· ಎಫ್. ಎಂ. ನಂದಗಾವ್
ಒಬತಾಲನ ಜೀವ ಸೃಷ್ಟಿ*
ಆದಿಯಲ್ಲಿ ವಿಶ್ವದಲ್ಲಿ ಮೇಲೆ ಅನಂತವಾಗಿ ಹರಡಿದ ನೀಲಿ ಬಣ್ಣದ ಆಗಸವಿತ್ತು, ಕೆಳಗೆ ಮಬ್ಬು ಮಬ್ಬಾದ ಮಂಜಿನ ಜಲರಾಶಿ ಇತ್ತು. ಆಗ ಇದ್ದ ಜೀವಿಗಳೆಂದರೆ, ಅವರು ದೇವರುಗಳು ಮತ್ತು ದೇವತೆಗಳು. ಆಗ ಜಗತ್ತಿನಲ್ಲಿ ಸಸ್ಯರಾಶಿ ಇರಲಿಲ್ಲ. ಪ್ರಾಣಿಪಕ್ಷಿಗಳೂ ಇರಲಿಲ್ಲ. ಜೊತೆಗೆ ಮಾನವರಂತೂ ಇರಲೇಇಲ್ಲ. ನೀಲಿ ಬಣ್ಣದ ಅನಂತವಾಗಿ ಹರಡಿದ ಆಗಸವನ್ನು ಅಪಾರ ಶಕ್ತಿಯದೇವತೆ `ಓಲೊರನ್' ದೇವರು ಆಳುತ್ತಿದ್ದನು. ಕೆಳಗಿನ ಮಂಜಿನ ಜಲರಾಶಿ ಹಾಗೂ ಬರಡು ಬಂಜರು ಭೂಮಿಯ ಮೇಲೆ `ಓಲೊಕುನ್' ದೇವತೆಯ ಆಧಿಪತ್ಯವಿತ್ತು.
ಒಂದು ದಿನ ಯುವದೇವತೆ `ಒಬತಾಲ', ದೇವರುಗಳ ನೆಲೆಯಾದ ಸ್ವರ್ಗದ ನೀಲಾಕಾಶದಿಂದ ಕೆಳಗೆ ಇಣುಕಿ ನೋಡಿದ. ಮಂಜು ಮುಸುಕಿದ, ಕೆಸರಿನ ಜೌಗು ಭೂಮಿ ಖಾಲಿ ಖಾಲಿ ಇರುವುದನ್ನು ಕಂಡು ಬೇಸರವಾಯಿತು. ನಂತರ, ಜಾಣ ಹಾಗೂ ಸರ್ವಶಕ್ತ ದೇವರಾದ ಓಲೊರನ್ ಅನ್ನು ಭೇಟಿಯಾಗಿ ತನ್ನ ಅನಿಸಿಕೆಯನ್ನು ಹೇಳಿಕೊಂಡ.
`ಕೆಳಗೆ ಗಟ್ಟಿಯಾದ ಭೂಮಿಯನ್ನು ಸೃಷ್ಟಿಸುವ ಅಭಿಲಾಷೆ ನಿಮಗಿಲ್ಲವೆ?' ಎಂದು ಓಲೊರನ್ ದೇವರನ್ನು ವಿಚಾರಿಸಿದ ಒಬತಾಲ, ತನ್ನ ಸಲಹೆಯನ್ನು ಅವನ ಮುಂದಿಟ್ಟ. `ಅದು ಬಗೆಬಗೆಯ ಬಣ್ಣಬಣ್ಣದಿಂದ ಕಂಗೊಳಿಸುತ್ತಿದ್ದರೆ ನೋಡಲು ನಯನ ಮನೋಹರವಾಗಿರುತ್ತದೆ. ಅಲ್ಲಿ ಪರ್ವತ ಶ್ರೇಣಿಗಳು, ಹಸುರಿನಿಂದ ಕೂಡಿದ ಗುಡ್ಡಗಾಡು ಪ್ರದೇಶವಿದ್ದು, ಹೊಳೆಹಳ್ಳಗಳು ಹರಿಯುತ್ತಿದ್ದರೆ, ಜಲಪಾತಗಳು ಸೃಷ್ಟಿಯಾದರೆ, ಅದನ್ನು ಕಾಣುವುದೇ ಸಂತಸವನ್ನು ಉಂಟು ಮಾಡುತ್ತದೆ'.
`ಅದಲ್ಲದೇ, ನಿಸರ್ಗದತ್ತ ಹಣ್ಣುಹಂಪಲುಗಳನ್ನು ತಿನ್ನುತ್ತಾ ಅಲ್ಲಿನ ಕಾಡು ಮೇಡುಗಳಲ್ಲಿ ಪ್ರಾಣಿಪಕ್ಷಿಗಳು ವಾಸಿಸುತ್ತಿದ್ದರೆ ಎಷ್ಟು ಚಂದ. ನಂತರ ನಾವು ನಮ್ಮನ್ನೇ ಹೋಲುವ ಮಾನವರನ್ನು ಸೃಷ್ಟಿಸಬಹುದು. ಅವರು ಅಪಾರ ಸಂಖ್ಯೆಯ ಸಮುದಾಯಗಳಲ್ಲಿ ಅಲ್ಲಿರಬಹುದು.'
`ಹೌದು ನಿನ್ನದು ಒಂದು ಉತ್ತಮ ಚಿಂತನೆಯೆ?' ಎಂದು ಯುವ ದೇವರು ಒಬತಾಲನ ಮಾತಿಗೆ ಸಮ್ಮತಿ ಸೂಚಿಸಿದ ಓಲೊರನ್ ದೇವರು, `ಆದರೆ ಅಂಥ ಜಗತ್ತನ್ನು ಸೃಷ್ಟಿಸುವ ಬಗೆ ಯಾರಿಗೆ ಗೊತ್ತಿದೆ?' ಎಂದು ಪ್ರಶ್ನಿಸಿದ.
`ನನಗೆ ಅನುಮತಿಕೊಟ್ಟರೆ, ನಾನು ಈ ನಿಟ್ಟಿನಲ್ಲಿ ಪ್ರಯತ್ನಿಸಿ ನೋಡುವೆ' ಎಂದ ಒಬತಾಲ, ಓಲೊರನ್ ದೇವರ ಅನುಮತಿ ಪಡೆದು, ಈ ಸವಾಲನ್ನು ಸಮರ್ಥವಾಗಿ ಎದುರಿಸುವ ಛಲದೊಂದಿಗೆ ಹೊರಟೇ ಬಿಟ್ಟ.
ಮೊದಲಿಗೆ ಒಬತಾಲ, ದೇವರು ಓಲೊರನ್ ಅವರ ಹಿರಿಯ ಪುತ್ರ `ಓರುನಮಿಲ' ಅವರನ್ನು ಭೇಟಿಯಾದ. ಓರುನಮಿಲ, ಮುಂದೆ ಭವಿಷ್ಯದಲ್ಲಿ ಏನು ನಡೆಯಬಲ್ಲದು ಎಂಬುದನ್ನು ಕಾಣುವ ವಿಶೇಷ ಶಕ್ತಿಯನ್ನು ಕೊಡುಗೆಯಾಗಿ ಪಡೆದಿದ್ದ.
`ಸರ್ವಶಕ್ತ ದೇವರಾದ ನಿನ್ನ ತಂದೆ ಓಲೊರನ್, ನಮ್ಮ ನೆಲೆಯಾದ ಸ್ವರ್ಗದ ನೀಲಾಕಾಶದ ಕೆಳಗಿರುವ ಮಂಜು ಮುಸುಕಿದ ಭೂಮಿಯಲ್ಲಿ ಗಟ್ಟಿಯಾದ ನೆಲವನ್ನು ಸೃಷ್ಟಿಸಿ, ಅಲ್ಲಿ ಜೀವಜಗತ್ತನ್ನು ನೆಲೆಸುವಂತೆ ಮಾಡಲು ನನಗೆ ಅನಮತಿಕೊಟ್ಟಿದ್ದಾನೆ' ಎಂದು ಓರುನಮಿಲ ದೇವರಿಗೆ ವಿವರಣೆಕೊಟ್ಡ ಒಬತಾಲ, `ನಾನು, ನನ್ನ ಈ ಕನಸನ್ನು ಹೇಗೆ ಸಾಧಿಸಬಲ್ಲೆ ಎಂದು ಹೇಳಬಲ್ಲೆಯಾ?' ಎಂದು ವಿಚಾರಿಸಿದ.
ಗಹನವಾದ ವಿಚಾರದಲ್ಲಿ ಮುಳುಗಿ ದೂರ ಕ್ಷಿತಿಜದತ್ತ ಕಣ್ಣು ನೆಟ್ಟ, ಓರುನಮಿಲ ತಾನು ಭವಿಷ್ಯದಲ್ಲಿ ಕಂಡ ವಿಷಯಗಳನ್ನು ಅರುಹಿದ.
`ನೀನು ಅಗಣಿತ ಉದ್ದದ ಬಂಗಾರದ ಸರಪಳಿಯನ್ನು ಹೊಂದಿಸಬೇಕಾಗುತ್ತದೆ. ಏಕೆಂದರೆ, ಅನಂತವಾಗಿ ಹರಡಿರುವ ಈ ನೀಲಾಕಾಶ ಸ್ವರ್ಗದಿಂದ ಅಷ್ಟು ದೂರದಲ್ಲಿರುವ ಮಂಜಿನಿಂದ ಆವೃತವಾಗಿರುವ ಭೂಮಿಯನ್ನು ಸರಳವಾಗಿ ತಲುಪುವುದು ಸಾಧ್ಯವಾಗದು. ನೀನು ಶಂಖದಲ್ಲಿ ಮರಳನ್ನು ತುಂಬಬೇಕಾಗುತ್ತದೆ. ಅದನ್ನು ನಿನ್ನ ಚೀಲದಲ್ಲಿ ಇಟ್ಟುಕೊಳ್ಳಬೇಕು. ಜೊತೆಗೆ ಬಿಳಿಯ ಹೆಂಟೆ, ಕಪ್ಪು ಬೆಕ್ಕು ಮತ್ತು ತಾಳೆಮರದ ಕಾಯಿಯೊಂದನ್ನು ಚೀಲದಲ್ಲಿ ಇರಿಸಿಕೊಳ್ಳಬೇಕು' ಎಂದು ಸಲಹೆ ನೀಡಿದ.
ಇಷ್ಟಾದ ಮೇಲೆ ಒಬತಾಲ, ಸ್ವರ್ಗದಲ್ಲಿರುವ ಪ್ರತಿಯೊಬ್ಬ ದೇವರು ಮತ್ತು ದೇವತೆಗಳನ್ನು ಕಂಡು ತನ್ನ ಯೋಜನೆಯನ್ನು ಅವರ ಗಮನಕ್ಕೆ ತಂದ. ಪ್ರತಿಯೊಬ್ಬರಿಗೂ ತಾನು ಸೃಷ್ಟಿಸ ಬಯಸುವ ಜಗತ್ತಿನ ವಿವರಣೆ ನೀಡಿ, ಅದಕ್ಕೆ ಸಹಾಯ ಮಾಡಲು ಬಂಗಾರದ ಸರಪಳಿ ಹೊಂದುವುದು ಅಗತ್ಯವಾಗಿದೆ ಎಂದು ಮನಗಾಣಿಸಿ, ಅವರಿಂದ ಅವರಲ್ಲಿದ್ದ ಬಂಗಾರದ ಭಿಕ್ಷೆ ಬೇಡತೊಡಗಿದ. ಅವನ ಸುದೈವ, ಸ್ವರ್ಗದಲ್ಲಿ ಸಕಲ ದೇವರು ಮತ್ತು ದೇವತೆಗಳು ತಮ್ಮಲ್ಲಿದ್ದ ಬಂಗಾರದ ಸಕಲ ಆಭರಣಗಳನ್ನು ಒಬತಾಲನ ಕೈಗೆ ಒಪ್ಪಿಸಿದರು.
ಒಬತಾಲನ ಸಂಗ್ರಹದಲ್ಲಿ ಅಪಾರ ಪ್ರಮಾಣದ ದೇವದೇವತೆಗಳಲ್ಲಿನ ಬಂಗಾರದ ಕಂಠದ ಹಾರಗಳು, ಕೈ ಕಡಗ ಕಾಲ್ಕಡಗಗಳು, ನಡುಪಟ್ಟಿಗಳು, ಕಿವಿಯೋಲೆಗಳು, ಬೆರಳ ಉಂಗುರುಗಳ ರಾಶಿಯೇ ಬಿದ್ದಿತ್ತು. ಹಲವಾರು ಚೀಲಗಳಲ್ಲಿ ತನಗೆ ದೇವದೇವತೆಗಳು ಒಪ್ಪಿಸಿದ ಬಂಗಾರದ ಆಭರಣಗಳ ಮೂಟೆಗಳನ್ನು ತನ್ನರಥದಲ್ಲಿ ಇರಿಸಿಕೊಂಡು ಸ್ವರ್ಗಲೋಕದಲ್ಲಿದ್ದ ದೇವಾನುದೇವತೆಗಳ ಚಿನಿವಾರನ ಮನೆಯತ್ತ ಹೊರಟ.
ಒಬತಾಲನನ್ನು ಆದರದಿಂದ ಬರಮಾಡಿಕೊಂಡ ದೇವಾನುದೇವತೆಗಳ ಚಿನಿವಾರ, ಅಷ್ಟೆಲ್ಲಾ ಬಂಗಾರದ ಆಭರಣಗಳ ಮೂಟೆಗಳನ್ನು ಕಂಡು ಬೆರಗಾದ. ಒಬತಾಲನ ಬಯಕೆಯನ್ನು ತಿಳಿದುಕೊಂಡ ಮೇಲೆ ಆ ಬಂಗಾರದಿಂದ ಅಗಣಿತ ಉದ್ದದ ಸರಪಳಿಯನ್ನು ಮಾಡಲು ಒಪ್ಪಿಕೊಂಡ.
`ದೇವರು ಒಬತಾಲ, ಇಷ್ಟೊಂದು ಅಪಾರ ಪ್ರಮಾಣದ ಬಂಗಾರವಿದ್ದರೂ, ನೀನು ಬಯಸುವಷ್ಟು ಉದ್ದದ ಬಂಗಾರದ ಸರಪಳಿ ಮಾಡುವುದು ಕಷ್ಟಸಾಧ್ಯದ ಕೆಲಸ. ನನ್ನ ಶಕ್ತಿಮೀರಿ ಪ್ರಯತ್ನಿಸಿ ಇದರಿಂದ ಅನಂತ ಉದ್ದದ ಬಂಗಾರದ ಸರಪಳಿ ಮಾಡಿಕೊಡುವೆ' ಎಂದು ಸ್ವರ್ಗದ ದೇವಾನುದೇವತೆಗಳ ಚಿನಿವಾರ ಬಂಗಾರದ ಸರಪಳಿ ಮಾಡುವ ಕೆಲಸವನ್ನು ತಕ್ಷಣವೇ ಕೈಗೆತ್ತಿಕೊಂಡ.
ಬಂಗಾರದ ಆಭರಣಗಳನ್ನು ದೊಡ್ಡಕಡಾಯಿಯಲ್ಲಿ ಸುರಿದು, ಭಾರಿಗಾತ್ರದ ಒಲೆಯ ಮೇಲಿಟ್ಟು ಕರಗಿಸಿ, ನಂತರ ಅದನ್ನು ಒಂದು ಹದಕ್ಕೆ ತಂದು ತಾಮ್ರದೊಂದಿಗೆ ಬೆರೆಸಿ ಬಂಗಾರದ ಸರಪಳಿ ಮಾಡಲು ತನ್ನ ಸಲಕರಣೆಗಳನ್ನು ಜೋಡಿಸಿಕೊಂಡ. ಭಾರಿ ಪ್ರಮಾಣದಲ್ಲಿದ್ದ ಬಂಗಾರದ ಆಭರಣಗಳನ್ನು ಕರಗಿಸಲು ದೊಡ್ಡ ಕುಲುಮೆಯೇ ಬೇಕಾಯಿತು.
ಇತ್ತ ಸ್ವರ್ಗದ ಚಿನಿವಾರ, ಒಬತಾಲ ಬಂಗಾರದ ಸರಪಳಿಯನ್ನು ಸಿದ್ಧಪಡಿಸಲು ತೊಡಗಿದ್ದರೆ, ಅತ್ತ, ಒಬತಾಲ ದೇವರ ಹಿರಿಯ ಪುತ್ರ ಓರುನಮಿಲ ಪ್ರಸ್ತಾಪಿಸಿದ್ದ ಉಳಿದ ವಸ್ತುಗಳನ್ನು ಹೊಂದಿಸುವುದರಲ್ಲಿ ತೊಡಗಿದ್ದ. ಓರುನಮಿಲ ಹೇಳಿದ ಎಲ್ಲ ಸಾಮಾನುಗಳನ್ನು ತಂದಿಟ್ಟುಕೊಂಡ. ಅಷ್ಟರಲ್ಲಿ, ಸ್ವರ್ಗದ ಚಿನಿವಾರ ಅನಂತ ಉದ್ದದ ಬಂಗಾರದ ಸರಪಳಿಯನ್ನು ಸಿದ್ಧಪಡಿಸಿದ್ದ.
ಎಲ್ಲವೂ ಸಜ್ಜಾದಾಗ, ದೇವರ ಹಿರಿಯ ಮಗ ಓರುನಮಿಲ, ಒಬತಾಲನಿಗೆ ತನ್ನ ಸಹಾಯ ಹಸ್ತವನ್ನುಚಾಚಿದ. ಚಿನಿವಾರ ಸಿದ್ಧಪಡಿಸಿದ್ದ ಬಂಗಾರದ ಸರಪಳಿಯ ಒಂದು ತುದಿಯನ್ನು ನೀಲಾಕಾಶದ ಸ್ವರ್ಗದ ಒಂದು ತುದಿಗೆ ಗಟ್ಟಿಯಾಗಿ ಬಿಗಿಯುವಲ್ಲಿ ಸಹಾಯ ಮಾಡಿದ. ನಂತರ ಉಳಿದ ಬಂಗಾರದ ಸರಪಳಿಯನ್ನು ಕೆಳಗೆ ಇಳಿಬಿಡಲಾಯಿತು. ಓರುನಮಿಲ ತನ್ನ ಕಿರಿಯ ಸಹೋದರ ಒಬತಾಲನನ್ನು ಅಪ್ಪಿಕೊಂಡು ವಿದಾಯ ಹೇಳಿದ. ಒಬತಾಲ, ಬಂಗಾರದ ಸರಪಳಿಯನ್ನು ಹಿಡಿದುಕೊಂಡು ನಿಧಾನವಾಗಿ ಕೆಳಗೆ ಇಳಿಯಲು ಆರಂಭಿಸಿದ.
ಇಳಿದ, ಇಳಿದ ಒಬತಾಲ ಕೆಳಗೆ ಇಳಿಯುತ್ತಲೇ ಇದ್ದ. ಬಂಗಾರದ ಸರಪಳಿಯು ಕೊನೆಗೆ ಭೂಮಿಗೆ ತಲುಪಿದಾಗ, ಆತನ ಕಾಲುಗಳು ಮಂಜಿನ ಗಾಳಿಯಲ್ಲಿ ನೆನೆದು ನೀರಿನಿಂದ ಹಸಿಯಾದವು. ಆಗ ಅವನಿಗೆ ನೀಲಾಕಾಶದಿಂದ ಕ್ಷೀಣದನಿಯೊಂದು ಕೇಳಿಸಿತು. ಅತ್ತಲಿಂದ ಓರುನಮಿಲ ಮಾತನಾಡತೊಡಗಿದ್ದ.
`ಒಬತಾಲ, ನಿನ್ನ ಹೆಗಲ ಚೀಲದಲ್ಲಿರುವ ಬಸವನ ಹುಳದ ಶಂಖವನ್ನು ಹೊರಗೆತೆಗೆ. ಅದರಲ್ಲಿ ತುಂಬಿಕೊಂಡಿರುವ ಮರಳನ್ನು ಕೆಳಗೆ ತೂರು' ಎಂದು ಕೂಗಿ ಹೇಳಿದ. ಅದರಂತೆ ತನ್ನ ಚೀಲದಲ್ಲಿ ತಾನು ತಂದಿದ್ದ ಶಂಖವನ್ನು ತೆಗೆದು ಅದರಲ್ಲಿ ತುಂಬಿದ್ದ ಮರಳನ್ನು ಕೆಳಗೆ ಮಂಜಿನ ನೀರಿನ ಮೇಲೆ ಚೆಲ್ಲಿದ.
ಆಗ ಮತ್ತೊಮ್ಮೆ ಓರುನಮಿಲನ ಮಾತುಗಳು ಕೇಳಿಸಿದವು. `ಈಗ, ನಿನ್ನ ಚೀಲದಲ್ಲಿರುವ ಬಿಳಿಯ ಬಣ್ಣದ ಕೋಳಿಯನ್ನು ಹೊರಗೆ ತೆಗೆದು ನೀನು ಮರಳನ್ನು ತೂರಿದ ಜಾಗದಲ್ಲಿ ಬಿಡು' ಎಂದು ಸೂಚಿಸಿದ. ಓರುನಮಿಲನ ಸೂಚನೆಯಂತೆಯೇ, ಒಬತಾಲ, ತನ್ನ ಚೀಲದಲ್ಲಿದ್ದ ಬಿಳಿಯ ಕೋಳಿಯನ್ನು ಹೊರಗೆ ತೆಗೆದು, ತಾನು ಚೆಲ್ಲಿದ ಮರಳ ಮೇಲೆ ಬಿಟ್ಟ. ಒಬತಾಲನ ಕೈ ಬಿಟ್ಟು ಕೆಳಗೆ ಹಾರಿದ ಬಿಳಿ ಕೋಳಿ, ಪಟ ಪಟ ರೆಕ್ಕೆ ಬಡಿಯುತ್ತ ಕೆಳಗೆ ಇಳಿದು ಮರಳನ್ನು ತನ್ನ ಕಾಲುಗಳಿಂದ ಆಚೆ ಈಚೆ ಕೆಬರತೊಡಗಿತು. ಅತ್ತ ಇತ್ತ ಸುತ್ತಮುತ್ತ ಹಾರಿದ ಮರಳಿನಿಂದ ಎಲ್ಲ ಕಡೆಗೂ ನೋಡಿದತ್ತ ಒಣ ನೆಲ ಕಾಣತೊಡಗಿತು.
ಈಗ ಒಬತಾಲ, ಆ ಒಣ ನೆಲೆದ ಮೇಲೆ ಧೈರ್ಯವಾಗಿ ಕಾಲಿಡಬಹುದಾಗಿತ್ತು. ಆದರೆ, ಸ್ವರ್ಗದ ಚಿನಿವಾರ ಅಂದುಕೊಂಡಂತೆ, ಆತನು ತಯಾರಿಸಿದ್ದ ಬಂಗಾರದ ಸರಪಳಿ ಒಬತಾಲ ಒಣ ನೆಲವನ್ನು ತಾಗುವಷ್ಟು ಉದ್ದವಾಗಿರಲಿಲ್ಲ. ಆ ಬಂಗಾರದ ಸರಪಳಿಯ ಕೊನೆಯ ತುದಿಯನ್ನು ಹಿಡಿದುಕೊಂಡಿದ್ದ ಒಬತಾಲ ನೇತಾಡುತ್ತಿದ್ದ. ಗಟ್ಟಿ ಮನಸ್ಸು ಮಾಡಿದ ಒಬತಾಲ, ನಿಧಾನವಾಗಿ ಜೋತಾಡುತ್ತ, ಆಳವಾದ ಉಸಿರು ತೆಗೆದುಕೊಂಡು ಬಂಗಾರದ ಸರಪಳಿಯ ತುದಿಯನ್ನು ಬಿಟ್ಟು ಕೆಳಗೆ ಜಿಗಿದ. ಆತ ಸುರಕ್ಷಿತವಾಗಿ ಹಗುರವಾದ ನೆಲವನ್ನು ಮುಟ್ಟಿದ್ದ. ತನ್ನಇದುವರೆಗಿನ ಸೃಷ್ಟಿಯ ಬಗೆಗೆ ಹೆಮ್ಮೆ ತಾಳಿದ ಒಬತಾಲ, ತಾನು ಮೊದಲ ಬಾರಿ ಕಾಲೂರಿದ ಆ ಸ್ಥಳವನ್ನು `ಇಲ್‌ಇಫ್' ಎಂದು ಗುರುತಿಸಿದ.
ತನ್ನ ಚೀಲದಲ್ಲಿದ್ದ ತಾಳೆ ಮರದ ಹಣ್ಣಿನಿಂದ ಬೀಜವನ್ನು ತೆಗೆದುಕೊಂಡು ಬಹು ಎಚ್ಚರಿಕೆಯಿಂದ ನೆಲದಲ್ಲಿ ಗುಂಡಿತೋಡಿ, ಅದರಲ್ಲಿ ಅದನ್ನು ಇಟ್ಟು ಮಣ್ಣು ಮುಚ್ಚಿದ. ಅದು ತಕ್ಷಣವೇ ಮೊಳೆತು, ಸಸಿಯಾಗಿ ಕ್ಷಣದಲ್ಲೇ ಎತ್ತರದ ತಾಳೆಮರವಾಗಿ ನಿಂತುಬಿಟ್ಟಿತು. ಅದರ ಟೊಂಗೆಗಳಲ್ಲಿದ್ದ ತಾಳೆ ಮರದ ಹಣ್ಣುಗಳು ಕೆಳಗೆ ಬಿದ್ದವು. ಆ ಹಣ್ಣಿನೊಳಗಿದ್ದ ಬೀಜಗಳು ನೆಲ ಸೇರಿ, ಮೊಳಕೆಯೊಡೆದವು. ನಂತರ ದೊಡ್ಡದೊಡ್ಡ ಮರಗಳಾದವು. ತಾಳೆ ಮರಗಳ ತೋಟಗಳು ಬೆಳೆದವು. ಆ ತಾಳೆ ಮರಗಳ ತೋಪುಗಳು, ಕಾಡಿನರೂಪ ಪಡೆಯಲು ಬಹಳ ಸಮಯವೇನೂ ಬೇಕಾಗಲಿಲ್ಲ.
ಆಗ, ಆ ತಾಳೆ ಮರದ ಕಾಂಡಗಳು ಮತ್ತು ಗರಿಗಳನ್ನು ಬಳಸಿಕೊಂಡ ಒಬತಾಲ, ತನಗಾಗಿ ಒಂದು ಮನೆಯನ್ನು ಕಟ್ಟಿಕೊಂಡ. ನಂತರ ತನ್ನ ಚೀಲದಲ್ಲಿದ್ದ ಕಪ್ಪು ಬೆಕ್ಕನ್ನು ಹೊರಗೆ ಬಿಟ್ಟುಕೊಂಡ. ಅಂದಿನಿಂದ ಆ ಬೆಕ್ಕು ಅವನ ಒಡನಾಡಿಯಾಯಿತು. ಒಬತಾಲನೊಂದಿಗೆ ಆ ಕಪ್ಪು ಬೆಕ್ಕು ಆ ಹೊಸಮನೆಯಲ್ಲಿ ವಾಸಿಸತೊಡಗಿತು.
ಸ್ವರ್ಗದ ಅರಸ ಓಲೊರನ್, ಆಗಸದಿಂದ ಕೆಳಗೆ ಇಣುಕಿ ನೋಡಿದ. ತನ್ನ ಕಿರಿಯ ಮಗನ ಸಾಹಸವನ್ನುಕಂಡು ಸಂತೋಷಗೊಂಡ. ಆದರೆ, ತನ್ನಕಿರಿಯ ಮಗ ಒಬತಾಲ ದೇವರು, ಮಂದವಾದ ಬೆಳಕಿನಲ್ಲಿ ಇರುವುದನ್ನು ನೋಡಿ ಬೇಸರವಾಯಿತು. ಅದೇಕೋ ಸರ್ವಶಕ್ತ ದೇವರು ಓಲೊರನ್ ಗೆ ಹಿಡಿಸಲಿಲ್ಲ.
`ಇಲ್ಲಿ ಸ್ವರ್ಗವನ್ನು ನೋಡಿದರೆ ಅದು ಸಮೃದ್ಧವಾದ ಬೆಳಕಿನಲ್ಲಿ ಫಳ ಫಳ ಹೊಳೆಯುತ್ತಿತ್ತು. ಆದರೆ, ಅಲ್ಲಿ ತನ್ನ ಕಿರಿಯ ಮಗ ಮಂದ ಬೆಳಕಿನಲ್ಲಿ ಒದ್ದಾಡುತ್ತಿದ್ದಾನೆ' ಎಂದು ಓಲೊರನ್ ಕಳವಳ ಪಟ್ಟ. ಕೊನೆಗೆ, ಆತ ಬೆಳಕಿನ ಚೆಂಡೊಂದನ್ನು ಸಿದ್ಧಪಡಿಸಿ ಅದನ್ನು ಆಗಸದಲ್ಲಿ ತೂಗು ಬಿಟ್ಟ. ಅದು ಭೂಮಿಗೆ ಬೆಳಕನ್ನು ಕೊಡುವ ಸೂರ್ಯನಾಯಿತು. ಅದರ ಬೆಳಕು ಒಬತಾಲ ಪ್ರತಿದಿನವೂ ಬೆಚ್ಚನೆಯ ಬೆಳಕಿನಲ್ಲಿದ್ದು ಬದುಕು ಸಾಗಿಸುವಂತಾಯಿತು.
ತನ್ನ ಸುತ್ತಮುತ್ತಲ ಪರಿಸರ ಸುಂದರವಾಗಿ ಕಂಡರೂ ಒಬತಾಲನ ಸೃಷ್ಟಿ ಇನ್ನೂ ಪೂರ್ತಿಯಾಗಿ ಮುಗಿದಿರಲಿಲ್ಲ. ಆತ ಮಣ್ಣನ್ನು ಮುದ್ದೆ ಮಾಡಿ, ಆ ಮುದ್ದೆ ಮಣ್ಣಿನಿಂದ ತನ್ನನ್ನೆ ಹೋಲುವ ಪ್ರತಿಕೃತಿಗಳನ್ನು ರಚಿಸತೊಡಗಿದ. ಒಬತಾಲ ತನ್ನ ಪ್ರತಿಕೃತಿಯ ಗೊಂಬೆಗಳನ್ನು ಸಿದ್ಧಪಡಿಸುತ್ತಿದ್ದಂತೆ ಬೆಳಕಿನ ಚೆಂಡು ಸೂರ್ಯ ಅವನ್ನು ಸುಡುತ್ತಾ ಗಟ್ಟಿಯಾಗುವಂತೆ ಮಾಡುತ್ತಿತ್ತು. ಜೊತೆಗೆ ತನ್ನನ್ನು ಹೋಲುವ ಪ್ರತಿಕೃತಿಯ ಗೊಂಬೆಗಳನ್ನು ಸಿದ್ಧಪಡಿಸುವ ಕೆಲಸದಲ್ಲಿ ತನ್ನನ್ನು ತೊಡಗಿಸಿಕೊಂಡ ಒಬತಾಲ ದಣಿಯುತ್ತಿದ್ದ, ಜೊತೆಗೆ ಸೂರ್ಯ ಬಿಸಿಲಿನ ಕಾವು ಅವನನ್ನು ಹೈರಾಣಾಗಿಸುತ್ತಿತ್ತು. ಧಗೆಯಿಂದ ಬಸವಳಿದ ಅವನಿಗೆ ಕೆಟ್ಟ ನೀರಡಿಕೆ ಕಾಡುತ್ತಿತ್ತು.
ಆ ಯುವದೇವರು, ಸರ್ವಶಕ್ತ ದೇವರ ಕಿರಿಯ ಮಗ ಒಬತಾಲ, ತನ್ನದಣಿವು ಮತ್ತು ನೀರಡಿಕೆಯನ್ನು ನೀಗಿಸಿಕೊಳ್ಳಲು ತಾಳೆಮರದ ನೀರಾ ಮತ್ತು ಹಣ್ಣಿನ ರಸವನ್ನು ಕುಡಿಯತೊಡಗಿದ. ಬಿಸಿಲೇರಿದಂತೆ ಹುಳಿ ಮದ್ಯವಾಗುವ ತಾಳೆ ಮರದ ರಸದಗುಣ ಅವನ ಗಮನಕ್ಕೆ ಬರಲಿಲ್ಲ. ತನ್ನ ನೀರಡಿಕೆ ಮತ್ತು ದಣಿವನ್ನು ನಿವಾರಿಸಿಕೊಳ್ಳಲು ಮೇಲಿಂದ ಮೇಲೆ ತಾಳೆಮರದ ರಸವನ್ನು ಕುಡಿಯುತ್ತಲೇ ಹೋದ.
ಬಿಸಿಲಿನಲ್ಲಿ ಹುಳಿಯೇರಿ ಮದ್ಯವಾಗುವ ತಾಳೆಮರದ ಹಣ್ಣಿನರಸ ಅವನ ದಣಿವನ್ನು ನಿವಾರಿಸಿ, ನೀರಡಿಕೆಯನ್ನು ಹಿಂಗಿಸಿದರೂ, ಅದು ಅವನ ತಲೆಗೆ ಮತ್ತು ಏರುವಂತೆ ಮಾಡಿತು. ಕುಡಿತದಿಂದ ಓಲಾಡತೊಡಗಿದ ಒಬತಾಲ, ಈ ಮೊದಲು ಮಾಡಿದಂಥತನ್ನ ಪ್ರತಿಕೃತಿಗಳ ಮಾದರಿಯಲ್ಲಿ ಹೊಸ ಗೊಂಬೆಗಳನ್ನು ಸಿದ್ಧಪಡಿಸುವಲ್ಲಿ ಸೋಲತೊಡಗಿದ.
ಮೊದಲಿಗೆ ಸಿದ್ಧಪಡಿಸಿದ ಪ್ರತಿಕೃತಿ ಗೊಂಬೆಗಳಲ್ಲಿ ಮತ್ತು ಅವನು ತಾಳೆಮರದ ಹಣ್ಣಿರಸಕುಡಿದ ನಂತರ ಸಿದ್ಧಪಡಿಸಿದ ಪ್ರತಿಕೃತಿ ಗೊಂಬೆಗಳಲ್ಲಿ ಅಲ್ಪಸ್ವಲ್ಪ ವ್ಯತ್ಯಾಸಗಳು ಕಾಣತೊಡಗಿದವು. ಮೊದಲು ರಚಿಸಿದ ಪತ್ರಿಕೃತಿಗಳಿಗಿಂತ ಹೊಸ ಪ್ರತಿಕೃತಿಗಳು ಅಲ್ಪಸ್ವಲ್ಪಅಂದಗೆಡ ತೊಡಗಿದವು. ಆದರೆ, ಮೈ ಮೇಲೆ ಪ್ರಜ್ಞೆ ಕಳೆದುಕೊಂಡು ಕುಡಿತದ ಮತ್ತಿನಲ್ಲಿ ಓಲಾಡತೊಡಗಿದ್ದ ಒಬತಾಲನಿಗೆ ಪ್ರತಿಕೃತಿಗಳಲ್ಲಿನ ಈ ವ್ಯತ್ಯಾಸ ಗಮನಕ್ಕೆ ಬರಲೇ ಇಲ್ಲ.
ಗೊಂಬೆಗಳನ್ನು ಸಿದ್ಧಪಡಿಸುತ್ತಲೇ ಹೋದ ಒಬತಾಲ, ತನ್ನ ಕೈ ಸೋತಾಗ ಸುತ್ತೆಲ್ಲ ಕಣ್ಣಾಡಿಸಿದ. ಅಪಾರ ಸಂಖ್ಯೆಯಲ್ಲಿ ಗೊಂಬೆಗಳು ಆತನ ಎದುರು ನಿಂತುಕೊಂಡಿದ್ದವು. ಅವುಗಳನ್ನು ನೋಡಿ ಆತನ ಸಂತೋಷಕ್ಕೆ ಪಾರವೇ ಇರಲಿಲ್ಲ. ಆಗ ಒಬತಾಲ, ತನ್ನ ತಂದೆ ಸರ್ವಶಕ್ತ ದೇವರು ಓಲೊರನ್‌ನ್ನು ಕೂಗಿ ಕರೆದು, `ದಯಮಾಡಿ ಸಹಾಯ ಮಾಡು. ಈ ನನ್ನ ಗೊಂಬೆಗಳಲ್ಲಿ ಉಸಿರನ್ನು ತುಂಬು. ಅವರು ನನ್ನ ಜನರಾಗಲಿ' ಎಂದು ಕೋರಿಕೊಂಡ.
ಕಿರಿಯ ಮಗ ಒಬತಾಲನ ಅಪೇಕ್ಷೆಯನ್ನು ಈಡೇರಿಸಿದ ದೇವರು ಓಲೊರನ್, ಅಲ್ಲಿನ ಎಲ್ಲಾ ಗೊಂಬೆಗಳಿಗೆ ಉಸಿರು ಕೊಟ್ಟು ಅವು ಜೀವ ತಳೆಯುವಂತೆ ಮಾಡಿದ. ದಣಿವಾರಿದ ಮೇಲೆ ಒಬತಾಲ ನಿಧಾನವಾಗಿ ಮತ್ತಿನಿಂದ ಹೊರಬಂದ. ತೆರೆದ ಕಣ್ಣಿನಿಂದ ಸುತ್ತಲೆಲ್ಲಾ ನೋಡಿದಾಗ ಅವನು ರಚಿಸಿದ ಗೊಂಬೆಗಳೆಲ್ಲ ಪರಿಪೂರ್ಣವಾಗಿ ಕಾಣಿಸಲಿಲ್ಲ.
ಅವನ ಸೃಷ್ಟಿಯ ಎಲ್ಲಾ ಜನರು ಅವನು ಎಣಿಸಿದ್ದಂತೆ ಪರಿಪೂರ್ಣವಾಗಿರಲಿಲ್ಲ. ಮೊದಲಿನ ಸೃಷ್ಟಿಗಿಂತ ನಂತರದ ಸೃಷ್ಟಿಯಲ್ಲಿ ಬಹಳಷ್ಟು ವ್ಯತ್ಯಾಸಗಳಾಗಿದ್ದವು. ಅವನು ದುಃಖಿತನಾದ. ಆದರೂ, ಏನು ಮಾಡುವುದು ಅವೆಲ್ಲಾ ಜನತೆ ಅವನ ಸೃಷ್ಟಿಯೇ ಆಗಿದ್ದರು. ಇನ್ನು ಮುಂದೆ, ತಾನೆ ಅವರ ವಿಶೇಷ ರಕ್ಷಕನಾಗಿ ಇರುವೆನೆಂದು ಆತ ತನ್ನ ಎಲ್ಲ ಜನತೆಗೆ ಮಾತುಕೊಟ್ಟ.
ಆತ ತನ್ನ ಜನರಿಗೆ ಮನೆಗಳನ್ನು ಕಟ್ಟಿಕೊಳ್ಳಲು ಸಹಾಯ ಮಾಡಿದ. ಅವರು ಹೊಲಗದ್ದೆಗಳನ್ನು ಹೇಗೆ ನಿರ್ವಹಿಸಬೇಕು ಎಂಬುದನ್ನು ಹೇಳಿಕೊಟ್ಟ. ಆ ಜನರು ತಮ್ಮನ್ನು ತಾವು `ಯೊರೂಬಾ' ಎಂದು ಹೆಸರಿಸಿಕೊಂಡರು. ಅವರಿದ್ದ ತಾಣ `ಇಲ್‌ಇಫ್' ಒಂದು ಸಮೃದ್ಧ ಊರಾಯಿತು. ಕೊನೆಗೆ ಅದು ಒಂದು ಸಮೃದ್ಧವಾದ ದೊಡ್ಡ ಪಟ್ಟಣವಾಗಿ ಅಭಿವೃದ್ಧಿಗೊಂಡಿತು.
ತನ್ನ ಜನ ತಮ್ಮಷ್ಟಕ್ಕೆ ತಾವು ಯಾರ ಸಹಾಯವೂ ಇಲ್ಲದೇ ಜೀವನ ಸಾಗಿಸುವ ಸಾಮರ್ಥ್ಯವನ್ನು ಪಡೆದದ್ದು ಅವನಿಗೆ ಮನಗಾಣುವಂತಾದಾಗ ಅವನಿಗೆ ತೃಪ್ತಿ ಮೂಡಿತು. ಇನ್ನು ಇಲ್ಲಿನ ನನ್ನ ಜನಕ್ಕೆ ಅಷ್ಟಾಗಿ ನನ್ನ ಅವಶ್ಯಕತೆಕಾಣದು ಎನ್ನಿಸಿತು. ಸ್ವರ್ಗದ ನೀಲಾಕಾಶದಿಂದ ಇಳಿ ಬಿದ್ದ ಬಂಗಾರದ ಸರಪಳಿಯನ್ನು ಹಿಡಿದುಕೊಂಡು ಸರ ಸರ ಸ್ವರ್ಗಕ್ಕೆ ಏರಿಹೋದ. ತದನಂತರ ಒಬತಾಲ ತನ್ನ ಸಹೋದರ, ಸಹೋದರಿ ದೇವರುಗಳೊಂದಿಗೆ ಸ್ವರ್ಗದಲ್ಲಿ ಇರತೊಡಗಿದ. ಕೆಲವೊಮ್ಮೆ ತನ್ನ ಸೃಷ್ಟಿಯಾದ ಭೂಮಿಗೆ ಇಳಿದು ಬಂದು ತನ್ನ ಜನರೊಂದಿಗೆ ವಾಸಿಸುತ್ತಿದ್ದ.
----
*ಪಶ್ಚಿಮ ಆಫ್ರಿಕಾದ ಬುಡಕಟ್ಟಿನಜನರ ಪುರಾಣಕಥೆ
ಮುಂದುವರಿಯುವುದು
No comments:
Post a Comment