ಕೋಟಿ ವೀರ್ಯಾಣುಗಳ
ಓಟ ಪೈಪೋಟಿಯಲಿ,
ಒಂದೇ ಒಂದರ ಗೆಲುವು
ಅಂಡಾಣುವಿನ ಒಲವು
ಹೊಕ್ಕುಳ ಬಳ್ಳಿಯಲಿ
ಅರಳಿ ನಿಂತ ಹೀಚು,
ಗರ್ಭ ಗುಡಿಯೊಳಗೆ
ಪಾವನ ಪಿಂಡ ರೂಪ !
ನರ ನಾಡಿ ಮೂಳೆಯಲಿ
ಅಸ್ಥಿಮಜ್ಜೆಯ ಅಂಟು,
ನವ-ಮಾಸದ ಪವಾಡದಲಿ
ನವಿರಾದ ಮಾಂಸದುಂಡೆ !
ಮೂಳೆ ಪಂಜರದೊಳಗೆ
ಹೃದಯ ಢಮರುಗವು,
ಢವಗುಟ್ಟುವ ಲಯ
ಯಾರಿದಕೆ ಅಭಯ ?
ಅವ್ವನ ಒಡಲ ಕಡಲು
ಗರ್ಭ-ಚಿಪ್ಪು, ಜೀವ ಮುತ್ತು,
ಜಗವೆಂಬ ಭರವಸೆಯು,
ಜನ್ಮ ಜನ್ಮದ ಜಾಡು
- ಡೇವಿಡ್ ಕುಮಾರ್
No comments:
Post a Comment