ಕಳೆದ ಸಂಚಿಕೆಯಲ್ಲಿ ಶುಭಸಂದೇಶ ಕರ್ತೃ ಸಂತ ಯೋವಾನ್ನರ ಮೂಲವನ್ನು ಮೂರು ಶುಭಸಂದೇಶ (ಮಾರ್ಕ, ಮತ್ತಾಯ, ಲೂಕ) ಗಳಲ್ಲಿ ನೋಡಿದೆವು. ಈಗ ಸಂತ ಯೋವಾನ್ನರ ಶುಭಸಂದೇಶದ ಒಳಗಡೆ ಏನಿದೆ ಎಂಬುದನ್ನು ನೋಡೋಣ ಮತ್ತು ಇತರ ಹೊಸ ಒಡಂಬಡಿಕೆಯ ಪುಸ್ತಕದಲ್ಲಿ ಇದರ ಬಗ್ಗೆ ಮಾಹಿತಿ ಏನಿದೆ ಎಂಬುದನ್ನು ತಿಳಿಯೋಣ.
ಈ ಶುಭಸಂದೇಶದಲ್ಲಿ ನಮಗೆ ಯಾವುದೇ ನಿಖರವಾದ ಮಾಹಿತಿ ಸಿಗುವುದಿಲ್ಲ. ಆದರೆ ಕೆಲವು ವೃತ್ತಾಂತಗಳು ಈ ಪುಸ್ತಕದ ಕರ್ತೃವಿನ ಬಗ್ಗೆ ತಿಳಿಸುತ್ತದೆ. ಅವುಗಳೆಂದರೆ :
1) ಯೋವಾನ್ನ 19: 34 - 35 - ಯೇಸುವನ್ನು ಈಟಿಯಿಂದ ತಿವಿದಾಗ ಅಲ್ಲಿದ್ದು ಕಣ್ಣಾರೆ ಕಂಡವನ ಉಲ್ಲೇಖ.
2) ಯೋವಾನ್ನ 21:24 - ಇವುಗಳಿಗೆ ಶಿಷ್ಯನೇ ಸಾಕ್ಷಿ ಇದನ್ನೆಲ್ಲಾ ಬರೆದಿಟ್ಟವನು ಅವನೆ, ಅವನ ಸಾಕ್ಷಿ ಸತ್ಯವಾದುದು ಎಂದು ನಾವು ಬಲ್ಲೆವು.
3) ಯೋವಾನ್ನ 13:23-26 - ಯೇಸುವಿನ ಪಕ್ಕ ಒರಗಿ ಕುಳಿತಿದ್ದವ.
4) ಯೋವಾನ್ನ 20:1-10 - ಪೇತ್ರನಿಗಿಂತ ಮೊದಲು ತಲುಪಿದ ಶಿಷ್ಯ .
5) ಯೋವಾನ್ನ 1:35-40 - ಅನಾಮಧೇಯ ಶಿಷ್ಯ ಯೇಸುವನ್ನು ಹಿಂಬಾಲಿಸಿದ್ದು.
6) ಯೋವಾನ್ನ 18:15-16 - ಪೇತ್ರ ಮತ್ತು ಇನ್ನೊಬ್ಬ ಶಿಷ್ಯನು ಯೇಸು ಸ್ವಾಮಿಯನ್ನ ಹಿಂಬಾಲಿಸವುದನ್ನ ನೋಡಬಹುದು.- ಇಲ್ಲಿ ಆತ ಪ್ರಧಾನ ಯಾಜಕನಿಗೆ ಚಿರಪರಿಚಿತನಾಗಿದ್ದ ಎಂಬುದು ನಮಗೆ ತಿಳಿಯುತ್ತದೆ.
ಇಲ್ಲಿರುವ ಎಲ್ಲಾ ಉಲ್ಲೇಖಗಳು ಬಹಿರಂಗವಾಗಿ ಜೇಬೆದಾಯನ ಮಗ ಯೋವಾನ್ನ ಎಂಬ ಹೆಸರನ್ನು ತಿಳಿಸುವುದಿಲ್ಲ. ಆಗ ನಮಗೆ ಸಾಮಾನ್ಯವಾಗಿ ಬರುವ ಪ್ರಶ್ನೆ, ಈ ಮನುಷ್ಯ ಯಾರು ಎಂಬುದು. ಉತ್ತರ ನಮಗೆ ಬೈಬಲ್ ಶ್ರೀಗ್ರಂಥದಲ್ಲಿ ಸಿಗದೇ ಇರಬಹುದು ಆದರೆ ನಮಗೆ ಕ್ರೈಸ್ತ ಸಂಪ್ರದಾಯ ತಿಳಿಸುತ್ತದೆ. ನೀವು ಕೇಳಬಹುದು, ಅದು ಹೇಗೆ ಈ ಸಂಪ್ರದಾಯ ಬೈಬಲ್ ಶ್ರೀಗ್ರಂಥಕ್ಕಿಂತ ದೊಡ್ಡದು ಎಂದು. ನಾವು ನಮ್ಮ ಕ್ರೈಸ್ತ ಇತಿಹಾಸವನ್ನು ಮತ್ತು ಧರ್ಮಸಭೆಯ ಬೋಧನೆಯನ್ನು ಗಮನಿಸಿದರೆ ನಮಗೆ ತಿಳಿದು ಬರುವ ವಿಷಯವೇನೆಂದರೆ ನಮ್ಮ ಇಡೀ ವಿಶ್ವಾಸದ ಅಡಿಪಾಯ ನಿಂತಿರುವುದು ಎರಡು ಕಂಬಗಳ ಮೇಲೆ:
1. ದೇವರ ವಾಕ್ಯ
2. ಕ್ರೈಸ್ತ ಪರಂಪರೆಯ ಸಂಪ್ರದಾಯ
ಬೈಬಲ್ ಒಂದು ಗ್ರಂಥವಾಗಿ ಹೊರ ಹೋಗುವ ಮುನ್ನ ಅದು ಇದು ಜನರ ಮೌಖಿಕ ಸಂಪ್ರದಾಯದಲ್ಲಿ ಅಥವಾ ಪರಂಪರೆಯಲ್ಲಿತ್ತು ಎನ್ನುವುದನ್ನು ನಾವು ಮರೆಯುವಂತಿಲ್ಲ, ಅದೇ ಸಂಪ್ರದಾಯದ ಪರಂಪರೆಯು ನಮಗೆ ಯೋವಾನ್ನನೇ ಕರ್ತೃವೆಂದು ತಿಳಿಸುತ್ತದೆ. ಈ ಸಂಪ್ರದಾಯದ ಮರೆಹೊಕ್ಕಾಗ ನಮಗೆ ಕಾಡುವ ಪ್ರಶ್ನೆ. ಈ ಯೋವಾನ್ನ ಯೇಸುವಿನ ಬರೀ ಹಿಂಬಾಲಕನೇ ಆರಿಸಿಕೊಂಡ ಹನ್ನೆರಡು ಮಂದಿಯಲ್ಲಿ ಒಬ್ಬನಾದ ಪ್ರೇಷಿತನೇ ಎಂಬುದು. ಕಡೆಯರಾತ್ರಿ ಭೋಜನದ ಸಮಯದಲ್ಲಿ ಹನ್ನೆರಡು ಮಂದಿ ಇದ್ದರು ಎಂದು ನಮಗೆ ಮೂರು ಶುಭಸಂದೇಶಗಳು ಸ್ಪಷ್ಟಪಡಿಸುತ್ತವೆ. ಈ ಹನ್ನೆರಡು ಮಂದಿ ಬಿಟ್ಟು ಬೇರೆ ಯಾರಾದರೂ ಇದ್ದರೆ ಎಂಬುದು ಕುತೂಹಲಕಾರಿ ಪ್ರಶ್ನೆ? ಯೋವಾನ್ನರ ಶುಭಸಂದೇಶದ ವಿಷಯದಲ್ಲಿ ಈ ಪ್ರಶ್ನೆ ಬಹಿರಂಗವಾಗಿ ಉಳಿದಿದೆ. ಐತಿಹಾಸಿಕ ಹಿನ್ನೆಲೆ ಪ್ರಕಾರ - ಕಡೆಯ ರಾತ್ರಿ ಭೋಜನದ ಸಮಯದಲ್ಲಿ ಸ್ಥಳ ನೀಡಿದವ ಬಹುಶಃ ಹಿಂಬಾಲಕ ಆಗಿರಬಹುದು. ಆತ ಕಡೆಯ ರಾತ್ರಿ ಭೋಜನದ ಸಮಯದಲ್ಲಿ ಯೇಸುವಿನ ಹತ್ತಿರವಿದ್ದು ಭಾಗವಹಿಸಿದ್ದರಬಹುದು. ಅವನ ಹೆಸರು ಕೂಡ ಯೋವಾನ್ನ ಆಗಿರಬಹುದು. ಅವನೊಬ್ಬ ತುಂಬಾ ಪರಿಣಾಮಕಾರಿ ಹಾಗೂ ಪ್ರತಿಷ್ಠಿತ ವ್ಯಕ್ತಿಯಾಗಿರಬಹುದು. ಅವನಿಗೆ ಜೇರುಸಲೆಂ ನಗರದಲ್ಲಿ ಮೇಲ್ ಕೋಣೆ ಇರುವ ಒಂದು ಮನೆ ಇತ್ತು. ಆದ್ದರಿಂದ ಕೆಲವರು ಈ ಶುಭಸಂದೇಶವನ್ನು ಬಹುಶಃ ಪ್ರೇಷಿತ ಯೋವಾನ್ನನಲ್ಲ ಈ ಯೋವಾನ್ನ ಬರೆದಿರುವುದು ಎನ್ನಲಾಗುತ್ತದೆ.
ಇನ್ನೊಂದು ಪ್ರಶ್ನೆಗೆ ನಾವು ಉತ್ತರಿಸಬೇಕಾದ ಅನಿವಾರ್ಯತೆ ಇದೆ. ಏಕೆ ಯೋವಾನ್ನ ಎಂಬ ಹೆಸರು ಶುಭಸಂದೇಶದಲ್ಲಿ ಬಂದಿಲ್ಲ? ಇದಕ್ಕೆ ಕಾರಣ ಆ ವ್ಯಕ್ತಿಯಲ್ಲಿ ಇದ್ದಂತಹ ನಮ್ರತೆ ಮತ್ತು ದೀನತೆಯೇ ಕಾರಣ. ತನ್ನನ್ನೇ ತಾನು ತಗ್ಗಿಸಿಕೊಳ್ಳಲು ದೇವರು ಮುಂದೆ ಮೇಲೆ ಇಡುತ್ತಾನೆ ಎನ್ನುವ ಮಾತನ್ನು ಇವರು ನಂಬಿ ಯೇಸುವಿನ ಆಪ್ತ ಶಿಷ್ಯ ಎಂದು ಬರೆದುಕೊಂಡಿದ್ದಾರೆ ಅಷ್ಟೇ. ಅನಾಮಧೇಯತೆ- ಈ ಶುಭಸಂದೇಶದಲ್ಲಿ ಅನೇಕ ಕಡೆಗಳಲ್ಲಿ ಅನಾಮಧೇಯತೆಯನ್ನು ನಾವು ಕಾಣುತ್ತೇವೆ. ಇದೊಂದು ಯೋವಾನ್ನರ ವೈಶಿಷ್ಟತೆಯು ಕೂಡ ಹೌದು. ವ್ಯಭಿಚಾರಿ ಸ್ತ್ರೀ ಬಗ್ಗೆ ಇಲ್ಲಿ ಹೆಸರು ಇಲ್ಲ. ಮತ್ತಾಯನ ಹೆಸರು ಇಲ್ಲಿ ಬರೆಯಲಾಗಿದೆ. ಹುಟ್ಟು ಕುರುಡನ ಹೆಸರು ಬರೆಯಲಾಗಿಲ್ಲ ಆದರೆ ಲಾಜರನ ಹೆಸರು ಬರೆಯಲಾಗಿದೆ. ಆದರೆ ಮಾತೆ ಮರಿಯಳ ಹೆಸರು ಬರೆದಿಲ್ಲ. ಬಹುಶಃ ಈ ಶುಭಸಂದೇಶವನ್ನು ಪ್ಯಾಲಸ್ತಿನ್ ದೇಶದ ಜೆರುಸಲೇಮಿಗೆ ಬಂದವನು ಒಬ್ಬ ಯಹೂದಿ ಬರೆದಿರಬಹುದು. ಆತ ಲೇವಿ ಕುಲದವನು ಮತ್ತು ಆಳವಾದ ದೈವ ಶಾಸ್ತ್ರದ ಜ್ಞಾನ ಉಳ್ಳವರಾಗಿದ್ದನು. ಅವನು ಯೇಸುಸ್ವಾಮಿಯಯೊಡನೆ ಪ್ರತ್ಯೇಕವಾಗಿ ಜೇರೂಸಲೇಮಿನಲ್ಲಿ ಸಂಚರಿಸಿದ್ದನು. ಆತ ಭವಿಷ್ಯ ಯಾಕೋಬನ ಶಿರಚ್ಛೇದನದ ನಂತರ ಅಲ್ಲಿಂದ ದೂರ ಹೋಗಿ ಅದನ್ನು ಅಲ್ಲೇ ಬರೆದು ಕೊನೆಗೊಳಿಸಿ ರಬಹುದು ಈ ಶುಭಸಂದೇಶವನ್ನು. ಕೆಲವರು ಅವರನ್ನು ರಾಜರ ಜೊತೆ ತಾಳೆ ಹಾಕುತ್ತಾರೆ (ಯೋವಾನ್ನ 11:35) ಮತ್ತು ಶ್ರೀಮಂತ ಹುಡುಗ ಅವನ ಮೇಲೆ ಯೇಸುವಿಗೆ ಪ್ರೀತಿ ಇತ್ತು ಆ ಶ್ರೀಮಂತ ಹುಡುಗ ಈ ಶುಭಸಂದೇಶವನ್ನು ಬರೆದಿರಬಹುದು ಎನ್ನುವ ಮಾತು ಕೂಡ ಇದೆ ( ಮಾರ್ಕ 10:2). ಶುಭಸಂದೇಶವು ಇದು ಯಾವುದರ ಬಗ್ಗೆನೂ ಉಲ್ಲೇಖಿಸುವುದಿಲ್ಲ. ಸಂಪ್ರದಾಯವು ಯಾವಾಗಲೂ ಆಪ್ತ ಶಿಷ್ಯ ನನ್ನ ಯೋವಾನ್ನನ ಜೊತೆ ತಾಳೆಹಾಕುತ್ತದೆ. ಅದಕ್ಕಾಗಿ ಅದರ ಬಗ್ಗೆ ಸಂಶಯಿಸುವುದು ಅಗತ್ಯವಿಲ್ಲ ಎನಿಸುತ್ತದೆ.
*******
No comments:
Post a Comment