· ಜಾಜಿ, ಎಂ. ದಾಸಾಪುರ
ಕರ್ನಾಟಕ ಎಂದರೆ ತಕ್ಷಣ ಜ್ಞಾಪಕಕ್ಕೆ ಬರುವುದು ವೈವಿಧ್ಯತೆ. ಈ ವೈವಿಧ್ಯತೆ ನಮ್ಮ ರಾಜ್ಯದ ಉದ್ದಗಲಕ್ಕೂ ಹರಡಿಕೊಂಡಿದೆ. ಸಂಸ್ಕೃತಿಯ ಮೂಲಕ ಬದಕನ್ನು ಕಟ್ಟಿಕೊಂಡು ಅದರ ಜೊತೆ ಬಾಳನ್ನು ಬಾಳುತ್ತಾ ನಾವು ಸುಸಂಸ್ಕೃತರಾಗಲು ಸಾಧ್ಯ ಎಂಬ ಮಾತು ನಮ್ಮ ಕರುನಾಡಿಗೆ ಹೇಳಿಮಾಡಿಸಿದಂತಿದೆ. ನಮಗೆಲ್ಲಾ ತಿಳಿದಿರುವ ಹಾಗೆ ನಮ್ಮ ನಾಡಿನಲ್ಲಿ ಎಷ್ಟೊಂದು ಆಚಾರ ವಿಚಾರಗಳು ನಮ್ಮ ತನವನ್ನು ಎತ್ತಿ ಹಿಡಿಯುತ್ತವೆ ಅಲ್ಲವೇ? ಕಾವೇರಿಯಿಂದ ಗೋದಾವರಿಯವರೆಗೆ ನಾನಾ ರೀತಿಯ ವೈವಿಧ್ಯಮಯ ಸಂಸ್ಕೃತಿಗಳು ನಮ್ಮ ನಾಡಿನ ಕೀರ್ತಿಯನ್ನು ಮುಗಿಲೆತ್ತರಕ್ಕೆ ಹಾರಿಸಿವೆ ಎಂದರೆ ತಪ್ಪಾಗಲಾರದು. ಪ್ರತಿಯೊಂದು ಸಂಸ್ಕೃತಿಯು ತನ್ನದೇ ಆದ ಆಚಾರ ವಿಚಾರಗಳನ್ನು ಹೊಂದಿದ್ದು ಅವುಗಳ ಮೂಲಕ ಬದುಕಿನ ಚಿತ್ರಣವನ್ನು ತೋರಿಸುತ್ತಿವೆ. ಒಟ್ಟಿನಲ್ಲಿ ನಮ್ಮ ಕರುನಾಡ ಸಂಸ್ಕೃತಿಯು ಇಲ್ಲಿ ವಾಸಿಸುವ ಜನರ ನಾಡಿಮಿಡಿತಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡಿವೆ.
ಸಂಸ್ಕೃತಿಯ ಮೂಲಕ ನಾವು ನಮ್ಮ ತನವನ್ನು ತೋರಿಸುತ್ತೇವೆ. ಕಲೆ, ಸಾಹಿತ್ಯ, ಸಂಗೀತ, ನೃತ್ಯ, ನಾಟಕ ಹಾಡುಗಾರಿಕೆ ಹಾಗೂ ಸಹಬಾಳ್ವೆಯಲ್ಲಿ ನಮ್ಮದೇ ಆದ ವಿಶಿಷ್ಟತೆಯನ್ನು ಪ್ರದರ್ಶಿಸುತ್ತೇವೆ. ಇಲ್ಲಿ ವಿವಿಧ ಸಂಸ್ಕೃತಿಗಳು ವೈವಿಧ್ಯಮಯವಾಗಿದ್ದು ಏಕತೆಯ ಪ್ರತೀಕವಾಗಿ ನಮ್ಮ ನಾಡಿನಲ್ಲಿ ಅವು ಸೌಹಾರ್ದತೆಗೆ ಸಹಕಾರಿಯಾಗಿವೆ. ಸಂಸ್ಕೃತಿಯು ಮಾನವನ ಹಿರಿಮೆಯನ್ನು ಎತ್ತಿ ತೋರಿಸುತ್ತವೆ. ನಮ್ಮ ನಾಡು ಹಲವಾರು ಸಂಸ್ಕೃತಿಗಳ ಸಮುದ್ರವಾಗಿದ್ದು, ಸರ್ವ ಧರ್ಮಗಳು ಸಹಿಷ್ಣುತೆಯಿಂದ ಬಾಳಲು ಕರೆಯನ್ನಿತ್ತಿವೆ. ನಮ್ಮ ನಾಡ ಜಾನಪದ ಸಂಸ್ಕೃತಿಯು ಇಲ್ಲಿಯ ಜನರ ಜೀವನದ ಭಾಗವಾಗಿದ್ದು ಅದರಲ್ಲಿನ ಶ್ರೀಮಂತಿಕೆಯು ನಮ್ಮ ಕರುನಾಡ ಹಿರಿಮೆಯನ್ನು ಪದಗಳಲ್ಲಿ ಬಲು ಸುಂದರವಾಗಿ ವರ್ಣಿಸುತ್ತವೆ. ದಕ್ಷಿಣದಲ್ಲಿ ಕಾಣುವ ತುಳುನಾಡ ಸಂಸ್ಕೃತಿ, ಕೊಂಕಣಿಗರ ಸಂಸ್ಕೃತಿ ಅಂತೆಯೇ ಕೊಡವ ಸಂಸ್ಕೃತಿಗಳು ತಮ್ಮದೇ ಆದ ಹಿರಿಮೆಯನ್ನು ಹೊಂದಿದ್ದು ತಮ್ಮ ಆಚರಣೆಗಳ ಮೂಲಕ ತಮ್ಮ ಇರುವಿಕೆಯನ್ನು ತೋರಿಸುತ್ತಿವೆ. ಮೈಸೂರು, ಹಾಸನಗಳಲ್ಲಿ ಕಂಡುಬರುವ ಸಾಂಸ್ಕೃತಿಕ ಜಾನಪದ ಲೋಕ ಒಂದೆಡೆಯಾದರೆ, ಉತ್ತರ ಕರ್ನಾಟಕದಲ್ಲಿ ಕಂಡುಬರುವ ಕರಗದ ಉತ್ಸವ, ಜಾತ್ರಾ ಮಹೋತ್ಸವಗಳು ಅವರ ಜೀವನ ಶೈಲಿ ಎಲ್ಲವೂ ಕೂಡ ನಮ್ಮ ಕಣ್ಮನಗಳನ್ನು ಸೆಳೆಯುತ್ತಿವೆ. ಇದಲ್ಲದೆ ನಮ್ಮ ಬೆಂಗಳೂರೆಂಬ ಮಾಯಾನಗರಿ ಪ್ರತಿದಿನವೂ ಬದಲಾವಣೆಯ ಹಾದಿಯಲ್ಲಿ ಸಾಗುತ್ತಾ, ತನ್ನೆಡೆಗೆ ಬರುವವರನ್ನೆಲ್ಲಾ ಆತ್ಮೀಯತೆಯಿಂದ ಸ್ವಾಗತಿಸಿ ನಾವು ಸಹೃದಯರು ಎಂಬ ಭ್ರಾತೃತ್ವದ ಸಂಸ್ಕೃತಿಯನ್ನು ಸರ್ವರಲ್ಲೂ ಬಿತ್ತುವಲ್ಲಿ ಯಶಸ್ವಿಯಾಗಿದೆ.
ಸರ್ವ ಧರ್ಮಗಳು ಸಮನಾಗಿ ಆಧ್ಯಾತ್ಮಿಕತೆಯೆಡೆಗೆ ಜನರನ್ನು ಸಾಗಿಸುತ್ತಾ, ತಮ್ಮ ವೈಚಾರಿಕತೆಯನ್ನು ತಮ್ಮದೇ ಆದ ಶೈಲಿಯಲ್ಲಿ ನಮಗೆ ಉಣಬಡಿಸುತ್ತಿವೆ. ಹೀಗೆ ನಮ್ಮ ನಾಡು ಸರ್ವ ಜನಾಂಗದ ಶಾಂತಿಯ ತೋಟವಾಗಿ, ರಸಿಕರ ಕಣ್ಮನಗಳನ್ನು ಸೆಳೆಯುವ ನೋಟ ಎಂದು ನಮ್ಮ ರಾಷ್ರಕವಿ ಕುವೆಂಪುರವರು ನಮ್ಮ ನಾಡನ್ನು ಹೊಗಳಿದ್ದಾರೆ. ಹೀಗೆ ಬರೆಯುವ ಯುವ ಕವಿಗಳಿಗೆ ನಮ್ಮ ನಾಡು ಸಂಸ್ಕೃತಿಯ ಸ್ಫೂರ್ತಿಗೆ ನೆಲೆಯಾಗಿ ಪರಿಣಮಿಸಿದೆ. ನಮ್ಮ ನಾಡು ಇತಿಹಾಸದಲ್ಲಿ ಶಾಂತಿಗೆ, ಶೌರ್ಯಕ್ಕೆ ಹಾಗೂ ಸಮರಕ್ಕೂ ಹೆಸರುವಾಸಿ. ಆದ್ದರಿಂದ ಎಲ್ಲಾ ಸಂಸ್ಕೃತಿಗಳಲ್ಲಿ ನಾವು ಈ ಮೇಲಿನ ಅಂಶಗಳನ್ನು ನೋಡಬಹುದಾಗಿದೆ. ಆದ್ದರಿಂದ ಸಂಸ್ಕೃತಿಯನ್ನು ಬಿಟ್ಟು ಬಾಳುವುದು ನಮ್ಮ ಹೆತ್ತ ತಾಯಿಯನ್ನು ಮರೆತು ಬಾಳಿದಂತೆ. ಈ ನಮ್ಮ ನಾಡ ಸಂಸ್ಕೃತಿಗಳು ತಮ್ಮದೇ ಆದ ಅಸ್ತಿತ್ವವನ್ನು ಹೊಂದಿದ್ದು, ನಾವೆಲ್ಲರೂ ವಿವಧತೆಯಲ್ಲಿ ಏಕತೆಯನ್ನು ಸಾರುವೆವು ಎಂಬ ಧ್ಯೇಯವನ್ನು ಹೊತ್ತು ತಮ್ಮ ದಿನನಿತ್ಯದ ಜೀವನವನ್ನು ಸಾಗಿಸುತ್ತಿವೆ. ಹೀಗೆ ನಮ್ಮ ಕರುನಾಡು ಸಹೃದಯಿಗರ ಗೂಡಾಗಿದ್ದು ತನ್ನ ಸೂರಿನಡಿಯಲ್ಲಿರುವ ಎಲ್ಲಾ ಸಂಸ್ಕೃತಿಗಳನ್ನು ಪೋಷಿಸಿಕೊಂಡು ಮತ್ತು ಅವುಗಳ ಜನತೆಯನ್ನು ಮುನ್ನಡೆಸಿಕೊಂಡು ಪ್ರತಿದಿನವೂ ಅವುಗಳನ್ನು ಹೊಸದನ್ನಾಗಿಸಿ, ಸಂಸ್ಕೃತಿಯ ಮೂಲಕ ಸುಸಂಸ್ಕೃತರಾಗಲು ನಮಗೆ ಕರೆಯನ್ನೀಯುತ್ತಿದೆ. ಆದ್ದರಿಂದ ನಮ್ಮಲ್ಲಿರುವ ಎಲ್ಲಾ ಸಂಸ್ಕೃತಿಗಳನ್ನು ಗೌರವಿಸಿ ಅವುಗಳನ್ನು ಪೋಷಿಸಿ, ಅವುಗಳು ಮುಂದಿನ ತಲೆಮಾರಗಳಿಗೂ ದೊರಕುವಂತೆ ಮಾಡಬೇಕಾದ ಕಾರ್ಯಕ್ಕೆ ನಾವೆಲ್ಲರೂ ಕೈಜೋಡಿಸೋಣ ಈ ನಿಟ್ಟಿನಲ್ಲಿ ನಮ್ಮ ಕರುನಾಡು ಸಂಸ್ಕೃತಿಗಳ ತವರೂರಾಗಿಯೇ ಇರಲಿ ಎಂದು ಆಶಿಸುತ್ತಾ ನಿಮ್ಮೆಲ್ಲರಿಗೂ ಕರ್ನಾಟಕ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳನ್ನು ಕೋರುತ್ತಿದ್ದೇನೆ. ಸಿರಿಗನ್ನಡಂ ಗೆಲ್ಗೆ, ಕ್ರಿಸ್ತ ನುಡಿ ಬಾಳ್ಗೆ...
*******************
No comments:
Post a Comment