Saturday, 21 December 2019

ಆ ನೀರವ ರಾತ್ರಿಯಲಿ



ಫಾದರ್ ವಿಜಯಕುಮಾರ್ ಪಿ, ಬಳ್ಳಾರಿ

ಅದೊಂದು ನೀರವ ರಾತ್ರಿ. ಎಲ್ಲೆಂದರಲ್ಲಿ ಜನಜಂಗುಳಿ. ವಸತಿಗಾಗಿ ಹುಡುಕಾಟ. ಹಲವರ ಮನದಲ್ಲಿ ಕಳವಳ, ಮೊಗದಲ್ಲಿ ನೀರವತೆ ತುಂಬಿ ಹೊರಸೂಸುತ್ತಿತ್ತು. ಆದರೆ ಕೆಲವೇ ಗಂಟೆಗಳಲ್ಲಿ ಅದು ಪವಿತ್ರ ಹಾಗೂ ಮಹಿಮೆಯ ರಾತ್ರಿಯಾಗಿ ಮಾರ್ಪಟ್ಟಿತು. ಆ ರಾತ್ರಿ ಮಾನವಕುಲದ ರಕ್ಷಕ, ವಾಗ್ದಾತ ಪುತ್ರ, ವಿಶ್ವದ ಒಡೆಯ, ಪ್ರಭು ಯೇಸು ಮಗುವಾಗಿ ಧರೆಗಿಳಿದ. ಮಾನವಕುಲದ ಪ್ರಥಮ ತಂದೆ-ತಾಯಿಯರಾದ ಆದಾಮ-ಏವಳ ಅವಿಧೇಯತೆಯ ಪಾಪವನ್ನು ಅಳಿಸಿಹಾಕಿ ದೇವ ಮಾನವರ ಅನುಬಂಧವನ್ನು ಪೂರ್ವಸ್ಥಿತಿಗೇರಿಸಿ ಶಾಶ್ವತ ಆನಂದವನ್ನು ನೀಡಲು ದೇವಕುಮಾರ ಧರೆಗಿಳಿದ ರಾತ್ರಿ ಅದು. 

ಅಂದು ಇಸ್ರಾಯೇಲ್ ರೋಮನ್ನರ ಸಾಮ್ರಾಜ್ಯವಾಗಿತ್ತು. ಅವರು ಯೆಹೂದ್ಯರಿಂದ ವಿಪರೀತವಾಗಿ ತೆರಿಗೆ ವಸೂಲಿ ಮಾಡುತ್ತಿದ್ದರು. ತಮ್ಮ ಬೊಕ್ಕಸಕ್ಕೆ ಇನ್ನೂ ಅಧಿಕವಾಗಿ ಆದಾಯ ತರಲು ತಮ್ಮ ಸಾಮ್ರಾಜ್ಯದಲ್ಲಿ ಜನಗಣತಿ ಮಾಡಲು ಚಕ್ರವರ್ತಿ ಔಗುಸ್ತನು ಆದೇಶಿಸಿದನು. ಆತನ ಅಣತಿಯಂತೆ ರೋಮ್ ಸಾಮ್ರಾಜ್ಯಕ್ಕೆ ಸೇರಿದ್ದ ಯೆಹೂದ್ಯರೆಲ್ಲರೂ ತಮ್ಮತಮ್ಮ ಹೆಸರುಗಳಲ್ಲಿ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಲು ತಾವು ವಾಸವಾಗಿದ್ದ ಊರುಗಳಿಂದ ತಮ್ಮ ಸ್ವಂತ ಊರುಗಳಿಗೆ ಪ್ರಯಾಣಿಸಲಾರಂಬಿಸಿದರು. 

ಬೆತ್ಲಹೇಮ್ ದಾವಿದರಸನ ಪಟ್ಟಣ ಇದು ಜರುಸಲೇಮಿನಿಂದ ಸುಮಾರು ಆರು ಕಿಲೋಮೀಟರ್ ದೂರದಲ್ಲಿದೆ. ಅಂದು ಆ ಬೆತ್ಲಹೇಮಿನ ಮನೆಗಳಲ್ಲಿ ಜನರು ತುಂಬಿತುಳುಕುತ್ತಿದ್ದರು. ಅದೇ ಸಮಯದಲ್ಲಿ ದಾವಿದರಸನ ಮನೆತನಕ್ಕೆ ಸೇರಿದ ಜೋಸೆಫನು ತನ್ನ ಪತ್ನಿ ಮರಿಯಳೊಂದಿಗೆ ತಮ್ಮ ಹೆಸರುಗಳನ್ನು ನೊಂದಾಯಿಸಿಕೊಳ್ಳಲು ಗಲೀಲಿಯಾದ ನಜರೇತಿನಿಂದ ಸುಮಾರು 112 ಕಿಲೋಮೀಟರ್ ದೂರ ಪ್ರಯಾಣಿಸಿ ತಮ್ಮ ಸ್ವಂತ ಊರಾದ ಬೆತ್ಲಹೇಮಿಗೆ ಆಗಮಿಸಿದ. ಸುಮಾರು ಮೂರು ದಿನಗಳ ಪ್ರಯಾಣ. ತುಂಬು ಗರ್ಬಿಣಿ ಮರಿಯ ಬಹಳವಾಗಿ ಬಳಲಿದ್ದಾಳೆ. ಪ್ರಸವಕಾಲ ಸಮೀಪಿಸುತ್ತಿದೆ. ಹೊತ್ತು ಮೀರಿದೆ. ಎಲ್ಲರೂ ತಮ್ಮ ತಮ್ಮ ಮನೆಗಳಲ್ಲಿ ತಮ್ಮ ನೆಂಟರಿಷ್ಟರೊಡನೆ ಊಟ ಮಾಡಿ ನಿದ್ರೆಗೆ ಜಾರುವ ಸಮಯ. ವಸತಿ ಗೃಹಗಳು ಸಹ ತುಂಬಿ ತುಳುಕುತ್ತಿವೆ (ಲೂಕ 2:7). ಪ್ರಸವಕ್ಕೆ ಸೂಕ್ತ ಸ್ಥಳವಿಲ್ಲದೆ ಜೋಸೆಫ್ ಮತ್ತು ಮರಿಯ ನಿರಾಶ್ರಿತರಾಗಿದ್ದಾರೆ. ಪ್ರಸವ ಕಾಲ ಸಮೀಪಿಸುತ್ತಿದೆ. ದುಗುಡ ಅಧಿಕವಾಗುತ್ತಿದೆ. ಜೋಸೆಫ್ ಮತ್ತು ಮರಿಯ ಕಂಗಾಲಾಗಿದ್ದಾರೆ. ಆಗ ಅಲ್ಲೊಬ್ಬ ಇಗೋ ನಮ್ಮ ದನದ ಕೊಟ್ಟಿಗೆಯಲ್ಲಿ ಸ್ವಲ್ಪ ಸ್ಥಳವಿದೆ ಈ ರಾತ್ರಿ ನೀವಿಲ್ಲಿ ತಂಗಬಹುದು ಎಂದನು. ನೀರಿನಲ್ಲಿ ಮುಳುಗುತ್ತಿದ್ದವನಿಗೆ ರೆಂಬೆಯೊಂದು ದೊರೆತಂತೆ ಜೋಸೆಫನು ತಕ್ಷಣ ಮರಿಯಳನ್ನು ಅಲ್ಲಿಗೆ ಕರೆದೊಯ್ದನು. ಆ ನೀರವ ರಾತ್ರಿಯಲ್ಲಿ, ಯಾವ ಸದ್ದು ಗದ್ದಲವಿಲ್ಲದೆ ಲೋಕರಕ್ಷಕನ ಜನನವಾಯಿತು (ಲೂಕ 2:7). ಜೋಸೆಫ್ ಮತ್ತು ಮರಿಯಳ ಭಾರವಾದ ಹೃದಯ ಹಗುರಾಗಿ ಕೃತಜ್ಞತೆಯಿಂದ ತುಂಬಿತು. ಮನಸು ಪ್ರಶಾಂತವಾಯಿತು. ಇದ್ದಕ್ಕಿದ್ದಂತೆ ಸ್ವರ್ಗದ ದೂತವೃಂದ ಕಾಣಿಸಿಕೊಂಡು "ಮಹೋನ್ನತದಲ್ಲಿ ದೇವರಿಗೆ ಮಹಿಮೆ; ಭೂಲೋಕದಲ್ಲಿ ದೇವರೊಲಿದ ಮಾನವರಿಗೆ ಶಾಂತಿ ಸಮಾಧಾನ" ಎಂದು ಸರ್ವೇಶ್ವರನ ಸ್ತುತಿ ಮಾಡಿತು (ಲೂಕ 2: 14). 

ಆ ರಾತ್ರಿ ಹೊಲದಲ್ಲಿದ್ದುಕೊಂಡು ಕುರಿಕಾಯುತ್ತಿದ್ದ ದೀನ ಮನಸ್ಸಿನ ಕುರುಬರಿಗೆ ಆ ಸ್ತುತಿಗಾನ ತೇಲಿಬಂದಿತು. ಅವರು ಆಶ್ಚರ್ಯ, ಭಯಮಿಶ್ರಿತ ಆನಂದದಿಂದ ನಿದ್ರೆಯಿಂದ ಎಚ್ಚೆತ್ತರು. "ಇದ್ದಕ್ಕಿದ್ದಂತೆ ದೇವದೂತನೊಬ್ಬನು ಅವರೆದುರಿಗೆ ಪ್ರತ್ಯಕ್ಷನಾಗಲು ಸರ್ವೇಶ್ವರನ ಪ್ರಭೆ ಅವರ ಸುತ್ತಲೂ ಪ್ರಕಾಶಿಸಿತು. ಅವರು ಬಹಳವಾಗಿ ಹೆದರಿದರು. ಆ ದೂತನು ಅವರಿಗೆ ಭಯಪಡಬೇಡಿ, ಇಗೋ, ಜನರೆಲ್ಲರಿಗೂ ಪರಮಾನಂದವನ್ನು ತರುವ ಶುಭಸಂದೇಶವನ್ನು ನಿಮಗೆ ತಿಳಿಸುತ್ತೇನೆ. ಅದೇನೆಂದರೆ, ಇಂದೇ ದಾವೀದನ ಊರಿನಲ್ಲಿ ನಿಮಗೋಸ್ಕರ ಲೋಕೋದ್ಧಾರಕ ಜನಿಸಿದ್ಧಾರೆ ಅವರೇ ಪ್ರಭು ಕ್ರಿಸ್ತ" (ಲೂಕ 2:10-11) ಎನ್ನಲು ಕುರುಬರಿಗೆ ಪರಮಾನಂದವಾಯಿತು. ತಕ್ಷಣ ಅವರು ತಮ್ಮ ಕುರಿಗಳನ್ನು ಅಲ್ಲೇ ಬಿಟ್ಟು ಕಾಣಿಕೆಗಳೊಡನೆ ದನಗಳ ಕೊಟ್ಟಿಗೆಗೆ ಧಾವಿಸಿದರು. ರಕ್ಷಕನನ್ನು ಕಂಡು ಪರಮಾನಂದಭರಿತರಾಗಿ, ಆರಾಧಿಸಿ ಪುನೀತರಾದರು. 

ಆದರೆ ಬೆತ್ಲಹೇಮಿನಿಂದ ಆರೇ ಕಿಲೋಮೀಟರ್ ದೂರದಲ್ಲಿರುವ ಜೆರುಸಲೇಮಿನಲ್ಲಿ ನುರಿತ ಪಂಡಿತರಿದ್ದರು. ರಕ್ಷಕರ ಬರುವಿಕೆಯ ಬಗ್ಗೆ ತಮ್ಮ ಧರ್ಮಗ್ರಂಥಗಳಲ್ಲಿರುವ ಉಲ್ಲೇಖಗಳನ್ನು ಓದಿ ತಿಳಿದುಕೊಂಡಿದ್ದ ಜ್ಞಾನಿಗಳಿದ್ದರು. ಆದರೆ ಅವರಿಗೆ ರಕ್ಷಕನ ಜನನದ ಸುದ್ಧಿ ಸಂತೋಷವನ್ನುಂಟು ಮಾಡಲಿಲ್ಲ. ಅವರಲ್ಲಿ ಜ್ಞಾನವಿತ್ತೇ ಹೊರತು ಕ್ರಿಸ್ತನನ್ನು ಕಾಣುವ ಹಂಬಲವಾಗಲೀ, ವಿನಯತೆಯಾಗಲೀ ಇರಲಿಲ್ಲ. ಆದರೆ ಶ್ರೀಮಂತಿಕೆಯ ಜೊತೆ ಜ್ಞಾನವಿದ್ದರೂ ತೃಪ್ತರಾಗದ ಜ್ಯೋತಿಶಾಸ್ತ್ರಜ್ಞರು ತಮ್ಮ ಸುಖಸಂತೋಷವನ್ನು ಹಾಗೂ ತಮ್ಮ ನಾಡನ್ನು ಬಿಟ್ಟು ರಕ್ಷಕನಿಗಾಗಿ ಹುಡುಕುತ್ತಾ ಹೊರಟರು ಯಾವ ಅಡೆತಡೆಗಳು ಬಂದರು, ಹೆರೋದರಸನೇ ಅವರನ್ನು ಲಘುವಾಗಿ ಪರಿಗಣಿಸಿದರೂ ಧೃತಿಗಡದೆ, ದುಡುಕಿನ ನಿರ್ಧಾರಗಳನ್ನು ಕೈಗೊಳ್ಳದೆ ಹುಡುಕಿದರು. ಅಂತಿಮವಾಗಿ ರಕ್ಷಕನನ್ನು ಕಂಡು ಪರಮಾನಂದಗೊಂಡು ಪುನೀತರಾದರು (ಮತ್ತಾಯ 2:1-15). 

ಶೀಲಗಳಲ್ಲಿ (Virtues) ಪ್ರಧಾನವಾದುದು ವಿನಯತೆ. ಯಾರು ವಿನಯತೆಯಿಂದ ಕ್ರಿಸ್ತನನ್ನು ಕಾಣಲು ಬಯಸುವರೋ ಅವರ ಅಂತರಂಗದಲ್ಲಿ ಕ್ರಿಸ್ತ ಉದಯಿಸುತ್ತಾನೆ. ಅವರ ಬಾಳನ್ನು ಬೆಳಗಿಸಿ ಮತ್ತೊಬ್ಬರ ಬಾಳನ್ನು ಬೆಳಗಲು ಹಾತೊರೆಯುವಂತೆ ಮಾಡುತ್ತಾರೆ. ಕ್ರಿಸ್ತನಿಂದ ಸ್ಪರ್ಶಿಸಲ್ಪಟ್ಟವರು ತಮಗಾಗುವ ಹರುಷವನ್ನು ತಮ್ಮಲ್ಲಿಟ್ಟುಕೊಳ್ಳಲು ಸಾಧ್ಯವೇ ಇಲ್ಲ. "ಕುರುಬರು ತಾವು ಕೇಳಿದ್ದನ್ನು ನೆನೆಯುತ್ತಾ, ದೇವರ ಮಹಿಮೆಯನ್ನು ಸಾರುತ್ತಾ ಕೊಂಡಾಡುತ್ತಾ ಹಿಂದಿರುಗಿದರು" (ಲೂಕ 2:20). 

ಆ ನೀರವ ರಾತ್ರಿ ಮಾನವಕುಲಕ್ಕೆ ಅಮರತ್ವದ ಬೆಳಕನ್ನು ತಂದಿತು. ಆ ಬೆಳಕು ಕೇವಲ ಭೌತಿಕ ಬೆಳಕಾಗಿರಲಿಲ್ಲ. ಅದು ಮಾನವಕುಲದ ದಾಸ್ಯವನ್ನು ಕಿತ್ತೊಗೆಯುವ, ಸೈತಾನನ ಸಾಮ್ರಾಜ್ಯವನ್ನು ಧ್ವಂಸಗೊಳಿಸುವ, ದೇವರ ರಾಜ್ಯವನ್ನು ಸ್ಥಾಪಿಸುವ ಬೆಳಕಾಗಿತ್ತು. ಆ ಬೆಳಕು ಪ್ರಭುಕ್ರಿಸ್ತನೇ! ಆ ಕಾರಣ ಆ ನೀರವ ರಾತ್ರಿ ಪಾವನ ರಾತ್ರಿಯಾಯಿತು. ರಕ್ಷಣೆಯ ರಾತ್ರಿಯಾಯಿತು. ಮಾನವಕುಲಕ್ಕೆ ವರದಾನದ ರಾತ್ರಿಯಾಯಿತು. 


********** 



No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...