Saturday, 21 December 2019

ಕ್ರಿಸ್ಮಸ್ ಸಂದೇಶ



¨ ಸಿ ಎಮ್ ಜೆ

ಮದುವೆಯಾಗಿ ಗಂಡನೊಂದಿಗೆ ಹೊಸ ಸಂಸಾರ ಹೂಡಿದ ಮೇಲೂ ಪ್ರತಿವರ್ಷ ನಾವು ಕ್ರಿಸ್ಮಸ್ ಆಚರಣೆಗೆ ನಮ್ಮ ಊರಿಗೇ ಹೋಗುತ್ತಿದ್ದೆವು. ನೂರಕ್ಕೆ ನೂರು ಕ್ರೈಸ್ತರೇ ಇರುವ ನಮ್ಮೂರಿನಲ್ಲಿ ದೇವಾಲಯದ ಪಕ್ಕದಲ್ಲೇ ನಮ್ಮ ಮನೆಯಿದೆ. ಆದ್ದರಿಂದ ದೇವಾಲಯದಲ್ಲಿ ನಡೆಯುವ ಪೂಜಾದಿ ಜಪ ತಪ ಹಾಡು ಪಾಡು ಎಲ್ಲವೂ ನಮ್ಮ ಕಿವಿಯಲ್ಲಿ ಸದಾ ಅನುರಣಿಸುತ್ತದೆ. ಯಾವಾಗಲೂ ಬಾಗಿಲು ತೆರೆದಿರುವ ನಮ್ಮ ದೇವಾಲಯಕ್ಕೆ ಯಾವಾಗ ಬೇಕಾದರೂ ಹೋಗಿಬರಬಹುದು. ಮೌನ ಧ್ಯಾನಕ್ಕೆ ಹೇಳಿಮಾಡಿಸಿದ ತಾಣವದು. 

ಫಾದರ್ ಇರಲಿ ಬಿಡಲಿ, ಉಪದೇಶಿ ಜೋನೆಸಣ್ಣ ಮಾತ್ರ ಅಲ್ಲಿ ಇದ್ದೇ ಇರ್ತಾನೆ. ಪೂಜಾಪಾತ್ರೆಗಳನ್ನು ಚೆನ್ನಾಗಿ ಬೆಳಗಿ ಬಿಸಿಲಲ್ಲಿಟ್ಟು ಆರಿಸೋದು, ಪೂಜಾವಸ್ತ್ರಗಳನ್ನು ತೊಳೆಯೋದು, ಪೀಠದ ಬಟ್ಟೆಗಳನ್ನು ದೂಳು ಕೊಡವಿ ಮಡಿಸಿ ಇಡೋದು, ಗೋಡೆಗಳಲ್ಲಿನ ಜೇಡ ತೆಗೆಯೋದು, ಸತ್ಪ್ರಸಾದ ಸಂಪುಟವನ್ನು ನಾಜೂಕಾಗಿ ಭಯಭಕ್ತಿಯಿಂದ ಒರೆಸೋದು, ಮೇಣದ ಬತ್ತಿ ಕಂಬಗಳನ್ನು ಸ್ವಚ್ಛ ಮಾಡೋದು ಹೀಗೆ ಜೋನೆಸಣ್ಣ ಸದಾ ಒಂದಿಲ್ಲೊಂದು ಕೆಲಸ ಮಾಡುತ್ತಾ ಅಲ್ಲೇ ಇರ್ತಾನೆ. ದೇವಸ್ಥಾನಕ್ಕೆ ಮೇಣದಬತ್ತಿ ಹಚ್ಚೋಕೆ ಬರುವ ಹಿಂದೂ ಭಕ್ತರಿಗೆ ಇವನೇ ದೇವಮಾನವ. ಹೊತ್ತು ಹೊತ್ತಿಗೆ ದೇವಾಲಯದ ಗಂಟೆ ಹೊಡೆದು ಜಪಸರ, ಅನುದಿನದ ಪ್ರಾರ್ಥನೆ, ಸಂಜೆಯ ಪ್ರಾರ್ಥನೆಗಳನ್ನು ಮುನ್ನಡೆಸುವವನೂ ಈತನೇ. ಯಾರಾದರೂ ಸಾವಿಗೀಡಾದರೆ ಕತ್ರಿಸಾಲು ದೀಪ ಬೆಳಗಿ, ಶವವನ್ನು ಮಡಿ ಮಾಡಿ, ರಾತ್ರಿಯಿಡೀ ಭಜನೆ ಮಾಡಿ, ಅಂತ್ಯಸಂಸ್ಕಾರ ಆಗೋವರೆಗೂ ಎಲ್ಲವನ್ನೂ ಸಾಂಗವಾಗಿ ನಡೆಸೋನು ಈ ಜೋನೆಸಣ್ಣನೇ. ಮದುವೆಗಳಲ್ಲೂ ಅಷ್ಟೇ, ಮಾತುಕತೆಯಾಗಿ ತಾಂಬೂಲ ಬದಲಾಯಿಸುವುದರಿಂದ ಹಿಡಿದು, ಪ್ರಸಿದ್ಧಿ ಓದಿ, ಚಪ್ಪರ ಕಟ್ಟಿ, ಪೂಜೆಯಲ್ಲಿ ಮದುವೆ ಗಂಟೆ ಹೊಡೆದು, ಧಾರಾಮುಹೂರ್ತಕ್ಕೆ ಅಣಿ ಮಾಡಿ, ಸಂಸ್ಕೃತದಲ್ಲಿ ಮಂತ್ರ ಹೇಳಿ, ಮುಯ್ಯಿನವರ ಹೆಸರುಗಳನ್ನು ಓದಿ, ಮನೆ ತುಂಬಿಸಿಕೊಳ್ಳುವಾಗ ಜಪ ಹೇಳಿ .. ಹೀಗೆ ಉಪದೇಶೀ ಜೋನೆಸಣ್ಣ ಊರಿನ ಎಲ್ಲರ ಕುಟುಂಬದ ಒಬ್ಬ ಸದಸ್ಯನಾಗಿಬಿಟ್ಟಿದ್ದಾನೆ. 

ನಮ್ಮೂರವರಿಗೆ ಈ ದೇವಾಲಯವು ಬರೀ ಆಧ್ಯಾತ್ಮಿಕ ತಾಣವಷ್ಟೇ ಅಲ್ಲ, ಎಲ್ಲ ಸಂಸಾರಗಳ ಕಷ್ಟಸುಖ ಹೇಳಿಕೊಂಡು ಸ್ವಯಂ ಸಾಂತ್ವನಗೊಳ್ಳುವ ದೇವಮನೆ. ಪೂಜೆ ಮುಗಿದ ಮೇಲೆ ದೇವಾಲಯದಿಂದ ಹೊರಬೀಳುವ ಜನ ಒಬ್ಬರಿಗೊಬ್ಬರು ಕೈಜೋಡಿಸಿ `ದೇವರಿಗೆ ಸ್ತೋತ್ರ' ಅನ್ತ ಹೇಳಿ, ಏನವ್ವ ಸಂದಾಕಿದೀಯಾ, ಯಾವಾಗ್ ಬಂದೆ, ಮಗಳು ಸಂದಾಕವ್ಳಾ, ಚಿಕ್ಕೋಳಿಗೆ ಎಲ್ಲಾದರೂ ಸೆಟ್ ಆಯ್ತಾ, ಅಲ್ಲೊಂದು ಸಂಬಂಧ ಐತೆ, ಹುಡ್ಗ ಭೋ ಪಸಂದಾಗವ್ನೆ, ರಾಜಕುಮಾರ ಇದ್ದಂಗೆ, ಕೇಳ್ ನೋಡು ಅಂತಿದ್ರು, ಮಗ ಎಲ್ಲಿ ಕೆಲಸಕ್ಕೋಯ್ತಾವ್ನೆ, ಅಯ್ಯೋ ರಾಜಣ್ಣನಿಗೆ ಏನಾಯ್ತು ಗೊತ್ತೇನವ್ವ, ಸಾಕಿದ ಟಗರೇ ಬಂದ್ ಗುದ್ಬುಡ್ತು ಕಣವ್ವ, ನಿಮ್ಮವ್ವಂಗೆ ಕಣ್ಣಾಪ್ಲೇಸನ್ ಆಯ್ತಾ... ಹೀಗೆ ಊರಿನ ಎಲ್ಲ ಸಮಾಚಾರಗಳೂ ಅಲ್ಲಿ ತೇಲಾಡುತ್ತಾ ಒಬ್ಬರಿಗೊಬ್ಬರು ಮನಬಿಚ್ಚಿ ಮಾತಾಡಿ ಮನತುಂಬಿ ವಿದಾಯ ಹೇಳಿ ಮನೆಗಳಿಗೆ ತೆರಳುವುದು ವಾಡಿಕೆ. 

ಗಂಡಸರಿಗೂ ನಮ್ಮ ದೇವಸ್ಥಾನ ಒಂದು ಸಂಪರ್ಕ ಕೇಂದ್ರವೇ. ನಾಟೀಗೆ, ಭತ್ತ ಬಡಿಯೋಕೆ, ಮೆದೆ ಹಾಕೋಕೆ, ಕಣ ಮಾಡೋಕೆ, ರಾಗಿ ತೂರೋಕೆ, ಗದ್ದೆ ಕೆಲಸಕ್ಕೆ ಮುಯ್ಯಿಗೂಲಿಗೆ ಬನ್ನಿ ಎಂದು ಸಾರೋದು ಇಲ್ಲೇ. ಅಷ್ಟೇ ಅಲ್ಲ, ತೆವರಿ ಒಡೆದು ನೀರು ತಿರುಗಿಸಿಕೊಂಡರು, ದನ ಬಿಟ್ಟು ಬೆಳೆ ಮೇಯಿಸಿದರು, ಸೈಕಲ್ ಕದ್ದರು, ಗೊಬ್ಬರ ಕದ್ದರು, ಕಾಯಿ ಕದ್ದರು, ಮೆದೆ ನಡುವೆ ಏನೋ ಮಾಡ್ಕಂಡ್ರು ಮುಂತಾದ ದೂರುಗಳನ್ನು ವಿಚಾರಿಸುವ ಪಂಚಾಯ್ತಿ ಕಟ್ಟೇನೂ ಹೌದು. ಮೂರು ವರ್ಷಕ್ಕೊಮ್ಮೆ ನಮ್ಮೂರ ಈ ದೇವಾಲಯ ಊರಗೌಡ್ರನ್ನ ಆಯ್ಕೆ ಮಾಡೋ ಮತಗಟ್ಟೇನೂ ಆಗುತ್ತೆ. ಮತ್ತೆ ಎಂಎಲ್‌ಎಗಳು ಮಿನಿಸ್ಟರುಗಳು ಒಂದು ದೇವಾಲಯಕ್ಕೆ ಉಂಬಳಿ ಕೊಟ್ಟು ಮತ ಯಾಚಿಸೋದೂ ಇಲ್ಲೇನೇ. 

ಹೆಂಗಸರು ಬಿಡುವಿನ ದಿನಗಳಲ್ಲಿ ಹುಣಿಸೇಹಣ್ಣು ಬಡಿಯುವಾಗ ವಲೇರ ಹುಡುಗರನ್ನು ಕರೆಸಿ ಕೋಲಾಟ ಆಡಿಸೋದು, ಜಾನಪದ ಗೀತೆಗಳನ್ನು ಹಾಡಿಸುವುದು ಇದ್ದೇ ಇರುತ್ತೆ. ಗಂಡಸರು ರಾಗಿ ಮಿಷಿನ್ ಮನೇಲಿ ಒಟ್ಟುಗೂಡಿ ಜ್ಞಾನಸುಂದರಿ ನಾಟಕ, ಈಸ್ತಾಕೀಸ್ ನಾಟಕ, ಜೋಸೆಫ್‌ನವರ ನಾಟಕಗಳ ತಾಲೀಮು ನಡೆಸುತ್ತಾರೆ. ಮೊನ್ನೆ ತಪ್ಪಸ್ಸುಕಾಲದಲ್ಲಿ ನಮ್ಮೂರ ಯುವಕರಿಗೂ ಹುಮ್ಮಸ್ಸು ಬಂದು ಶುಭ ಶುಕ್ರವಾರದ ದಿನ ಯೇಸು ಮತ್ತು ಸೈನಿಕರ ವೇಷ ಧರಿಸಿಕೊಂಡು ಶಿಲುಬೆಹಾದಿ ಮಾಡಿದ್ದರು. ಬಿರುಬಿಸಿಲಲ್ಲಿ ಊರ ಸುತ್ತ ಶಿಲುಬೆಹಾದಿ ಹೊರಟು ಮನೆಮನೆ ಮುಂದೆ ಶಿಲುಬೆಸ್ಥಳಗಳನ್ನು ಧ್ಯಾನಿಸುತ್ತಾ, ಮರಿಯಮ್ಮನವರ ಭೇಟಿ, ವೆರೋನಿಕಮ್ಮನ ಭೇಟಿ, ಸಿಮೋನಣ್ಣನ ನೆರವು, ಸೈನಿಕರ ಅಬ್ಬರಗಳ ನಡುವೆ ಯೇಸು ಪಾತ್ರಧಾರಿ ಬಿದ್ದು ಎದ್ದು ಸೋತು ಹೋಗಿದ್ದ. ಹನ್ನೆರಡನೇ ಸ್ಥಳದಲ್ಲಿ ಯೇಸುವನ್ನು ಶಿಲುಬೆಗೇರಿಸಬೇಕು, ಯೇಸುಪಾತ್ರಧಾರಿ ಯುವಕ ಮನೋಜ್ಞವಾಗಿ ಪಾತ್ರ ನಿರ್ವಹಿಸುತ್ತಿದ್ದ. ಗುರುಸ್ವಾಮಿಯವರು ಪವಿತ್ರ ಬೈಬಲ್ ತೆರೆದು ಅಂದಿನ ಘಟನಾವಳಿಗಳನ್ನು ಮನಮುಟ್ಟುವಂತೆ ಓದುತ್ತಿದ್ದರೆ ಇತ್ತ ಸೈನಿಕ ಪಾತ್ರಧಾರಿಗಳು ಯೇಸುವನ್ನು ಶಿಲುಬೆಗೆ ಜಡಿದು ಹುರಿಹಗ್ಗದಿಂದ ಬಿಗಿದು ಒಂದೇ ನಿಲುವಿನಲ್ಲಿ ನಿಲ್ಲಿಸಿದಾಗ ಮಮ್ಮಲ ಮರುಗುತ್ತಿದ್ದ ಜನರು ಒಮ್ಮೆಲೇ ಗೊಳೋ ಎಂದು ಅತ್ತರು. ಯೇಸುಪಾತ್ರಧಾರಿ ಯುವಕ ಸತ್ತೇಹೋದಂತೆ ಗೋಣು ಮುರಿದಾಗ ನಮ್ಮೆಜಮಾನ್ರು ಅವನಿಗೆ ಡೀಹೈಡ್ರೇಶನ್ ಆದಂತಿದೆ, ಕೆಳಗಿಳಿಸಿ ನೀರು ಕುಡಿಸಿ ಎಂದು ಅವನ ಮುಖದ ಮೇಲೆ ನೀರು ಚಿಮುಕಿಸಿದರು. ಗುರುಗಳು ಅಂಥದ್ದೇನೂ ಎಲ್ಲ ಎಂದು ಕೈಸನ್ನೆ ಮಾಡುತ್ತಾ ಪ್ರಾರ್ಥನೆ ಮುಂದುವರಿಸಿದರು. ಇತ್ತ ಆ ಯುವಕ ನಮ್ಮವರ ಕಿವಿಯಲ್ಲಿ 'ನನಗೇನೂ ಆಗಿಲ್ಲ ಅಣ್ಣ, ನಾಟಕ ಮಾಡ್ತಾ ಇದ್ದೀನಿ' ಎಂದನಂತೆ. 

ಯಾವುದೇ ಹಬ್ಬ ಬಂದಾಗಲೂ ನಮ್ಮೂರ ಜನ ಮನೆಯನ್ನು ಕಿಳೀನ್ ಮಾಡೋ ಕೆಲಸದ ಜೊತೆಜೊತೆಗೇ ಗಂಡಾಳು ಹೆಣ್ಣಾಳು ಮಕ್ಕಳು ಯುವಕರೆನ್ನದೆ ಎಲ್ಲರೂ ದೇವಾಲಯದ ಕೆಲಸಕ್ಕೆ ಉತ್ಸಾಹದಿಂದ ಒಟ್ಟುಗೂಡಿ, ಗೋಡೆಗಳ ಬಿರುಕುಗಳನ್ನು ಗಾರೆಗಚ್ಚಿನಿಂದ ಗಿಲಾವು ಮಾಡಿ, ಸುಣ್ಣಬಳಿದು ಹೊಸದಾಗಿಸಿ, ಕಾಗದದ ಪರಿಪರಿ ಇಳಿಬಿಟ್ಟು, ಬಣ್ಣ ಬಣ್ಣದ ಪುಟ್ಟಲೈಟುಗಳ ತೋರಣ ಕಟ್ಟಿ, ಸೋಗೆ ಗರಿಯಿಂದ ಕ್ರಿಸ್ಮಸ್ ಕೊಟ್ಟಿಗೆಯನ್ನು ಕಟ್ಟಿ ಮರಿಯಮ್ಮ ಜೋಸೆಫರ ಕುರುಬರ ಗೊಂಬೆಗಳನ್ನೂ ಗೋದಲಿಯಲ್ಲಿ ಮಲಗಿದ ಯೇಸುಕಂದನನ್ನು ಅದರಲ್ಲಿಟ್ಟು ಸಿಂಗರಿಸುತ್ತಾರೆ. 

ನಗರದ ಗುಡಿಗಳಲ್ಲಿ ಕ್ರಿಸ್ಮಸ್ ಕೊಟ್ಟಿಗೆಗಳ ಸಂಭ್ರಮವೇ ಬೇರೆ. ಕೃತಕ ಗಿಡಮರಬಳ್ಳಿಗಳು, ಮಣ್ಣಿನ ಬಣ್ಣದ ಕಾಗದವನ್ನು ಮುದ್ದೆ ಮಾಡಿಟ್ಟ ಕೃತಕ ಬಂಡೆಗಳು, ಅವುಗಳ ನಡುವೆ ಹರಿಯುವ ಕೃತಕ ಕಾಲುವೆ, ಜಗಮಗಿಸುವ ಬಣ್ಣ ವಿದ್ದ್ಯುದ್ದೀಪಗಳು, ಇದ್ದಕ್ಕಿದಂತೆ ಹೊಗೆಯುಗುಳುವ ಕಾವಾಟಗಳು, ಮೂರು ರಾಯರು ಒಂಟೆಯನೇರಿ ಬರುವ ಹೊಯಿಗೆಯ ದಿಬ್ಬದ ಹಾದಿ, ಆಡುಕುರಿಗಳ ಗೊಂಬೆಗಳು ಇವೆಲ್ಲದರ ನಡವೆ ಯೇಸುಬಾಲರು. 

ನಮ್ಮ ಹಳ್ಳಿಯ ಕ್ರಿಸ್ಮಸ್ ಕೊಟ್ಟಿಗೆಯಲ್ಲೂ ಅದೇ ಯೇಸುಬಾಲರಿದ್ದಾರೆ, ಆದರೆ ಮರಮಟ್ಟುಗಳನ್ನು ನಾರುಹಗ್ಗದಿಂದ ಬಿಗಿದು ಕಟ್ಟಿದ ಕೊಟ್ಟಿಗೆಯೊಳಗೆ ರಾಗಿಯ ಚಿನ್ನದಬಣ್ಣದ ಚಿಗುರುಪೈರು ತುಂಬಿದ ನವಿರಾದ ಹಾಸಿನ ನಡುವೆ ದಿವ್ಯಯೇಸುಬಾಲರು ಮಲಗಿದ್ದಾರೆ, ಅವರ ಅಕ್ಕಪಕ್ಕ ಮೊಣಕಾಲೂರಿದ ಜೋಸೆಫರು ಮರಿಯಮ್ಮನವರು ಪುಟ್ಟಕಂದನ ಕಡೆ ನೋಡುತ್ತಾ ಇದ್ದಾರೆ. 

ಈ ಸಾರಿ ನಮ್ಮ ಮನೆಯವರಿಗೆ ರಜಾ ಸಿಕ್ಕದೇ ಹೋದ ಕಾರಣ ನಾನೊಬ್ಬಳೇ ಊರಿಗೆ ಬಂದಿದ್ದೆ. ರಾತ್ರಿ ಪೂಜೆಯಲ್ಲಿ ಊರವರೆಲ್ಲ ಸಿಕ್ಕಿ ಶುಭಾಶಯ ಕೋರಿ ಕುಶಲೋಪರಿ ವಿಚಾರಿಸಿದ್ದರು. ಎಲ್ಲರದೂ ಒಂದೇ ಮಾತು ನಿಮ್ಮೆಜಮಾನ್ರು ಬರಲಿಲ್ವಾ, ನೀನೊಬ್ಬಳೇ ಬಂದೆಯಾ ಅನ್ತ. 

ಬೆಳಗ್ಗೆ ಸ್ವಲ್ಪ ನಿಧಾನವಾಗಿ ಎದ್ದು ಅಕ್ಕನ ಮನೆಗೆ ಹೋಗಿ ನಾಷ್ಟಾ ಮುಗಿಸಿ ಬಂದೆ. ಬೆಳಗ್ಗೆ ಪೂಜೆಗೆ ಬಂದಿದ್ದ ಊರ ಮಕ್ಕಳೆಲ್ಲ ಮನೆಗೆ ಬಂದು ಆಂಟಿ ಚೆನ್ನಾಗಿದ್ದೀರಾ, ಚಿಕ್ಕಿ ಚೆನ್ನಾಗಿದ್ದೀರಾ, ಅತ್ತೆ ಚೆನ್ನಾಗಿದ್ದೀರಾ ಅನ್ತ ವಿಚಾರಿಸಿ ತಮ್ಮ ಓದು, ಶಾಲೆ, ಕಾಲೇಜು, ಸ್ಕಾಲರ್ಶಿಪ್ಪು, ಮುಂದಿನ ಯೋಜನೆ, ಉದ್ಯೋಗದ ಹುಡುಕಾಟ ಇತ್ಯಾದಿಗಳ ಬಗ್ಗೆ ಮಾತಾಡಿ ಹೋದರು. 

ಮಧ್ಯಾಹ್ನದ ಬಿಸಿಲು ಏರುತ್ತಾ ಇದೆ. ಅತ್ತಿಗೆಗೆ ಅಡುಗೆ ಕೆಲಸದಲ್ಲಿ ಕೈಜೋಡಿಸಿ ಬಿರಿಯಾನಿಗೆ ಮಸಾಲೆ ಹಾಕಿಕೊಟ್ಟು ವಾಟ್ಸಾಪಿನಲ್ಲಿ ಶುಭಾಶಯ ಕೋರಿದವರಿಗೆಲ್ಲ ಧನ್ಯವಾದ ಹೇಳಿಬಿಡೋಣ ಅನ್ತ ಗುಡಿ ಕಡೆ ಹೊರಟೆ. ನಮ್ಮೂರಿನಲ್ಲಿ ಮೊಬೈಲು ಸಿಗ್ನಲ್ಲು ಸುಲಭವಾಗಿ ಸಿಗುವುದು ನಮ್ಮ ದೇವಾಲಯದ ಹತ್ತಿರಾನೇ. ಬಿಳಿಕೆರೆ ಟವರು, ಗೊಮಟಗಿರಿ ಟವರು, ಎಡತೊರೆ ಟವರುಗಳೆಲ್ಲ ಇಲ್ಲಿ ಒಂದಾಗ್ತವೆ ಅನ್ತ ಕಾಣುತ್ತೆ. 

ಮನೆಯವರು ರಾತ್ರಿನೇ ಪೋನ್ ಮಾಡಿ ಕ್ರಿಸ್ತಜಯಂತಿಯ ಶುಭಾಶಯ ಹೇಳಿದ್ದರು. ಅವರು ಕೆಲಸದ ಮೇಲೆ ಕಾಶ್ಮೀರಕ್ಕೆ ಹೋಗಿದ್ದವರು ಮನೆಗೆ ಬರುವುದು ಇನ್ನೂ ತಡವಾಗುತ್ತೆ ಅಂದಿದ್ದರು. ಅವರು ಮತ್ತು ಅವರ ತಂಡದವರು ವಿಮಾನದ ಬಿಡಿಭಾಗಗಳನ್ನು ಪರೀಕ್ಷೆ ಮಾಡೋಕೆ ಅನ್ತ ಪ್ರತಿ ಡಿಸೆಂಬರಿನಲ್ಲಿ ಕಾಶ್ಮೀರದ ಲಡಾಖಿಗೆ ಹೋಗುತ್ತಾರೆ. ಎತ್ತರದ ಹವಾಗುಣದಲ್ಲಿ ಅತಿಶೀತ ಇರುವಾಗ ವಿಮಾನದ ಬಿಡಿಭಾಗಗಳ ಕಾರ್ಯಕ್ಷಮತೆ ಹೇಗಿರುತ್ತದೆಂದು ಪರೀಕ್ಷಿಸುವುದು ಅವರ ಕೆಲಸ. 

ಇತ್ತ ಬೆಂಗಳೂರಿನಲ್ಲಿ ಎರಡು ಮೂರು ಭಾಷೆಗಳಲ್ಲಿ ಪೂಜೆ ನಡೆಯೋದರಿಂದ ಕ್ರಿಸ್ಮಸ್ ನಡುರಾತ್ರಿಯ ಪೂಜೆ ಮುಗಿಯೋ ವೇಳೆಗೆ ಬೆಳಗಿನಜಾವ ಎರಡು ಗಂಟೆ ಆಗಿರುತ್ತೆ. ಅಂಥ ಸಮಯದಲ್ಲಿ ಒಂಟಿ ಹೆಂಗಸು ಎರಡು ಕಿಲೋಮೀಟರು ನಡೆಯುತ್ತಾ ಮನೆ ಸೇರುವುದು ಸುರಕ್ಷಿತವೇನಲ್ಲ. ಹಾಗಾಗಿ ನೆಮ್ಮದಿಯಿಂದ ಪೂಜೆಯಲ್ಲಿ ಭಾಗವಹಿಸಲು ನಾನು ಊರಿಗೆ ಬಂದಿದ್ದೆ. 

ಈಗ ಮಟಮಟ ಮಧ್ಯಾಹ್ನ. ಇಲ್ಲಿ ಗುಡಿ ಹತ್ತಿರ ಪೂರ್ಣ ಸಿಗ್ನಲ್ಲು ಇದೆ. ಪೋನ್ ಮಾಡ್ತಾ ಇದ್ದೀನಿ, ಅತ್ತಕಡೆ ರಿಂಗ್ ಆಗ್ತಾ ಇದೆ, ಆದರೆ ಅವರು ಪೋನ್ ತಗೊಳ್ತಾ ಇಲ್ಲ. ಬಹುಶಃ ಕೆಲಸದಲ್ಲಿ ಮಗ್ನರಾಗಿರಬಹುದು ಅಂದುಕೊಂಡೆ. ಹಾಗೆಯೇ ದೇವಾಲಯದ ಮುಂಭಾಗದತ್ತ ಕಣ್ಣಾಯಿಸಿದಾಗ ನಮ್ಮದೇ ಕಾರು ಅಲ್ಲಿ ನಿಂತಿದ್ದಂತೆ ಕಂಡು ಬಂದು ಕ್ಷಣ ಆಶ್ಚರ್ಯವಾದರೂ ನೆಮ್ಮದಿರಲಿಕ್ಕಿಲ್ಲ, ಬೇರೆ ಯಾರೋ ಅದೇ ತರದ ಕಾರು ತಂದಿದ್ದಾರೆ ಎಂದು ಮರೀಚಿಕೆಯನ್ನು ನೆನೆಸಿಕೊಂಡು ಮನಸಿನಲ್ಲೇ ನಕ್ಕೆ. ಆದರೆ ದೇವಾಲಯದ ಮುಂದೆ ಗಂಟೆ ಗೋಪುರದ ಕೆಳಗೆ ನಮ್ಮ ಮನೆಯವರೇ ಯಾರ ಹತ್ತಿರಾನೋ ಮಾತಾಡುತ್ತಿದ್ದಂತೆ ಭಾಸವಾಯಿತು. ಹಣೆಮೇಲೆ ಕೈ ಮರೆ ಮಾಡಿಕೊಂಡು ದಿಟ್ಟಿಸಿ ನೋಡಿದೆ. ಆಶ್ಚರ್ಯ! ಅದು ಅವರೇ! ಏನು ನೋಡೋಣ ಅಂತ ಹತ್ತಿರ ಹೋದೆ. 

ಮನೆಯವರು ನನಗೆ ಅಚ್ಚರಿ ನೀಡಲು ಯಾವ ಸುಳಿವೂ ಕೊಡದೆ ಬಂದಿದ್ದರು. ಕ್ರಿಸ್ಮಸ್ ಪ್ರಯುಕ್ತ ಅವರ ತಂಡದವರು ಕೆಲಸವನ್ನು ಬೇಗ ಮುಗಿಸಿ ಮೊದಲು ಇವರನ್ನು ಬೆಂಗಳೂರಿಗೆ ಕಳಿಸಿದ್ದರಂತೆ. ಬೆಂಗಳೂರಿಗೆ ಹೋದ ಇವರು ಮನೆಯಲ್ಲಿ ಲಗೇಜು ಇಟ್ಟು ಕಾರಿನಲ್ಲಿ ಇತ್ತ ಬಂದಿದ್ದರು. ಉಪದೇಶಿ ಜೋನೆಸಣ್ಣ ನಡುಮಧ್ಯಾಹ್ನದ ಗಂಟೆ ಹೊಡೆಯೋಕೆ ಹೋಗಿದ್ದವನು ಇದ್ದಕ್ಕಿದಂತೆ ಸುಸ್ತಾಗಿ ಅಲ್ಲೇ ಕುಳಿತುಕೊಂಡನಂತೆ. ಇವರು ತಕ್ಷಣ ಗಾಡಿ ಇಳಿದು ಹೋಗಿ ಅವನಿಗೆ ನೀರು ಕುಡಿಸಿದರಂತೆ. 

ಉಪದೇಶಿ ಜೋನೆಸಣ್ಣ ಒಬ್ಬಂಟಿ. ಅವನ ಹೆಂಡತಿ ಬಹು ಹಿಂದೆಯೇ ತೀರಿಕೊಂಡಿದ್ದಳು. ಮಗಳು ತನ್ನ ಚೊಚ್ಚಲ ಹೆರಿಗೆಯಲ್ಲೇ ಪ್ರಾಣ ಕಳೆದುಕೊಂಡಳು. ಇದ್ದ ಒಬ್ಬ ಮಗ ಫ್ರಾನ್ಸ್ ದೇಶದಲ್ಲಿ ಫಾದರ್ ಆಗಿ ಕ್ರಿಸ್ತನ ಸೇವೆ ಸಲ್ಲಿಸುತ್ತಿದ್ದಾರೆ. ಒಂಟಿ ಜೋನೆಸಣ್ಣ ಯೇಸುವಿನ ಸೇವಕನಾಗಿ ಇಲ್ಲಿ ದೇವಾಲಯದ ಕೆಲಸಗಳನ್ನು ನಯನಾಜೂಕಿನಿಂದ ಮಾಡುತ್ತಿದ್ದಾನೆ. ಈಗೀಗ ಯಾಕೋ ಅವನಿಗೆ ಎದೆಯ ಎಡಬದಿಯಲ್ಲಿ ಒಂಥರಾ ಚುಳುಕು ಶುರುವಾಗ್ತಿದೆ. ಅದು ಕುತ್ತಿಗೆಯ ಮೇಲೆಲ್ಲ ವ್ಯಾಪಿಸಿ ತಲೆ ವಿಪರೀತ ಬಿಸಿಯಾಗುತ್ತದೆ. ಜಯದೇವ ಆಸ್ಪತ್ರೆಯವರು ಪರೀಕ್ಷೆ ಮಾಡಿ ಹೃದಯದ ಶಸ್ತ್ರಚಿಕಿತ್ಸೆ ಆಗಬೇಕು ಅಂದರಂತೆ. ಆಸ್ಪತ್ರೆಯಲ್ಲಿ ಅವನ ನಂಬರು ಎರಡು ವರ್ಷದ ನಂತರ ಇದೆ. ಖಾಸಗಿ ಆಸ್ಪತ್ರೆಯಲ್ಲಿ ಖರ್ಚು ಮಾಡುವಷ್ಟು ಸ್ಥಿತಿವಂತನಲ್ಲ. 

ಊರವರೆಲ್ಲ ತಮ್ಮ ಮನೆಗಳಲ್ಲಿ ಕ್ರಿಸ್ತಜಯಂತಿಯ ಸಂಭ್ರಮದಲ್ಲಿ ನಲಿದಾಡುತ್ತಿದ್ದರೆ ಇಲ್ಲಿ ನಾನೂ ನನ್ನ ಮನೆಯವರೂ ಜೋನೆಸಣ್ಣನ ನೋವಿಗೆ ಕಿವಿಯಾಗಿದ್ದೆವು. ನಾವೆಲ್ಲ ಊಟ ಮಾಡುತ್ತಿರುವಾಗ ಜೋನೆಸಣ್ಣನಿಗೆ ದೂರದ ಫ್ರಾನ್ಸ್ ದೇಶದಿಂದ ಅವರ ಮಗ ಫಾದರ್ ಫೋನ್ ಮಾಡಿ ಶುಭಾಶಯ ಕೋರಿದರು. ನಮಗಿಲ್ಲಿ ಮಧ್ಯಾಹ್ನವಾಗಿರುವಾಗ ಅವರ ದೇಶದಲ್ಲಿ ಈಗಿನ್ನೂ ಬೆಳಗ್ಗೆಯಾಗಿತ್ತು. ನಮ್ಮ ಯಜಮಾನರು ಫಾದರೊಂದಿಗೆ ಫೋನಿನಲ್ಲಿ ಮಾತನಾಡಿ ಜೋನೆಸಣ್ಣನ ಹೃದಯರೋಗದ ವಿಷಯವನ್ನು ಸೂಕ್ಷ್ಮವಾಗಿ ತಿಳಿಸಿದರು. ಮರುದಿನ ನಾವು ನಮ್ಮ ಜೊತೆಗೇ ಜೋನೆಸಣ್ಣನನ್ನು ನಗರದ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದೇವೆಂದೂ ತಿಳಿಸಿದರು. 

ಸಂಜೆಯಾಗುತ್ತಿದ್ದಂತೆ ಊರವರೆಲ್ಲ ಒಬ್ಬೊಬ್ಬರಾಗಿ ಬಂದು ಜೋನೆಸಣ್ಣನನ್ನು ಅಪ್ಯಾಯತೆಯಿಂದ ಮಾತನಾಡಿಸಿ ಶುಭ ಹಾರೈಸಿದರು. ಈ ನಡುವೆ ನಮ್ಮ ಯಜಮಾನರು ಈ ವೃದ್ಧನಿಗೆ ಸಹಾಯ ನೀಡುವಂತೆ ತಮ್ಮ ಗೆಳೆಯರ ಗುಂಪಿಗೆ ಒಂದು ವಾಟ್ಸಾಪು ಸಂದೇಶ ಕಳಿಸಿದ್ದರಿಂದ ಆ ಕಡೆಯಿಂದ ಒಂದು ಲಕ್ಷರೂಪಾಯಿ ವ್ಯವಸ್ಥೆಯಾಯಿತು. ಊರ ಪಾದ್ರಿಯವರು ಬಿಷಪರೊಂದಿಗೆ ಮಾತಾಡಿ ಐವತ್ತು ಸಾವಿರ ರೂಪಾಯಿ ವ್ಯವಸ್ಥೆ ಮಾಡಿದರು. 

ದೊಡ್ಡಾಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಸುಸೂತ್ರವಾಗಿ ನಡೆದು ಇದೀಗ ಜೋನೆಸಣ್ಣ ಚೇತರಿಸಿಕೊಳ್ಳುತ್ತಿದ್ದಾನೆ. ಊರವರೆಲ್ಲ ಸಂಜೆ ನಮ್ಮೂರ ದೇವಾಲಯದಲ್ಲಿ ಒಟ್ಟುಗೂಡಿ ಜೋನೆಸಣ್ಣನಿಗಾಗಿ ವಿಶೇಷ ಜಪಸರ ಮಾಡಿದರಂತೆ. ಅದೇ ಸಂಜೆ ಫ್ರಾನ್ಸ್ ದೇಶದಿಂದ ಜೋನೆಸಣ್ಣನ ಮಗ ಬಂದಿಳಿದು ಅಪ್ಪನನ್ನು ಭೇಟಿಯಾದರು. ಜೋನೆಸಣ್ಣನ ಮುಖದಲ್ಲಿ ಎಂದೂ ಕಾಣದ ನಗು ಮನೆ ಮಾಡಿತ್ತು. ಅದೇ ವೇಳೆಗೆ ಊರಿನಿಂದ ಅವ್ವ ಫೋನ್ ಮಾಡಿ ಕ್ರಿಸ್ಮಸ್ ಕೊಟ್ಟಿಗೆಯಲ್ಲಿನ ಯೇಸುಕಂದ ಚೆಂದದ ನಗು ಬೀರುತ್ತಿದ್ದಾನೆ ಎಂದು ಹೇಳಿದರು. 

ಆ ನಗು ನಮ್ಮ ಮನಸ್ಸಿನಲ್ಲೂ ಅಚ್ಚೊತ್ತಿದೆ. ಯೇಸುಕಂದನ ಆ ಮನಮೋಹಕ ನಗು ಎಂದೂ ಮಾಸದಿರಲಿ. 

———————————————- 

No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...