¨ ಯೊಗೇಶ್ ಮಾಸ್ಟರ್
ಹುಸಿ ಪ್ರತಿಷ್ಟೆ ಮತ್ತು ನಿರಾಶೆಗಳು
ಜಂಭ
ಶಾಲೆಗೆ ಹೋಗುವ ಬಹುಪಾಲು ಮಕ್ಕಳಲ್ಲಿ ತಮ್ಮ ಮನೆಯ ಬಗ್ಗೆ ಹೇಳಿಕೊಳ್ಳುವಾಗ ಉತ್ಪ್ರೇಕ್ಷೆಯಿಂದಲೇ ಹೇಳಿಕೊಳ್ಳುತ್ತವೆ. ಉದಾಹರಣೆಗೆ, ವಾಸ್ತವದಲ್ಲಿ ಚಾಕೊಲೆಟ್ ಒಂದನ್ನು ತಿಂದಿದ್ದರೆ, ಐಸ್ ಕ್ರೀಂ, ಫಿಜ್ಡಾ, ಬರ್ಗರ್ ಮತ್ತೊಂದು ಮಗದೊಂದು ತಾವು ಇಷ್ಟಪಟ್ಟಿರುವುದನೆಲ್ಲಾ ತಿಂದೇ ಬಿಟ್ಟಿದ್ದೇನೆಂದು ಹೇಳಿಕೊಳ್ಳುವ ಜಂಭವೂ ಕೂಡಾ ಸುಳ್ಳಿನ ವರಸೆಗಳಲ್ಲಿ ಒಂದು. ಇದು ಅವರ ಆಸೆಯನ್ನು ಶಮನ ಮಾಡಿಕೊಳ್ಳುವ ಪರಿಯೋ, ನಿರಾಸೆಯನ್ನು ಶಮನ ಮಾಡಿಕೊಳ್ಳುವ ಪರಿಯೋ; ಒಟ್ಟಿನಲ್ಲಿ ಈ ಬಗೆಯವು ಹಲವಾರು ವಿಷಯಗಳನ್ನು ಒಳಗೊಂಡಿರುತ್ತವೆ.
ತಮಗಿಲ್ಲದ್ದು ಮತ್ತು ತಾವು ಇತರರಲ್ಲಿ ಕಾಣುವ ಶ್ರೀಮಂತಿಕೆಯ ತುಲನೆ, ಐಶಾರಾಮದ ಕಲ್ಪನೆ ಇತ್ಯಾದಿಗಳೂ ಕೂಡಾ ಹೀಗೆ ಜಂಭ ಕೊಚ್ಚಿಕೊಳ್ಳಲು ಸುಳ್ಳುಗಳು ಬಳಕೆಗೆ ಬರುತ್ತವೆ. ತಮ್ಮನ್ನು ತಾವು ಇತರರ ದೃಷ್ಟಿಯಲ್ಲಿ ಮೇಲ್ಮೆಯಲ್ಲಿ ಕಾಣಿಸಿಕೊಳ್ಳಲು ಮತ್ತು ತಾವು ಯಾರಿಗಿಂತ ಕಡಿಮೆ ಇಲ್ಲ ಎಂದು ತೋರಿಸಿಕೊಳ್ಳಲು ಕೂಡಾ ಈ ಸುಳ್ಳುಗಳು ಮಾಧ್ಯಮವೇ. ಇದು ಮಕ್ಕಳಲ್ಲಿ ಅತಿ ಹೆಚ್ಚು. ಆದರೆ, ಇದರ ಬಗ್ಗೆ ಅವರಿಗೆ ಅರಿವು ಕಣ್ತೆರೆಯದಿದ್ದರೆ ಇದೇ ಬುದ್ಧಿಯು ದೊಡ್ಡವರಾದ ಮೇಲೂ ಹಾಗೆಯೇ ಮುಂದುವರಿಯುತ್ತದೆ. ಎಷ್ಟೋ ಸಲ ದೊಡ್ಡವರು ತಮ್ಮ ಆರ್ಥಿಕ ಸೌಕರ್ಯಕ್ಕೆ, ಗರ್ವಕ್ಕೆ, ಅವರು ಗೊತ್ತಿದ್ದಾರೆ, ಇವರು ಗೊತ್ತಿದ್ದಾರೆ, ನಾನೊಬ್ಬ ದೊಡ್ಡ ಮನುಷ್ಯ ಎಂದು ತೋರಿಸಿಕೊಳ್ಳಲು ಬಡಾಯಿ ಕೊಚ್ಚುತ್ತಲೇ ಇರುವುದು ಕ್ರಮೇಣ ನಗೆಪಾಟಲಾಗುತ್ತದೆ. ಆದ್ದರಿಂದ ಈ ರೋಗಕ್ಕೆ ತುತ್ತಾಗದಂತೆ ಮಕ್ಕಳಲ್ಲಿ ಪ್ರಾರಂಭಿಕ ಹಂತಗಳಲ್ಲಿಯೇ ಗುರುತಿಸಬೇಕು ಮತ್ತು ಅದಕ್ಕೆ ಗದರುವುದೋ, ಬೈಯುವುದೋ ಮಾಡದೇ, ನಾವು ಇರುವ ಆರ್ಥಿಕ ಸ್ಥಿತಿಗತಿಗಳ ಬಗ್ಗೆ ಅಪಮಾನ ಪಡದಿರುವಂತೆ ತಮ್ಮನ್ನು ತಾವು ಸ್ವೀಕರಿಸುವಂತಹ ಮನೋಭಾವನೆಯನ್ನು ಬೆಳೆಸುವುದು ಅಗತ್ಯ. ಅದಕ್ಕೆ ತಿಳಿ ಹೇಳಬಹುದೇ ಹೊರತು ಇನ್ನೇನೂ ದಾರಿಯಿಲ್ಲ. ಜೊತೆಗೆ ಮಕ್ಕಳು ಶಾಲೆಯಲ್ಲಿ ಜಂಭ ಕೊಚ್ಚಿಕೊಳ್ಳುವುದು ಮನೆಯವರಿಗೆ ಗೊತ್ತಾಗುವುದೂ ಇಲ್ಲ. ಇವರು ವಿನಾಕಾರಣ ಜಂಭ ಕೊಚ್ಚಿಕೊಳ್ಳುವುದು ಕೆಲವೊಮ್ಮೆ ಸಹಪಾಠಿಗಳಿಂದ ಶಿಕ್ಷಕರನ್ನೂ ಕೂಡಾ ತಲುಪುವುದು. ಹಾಗೇನಾದಾರೂ ತಿಳಿದರೆ ಶಿಕ್ಷಕರೇ ಸಮಾಲೋಚನೆ ಮಾಡಬಹುದು ಅಥವಾ ಪಾಲಕರಿಗೆ ತಿಳಿಸುವ ರೀತಿಯಲ್ಲಿ ತಿಳಿಸಿ ಇದನ್ನು ಹಗುರಗೊಳಿಸಬಹುದು. ಏನೇ ಆಗಲಿ, ಸುಳ್ಳು ಹೇಳುವ ಮಗುವಿಗೆ ಶಿಕ್ಷೆ ಮತ್ತು ದಂಡನೆ ಸಲ್ಲದು ಬದಲಾಗಿ ಸಮಾಲೋಚನೆಯ ಮೂಲಕವೇ ಅದನ್ನು ಮನವರಿಕೆ ಮಾಡಿಸಬೇಕು.
ಓಲೈಕೆಗಾಗಿ
ಶಾಲೆಯಲ್ಲಿ ಕೆಲವು ಮಕ್ಕಳು, ಕೆಲವೊಮ್ಮೆ ಮನೆಗಳಲ್ಲಿಯೂ ಕೂಡಾ ಕೆಲವು ಹಿರಿಯರನ್ನು ಓಲೈಸಲು ಮಕ್ಕಳು ಸುಳ್ಳುಗಳನ್ನು ಹೇಳುವರು. ಆ ದೊಡ್ಡವರು ಸ್ವಲ್ಪ ಪ್ರಭಾವಿಗಳು ಎಂದು ತಿಳಿದರೆ ಅವರ ಮೆಚ್ಚುಗೆಗಳಿಸಲು ಅವರ ಇಷ್ಟ ಮತ್ತು ಇಷ್ಟವಿಲ್ಲದ ವಿಷಯಗಳ ಬಗ್ಗೆ ತಾವೂ ಇಷ್ಟಪಡುವಂತೆ ಅಥವಾ ಇಷ್ಟಪಡದಿರುವಂತೆ ನಟಿಸುವುದು ಮತ್ತು ಹೇಳುವುದು ಇತ್ಯಾದಿಗಳನ್ನು ಮಾಡುತ್ತಾರೆ. ಕೆಲವೊಮ್ಮೆ ಇದು ತೀರಾ ಅತಿಯಾಗಿ ಅವರಿಗೆ ಇಷ್ಟವಿಲ್ಲದ ವ್ಯಕ್ತಿಗಳ ಬಗ್ಗೆ, ಅವರು ಕೋಪಗೊಂಡಿರುವ ವ್ಯಕ್ತಿಗಳ ಬಗ್ಗೆ ಮಾತಾಡುವುದು, ಅವರ ವಿಷಯಗಳನ್ನು ಇತರರ ಬಳಿಗೆ ತರುವುದು, ಅವರ ಕುರಿತು ಕೆಟ್ಟದಾಗಿ ಏನೋ ಕಂಡವರಂತೆ ಹೇಳುವುದು ಇತ್ಯಾದಿಗಳನ್ನೂ ಕೂಡಾ ಮಾಡಬಹುದು. ಇದು ಬರಿಯ ಚಾಡಿ ಮಾತಲ್ಲ. ವ್ಯಕ್ತಿಯ ಚಾರಿತ್ರ್ಯವಧೆ ಮಾಡುವಂತಹ ಮಾತುಗಳನ್ನೂ ಕೂಡಾ ಆಡುತ್ತಾ ನಕಾರಾತ್ಮಕವಾದ ವ್ಯಕ್ತಿತ್ವವನ್ನೇ ರೂಪಿಸಿಕೊಳ್ಳಬಹುದು. ಓಲೈಕೆಗಾಗಿ ಸುಳ್ಳುಗಳನ್ನು ಹೇಳುವುದು ಚಾಡಿಗಿಂತಲೂ ಅಪಾಯಕಾರಿ.
ಗೆಲುವಿನ ಹಂಬಲ
ಸ್ಪರ್ಧೆಯ ಹಣಾಹಣಿಯಲ್ಲಿ ಅಥವಾ ಗೆಲುವು ತಮಗೇ ಸಿಗಬೇಕು ಎನ್ನುವ ಧಾವಂತದಲ್ಲಿಯೂ ಕೂಡಾ ಮಕ್ಕಳು ಸಾಕಷ್ಟು ಬಾರಿ ಸುಳ್ಳುಗಳನ್ನು ಹೇಳುತ್ತಿರುತ್ತಾರೆ. ಪ್ರಶಂಸೆಯಿಂದ ಸಿಗುವ ಖುಷಿ, ಬಹುಮಾನದ ಲಾಭ; ಇತ್ಯಾದಿಗಳ ಆಸೆಗಳೂ ಕೂಡಾ ಸುಳ್ಳು ಹೇಳಲು ಪ್ರೇರೇಪಿಸುತ್ತವೆ. ಕೆಲವು ಮಕ್ಕಳು ಕಡಿಮೆ ಅಂಕ ಬಂದಾಗ ತಮಗೆ ಜ್ವರ ಬಂದಿತ್ತು, ಊರಿಗೆ ಹೋಗಿದ್ದೆವು ಅಥವಾ ಇನ್ನೇನೋ ಹೇಳುತ್ತಾರೆ. ಕಡಿಮೆ ಅಂಕ ಬರುವುದು, ಆಟದಲ್ಲಿ ಸೋಲುವುದು, ಸ್ಪರ್ಧೆಗಳಲ್ಲಿ ಗೆಲ್ಲದೇ ಇರುವುದು, ಬಹುಮಾನ ಬರದೇ ಇರುವುದು; ಇತ್ಯಾದಿಗಳು ಅಪಮಾನಕರವಲ್ಲ ಎಂಬ ವಾತಾವರಣ ಇದ್ದರೆ, ಕ್ರೀಡಾಮನೋಭಾವವನ್ನು ಬೆಳೆಸಿದರೆ ಈ ಬಗೆಯ ಸುಳ್ಳುಗಳನ್ನು ಹೇಳುವುದಿಲ್ಲ. ಗೆಲುವಿನ ವಿಜೃಂಭಣೆ ಯಾವಾಗಲೂ ಸಾಮಾನ್ಯ ಕಣ್ಣುಗಳಿಗೆ ಆಕರ್ಷಕವಾಗಿಯೇ ಇರುತ್ತದೆ. ಅದನ್ನು ದಕ್ಕಿಸಿಕೊಳ್ಳಲು ಬೇಕಾದ ಸುಳ್ಳುಗಳನ್ನು ಹೇಳುತ್ತಾ ಗಲಾಟೆ ಮಾಡುವುದು ಅಥವಾ ಜಗಳವಾಡುವುದು ಒಂದಾದರೆ, ಅದು ದಕ್ಕದೇ ಇರುವುದಕ್ಕೆ ಸುಳ್ಳು ಕಾರಣಗಳನ್ನು ಹೇಳುವುದು ಇನ್ನೊಂದು.
ಗೆಲುವಿನ ಹಂಬಲದ ಕಾರಣದ ಸುಳ್ಳುಗಳು ಯಾವ ಮಟ್ಟಕ್ಕೆ ಹೋಗುತ್ತವೆ ಎಂದರೆ, ಗೆದ್ದವರು ಮೋಸ ಮಾಡಿ ಗೆದ್ದರು ಎನ್ನುವುದು, ತೀರ್ಪುಗಾರರು ಪಕ್ಷಪಾತ ಮಾಡಿದರು ಎನ್ನುವುದು, ಒಟ್ಟಾರೆ ಗೆದ್ದವರನ್ನು ಅವರ ಗೆಲುವಿಗೆ ಪ್ರಶಂಸಿಸದೇ ಇರುವುದು, ತನ್ನ ದೋಷಗಳ ಪರಾಮರ್ಶನೆ ಮಾಡಿಕೊಳ್ಳದೇ ಇರುವುದು ಇದರ ಫಲಿತಾಂಶವಾಗುತ್ತದೆ.
ನಿಜ ಹೇಳಬೇಕೆಂದರೆ, ತನ್ನನ್ನು ತಾನು ಇರುವಂತೆಯೇ ಸ್ವೀಕರಿಸಲಾಗದಿರುವ ಹತಾಶೆ ಮತ್ತು ಮಹದಾಶೆಗಳು ಈಡೇರದ ನಿರಾಶೆಗಳು ಇತರರನ್ನು ಸುಳ್ಳು ಆರೋಪಗಳಿಗೆ ಗುರಿಯಾಗಿಸುವಂತ ಪ್ರಯತ್ನಗಳು ಮಕ್ಕಳ ಪ್ರಪಂಚದಲ್ಲೇ ಪ್ರಾರಂಭವಾಗಿರುತ್ತದೆ. ಅದನ್ನು ಅಲ್ಲಿಂದಲ್ಲಿಯೇ ಸರಿಯಾಗಿಸದಿದ್ದಲ್ಲಿ ಖಂಡಿತವಾಗಿ ದೊಡ್ಡವರಾದಾಗಲೂ ಅದು ಬಹಳ ದೊಡ್ಡದಾಗಿಯೇ ಬೆಳೆದು ನಿಂತಿರುತ್ತದೆ. ದೊಡ್ಡ ಪ್ರಮಾಣದಲ್ಲಿ ತನ್ನ ಪ್ರಭಾವವನ್ನು ತೋರಿಸುತ್ತಿರುತ್ತದೆ.
ಮಕ್ಕಳ ವಾತಾವರಣದಲ್ಲಿ ಹುಸಿ ಪ್ರತಿಷ್ಟೆ ಮತ್ತು ಡಾಂಬಾಚಾರಗಳು ಪ್ರಭಾವಿಸುವಂತಹ ಉದಾಹರಣೆಗಳು ಇಲ್ಲದಿದ್ದರೆ ಮಕ್ಕಳಿಗೂ ಅದು ರೂಢಿಯಾಗುವುದಿಲ್ಲ. ಜೊತೆಗೆ ಸ್ಪರ್ಧೆಯಲ್ಲಿ ಭಾಗವಹಿಸುವ ಯಾವುದೇ ಮಗುವಿಗೆ ಗೆಲ್ಲಲೇ ಬೇಕು, ನೀನು ಗೆಲ್ಲಲೇ ಬೇಕು ಎಂಬ ಒತ್ತಡವನ್ನು ಹೇರಲೇಬಾರದು. ಅದು ವ್ಯಕ್ತಿತ್ವವೇ ಕಮರಿ ಹೋಗುವಷ್ಟು ನಕಾರಾತ್ಮಕ ಪರಿಣಾಮಗಳನ್ನು ಬೀರುತ್ತದೆ.
ವರ್ತನೆಗಳ ವಿಶ್ಲೇಷಣೆಗಳಲ್ಲಿ ಸುಳ್ಳುಗಳನ್ನು ಗಮನಿಸುವಂತೆ ಮನೋವೈಜ್ಞಾನಿಕವಾಗಿಯೂ ಈ ಸುಳ್ಳುಗಳಿಗೆ ಕಾರಣಗಳಿರುತ್ತವೆ. ಅವುಗಳೇನೆಂದು ಮುಂದೆ ನೋಡೋಣ.
*******************
No comments:
Post a Comment