· ಸಹೋ. ವಿನಯ್ ಕುಮಾರ್
ಈ ವಿಭಿನ್ನತೆಯನ್ನು ಎರಡು ರೀತಿಯಾಗಿ ನಾವು ನೋಡಬಹುದು.
1. ಕೆಲವು ವಿಷಯಗಳು ಸಂತ ಯೊವಾನ್ನರ ಶುಭಸಂದೇಶದಲ್ಲಿ ಇಲ್ಲದೆ ಇರುವುದು ಹಾಗೂ ಇತರೆ ಶುಭಸಂದೇಶಗಳಲ್ಲಿ ಇರುವಂತಹ ವಿಭಿನ್ನತೆಗಳು.
2. ಕೆಲವು ವಿಷಯಗಳು ಹಾಗೂ ಸಾಹಿತ್ಯದ ಪ್ರಕಾರಗಳು ಕೇವಲ ಯೊವಾನ್ನರ ಶುಭಸಂದೇಶದಲ್ಲಿ ಮಾತ್ರ ಕಾಣಬಹುದಾಗಿದ್ದಂತಹ ವಿಭಿನ್ನತೆಗಳು.
ಇಂದಿನ ಸಂಚಿಕೆಯಲ್ಲಿ ಬರೀ ಯೊವಾನ್ನರ ಶುಭಸಂದೇಶದಲ್ಲಿ ಸಿಗುವಂತಹ ಸಾಹಿತ್ಯದ ಪ್ರಕಾರ ಹಾಗು ವಿಭಿನ್ನತೆಗಳನ್ನು ನೋಡೋಣ. ಇದರಲ್ಲಿ ಏಳು ವಿಭಿನ್ನತೆಗಳನ್ನು ನಾವು ಕಾಣಬಹುದಾಗಿದೆ:
1. ಯೊವಾನ್ನರ ಶುಭಸಂದೇಶದಲ್ಲಿ ಏಳು ಪವಾಡಗಳು ಅಥವಾ ಏಳು ಸಂಕೇತಗಳ ಕುರಿತು ಬರೆಯಲಾಗಿದೆ. ನಾವು ಗಮನಿಸಬೇಕಾದ ವಿಷಯ ಶುಭಸಂದೇಶದಲ್ಲಿ ಪವಾಡಗಳ ಬದಲಾಗಿ ಸಂಕೇತಗಳು, ಚಿಹ್ನೆಗಳು ಅಥವಾ ಸೂಚನೆಗಳು ಎಂದು ಬಳಸಲಾಗುತ್ತದೆ. ನಾವು ಕಾಣುವ 7 ಚಿಹ್ನೆಗಳಲ್ಲಿ 5 ಚಿಹ್ನೆಗಳು ಅಥವಾ ಪವಾಡಗಳು ಯೊವಾನ್ನರ ಶುಭಸಂದೇಶದಲ್ಲಿ ಮಾತ್ರ ಕಾಣಬಹುದಾಗಿದೆ. ಬೇರೆ ಮೂರು ಶುಭ ಸಂದೇಶಗಳಲ್ಲಿ ಇವುಗಳ ಬಗ್ಗೆ ಯಾವುದೇ ಆದಂತಹ ಉಲ್ಲೇಖಗಳಿಲ್ಲ. ಅವುಗಳು ಯಾವುದೆಂದರೆ:
ಅ) ನೀರನ್ನ ದ್ರಾಕ್ಷಾರಸವನ್ನಾಗಿ ಮಾಡಿದ ಸಂಕೇತ. (ಅಧ್ಯಾಯ 2)
ಆ) ಅಧಿಕಾರಿಯ ಮಗನ ಸ್ವಸ್ಥತೆಯ ಸಂಕೇತ. (ಅಧ್ಯಾಯ4)
ಇ) ಬೇತ್ಸಥಾಕೊಳದ ಬಳಿ ನಡೆದಂತಹ ಸ್ವಸ್ಥತೆಯ ಸಂಕೇತ.
ಈ) ಹುಟ್ಟು ಕುರುಡನಿಗೆ ದೃಷ್ಟಿದಾನ (ಅಧ್ಯಾಯ- 9)
ಉ) ಸತ್ತ ಲಾಜರನಿಗೆ ಜೀವದಾನ (ಅಧ್ಯಾಯ-11)
2. 'ನಾನೇ' ಎಂಬ ಯೇಸುವಿನ ಹೇಳಿಕೆಗಳು. ಇದನ್ನು ನಾವು ಎರಡು ರೀತಿಯಲ್ಲಿ ವಿಂಗಡಿಸಬಹುದಾಗಿದೆ. ಮೊದಲನೆಯದು ಈ 'ನಾನೇ' ಹೇಳಿಕೆಯ ಜೊತೆಗೆ ಯಾವುದಾದರೂ ಒಂದುಗುಣ ವಿಶೇಷಣದ ಸಹಾಯವನ್ನು ಪಡೆದು ಹೇಳುವಂತದ್ದು. ಇದರಲ್ಲಿ ಯೇಸುಸ್ವಾಮಿಯ ಗುಣವಿಶೇಷಣಗಳ ಬಗ್ಗೆ ಮಾಹಿತಿ ಸಿಗುತ್ತದೆ. ಎರಡನೆಯದು ಯಾವುದೇ ಗುಣವಿಶೇಷಣಗಳು ಇಲ್ಲದೆ ಬರೀ 'ನಾನೇ' ಎಂಬ ಹೇಳಿಕೆಗಳನ್ನು ನೋಡಬಹುದಾಗಿದೆ. ಮೊದಲನೆಯದಾಗಿ ಗುಣವಿಶೇಷಣಗಳು ಸಹಾಯವನ್ನು ಪಡೆದು ಯೇಸುಸ್ವಾಮಿಯ ವ್ಯಕ್ತಿತ್ವದ ಬಗ್ಗೆ ತಿಳಿಸುವಂತಹ ಹೇಳಿಕೆಗಳು. ಇದರಲ್ಲಿ ಪ್ರಮುಖವಾದವು 7. ಉದಾಹರಣೆಗಳು
ಅ) ನಾನೇ ಜೀವದಾಯಕ ರೊಟ್ಟಿ ( ಅಧ್ಯಾಯ 6:35) ಆ)ನಾನೇ ಜಗತ್ಜ್ಯೋತಿ (ಅಧ್ಯಾಯ 8:12) ಇ)ನಾನೇ ಕುರಿ ಬಾಗಿಲು ( ಅಧ್ಯಾಯ 10:7) ಈ)ನಾನೇ ಉತ್ತಮ ಕುರಿಗಾಹಿ ( ಅಧ್ಯಾಯ 10 :11)
ಉ)ನಾನೇ ಪುನರುತ್ಥಾನ ಹಾಗೂ ಜೀವ .( ಅಧ್ಯಾಯ 11: 25) ಊ)ನಾನೇ ಮಾರ್ಗ, ಸತ್ಯ ಹಾಗೂ ಜೀವ.( ಅಧ್ಯಾಯ14:6) ಋ) ನಾನೇ ನಿಜವಾದ ದ್ರಾಕ್ಷಾ ಬಳ್ಳಿ ( ಅಧ್ಯಾಯ 15:1)
ಎರಡನೆಯದಾಗಿ ಯಾವ ಗುಣವಿಶೇಷಣಗಳ ಸಹಾಯವಿಲ್ಲದೆ ಸಂಪೂರ್ಣವಾಗಿ ಬರೀ ನಾನೇ ಎಂಬ ಹೇಳಿಕೆಗಳನ್ನು ಹೇಳಿರುವುದು ಇದರ ಸಂಖ್ಯೆ 6. ಉದಾಹರಣೆ:
ಅ) ನಾನೇ 8:24 ಆ) ನಾನೇ 8:28 ಇ) ನಾನೇ 8:58 ಈ)ನಾನೇ 18:5 ಉ) ನಾನೇ 18:6 ಊ) ನಾನೇ 18:8.
ಇದಕ್ಕೆ ದೈವ ಶಾಸ್ತ್ರೀಯ ಅಳವಡಿಕೆಗಳಿವೆ. ನಾನೇ ಎಂಬ ಉಲ್ಲೇಖಗಳ ಬಗ್ಗೆ ಇರುವ ಹಿನ್ನೆಲೆ ಮಹತ್ತರವಾದದ್ದು. ಪ್ರವಾದಿ ಯೆಶಾಯನ ಗ್ರಂಥದಲ್ಲಿ ದೇವರು ಹೀಗೆ ಎನ್ನುವುದನ್ನ ಕಾಣುತ್ತೇವೆ "ನಾನೇ, ನಾನೇ, ದೇವರಾಗಿದ್ದೇನೆ, ನನ್ನ ಹೊರತು ಯಾವ ರಕ್ಷಕನೂ ಇಲ್ಲ" (ಯೆಶಾಯ 43:10) ಹಾಗೂ ವಿಮೋಚನಕಾಂಡದಲ್ಲಿ ಮೋಶೆಗೆ ದೇವರು ತಮ್ಮನ್ನೇ ಪ್ರಕಟಿಸುವಾಗ ಈ ರೀತಿ ಹೇಳುತ್ತಾರೆ "ಇರುವಾಗಿರುವ ಇರುವಾತನು ನಾನೇ" (ವಿಮೋ 3:14). ಈ ಉಲ್ಲೇಖಗಳನ್ನೆಲ್ಲ ಗಮನಿಸಿ ಯೊವಾನ್ನರ ಶುಭಸಂದೇಶದ ನಾನೇ ಹೇಳಿಕೆಗಳನ್ನು ನೋಡಿದಾಗ ನಮಗೆ ತಿಳಿಯುವ ವಿಷಯ ಯೇಸುಸ್ವಾಮಿ ದೇವರು ಎಂದು ಅವರು ತಮ್ಮನ್ನೇ ಪ್ರಕಟಪಡಿಸುತ್ತಿದ್ದಾರೆ ಎಂಬುದು. ನಾನೇ ಎಂಬ ಪದವು ದೇವರನ್ನು ಸೂಚಿಸುತ್ತದೆ ಅಥವಾ ದೈವೀ ಪದವಿಯನ್ನು ಅಥವಾ ದೇವರ ನಾಮವನ್ನು ಸೂಚಿಸುತ್ತದೆ.
3. ಸಂಭಾಷಣೆಗಳು: ಈ ಶುಭಸಂದೇಶದಲ್ಲಿ ಅನೇಕ ಸಂಭಾಷಣೆಗಳನ್ನು ನಾವು ಕಾಣುತ್ತೇವೆ, ಇದೊಂದು ವಿಶೇಷತೆಯೂ ಕೂಡ ಹೌದು. ಈ ರೀತಿ ಅನೇಕ ಸಂಭಾಷೆಗಳನ್ನು ಬೈಬಲ್ ವಿದ್ವಾಂಸರು ದೈವಶಾಸ್ತ್ರೀಯ ಚಿಂತನೆಗಳ ಅನುಗುಣವಾಗಿ ವಿಶ್ಲೇಷಿಸುತ್ತಾರೆ. ಕೆಲವು ಸಂಭಾಷಣೆಗಳು ಕೇವಲ ಈ ಶುಭಸಂದೇಶದಲ್ಲಿ ಮಾತ್ರ ನಾವು ಕಾಣಬಹುದಾಗಿದೆ .ಅವುಗಳೆಂದರೆ :
ಅ) ನಿಕೋದೇಮನೊಡನೆ ಸಂಭಾಷಣೆ (ಅಧ್ಯಾಯ-3)
ಆ) ಸಮಾರಿಯದ ಸ್ತ್ರೀಯೊಡನೆ ನಡೆದ ಸಂಭಾಷಣೆ. (ಅಧ್ಯಾಯ-4)
ಇ) ಯೆಹೂದಿ ಅಧಿಕಾರಿಯ ಜೊತೆ ನಡೆದ ಸಂಭಾಷಣೆ.
4) ಶಿಷ್ಯರ ಪಾದಸ್ನಾನ ಹಾಗೂ ಪ್ರೀತಿಯ ಹೊಸ ಕಟ್ಟಳೆಯನ್ನು ನೀಡುವುದರ ಬಗ್ಗೆ ಈ ಶುಭಸಂದೇಶ ಮಾತ್ರ ನಮಗೆ ತಿಳಿಸುತ್ತದೆ. (ಅಧ್ಯಾಯ 13). ಇದೊಂದು ಶ್ರೇಷ್ಠ ಕೊಡುಗೆಯಾಗಿದೆ.
5) ಪವಿತ್ರಾತ್ಮರಬಗ್ಗೆ ಹಾಗೂ ಪವಿತ್ರಾತ್ಮರ ಸಹಾಯ ಹಾಗೂ ಬರುವಿಕೆಯ ಬಗ್ಗೆ ಈ ಶುಭಸಂದೇಶದಲ್ಲಿ ಮಾತ್ರ ಯೇಸುಸ್ವಾಮಿ ಹೇಳುವುದನ್ನು ನಾವು ಕಾಣುತ್ತೇವೆ (ಅಧ್ಯಾಯ 16).
6) ಯೇಸುಸ್ವಾಮಿ ದ್ರಾಕ್ಷಾ ಬಳ್ಳಿ ನಾವು ಅದರ ಕವಲು ಬಳ್ಳಿಗಳು. ಈಚಿತ್ರಣವನ್ನು ನಾವು ಬರೀ ಈ ಶುಭಸಂದೇಶದಲ್ಲಿ ಮಾತ್ರ ನೋಡಬಹುದಾಗಿದೆ (ಅಧ್ಯಾಯ 15).
7) ಯೇಸುಸ್ವಾಮಿಯ ಯಾಜಕೀಯ ಪ್ರಾರ್ಥನೆಯನ್ನು ನಾವು ಬರೀ ಈ ಶುಭಸಂದೇಶದಲ್ಲಿ ಮಾತ್ರ ಕಾಣಬಹುದಾಗಿದೆ (ಅಧ್ಯಾಯ - 17).
**********
No comments:
Post a Comment