೂರದಲ್ಲಿ ನಿಂತು ನೋಡುತ್ತಿದ್ದ `ನುಗು' ದೇವತೆಯಕಣ್ಣು ಸೆಳೆಯಿತು. `ಪಂಕು'ವಿನ ದೇಹದ ಸೃಷ್ಟಿಯ ಪ್ರತಿಯೊಂದು ಸ್ಥಿರವಾದ, ಚರಾಚರ ವಸ್ತುವೂ- ಪ್ರಾಣಿ ಪಕ್ಷಿಗಳು, ಗಿಡಮರಗಳು, ಹುಳು ಹುಪ್ಪಡಿಗಳು, ಸಕಲ ಪ್ರಾಣಿಗಳು ತಮ್ಮತಮ್ಮ ಸಮುದಾಯಗಳಲ್ಲಿ ಅನ್ಯೋನ್ಯವಾಗಿ ಜೀವಿಸುತ್ತಿರುವುದನ್ನು ನೋಡುತ್ತಾ ಇರುವುದು ಅವಳಿಗೆ ಸಂತಸವನ್ನು ನೀಡುತ್ತಿತ್ತು.
`ನುಗು' ದೇವತೆಗೆತನ್ನದೇ ಆದ ಅದ್ಭುತವಾದ ಪ್ರಾಣಿಗಳನ್ನು ಸೃಷ್ಟಿಸಬೇಕೆನ್ನುವ ಹುಕಿ ಹುಟ್ಟಿಕೊಂಡಿತು. ತಾನು ಸೃಷ್ಟಿಸುವ ಪ್ರಾಣಿ ಉಳಿದೆಲ್ಲಾ ಪ್ರಾಣಿ ಪಕ್ಷಿಗಳಿಗಿಂತ ಮೇಲಾದುದಾಗಿರಬೇಕು ಎಂದು ಅವಳು ಬಯಸಿದಳು. ಅದಕ್ಕಾಗಿ ಅಗತ್ಯ ವಸ್ತುಗಳಿಗಾಗಿ ಸಾಕಷ್ಟು ಹುಡುಕಾಟ ನಡೆಸಿದಳು. ಆಗಸದಿಂದ ಭೂಮಿಗೆ ಧುಮುಕಿ, ಬಂಗಾರದ ಸಮುದ್ರದ ತೀರದಲ್ಲಿ ತಡಕಾಡಿದಳು, ಮರಳನ್ನು ಬಳಸಲು ಪ್ರಯತ್ನಿಸಿದಳು. ಅವಳ ಸೃಷ್ಟಿ ಕುಸಿದು ಬೀಳುತ್ತಿತ್ತು. 
ಕಲ್ಲಿನಲ್ಲಿ ಕೆತ್ತಲು ಪ್ರಯತ್ನಿಸಿದಳು. ಅವಳಿಗೆ ಅದು ಬಹಳ ಕಷ್ಟದ ಕೆಲಸ ಅನ್ನಿಸಿತು. ಆಗ, ಆಕಸ್ಮಿಕವಾಗಿ ಹಳದಿ ನದಿಯ ದಡದಲ್ಲಿನ ಮೆಕ್ಕಲು ಮಣ್ಣು ಕಣ್ಣಿಗೆ ಬಿತ್ತು. ಅದು ಮೃದುವಾಗಿದ್ದು, ಬಯಸಿದ ಆಕಾರದಲ್ಲಿ ರೂಪಪಡೆಯುವ ಮಣ್ಣಾಗಿತ್ತು.
ದೇವತೆ `ನುಗು' ಆ ಮೃದು ಮಣ್ಣನ್ನು ತುಳಿದು, ತಟ್ಟಿ, ನಾದಿ ಒಂದು ಹದಕ್ಕೆತಂದು, ಇಷ್ಷಿಷ್ಟೇ ಹದವಾದ ಮಣ್ಣುತೆಗದುಕೊಂಡು, ಒಂದು ರೂಪಕೊಡಲು ಮುಂದಾದಳು. ಹತ್ತಾರು ಬಾರಿ ಮಾಡಿ ಕೆಡಿಸಿದ ನಂತರ ಕೊನೆಗೊಂದು ಮೈ ತಳೆದ ಆಕಾರ ಅವಳ ಮನಸ್ಸಿಗೆ ನೆಮ್ಮದಿ ತಂದಿತು. ಆಕೆ, ಪುಟ್ಟದಾದ ಮಾಟವಾದ ಆ ಆಕಾರವನ್ನೇ ಹೋಲುವ ಮತ್ತಷ್ಟು ಆಕಾರಗಳನ್ನು ರಚಿಸಿದಳು. ಅವನ್ನೆಲ್ಲಾ ನಿಲ್ಲಿಸಿ ನೋಡಿ ಏನು ಹೆಸರಿಡೋಣ? ಎಂದು ಯೋಚನೆ ಮಾಡಿ ಮಾಡಿ ಅವಕ್ಕೆ `ಜನ' ಎಂದು ಹೆಸರಿಟ್ಟಳು.
ಆ ಜನರಲ್ಲಿ ಕೆಲವರು ಎತ್ತರವಿದ್ದರು, ಕೆಲವರು ಕುಳ್ಳಗಿದ್ದರು, ಮತ್ತೆ ಕೆಲವರು ದಪ್ಪಗಿದ್ದರು, ಇನ್ನೊಂದಿಷ್ಟು ಜನ ತೆಳ್ಳಗಿದ್ದರು, ಕೆಲವರು ಭಾರವಾಗಿದ್ದರು, ಕೆಲವರು ಹಗುರವಾಗಿದ್ದರು. ಆದರೆ, ಪ್ರಾಥಮಿಕವಾಗಿ ಎರಡು ಬಗೆಯ ಜನರಿದ್ದರು. ದೇವತೆ `ನುಗು' ಒಂದು ಬಗೆಯ ಜನರಿಗೆ ಪುರುಷತನ `ಯಂಗ್' ಅನ್ನು ಉಸಿರಿದಾಗ ಅವರು ಪುರುಷರಾದರು. ಉಳಿದವರಿಗೆ ಮಹಿಳಾತನ `ಯಿನ್' ಅನ್ನು ಉಸಿರಿದಾಗ ಅವರು ಮಹಿಳೆಯರಾದರು. 
ತಾನು ರಚಿಸಿದ ಜನತನ್ನ ಮುಂದೆ ಮಾತನಾಡ ತೊಡಗಿರುವುದನ್ನು, ನಡೆದಾಡುವುದನ್ನು ಮತ್ತು ಸುತ್ತಲ ಪರಿಸರವನ್ನು ಅವಲೋಕಿಸುವುದನ್ನು ನೋಡಿ, ದೇವತೆ `ನುಗು'ಗೆ ಸಂತೋಷವಾಯಿತು. ಅವಳು ಚಪ್ಪಾಳೆ ತಟ್ಟಿತನ್ನ ಸಂತೋಷವನ್ನು ವ್ಯಕ್ತಪಡಿಸಿದಳು.
ಆ ಜನರನ್ನು ಕಂಡು ಉತ್ತೇಜಿತಳಾದ `ನುಗು' ದೇವತೆ ಒಂದೇ ಬಾರಿಗೆ ಹೆಚ್ಚು ಹೆಚ್ಚು ಜನರನ್ನು ಸೃಷ್ಟಿಸಲು ಯೋಚಿಸತೊಡಗಿದಳು. ಅವಳ ಉತ್ಸಾಹ ಮೇರೆ ಮೀರಿತ್ತು. ತಾಳ್ಮೆ ಕಳೆದುಕೊಂಡ ಅವಳು ಶೀಘ್ರ ಶೀಘ್ರವಾಗಿ ಮತ್ತಷ್ಟು ಜನರನ್ನು ಸೃಷ್ಟಿಸುವ ವಿಧಾನದ ಬಗೆಗೆ ಚಿಂತಿಸತೊಡಗಿದಳು. 
ಆಗ, ಅವಳ ಕಣ್ಣಿಗೆ ಅಲ್ಲೆ ಹತ್ತಿರದಲ್ಲಿ  ಬಿದ್ದಿದ್ದ ಉದ್ದನೆಯ ಹಗ್ಗವೊಂದು ಕಾಣಿಸಿತು. ತಕ್ಷಣವೇ ಅದನ್ನು ಕೈಗೆತ್ತಿಕೊಂಡ `ನುಗು' ದೇವತೆ ಹಳದಿ ನದಿಯ ಮೃದುವಾದ ಮಣ್ಣಿನಲ್ಲಿ ಇರಿಸಿದಳು. ಅಲ್ಲಿಯೇ ಅದನ್ನು ಇಟ್ಟು ಗಿರಗಿರನೇ ಸುತ್ತ ತೊಡಗಿದಳು. ನದಿಯ ಮಣ್ಣಿನಲ್ಲಿದ್ದ ಹಗ್ಗಕ್ಕೆ ಸಾಕಷ್ಟು ಪ್ರಮಾಣದಲ್ಲಿ ಅಂಟುಅಂಟಾದ ಮೆಕ್ಕೆಮಣ್ಣು ಮೆತ್ತಿಕೊಂಡಿತು. ನಿಧಾನವಾಗಿ ಅದನ್ನು ಮೇಲೆತ್ತಿಕೊಂಡು ದಂಡೆಗೆ ಬಂದ `ನುಗು' ದೇವತೆ ಅದನ್ನು ಜೋರಾಗಿ ಗಿರಗಿರ ತಿರುಗಿಸತೊಡಗಿದಳು. ಅದರಿಂದ ಸಿಡಿದು ನೆಲಕ್ಕೆ ಬೀಳುವ ಪ್ರತಿಯೊಂದು ಹನಿಯಿಂದ ಜನ ರೂಪಗೊಳ್ಳ ತೊಡಗಿದರು. 
ಅದನ್ನು ಕಂಡು `ನುಗು' ದೇವತೆಗೆ ರೋಮಾಂಚನ ಉಂಟಾಯಿತು. ಆದರೆ ಈ ಜನ, ಅವಳು ಈ ಮೊದಲು ಕೈಯಾರೆ ಮಾಡಿದ್ದ ಜನರಂತೆ ಇರಲಿಲ್ಲ. ಅವರಷ್ಟು ಮಾಟವಾಗಿರಲಿಲ್ಲ, ಅವರಲ್ಲಿ ಚುರುಕುತನವಿರಲಿಲ್ಲ, ಅವರಷ್ಟು ಕೌಶಲ್ಯವನ್ನೂ ಹೊಂದಿರಲಿಲ್ಲ. ಆದರೆ, ಅದರ ಬಗ್ಗೆ ನುಗು ದೇವತೆ ತನ್ನ ತಲೆ ಕೆಡಿಸಿಕೊಳ್ಳಲಿಲ್ಲ. ಏಕೆಂದರೇ, ಹಳದಿ ನದಿಯ ಮಣ್ಣಿನಲ್ಲಿ ಅದ್ದಿದ ಹಗ್ಗವನ್ನು ಸುತ್ತಿಸುವುದರಿಂದ ಜನರನ್ನು ಮಾಡುವುದು ಆಕೆಗೆ ಸುಲಭದ ಕೆಲಸವಾಗಿತ್ತು. ಈ ಎರಡೂ ವಿಧಾನಗಳಲ್ಲಿ ಅಸ್ತಿತ್ವಕ್ಕೆ ಬಂದ ಜನ ಪರಸ್ಪರ ಪರಿಚಯಿಸಿಕೊಳ್ಳುವುದನ್ನು ಕಂಡು `ನುಗು' ದೇವತೆಗೆ ಸಂತಸವಾಯಿತು. 
ಮೊದಲು ಬಂದ ಮಾಟವಾದ ಜನ, ಬುದ್ಧಿವಂತರಾಗಿದ್ದರು, ಅವರು ನಿಧಾನವಾಗಿ ಚಾಕಚಕ್ಯತೆಯಿಂದ ಎಲ್ಲದರ ಮೇಲೂ ತಮ್ಮ ಹಿಡಿತ ಸಾಧಿಸತೊಡಗಿದರು. ನಾಯಕತ್ವದಗುಣ ಹೊಂದಿದ್ದ ಈ ಮಾಟವಾದ ಜನರ ನಾಯಕತ್ವವನ್ನು, ನಂತರ ಹಗ್ಗದಿಂದ ಅಸ್ತಿತ್ವದಲ್ಲಿ ಬಂದ ಜನರು ಸರಳವಾಗಿ ಒಪ್ಪಿಕೊಂಡರು. ಒಳ್ಳೆಯ ಕೆಲಸಗಾರರಾಗಿದ್ದ ಹಗ್ಗದಜನ ತಮ್ಮ ಇರುವಿಕೆಯ ಬಗ್ಗೆ ಅಷ್ಟೇನೂ ಬೇಸರಿಸಿಕೊಳ್ಳಲಿಲ್ಲ. ಎಲ್ಲ ಜನರೂ ಸಮಾಧಾನವಾಗಿದ್ದರು, ಸಂತಸದಲ್ಲಿ ಜೀವನ ಸಾಗಿಸುತ್ತಿದ್ದರು. 
ಆ ಜನರು ಊರುಗಳನ್ನು ಕಟ್ಟಿದರು, ಬಾವಿಗಳನ್ನು ತೋಡಿದರು. ನೆಲವನ್ನು ಊಳತೊಡಗಿದರು. ಸಮಾಧಾನದಲ್ಲಿ ಎಲ್ಲವನ್ನು ರೂಢಿಸಿಕೊಂಡು ನೆಮ್ಮದಿಯ ಜೀವನ ಸಾಗಿಸುತ್ತಿದ್ದರು. ಆದರೆ, ಒಂದು ದಿನ ಅವರೆಲ್ಲರಿಗೂ ಸಂಕಟ ಬಂದಿತು. 
ಏಕೆಂದರೆ, ಈ ಜನರ ಹೆಚ್ಚುತ್ತಿರುವ ಚಟುವಟಿಕೆಗಳಿಂದ ಭೂಮಿಯ ಅಡಿಯಲ್ಲಿ ಮಲಗಿದ್ದ `ಗೊಂಗ್‌ಗೊಂಗ್' ದೈತ್ಯಪ್ರಾಣಿಗೆ ತೊಂದರೆಯಾಯಿತು. ಸಿಟ್ಟಿಗೆದ್ದ ಅದು ಭೂಮಿಯಿಂದ ಎದ್ದು ಹೊರಗೆ ಬಂದಿತು. ಅದು ಹೊರಗೆ ಬರುತ್ತಿದ್ದಂತೆಯೆ ಬಿರುಕು ಬಿಟ್ಟ ಭೂಮಿಯಿಂದ ಬೆಂಕಿಯ ನದಿಯು ಹರಿಯುತ್ತಾ ಕೆನ್ನಾಲಿಗೆಗಳೊಂದಿಗೆ ತೂರಾಡತೊಡಗಿತು. 
`ಗೊಂಗ್‌ಗೊಂಗ್' ದೈತ್ಯ ಪ್ರಾಣಿ, ಹಿಂದಕ್ಕೆ ಸರಿದು ತನ್ನತಲೆ ಹೆಗಲು ಕೊಡವಿಕೊಂಡಿತು. ಸಿಟ್ಟಿನ ಕೈಯಲ್ಲಿ ಬುದ್ಧಿಕೊಟ್ಟಿದ್ದ ಆ ದೈತ್ಯ ಪ್ರಾಣಿ, ಹಿಂಗಾಲಿನಲ್ಲಿ ನಿಂತುತಲೆಯಿಂದಡಿಕ್ಕಿ  ಹೊಡೆದಾಗ, ಆಕಾಶವನ್ನು ಎತ್ತಿ ಹಿಡಿದಿದ್ದ ಪರ್ವತಗಳು ಅದುರಿದವು. ಆಕಾಶಕ್ಕೆ ದೊಡ್ಡ ತೂತು ಬಿತ್ತು. ಸ್ವಲ್ಪ ಪ್ರಮಾಣದಲ್ಲಿ ಆಕಾಶ ಕುಸಿದು ಬಿತ್ತು. ಆಕಾಶದಿಂದ ದೊಡ್ಡ ಹರಿವಿನಲ್ಲಿ ನೀರು ಸುರಿಯತೊಡಗಿತು.
ತನ್ನ ಜನರು ಜೀವ ಉಳಿಸಿಕೊಳ್ಳಲು ಹೆದರಿಕೆಯಲ್ಲಿ ಅತ್ತ ಇತ್ತ ದಿಕ್ಕುಪಾಲಾಗಿ ಓಡುತ್ತಿರುವುದನ್ನು ನೋಡಿ, `ನುಗು' ದೇವತೆಗೆ ತನ್ನ ಜನರಗತಿ ಏನಾಗುವುದು? ಎಂಬ ಆತಂಕ ಮೂಡಿತು. ಜನರ ಸಹಸ್ರಾರು ಮನೆಗಳು ಒಂದುಕಡೆ ಬೆಂಕಿಗೆ ಆಹುತಿಯಾದರೆ, ಅದರಿಂದ ಬಚಾವಾಗಿ ಉಳಿದ ಇನ್ನೊಂದಿಷ್ಟು ಮನೆಗಳು ನೀರಲ್ಲಿ ಮುಳುಗಿದವು. `ನುಗು' ದೇವತೆಗೆ ತಕ್ಷಣ ಉಪಾಯವೊಂದು ಹೊಳೆಯಿತು.
ಅವಳು ಹಳದಿ ನದಿಯ ದಂಡೆಗುಂಟ ಬೆಳೆದ ಗಿಡಗಂಟಿಗಳಿಗೆ ಬೆಂಕಿ ಹಚ್ಚಿದಳು. ಗಿಡಗಂಟಿಗಳು ಸುಟ್ಟ ನಂತರ ಸಿಕ್ಕ ಬೂದಿಯನ್ನುಎತ್ತಿಕೊಂಡು ಹೋಗಿ ಬಿರುಕು ಬಿಟ್ಟ ಭೂಮಿಯ ಜಾಗಗಳನ್ನೆಲ್ಲಾ ತುಂಬಿದಳು. ಹಾಗಾದಾಗ, ಬೆಂಕಿಯುಗುಳುವ ಬೆಂಕಿಯ ನದಿಯು ನಂದಿತು. ನದಿಯ ತಳದಲ್ಲಿದ್ದ ಕಲ್ಲುಗಳನ್ನು ಆರಿಸಿಕೊಂಡು ಹೋಗಿ, ಒಂದೊಂದಾಗಿ ಆಗಸದಲ್ಲಿ ಉಂಟಾಗಿದ್ದ ತೂತುಗಳನ್ನು ಮುಚ್ಚಿದಳು.
ಬೆಂಕಿಯು ನಂದಿ ಹೋಯಿತು. ನೀರು ಹರಿದು ಹೋಯಿತು. ಜನರಲ್ಲಿ ಮತ್ತೆ ಜೀವ ಬಂದಂತಾಯಿತು. ಒಬ್ಬೊಬ್ಬರಾಗಿ ತಮ್ಮ ಮೊದಲಿನ ತಾಣಗಳಿಗೆ ಹಿಂದಿರುಗ ತೊಡಗಿದರು. `ನುಗು' ದೇವತೆಯ ಮೊಗದಲ್ಲಿ ನಗು ಮೂಡಿತು. ಅವಳ ಜನ, ಕೊನೆಗೆ ಮೊದಲಿನಂತೆಯೆ ಸುರಕ್ಷಿತವಾಗಿ ನೆಮ್ಮದಿಯ ಜೀವನ ಸಾಗಿಸ ತೊಡಗಿದರು. 

-- ಚೀನಾ ದೇಶದಲ್ಲಿ ಪ್ರಚಲಿತವಿರುವ ಸೃಷ್ಟಿಯ ಒಂದು ಪೌರಾಣಿಕ ಕತೆ.

ಎಫ್. ಎಂ. ನಂದಗಾವ್

No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...