Saturday, 21 December 2019

ಸುಖ ದು:ಖ


ಖಲೀಲ್ ಗಿಬ್ರಾನ್ನರ ಸುಖ ದು:ಖ ಬಗೆಗಿನ ಚಿಂತನೆಗಳನ್ನು ಪ್ರಭುಶಂಕರವರು ಅರ್ಥಪೂರ್ಣವಾಗಿ ಭಾವಾನುವಾದಿಸಿದ್ದಾರೆ. ಖಲೀಲ್ ಗಿಬ್ರಾನ್ರವರ ಸಾಲುಗಳನ್ನು ಓದುತ್ತಾ ಮೌನಕ್ಕೆ ಜಾರಿಕೊಳ್ಳೋಣ… 

ಒಂದು ಧ್ವನಿ ತನಗೆ ರೆಕ್ಕೆಗಳನ್ನು ನೀಡದ ತುಟಿ ನಾಲಿಗೆಗಳನ್ನು ತನ್ನೊಂದಿಗೆ ಒಯ್ಯಲಾರದು. ಏಕಾಂಗಿಯಾಗಿ ಅದು ಅಕಾಶವನ್ನು ಅರಸಬೇಕು. ಹಾಗೆಯೇ ಹದ್ದು, ತನ್ನ ಗೂಡನ್ನು ಒಯ್ಯದೆ ಏಕಾಂಗಿಯಾಗಿ ಸೂರ್ಯನನ್ನು ದಾಟಿ ಹಾರಬೇಕು. ನಿನ್ನ ಸುಖ,ಮುಖವಾಡ ಸರಿದ ನಿನ್ನ ದುಃಖವೇ. ಯಾವ ಬಾವಿಯಿಂದ ನಗೆ ಬುಗ್ಗೆಯುಕ್ಕುತ್ತಿದೆಯೋ ಅದೇ ಅನೇಕ ಸಲ ನಿನ್ನ ಕಂಬನಿಗಳಿಂದ ತುಂಬಿತ್ತು. ಬೇರೆ ಹೇಗಾಗಲು ತಾನೆ ಸಾಧ್ಯ? ನಿನ್ನ ಚೇತನದ ಆಳವನ್ನು ದುಃಖಕೊರೆಕೊರೆದಷ್ಟೂ ಸುಖವನ್ನು ಅದು ತುಂಬಿಕೊಳ್ಳಬಲ್ಲುದು. ನಿನ್ನ ಮಧುವನ್ನು ತಳೆದಿರುವ ಬಟ್ಟಲೇ ಅಲ್ಲವೆ ಕುಂಬಾರನ ಒಲೆಯಲ್ಲಿ ಬೆಂದದ್ದು? ನಿನ್ನ ಆತ್ಮವನ್ನು ಸಾಂತ್ವನಗೊಳುಸುತ್ತಿರುವ ಕೊಳಲನ್ನೇ ಅಲ್ಲವೆ ಚಾಕು ಕೊರೆದು ಕೊರೆದದ್ದು? ನೀವು ಸಂತೋಷಭರಿತರಾಗಿರುವಾಗ ನಿಮ್ಮ ಹೃದಯದಾಳವನ್ನು ನೋಡಿ; ಆಗ ನಿಮಗೆ ತಿಳಿಯುತ್ತದೆ, ಯಾವುದು ನಿಮಗೆ ದುಃಖವನ್ನು ನೀಡಿತ್ತೋ ಅದೇ ಆನಂದವನ್ನು ನೀಡುತ್ತಿದೆ. ನೀವು ದುಃಖಿತರಾಗಿರುವಾಗ, ಮತ್ತೆ ನೀವು ಹೃದಯವನ್ನು ಹುಡುಕಿ ನೋಡಿ ಇಂದು ನಿಮ್ಮ ದುಃಖದ ಕಾರಣವಾಗಿರುವುದು ಒಮ್ಮೆ ನಿಮ್ಮ ಆನಂದದ ಕಾರಣವೂ ಆಗಿತ್ತು. ನಿಮ್ಮಲ್ಲಿ ಕೆಲವರು ಹೇಳುತ್ತೀರಿ ದುಃಖಕ್ಕಿಂತ ಸುಖ ಹೆಚ್ಚು ಮತ್ತೆ ಕೆಲವರು ಹೇಳುತ್ತೀರಿ ಇಲ್ಲ ದುಃಖವೇ ಹೆಚ್ಚಿನದು’. ಆದರೆ ನಾನು ಹೇಳುತ್ತೇನೆ ಅವೆರಡನ್ನೂ ಬೇರ್ಪಡಿಸಲಾಗದು. ಅವು ಒಟ್ಟಾಗಿಯೇ ಬರುತ್ತವೆ. ನೆನಪಿಡಿ. ಒಂದು ನಿಮ್ಮೊಡನೆ ಊಟಕ್ಕೆ ಕುಳಿತಿರುವಾಗ ಮತ್ತೊಂದು ನಿಮ್ಮ ಹಾಸಿಗೆಯ ಮೇಲೆ ನಿದ್ರಿಸುತ್ತಿರುತ್ತದೆ…. 

· ಅನು 

No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...