ಸಹೋ ಡೇವಿಡ್, ಬೆಂಗಳೂರು
ಮನುಷ್ಯನ ಆಂತರಿಕ ಸ್ತರದಲ್ಲಿ ನಡೆಯುವ ಮನೋವಿಶ್ಲೇಷಣೆಯ ಕ್ರಿಯೆಗಳನ್ನು ವ್ಯೆಜ್ಞಾನಿಕವಾಗಿ ಚರ್ಚಿಸಿ ಅದಕ್ಕೊಂದು ಕಥಾರೂಪನೀಡಿ, ವಿಭಿನ್ನರೀತಿಯ ಕಾದಂಬರಿಗಳನ್ನು ರಚಿಸಿ ಸಾಹಿತ್ಯಲೋಕದಲ್ಲಿ ವಿಶಿಷ್ಟವಾದುದನ್ನು ಸಾಧಿಸಿ ತೋರಿಸಿದ ವ್ಯಕ್ತಿತ್ರಿವೇಣಿ.

ತ್ರಿವೇಣಿಯವರ ಹುಟ್ಟು ಹೆಸರು ಭಾಗೀರಥಿ. ಶಾಲೆಯಲ್ಲಿ ಅವರನ್ನು ಕರೆದದ್ದು ಅನಸೂಯ ಎಂದು. ಇವರು ಹುಟ್ಟಿದ್ದು ಮೈಸೂರಿನಲ್ಲಿ(1928 ಸೆಪ್ಟಂಬರ್ 1) ಇವರ ತಂದೆ ಬಿ.ಎಂ. ಕೃಷ್ಣಸ್ವಾಮಿಯವರು ಮಂಡ್ಯದಲ್ಲಿ ಪ್ರಸಿದ್ಧ ವಕೀಲರು, ತಾಯಿ ತಂಗಮ್ಮ, ಇವರು ಸಾಹಿತ್ಯಿಕ ಕೌಟುಂಬಿಕ ವರ್ಗಕ್ಕೆ ಸೇರಿದವರು. ಶ್ರೇಷ್ಠ ಕತೆಗಾರ ಮತ್ತು ನಟರಾಗಿದ್ದಂತಹ ಕೆ.ಸಿ ಅಶ್ವಥ್ ರವರು ತ್ರಿವೇಣಿಯವರ ಭಾವ. ಅದುದರಿಂದ ಇವರ ಕುಟುಂಬವು ಸಾಹಿತ್ಯ ಲೋಕಕ್ಕೆ ಅಪಾರ ಕೊಡುಗೆಯನ್ನು ನೀಡಿದೆ ಎಂದರೆ ತಪ್ಪಾಗಲಾರದು.
ಇವರು 1947ರಲ್ಲಿ ಮ್ಯೆಸೂರಿನ ಮಹಾರಾಜ ಕಾಲೇಜಿನಿಂದ ಮನಃಶಾಸ್ತ್ರದಲ್ಲಿ ಚಿನ್ನದ ಪದಕದೊಂದಿಗೆ ಬಿ.ಎ ಪದವಿಯನ್ನು ಪಡೆದರು. ಮದುವೆಯ ನಂತರ ಅನಸೂಯ ಶಂಕರ್ ಸಣ್ಣ ಕಥೆಗಳ ಮೂಲಕ ಕನ್ನಡ ಸಾಹಿತ್ಯರಂಗವನ್ನು ಪ್ರವೇಶಿಸಿ ಕಾದಂಬರಿಕಾರ್ತಿಯಾಗಿ ತ್ರಿವೇಣಿ ಎಂಬ ಕಾವ್ಯನಾಮದಿಂದ ಪ್ರಖ್ಯಾತರಾದರು. ಒಟ್ಟಾರೆ ಅವರು ಬರೆದಂತಹ ಕಾದಂಬರಿಗಳು 21 ಆದರೆ ಅವರು ಬರೆದಂತಹ ಕಥೆಗಳು 49.
ಎರಡು ಮನಸ್ಸು, ಸಮಸ್ಯೆಯ ಮಗು, ಹೆಂಡತಿಯ ಹೆಸರು ಇವು ತ್ರಿವೇಣಿಯವರ ಕಥಾಸಂಕಲನಗಳಾಗಿವೆ. ಇವುಗಳಲ್ಲಿ ಒಟ್ಟು 49 ಕಥೆಗಳಿವೆ. ಮಾನಸಿಕ, ಕೌಟುಂಬಿಕ ಹಾಗೂ ಸಾಮಾಜಿಕ ಸಮಸ್ಯೆಗಳನ್ನು ಕುರಿತು ಚಿತ್ರಿಸುವ ಈ ಕಥೆಗಳು ಓದುಗರ ಗಮನ ಸೆಳೆಯುತ್ತವೆ. ಇವರು ಅನೇಕ ಕಾದಂಬರಿಗಳಲ್ಲಿ ನಾನು ಓದಿದಂತಹ 5 ಕಾದಂಬರಿಗಳಾದ ಸೋತು ಗೆದ್ದವಳು, ಅಪಸ್ವರ, ಅಪಜಯ ಮತ್ತು ಬೆಕ್ಕಿನ ಕಣ್ಣು ಎಲ್ಲರ ಮನ ಮುಟ್ಟುವಂತಿವೆ.
1960ರಲ್ಲಿ ಇವರ ಅವಳ ಮನೆ ಕಾದಂಬರಿ ರಾಜ್ಯ ಪ್ರಶಸ್ತಿಯನ್ನು ಪಡೆದರೆ 1962ರಲ್ಲಿ ಸಮಸ್ಯೆಯ ಮಗುವಿಗೆ ದೇವರಾಜ ಬಹದ್ದೂರ್ ಪ್ರಶಸ್ತಿ ಪಡೆದಿರುವುದು ಹೆಮ್ಮೆಯ ವಿಷಯ. ಇವರ ಅನೇಕ ಕವನಗಳು ಚಲನಚಿತ್ರಗಳಾಗಿ ಬಹಳ ಹೆಸರುವಾಸಿಯಾಗಿದೆ. ಬೆಕ್ಕಿನ ಕಣ್ಣು, ಹೊವು ಹಣ್ಣು, ಶರಪಂಜರ, ಇದಕ್ಕೆ ಸಾಕ್ಷಿಯಾಗಿದೆ. ಅಷ್ಟೆ ಅಲ್ಲದೆ ಶರಪಂಜರ ಚಲನಚಿತ್ರವನ್ನು ’ದಿ ಮ್ಯಾಡ್ ವುಮನ್’ ಎಂಬ ಹೆಸರಿನಲ್ಲಿ ಆಂಗ್ಲ ಭಾಷೆಗೆ ಅನುವಾದಿಸಿದ್ದಾರೆ.
ಇನ್ನೂ ಅತಿಮುಖ್ಯವಾಗಿ ಇವರು ಯಾವ ಸಂದರ್ಭದಲ್ಲಿ ಈ ಕಾದಂಬರಿಗಳನ್ನು ಬರೆದರು ಎಂಬುವುದನ್ನು ನಾವು ನೋಡಿದಾಗ, ತ್ರಿವೇಣಿಯರು ಭಾರತೀಯ ಸಮಾಜದ ಸ್ಥಿತ್ಯಂತರದ ಕಾಲದಲ್ಲಿ ಅಥವಾ ಪರಿವರ್ತನ ಸಂಧಿಕಾಲದಲ್ಲಿ ರೂಪುಗೊಂಡ ಲೇಖಕಿ.
ಭಾರತೀಯ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಸುಧಾರಣಾವಾದಿ ಚಳುವಳಿಗಳ ಫಲವಾಗಿ ಸ್ತ್ರೀಯರ ಕುರಿತಾಗಿ ಹೊಸ ಜಾಗೃತಿಯೊಂದು ಮೂಡಿದ್ದು ಇತಿಹಾಸವಾಗಿದೆ. ಸ್ತ್ರೀಯರ ಶಿಕ್ಷಣ, ವಿಧವೆಯರ ವಿವಾಹ ಮುಂತಾದವುಗಳ ಅಗತ್ಯವನ್ನು ಅನೇಕ ಚಿಂತಕರು ಪ್ರಬಲವಾಗಿ ಪ್ರತಿಪಾದಿಸಿದರು. ಅಂತೆಯೇ ಸ್ತ್ರೀಯರಿಗೆ ಸಂಬಂಧಿಸಿದ ಸಮಸ್ಯೆ, ಶೋಷಣೆಗಳ, ಅನಾವರಣ ನಡೆಸಿದರು ಮತ್ತುಇದರ ಕುರಿತು ಅನೇಕ ಲೇಖಕರು ಅರಿವನ್ನು ಮೂಡಿಸಿದರು.
ಇಂಥ ಸಾಮಾಜಿಕ ಹೊರ ಚಲನೆಗಳಾಚೆ ಹೆಣ್ಣಿನ ಒಳ ಚಲನೆಯನ್ನು ಸೂಕ್ತವಾಗಿ ಗ್ರಹಿಸುವ ಹೊಸ ನೋಟವೊಂದರ ಅಗತ್ಯವಿತ್ತು. ಇಂಥ ಕಾಲದ ಅಗತ್ಯಕ್ಕೆ ಉತ್ತರವಾಗಿ ರೂಪುಗೊಂಡವರು ತ್ರಿವೇಣಿಯವರು. ಹೆಣ್ಣಿನ ಅಂತರಂಗದ ಆಳಕ್ಕೆ ಪ್ರಯಾಣ ಬೆಳೆಸಿದ ತ್ರಿವೇಣಿ ಹೆಣ್ತನದ ಸಿಕ್ಕುಗಳನ್ನು ಬಿಡಿಸಲು ಮಾಡಿದ ಪ್ರಯತ್ನಕ್ಕಾಗಿ ಅವರಿಗೆ ಜನರ ಅಪಾರ ಅಭಿನಂದನೆಗಳು ದೊರಕಿತು.
ತ್ರಿವೇಣಿಯವರು ತಮ್ಮ ಎಲ್ಲಾ ಕಾದಂಬರಿಗಳನ್ನು ಮಹಿಳೆಯರ ಸಬಲೀಕರಣಕ್ಕೆ ಮೀಸಲಾಗಿರಿಸಿದ್ದಾರೆ. ಒಬ್ಬ ಮನೋತಜ್ಞರಾಗಿ ಮಹಿಳೆಯ ಮನಸ್ಸನ್ನು ಅರ್ಥಮಾಡಿಕೊಂಡು ಅವರ ಸಮಸೈಗಳನ್ನು ತಮ್ಮ ಕಾದಂಬರಿಗಳಲ್ಲಿ ಬಹಳ ಸರಳವಾಗಿ ತಿಳಿಸುತ್ತಾರೆ. ಪುರುಷರ ದಬ್ಬಾಳಿಕೆಗೆ ಮಣಿದು ಅವರ ಆಸೆ-ಆಕಾಂಕ್ಷೆಗಳನ್ನು ಬದಿಗೊತ್ತಿ ಗಂಡನ ಕೈಗೊಂಬೆಗಳಾಗಿದ್ದತಂಹ ಎಷ್ಟೋ ಮಹಿಳೆಯರ ಜೀವನಕ್ಕೆ ತ್ರಿವೇಣಿಯವರ ಕಾದಂಬರಿಗಳು ಕನ್ನಡಿ ಹಿಡಿದಂತಿವೆ.
ತ್ರಿವೇಣಿಯವರ ಮೊದಲ ಪ್ರಕಟವಾದಂತಹ ಕಾದಂಬರಿ ಹೂವು-ಹಣ್ಣು ವಿಧವೆಯಾಗಿ ಬಡತನಕ್ಕೆ ಸಿಕ್ಕಿದ ಅನಾಥೆಯೊಬ್ಬಳು, ತನ್ನ ವಂಶದ ಕುಡಿಯನ್ನು ಸಾಕಲು ನಡೆಸುವ ಹೋರಾಟದ ಬದುಕು, ಆ ಹಾದಿಯಲ್ಲಿ ಆಕೆ ಅನುಭವಿಸುವ ಶೋಷಣೆ ಮತ್ತು ವಿಧವೆಯನ್ನು ಸಮಾಜ ನೋಡುವ ದೃಷ್ಟಿಯನ್ನು ಈ ಕಾದಂಬರಿ ಚಿತ್ರಿಸುತ್ತದೆ.
ಶರಪಂಜರ ಕಾದಂಬರಿಯಲ್ಲಿ ಕಥಾನಾಯಕಿ ಕಾವೇರಿ ಮತ್ತು ಸತೀಶ್ ಒಬ್ಬರನ್ನೊಬ್ಬರು ಪ್ರೀತಿಸಿ ತಮ್ಮತಂದೆ-ತಾಯಿರನ್ನು ಒಪ್ಪಿಸಿ ಅವರ ಆಶೀರ್ವಾದದಿಂದ ಮದುವೆಯಾಗಿ ಪರಿಪೂರ್ಣ ದಂಪತಿಗಳಾಗಿ ಜೀವಿಸುತ್ತಿದ್ದಾರೆ. ಆದರೆ ಮೂರನೇ ಹೆರಿಗೆಯ ಸಮಯದಲ್ಲಿ ಕಾವೇರಿಯು ನರದೌರ್ಬಲ್ಯಕ್ಕೆ ತುತ್ತಾಗುತ್ತಾಳೆ. ಆ ಸಮಯದಲ್ಲಿ ಆಕೆ ತಾನು ಮದುವೆ ಪೂರ್ವಸಂಬಂಧ ಹೊಂದಿದ್ದೆ ಎಂಬ ಹುಚ್ಚು ಕಲ್ಪನೆಯನ್ನುತನ್ನಗಂಡನ ಬಳಿ ಹೇಳುತ್ತಾಳೆ. ಗಂಡ ಇದೇ ನಿಜವೆಂದು ಭಾವಿಸಿ ತನ್ನತಪ್ಪುಕಲ್ಪನೆಯನ್ನು ಬೆಳೆಸಿಕೊಳ್ಳುತ್ತಾನೆ. ನಂತರ ಆಕೆ ಮಾನಸಿಕವಾಗಿ ಸರಿಹೋದರೂ ಸಹ ಗಂಡ ಆಕೆಯನ್ನು ಪ್ರೀತಿಸುವುದಿಲ್ಲ. ಸಮಾಜವು ಸಹ ಆಕೆಗೆ ಹುಚ್ಚಿಯ ಪಟ್ಟ ಕಟ್ಟುತ್ತದೆ. ಕೊನೆಗೆ ಕಾವೇರಿ ತನ್ನ ಗಂಡ ಅವನ ಸಹೋದ್ಯೋಗಿಯೊಂದಿಗೆ ಅನೈತಿಕ ಸಂಬಂಧವನ್ನು ಹೊಂದಿದ್ದಾನೆ ಎಂಬುವುದನ್ನು ತಿಳಿದು ಆಕೆ ಮರಳಿ ಹುಚ್ಚಿಯಾಗುತ್ತಾಳೆ. ಇದು ತ್ರಿವೇಣಿಯವರ ಅದ್ಭುತ ಕಾದಂಬರಿ. ಇದು ದ.ರಾ. ಬೇಂದ್ರೆಯವರ ಸಾಹಿತ್ಯ ಮತ್ತು ಪುಟ್ಟಣ್ಣ ಕಣಗಾಲ್ ರವರ ನಿರ್ದೆಶನದಿಂದ ಚಲನಚಿತ್ರವಾಗಿ ರಾಷ್ಟ್ರ ಪ್ರಶಸ್ತಿಯನ್ನು ಗಳಿಸಿರುವುದು ಬಹಳ ಹೆಮ್ಮೆಯ ವಿಷಯ.
ತ್ರಿವೇಣಿಯವರ ಮತ್ತೊಂದು ಕಾದಂಬರಿ ಸೋತು ಗೆದ್ದವಳು ಕಾದಂಬರಿಯಲ್ಲಿ ನಾಯಕಿಯ ಗಂಡನು ಉದ್ಯೋಗದ ಮೇರೆಗೆ ವಿದೇಶದಲ್ಲಿದ್ದಾಗ, ಹೆಂಡತಿಯು ತನ್ನಗಂಡನನ್ನು ನೆನೆಸುತ್ತಾ ವಿರಹ ಬೇಗೆಯನ್ನು ಅನುಭವಿಸುತ್ತಿರುತ್ತಾಳೆ. ಆ ಸಮಯದಲ್ಲಿ ಆಕೆ ಹಿಟ್ಟು ಹಳಸಿತ್ತು, ನಾಯಿ ಹಸಿದಿತ್ತು ಎಂಬಂತೆ ಆಕೆ ಮತ್ತೊಬ್ಬ ಗಂಡಿನ ಕಾಮಕ್ಕೆ ಬಲಿಯಾಗುತ್ತಾಳೆ, ಆದರೆ ಅವಳು ಇದಕ್ಕಾಗಿ ಪರಿತಪಿಸುತ್ತಾಳೆ. ತನ್ನ ಗಂಡ ವಿದೇಶದಿಂದ ಮರಳಿ ಬಂದ ಬಳಿಕ ತನ್ನತಪ್ಪನ್ನು ಒಪ್ಪಿಕೊಳ್ಳುತ್ತಾಳೆ. ವಿದೇಶದಲ್ಲಿದ್ದಾಗ ಗಂಡನು ಸಹ ಇದೇ ತಪ್ಪನ್ನು ಮಾಡಿರುತ್ತಾನೆ. ಹೀಗಿರುವಾಗ ಗಂಡಿಗೆ ಒಂದು ನಿಯಮ, ಹೆಣ್ಣಿಗೆ ಒಂದು ನಿಯಮ ಎನ್ನುವುದು ಸರಿಯಲ್ಲ ಎನ್ನುವ ತಿಳಿವಳಿಕೆಯಿಂದ, ನಾಯಕನು ನಾಯಕಿಯ ತಪ್ಪನ್ನು ಕ್ಷಮಿಸಿ ಬಿಡುತ್ತಾನೆ! ಈ ಕಾದಂಬರಿಯಲ್ಲಿ ತ್ರಿವೇಣಿಯವರು ಹೆಣ್ಣಿನ ಕಾಮದ ಬಯಕೆಯನ್ನು ನಿಸ್ಸಂಕೋಚವಾಗಿ ಎತ್ತಿ ಹಿಡಿಯುತ್ತಾರೆ ವಿನಃ ವಿವಾಹಬಾಹಿರ ಕಾಮವನ್ನು ಅವರು ಎಂದೂ ಪುರಸ್ಕರಿಸಲಿಲ್ಲ.
ತ್ರಿವೇಣಿಯವರು ತಮ್ಮಜೀವನವನ್ನು ಆಧರಿಸಿ ಅತಿಥಿ ಬರಲೇಯಿಲ್ಲ ಎಂಬ ಸಣ್ಣಕಥೆಯನ್ನು ಬರೆದಿದ್ದಾರೆ. ಜೀವನದಲ್ಲಿ ಹೆಣ್ಣಿಗೆ ಇರಬೇಕಾದ ಸುಖ, ಸಂಪತ್ತು, ಭೋಗ ಭಾಗ್ಯಗಳು ತ್ರಿವೇಣಿಯವರಿಗೆ ಹೇರಳವಾಗಿದ್ದರೂ. ತಾಯಿಯಾಗಲಿಲ್ಲ, ತಾವು ಸೇರಿದ ಮನೆಗೆ ಬೆಳಕಾಗಿ ಒಂದು ಮಗುವನ್ನುಕೊಡಲಿಲ್ಲ ಎಂಬ ಕೊರಗು ಅವರನ್ನು ಕಾಡುತ್ತಿತ್ತು. ದ್ಯೆಹಿಕವಾಗಿ ದುರ್ಬಲವಾಗಿದ್ದ ಕಾರಣ ಅವರು ಮೂರು ಸಲ ಗರ್ಭಿಣಿಯಾದಾಗಲೂ ನಿರೀಕ್ಷಿಸಿದ ಅತಿಥಿ ಬರದೆಯಿದ್ದ ಕಾರಣ ಅವರು ಬಹಳ ನಿರಾಶೆ, ದುಖ:, ಹೆರಿಗೆ ನೋವು, ಮೂಕ ಸಂಕಟವನ್ನುಅತಿಥಿ ಬರಲೇಯಿಲ್ಲ ಎಂಬ ಸಣ್ಣಕಥೆಯಲ್ಲಿ ಮನ ಕರಗುವ ರೂಪದಲ್ಲಿ ವರ್ಣಿಸಿದ್ದಾರೆ.
ಇಂದು ಸಮಾಜದಲ್ಲಿ ಅನೇಕ ಮಹಿಳಾ ಅಭಿವೃದ್ಧಿ ಸಂಘಗಳು ಹುಟ್ಟಿದ್ದರೂ ಸಹ ಮಹಿಳೆಯರ ಮೇಲಿನ ಪುರುಷರ ದೌರ್ಜನ್ಯ ಇಂದಿಗೂ ಕೊನೆಗೊಂಡಿಲ್ಲ. ಮಹಿಳೆಯರು ಇಂದಿಗೂ ಅನೇಕ ಮಾನಸಿಕ ತೊಂದರೆಗಳನ್ನು ಅನುಭವಿಸುತ್ತಿದ್ದಾರೆ ಎಂಬುವುದಕ್ಕೆ ಇಂದಿನ ವಿವಾಹ ವಿಚ್ಛೇದನಗಳೇ ಸಾಕ್ಷಿಯಾಗಿವೆ. ತ್ರಿವೇಣಿಯವರ ಕಾದಂಬರಿಗಳಲ್ಲಿ ಮೂಡಿಬರುವ ಅಂಶ ಮನುಷ್ಯನಿಗೆ ಒಳ್ಳೆ ಮನೆ-ಬಟ್ಟೆ ಊಟವಿದ್ದರೆ ಸಾಲದು ಜೊತೆಗೆ ಪ್ರೀತಿಯು ಸಹ ಬಹಳ ಅಗತ್ಯವೆಂದು ಆಗ ಮಾತ್ರ ಮಹಿಳೆಯರು ಒಳ್ಳೆಯ ಕೌಟುಂಬಿಕ ಜೀವನವನ್ನು ನಡೆಸಲು ಸಾಧ್ಯವಾಗುತ್ತದೆ ಎಂದು ಜನತೆಗೆ ತಿಳಿಸಿಕೂಡುತ್ತದೆ. ಒಟ್ಟಾರೆ ತ್ರಿವೇಣಿಯವರ ಕಾದಂಬರಿಗಳು ಸಾಮಾಜಿಕ ಮೌಲ್ಯಗಳ ಕುರಿತು ಅರಿವನ್ನು ಮೂಡಿಸುವುದರ ಜೊತೆಗೆ ಮಹಿಳೆಯರನ್ನು ಕೇವಲ ವಸ್ತುಗಳೆಂದು ಭಾವಿಸದೆ, ಮಾನವೀಯ ದೃಷ್ಟಿಯಿಂದ ಕಾಣಬೇಕೆಂಬ ಕರೆಯನ್ನು ನೀಡುತ್ತದೆ.
**********
No comments:
Post a Comment