ಮೊನ್ನೆ ಒಂದು ಕಛೇರಿಗೆ ಯಾವುದೋ ಕೆಲಸದ ನಿಮಿತ್ತ ಹೋಗಿದೆ. ಆ ಕಛೇರಿಯ ಪ್ರವೇಶದ್ವಾರದಲ್ಲಿದ್ದ ಒಂದು ಫಲಕದ ಮೇಲೆ ಈ ರೀತಿ ಬರೆದಿತ್ತು, No Success without U. ಈ ಬರಹ ನನ್ನಲ್ಲಿ ಅನೇಕ ರೀತಿಯ ಪಶ್ನೆಗಳಿಗೆ ಅನುವು ಮಾಡಿಕೊಟ್ಟಿತ್ತು. ಹೌದು, ಯಾವುದೇ ಸಂಘಸಂಸ್ಥೆಗಳ ಕಛೇರಿಗಳಲ್ಲಿ ನಾವು ದಪ್ಪ ಅಕ್ಷರಗಳಲ್ಲಿ ಬರೆದಿರುವ ಅವರ vision ಮತ್ತು mission statements ಗಳ ಬರಹಗಳನ್ನು ಗೋಡೆಮೇಲೆ ನೇತು ಹಾಕಿರುವ ಫಲಕಗಳಲ್ಲಿ ಕಾಣುತ್ತೇವೆ.
ವ್ಯಂಗ್ಯ ಅಂದ್ರೆ, ಕೆಲವೊಮ್ಮೆ ಸಂಸ್ಥೆಗಳಲ್ಲಿ ಬೇರೆ ಬೇರೆ ಹಂತಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಉದ್ಯೋಗಿಗಳಿಗೆ ಇವುಗಳ ಬಗ್ಗೆ ತಿಳಿದಿರುವುದೇ ಇಲ್ಲ. ಅವು ತೋರಿಕೆಗೆ ಮಾತ್ರ ಹಾಕಿದಂತೆ ಕಂಡುಬರುತ್ತವೆ. ಅವುಗಳು ಸಂಸ್ಥೆಯ ಬದುಕಾಗಿರುವುದಿಲ್ಲ. ಆದ್ದರಿಂದ ನಾಯಕ ಎನ್ನಿಸಿಕೊಂಡವನು ಗೋಡೆ ಬರಹಕ್ಕೆ ಸೀಮಿತವಾಗಿಬಿಟ್ಟಿರುವ ವಿಷನ್ ಮತ್ತು ಮಿಷನ್ ವ್ಯಾಖ್ಯಾನಗಳಿಗೆ ಜೀವ ಬರಿಸಬೇಕು, ಉದ್ಯೋಗಿಗಳ ನರನಾಡಿಗಳಲ್ಲಿ ಹರಿಯುವಂತೆ ಮಾಡಬೇಕು. ಅಯೋಜಿಸುವ ಪ್ರತಿಯೊಂದು ಸಭೆಗಳಲ್ಲಿ ವಿಷನ್ ಮತ್ತು ಮಿಷನ್ ಬಗ್ಗೆ ಪದೇ ಪದೇ ಪ್ರಸ್ತಾಪಿಸಿ ಉದ್ಯೋಗಿಗಳ ಮನಸ್ಸಿನಲ್ಲಿ ಅಚ್ಚೊತ್ತಿ ನಿಲ್ಲುವಂತೆ ಶ್ರಮಿಸಬೇಕು. ಅವು ಎಲ್ಲರ ಪರಕಾಯ ಪ್ರವೇಶ ಮಾಡುವಂತೆ ನೋಡಿಕೊಳ್ಳಬೇಕು.

“ನೋಡಿ ಅಲ್ಲಿ ಅವನು ಪ್ರಾಮಾಣಿಕತೆಯ ರಾಜಕುಮಾರ” ಎಂದು ಜನರು ಹೇಳುವಂತಿರಬೇಕು. ನೀವು ನಾಯಕರಾಗಿದ್ದರೆ, ಇದು ನಿಮ್ಮ ಕೆಲಸ. ಮತ್ತು ನೆನಪಿಡಿ, ನಾವೆಲ್ಲರೂ ನಾಯಕರು!
ಅಲ್ಲಿ ನೋಡಿ ನಡೆದಾಡುವ ಮತ್ತೊಬ್ಬ ಕ್ರಿಸ್ತ ಎಂದು ಜನರು ಹೇಳುವಂತೆ ಬದುಕುತ್ತಿದ್ದೇವೆಯೇ ಎಂಬ ಪ್ರಶ್ನೆ ತಪಸ್ಸುಕಾಲಕ್ಕೆ ಕಾಲಿಡುತ್ತಿರುವ ನಮ್ಮನ್ನು ಕಾಡಲಿ.
ತಪಸ್ಸುಕಾಲವೆಂದರೆ ಪರಿವರ್ತನೆಯ ಕಾಲ. ದೇವರಿಗೆ ಅಭಿಮುಖವಾಗುವ ಕಾಲ. ಕ್ರಿಸ್ತನ ಶಿಲುಬೆಯನ್ನು ನಮ್ಮ ಕ್ರೈಸ್ತಬದುಕಿನ ಮಾನದಂಡವಾಗಿಸಿಕೊಂಡು ನಮ್ಮ ಬದುಕನ್ನು ಪರೀಕ್ಷಿಸಿಕೊಳ್ಳುವ ಕಾಲ, ಕ್ರಿಸ್ತನ ಶಿಲುಬೆಯಾತನೆ ಮತ್ತು ಮರಣದ ತುದಿಯಿಂದ ಪುನರುತ್ಥಾನದ ವಿಜಯದ ಇನ್ನೊಂದು ತುದಿಗೆ ಪ್ರಾರ್ಥನೆ, ಉಪವಾಸ, ದಾನಗಳ ಮಾರ್ಗಗಳಿಂದ ಕರೆದೊಯ್ಯುವಂತಹ ಕಾಲ. ಇಂತಹ ಸಂದರ್ಭದಲ್ಲಿ ಉಪವಾಸದ ನಿಜವಾದ ಅರ್ಥವನ್ನು ಪೋಪ್ ಫ್ರಾನ್ಸಿಸ್‍ನವರು ಈ ರೀತಿ ಹೇಳಿದ್ದಾರೆ:
“ನೋಯಿಸುವ ಮಾತುಗಳನ್ನು ತ್ಯಜಿಸಿ, ಕರುಣೆಯ ಮಾತುಗಳನಾಡಿ. ದುಃಖಕರ ಮಾತುಗಳ ತ್ಯಜಿಸಿ ಧನ್ಯಭರಿತರಾಗಿರಿ. ಕೋಪವ ತ್ಯಜಿಸಿ ತಾಳ್ಮೆಯನ್ನು ತುಂಬಿಕೊಳ್ಳಿ. ನಿರಾಶೆಯನ್ನು ತ್ಯಜಿಸಿ ಭರವಸೆಯಿಂದ ತುಂಬಿಕೊಳ್ಳಿ. ಚಿಂತೆಗಳ ತ್ಯಜಿಸಿ ದೇವರಲ್ಲಿ ವಿಶ್ವಾಸವಿರಿಸಿ. ದೂರುವ ಪ್ರವೃತಿಯ ತ್ಯಜಿಸಿ ಸರಳತೆಯನ್ನು ಪರಿಭಾವಿಸಿಕೊಳ್ಳಿ. ಒತ್ತಡಗಳ ತ್ಯಜಿಸಿ ಪ್ರಾರ್ಥನಾಭರಿತರಾಗಿ. ಕಹಿಮನಸ್ಸನ್ನು ತ್ಯಜಿಸಿ ಸಂತೋಷವನ್ನು ಹೃದಯದಲ್ಲಿ ತುಂಬಿಕೊಳ್ಳಿ. ಸ್ವಾರ್ಥವನ್ನು ತ್ಯಜಿಸಿ ಇತರರಿಗೆ ದಯಾವಂತರಾಗಿರಿ. ದ್ವೇಷ ಹಗೆತನ ತ್ಯಜಿಸಿ ಸಾಮರಸ್ಯ ಬೆಳಸಿಕೊಳ್ಳಿ. ಮಾತುಗಳ ತ್ಯಜಿಸಿ ಆಲಿಸಲು ಮೌನರಾಗಿರಿ.”
******
No comments:
Post a Comment