
ಬಡ ರೈತರ ಸಾಲ ಮರುಪಾವತಿಗೆ ಬ್ಯಾಂಕುಗಳು ಅವರ ಆಸ್ತಿಪಾಸ್ತಿಯ ಹರಾಜಿಗೆ ಮುಂದಾದರೆ, ಅದೇ ಬ್ಯಾಂಕುಗಳು ಕೋಟಿಗಟ್ಟಲೆ ಸಾಲ ಪಡೆಯುವ ಉದ್ಯಮಿಗಳಿಗೆ ರತ್ನಗಂಬಳಿ ಹಾಸಿ ಸಾಲ ಕೊಡುತ್ತವೆ, ಸರ್ಕಾರಗಳು ಅವರಿಗೆ ಹಲವಾರು ವಿನಾಯಿತಿ ಕೊಡುತ್ತವೆ. ಕೊನೆಗೆ ಅವರು, ದೇಶಬಿಟ್ಟು ಓಡಿಹೋಗಲು ಕಾನೂನಿನ ಅಡಿಯಲ್ಲಿಯೇ ಸಕಲ ಅನುಕೂಲಗಳನ್ನು ಕಲ್ಪಿಸಿಕೊಳ್ಳುತ್ತಾರೆ, ಇಲ್ಲವೆ ಕಲ್ಪಿಸಿಕೊಡಲಾಗುತ್ತದೆ.
ಪ್ರಸಕ್ತ ಸಾಲಿನ ಫೆಬ್ರವರಿ ತಿಂಗಳ ಮೊದಲವಾರದಲ್ಲಿ ದಲಿತ, ಸಾಮಾಜಿಕ ಚಿಂತಕ, ಹೋರಾಟಗಾರ 67ರ ಹರೆಯದ ಆನಂದ ತೇಲ್ತುಂಬ್ಡೆ ಅವರನ್ನು ಬಂಧಿಸಲಾಯಿತು. ಬಂಧಿಸದಂತೆ ನ್ಯಾಯಾಲಯ ಸೂಚಿಸಿದ್ದರೂ, ಮಹಾರಾಷ್ಟ್ರದ ಪೊಲೀಸರು ಅವರನ್ನು ಬಂಧಿಸಿದರು. ನ್ಯಾಯಾಲಯ ಛೀಮಾರಿ ಹಾಕಿದ ನಂತರ ಬಿಡುಗಡೆ ಮಾಡಲಾಯಿತು. ಆದರೆ, ಬಂಧನದ ಶ್ರೇಯಸ್ಸನ್ನು ಬಲಪಂಥೀಯ ಚಿಂತಕರು, ಪ್ರಧಾನಿ ಮೋದಿಯ ಹೆಗಲಿಗೆ ಏರಿಸಿದರು. ಕೆಲವು ವಿಚಾರಗಳ ಕುರಿತಂತೆ ಅಭಿಪ್ರಾಯ ಭೇದದಿಂದ ಮೋದಿ ವಿರುದ್ಧ ಮಾತನಾಡುವವರು ದೇಶದ್ರೋಹಿಗಳು, ಎಂದು ಜನರನ್ನು ನಂಬಿಸುವ ಈ ಚಿಂತಕರು, ದೇಶದ್ರೋಹಿಗಳನ್ನು ಬಂಧಿಸಲು ಪ್ರಧಾನಿ ಕಾನೂನನ್ನು ಲೆಕ್ಕಿಸಲಿಲ್ಲ ಎಂಬ ಭಾವ ಮೂಡುವಂತೆ ನೋಡಿಕೊಂಡರು. ಅಂತೆಯೇ, ತಮ್ಮ ಹಿಂಬಾಲಕರು ಅದನ್ನು ಸಂಭ್ರಮಿಸುವಂತೆ ಮಾಡಿದರು.
ಕಾಲಕಾಲಕ್ಕೆ ತೆರಿಗೆ ಕಟ್ಟುವುದು ದೇಶಪ್ರೇಮವಲ್ಲ. ರಾಷ್ಟ್ರಧ್ವಜ ಹಾರಿಸಿ ರಾಷ್ಟ್ರಗೀತೆ ಹಾಡುವಾಗ ಎದ್ದು ನಿಲ್ಲದಿರುವುದು ತಪ್ಪು, ದೇಶದ್ರೋಹದ ಕೆಲಸ ಎಂದು ಬಿಂಬಿಸಲಾಗುತ್ತಿದೆ. ಉದ್ಯಮಿಯೊಬ್ಬರು ತಮ್ಮ ಸಂಸ್ಥೆಯ ಕಾರ‍್ಯಕ್ರಮದಲ್ಲಿ, ಎಲ್ಲರೂ ಎದ್ದು ನಿಂತು ವಂದಿಸುವಾಗ, ವಿದೇಶಿಯ ಉದ್ಯೋಗಿಗಳಿಗೆ ರಾಷ್ಟ್ರಧ್ವಜಕ್ಕೆ ವಂದನೆ ಸಲ್ಲಿಸುವಲ್ಲಿ ವಿನಾಯತಿ ನೀಡಿದ್ದು ಸ್ವಯಂ ದೇಶಪ್ರೇಮಿ ವಕ್ತಾರರಿಗೆ ಕಾಣಿಸುವುದೇ ಇಲ್ಲ. ನಮ್ಮ ನಾಡಿನಲ್ಲಿ ಲಭ್ಯವಿದ್ದರೂ, ಆ ಚಿಕಿತ್ಸೆ ಪಡೆಯದೇ ಹೊರದೇಶಗಳಲ್ಲಿ ಚಿಕಿತ್ಸೆ ಪಡೆಯುವ ಗಣ್ಯರು, ದೇಶಿಯ ವೈದ್ಯ ಪದ್ಧತಿಗಳಲ್ಲಿ ಎಲ್ಲವೂ ಸಾಧ್ಯ, ಎಲ್ಲರೋಗಕ್ಕೂ ಚಿಕಿತ್ಸೆ ಉಂಟು ಎಂದು ಹೇಳುತ್ತಾ ಸಾಮಾನ್ಯ ಜನರನ್ನು ದಾರಿ ತಪ್ಪಿಸುವುದನ್ನು ನಿಲ್ಲಿಸುವುದಿಲ್ಲ.
ದೇಶದ ಜನರೆಲ್ಲರೂ ಒಂದು, ನಾವು ಒಂದೇ ಮಾತೆಯ ಮಕ್ಕಳು ಎಂದು ಹಾಡಿ ಹೊಗಳುವ ಗಣ್ಯಾತಿಗಣ್ಯರ, ಮಠಾಧಿಪತಿಗಳ ಭೇದಭಾವದ ನಡವಳಿಕೆಗಳನ್ನು ನಾವು ಗಮನಿಸಿದರೂ ಗಮನಿಸದಂತೆ ಇರಬೇಕಾದ ಪರಿಸ್ಥಿತಿ ಮೂಡಿದೆ. ದೇಶದ ಪ್ರಜೆಗಳಲ್ಲಿ ಯಾರೂ ಮೇಲಲ್ಲ ಕೀಳಲ್ಲ, ಎಲ್ಲರಿಗೂ ಎಲ್ಲವೂ ಲಭ್ಯವಾಗಬೇಕು, ಎಲ್ಲರನ್ನೂ ಮನುಷ್ಯರಂತೆ ಕಾಣಬೇಕೆಂದು ಪ್ರತಿಪಾದಿಸುವ ದೇಶದ ಎಲ್ಲಾ ಪ್ರಗತಿಪರ ಚಿಂತಕರ ಹಣೆಗೆ ನಗರ ನಕ್ಸಲ ಎಂದು ಪಟ್ಟಿಕಟ್ಟಿದಂತೆ ಆನಂದ ತೇಲ್ತುಂಬ್ಡೆ ಅವರಿಗೆ ನಗರ ನಕ್ಸಲ ಎಂಬ ಹಣೆಪಟ್ಟಿ ಕಟ್ಟಿ, ದೇಶದ್ರೋಹಿ ಎಂದು ಬಿಂಬಿಸಲಾಗುತ್ತಿದೆ.
ಯಾರಿದು, ಈ ಆನಂದ ತೇಲ್ತುಂಬ್ಡೆ? ಭೂಮಿಯಿಲ್ಲದ ಬಡ ದಲಿತ ಕುಟುಂಬದಿಂದ ಬಂದ ಈ ಆನಂದ ತೇಲ್ತುಂಬ್ಡೆ, ವಿದ್ಯೆಯ ಕಲಿಕೆಯಲ್ಲಿ ಮುಂದಿದ್ದ. ಮೆಕಾನಿಕಲ್ ಎಂಜಿನಿಯರಿಂಗ್ ನಲ್ಲಿ ಪದವಿ ಗಳಿಸಿದ್ದ ಆತ, ಪ್ರತಿಷ್ಠಿತ ಹಾಗೂ ಪ್ರಸಿದ್ಧವಾದ ಎಂಜಿನಿಯರಿಂಗ್ ಕಾಲೇಜಿನಲ್ಲಿ ಶುಲ್ಕ ಕಟ್ಟಲಾಗದೇ ಸ್ನಾತಕೋತ್ತರ ಪದವಿಯ ಕಲಿಕೆಯನ್ನು ಕೈಬಿಟ್ಟು, ನಂತರ ಪ್ರಮುಖ ಹೆಸರುವಾಸಿ ಮ್ಯಾನೆಜಮೆಂಟ್ ಶಿಕ್ಷಣ ಸಂಸ್ಥೆಯಲ್ಲಿ ಓದು ಮುಂದುವರಿಸಿ ಡಾಕ್ಟರೆಟ್ ಪದವಿ ತನ್ನದಾಗಿಸಿಕೊಂಡರು. ಸಂವಿಧಾನಶಿಲ್ಪಿ ಅಂಬೇಡ್ಕರ್ ಅವರ ಮೊಮ್ಮಗಳು ರಮಾ ಅವರ ಹೆಂಡತಿ. ಭಾರತ ಪೆಟ್ರೊಲಿಯಂ ಸಂಸ್ಥೆಯಲ್ಲಿ ಸ್ವಲ್ಪಕಾಲ ದುಡಿದು ನಂತರ ಶಿಕ್ಷಣ ಕ್ಷೇತ್ರಕ್ಕೆ ಕಾಲಿರಿಸಿ, ತಮ್ಮ ಪ್ರಖರ ಚಿಂತನೆಗಳಿಂದ ಪ್ರಗತಿಪರ ಚಿಂತಕ ಎಂದು ಹೆಸರು ಮಾಡಿದ್ದಾರೆ. ವಿದ್ಯಾರ್ಥಿಗಳಿಗೆ ಪಾಠ ಹೇಳುತ್ತಾ, ಹೊಸಹೊಸ ವಿಚಾರಗಳಿಗೆ ಅವರ ಮನಸ್ಸುಗಳನ್ನು ಸಜ್ಜುಗೊಳಿಸುತ್ತಾ, ಸಮಸಮಾಜದ ಕನಸು ಬಿತ್ತುತ್ತಿದ್ದ ಅವರು, ದೇಶದ್ರೋಹ, ಹಿಂಸೆಗೆ ಕುಮ್ಮಕ್ಕು ಕೊಡುವುದು ಮೊದಲಾದ ಹುಸಿ ಆರೋಪಗಳಿಗೆ ಬಲಿಯಾಗಿ, ಈಗ ಜೈಲುಪಾಲಾಗಿ, ಹುಸಿ ಆರೋಪಗಳಿಂದ ಪಾರಾಗಿ ಹೊರಬರಲು ಕೋರ್ಟುಕಲಾಪಗಳ ಜಂಜಡದಲ್ಲಿ ಮುಳುಗಿದ್ದಾರೆ.
ಭಾರತೀಯ ಸಮಾಜ ದಲಿತರನ್ನು ಕಾಣುತ್ತಿರುವ ದೃಷ್ಟಿಯನ್ನು ಚಿಕಿತ್ಸಕ ದೃಷ್ಟಿಯಿಂದ ನೋಡಿ ಹಲವಾರು ಪುಸ್ತಕಗಳನ್ನು ಬರೆದಿರುವ ತೇಲ್ತುಂಬ್ಡೆ ಅವರಿಂದ ಪ್ರಭಾವಿತವಾದ ಶಿಷ್ಯಬಳಗವೂ ಸಾಕಷ್ಟಿದೆ. ದೇಶದ ಅಧಿಕಾರಸ್ಥರು, ತಮ್ಮ ಹಕ್ಕುಗಳಿಗಾಗಿ ಹೋರಾಡುವ ದಲಿತರನ್ನು ಮತ್ತು ಬುಡಕಟ್ಟು ಜನರನ್ನು ನಕ್ಸಲ್ ವಾದಿಗಳೆಂದು ಆರೋಪಿಸುತ್ತಾ ಬಂದಿದೆ ಎಂಬ ಅವರ ಚಿಂತನೆ, ಶೋಷಣೆ ಮಾಡುವುದು ಕರ್ಮಫಲದ ತಮ್ಮ ಮೇಲು ಜಾತಿಯ ಹುಟ್ಟಿನ ಬಲದಿಂದ ಲಭ್ಯವಾದ ಅಧಿಕಾರವೆಂದು ಭಾವಿಸಿರುವ ಯಥಾಸ್ಥಿತಿ ವಾದಿಗಳಿಗೆ ಹಿಡಿಸಲಿಲ್ಲ. ಕಳೆದ ವರ್ಷ ಕೋರೆಗಾಂವನಲ್ಲಿ, ಬ್ರಿಟಿಷರ ಕಾಲದಲ್ಲಿ ಸವರ್ಣೀಯರು ಮತ್ತು ದಲಿತರ ನಡುವೆ ನಡೆದ ಹೋರಾಟದ 200ನೇ ವಾರ್ಷಿಕ ಉತ್ಸವದ ಸಂದರ್ಭದಲ್ಲಿ ನಡೆದ ಗಲಭೆಯ ಪ್ರಕರಣದಲ್ಲಿ ಕುಮ್ಮಕ್ಕು ಕೊಟ್ಟವರೆಂದು ದೂರಿ ಅವರನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಲಾಗಿದೆ. ಸವರ್ಣಿಯರು ಮತ್ತು ದಲಿತರ ನಡುವೆ ಉಂಟಾದ ಘರ್ಷಣೆಯಲ್ಲಿ ಈ ಗಲಭೆಯಲ್ಲಿ ಒಬ್ಬರು ಮೃತಪಟ್ಟಿದ್ದಾರೆ.
ಬಲಪಂಥೀಯ ಚಿಂತನೆಗಳ ಹಸಿಹಸಿ ಸುಳ್ಳುಗಳನ್ನು ನಿಜವೆಂದು ಭ್ರಮಿಸುವ ಬಹುಪಾಲು ಜನಸಮುದಾಯಗಳಲ್ಲಿ, ಮೂಲನಿವಾಸಿಗಳು, ಬುಡಕಟ್ಟು ಜನರು ಮತ್ತು ದಲಿತರು ಸಂವಿಧಾನದತ್ತ ತಮ್ಮ ನ್ಯಾಯವಾದ ಬೇಡಿಕೆಗಳನ್ನು ಮಂಡಿಸುವುದು, ದೇಶದ್ರೋಹ ಎಂಬ ಭಾವನೆ ಬಲಗೊಳ್ಳುತ್ತಾ ಸಾಗುತ್ತಿದೆ. ಈ ಶೋಷಿತ ಸಮುದಾಯಗಳಿಗೆ ಸಂವಿಧಾನದ ತಿಳಿವಳಿಕೆ ನೀಡುವುದು, ಪರಿಜ್ಞಾನ ಮೂಡಿಸುವುದು ಒಂದು ದೊಡ್ಡ ದೇಶದ್ರೋಹದ ಅಪರಾಧವಾಗುತ್ತಿದೆ.
ಮೂಲನಿವಾಸಿಗಳನ್ನು ಒಕ್ಕಲೆಬ್ಬಿಸಿ ಪರಿಸರವನ್ನು ಹಾಳುಮಾಡುತ್ತಾ ಅಕ್ರಮ ಗಣಿಗಾರಿಕೆ, ಕೈಗಾರಿಕೆಗಳನ್ನು ನಡೆಸುವವರು ದೇಶದ್ರೋಹಿಗಳಲ್ಲ. ಅಂಥವರು ಶಾಸಕರಾಗಿ ಮೆರೆಯುವ ವಿಸ್ಮಯ ನಡೆದರೂ, ಅದು ದೇಶಕ್ಕೆ, ದೇಶದ ಸಂವಿಧಾನಕ್ಕೆ ಮಾಡಿದ ದ್ರೋಹವಲ್ಲ. ಸಂವಿಧಾನಕ್ಕೆ ಅಪಚಾರವೆಸಗುವ, ನಿರಂತರ ಭ್ರಷ್ಟಾಚಾರದಲ್ಲಿ ತೊಡಗುವ ರಾಜಕಾರಣಿಗಳು ದೇಶದ್ರೋಹಿಗಳಾಗುವುದಿಲ್ಲ. ಇಂಥ ಮನೋಭಾವದಿಂದಾಗಿ ಆನಂದ ತೇಲ್ತುಂಬ್ಡೆ ಮತ್ತು ಅಂಥವರು ಜೈಲುವಾಸದ ಅಪಮಾನ, ಮಾನಸಿಕ ಹಿಂಸೆ ಅನುಭವಿಸುವುದು ದಿನನಿತ್ಯದ ಸಂಗತಿಯಾಗುತ್ತಿದೆ. ಜೀವಂತವಿರುವವರಷ್ಟೇ ಅಲ್ಲ, ಸತ್ತವರೂ ಸಹ ಇಂದು ಈ ಹುಸಿ ದೇಶಪ್ರೇಮ ಮತ್ತು ದೇಶದ್ರೋಹಗಳ ಬೇಗುದಿಯಲ್ಲಿ ಬೇಯುವಂತಾಗಿರುವುದು ನಮ್ಮ ಕಾಲದ ದುರಂತವಾಗಿದೆ.
ಜೆಸ್ವಿತ್ ಪಾದ್ರಿ
ಕಳೆದ ಶತಮಾನದಲ್ಲಿದ್ದ, ಬುಡಕಟ್ಟು ಮೂಲನಿವಾಸಿಗಳ ಏಳಿಗೆಗೆ ಶ್ರಮಿಸಿದ್ದ, ಜರ್ಮನಿ ಮೂಲದ ಜೆಸ್ವಿತ್ ಪಾದ್ರಿ ಜಾನ್ ಬ್ಯಾಪ್ಟಿಸ್ಟ್ ಹಾಫ್ಮನ್ (1857-1928) ಅವರ ಪುತ್ಥಳಿಯ ಮೇಲೆ ಬಲಪಂಥೀಯ ಚಿಂತನೆಯ ರಾಜಕೀಯ ಪಕ್ಷವೊಂದು ಮುಗಿಬಿದ್ದ ಪ್ರಕರಣ ಜಾರ್ಖಂಡದಿಂದ ವರದಿಯಾಗಿದೆ. ಹತ್ತೊಂಬತ್ತನೇ ಶತಮಾನದಲ್ಲಿ ಜರ್ಮನಿ ಮೂಲದ ಜೆಸ್ವಿತ್ ಪಾದ್ರಿ ಜಾನ್ ಬ್ಯಾಪ್ಟಿಸ್ಟ್ ಹಾಫ್ಮನ್ ಅವರು ಬ್ರಿಟಿಷರೊಂದಿಗೆ ಕೈ ಜೋಡಿಸಿ ಸ್ಥಳೀಯ ಬುಡಕಟ್ಟು ಜನರ ಸಂಸ್ಕೃತಿ ಮತ್ತು ನಾಗರಿಕತೆಯನ್ನು ಹಾಳುಗೆಡವಿದ್ದಾರೆ ಎಂದು ಆರೋಪಿಸಲಾಗುತ್ತಿದೆ.
ಕಳೆದ ಸಾಲಿನ ಡಿಸೆಂಬರ್ ತಿಂಗಳಲ್ಲಿ ರಾಂಚಿಯಿಂದ 55 ಕಿ.ಮೀ. ದೂರದಲ್ಲಿರುವ ಖುಂತಿ ಜಿಲ್ಲೆಯ ಸರ‍್ವದಾ ಊರಲ್ಲಿನ ಚರ್ಚಿನ ಕಂಪೌಂಡ್ ಒಳಗೆ ನಿಲ್ಲಿಸಲಾಗಿರುವ ಜರ್ಮನಿ ಮೂಲದ ಜೆಸ್ವಿತ್ ಪಾದ್ರಿ ಜಾನ್ ಬ್ಯಾಪ್ಟಿಸ್ಟ್ ಹಾಫ್ಮನ್ ಅವರ ಎದೆ ಮಟ್ಟದ ಪ್ರತಿಮೆಯನ್ನು ಕಿತ್ತುಹಾಕಬೇಕೆಂದು ಒತ್ತಾಯಿಸಲಾಗುತ್ತಿದೆ. ಬ್ರಿಟಿಷರೊಂದಿಗೆ ಸೇರಿಕೊಂಡಿದ್ದ ಈ ಪಾದ್ರಿ ಬುಡಕಟ್ಟು ಜನರ ವಿರುದ್ಧ ಕೆಲಸಮಾಡಿದ್ದರು, ಅವರ ಪ್ರತಿಮೆ ನಿಲ್ಲಿಸುವುದು ಎಂದರೆ ಬುಡಕಟ್ಟು ಜನರಿಗೆ ಮಾಡುವ ಅವಮಾನ ಎಂದು ಬಣ್ಣಿಸಲಾಗುತ್ತಿದೆ.
ತಮ್ಮ ಇಪ್ಪತ್ತನೇ ವಯಸ್ಸಿನಲ್ಲಿ ಭಾರತಕ್ಕೆ ಬರುವ ಜರ್ಮನಿ ಮೂಲದ ಜೆಸ್ವಿತ್ ಪಾದ್ರಿ ಜಾನ್ ಬ್ಯಾಪ್ಟಿಸ್ಟ್ ಹಾಫ್ಮನ್, ಜಾರ್ಖಂಡ್ ಪ್ರದೇಶದಲ್ಲಿ ಮುಂಡಾ ಆದಿವಾಸಿ ಬುಡಕಟ್ಟು ಜನರ ಏಳಿಗೆಗಾಗಿ ತಮ್ಮ ಜೀವ ಸವೆಸಿದ್ದರು. ಅವರ ಹಕ್ಕುಗಳಿಗಾಗಿ ಹೋರಾಟ ನಡೆಸಿದ್ದರು. ಶಿಕ್ಷಣದೊಂದಿಗೆ, ಸಹಕಾರಿ ಸಂಘಗಳನ್ನು ಸ್ಥಾಪಿಸಿ ಮುಂಡಾ ಬುಡಕಟ್ಟಿನ ಜನ ಅಭಿವೃದ್ಧಿ ಪಥದತ್ತ ಸಾಗುವಂತೆ ನೋಡಿಕೊಂಡಿದ್ದರು. ಅವರ ಆರ್ಥಿಕ ಏಳಿಗೆಗಾಗಿ ಒಂದು ಬ್ಯಾಂಕ್ ಅನ್ನೂ ಸ್ಥಾಪಿಸಿದ್ದರು.
ಈ ಜರ್ಮನಿ ಮೂಲದ ಜೆಸ್ವಿತ್ ಪಾದ್ರಿ ಜಾನ್ ಬ್ಯಾಪ್ಟಿಸ್ಟ್ ಹಾಫ್ಮನ್ ಅವರು, 1908ರಲ್ಲಿ ಜಾರಿಗೆ ಬಂದ ಛೋಟಾನಾಗಪುರ ಟೆನೆನ್ಸಿ ಆಕ್ಟ್ ರಚನೆ ಮತ್ತು ಜಾರಿಯಲ್ಲಿ ಪ್ರಮುಖಪಾತ್ರ ವಹಿಸಿದ್ದರು. ಈ ಕಾನೂನು ಬುಡಕಟ್ಟು ಜನರ ಜಮೀನನ್ನು ಈ ಬುಡಕಟ್ಟಿಗೆ ಸೇರದವರು ಖರೀದಿಸದಂತೆ ನಿರ್ಬಂಧ ಹೇರುತ್ತದೆ. ಇದು ಬುಡಕಟ್ಟು ಜನರ ಭೂಮಿಯ ಮೇಲಿನ ಹಕ್ಕಿನ ರಕ್ಷಣೆ ನೀಡಿತ್ತು. ಜೊತೆಗೆ, ಇದು ಬುಡಕಟ್ಟು ಜನರ ಹಿತಾಸಕ್ತಿಯನ್ನು ಕಾಪಾಡುವಲ್ಲಿ ಪ್ರಮುಖ ಘಟ್ಟವಾಗಿತ್ತು.
ಇದಲ್ಲದೇ, ಕನ್ನಡ ನಾಡಿನಲ್ಲಿ ಕನ್ನಡ ಭಾಷೆಗೆ ಬಾಸೆಲ್ ಮಿಷನ್ ಪಾದ್ರಿ ರೆವರೆಂಡ್ ಎಫ್. ಕಿಟೆಲ್ ಅವರ ಸೇವೆ ಸಂದಂತೆ, ಜೆಸ್ವಿತ್ ಪಾದ್ರಿ ಜಾನ್ ಬ್ಯಾಪ್ಟಿಸ್ಟ್ ಹಾಫ್ಮನ್ ಅವರು, ಮುಂಡಾ ಬುಡಕಟ್ಟು ಭಾಷೆಯನ್ನು ಕಲಿತು ಅದರ ವ್ಯಾಕರಣ ಪುಸ್ತಕ ರಚಿಸಿದ್ದಾರೆ. ಜೊತೆಗೆ ವಿಶ್ವವಿದ್ಯಾಲಯಗಳು ಮಾಡಬೇಕಾದ ಗುರುತರ ಕೆಲಸವಾದ ಮುಂಡಾ ಸಂಸ್ಕೃತಿ ಮತ್ತು ನಾಗರಿಕತೆ ಕುರಿತಂತೆ ವಿಶ್ವಕೋಶಗಳ ಮಾದರಿಯಲ್ಲಿ 14 ಹೊತ್ತಿಗೆಗಳನ್ನು ಪ್ರಕಟಿಸಿದ್ದಾರೆ.
ಆದರೆ, ಇಂದಿನ ಅಧಿಕಾರಾರೂಢ ಬಲಪಂಥೀಯ ಆಡಳಿತದಲ್ಲಿ, ಜನಸಮುದಾಯದಲ್ಲಿ ಮೂಡಿಸುತ್ತಿರುವ ದೇಶಪ್ರೇಮ ದೇಶದ್ರೋಹದ ಹೊಸ ಪರಿಭಾಷೆಯಲ್ಲಿ, ಪರದೇಶದ ಧರ್ಮವೆಂದು ಗುರುತಿಸಲಾಗುವ ಕ್ರೈಸ್ತ ಧಾರ್ಮಿಕ ಸಮುದಾಯಕ್ಕೆ ಸೇರಿದ ಜರ್ಮನಿ ಮೂಲದ ಜೆಸ್ವಿತ್ ಪಾದ್ರಿ ಜಾನ್ ಬ್ಯಾಪ್ಟಿಸ್ಟ್ ಹಾಫ್ಮನ್ ಅವರು ಮುಂಡಾ ಬುಡಕಟ್ಟು ಜನರ ಏಳಿಗೆಗಾಗಿ ಮಾಡಿದ ಸೇವೆಯನ್ನು ನೆನೆಸಿ, ಅವರ ಪುತ್ಥಳಿ ನಿಲ್ಲಿಸುವುದು ದೊಡ್ಡ ಅಪರಾಧವಾಗಿ ಬಿಂಬಿತಗೊಳ್ಳುತ್ತಿದೆ.
ಜೆಸ್ವಿತ್ ಪಾದ್ರಿ ಜಾನ್ ಬ್ಯಾಪ್ಟಿಸ್ಟ್ ಹಾಫ್ಮನ್ ಅವರ ಸೇವೆಯನ್ನು ಸ್ಮರಿಸಿ ಅವರ ಪುತ್ಥಳಿ ನಿಲ್ಲಿಸಿ ಗೌರವಿಸುವುದು ಮುಂಡಾ ಬುಡಕಟ್ಟಿನ ಜನ ಭಾವನೆಗಳಿಗೆ ಧಕ್ಕೆ ತಂದಂತಾಗುತ್ತದೆಯಂತೆ! “ಬುಡಕಟ್ಟು ಜನರ ಹಕ್ಕುಬಾಧ್ಯತೆಗಳಿಗಾಗಿ ಮುಂಡಾ ಬುಡಕಟ್ಟು ಜನಾಂಗದ ನಾಯಕ ಬಿಸ್ರಾ ಮುಂಡಾ, ವಿದೇಶಿಗಳು ಅಂದರೆ ಬ್ರಿಟಿಷರ ವಿರುದ್ಧ ಹೋರಾಡಿದ್ದ. ಆದರೆ ಜೆಸ್ವಿತ್ ಪಾದ್ರಿ ಜಾನ್ ಬ್ಯಾಪ್ಟಿಸ್ಟ್ ಹಾಫ್ಮನ್ ಅವರು ಬ್ರಿಟಿಷರ ಜೊತೆ ಕೈಜೊಡಿಸಿದ್ದರು - ಇದು ವಸ್ತುಸ್ಥಿತಿ” ಎಂದು ಜನರ ಮನಸ್ಸಿನಲ್ಲಿ ತುಂಬಲಾಗುತ್ತಿದೆ.
ಮನುಷ್ಯರನ್ನು ಮನುಷ್ಯರಂತೆ ಕಾಣುವುದು, ಅವರಲ್ಲಿ ಪರಿಜ್ಞಾನ ಮೂಡಿಸುವ ಕಾಯಕವಿಂದು ತಪ್ಪಾಗಿ ಕಾಣುತ್ತಿದೆ. ದೇಶದ್ರೋಹವಾಗುತ್ತಿದೆ. ದೇಶದ್ರೋಹ ಮತ್ತು ದೇಶಪ್ರೇಮದ ಹೊಸ ಪರಿಭಾಷೆಯಲ್ಲಿ, ಮುಂಡಾ ಜನರನ್ನು ಮನುಷ್ಯರಂತೆ ಕಂಡು ಅವರ ಸರ್ವತೋಮುಖ ಅಭಿವೃದ್ಧಿಗಾಗಿ, ಪ್ರಗತಿಗಾಗಿ ಶ್ರಮಿಸಿದ್ದ ದಿವಂಗತ ಜೆಸ್ವಿತ್ ಪಾದ್ರಿ ಜಾನ್ ಹಾಫ್ಮನ್ ಅವರ ಪುತ್ಥಳಿ ನಿಲ್ಲಿಸಿದವರು ಇಂದು ಜನದ್ರೋಹದ ಆರೋಪ ಎದುರಿಸಬೇಕಾಗಿದೆ!
*******
No comments:
Post a Comment