Saturday, 21 December 2019

ಮಕ್ಕಳ ಸುಳ್ಳಿನ ಪ್ರಪಂಚ (ಭಾಗ - 4)




¨ ಯೊಗೇಶ್ ಮಾಸ್ಟರ್

ಹಸಿಸುಳ್ಳು ಮತ್ತು ಬಿಳಿಸುಳ್ಳು 

ಸುಳ್ಳಿನ ಬಾಲಪಾಠ 

ಮಕ್ಕಳು ಸುಳ್ಳು ಹೇಳಿದಾಗ ಅಥವಾ ಹೇಳುವಾಗ, ಗಾಬರಿಯಾಗುವ ಅಥವಾ ಆಘಾತಗೊಳ್ಳುವ ಅಗತ್ಯವೇನಿಲ್ಲ. ಕೆಲವೊಮ್ಮೆ ಮನೆಯ ಹಿರಿಯರು ಕೂಡಾ ಸುಳ್ಳಿನ ಪಾಠ ಮಾಡುವುದು ಸೇರಿದಂತೆ, ತಾವು ತಾವೇ ಮಕ್ಕಳು ಸೇರಿ ಸುಳ್ಳನ್ನು ಅಭ್ಯಾಸ ಮಾಡುವುದರಿಂದ ಬಹಳ ಅಚ್ಚುಕಟ್ಟಾಗಿ, ಸರಳವಾಗಿ ಮತ್ತು ಸಂತೋಷವಾಗಿ ಮಕ್ಕಳು ಸುಳ್ಳನ್ನು ಕಲಿಯುತ್ತಾರೆ. ಮಗುವು ಎಳೆಯ ವಯಸ್ಸಿನಲ್ಲಿ ಆಟವಾಡುವಾಗ, ಅದರಲ್ಲೂ ಮನೆಯಾಟ ಆಡುವಾಗ ನೀರಿಲ್ಲದಿದ್ದರೂ ಸ್ನಾನ ಮಾಡುತ್ತದೆ, ಸಾಮಾನುಗಳಿಲ್ಲದಿದ್ದರೂ ಅಡುಗೆ ಮಾಡುತ್ತದೆ, ತಿನ್ನುವುದಕ್ಕೆ ಇಲ್ಲದಿದ್ದರೂ ತಿನ್ನಲು ಕೊಡುತ್ತದೆ, ಕುಡಿಯಲು ಏನಿರದಿದ್ದರೂ ಕಾಫಿ ಮಾಡಿಕೊಂಡು ಬಂದು ಕೊಟ್ಟು ಬಿಸಿ ಇದೆ ನಿಧಾನವಾಗಿ ಕುಡಿಯಿರಿ ಎನ್ನುತ್ತದೆ. ತಾನು ತಿನ್ನಲು ಕೊಟ್ಟಿದ್ದು ಚೆನ್ನಾಗಿದೆಯೇ ಎಂದು ಕೇಳುತ್ತದೆ. ಇವೆಲ್ಲಾ ಏನು? ಇಲ್ಲದಿರುವುದನ್ನು ಇದೆ ಎನ್ನುವುದು ಆಟವಾಗಿರುತ್ತದೆ. ಆದರೆ ಇಲ್ಲದಿರುವುದನ್ನು ಇದೆ ಎಂದು ಭಾವಿಸುವಷ್ಟು ತಲ್ಲೀನತೆ ಹೊಂದಿದ್ದರೆ ಅದು ಮುಂದೆ ಸಮಸ್ಯೆಗಳನ್ನು ಸೃಷ್ಟಿಸಬಹುದು. 

ಈ ವಿಚಾರವಾಗಿ ಬಹಳ ಸ್ಪಷ್ಟತೆಯನ್ನು ಹೊಂದಬೇಕು. ಇಲ್ಲದಿರುವುದನ್ನು ಇದೆ ಎಂದು ಹೇಳುವುದು ಆಟವೆಂದುಕೊಳ್ಳೋಣ. ಆದರೆ ಇಲ್ಲದಿರುವುದನ್ನು ಇದೆ ಎಂದು ಭಾವಿಸುವುದು ಮತ್ತು ಅದಕ್ಕೆ ತಕ್ಕಂತೆ ವರ್ತಿಸುವುದು ಎಂದರೆ ಅದು ಮನೋರೋಗಕ್ಕೆ ಸೂಚನೆ. 

ನಾವು ಸುಮ್ಮಸುಮ್ಮನೆ ಆಟಕ್ಕೆ ಅಂತ ಅಥವಾ ತಮಾಷೆಗೆ ಅಂತ ಎಷ್ಟೊಂದು ಬಗೆಯಲ್ಲಿ ಚೇಷ್ಟೆಗಳನ್ನು ಮಾಡಿರುತ್ತೇವೆ. ಆದರೆ ಅವುಗಳನ್ನೇ ಗಂಭೀರ ಸ್ವರೂಪದಲ್ಲಿ ಸುಳ್ಳು ಎಂದು ಹೇಳುತ್ತೇವೆ ಎಂಬುದನ್ನು ನಾವೇ ಗಮನಿಸಿರುವುದಿಲ್ಲ. ಅದೇ ರೀತಿ ಮಕ್ಕಳಿಗೆ ಸುಳ್ಳು ಹೇಳುವ ಗಂಭೀರ ಮಾದರಿಗಳು ಸಿಗುವುದೇ ದೊಡ್ಡವರಿಂದ. ಕೆಲವು ತಂದೆ ತಾಯಿಯರು ನಾವೆಂದಿಗೂ ಮಕ್ಕಳ ಎದುರಿಗೆ ಸುಳ್ಳೇ ಹೇಳಿಲ್ಲ, ನಾವು ಸುಳ್ಳು ಹೇಳುವುದರ ಮಾದರಿ ಕೊಟ್ಟಿಲ್ಲ ಎಂದು ಭಾವಿಸಲಾಗದು. ಮಗುವಿನ ಪರಿಸರದಲ್ಲಿ ಅದು ಕಾಣುವ ವ್ಯಕ್ತಿಗಳು ತಂದೆ ತಾಯಿ ಮಾತ್ರ ಅಲ್ಲವಲ್ಲ! ಜೊತೆಗೆ ಇನ್ನೂ ಕೆಲವೊಮ್ಮೆ, ನೇರವಾಗಿ ಅರ್ಥೈಸಿಕೊಳ್ಳಲಾಗದ ಮಗುವು ತನ್ನ ತಂದೆ ತಾಯಿಯ ವರ್ತನೆಯನ್ನು ಬೇರೆ ಏನೋ ಗ್ರಹಿಸಿದ್ದಿರಬಹುದು. ಅದನ್ನು ಸುಳ್ಳಿನ ಮಾದರಿಯಾಗಿ ಸ್ವೀಕರಿಸಿದ್ದಿರಬಹುದು. 

ಅದೇನೇ ಇರಲಿ, ಒಂದು ನಾವು ತಿಳಿಯಬೇಕಾಗಿರುವುದು ಎಂದರೆ, ಮಕ್ಕಳಿಗೆ ಇಲ್ಲದಿರುವುದನ್ನು ಇದೆ ಎನ್ನುವ, ಇರುವುದನ್ನು ಇಲ್ಲ ಎನ್ನುವ ಸುಳ್ಳಿನ ಬಾಲಪಾಠ ಆಗಿರುತ್ತದೆ ಎಂಬುದು. 



ಸುಮ್ಮಸುಮ್ಮನೆ 



ಮಕ್ಕಳಿಗೆ ಸುಳ್ಳಿನ ಬಾಲಪಾಠ ಬಹಳ ಹಿಂದೆಯೇ ಆಗಿರುವುದರಿಂದ ಮುಂದೆ ಅದೇ ಮಕ್ಕಳು ಸುಳ್ಳುಗಳನ್ನು ಹೇಳುವಾಗ ನಾವು ಅದನ್ನು ಅನಿರೀಕ್ಷಿತ ಎಂದು ಆಘಾತಗೊಳ್ಳುವ ಅಗತ್ಯವಿಲ್ಲ ಎಂಬುದನ್ನು ತಿಳಿಯಬೇಕು. ಜೊತೆಗೆ ಸುಳ್ಳು ಮತ್ತು ಸುಮ್ಮಸುಮ್ಮನೆ ಎಂಬುದರ ನಡುವಿನ ವ್ಯತ್ಯಾಸವನ್ನು ನಾವೂ ತಿಳಿಯಬೇಕು. ಹಾಗೆಯೇ ಮಕ್ಕಳು ಸುಳ್ಳು ಹೇಳುವುದನ್ನು ಕಂಡು ಹಿಡಿದಾಗ ಅವರ ವಯಸ್ಸಿಗೆ ಅನುಗುಣವಾಗಿ ತಿಳಿ ಹೇಳಬೇಕು ಮತ್ತು ಖಂಡಿಸಬೇಕು. ಎಲ್ಲಾ ಎಮ್ಮೆಗಳಿಗೂ ಒಂದೇ ಬರೆ ಎಳೆಯಬಾರದು. 

ಮಕ್ಕಳ ಸುಳ್ಳುಗಳ ವಿಷಯದಲ್ಲಿ ದೊಡ್ಡವರು ಹಲವು ರೀತಿಗಳಲ್ಲಿ ಸ್ಪಂದಿಸಬೇಕು. ಮೊದಲನೆಯದಾಗಿ ದೊಡ್ಡವರು ಯಾವುದು ಸುಳ್ಳು ಮತ್ತು ಯಾವುದು ನಿಜ ಎಂಬುದನ್ನು ಸ್ಪಷ್ಟಪಡಿಸುವ ಸಾಮರ್ಥ್ಯ ಹೊಂದಿರಬೇಕು. ಈ ಸಾಮರ್ಥ್ಯ ಬರಿಯ ವಾಚಿಕವಾಗಿ ಮಾತ್ರವಲ್ಲದೇ ತಮ್ಮ ವರ್ತನೆಗಳಲ್ಲಿಯೂ ಕೂಡಾ ತೋರುವಂತವರಾಗಿರಬೇಕು. 

ಸುಳ್ಳು ಎನ್ನುವುದು ಬರಿಯ ಹೇಳುವಿಕೆಯಲ್ಲಿ ಮಾತ್ರವಲ್ಲ ಇರುವುದು. ನಡೆದುಕೊಳ್ಳುವುದರಲ್ಲಿ, ವರ್ತಿಸುವುದರಲ್ಲಿ, ಭಾವನೆಗಳಲ್ಲಿ, ಶ್ರದ್ಧೆಗಳಲ್ಲಿ, ವಿಶ್ವಾಸಗಳಲ್ಲಿ, ಕೊಟ್ಟ ಮಾತುಗಳನ್ನು ಉಳಿಸಿಕೊಳ್ಳದಿರುವುದರಲ್ಲಿ; ಹೀಗೆ ಅನೇಕ ವಿಷಯಗಳಲ್ಲೂ ಕೂಡಾ ಸುಳ್ಳು ಎಂಬುದರ ಗುಣಗಳುಂಟು. ಹಾಗಾಗಿ ನಿಜದ ಪರಿಚಯ ಅಥವಾ ಸಾಚಾತನದ ಅನುಭವ ಬರಿಯ ಬಾಯಲ್ಲಿ ಹೇಳುವಂತಹ ವಿಷಯಗಳಲ್ಲಿ ಮಾತ್ರ ಎಂಬಂತೆ ಬಿಂಬಿಸಲಾಗದು. 

ಹಲವು ಬಾರಿ ವಿಷಯಗಳನ್ನು ತಿಳಿದುಕೊಳ್ಳುವುದರಲ್ಲಿಯೂ ಕೂಡಾ ಸುಳ್ಳುಗಳು ಪ್ರವೇಶಿಸಿಬಿಡುತ್ತವೆ. ಯಾವುದೇ ವಿಷಯವು ಸತ್ಯವೆಂದು ಮನವರಿಕೆಯಾಗುವವರೆಗೂ ಕಾಯದೇ ತಟ್ಟನೆ ಹರಡುವುದರಲ್ಲಿಯೂ ಕೂಡಾ ಸುಳ್ಳುಗಳ ಪ್ರಸರಣವಾಗುವುದರಿಂದ ಹಿರಿಯರಾದವರೂ ಮಕ್ಕಳ ಮುಂದೆ ಯಾವುದೇ ಕೇಳಿದ ವಿಷಯಗಳನ್ನು ಇತರರಿಗೆ ತಿಳಿಸುವಾಗ ಬಹಳ ಎಚ್ಚರಿಕೆಯನ್ನು ವಹಿಸಬೇಕು. 

ಹಸೀಸುಳ್ಳು, ಬಿಳೀಸುಳ್ಳು, ಸಿಹಿಸುಳ್ಳು; ಹೀಗೆ ಹಲವು ಸುಳ್ಳುಗಳಿವೆ. ಯಾವುದೇ ಸನ್ನಿವೇಶವನ್ನು ಇಬ್ಬರು ನೋಡಿದಾಗ ಅವರಲ್ಲಿ ಒಬ್ಬ ಅದನ್ನು ಬೇರೆಯಾಗಿಯೇ ಹೇಳಿದರೆ ಮತ್ತೊಬ್ಬನು ಅದನ್ನು ಹಸೀಸುಳ್ಳು ಎಂದು ಕರೆಯುತ್ತಾನೆ. ಏಕೆಂದರೆ ಅವನು ಸಾಕ್ಷೀಕರಿಸಿದ್ದನ್ನು ನೇರವಾಗಿಯೇ ನಿರಾಕರಿಸಿ ಮತ್ತೊಂದನ್ನು ಹೇಳುವುದು ಸುಳ್ಳಾಗುವುದು. 

ಮಕ್ಕಳು ಭಯಕ್ಕೆ, ಅಥವಾ ಆಸೆಗೆ ಮುಗ್ಧವಾಗಿ ಹೇಳುವ ಸುಳ್ಳುಗಳನ್ನು ಅಥವಾ ಸರಿಯಾಗಿ ಗ್ರಹಿಸದೇ ಹೇಳುವ ಸುಳ್ಳುಗಳನ್ನು ಇಂಗ್ಲೀಷಲ್ಲಿ ವ್ಹೈಟ್ ಲೈಸ್ ಅಥವಾ ಬಿಳಿಸುಳ್ಳು ಎನ್ನುತ್ತಾರೆ. ಇನ್ನು ಒಬ್ಬರ ಮನಸ್ಸಿಗೆ ನೋವಾಗಬಾರದು ಎಂದೋ ಅಥವಾ ಖುಷಿ ಪಡಿಸಲು ಎಂದೋ ಹೇಳುವಂತಹ ಸುಳ್ಳುಗಳನ್ನು ಸಿಹಿಸುಳ್ಳುಗಳೆಂದು ಕರೆಯುತ್ತಾರೆ. ಮಕ್ಕಳು ಈ ಎಲ್ಲಾ ಸುಳ್ಳುಗಳನ್ನು ಹೇಳುತ್ತಾರೆ. 


ಸುಳ್ಳಿಗೆ ಮದ್ದೇನು? 

ಮಕ್ಕಳ ಮನಃಶಾಸ್ತ್ರಜ್ಞರು ಅಭಿಪ್ರಾಯಪಡುವಂತೆ ಮಕ್ಕಳು ಸುಳ್ಳುಗಳನ್ನು ಹೇಳಿದಾಗ ವಯೋಮಾನಕ್ಕೆ ತಕ್ಕಂತೆ ಅವರಿಗೆ ಸ್ಪಂದಿಸಬೇಕು. 

ಸಾಮಾನ್ಯವಾಗಿ ಸಣ್ಣ ಮಕ್ಕಳು ಸುಳ್ಳು ಹೇಳುವುದೇ ಆತ್ಮರಕ್ಷಣೆಗೆ. ದೂರುಗಳಿಂದ, ಆರೋಪಗಳಿಂದ ತಪ್ಪಿಸಿಕೊಳ್ಳಲು ತಟ್ಟನೆ ಮಕ್ಕಳು ಹೇಳುವುದೇ 'ನಾನಲ್ಲ' ಎಂದು. ಗೋಡೆ ಅಥವಾ ಡೆಸ್ಕಿನ ಮೇಲೆ ಬರೆದವರು ಯಾರು ಎಂದರೆ ಅಥವಾ ಹೂದಾನಿಯನ್ನೋ, ಮತ್ತೊಂದನ್ನೋ ಮುರಿದಿರುವುದು ಯಾರು ಎಂದರೆ ಎಲ್ಲಾ ಮಕ್ಕಳೂ ಸಾಮಾನ್ಯವಾಗಿ ನಾನಲ್ಲ ಎನ್ನುತ್ತಾರೆ. 

ಪ್ರಾಮಾಣಿಕವಾಗಿರುವುದು ಎಷ್ಟು ಮುಖ್ಯ ಎಂಬುದನ್ನು ಮಕ್ಕಳಿಗೆ ಮನವರಿಕೆ ಮಾಡಿಕೊಡುವ ಹೊಣೆ ದೊಡ್ಡವರದು. ಮಿಗಿಲಾಗಿ ನಾನು ಎಂದು ಒಪ್ಪಿಕೊಂಡ ಮಕ್ಕಳಿಗೆ ಶಿಕ್ಷೆ ಕೊಡದೇ, ಬೈಯದೇ, ನಯವಾಗಿ ಹೇಳಿದರೆ ಆ ಮಗುವಿಗೆ ಸುಳ್ಳು ಹೇಳದಿರಲು ಪ್ರೋತ್ಸಾಹ ನೀಡಿದಂತಾಗುತ್ತದೆ. ಮಕ್ಕಳ ಎದುರೂ ಕೂಡಾ ದೊಡ್ಡವರು ತಮ್ಮ ಪ್ರಾಮಾಣಿಕತೆಯನ್ನು ಪ್ರದರ್ಶಿಸಬೇಕು. ತಾವೇ ಮಾದರಿಯಾಗಬೇಕು. ಯಾವುದೇ ಮಗುವು ತನ್ನ ತಪ್ಪನ್ನು ಒಪ್ಪಿಕೊಂಡಾಗ ಬೈಯುವುದೋ, ಹೊಡೆಯುವುದೋ ಖಂಡಿತ ಮಾಡಬಾರದು. ಅದು ಇತರ ಮಕ್ಕಳಿಗೂ ಪ್ರಾಮಾಣಿಕವಾಗಿ ಒಪ್ಪಿಕೊಳ್ಳುವ ಗುಣವನ್ನು ಪ್ರೋತ್ಸಾಹಿಸಿದಂತಾಗುತ್ತದೆ. 

ಮಕ್ಕಳಿಗೆ ಸುಳ್ಳು ಹೇಳುವುದರಿಂದ ಆಗುವ ಅನಾಹುತಗಳನ್ನು ಬಿಂಬಿಸುವ, ನಿಜ ಹೇಳುವುದರಿಂದ ಆಗುವ ಆನಂದವನ್ನು ಪ್ರದರ್ಶಿಸುವ, ಪರಸ್ಪರ ಸಂಬಂಧಗಳಲ್ಲಿ ಒಬ್ಬರಿಗೊಬ್ಬರು ಪ್ರಾಮಾಣಿಕವಾಗಿರುವುದು ಎಷ್ಟು ಮುಖ್ಯ ಎಂದು ತೋರುವಂತಹ ಕತೆಗಳನ್ನು ಹೇಳಬೇಕು. ಇವೆಲ್ಲವೂ ಕೂಡಾ ಮಗುವಿನ ಸುಳ್ಳುಪುರುಕುತನವನ್ನು ಕಡಿಮೆ ಮಾಡಲು ಅಥವಾ ಸುಳ್ಳುಗಳನ್ನು ರೂಢಿಸಿಕೊಳ್ಳದಿರಲು ಸಹಾಯಕವಾಗಿರುತ್ತದೆ. 


******************* 

No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...