vpaulsj@gmail.com
ಕಳ್ಳ ಮತ್ತು ಅವನ ಮಗನ ನಡುವೆ ನಡೆಯುವ ಸ್ಪರ್ಧೆಯ ಒಂದು ದೃಶ್ಯ ಹಿಂದೊಮ್ಮೆ ಕನ್ನಡ ಚಲನಚಿತ್ರವೊಂದರಲ್ಲಿ ಮೂಡಿತ್ತು. ಕಳ್ಳತನದಲ್ಲಿ ಯಾರು ಎಷ್ಟು ನಿಪುಣರು ಅಥವಾ ಚಾತುರ್ಯವುಳ್ಳವರು ಎಂದು ಸಾಬೀತುಪಡಿಸುವಂತಹ ಸ್ಪರ್ಧೆ. ಅಪ್ಪ ಚತುರ ಮಗನಿಗೆ ಹೇಳುತ್ತಾನೆ – “ಕಳ್ಳತನ ಮಾಡುವುದರಲ್ಲಿ ನನ್ನನ್ನು ನೀನು ಮೀರಿಸಲು ಸಾಧ್ಯವೇ ಇಲ್ಲ. ಈ ಕಸುಬಿನಲ್ಲಿ ನನ್ನದು ಪಳಗಿದ ಕೈಗಳು. ನೀನು ಇನ್ನೂ ಪೋರ…” ಎಂದು ಮೂದಲಿಸಿ. ಮಗನನ್ನು ಪಂಥಾಹ್ವಾನಿಸಿ “ನೋಡು ನನ್ನ ಪ್ಯಾಂಟ್ ಜೇಬಿನಲ್ಲಿ ದುಡ್ಡು ಇದೆ.. ಅದನ್ನು ಪಿಕ್‍ಪಾಕೆಟ್ ಮಾಡಿ ನಿನ್ನ ಕೈಚಳಕ ತೋರಿಸು ನೋಡೋಣ” ಎನ್ನುತ್ತಾನೆ. ಅಖಾಡಕ್ಕೆ ಇಳಿಯುವ ಮಗ ಅಪ್ಪನನ್ನು ಸ್ಪಲ್ಪ ಹೊತ್ತು ಕಣ್ಣಲ್ಲಿ ಕಣ್ಣಿಟ್ಟು ಗಮನಿಸುತ್ತಾನೆ. ಅಪ್ಪನ ಗಮನವೆಲ್ಲ ಅವನ ಜೇಬಿನ ಮೇಲೆಯೇ ಇದ್ದು ಬಹು ಎಚ್ಚರದಿಂದ ಓಡಾಡುತ್ತಿರುತ್ತಾನೆ. ಹಾಗಾಗಿ ಮಗನಿಗೆ ಅಪ್ಪನಿಂದ ದುಡ್ಡು ಕದಿಯಲು ಸಾಧ್ಯವಾಗುವುದಿಲ್ಲ. ಆಗ ಜಂಬದಿಂದ ಅಪ್ಪ ಎದೆಯುಬ್ಬಿಸಿ ಮಗ ಸೋತುದನ್ನು ನೋಡಿ ಹೀಯಾಳಿಸುತ್ತಿದ್ದಂತೆ, ಮಗ ವಾಚನ್ನು ತೋರಿಸುತ್ತಾ “ನಿನ್ನೆಲ್ಲಾ ಏಕಾಗ್ರತೆ ದುಡ್ಡಿನ ಮೇಲೆ ಇದ್ದುದರಿಂದ, ನಿನ್ನ ವಾಚನ್ನು ಲಪ್ಟಾಯಿಸಿದೆ” ಎನ್ನುತ್ತಾ ಅಪ್ಪನಿಗೆ ಚಳ್ಳೆ ಹಣ್ಣು ತಿನ್ನಿಸುತ್ತಾನೆ.
ನಮ್ಮ ರಾಜಕಾರಣಿಗಳೂ ಹೀಗೆಯೇ! ನಮ್ಮ ಗಮನವನ್ನು ಬೇರೆ ಕಡೆ ತಿರುಗಿಸುವಲ್ಲಿ ಸಿದ್ಧಹಸ್ತರು. ಜನರ ಗಮನವನ್ನು ಅನುಪಯುಕ್ತ ವಿಷಯಗಳ ಕಡೆಗೆ ತಿರುಗಿಸುವ ನಾನಾ ಸಿದ್ಧ ತಂತ್ರಗಳು ಅವರ ಬಳಿಯಲ್ಲಿವೆ. ಹೌದು ನಮ್ಮ ದೇಶ ಆರ್ಥಿಕವಾಗಿ ಸೋತು ಕೂತಿದೆ. ನಿರುದ್ಯೋಗ ಬೃಹದಾಕಾರ ತಾಳುತ್ತಿದೆ. ದಿನದಿಂದ ದಿನಕ್ಕೆ ರೂಪಾಯಿ ಬೆಲೆ ಕೆಳಗಿಳಿಯುತ್ತಿದೆ. ಹಣದುಬ್ಬರ ಹೆಚ್ಚುತ್ತಿದೆ. ಈರುಳ್ಳಿಯ ಬೆಲೆ ಕಿಲೋಗೆ 200ರೂ ತಲುಪಿದೆ. ಜಿಡಿಪಿ ತೀರಾ ಕಳಪೆಯಾಗಿದೆ ಅಂದರೆ ಭಾರತದ ಆರ್ಥಿಕ ಬೆಳವಣಿಗೆ ಜುಲೈ-ಸೆಪ್ಟೆಂಬರ್ ಅವಧಿಯ ಎರಡನೇ ತ್ರೈಮಾಸಿಕದಲ್ಲಿ ಶೇ.5 ರಿಂದ ಶೇ.4.5ಕ್ಕೆ ಕುಸಿದಿದೆ. ಇನ್ನೂ ಕುಸಿಯುವ ಸೂಚನೆ ಕಂಡುಬರುತ್ತಿದೆ. ನಮ್ಮ ಆರ್ಥಿಕತೆಯಲ್ಲಿನ ಕುಸಿತದ ಬಗ್ಗೆ ನಮ್ಮ ಸರ್ಕಾರಕ್ಕೆ ನಿಜವಾಗಿಯೂ ಅರಿವಿಲ್ಲವೋ ಅಥವಾ ಅವರು ಬರಿದೇ ನಿರಾಕರಣೆಗೆ ಜೋತು ಬಿದ್ದಿದ್ದಾರೋ ಗೊತ್ತಿಲ್ಲ! ಆದರೆ ಆರ್ಥಿಕ ಹಿಂಜರಿತವನ್ನು ಸರ್ಕಾರ ಒಂದೇ ಉಸಿರಿನಲ್ಲಿ ನಿರಾಕರಿಸುತ್ತಿದೆ. ಜೊತೆಗೆ ಅಂಧಭಕ್ತರು ದೇಶದ ಆರ್ಥಿಕ ಗಂಭೀರ ಪರಿಸ್ಥಿತಿಯನ್ನು ‘ಇದು ಕೇವಲ ಒಂದು ಆವರ್ತಕ ಪ್ರಕ್ರಿಯೆಯೆಂದು’ ತಮ್ಮ ಸರ್ಕಾರದ ತಪ್ಪು ನಡೆಗಳನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ.

ಧರ್ಮವನ್ನು ಮಾನದಂಡವಾಗಿಸಿ ಕಾಯ್ದೆಗೆ ತಿದ್ದುಪಡಿ ತರುವುದು ದೇಶದ ಸಂವಿಧಾನಕ್ಕೆ ವಿರುದ್ಧವಾದುದ್ದು. ಇದು ದೇಶದಲ್ಲಿ ಅನೈಕ್ಯತೆಯ ವಿಷಬೀಜ ಬಿತ್ತುವ ಹುನ್ನಾರ ಎಂದು ಅನೇಕರು ಈ ಕಾಯ್ದೆಯನ್ನು ವಿರೋಧಿಸುತ್ತಿದ್ದಾರೆ. ಧರ್ಮ, ಜಾತಿ, ಲಿಂಗ, ಬಣ್ಣ, ಭಾಷೆ ಪ್ರದೇಶಗಳ ಆಧಾರದಲ್ಲಿ ಯಾವುದೇ ತಾರತಮ್ಯ ಮಾಡಬಾರದೆಂದು ನಮ್ಮ ಸಂವಿಧಾನ ಹೇಳುತ್ತದೆ. ಆದರೆ ಈಗ ಜಾರಿಗೆ ತಂದಿರುವ ಪೌರತ್ವ ಮಸೂದೆಯು ಮುಸಲ್ಮಾನರನ್ನು ಪ್ರತ್ಯೇಕಿಸುತ್ತಿದೆ. ಆದ್ದರಿಂದ ದೇಶದ ಪ್ರಜ್ಞಾವಂತರು, ಹೆಸರಾಂತ ಲೇಖಕರು ಎಲ್ಲಾ ಪ್ರಜಾಪ್ರಭುತ್ವವಾದಿಗಳು ಪೌರತ್ವ ಕಾಯ್ದೆಯನ್ನು ವಿರೋಧಿಸುತ್ತಿದ್ದಾರೆ. ಇಂದು ಅವರಿಗಾದುದು ನಾಳೆ ನಮಗೂ ಬರಬಹುದು, ಇಂಥ ಒಂದು ಅಸಾಂವಿಧಾನಿಕ ನಡೆಯನ್ನು ನಾವೆಲ್ಲ ಒಕ್ಕೊರಲಿನಿಂದ ಪ್ರತಿಭಟಿಸಲೇಬೇಕಾಗಿದೆ.
----
ಕರ್ನಾಟಕದಲ್ಲಿ ನಡೆದ ಉಪಚುನಾವಣೆಯ ಫಲಿತಾಂಶ ಹೊರಬಿದ್ದು, ಹನ್ನೊಂದು ಅನರ್ಹ ಶಾಸಕರಿಗೆ ಮತದಾರ “ಮಾನಪತ್ರ”ವನ್ನು ಕೊಟ್ಟಿದ್ದಾನೆ. ಇದರಿಂದ ಅಧಿಕಾರದಾಹಿ ಯಡಿಯೂರಪ್ಪ ನೇತೃತ್ವದ ಸರ್ಕಾರಕ್ಕೂ ಆರ್ಹತೆ ಬಂದಂತಾಗಿದೆ. ಸಮಯಸಾಧಕ ಮತ್ತು ಅನಿಷ್ಟ ದುಡ್ಡಿನ ರಾಜಕಾರಕ್ಕೆ ಮತದಾರರು ಸರಿಯಾದ ಪಾಠ ಕಲಿಸುತ್ತಾರೆಂಬ ನಮ್ಮೆಲ್ಲರ ಊಹೆ ಹುಸಿಯಾಗಿದೆ. ನಾಡು ನುಡಿ ಸಂಸ್ಕೃತಿಗೆ ಅಗೌರವ ತೋರಿಸುವ, ಒಂದು ಭಾಷೆಯನ್ನು ಒತ್ತಾಯ ಪೂರ್ವಕವಾಗಿ ಹೇರುವ, ಫ್ಯಾಸಿಸ್ಟ್ ಮನಸ್ಥಿತಿಯ ಸರ್ಕಾರ ನಮಗೆ ಬೇಕೆಂದು ಕರ್ನಾಟಕ ಮತದಾರ ಹೇಳುತ್ತಿದ್ದಾನೆ. ಅಧಿಕಾರದ ದಾಹಕ್ಕೆ ಮೌಲ್ಯಗಳನ್ನೇ ಗಾಳಿಗೆ ತೂರುವ, ಅತೀವ ಮಳೆಯಿಂದಾಗಿ ಮನೆಮಠಗಳನ್ನು ಕಳೆದುಕೊಂಡು ನಿರಾಶ್ರಿತರಾದಾಗ ಯಾವುದೇ ರೀತಿಯ ಆರ್ಥಿಕ ಸಹಾಯವನ್ನು ನೀಡದೆ ನಮ್ಮ ಜನರನ್ನು ನಿರ್ಲಕ್ಷಿಸಿದ ಪಕ್ಷವನ್ನು ನಮ್ಮ ಜನರು ಕೈಹಿಡಿದಿದ್ದಾರೆ. ಸದೃಢ ಸರ್ಕಾರಕ್ಕಾಗಿ ನೈತಿಕತೆಯನ್ನೇ ಬಿಟ್ಟುಕೊಟ್ಟನೇ ನಮ್ಮ ಮತದಾರ?
ಆದರೆ ಒಂದಂತೂ ನಿಜ ಸಂಖ್ಯೆಗಳ ಅಧಾರದ ಮೇಲೆ ನಾವು ಒಬ್ಬನನ್ನು ಆರ್ಹನೆಂದು ಒಪ್ಪಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ಅಂದರೆ ನೈತಿಕತೆಯನ್ನು ದುಡ್ಡಿನಿಂದಾಗಲೀ, ಓಟುಗಳಿಂದಾಗಲೀ ಪಡೆದುಕೊಳ್ಳುವುದಕ್ಕೆ ಆಗುವುದಿಲ್ಲ. ಹೌದು ಕ್ರೂರ ರಾಜರುಗಳಿಂದ ಅಥವಾ ಭ್ರಷ್ಟ ಸಂಘಟನೆಗಳಿಂದ ಆಳಲ್ಪಟ್ಟ ಪತಿಯೊಂದು ದೇಶವು ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಬಯಸುತ್ತವೆ. ಮೂಲತಃ ಪ್ರಜಾಪ್ರಭುತ್ವವು ಜನರ ಸರ್ಕಾರವಾಗಿದೆ. ಪ್ರತಿಯೊಬ್ಬ ಪ್ರಜೆಯ ಧ್ವನಿಯನ್ನು ಕೇಳಿಸಿಕೊಳ್ಳುವ ಗೌರವಿಸುವ ಸರ್ಕಾರದ ವ್ಯವಸ್ಥೆಯೇ ಈ ಪ್ರಜಾಪ್ರಭುತ್ವ. ಪ್ರಜೆಗಳಿಂದ, ಪ್ರಜೆಗಳಿಗೊಸ್ಕರ, ಪ್ರಜೆಗಳಿಂದ ನಡೆಸಲ್ಪಡುವ ಈ ವ್ಯವಸ್ಥೆಯಲ್ಲಿ ಪ್ರಜೆಯೇ ಸಾರ್ವಭೌಮ. ಆದರೆ ಪ್ರಜಾಪ್ರಭುತ್ವದ ವ್ಯವಸ್ಥೆಯ ಒಂದು ಪರಿಕಲ್ಪನೆಯ ಮೇಲೆ ನಿಂತಿರುವುದನ್ನು ನಾವು ಮರೆಯಬಾರದು. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಪ್ರಜೆಗಳಿಗೆ ತಮಗಿರುವ ಅವಶ್ಯಕತೆಗಳ ಬಗ್ಗೆ ಉತ್ತಮ ಜ್ಞಾನವಿದ್ದು, ಅವರು ಉತ್ತಮವಾದುದನ್ನೇ ಆಯ್ಕೆ ಮಾಡಿಕೊಳ್ಳುತ್ತಾನೆ ಎಂಬ ನಂಬಿಕೆಯಿದೆ. ಆದರೆ ಮತದಾರನಿಗೆ ಅವನ ಅವಶ್ಯಕತೆಗಳ ಬಗ್ಗೆ ಜ್ಞಾನವಿದೆಯೇ? ಅವನು ಯಾವುದೇ ಆಮಿಷಗಳಿಗೆ ಒಳಗಾಗದೆ ತಮ್ಮ ಆಯ್ಕೆಯಲ್ಲಿ ಬುದ್ಧಿವಂತಿಕೆಯನ್ನು ತೋರುತ್ತಾನೆಯೇ?
“ಮತದಾನ ಒಂದು ಕೌಶಲ್ಯ, ಕೆಲವೊಮ್ಮೆ ಜನರು ಬುದ್ದಿಹೀನ ನಿರ್ಧಾರಗಳನ್ನು ಮಾಡುತ್ತಾರೆ, ಆದ್ದರಿಂದ ಮತದಾನ ಮಾಡುವುದನ್ನು ಜನರಿಗೆ ಕಲಿಸಿಕೊಡಬೇಕು” ಎಂದು ಸಾಕ್ರಟೀಸ್ ಹೇಳುತ್ತಾನೆ. ಆದ್ದರಿಂದ ಬಹುಮತ ಪಡೆದ ಮಾತ್ರಕ್ಕೆ ಎಲ್ಲವೂ ಸರಿ, ಒಳ್ಳೆಯದು, ನ್ಯಾಯಬದ್ಧವಾದುದ್ದು ಎಂದು ಹೇಳಲು ಸಾಧ್ಯವಿಲ್ಲ. ಯಾಕೆಂದರ ಮತದಾರನಲ್ಲಿ ಕೆಲವೊಮ್ಮೆ ಅರಿವು ಕೆಲಸ ಮಾಡದೆ, ಮೌಢ್ಯವು ಕೆಲಸ ಮಾಡಬಹುದು. ಆದ್ದರಿಂದ ಪ್ರಬುದ್ಧ ಮತದಾರರನ್ನು ರೂಪಿಸುವ ಅನಿವಾರ್ಯತೆ ನಮಗಿದೆ. ಇದು ಪ್ರಜಾಪ್ರಭುತ್ವ ದೇಶವೊಂದರ ಆದ್ಯ ಕರ್ತವ್ಯವಾಗಿದೆ. ಕೆಲ ದುಷ್ಟ ಶಕ್ತಿಗಳು ಮತದಾರರನ್ನು ತಮಗೆ ಪೂರಕವಾಗಿ ರೂಪಿಸುವಲ್ಲಿ ಯಶಸ್ವಿಯಾಗುತ್ತಿವೆ. ಇದು ಪ್ರಜಾಪ್ರಭುತ್ವಕ್ಕೆ ತುಂಬಾ ಅಪಾಯಕಾರಿ. ಆದ್ದರಿಂದ ಅಭಿವೃದ್ದಿ, ಜನಪರ ಕಾರ್ಯಕ್ರಮಗಳನ್ನು ಗುರುತಿಸಿ ಓಟ್ ಮಾಡುವ ಜವಾಬ್ದಾರಿಯನ್ನು ಮತದಾರರ ರೂಢಿಸಿಕೊಳ್ಳಬೇಕಾಗಿದೆ. ಇಂತಹ ತಿಳುವಳಿಕೆಯನ್ನು ಜನರಲ್ಲಿ ಮೂಡಿಸುವುದಾದರೂ ಹೇಗೆ? ಯೋಚಿಸಿ ಕ್ರಿಯಾತ್ಮಕವಾದ ರೀತಿಯಲ್ಲಿ ನಾವು ಕಾರ್ಯಪ್ರವೃತ್ತರಾಗಬೇಕಾದ ಜವಾಬ್ದಾರಿ ನಮ್ಮ ಮೇಲಿದೆ.
----

ಹೌದು ಜನರಲ್ಲಿ ಅತ್ಯಾಚಾರ – ಕೊಲೆಯಂತಹ ಘಟನೆಗಳ ಕುರಿತು ಸಹಜವಾಗಿ ಮಡುಗಟ್ಟಿರುವ ಆಕ್ರೋಶವೇ ಇಂತಹ ಒಂದು ಹೊಗಳಿಕೆಗೆ ಕಾರಣವಾಗಿದ್ದರೆ, ನಮ್ಮ ಸಮಾಜದಲ್ಲಿ ನ್ಯಾಯಪ್ರಜ್ಞೆ ಹಾಗೂ ಸಾಂವಿಧಾನಿಕ ನೈತಿಕತೆ ಅತ್ಯಂತ ದುರ್ಬಲವಾಗಿರುವುದು ಮತ್ತೊಂದು ಕಾರಣ.

—————————
ಜಾನಪದ, ಸಾಂಸ್ಕೃತಿಕ ಅಧ್ಯಯನ, ಯಕ್ಷಗಾನ ಕ್ಷೇತ್ರಗಳಲ್ಲಿ ಖ್ಯಾತಿ ಗಳಿಸಿರುವ ವಿದ್ವಾ0ಸರಾದ ಡಾ. ಪುರುಷೋತ್ತಮ ಬಿಳಿಮಲೆಯವರು ಫೇಸ್‍ಬುಕ್ಕಿನಲ್ಲಿ ಹಂಚಿಕೊಂಡ ಮೌನ ಓದಿನ ಕವಿತೆ ಇಲ್ಲಿ ನಿಮಗಾಗಿ;
ನಿನ್ನ ಮನೆಯ
ಒಂದು ಕೋಣೆಯಲ್ಲಿ ಬೆಂಕಿ ಬಿದ್ದಿದ್ದರೆ
ನೀನು ಮತ್ತೊಂದು
ಕೋಣೆಯಲ್ಲಿ ನಿದ್ರಿಸ ಬಲ್ಲೆಯಾ?
ನಿನ್ನ ಮನೆಯ
ಒಂದು ಕೋಣೆಯಲ್ಲಿ ಹೆಣಗಳು ಕೊಳೆಯುತ್ತಿದ್ದರೆ
ನೀನು ಮತ್ತೊಂದು ಕೋಣೆಯಲ್ಲಿ
ಪ್ರಾರ್ಥನೆ ಮಾಡ ಬಲ್ಲೆಯಾ?
ಹೌದು! ಎನ್ನುವುದಾದರೆ
ನಿನ್ನೊಂದಿಗೆ ನನಗೆ ಮಾತನಾಡುವುದು ಏನೂ ಉಳಿದಿಲ್ಲ.
ದೇಶ ಕಾಗದದಿಂದಾದ ನಕ್ಷೆಯಲ್ಲ
ಒಂದು ಭಾಗ ಹರಿದ ಮೇಲೂ
ಉಳಿದ ಭಾಗ ಮೊದಲಿನಂತೆ ಸ್ವಸ್ಥವಾಗಿರಲು
ಹಾಗು ನದಿ, ಪರ್ವತ, ನಗರ, ಹಳ್ಳಿಗಳೆಲ್ಲ
ಹಾಗೆಯೇ ತಂತಮ್ಮ ಜಾಗದಲ್ಲಿ ಒಟ್ಟಾಗಿ ಕಾಣಲು
ಇದನ್ನು ನೀನು
ಒಪ್ಪುವುದಿಲ್ಲವಾದರೆ
ನನಗೆ ನಿನ್ನೊಂದಿಗಿರಲು ಸಾಧ್ಯವಿಲ್ಲ.
ಈ ಜಗತ್ತಿನಲ್ಲಿ
ಮಾನವ ಜೀವಕ್ಕಿಂತ
ದೊಡ್ಡದು ಯಾವುದೂ ಇಲ್ಲ
ದೇವರು, ಜ್ಞಾನ, ಚುನಾವಣೆ
ಯಾವುದೂ ಅಲ್ಲ
ಕಾಗದದಲ್ಲಿ ಬರೆದ
ಯಾವುದೇ ಒಡಂಬಡಿಕೆಯನ್ನು
ಹರಿದು ಹಾಕಬಹುದು
ಭೂಮಿಯ ಏಳು ಪದರಗಳಡಿ
ಹೂತು ಹಾಕಲೂಬಹುದು
ಆತ್ಮಸಾಕ್ಷಿಯೇ
ಹೆಣಗಳ ರಾಶಿಯ ಮೇಲೆ ನಿಂತಿದ್ದರೆ
ಅಲ್ಲಿ ಅಂಧಕಾರವಿದೆ
ಬಂದೂಕಿನ ನಳಿಕೆಯಲ್ಲಿ
ಅಧಿಕಾರ ನಡೆಯುತ್ತಿದ್ದರೆ
ಅದು ಆಯುಧಗಳ ದಂಧೆಯಾಗಿದೆ
ನೀನಿದನ್ನು ಒಪ್ಪದಿದ್ದಲ್ಲಿ
ನಿನ್ನನ್ನು ಒಂದೂ ಕ್ಷಣವೂ ಸಹಿಸಲಾರೆ.
ನೆನಪಿಡು
ಒಂದು ಮಗುವಿನ ಹತ್ಯೆ
ಒಂದು ಹೆಂಗಸಿನ ಸಾವು
ಗುಂಡಿನಿಂದ ಛಿದ್ರಗೊಂಡ
ಒಬ್ಬ ಮನುಷ್ಯನ ದೇಹ
ಅದು ಯಾವುದೇ ಸರ್ಕಾರದ ಪತನ ಮಾತ್ರವಲ್ಲ
ಅದು ಇಡೀ ರಾಷ್ಟ್ರದ ಪತನ.
ಹೀಗೇ ರಕ್ತ ಹರಿದು
ಭೂಮಿಯಲ್ಲಿ ಇಂಗುವುದಿಲ್ಲ
ಆಕಾಶದಲ್ಲಿ ಹಾರುವ
ಬಾವುಟವನ್ನೂ ಕಪ್ಪಾಗಿಸುತ್ತದೆ.
ಯಾವ ನೆಲದಲ್ಲಿ
ಸೈನಿಕರ ಬೂಟುಕಾಲುಗಳ ಗುರುತಿರುವುದೋ
ಎಲ್ಲಿ ಅವುಗಳ ಮೇಲೆ
ಹೆಣಗಳು ಬೀಳುತ್ತಿರುತ್ತವೋ
ಆ ನೆಲ ನಿನ್ನ ರಕ್ತದಲ್ಲಿ ಬೆಂಕಿಯಾಗಿ ಹರಿಯದಿದ್ದಲ್ಲಿ
ನೀನು ಬರಡಾಗಿರುವೆ ಎಂದು ತಿಳಿದುಕೋ
ನಿನಗಲ್ಲಿ ಉಸಿರಾಡಲೂ ಹಕ್ಕಿಲ್ಲ
ನಿನಗಾಗಿ ಈ ಜಗತ್ತೂ ಸಹ
ಇಲ್ಲವೆಂದೇ ತಿಳಿ.
ಕೊನೆಗೊಂದು ಮಾತು
ಸ್ಪಟಿಕದಷ್ಟೇ ಸ್ಪಷ್ಟ
ಯಾವುದೇ ಕೊಲೆಗಡುಕನನ್ನು ಎಂದಿಗೂ ಕ್ಷಮಿಸಬೇಡ
ಅವನು ನಿನ್ನ ಗೆಳೆಯನೇ ಆಗಿರಲಿ
ಧರ್ಮದ ಗುತ್ತಿಗೆ ಪಡೆದವನಿರಲಿ
ಅಥವಾ ಪ್ರಜಾತಂತ್ರದ ಸ್ವಯಂಘೋಷಿತ
ಕಾವಲುಗಾರನೇ ಆಗಿರಲಿ
--------------------------------
ಹಿಂದೀ ಕವಿ: ಸರ್ವೇಶ್ವರ ದಯಾಳ ಸಕ್ಸೇನ ( 1927-83)
ಕನ್ನಡಕ್ಕೆ: ಪಿ. ಸುನೀತ ಹೆಬ್ಬಾರ್
No comments:
Post a Comment