ಸಿ ಮರಿಜೋಸೆಫ್

ಕನ್ನಡದ ವೈಚಾರಿಕ ನೆಲೆಯಲ್ಲಿ ಸಂಸ್ಕಾರ ಎಂಬ ಪದವು ಅಂತ್ಯಸಂಸ್ಕಾರ ಎಂಬ ಕೊನೆಯ ಕ್ರಿಯೆಯನ್ನು ಸೂಚಿಸುತ್ತದೆ. ಆದ್ದರಿಂದ ಕ್ರೈಸ್ತರಲ್ಲದವರು ಸಂಸ್ಕಾರ ಎಂಬುದನ್ನು ಅಮಂಗಳ ಪದವಾಗಿ ಭಾವಿಸುವುದುಂಟು. ಆದರೆ ಸಂಸ್ಕಾರವೆಂಬುದು ಬದುಕನ್ನು ರೂಪಿಸುವ ಅತ್ಯುತ್ತಮ ಸಲಕರಣೆ, ನಮ್ಮ ಜೀವನವು ಹಲವಾರು ಸಲ ಪವಿತ್ರ ಸಂಸ್ಕಾರಗಳಿಗೆ ತೆರೆದುಕೊಳ್ಳುವುದರಿಂದ ನಮಗದು ಅಮಂಗಳವಲ್ಲ. ಅವೆಲ್ಲವೂ ದೇವರೇ ಸ್ವತಃ ಕೈಯಾರೆ ಸುರಿಸುವ ಪವಿತ್ರತಮ ವರದಾನಗಳು.
ದೀಕ್ಷಾಸ್ನಾನ, ದೃಢೀಕರಣ, ಪರಮಪ್ರಸಾದ, ಪ್ರಾಯಶ್ಚಿತ್ತ, ರೋಗಿಗೆ ಲೇಪನ, ಮದುವೆ ಮತ್ತು ಯಾಜಕದೀಕ್ಷೆ ಎಂಬ ಏಳು ಸಂಸ್ಕಾರಗಳು ಸ್ವತಃ ಯೇಸುಸ್ವಾಮಿಯೇ ಸ್ಥಾಪಿಸಿ ಅವನ್ನು ಅನುಗಾಲವೂ ಅನುಸರಿಸಲು ನಮಗೆ ಕರೆ ನೀಡಿದ್ದಾರೆ. ಈ ಏಳೂ ಸಂಸ್ಕಾರಗಳು ದೇವರ ವರದಾನವಾಗಿದ್ದು ರಕ್ಷಣೆಯ ಹಾದಿಯಲ್ಲಿ ಸದಾ ನಮ್ಮ ಬೆನ್ನಿಗಿದ್ದು ಭರವಸೆಯ ಹಾದಿಯಲ್ಲಿ ಮುನ್ನಡೆಸುತ್ತವೆ. ಆದ್ದರಿಂದ ಸಪ್ತಸಂಸ್ಕಾರಗಳನ್ನು ದೇವರ ಅನುಪಮ ಕೊಡುಗೆಯೆಂದೇ ಭಾವಿಸುವುದು ಸೂಕ್ತ. ಇನ್ನೂ ಖಚಿತವಾಗಿ ಹೇಳಬೇಕೆಂದರೆ ಸಂಸ್ಕಾರಗಳ ಮೂಲಕ ನಾವು ಪವಿತ್ರವಾಗುತ್ತೇವೆ. ದೇವರ ಸೃಷ್ಟಿಗಳಾಗಿ ನಾವು ಹುಟ್ಟಿನಿಂದಲೇ ಪವಿತ್ರರು ಎಂಬುದು ನಿಜ. ಆದರೆ ಈ ಸಂಸ್ಕಾರಗಳು ಪಾವಿತ್ರ‍್ಯದ ನವೀಕರಣವಾಗಿದ್ದು ನಮ್ಮನ್ನು ಸದಾ ತಮ್ಮ ಪ್ರೀತಿ ಮತ್ತು ಕರುಣಾರ್ದ್ರ ನೋಟದಿಂದ ಕಾಣುವ ದೇವರು ಸಂಸ್ಕಾರಗಳನ್ನು ಅನುಗ್ರಹಿಸುವ ನೆವದಲ್ಲಿ ನಮ್ಮ ಮೈದಡವಿ ನಮ್ಮಲ್ಲಿ ಪ್ರವೇಶಿಸಿ ನಮ್ಮನ್ನು ಅವರ ಪವಿತ್ರಹಾದಿಗೆ ಕರವಿಡಿದು ಮುನ್ನಡೆಸುತ್ತಾರೆ ಎಂಬುದೇ ಅತ್ಯಂತ ಸೂಕ್ತ. ಹಾಗಾಗಿ ಸಂಸ್ಕಾರಗಳು ಪರಮಪೂಜ್ಯ ಹಾಗೂ ಪರಮಪವಿತ್ರ.
ಈ ವರದಾನಗಳು ದೈವಸಾಕ್ಷಾತ್ಕಾರದ ಪ್ರತಿರೂಪವಾಗಿದ್ದು ನಮ್ಮ ಕಣ್ಣಿಗೆ ಕಾಣುವುದರಿಂದ ನಾವು ಅವನ್ನು ಸಂತೋಷ ಉಲ್ಲಾಸಗಳಿಂದ ಸಂಭ್ರಮಿಸುತ್ತೇವೆ. ಪರಾತ್ಪರ ದೇವರನ್ನು ಪರಮಭಕ್ತಿಯಿಂದ ಆರಾಧಿಸುತ್ತೇವೆ. ಇಸ್ರೇಲ್ ನಾಡಿನಾದ್ಯಂತ ಯೇಸುಕ್ರಿಸ್ತ ಎಂಬ ಹೆಸರಿನಲ್ಲಿ ನರರೂಪದಲ್ಲಿ ನಡೆದಾಡಿದ ದೇವರು ತಮ್ಮ ಹನ್ನೆರಡು ಪರಮಾಪ್ತ ಶಿಷ್ಯ (ಪ್ರೇಷಿತ = ಕಳುಹಿಸಲ್ಪಟ್ಟವರು) ರೊಂದಿಗೆ ಪ್ರತಿನಿತ್ಯ ಪ್ರತಿಕ್ಷಣ ಆಪ್ತನಾಗಿ ಒಡನಾಡಿ ಅವರಿಗೆ ಗುರುರೂಪದಲ್ಲಿ ಬೋಧನೆಗಳನ್ನು ನೀಡಿ, ಸಾಮತಿ, ಚಿಕಿತ್ಸೆ, ಶುಶ್ರೂಷೆ, ಸ್ಪರ್ಶ, ಲೇಪನಗಳ ಮೂಲಕ ಆ ದಿವ್ಯ ಸಂಸ್ಕಾರಗಳನ್ನು ಅನುಷ್ಠಾನಗೊಳಿಸಿದ್ದನ್ನು ಶುಭಸಂದೇಶಗಳಲ್ಲಿ ಹಾಗೂ ಪ್ರೇಷಿತರ ಪತ್ರಗಳಲ್ಲಿ ಕಾಣುತ್ತೇವೆ.
ನಮಗೆಲ್ಲರಿಗೂ ಅತ್ಯಂತ ಪವಿತ್ರವೆನಿಸಿದ ಧರ್ಮಗ್ರಂಥ ಪವಿತ್ರ ಬೈಬಲಿನಲ್ಲಿ ಈ ಸಂಸ್ಕಾರಗಳ ಉಲ್ಲೇಖ ಎಲ್ಲಿದೆಯೆಂಬುದನ್ನು ಒಮ್ಮೆ ಗಮನಿಸಿದರೆ ಅವುಗಳ ಬಗ್ಗೆ ಗೌರವ ಇಮ್ಮಡಿಯಾಗುವುದು ಕಂಡಿತ. ಯೇಸುಸ್ವಾಮಿ ಸ್ಥಾಪಿಸಿದ ಏಳು ಪವಿತ್ರ ಸಂಸ್ಕಾರಗಳು ಈ ರೀತಿ ಇವೆ:
1. ದೀಕ್ಷಾಸ್ನಾನ
2. ದೃಢೀಕರಣ
3. ಪ್ರಾಯಶ್ಚಿತ್ತ
4. ಪರಮಪ್ರಸಾದ
5. ಮರಣಾವಸ್ಥೆಯ ಲೇಪನ
6. ಮದುವೆ ಮತ್ತು
7. ಗುರುದೀಕ್ಷೆ
ಕ್ರಿಸ್ತೀಯ ಜೀವನ ನಡೆಸಲು ಮೊದಲ ನಾಲ್ಕು ಸಂಸ್ಕಾರಗಳನ್ನು ಹೊಂದುವುದು ಕಡ್ಡಾಯ. ಉಳಿದ ಮೂರು ಸಂಸ್ಕಾರಗಳು ಐಚ್ಛಿಕ. ಈಗ ಈ ಪವಿತ್ರ ಸಂಸ್ಕಾರಗಳನ್ನು ಒಂದೊಂದಾಗಿ ಅವಲೋಕಿಸೋಣ. ನಾನಿಲ್ಲಿ ಮೇಲಿನ ಪಟ್ಟಿಯ ಅನುಕ್ರಮದ ಪ್ರಕಾರ ಹೋಗದೆ ವ್ಯಕ್ತಿಯೊಬ್ಬನು ತನ್ನ ವಯೋಮಾನದ ಪ್ರಕಾರ ಸ್ವೀಕರಿಸುವ ಸಂಸ್ಕಾರಗಳ ಕ್ರಮದಲ್ಲಿ ವಿವರಿಸಿದ್ದೇನೆ. ಕೊನೆಯಲ್ಲಿ ಮದುವೆ ಅಥವಾ ಗುರುದೀಕ್ಷೆ ಎಂಬುದಾಗಿ ಇದೆ. ಕಥೋಲಿಕ ಕ್ರೈಸ್ತರಲ್ಲಿ ಗುರುಗಳು ಹಾಗೂ ಕನ್ಯಾಸ್ತ್ರೀಯರು ಮದುವೆಯಾಗುವಂತಿಲ್ಲ. ಅದೇ ರೀತಿ ಮದುವೆಯಾದವರು ಗುರು ಅಥವಾ ಸಂನ್ಯಾಸಿನಿ ಆಗಲೂ ಸಾಧ್ಯವಿಲ್ಲ.
1. ದೀಕ್ಷಾಸ್ನಾನ
ದೀಕ್ಷಾಸ್ನಾನ ಎಂಬುದು ಸಂಸ್ಕಾರಗಳ ಬಾಗಿಲು. ಇದಿಲ್ಲದೆ ಇನ್ನಿತರ ಸಂಸ್ಕಾರಗಳನ್ನು ಪಡೆಯುವುದು ಸಾಧ್ಯವಿಲ್ಲ. ಜ್ಞಾನಸ್ನಾನ, ಸ್ನಾನದೀಕ್ಷೆ, ಜ್ಞಾನದೀಕ್ಷೆ, ಧರ್ಮದೀಕ್ಷೆ ಎಂದೆಲ್ಲ ಕರೆಸಿಕೊಂಡಿರುವ ಈ ಸಂಸ್ಕಾರವು ನಮಗೆ ಧರ್ಮಸಭೆಯ ಸದಸ್ಯತ್ವವನ್ನು ಕರುಣಿಸುವುದರ ಜೊತೆಗೆ ಯೇಸುಕ್ರಿಸ್ತನೊಂದಿಗೆ ಅವಿನಾಭಾವ ಸಂಬಂಧವನ್ನು ಜೋಡಿಸುತ್ತದೆ. ಯೇಸುಸ್ವಾಮಿಯೂ ಸ್ವತಃ ದೀಕ್ಷಾಸ್ನಾನ ಮಾಡಿಸಿಕೊಂಡರೆಂದು ಪವಿತ್ರ ಬೈಬಲಿನಲ್ಲಿ ಉಲ್ಲೇಖವಿದೆ. ಆದರೆ ಯೇಸು ತಮ್ಮ ಪಾಪಗಳ ಪರಿಹಾರಕ್ಕಾಗಿ ದೀಕ್ಷಾಸ್ನಾನ ಮಾಡಿಸಿಕೊಳ್ಳಲಿಲ್ಲ. ಆದರೆ ಅವರು ದೇವಕುವರ ಎಂಬುದು ಎಲ್ಲ ಜನರಿಗೆ ಪ್ರಕಟವಾಗಬೇಕಿದ್ದ ಕಾರಣ ಅವರು ದೀಕ್ಷಾಸ್ನಾನಕ್ಕೆ ಒಳಗಾದರು. (ನೋಡಿ. ಮಾರ್ಕ 1:9).
ಮಗು ಇನ್ನೂ ಶೈಶವಾವಸ್ಥೆಯಲ್ಲಿರುವಾಗ ತಂದೆ ತಾಯಿಯರು ದೇವಾಲಯಕ್ಕೆ ಮಗುವನ್ನೆತ್ತಿಕೊಂಡು ಬಂದು ಗುರುಗಳ ಮುಂದೆ ಮಗುವಿನ ಪರವಾಗಿ ವಾಗ್ದಾನ ಸ್ವೀಕರಿಸುವುದರ ಮೂಲಕ ಆ ಮಗುವನ್ನು ಧರ್ಮಸಭೆಯ ಸದಸ್ಯನನ್ನಾಗಿಸುವುದು ಸಾಮಾನ್ಯವಾಗಿ ನಡೆದುಬಂದಿರುವ ಪದ್ಧತಿ. ಗುರುಗಳು ದೇವಾಲಯದಲ್ಲಿ ವಿಶೇಷವಾಗಿ ಸ್ಥಾಪಿಸಲಾಗಿರುವ ಜ್ಞಾನಸ್ನಾನ ತೊಟ್ಟಿಯಲ್ಲಿ ಮಗುವಿನ ತಲೆಯ ಮೇಲೆ ನೀರು ಸುರಿದು ಅದರ ಪಾಪನಿವಾರಣೆಗಾಗಿ ದೇವರಲ್ಲಿ ಬೇಡುತ್ತಾರೆ. “ಕ್ರಿಸ್ತಯೇಸುವಿನಲ್ಲಿ ಒಂದಾಗುವುದಕ್ಕೆ ದೀಕ್ಷಾಸ್ನಾನ ಮಾಡಿಸಿಕೊಂಡಿರುವ ನಾವೆಲ್ಲರೂ ಕ್ರಿಸ್ತಂಬರರಾಗಿದ್ದೇವೆ” ಎಂದು ಗಲಾತ್ಯರಿಗೆ ಬರೆದ ಪತ್ರ (3:27) ದಲ್ಲಿ ಹೇಳಿರುವ ಪ್ರಕಾರ ಶುಭ್ರವಾದ ಬಿಳಿವಸ್ತ್ರವನ್ನು ಮಗುವಿನ ಮೇಲೆ ಹೊದಿಸುವ ಮೂಲಕ ಆ ಮಗುವನ್ನು ಯೇಸುಕ್ರಿಸ್ತನ ಜೊತೆಗಾರನನ್ನಾಗಿ ಮಾಡುತ್ತಾರೆ. ಮೇಣದ ಬತ್ತಿ ಹಚ್ಚಿ ಆ ಬೆಳಕನ್ನು ಕ್ರಿಸ್ತನಿಗೆ ಹೋಲಿಸುತ್ತಾ ಲೋಕಕ್ಕೆ ಬೆಳಕಾಗಿ ಬಾಳು ಎಂದು ಆ ಮಗುವನ್ನು ಹರಸುತ್ತಾರೆ. ಈ ಸಂದರ್ಭದಲ್ಲಿ ಮಗುವಿನ ತಾಯ್ತಂದೆಯರೂ ಪೋಷಕ ತಾಯ್ತಂದೆಯರೂ ಮಗುವಿನ ಪರವಾಗಿ ದೀಕ್ಷಾಸ್ನಾನದ ವಾಗ್ದಾನ ಮಾಡುತ್ತಾರೆ. ಈ ಕಾರ್ಯಕ್ರಮಕ್ಕೆ ಬಂಧುಮಿತ್ರರನ್ನೆಲ್ಲ ಆಹ್ವಾನಿಸಿ ಸಂಭ್ರಮಿಸುವುದು ಎಲ್ಲೆಡೆ ಪ್ರಚಲಿತವಾಗಿದೆ. ಮಗು ಬೆಳೆದು ಬುದ್ದಿ ಬಂದ ಮೇಲೆ ಕಾಲ ಕಾಲಕ್ಕೆ ಪಾಸ್ಕಹಬ್ಬ ಮತ್ತು ಇತರ ಸಂದರ್ಭಗಳಲ್ಲಿ ನಾವೆಲ್ಲರೂ ಪದೇ ಪದೇ ದೀಕ್ಷಾಸ್ನಾನದ ವಾಗ್ದಾನಗಳನ್ನು ನವೀಕರಿಸುವಾಗ ತಾನೂ ಕೂಡ ದೀಕ್ಷಾಸ್ನಾನದ ಮಹತ್ವವನ್ನು ಅರಿಯುತ್ತದೆಂಬುದು ವಿದಿತ. ದೀಕ್ಷಾಸ್ನಾನದ ಮೂಲಕ ನಾವು,
1. ಜನ್ಮಪಾಪ ನಿವಾರಣೆ ಹೊಂದುತ್ತೇವೆ.
2. ದೇವರ ಮಕ್ಕಳಾಗುತ್ತೇವೆ. ಹಾಗೂ
3. ಧರ್ಮಸಭೆಯ ಮಕ್ಕಳಾಗುತ್ತೇವೆ.
ಕೂಸಿನ ದೀಕ್ಷಾಸ್ನಾನದ ಹೊರತಾಗಿ ವಯಸ್ಕ ದೀಕ್ಷಾಸ್ನಾನ ಎಂಬ ಮತ್ತೊಂದು ವಿಧಾನವೂ ಇದೆ. ಹೊಸದಾಗಿ ಕ್ರೈಸ್ತಧರ್ಮಕ್ಕೆ ಬರುವವರು ಧರ್ಮತತ್ವಗಳನ್ನು ಅಭ್ಯಾಸ ಮಾಡಿ ಗುರುಸಮ್ಮುಖದಲ್ಲಿ ಧರ್ಮಸಭೆಯನ್ನು ಪ್ರವೇಶಿಸುವುದೇ ವಯಸ್ಕ ದೀಕ್ಷಾಸ್ನಾನ. ಪ್ರೇಷಿತರ ಕಾರ್ಯಕಲಾಪಗಳು 16:33 ರಲ್ಲಿ ಹೇಳಿರುವ “ಆ ನಡುರಾತ್ರಿಯಲ್ಲೇ ಸೆರೆಮನೆಯ ಅಧಿಕಾರಿ ... ಅವನ ಕುಟುಂಬದವರು ದೀಕ್ಷಾಸ್ನಾನ ಪಡೆದರು” ಎಂಬುದನ್ನು ಗಮನಿಸಿ. ಮದುವೆಯ ಸಂದರ್ಭಗಳಲ್ಲಿ ಅನ್ಯಧರ್ಮದವರು ನಮ್ಮ ಹುಡುಗ ಹುಡುಗಿಯನ್ನು ಮದುವೆಯಾಗಲು ಬಯಸಿದರೆ ಅವರಿಗೆ ದೀಕ್ಷಾಸ್ನಾನ ನೀಡಿ ಧರ್ಮಸಭೆಯ ಸದಸ್ಯರನ್ನಾಗಿ ಮಾಡಿ ಆನಂತರ ಮದುವೆ ಸಂಸ್ಕಾರ ನೀಡುವುದು ನಡೆದುಕೊಂಡು ಬಂದಿರುವ ಪದ್ಧತಿ.
ಉದ್ಯೋಗನಿಮಿತ್ತ ನಾನು ಹರ್ಯಾನ ರಾಜ್ಯದಲ್ಲಿ ನೆಲೆಸಿದ್ದಾಗ ಒಂದು ಸಂದರ್ಭದಲ್ಲಿ ಪಂಜಾಬಿ ಕುಲೀನ ಸ್ತ್ರೀಯೊಬ್ಬರು ತಮ್ಮ ಮನೆಯ ಊಳಿಗದಲ್ಲಿದ್ದ ಹೆಂಗಸು ಸೇರಿದಂತೆ ಆಕೆಯ ಒಂಬತ್ತು ಮನೆಮಂದಿಯನ್ನು ದೇವಾಲಯಕ್ಕೆ ಕರೆತಂದು ದೀಕ್ಷಾಸ್ನಾನ ಕೊಡಿಸುವ ಮೂಲಕ ಅವರನ್ನು ಧರ್ಮಸಭೆಯ ಸದಸ್ಯರನ್ನಾಗಿಸಿ, “ನೀವು ಹೋಗಿ ಸಕಲ ದೇಶಗಳ ಜನರನ್ನು ನನ್ನ ಶಿಷ್ಯರನ್ನಾಗಿ ಮಾಡಿರಿ; ಪಿತ, ಸುತ ಮತ್ತು ಪವಿತ್ರಾತ್ಮರ ನಾನದಲ್ಲಿ ಅವರಿಗೆ ದೀಕ್ಷಾಸ್ನಾನ ಮಾಡಿಸಿರಿ” ಎಂದು ಮತ್ತಾಯ 28:19 ರಲ್ಲಿ ಯೇಸುಸ್ವಾಮಿಯೇ ಹೇಳಿದ ಪ್ರಕಾರ ಇತರರಿಗೆ ಮಾದರಿಯಾದರು.
ಕ್ರೈಸ್ತ ಧಾರ್ಮಿಕ ಗ್ರಂಥಗಳನ್ನು ಓದುವ ಮೂಲಕ ಅಥವಾ ಕ್ರೈಸ್ತ ಸಂಸ್ಥೆಗಳು ನಡೆಸುವ ಸಮಾಜೋದ್ಧಾರದ ಕೆಲಸಗಳನ್ನು ನೋಡುವ ಮೂಲಕ ಅಥವಾ ಕ್ರೈಸ್ತ ಜನಸಾಮಾನ್ಯರ ಜೀವನಶೈಲಿಯನ್ನು ಕಾಣುವ ಮೂಲಕ ಹಲವರು ಕ್ರೈಸ್ತ ಧರ್ಮಕ್ಕೆ ಸೇರಿದ ಉದಾಹರಣೆಗಳಿವೆ. ಇಲ್ಲೆಲ್ಲ ವಯಸ್ಕ ದೀಕ್ಷಾಸ್ನಾನ ನೀಡಲಾಗುತ್ತದೆ. ದೀಕ್ಷಾಸ್ನಾನದ ಮೂಲಕ ನಾವು ಆದಿ ತಂದೆತಾಯಿಯರಿಂದ ನಮಗೆ ಪಾರಂಪರಿಕವಾಗಿ ಬಂದ ಮಾನುಷಿಕ ತಪ್ಪುಗಳಿಂದ ವಿಮುಕ್ತರಾಗಿ ದೇವರ ಮಕ್ಕಳಾಗುತ್ತೇವೆ, ಮಾತ್ರವಲ್ಲ ಕ್ರಿಸ್ತೀಯ ವಿಶ್ವಾಸದಲ್ಲಿ ಬಲಗೊಳ್ಳುತ್ತೇವೆ.
ಹಾಗೆ ನೋಡಿದರೆ ದೀಕ್ಷಾಸ್ನಾನವನ್ನು ಗುರುಗಳೇ ನೀಡಬೇಕೆಂದೇನಿಲ್ಲ. ಮನಪೂರ್ವಕ ಕ್ರೈಸ್ತಧರ್ಮ ಸ್ವೀಕರಿಸುವ ಯಾರಿಗಾದರೂ ಯಾವುದೇ ಸಂದರ್ಭದಲ್ಲಿ ನಾವೂ ನೀವೂ ದೀಕ್ಷಾಸ್ನಾನ ನೀಡಬಹುದು. ಉದಾಹರಣೆಗೆ ಮಗುವೊಂದು ಸಾಯುವ ಸ್ಥಿತಿಯಲ್ಲಿದೆ ಎನಿಸಿದಾಗ, ಗುರುಗಳ ಆಗಮನ ದುಸ್ಸಾಧ್ಯವೆನಿಸಿದಾಗ ನಾವೇ ಅದರ ಹಣೆಯ ಮೇಲೆ ನೀರು ಚಿಮುಕಿಸಿ ’ಪಿತನ, ಸುತನ ಮತ್ತು ಪವಿತ್ರಾತ್ಮನ ಹೆಸರಿನಲ್ಲಿ ನಿನಗೆ ದೀಕ್ಷಾಸ್ನಾನ ನೀಡುತ್ತಿದ್ದೇನೆ’ ಎಂದು ಘೋಷಿಸುವ ಮೂಲಕ ಆ ಮಗುವನ್ನು ಕ್ರಿಸ್ತನ ಮಗುವನ್ನಾಗಿ ಮಾಡಬಹುದು. ಸಾವಿನಾವಸ್ಥೆಯಲ್ಲಿರುವ ರೋಗಿಗಳು, ಯೋಧರು, ದುರಂತಕ್ಕೀಡಾದವರು ಸಾಯುವ ಮುನ್ನ ಕ್ರೈಸ್ತರಾಗಲು ಬಯಸಿದರೆ ಗುರುಗಳ ಅನುಪಸ್ಥಿತಿಯಲ್ಲಿ ಕ್ರೈಸ್ತ ಜನಸಾಮಾನ್ಯರು ಪಿತಸುತಪವಿತ್ರಾತ್ಮರ ಹೆಸರಿನಲ್ಲಿ ದೀಕ್ಷಾಸ್ನಾನ ಕೊಡಲು ಅಭ್ಯಂತರವೇನಿಲ್ಲ. ಆದರೆ ಇಂತಹ ಸಂದರ್ಭಗಳಲ್ಲಿ ಅವರ ಹೆಸರು ಗುಡಿಯ ದೀಕ್ಷಾಸ್ನಾನದ ರಿಜಿಸ್ಟ್ರಿಯಲ್ಲಿ ದಾಖಲಾಗುವುದಿಲ್ಲ ಎಂಬುದನ್ನು ಗಮನಿಸಬೇಕು.
ಹಿಂದೆಲ್ಲ ತಂದೆತಾಯಿಗಳು ಅನೈತಿಕ ಜೀವನ ನಡೆಸುತ್ತಿದ್ದಾರೆ, ಪಾಪ ಮಾರ್ಗದಲ್ಲಿ ಬಾಳುತ್ತಿದ್ದಾರೆ, ತಂದೆತಾಯಿಯರ ಧರ್ಮ ಬೇರೆಬೇರೆ ಇದೆ ಇತ್ಯಾದಿಗಳ ಕಾರಣದಿಂದ ಅವರ ಮಕ್ಕಳಿಗೆ ದೀಕ್ಷಾಸ್ನಾನ ನೀಡುತ್ತಿರಲಿಲ್ಲ. ಏಕೆಂದರೆ ಅವರು ತಮ್ಮ ಮಕ್ಕಳನ್ನು ನಿಜ ಕ್ರೈಸ್ತವಿಶ್ವಾಸದಲ್ಲಿ ಸಲಹುವುದಿಲ್ಲ ಎಂಬ ನಂಬುಗೆಯಿತ್ತು. ಈಗ ಬದಲಾದ ಕಾಲ ಸಂದರ್ಭದಲ್ಲಿ ತಂದೆ ತಾಯಿ ಮಾಡುವ ತಪ್ಪಿಗೆ ಮಕ್ಕಳು ಬಲಿಪಶುಗಳಾಗಬಾರದು ಎಂಬ ಆಶಯದಿಂದ ಅಂಥವರ ಮಕ್ಕಳಿಗೂ ದೀಕ್ಷಾಸ್ನಾನ ನೀಡಲಾಗುತ್ತಿದೆ.
(ಮುಂದುವರಿಯುವುದು)
No comments:
Post a Comment