Saturday, 21 December 2019

ಮನೆ ಮಠ ಇಲ್ಲದ ಮರಿಯಾತನಯ


·  ಫ್ರಾನ್ಸಿಸ್ ಎಂ ನಂದಗಾಂವ

ಚೌತಿಗಣೇಶ, ಬಂದ ಹೋದ. ಮನೆಮನೆಗಳಲ್ಲಿ, ಓಣಿ ಓಣಿಗಳ ಮಂಟಪಗಳಲ್ಲಿ ಒಂದು, ಮೂರು, ಐದು ಇತ್ಯಾದಿ ಬೆಸದ ಸಂಖ್ಯೆಯ ದಿನಗಳ ಕಾಲ ಪೂಜೆ ಮಾಡಿಸಿಕೊಳ್ಳುವ ಭೋಜನ ಪ್ರಿಯ ಗಣಪ, ಕೊನೆಗೆ ಗಂಗೆಯಲ್ಲಿ (ನೀರಿನಲ್ಲಿ) ಮುಳುಗುತ್ತಾನೆ. 
ಮರಾಠಿ ಭಾಷಿಕರಿರುವ ನೆರೆಯರಾಜ್ಯ ಮಹಾರಾಷ್ಟ್ರದ ಮರಾಠಿ ಭಾಷೆಯ ಮೂಲದ ಈ ಹಬ್ಬದ ಘೋಷ ವಾಕ್ಯ, “ತಂದೆಗಣಪತಿಯೆ ನಿನಗೆ ಜಯಕಾರ, ಮುಂದಿನ ವರ್ಷ ಬೇಗನೆ ಬಾರಾ” (ಗಣಪತಿ ಬಪ್ಪಾ ಮೋರಯಾ, ಫುಡಚ್ಯಾವರ್ಷಿ ಲೌಕರ್‌ಯಾ'). 
ವಿಘ್ನ ನಿವಾರಕ ಎಂದು ಗುರುತಿಸಲಾಗುವ ಗಣಪನಿಗೆ, ಯಾವುದೇ ಕೆಲಸ ಆರಂಭಿಸುವ ಮುನ್ನ ಮೊದಲ ಪ್ರಾರ್ಥನೆ ಸಲ್ಲುತ್ತದೆ. ಸಾಂಪ್ರದಾಯಿಕವಾಗಿ ಸಂಗೀತಗೋಷ್ಠಿ ಆರಂಭಿಸುವ ಮುನ್ನ ವಾತಾಪಿ ಗಣಪನನ್ನು (ಒಂದೊಮ್ಮೆ ಚಾಲುಕ್ಯ ಅರಸರ ರಾಜಧಾನಿಯಾಗಿದ್ದ ಬಾದಾಮಿ ಗಣೇಶನನ್ನು) ಸ್ತುತಿಸಲಾಗುತ್ತದೆ. ಇಂತಪ್ಪ ಗಣೇಶ ಇಂದು ಚೌತಿಯ ಸಂದರ್ಭದಲಿ, ಭಕ್ತರ ಆಶಯಗಳಿಗೆ ತಕ್ಕಂತೆ ಬಗೆ ಬಗೆಯ ಆಕಾರ, ವೇಷ ಭೂಷಣಗಳೊಂದಿಗೆ ಕಂಗೊಳಿಸುತ್ತಾ ಬಹುರೂಪಗಳಲ್ಲಿ ಪ್ರತ್ಯಕ್ಷಗೊಳ್ಳುತ್ತಾನೆ. 
ಸಾಂಪ್ರದಾಯಿಕವಾಗಿ ಚವತಿ ಹಬ್ಬದ ಸಂದರ್ಭದಲ್ಲಿ ಮಣ್ಣಿನ ಗಣೇಶಮೂರ್ತಿಗೆ ಪ್ರಾಶಸ್ತ್ಯವಿದ್ದರೂ, ಅಂದದ ದೆಸೆಯಿಂದ ಜನ ನೀರಲ್ಲಿ ಕರಗದ ಪ್ಲಾಸ್ಟರ್‌ಆಫ್ ಪ್ಯಾರಿಸ್‌ಗಣೇಶನಿಗೆ ಮಣೆ ಹಾಕುತ್ತಾ ಬಂದಿದ್ದಾರೆ. ದೇವರ ಪೀಠದಲ್ಲಿ ಸದಾಕಾಲ ಕಾಷ್ಠದ ಗಣೇಶ, ಗಂಧದ ಮರದ ಗಣೇಶ, ಸಂಗಮರಿಕಲ್ಲಿನ ಗಣೇಶ, ಕಪ್ಪುಕಲ್ಲಿನ ಗಣೇಶ, ಪಂಚಲೋಹದ ಗಣೇಶ, ಬೆಳ್ಳಿ ಗಣಪ, ಜರ್ಮನ್ ಸಿಲ್ವರ್ ಗಣೇಶ ಮೂರ್ತಿಗಳು ಇದ್ದೇ ಇವೆ. 
ಸೊಂಡಿಲು ಎತ್ತತಿರುಗಿದೆ ಎಂಬ ಹಿನ್ನೆಲೆಯಲ್ಲಿ ಎಡಮುರಿ ಗಣೇಶ, ಬಲಮುರಿ ಗಣೇಶ ಎಂದು ಗುರುತಿಸಿದರೆ, ವಿಶೇಷ ಗುಣಗಳ ಹಿನ್ನೆಲೆಯಲ್ಲಿ ಬಾಲಗಣೇಶ, ತರುಣಗಣೇಶ, ಭಕ್ತಿಗಣೇಶ, ವೀರಗಣೇಶ, ಶಕ್ತಿಗಣೇಶ, ದ್ವಿಜಗಣೇಶ, ಹೇರಂಭಗಣೇಶ, ಲಕ್ಷ್ಮಿಗಣೇಶ, ಮಹಾಗಣೇಶ, ನೃತ್ಯಗಣೇಶ, ಏಕದಂತಗಣೇಶ, ಉದ್ದಂಡಗಣೇಶ, ದ್ವಿಮುಖಗಣೇಶ, ತ್ರಿಮುಖಗಣೇಶ, ಪಂಚುಮುಖಿಗಣೇಶ, ಸಿಂಹಾರೂಢ ಗಣೇಶ, ಯೋಗಗಣೇಶ, ಸಂಕಷ್ಠಹರಗಣೇಶ ಎಂದು ಮುಂತಾದ ಗಣೇಶ ಮೂರ್ತಿಗಳಿವೆ. ಜೊತೆಗೆ, ಹಗ್ಗದ ಹೊರಸಿನ ಮೇಲೆ ವಿಶ್ರಮಿಸುತ್ತಿರುವ ಗಣೇಶ, ಬಲಗಾಲು ಮೇಲೆ ಎತ್ತಿಟ್ಟುಕೊಂಡ ಗಣೇಶ, ಎಡಕ್ಕೆ ವಾಲಿ ಕುಳಿತ ಗಣೇಶ, ಚಕ್ಕಳಮುಕಳಿ ಹಾಕಿ ಕುಳಿತ ಗಣೇಶ, ಸೋಫಾದಲ್ಲಿ ಕುಳಿತ ಗಣೇಶ, ಕಿರೀಟತೊಟ್ಟ ಗಣೇಶ, ಪೇಟ ಸುತ್ತಿಕೊಂಡ ಗಣೇಶ, ವೀಣಾಪಾಣಿ ಗಣೇಶ, ಸಿತಾರಗಣೇಶ, ಬೋಳತಲೆಗಣೇಶರೂ ಇದ್ದಾರೆ. 
ಇದಲ್ಲದೇ, ಚವತಿ ಹಬ್ಬದ ಸಮಯ ಆಯಾ ಭಕ್ತರ ಆಶಯದಂತೆ, ಬಾಡಿ ಬಿಲ್ಡರ್‌ಗಣೇಶ್, ಶಕ್ತಿಮಾನ್‌ಗಣಪ, ವೀರಪ್ಪನ್‌ಗಣಪ, ಪೊಲೀಸ್‌ಗಣಪ, ಸ್ಪೈಡರ್‍‍ಮ್ಯಾನ್‌ಗಣಪ, ಕಾರ್ಗಿಲ್‌ಯುದ್ಧವನ್ನು ಸ್ಮರಣೆಗೆ ತರುವ ಕಾರ್ಗಿಲ್‌ಗಣೇಶ.. ಇತ್ಯಾದಿ ಸ್ವರೂಪಗಳಲ್ಲಿ ಗಣೇಶ ಅವತಾರ ತಾಳುತ್ತಾನೆ. 
ದೈವ ಭಕ್ತರು ಚವತಿಯ ಗಣಪನನ್ನು ನೋಡುವ ಬಗೆಯಲ್ಲಿಯೇ, ಈಗ ಕ್ರೈಸ್ತ ವಿಶ್ವಾಸಿ ದೈವ ಭಕ್ತರು ತಮ್ಮತಮ್ಮ ಆಶಯದಂತೆ, ಬಗೆ ಬಗೆಯ ವೇಷದಲ್ಲಿ ಯೇಸುಸ್ವಾಮಿಗೆ ರೂಪಧಾರಣೆ ಮಾಡಲು ಮುಂದಾಗುತ್ತಿದ್ದಾರೆ. 
ಯೇಸುಸ್ವಾಮಿಯನ್ನು ಶಿಲುಬೆಗೆ ಏರಿಸಿದ್ದ ಘಟನೆಯ ಸ್ಮರಣೆಯಲ್ಲಿ, ಶಿಲುಬೆ ಕ್ರೈಸ್ತಧರ್ಮದ ಪ್ರಮುಖ ಧಾರ್ಮಿಕ ಲಾಂಛನವಾಗಿದೆ. ಕ್ರೈಸ್ತರ ಪ್ರಮುಖ ಧಾರ್ಮಿಕ ಲಾಂಛನವಾದ ಶಿಲುಬೆಯ ಆಕೃತಿಯಲ್ಲೂ ನೂರಾರು ಬಗೆಗಳಿರುವುದು ವಿವಿಧ ಕ್ರೈಸ್ತಧಾರ್ಮಿಕ ಪಂಗಡದ, ಧಾರ್ಮಿಕಸಭೆಗಳ ಹಾಗೂ ಕೂಟಗಳ ಸದಸ್ಯರಿಗೆ ಗೊತ್ತಿರುವ ಸಂಗತಿಯಾಗಿದೆ. ಇತಿಹಾಸದ ಒಂದು ಕಾಲಘಟ್ಟದಲ್ಲಿ ರೋಮಾಪುರಿಯಲ್ಲಿನ ಕಥೋಲಿಕರ ನಿಜದ ಅರ್ಥದ ಜಗದ್ಗುರು ಪಾಪುಸ್ವಾಮಿಗಳು, ಯುರೋಪಿನ ವಿವಿಧ ದೇಶಗಳ ರಾಜಾಧಿರಾಜರ ಧಾರ್ಮಿಕ ನೇತಾರರಾಗಿದ್ದ ಸಂದರ್ಭದಲ್ಲಿ, ಪ್ರಭು ಯೇಸುಸ್ವಾಮಿ ಕ್ರಿಸ್ತರಾಜರಾದದ್ದು ಅಂದಿನ ಕಾಲದ ಅನಿವಾರ್ಯವಾಗಿತ್ತೋ ಏನೊ. 
`ಕ್ರಿಸ್ಮಸ್' ಯೇಸುಸ್ವಾಮಿ ಧರೆಗಿಳಿದ ಸಂಭ್ರಮದ ಹಬ್ಬವಾದರೂ, ಅದರಲ್ಲಿ ಶಿಶು ಯೇಸುಸ್ವಾಮಿ ಗೋದಲಿಯಲ್ಲಿ ಮಲಗಿದ್ದು, ಅವರ ದಯನೀಯ ಸ್ಥಿತಿಯನ್ನು ತೆರೆದಿಡುತ್ತದೆ. ಮುಂದೆ ವಯಸ್ಕರಾಗಿ ಬೋಧನೆ ಆರಂಭಿಸಿದ ಯೇಸುಸ್ವಾಮಿ, ತನ್ನಂತೆ ಪರರನ್ನು ಪ್ರೀತಿಸಬೇಕು, ದೇವರ ಸಾಮ್ರಾಜ್ಯ ಬಡವರದ್ದು, ದೀನದಲಿತರದ್ದು ಎಂದು ಸಾರಿದ್ದರು. ಶಿಷ್ಯರ ಕಾಲು ತೊಳೆದು, `ನಾನು ನಿಮಗೆ ಮಾಡಿದಂತೆ ಇನ್ನೊಬ್ಬರಿಗೆ ನೀವು ಮಾಡಬೇಕು' ಎಂದು ನುಡಿದ ಯೇಸುಸ್ವಾಮಿ ಆದರ್ಶದ ಜನಸೇವೆಯ ಬದುಕಿನ ಜಾಡನ್ನು ತೋರಿಸಿಕೊಟ್ಟಿದ್ದರು. ಹಲವಾರು ಸಂತರು ದೀನದಲಿತರ, ಕುಷ್ಠರೋಗಿಗಳ ಸೇವೆಯಲ್ಲಿಯೇ ಯೇಸುಸ್ವಾಮಿಯನ್ನು ಕಂಡುಕೊಂಡಿದ್ದಾರೆ. 
ಅದೇ ದಾರಿಯ ಮುಂದುವರಿದ ಭಾಗವಾಗಿ, ಇಂದು ಉತ್ತರ ಅಮೇರಿಕ ಖಂಡದ ಕೆನಡಾ ದೇಶದ ಕಥೋಲಿಕ ಕ್ರೈಸ್ತ ಪಂಥಕ್ಕೆ ಸೇರಿರುವ ದೈವಭೀರು ಶಿಲ್ಪಿ ತಿಮೋತಿ. ಪಿ. ಸ್ಮಾಲ್ಝ್., ದೀನದಲಿತರ ಪರ ವಕಾಲತ್ತು ವಹಿಸುತ್ತಿದ್ದ, ಸ್ವರ್ಗದ ಸಾಮ್ರಾಜ್ಯ ಬಡವರದ್ದು, ದೀನದಲಿತರದ್ದು ಎಂದು ಸಾರಿದ ಯೇಸುಸ್ವಾಮಿಯನ್ನು ಒಬ್ಬ ಮನೆಮಠವಿಲ್ಲದ ವ್ಯಕ್ತಿಯಾಗಿ ಪರಿಭಾವಿಸಿಕೊಂಡಿದ್ದಾರೆ. ಅದನ್ನು ಅವರು ತಮ್ಮ `ಮನೆ ಇಲ್ಲದ ಯೇಸುಸ್ವಾಮಿ' (ಹೋಮ್ ಲೆಸ್‌ ಜೀಸಸ್) ಹೆಸರಿನ ಕಂಚಿನ ಕಲಾಕೃತಿಯಲ್ಲಿ ಭಟ್ಟಿ ಇಳಿಸಿದ್ದಾರೆ. 
ಕ್ರೈಸ್ತರ ಪವಿತ್ರ ಶ್ರೀಗ್ರಂಥ ಪವಿತ್ರ ಬೈಬಲ್‍ನಲ್ಲಿನ, ಹೊಸ ಒಡಂಬಡಿಕೆಯ ಮೊದಲ ನಾಲ್ಕು ಪುಸ್ತಕಗಳಾದ ಶುಭಸಂದೇಶಗಳಲ್ಲಿನ ಮೊದಲ ಪುಸ್ತಕ ಮತ್ತಾಯನು ಬರೆದ ಶುಭಸಂದೇಶದ 25ನೇ ಅಧ್ಯಾಯದ 40ನೇ ಚರಣದ ದೃಶ್ಯ ಮಾಧ್ಯಮ ಈ ಶಿಲ್ಪ ಎಂದು ಬಣ್ಣಿಸಲಾಗುತ್ತಿದೆ. 
ಯೇಸುಸ್ವಾಮಿಯ ಶಿಷ್ಯರಲ್ಲೊಬ್ಬರಾದ ಮತ್ತಾಯನ ಶುಭಸಂದೇಶದಲ್ಲಿನ ಈ ಚರಣ ಹೀಗಿದೆ: (ಆಗ ಅರಸನು ಪ್ರತ್ಯುತ್ತರವಾಗಿ), “ಈ ನನ್ನ ಸೋದರರಲ್ಲಿ ಒಬ್ಬನಿಗೆ ಅವನೆಷ್ಟೇ ಕನಿಷ್ಟನಾಗಿರಲಿ, ನೀವು ಹೀಗೆ ಮಾಡಿದಾಗಲೆಲ್ಲಾ ಅದನ್ನು ನನಗೆ ಮಾಡಿದಿರಿ, ಎಂದು ನಿಮಗೆ ಸತ್ಯವಾಗಿ ಹೇಳುತ್ತೇನೆ ಎನ್ನುವರು.” 
ಅದಕ್ಕೂ ಮೊದಲು ಹತ್ತು ಮಂದಿ ಕನ್ಯೆಯರ ಸಾಮಿತಿ ಹಾಗೂ ಒಡೆಯನಿಂದ ಪಡೆದ ಹಣವನ್ನು ದುಡಿಸಿಕೊಂಡ ಸೇವಕನನ್ನು ಶ್ಲಾಘಿಸುವಮ್ಕತೆಯನ್ನು ವಿವರಿಸಿದ ಯೇಸುಸ್ವಾಮಿ, ‘ಪರರ ಸೇವೆಯೇ ಪರಮಾತ್ಮನ ಸೇವೆ' ಎಂಬುದನ್ನು ಸ್ಪಷ್ಟಪಡಿಸಲು ಮಗದೊಂದು ಕತೆ ಹೇಳಿದ್ದರು. 
‘ನರಪುತ್ರನುತನ್ನ ಮಹಿಮೆಯಲ್ಲಿ ಸಮಸ್ತ ದೇವದೂತರ ಸಮೇತ ಬರುವಾಗತನ್ನ ಮಹಿಮಾನ್ವಿತ ಸಿಂಹಾಸನದಲ್ಲಿ ಆಸೀನನಾಗಿರುವನು. ಸರ್ವ ಜನಾಂಗಗಳನ್ನು ಅವನ ಸಮ್ಮುಖದಲ್ಲಿ ಒಟ್ಟುಗೂಡಿಸಲಾಗುವುದು... ನಾನು ಹಸಿದಿದ್ದೆ, ನನಗೆ ಆಹಾರಕೊಟ್ಟಿರಿ, ಬಾಯಾರಿದ್ದೆ, ಕುಡಿಯಲು ಕೊಟ್ಟಿರಿ, ಅಪರಿಚಿತನಾಗಿದ್ದೆ ನನಗೆ ಆಶ್ರಯ ಕೊಟ್ಟಿರಿ. ಬಟ್ಟೆಬರೆಯಿಲ್ಲದೆ ಇದ್ದೆ, ನನಗೆ ಉಡಲು ಕೊಟ್ಟಿರಿ. ರೋಗದಿಂದಿದ್ದೆ, ನನ್ನನ್ನು ಆರೈಕೆ ಮಾಡಿದಿರಿ. ಬಂಧಿಯಾಗಿದ್ದೆ, ನೀವು ನನ್ನನ್ನು ಸಂಧಿಸಿದಿರಿ ಎಂದು ಹೇಳುವನು. ಅದಕ್ಕೆ ಆ ಸಜ್ಜನರು, ಸ್ವಾಮಿ, ತಾವುಯಾವಾಗ ಹಸಿದಿದ್ದನ್ನು ಕಂಡು ನಾವು ಆಹಾರಕೊಟ್ಟೆವು? ಬಾಯಾರಿದನ್ನು ಕಂಡು ಕುಡಿಯಲುಕೊಟ್ಟೆವು? ಯಾವಾಗ ತಾವು ಅಪರಿಚಿತರಾಗಿದ್ದನ್ನು ಕಂಡು ನಾವು ಆಶ್ರಯಕೊಟ್ಟೆವು? ಬಟ್ಟೆಬರೆಯಿಲ್ಲದ್ದನ್ನು ಕಂಡು ಉಡಲುಕೊಟ್ಟೆವು?... ಆಗ ಅರಸನು ಪ್ರತ್ಯುತ್ತರವಾಗಿ.. ಎನ್ನುವನು.' (ಮತ್ತಾಯನ ಶುಭಸಂದೇಶ, 25ನೇ ಅಧ್ಯಾಯ, 31 ರಿಂದ 40ರವರೆಗಿನ ಚರಣಗಳು.) 
ಮತ್ತಾಯನ ಶುಭಸಂದೇಶದಲ್ಲಿನ ಈ ಮಾತುಗಳಿಗೆ ಮೂರ್ತ ಸ್ವರೂಪಕೊಟ್ಟ ಶಿಲ್ಪಿ ಕೆನಡಾ ದೇಶದ ತಿಮೋತಿ, ಉದ್ಯಾನವನದಲ್ಲಿನ ಬೆಂಚಿನಲ್ಲಿ ಮಲಗಿದ ಭಂಗಿಯಲ್ಲಿರುವ ಕಂಚಿನ ಕಲಾಕೃತಿಯೊಂದನ್ನು ರಚಿಸಿದ್ದರು. ಅವರು ಆ ಕಲಾಕೃತಿಗೆ ‘ಮನೆ ಇಲ್ಲದ ಮರಿಯಾತನಯ' ಅರ್ಥಾತ್ ‘ಮನೆಯಿಲ್ಲದ ಯೇಸುಸ್ವಾಮಿ' ಎಂದು ಹೆಸರಿಟ್ಟರು. 
‘ಮನೆ ಇಲ್ಲದ ಮರಿಯಾತನಯ' ಶಿಲ್ಪದಲ್ಲಿ ಪಾರ್ಕಿನಲ್ಲಿನ ಬೆಂಚಿನ ಮೇಲೆ ಮಲಗಿರುವ ವ್ಯಕ್ತಿಯು ಕಂಬಳಿಯೊಂದನ್ನು ಹೊತ್ತುಕೊಂಡಿರುವ. ಅವನು ಕಂಬಳಿಯನ್ನು ತಲೆಗೆ ಮುಸುಗು ಹಾಕಿಕೊಂಡಿರುವುದರಿಂದ ಮುಖ ಸ್ಪಷ್ಟವಾಗಿಕಾಣದು. ಆದರೆ ಕಂಬಳಿಯಿಂದ ಹೊರಚಾಚಿದ ಪಾದಗಳ ಮೇಲೆ ಮೊಳೆ ಹೊಡೆದು ಶಿಲುಬೆಗೆ ಏರಿಸಿದ ಗಾಯದ ಗುರುತುಗಳು ಗಾಢವಾಗಿ ಕಣ್ಣಿಗೆರಾಚುತ್ತವೆ. ಆ ಗಾಯಗಳು ಆ ವ್ಯಕ್ತಿ ಮತ್ತಾರೂ ಅಲ್ಲ, ಯೇಸುಸ್ವಾಮಿ ಎನ್ನುವುದನ್ನು ಶ್ರುತಪಡಿಸುತ್ತವೆ. 
ಈ ಕಲಾಕೃತಿಯ ಮೊದಲ ಅಚ್ಚನ್ನು ತಿಮೋತಿ ಕೆನಡಾದ ಟೊರೆಂಟೊ ಪಟ್ಟಣದಲ್ಲಿರುವ ಸಂತ ಮಿಖೇಲಪ್ಪರ ಮಹಾದೇವಾಲಯಕ್ಕೆ (ಸೆಂಟ್ ಮೈಕಲ್ಸ್‌ಕೆಥೆಡ್ರಲ್) ಮತ್ತು ಉತ್ತರ ಅಮೆರಿಕ (ಸಂಯುಕ್ತ ಸಂಸ್ಥಾನಗಳು)ದ ನ್ಯೂಯಾರ್ಕ್‌ನಲ್ಲಿರುವ ಸಂತ ಪೇತ್ರರ ಮಹಾದೇವಾಲಯಕ್ಕೆ (ಸೆಂಟ್ ಪೀಟರ್ಸ್‌ಕೆಥೆಡ್ರಲ್) ಕೊಡಲು ಹೋಗುತ್ತಾರೆ. ಆದರೆ, ಆ ಎರಡೂ ದೇವಾಲಯಗಳ ಉಸ್ತುವಾರಿ ಹೊತ್ತವರು, ದೇವಾಲಯಗಳ ನವೀಕರಣ ಕಾಮಗಾರಿ ನಡೆಯುತ್ತಿದ್ದು, ಅದನ್ನು ಇರಿಸಿಕೊಳ್ಳಲಾಗದು ಎಂದು ಶಿಲ್ಪಿಯ ಕೋರಿಕೆಯನ್ನು ತಳ್ಳಿಹಾಕುತ್ತಾರೆ. 
ಶಿಲ್ಪಿ ತಿಮೋತಿ ಅವರು ರಚಿಸಿದ್ದ ‘ಮನೆ ಇಲ್ಲದ ಮರಿಯಾತನಯ’ ಕಂಚಿನ ಕಲಾಕೃತಿಯ ಬಗ್ಗೆ ಆಸಕ್ತಿ ತಳೆದ ಟೊರೆಂಟೊ ವಿಶ್ವವಿದ್ಯಾಲಯದ ಯೇಸುಸಭೆಯ ದೈವಶಾಸ್ತ್ರ ಅಧ್ಯಯನ ಕೇಂದ್ರದ ರೇಜಿಸ್‌ಕಾಲೇಜಿನ ಆಡಳಿತಗಾರರು, ಆ ಕಲಾಕೃತಿಯನ್ನು ತಮ್ಮ ಕಾಲೇಜಿನ ಅಂಗಳದಲ್ಲಿ ಇರಿಸಿಕೊಳ್ಳುವ ಉದ್ದೇಶದಿಂದ ಕೊಂಡುಕೊಳ್ಳುತ್ತಾರೆ. ಇಷ್ಟೆಲ್ಲಾ ನಡೆದದ್ದು, 2013ನೇ ಸಾಲಿನ ಆದಿಭಾಗದಲ್ಲಿ. 
ಆ ನಂತರ ಕೇನಡಾದ ಶಿಲ್ಪಿ ತಿಮೋತಿ ಅವರ ಕಲಾಕೃತಿಗೆ ಬೇಡಿಕೆಗಳ ಸುರಿಮಳೆಯೇ ಆರಂಭವಾಗುತ್ತದೆ. ಉತ್ತರ ಅಮೆರಿಕದ ಉತ್ತರ ಕರೊಲಿನಾದ ಡೇವಿಡ್ ಸನ್‌ಊರಲ್ಲಿನ ಧರ್ಮಾಧ್ಯಕ್ಷ ಸಂತ ಅಲ್ಬನ್‌ರ ಇಗರ್ಜಿಯಲ್ಲಿ ಅದೇ 2013ನೇ ಸಾಲಿನಲ್ಲಿಯೇ ಆ ಕಲಾಕೃತಿಯ ಮತ್ತೊಂದು ಕಂಚಿನ ಪ್ರತಿಕೃತಿಯನ್ನು ಸ್ಥಾಪಿಸಲಾಗುತ್ತದೆ. ಆ ಇಗರ್ಜಿಯು 22,000 ಡಾಲರ್ ಹಣವನ್ನು ಕೊಟ್ಟು ಆ ಕಲಾಕೃತಿಯನ್ನು ಖರೀದಿಸುತ್ತದೆ. ಇದು ಉತ್ತರ ಅಮೆರಿಕದಲ್ಲಿ ಮೊಟ್ಟಮೊದಲು ಸ್ಥಾಪಿತಗೊಂಡ ‘ಮನೆ ಇಲ್ಲದ ಮರಿಯಾತನಯ' ಹೆಸರಿನ ಮೊದಲ ಕಲಾಕೃತಿ. ಅಮೆರಿಕದ ಬೇರೆ ಬೇರೆ ಊರುಗಳಲ್ಲಿನ ಕಥೋಲಿಕಕ್ರೈಸ್ತ ಪಂಥದವರ ಜೊತೆಗೆ ಪ್ರಾಟೆಸ್ಟಂಟ್ ಬಣಕ್ಕೆ ಸೇರಿದ ಇಗರ್ಜಿಗಳೂ, ಒಂದೊಂದಾಗಿ ಶಿಲ್ಪಿ ತಿಮೋತಿಯ ಈ ಕಲಾಕೃತಿಯನ್ನು ತಮ್ಮ ಅಂಗಳಗಳಲ್ಲಿ ಸ್ಥಾಪಿಸುವಲ್ಲಿ ಆಸಕ್ತಿ ತಳೆಯುತ್ತವೆ. 
ಮುಂದೆ, 2016ರ ಮಾರ್ಚ್ ತಿಂಗಳಲ್ಲಿ ‘ಮನೆ ಇಲ್ಲದ ಮರಿಯಾತನಯ' ಕಂಚಿನ ಕಲಾಕೃತಿಯು ಕಥೋಲಿಕ ಕ್ರೈಸ್ತ ಪಂಥದ ಪರಮೋಚ್ಚ ಗುರು, ನಿಜದ ಅರ್ಥದ ಜಗದ್ಗುರುವಿನ ನಿವಾಸ ಸ್ಥಾನವಾದ ಇಟಲಿ ದೇಶದರೋಮ ಪಟ್ಟಣದ ವ್ಯಾಟಿಕನ್ ಬಡಾವಣೆಯಲ್ಲಿರುವ ವಿಯಾಡೆಲ್ಲಾ ಕಾಂಜಿಲಿಯಜಿವೊನ್ ಬೀದಿಯಲ್ಲಿ ನಿಲ್ಲಿಸಲಾಗಿದೆ. ಈ ಬೀದಿಯು ಸಂತ ಪೇತ್ರದ ಮಹಾದೇವಾಲಯದ (ಸೆಂಟ್ ಪೀಟರ್ಸ್‌ಕೆಥೆಡ್ರಲ್) ಹೊರಗೆ ಇರುವ ಪಾಪುಸ್ವಾಮಿಗಳ ದತ್ತಿನಿಧಿ ಕಚೇರಿ (ಪೇಪಲ್‌ಆಫೀಸ್‌ಆಫ್‌ಚರಿಟೀಸ್)ಗೆ ಸಾಗುವ ದಾರಿ. 
ಕೆಲವರು ಶಿಲ್ಪಿ ತಿಮೋತಿಯ ಪ್ರಯತ್ನವನ್ನು ಶ್ಲಾಘಿಸಿದರೆ ಮತ್ತೆ ಕೆಲವರು ಶಿಲ್ಪಿಯು ಯೇಸುಸ್ವಾಮಿಯನ್ನು ಈ ರೀತಿಯಾಗಿ ಚಿತ್ರಸಿದ್ದು ಸರಿಯಲ್ಲ ಎಂದು ಆಕ್ಷೇಪಿಸಿದ್ದಾರೆ. ಏನೇ ಆದರೂ ಅದು ವರ್ಷಗಳು ಉರುಳಿದಂತೆ ಕ್ರೈಸ್ತ ವಿಶ್ವಾಸಿಗಳ ಗಮನಸೆಳೆಯುತ್ತಾ ಸಾಗುತ್ತಿದೆ. 
ಕಳೆದ 2016ರ ಸಾಲಿನ ಕೊನೆಯ ಹೊತ್ತಿಗೆ ವಿಶ್ವದಾದ್ಯಂತ 200 ಜಾಗಗಳಲ್ಲಿ ಶಿಲ್ಪಿ ತಿಮೋತಿಯ ‘ಮನೆ ಇಲ್ಲದ ಮರಿಯಾತನಯ' ಶಿಲ್ಪಕೃತಿ ಸ್ಥಾಪಿತಗೊಂಡಿದ್ದು, ಹೆಚ್ಚುತ್ತಿರುವ ಅದರ ಖ್ಯಾತಿಯನ್ನು ಜಾಹೀರುಪಡಿಸುತ್ತದೆ. 
ಇದಲ್ಲದೇ, ಇದೇ ವರ್ಷ 2019ರ ಸೆಪ್ಟೆಂಬರ್ ತಿಂಗಳಲ್ಲಿ ವ್ಯಾಟಿಕನ್‍ನ ಸಂತ ಪೇತ್ರರ ಚೌಕಿನಲ್ಲಿ ಅನಾವರಣಗೊಂಡ ‘ಅರಿವಿಗೆ ಬಾರದ ಸುಮ್ಮನಸ್ಸ್ಸುಗಳು' ಕಂಚಿನ ಪ್ರತಿಮೆಗಳ ಗುಚ್ಛದಕಲಾಕೃತಿಯನ್ನು ನಿರ್ಮಸಿದ್ದು ಸಹ ಇದೇ ಶಿಲ್ಪಿ - ತಿಮೋತಿ. ಪಿ. ಸ್ಮಾಲ್ಝ್. ಸುಮಾರು ಮೂರೂವರೆ ಟನ್ ಭಾರದ, 20 ಅಡಿ ಎತ್ತರದ ಈ ಕಂಚಿನ ಶಿಲ್ಪದ ಪ್ರತಿಮೆಗಳ ಗುಚ್ಛದಲ್ಲಿ, ವಿವಿಧ ಸಂಸ್ಕೃತಿ, ಕಾಲಘಟ್ಟಗಳನ್ನು, ದೇಶಗಳನ್ನು ಪ್ರತಿನಿಧಿಸುವ ಒಟ್ಟು 140 ವಲಸಿಗರ ನಿಂತ ನಿಲುವಿನ ಪ್ರತಿಮೆಗಳನ್ನು ದೋಣಿಯೊಂದರಲ್ಲಿ ಕಡೆದು ನಿಲ್ಲಿಸಲಾಗಿದೆ. 


******************* 

No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...