Saturday, 21 December 2019

ತನ್ನ ಕಂದನನ್ನು ತನ್ನ ಹಾಲೆದೆಗೆ ಎಳೆದುಕೊಂಡಳು !


....ಪುಟ್ಟಪ್ಪನವರು, ಕಸಿನ್ಸ್‌ರವರ ಅತ್ಯಂತ ಮೌಲಿಕವಾಗಿರುವ ಉಪದೇಶವನ್ನು ನಿರೂಪಿಸಿದ್ದಾರೆ: 

ಈಗ ನನಗೆ ಅತ್ಯಂತ ಅವಿವೇಕವಾಗಿಯೂ ಹಾಸ್ಯಾಸ್ಪದವಾಗಿಯೂ ಧೂರ್ತವಾಗಿಯೂ ತೋರುವ ನನ್ನ ಆ ಉತ್ತರವನ್ನು ಆಲಿಸಿ ಪರಿಣತ ಮನಸ್ಸಿನವರೂ ಅನುಭವಶಾಲಿಯೂ ಆಗಿದ್ದ ಅವರು ಸೌಮ್ಯ ಸಾಂತ್ವನಕರ ಧ್ವನಿಯಿಂದ ಹೇಳಿದರು: “ಹಾಗಲ್ಲ, ಯಾವ ಭಾಷೆಯೂ ತನಗೆ ತಾನೆ ಅಸಮರ್ಥವಲ್ಲ. ಸಮರ್ಥನೊಬ್ಬನು ಬರುವತನಕ ಮಾತ್ರ ಅದು ಅಸಮರ್ಥವೆಂಬಂತೆ ತೋರಬಹುದು, ಅಸಮರ್ಥರಿಗೆ. ಸಮರ್ಥನು ಬಂದೊಡನೆ ಅವನ ಕೈಯಲ್ಲಿ ಅದು ಎಂತಹ ಅದ್ಭುತವನ್ನಾದರೂ ಸಾಧಿಸಬಲ್ಲುದು. ಈಗ ಬಂಗಾಳಿ ಭಾಷೆಯನ್ನು ನೋಡಿ. ನಿಮ್ಮ ಭಾಷೆಯನ್ನು ಕುರಿತು ಹೇಳಿದಂತೆಯೇ ಅದೂ ಇತ್ತು. ರವೀಂದ್ರನಾಥ ಠಾಕೂರರು ಬಂದರು, ಹೊಸ ಹೊಸ ರೀತಿಯಲ್ಲಿ ಬರೆದರು. ಹೊಸ ಛಂದಸ್ಸುಗಳನ್ನು ಕಂಡುಹಿಡಿದರು. ಅವರಿಗೆ ನೊಬೆಲ್ ಬಹುಮಾನವೂ ಬಂದಿತು. ಹಾಗೆಯೇ ನೀವು ಹೊಸ ಹೊಸ ಛಂದಸ್ಸುಗಳನ್ನು ಕಂಡು ಹಿಡಿದು, ಹೊಸ ಹೊಸ ಪದಪ್ರಯೋಗಗಳನ್ನು ಸಾಧಿಸಿ, ಹೊಸ ರೀತಿಯ ಸಾಹಿತ್ಯ ಸೃಷ್ಟಿ ಮಾಡಬೇಕು. ನೀವು ಸೃಷ್ಟಿಸುವ ಸಾಹಿತ್ಯ ಶ್ರೇಷ್ಠವೆಂದು ತೋರಿಬಂದರೆ ನಾವು ಅದನ್ನು ಇಂಗ್ಲಿಷಿಗೆ ಭಾಷಾಂತರಿಸಿಕೊಳ್ಳುತ್ತೇವೆ, ರವೀಂದ್ರರ ಸಾಹಿತ್ಯ ಭಾಷಾಂತರವಾಗಿರುವಂತೆ. ನೀವು ಇಂಗ್ಲಿಷಿನಲ್ಲಿ ಸೃಜನಶೀಲ ಸಾಹಿತ್ಯವನ್ನು ಸೃಷ್ಟಿಮಾಡಲಾರಿರಿ. ಅದು ನಿಮಗೆ ಪರಭಾಷೆ. ಹುಟ್ಟಿನೊಡನೆ ಬಂದ ಭಾಷೆಯಲ್ಲಿ ಮಾತ್ರ ಉತ್ತಮ ಸೃಜನಸಾಹಿತ್ಯ ರಚನೆ ಸೃಷ್ಟಿಯಾಗಬಲ್ಲದು. ಅದರಲ್ಲೂ ಕವಿತೆಯಲ್ಲಂತೂ ಉತ್ತಮ ಸೃಜನ ಸಾಹಿತ್ಯ ಯಾರಿಗೂ ಪರಭಾಷೆಯಲ್ಲಿ ಸಾಧ್ಯವಿಲ್ಲ. ಅದು ನಿಮಗೆ ಗೊತ್ತಾಗುವುದೂ ಇಲ್ಲ. ಅದನ್ನು ಓದುವ ನಮಗೆ ಗೊತ್ತಾಗುತ್ತದೆ. ಅದೆಂತಹ ನಗೆಪಾಟಲ ಸೃಷ್ಟಿ ಎಂಬುದು. 

ಕಸಿನ್ಸ್‌ರವರ ಉಪದೇಶ, ಸಹಜವಾಗಿಯೇ ಪುಟ್ಟಪ್ಪನವರಿಗೆ ಪಥ್ಯವಾಗಲಿಲ್ಲ. ಅವರು ಹೇಳುತ್ತಾರೆ: 

ಕಸಿನ್ಸ್‌ರವರ ಹಿತವಚನ ಮೇಲುಮೇಲಕ್ಕೆ ತಿರಸ್ಕೃತವಾಗಿದ್ದರೂ ಸುದೈವದಿಂದ ನನ್ನ ಅಂತಃಪ್ರಜ್ಞೆ ಅದನ್ನು ಒಪ್ಪಿಕೊಂಡಿತ್ತೆಂದು ತೋರುತ್ತದೆ. ಕನ್ನಡ ವಾಗ್ದೇವಿಯ ಕೃಪೆಯೂ ಆ ಸುಸಂಧಿಯನ್ನು ಉಪಯೋಗಿಸಿಕೊಂಡು ತನ್ನ ಕಂದನನ್ನು ತನ್ನ ಹಾಲೆದೆಗೆ ಎಳೆದುಕೊಂಡಳು ! 


ಕುವೆಂಪು ಸಂಚಯ (ಪೀಠಿಕೆ—xx) 

No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...