· ದೀಪ್ತಿ ಫ್ರಾನ್ಸಿಸ್ಕಾ, ಯಡವನಹಳ್ಳಿ
ತನ್ನ ಪ್ರೀತಿಯ ಸಂಗಾತಿ ಸಾರಾಳ ಸಾವಿನ ನಂತರ ಅಬ್ರಹಾಮ ಕೆಟೂರಳನ್ನು ಮದುವೆ ಮಾಡಿಕೊಳ್ಳುತ್ತಾನೆ. ಹಾಗರಳನ್ನೂ ಮಡದಿ ಎಂದು ಪರಿಗಣಿಸಿದರೆ ಕೆಟೂರಳನ್ನು ಅಬ್ರಹಮನ ಮೂರನೆಯ ಹೆಂಡತಿ ಎಂದು ಹೇಳಬಹುದು. ಸಾರಾಳ ನಿಧನದ ಮೂರು ವರ್ಷಗಳ ನಂತರ ಇಸಾಕನು ಮದುವೆಯಾದನು. ಅವನ ಮದುವೆಯಾದ ಬಳಿಕ ಅಬ್ರಹಾಮನು ಏಕಾಂಗಿಯಾಗಿ ಉಳಿದುಬಿಟ್ಟ. ಆ ವಯಸ್ಸಿನಲ್ಲಿ ಅವನ ಲಾಲನೆ-ಪಾಲನೆ ಮಾಡಲು ಸಂಗಾತಿಯೊಬ್ಬಳ ಅವಶ್ಯಕತೆ ಇತ್ತೆಂದು ಕೆಟೂರಳನ್ನು ಮದುವೆಯಾದನು. ಅವಳನ್ನು ಮದುವೆಯಾದಾಗ ಅಬ್ರಹಾಮನಿಗೆ 140 ವರ್ಷಗಳಾಗಿದ್ದವು(ಅವನು ಬದುಕಿದ್ದು 175 ವರ್ಷಗಳು). ಕೆಟೂರಳು ಯೌವನದ ವಯಸ್ಸಿನವಳಾಗಿದ್ದರಿಂದ ಅಬ್ರಹಾಮನಿಗೆ ಮಡದಿಯಾಗಿ ಇರುವುದಕ್ಕಿಂತ ಹೆಚ್ಚಾಗಿ ಅವನ ದಾಸಿಯಂತೆ ಹಾಗೂ ಕುಟುಂಬದ ಹಿರಿಯ ಮಗಳಂತೆ ಜೀವನ ಸಾಗಿಸುತ್ತಿದ್ದಳು.
ಕೆಟೂರಳು, ಪೂರ್ವ ಹಾಗೂ ದಕ್ಷಿಣ ಪ್ಯಾಲೆಸ್ಟೈನ್ ನಗರಗಳ ಆರು ಅರೇಬಿಯನ್ ಕುಲಗಳ ಪಿತೃಗಳಾದ ಜಿಮ್ರಾನ್, ಯೊಕ್ಷಾನ್, ಮೆದಾನ್, ಮಿದ್ಯಾನ್, ಇಷ್ಬಾಕ್ ಮತ್ತು ಶೂಹ ಎಂಬ ಮಕ್ಕಳನ್ನು ಹಡೆದಳು. ಪೂರ್ವಜ ಇಸ್ರಾಯೇಲರು ಅರಬ್ಬರನ್ನು ತಮ್ಮ ದೂರದ ಸಂಬಂಧಿಗಳೆಂದು ಪರಿಗಣಿಸಿದ್ದರು. ಹೀಗಾಗಿ ಕೆಟೂರಳ ಸಂತತಿಯ ಮೂಲಕ ಅಬ್ರಹಾಮನು "ಅನೇಕ ರಾಷ್ಟ್ರಗಳ ಪಿತಾಮಹ" ಆದನು. ಈ ಪಿತಾಮಹ ತನ್ನ ಮುದಿ ಪ್ರಾಯವನ್ನು ಕಾಳಜಿ, ಪ್ರೀತಿ ಕೊಟ್ಟ ತನ್ನ ಮಡದಿ ಕೆಟೂರ ಹಾಗೂ ಮಕ್ಕಳೊಂದಿಗೆ ಕಳೆದನು.
ಕೆಟೂರ ಹಾಗೂ ಅಬ್ರಹಾಮನ ಕುರಿತಾಗಿ ಬರೆಯಲ್ಪಟ್ಟಿರುವ ಕ್ಯೂಪರ್ ಎಂಬ ಲೇಖನದ ಪ್ರಕಾರ ಅವರಿಬ್ಬರ ಸಂಬಂಧ ರೋಮಾಂಚನಮಯ ಎಂದು ಹೇಳಲಾಗುವುದಿಲ್ಲ. ಬದಲಾಗಿ ಇದೊಂದು ಉನ್ನತ ನೈತಿಕತೆ ಹೊಂದಿರುವ ಉತ್ಸಾಹವಿಲ್ಲದ ಬಲವಾದ ಪ್ರೀತಿ ಎನ್ನಬಹುದು.
ತನ್ನದೇ ಆದ ಗುಡಾರದಲ್ಲಿ ಸ್ವತಂತ್ರ ಸ್ಥಾನಕ್ಕೆ ಬಂದ ಯುವ ಹೆಂಡತಿಯಂತೆ ಕೆಟೂರಳು ಕಂಡುಬರುವುದಿಲ್ಲ. ಆದರೆ ವಯಸ್ಸಾದವರಿಗೆ ಶುಶ್ರೂಷೆ ಮಾಡುವ ಹೆಂಡತಿಯಂತೆ ಕಂಡುಬರುತ್ತಾಳೆ. ಇಂತಹ ಮನೋಭಾವವು ಭಕ್ತಿಯನ್ನು ಸೂಚಿಸುತ್ತದೆಯಾದರೂ ಆ ಭಕ್ತಿ ಹೆಂಡತಿಯ ಪ್ರೀತಿಯನ್ನು ಮಗಳ ಪ್ರೀತಿಯೊಂದಿಗೆ ಸಂಯೋಜಿಸುತ್ತದೆ.
ಇಸಾಕನಿಗೆ ತನ್ನ ಮಲತಾಯಿ ಹಾಗರಳ ಕುರಿತು ಗೌರವ ಇತ್ತು. ಅವಳನ್ನು ಅಬ್ರಹಾಮನ ಬಳಿಗೆ ಕರೆತಂದು ಅವರಿಬ್ಬರಿಗೂ ಮದುವೆ ಮಾಡಿಸುವ ಆಸೆ ಅವನದಾಗಿತ್ತು ಆದರೆ ಅದಾಗದೆ ಇಸಾಕನ ಮದುವೆಯಾಗುವವರೆಗೂ ಅಬ್ರಹಾಮನು ಕಾದು ಕೆಟೂರಳನ್ನು ಮದುವೆಯಾದನು. ಅಬ್ರಹಾಮನಿಗೆ ಇನ್ನೂ ಮಕ್ಕಳು ಮಾಡುವ ಆಸೆ ಇತ್ತು ಕಾರಣ ಜೂದರ ಪವಿತ್ರ ಗ್ರಂಥದ ಪ್ರಕಾರ ಅನೇಕ ಮಕ್ಕಳನ್ನು ಹುಟ್ಟಿಸುವುದೆಂದರೆ, ಆ ಮಕ್ಕಳಲ್ಲಿ ಯಾರಿಂದ ವಂಶ ಉದ್ದಾರವಾಗುವುದೆಂದು ತಿಳಿಯದು. ಆದಾಮ ಮತ್ತು ಹವ್ವಳಿಗೆ ದೇವರು, ಫಲವತ್ತಾಗಿ ಸಂತತಿ ಹೆಚ್ಚಿಸಿರಿ ಎಂದು ಆಶೀರ್ವದಿಸಿದರು. ನೋವನ ಸಂತತಿಗೂ ಅದನ್ನೇ ನುಡಿದರು. ಸಂತತಿ ಬೆಳೆಯುವುದು ಸರ್ವೇಶ್ವರ ಸ್ವಾಮಿಯ ಇಚ್ಛೆ.
ಅಬ್ರಹಾಮನು ಇಸಾಕನ ಮೂಲಕ ಈಗಾಗಲೇ ಒಂದು ರಾಷ್ಟ್ರಕ್ಕೆ ಬುನಾದಿ ಹಾಕಿದ್ದ ಕಾರಣ ಇತರರಿಗೆ ಜೀವವನ್ನು ಉಡುಗೊರೆಯಾಗಿ ನೀಡುವ ಉದ್ದೇಶದಿಂದ ಕೆಟೂರಳನ್ನು ಮದುವೆಯಾದನು. ಅವಳು ಕುಟುಂಬದ ಹಿರಿಯ ಮಗಳಂತೆ ಅವರೆಲ್ಲರ ಸೇವೆ ಗೈದಳು. ಈ ಕುರಿತಾಗಿ ಮುದಿ ವಯಸ್ಕನನ್ನು ಮದುವೆಯಾಗುವ ಮಹಿಳೆಯರಿಗೆ ಹೀಗೆಂದು ವ್ಯಕ್ತಪಡಿಸುತ್ತಾಳೆ; ನೀವು ತೋರುವ ಪ್ರೀತಿಯಲ್ಲಿ ಪ್ರಾಮಾಣಿಕ ಭಯ-ಭಕ್ತಿ ಹಾಗೂ ಉನ್ನತ ಗುಣಮಟ್ಟದ ಪಾವಿತ್ರ್ಯ ಇರಬೇಕು. ಸೇವೆಯಲ್ಲಿ ಪಾವಿತ್ರ್ಯ ಹುರಿದುಂಬಿಸುವ ನಿಷ್ಠೆ ಇರಬೇಕು.
**************
No comments:
Post a Comment