ಡಿಸೆಂಬರಲ್ಲವೆ ಈಗ?
ಇರುಳು ಚೆಲ್ಲಿದೆ ಹಾಲು ಬೆಳದಿಂಗಳಲ್ಲಿ
ನಕ್ಷತ್ರಗಳ ಕೆಳಗೆ ಸಾಗುವಾಗ
ಕಣ್ಣಿಗೆ ಬೀಳುವುದಿಲ್ಲವೆ
ಬೆಳೆದ ಮರಗಳ ತುದಿಯ ಬೆಳ್ಳಿಯೆಲೆಗಳ ಮೇಲೆ
ಗೋಪುರದಲ್ಲಿ ಶಿಲುಬೆ?
ಕ್ರಿಸ್ಮಸ್ ರಾತ್ರಿಗಂತು ಇನ್ನಷ್ಟು ಚಳಿ ಬೇಕು;
ಹಾದಿ ಬೀದಿಗಳಲ್ಲಿ ಕ್ರಿಸ್ಮಸ್ ಗಿಡಗಳೆದ್ದು
ಮುತ್ತುರತ್ನಗಳಂಥ ಬೆಳಕು ತೂಗಿ
ಕಿಟಕಿಗಾಜಿನ ಹಿಂದೆ ಕಿರಿನಗೆಯರಳಬೇಕು;
ನೃತ್ಯಗೀತದ ನಲಿವು ಉಕ್ಕಿಹರಿಯಬೇಕು;
ಮೃದು ನುಡಿಗಳಲ್ಲಿ ಸ್ವಾಗತಿಸಬೇಕು
ಪ್ರಾರ್ಥನೆಯ ಕೊರಳು ಬಾನತ್ತ ಏರಬೇಕು;
ಎತ್ತರದ ಘಂಟೆಗಳ ದನಿ ಎಡೆಬಿಡದೆ ಮೊಳಗಬೇಕು;
ಶಾಂತಿ ನೆಲಸಬೇಕು.
ಬಯಲ ಹಸಿರಿನ ತುಂಬ ಹೂವಾಡಬೇಕು.
ಪ್ರೀತಿಯೇ ದೇವರೆಂದು ನೆನೆಯಬೇಕು;
ಕಣ್ಣಹನಿಗಳ ನಡುವೆ ಕೈಮುಗಿಯಬೇಕು.
ಕೆ. ಎಸ್. ನರಸಿಂಹಸ್ವಾಮಿ- ಪುಟ - 93
ಪುಸ್ತಕ :ಕ್ರಿಸ್ತಕಾವ್ಯ
No comments:
Post a Comment