ಅತಿ.ವಂ.ಡಾ. ತೋಮಾಸ್ ಪೊತ್ತಕಮೂರಿ ಅವರು ಕಮ್ಮ ಸಮುದಾಯದ ಮೂಲದವರು. ಗುಂಟೂರು ಜಿಲ್ಲೆಯ ರಾವಿಪದವು ವಂದನೀಯರ ಹುಟ್ಟೂರು.
ಕಮ್ಮ ಸಮುದಾಯವರು ನಾಯುಡು, ಚೌದರಿ ಮೊದಲಾದ ಹೆಸರುಗಳೊಂದಿಗೂ ಗುರುತಿಸಿಕೊಂಡಿದ್ದಾರೆ. ಇತಿಹಾಸ ಕಾಲದಲ್ಲಿ ಅರಸರ ಬಂಟರಾಗಿದ್ದ ಈ ಸಮುದಾಯದವರು, ಕ್ಷತ್ರಿಯರಂತೆ ಯುದ್ಧದಲ್ಲಿ ಭಾಗವಹಿಸಿದ್ದಾರೆ. ನಂತರ, ವ್ಯಾಪಾರ, ವಹಿವಾಟುಗಳಲ್ಲಿ ತೊಡಗಿಸಿಕೊಂಡಿದ್ದಾರೆ, ಜಮೀನುಗಳನ್ನು ಉತ್ತಿದ್ದಾರೆ. ಒಟ್ಟಾರೆ ಶ್ರೀಮಂತಿಕೆ ಈ ಸಮುದಾಯದ ಹೆಚ್ಚುಗಾರಿಕೆ.
ತೆಲುಗು ಭಾಷಿಕ ಪ್ರಾಬಲ್ಯದ ಸೀಮೆಗಳಲ್ಲಿ ರೆಡ್ಡಿಗಳನ್ನು ಹೊರತು ಪಡಿಸಿದರೆ, ಕಮ್ಮ ಸಮುದಾಯವು ಪ್ರಭಾವಶಾಲಿ ಸಮುದಾಯ. ರಾಜಕೀಯವೇ ಇರಲಿ, ಇನ್ನಾವುದೇ ಕ್ಷೇತ್ರವಿರಲಿ, ಅಲ್ಲಿ ರೆಡ್ಡಿಗಳೊಂದಿಗೆ ಸರಿಸಮನಾಗಿ ನಿಂತು ಹೆಣಗಾಡಿದ್ದನ್ನು, ಜವಾಬ್ದಾರಿ ಹೊತ್ತಿರುವುದನ್ನು ಈಗಲೂ ಕಾಣಬಹುದು. ಆಂಧ್ರಪ್ರದೇಶ, ತೆಲಂಗಾಣ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಹರಡಿರುವ ಈ ಸಮುದಾಯ ಅಲ್ಲೆಲ್ಲಾ ತನ್ನ ಇರುವನ್ನು ಗುರುತಿಸಿಕೊಂಡಿದೆ.
ವಂದನೀಯರಿಗೆ ಪೊತ್ತಕಮೂರಿ ಹೆಸರು ಹೇಗೆ ಅಂಟಿಕೊಂಡಿರಬೇಕು? ಅವರ ಹುಟ್ಟೂರು, ಅವರ ತಂದೆತಾಯಿಗಳಿದ್ದ ಊರು ಗುಂಟೂರು ಜಿಲ್ಲೆಯ ರಾವಿಪದವು. ಈ ಪೊತ್ತಕಮೂರಿ ಎಲ್ಲಿಂದ ಅಂಟಿಕೊಂಡಿತು?
ಇಲ್ಲಿ ತೆಲುಗು ಖ್ಯಾತ ನಟ, ರಾಜಕಾರಣಿ ಎನ್ .ಟಿ.ರಾಮರಾವ್ ಅವರ ಹೆಸರನ್ನು ನೆನಪಿಸಿಕೊಳ್ಳಬಹುದು. ಅವರ ಪೂರ್ತಿ ಹೆಸರು, ನಂದಮೂರಿ ತಾರಕ ರಾಮರಾವ್. ಅವರು ಹುಟ್ಟೂರು ಕೃಷ್ಣಾ ಜಿಲ್ಲೆಯ ಗುಡಿವಾಡ ಹತ್ತಿರದ ನಂದಮುರು ಗ್ರಾಮ. ಮತ್ತು ಅದೇ ಜಿಲ್ಲೆಯ ಗನ್ನವರಂ ಸನಿಹದಲ್ಲಿ ನಂದಮುರು ಹೆಸರಿನ ಇನ್ನೊಂದು ಗ್ರಾಮವೂ ಇದೆ. ಇಲ್ಲಿ, ನಂದಮುರು ಗ್ರಾಮದಿಂದ ಬಂದವ, ನಂದಮುರು ಗ್ರಾಮದ ಮೂಲದವ ಎಂದು ಗುರುತಿಸಿಕೊಳ್ಳುವ ಸಂದರ್ಭದಲ್ಲಿ ತೆಲಗು ಭಾಷೆಯ ಜಾಯಮಾನದಂತೆ ನಂದಮುರು ಎಂಬುದು ನಂದಮೂರಿ ಆಗಿದೆ.
ಇದೇ ಬಗೆಯಲ್ಲಿಯೇ ಅತಿ.ವಂ. ಡಾ. ಪೊತ್ತಕಮೂರಿ ಅವರು ಹುಟ್ಟಿದ್ದ ಗುಂಟೂರು ಜಿಲ್ಲೆಯ ರಾವಿಪದವು ಇದ್ದರೂ, ಅವರ ಹಿರಿಯರ ಮೂಲ ಊರು ಅಥವಾ ಗ್ರಾಮ ಪೊತ್ತಕಮುರು ಇದ್ದಿರಬೇಕು.
ಪೊತ್ತಕಮುರು ಎಂಬುದು ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ದರ್ಸಿ ಮಂಡಲಕ್ಕೆ ಸೇರಿದ ಒಂದು ಗ್ರಾಮದ ಹೆಸರು. ಅದು ಕಮ್ಮ ಸಮುದಾಯದ ಒಕ್ಕಲಿನ ಒಂದು ಪುರಾತನ ಗ್ರಾಮ. ಅದು ದರ್ಸಿಗೆ 11 ಕಿ.ಮೀ, ಜಿಲ್ಲಾ ಕೇಂದ್ರ ಒಂಗೋಲ್ ಗೆ 45 ಕಿ.ಮೀ ದೂರದಲ್ಲಿದ್ದರೆ, ರಾಜಧಾನಿ ಹೈದರಾಬಾದ್ ಗೆ 268 ಕಿ.ಮೀ ದೂರದಲ್ಲಿದೆ.
ಸಂಪ್ರದಾಯಿಕ ರೂಢಿಯಂತೆ ಪೊತ್ತಕಮುರು ಊರಿನಿಂದ ಬಂದವರು ಪೊತ್ತಕಮೂರಿಗಳು. ಇದಲ್ಲದೆ ಕೆಲವರು ಪೊತ್ತಕಮುರಿ ಎಂದು ತಮ್ಮ ಕುಟಂಬದ ಅಡ್ಡಹೆಸರಾಗಿ ಇಟ್ಟುಕೊಂಡಿರುವುದು ಉಂಟು. ಈ ಹಿನ್ನೆಲೆಯಲ್ಲಿ ಗಮನಿಸಿದರೆ, ಬೆಂಗಳೂರು ಮಹಾಧರ್ಮಕ್ಷೇತ್ರದ ಮೊದಲ ದೇಶಿ ಮೂಲದ ಮಹಾಧರ್ಮಾಧ್ಯಕ್ಷ ಅತಿ.ವಂ.ಡಾ. ತೋಮಾಸ್ ಪೊತ್ತಕಮೂರಿ ಅವರು, ಇಂದಿನ ಪ್ರಕಾಶಂ ಜಿಲ್ಲೆಯ, ದಾಸರಿ ಮಂಡಲದ ಪೊತ್ತಕಮುರು ಗ್ರಾಮದ ಮೂಲದವರೇ ಇರಬೇಕು. ಅವರ ಪೂರ್ವಜರು ನಂತರ ಪಕ್ಕದ ಗುಂಟೂರು ಜಿಲ್ಲೆಯ ರಾವಿಪದವು ಗ್ರಾಮಕ್ಕೆ ವಲಸೆ ಬಂದಿರಬೇಕು.
ಕಮ್ಮ ಸಮುದಾಯದವರು ಊರಿನ ಹೆಸರಿನಿಂದ ಹೊಂದಿರುವ ಕಮ್ಮ ಮಕ್ಕಳ (ಸಮುದಾಯದ) ಕುಟುಂಬದ ಹೆಸರುಗಳಲ್ಲಿ -ಅಬಿನೇನಿಯಿಂದ ಆರಂಭವಾಗಿ ಯಮಿನೇನಿಯ ವರೆಗಿನ- 300ರ ಸಂಖ್ಯೆಯನ್ನು ಮೀರಿದ ಅಡ್ಡಹೆಸರುಗಳ ಪಟ್ಟಿಯಲ್ಲಿ ಪೊತ್ತಕಮುರು, ಪೊತ್ತಕಮುರಿ, ಪೊತ್ತಕಮೂರಿ ಎಂಬ ಹೆಸರುಗಳಿವೆ.
*******
No comments:
Post a Comment