
ಕ್ರೈಸ್ತರಾದ ನಾವೆಲ್ಲರೂ ಪ್ರತಿದಿನ ಬಲಿಪೂಜೆಯಲ್ಲಿ ಒಂದೇ ಕುಟುಂಬದವರಂತೆ ಪರಮಪ್ರಸಾದದ ಭೋಜನದಲ್ಲಿ ಭಾಗವಹಿಸುತ್ತೇವೆ. ಯಾವುದೇ ಒಂದು ಭೋಜನಕೂಟದಲ್ಲಿ ಕುಟುಂಬದ ಎಲ್ಲಾ ಸದಸ್ಯರು ಇಲ್ಲದ್ದರೆ ಔತಣದಲ್ಲಿ ಸಂತೋಷವಿರಲು ಸಾಧ್ಯವಿಲ್ಲ. ಅಂತೆಯೇ ಪ್ರತಿದಿನ ಬಲಿಪೂಜೆಯ ನಿತ್ಯಭೋಜನದಲ್ಲಿ ಭಾಗವಹಿಸುವಾಗ ನಮ್ಮ ಕ್ರೈಸ್ತ ಕುಟುಂಬದ ಎಲ್ಲಾ ಸದಸ್ಯರು ಉಪಸ್ಥಿತರಾಗದಿರುವುದು ವಿಪರ್ಯಾಸವಲ್ಲವೇ? ಐಕ್ಯತೆಯ ಕುರಿತು ಬೋಧಿಸುವ ನಾವು ಐಕಮತ್ಯದಿಂದ ಜೀವಿಸದಿದ್ದಲ್ಲಿ ನಮ್ಮ ಬೋಧನೆಗೆ ಅರ್ಥವಿದೆಯೇ? ಸಂತ ಪೌಲರು ಕೊರಿಂಥಿಯರಿಗೆ ಬರೆದ ಮೊದಲನೇ ಪತ್ರ 12: 13 ರಲ್ಲಿ ಐಕ್ಯತೆಯ ಕುರಿತು ಹೀಗೆನ್ನುತ್ತಾರೆ: “ಯೆಹೂದ್ಯರಾಗಲಿ, ಗ್ರೀಕರಾಗಲಿ, ಪರತಂತ್ರರಾಗಲಿ, ಸ್ವತಂತ್ರರಾಗಲಿ, ನಾವೆಲ್ಲರೂ ಒಂದೇ ದೇಹವಾಗುವಂತೆ ಒಂದೇ ಆತ್ಮದಿಂದ ದೀಕ್ಷಾಸ್ನಾನ ಹೊಂದಿದ್ದೇವೆ. ಒಂದೇ ಆತ್ಮವನ್ನು ನಮ್ಮೆಲ್ಲರಿಗೂ ಪಾನವಾಗಿ ಕೊಡಲಾಗಿದೆ” ಎನ್ನುತ್ತಾರೆ. ಅಲ್ಲದೆ ಧರ್ಮಸಭೆಯನ್ನು ಕ್ರಿಸ್ತಯೇಸುವಿನ ಶರೀರದ ಅಂಗ ಎಂದು ತಿಳಿಸುತ್ತಾರೆ.
ಆದರೆ ಇಂದು ಕ್ರಿಸ್ತನ ಹೆಸರಿನಲ್ಲಿ ಒಂದೇ ದರ್ಮಸಭೆಯನ್ನು ಹಲವು ಪಂಗಡಗಳಾಗಿ ವಿಭಜಿಸಿಕೊಂಡು ಬಾಳುತ್ತಿರುವುದು ವಿಪರ್ಯಾಸವೇ ಸರಿ. ಇಂದು ಧರ್ಮಸಭೆಯಿಂದ ಹಲವಾರು ಮಂದಿ ಹೊರಬಂದು ತಮಗೆ ತೋಚಿದ ಹಾಗೆ ಒಂದೊಂದು ಪಂಗಡವನ್ನು ಕಟ್ಟಿಕೊಂಡು ತಾವು ಕ್ರಿಸ್ತರ ಹಿಂಬಾಲಕರು ಎಂಬುದನ್ನು ತೋರ್ಪಡಿಸುತ್ತಿದ್ದಾರೆ. ಪವಿತ್ರ ಬೈಬಲನ್ನು ಸರಿಯಾಗಿ ಓದಿ, ಅದರ ಹಿನ್ನೆಲೆಯನ್ನು ಅರ್ಥ ಮಾಡಿಕೊಳ್ಳದೆ ಮತ್ತು ಧರ್ಮಸಭೆಯು ಪವಿತ್ರಾತ್ಮರ ಪ್ರಭಾವದಿಂದ ನೀಡುವ ಬೋಧನೆಗಳನ್ನು ಅಲ್ಲಗಳೆದು ತಾವೇ ಸ್ವತಃ ಯೇಸುವನ್ನು ಕಂಡುಕೊಳ್ಳುತ್ತೇವೆ ಎಂಬ ಹುಚ್ಚುತನದಲ್ಲಿ ಪಂಗಡಗಳನ್ನು ಸರಮಾಲೆಯಂತೆ ಹುಟ್ಟುಹಾಕುತ್ತಿದ್ದಾರೆ. ಆದ್ದರಿಂದ ಈ ಎಲ್ಲಾ ರೀತಿಯ ಅತಿರೇಕದ ನಿಲುವುಗಳನ್ನು ಬದಿಗಿರಿಸಿ, ಧರ್ಮಸಭೆಯ ಹೊರಗಡೆ ನೆಲೆಸಿರುವ ಪಂಗಡಗಳು ಪವಿತ್ರಾತ್ಮರ ಪ್ರಭಾವದಿಂದ ತುಂಬಿ ಏಕ ಪವಿತ್ರ ಕಥೋಲಿಕ ಮತ್ತು ಪ್ರೇಷಿತ ಧರ್ಮಸಭೆಯನ್ನು ಆದಷ್ಟು ಬೇಗ ಬಂದು ಸೇರುವಂತಾಗಲಿ. ಅಂತೆಯೇ ನಾವು ಹೊಂದುವ ದ್ಯೆವೀಕ ಶಿಕ್ಷಣವು ನಮ್ಮ ಸಂಕುಚಿತ ಮನೋಭಾವನೆಯನ್ನು ಹೋಗಲಾಡಿಸಿ, ಧರ್ಮಸಭೆಗೆ ಯೇಸುವೇ ನಿಜವಾದ ಅಡಿಗಲ್ಲು ಎಂಬ ನಿಜಾರ್ಥವನ್ನು ತಿಳಿಯಪಡಿಸಲಿ. ಯೇಸುಕ್ರಿಸ್ತರಿಗೋಸ್ಕರ ನಾವೆಲ್ಲರೂ ಒಂದಾಗೋಣ.
*******
No comments:
Post a Comment