ದೇಶದಲ್ಲಿ ಈ ದಿನಗಳ ವಿದ್ಯಮಾನಗಳ ಬಗ್ಗೆ ತಿಳಿದೇ ಇದೆ. ಜನವರಿ 30 ರಂದು ಮಹಾತ್ಮ ಗಾಂಧಿಯವರ ಹತ್ಯೆಯಾದ ದಿನವನ್ನು ‘ಹುತಾತ್ಮರ ದಿನ' ಎಂದು ದೇಶಾದ್ಯಂತ ಆಚರಣೆ ಮಾಡುತ್ತಿದ್ದರೆ, ಉತ್ತರ ಪ್ರದೇಶದಲ್ಲಿ ಹಿಂದೂ ಮಹಾಸಭಾದ ಕಾರ್ಯಕರ್ತರು ಗಾಂಧೀಜಿಯವರ ಪ್ರತಿಕೃತಿಯನ್ನು ನಿರ್ಮಿಸಿ ಅದಕ್ಕೆ ನಕಲಿ ಬಂದೂಕಿನಿಂದ ಗುಂಡಿಕ್ಕಿ ಕೊಲ್ಲುವಂತೆ ಅಣುಕು ಮಾಡಿ ಗಾಂಧೀಯವರನ್ನು ಖಂಡಿಸಿ ನಾಥೂರಾಮ್ ಗೋಡ್ಸೆಯವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಅವನ ಪರ ಜೈಕಾರ ಕೂಗುತ್ತಾ ಸಿಹಿ ಹಂಚಿ, ಶೌರ್ಯದಿನಾಚರಣೆಯನ್ನು ಆಚರಿಸಿಕೊಂಡ ವಿಕೃತಿಯ ವರದಿಯಾಯಿತು.

ಈ ಎಲ್ಲಾ ಆಸಕ್ತಿಕರ ಡ್ರಾಮಾಗಳ ಜತೆ, ಈ ದಿನಗಳಲ್ಲಿ ನಮ್ಮನ್ನು ಹೆಚ್ಚು ಕಾಡುತ್ತಿರುವ ವಿಷಯ ಉಗ್ರರ ಹೇಯಕೃತ್ಯಕ್ಕೆ ಬಲಿಯಾದ ಸುಮಾರು 47 ಯೋಧರ ದುರ್ಮರಣ. ಪ್ರತಿಯೊಂದನ್ನು ತಮ್ಮ ರಾಜಕೀಯ ಲಾಭಕ್ಕೆ ಬಳಸಿಕೊಳ್ಳುತ್ತಿರುವ ರಾಜಕೀಯ ಪಕ್ಷಗಳಿಗೆ ಈ ಘಟನೆ ಹೇಳಿ ಮಾಡಿಸಿದಂತಿದೆ. ತಮ್ಮ ವೈಫಲ್ಯಗಳ ಬಗ್ಗೆ ಚಿಂತಿಸಿ ಸರಿಯಾದ ಕ್ರಮಗಳನ್ನು ಕೈಗೊಳ್ಳದೆ, ಯುದ್ಧ, ರಾಷ್ಟ್ರಪ್ರೇಮ ಬಗ್ಗೆ ಜೋರಾಗಿ ಕಿವಿಗಳು ತೂತಾಗುವಂತೆ ಅಬ್ಬರಿಸುತ್ತಿದ್ದಾರೆ. ಕೆಲವು ಟಿವಿ ಚಾನೆಲ್‍ಗಳಂತೂ ಮೂರೂ ಬಿಟ್ಟವರಂತೆ ಸುಳ್ಳುಗಳ ಮೇಲೆ ಸುಳ್ಳುಗಳನ್ನು ಪೋಣಿಸಿ, ನಕಲಿ ಸುದ್ಧಿಗಳನ್ನು ಬಿತ್ತರಿಸಿ ಜನರನ್ನು ಮರಳು ಮಾಡುತ್ತಿದ್ದಾರೆ. ಅಷ್ಟೇ ಅಲ್ಲ ಒಂದು ರಾಜಕೀಯ ಪಕ್ಷದ ಜೊತೆ ಕೈಜೋಡಿಸಿ ತಮ್ಮ ಪವಿತ್ರ ಕರ್ತವ್ಯವನ್ನು ಮರೆತಿದ್ದಾರೆ. ಒಟ್ಟಿನಲ್ಲಿ ಮಾಧ್ಯಮಗಳು ರಾಜಕೀಯ ಪಕ್ಷದ ಪ್ರಚಾರ ರಾಯಭಾರಿಗಳಾಗಿವೆಯೇ ಹೊರತು ನೈಜ ಸುದ್ದಿಗಳನ್ನು ಬಿತ್ತರಿಸುವ ಮಾಧ್ಯಮಗಳಾಗಿಲ್ಲ ಎಂಬುದು ಸಾಬೀತಾಗಿದೆ. ಕೆಲ ಸಂಘಟನೆಗಳಂತೂ ಕಾಶ್ಮೀರಿಗಳನ್ನು ಗುರಿಯಾಗಿಸಿಕೊಂಡು ಅವರ ಮೇಲೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಹಲ್ಲೆ ಮಾಡುತ್ತಿವೆ.
ನಾನು ಕೆಲವೊಂದು ಹಸಿ ಹಸಿ ಆತಂಕಕಾರಿ ಘಟನೆಗಳನ್ನು ನಿಮ್ಮ ಮುಂದಿಟ್ಟಿದ್ದೇನೆ. ಈ ಘಟನೆಗಳು ದೇಶವು ಎತ್ತ ಸಾಗುತ್ತಿದೆ ಎಂದು ಹೇಳುವ ಮಾರ್ಗಸೂಚಿಗಳೆಂದೇ ಹೇಳಬಹುದು. ಕೆಟ್ಟ ಮೇಲೆ ಬುದ್ಧಿ ಬರುವುದಲ್ಲ, ಕೆಡುವ ಮೊದಲೇ ಎಚ್ಚರ ವಹಿಸಬೇಕು. ಏಕೆಂದರೆ ದುಷ್ಟರು ತಂದೊಡ್ಡುವ ವಿನಾಶವನ್ನು ಸರಿಪಡಿಸಲು ಶತಮಾನಗಳೇ ಬೇಕಾಗಬಹುದು. ಒಂದು ಮಾತಿನಲ್ಲಿ ಹೇಳಬೇಕಾದರೆ, ಫ್ಯಾಸಿಸ್ಟ್ ಮನಸ್ಸಿನ ಪಕ್ಷ ಮತ್ತು ಲಾಭಕೋರ ಕಂಪನಿಗಳು ಜೊತೆಗೂಡಿ ನಮ್ಮ ದೇಶವನ್ನು ಆಳುತ್ತಿರುವುದು ಬಹು ಸ್ಪಷ್ಟ. ದೇಶದ ಸಂವಿಧಾನದ ಆಶಯಗಳ ವಿರೋಧೀತತ್ವಗಳನ್ನು ಅಪ್ಪಿಕೊಂಡಿರುವ ಇವರುಗಳಿಂದ ದೇಶದ ಪ್ರಗತಿ ಕಾಣುವುದು, ಶಾಂತಿ ಸಮಾನತೆಗಳನ್ನು ಬಯಸುವುದು ಆಕಾಶದ ನಕ್ಷತ್ರವನ್ನು ಅಂಗೈಯಲ್ಲಿ ಬಯಸುವಷ್ಟೇ ಕಷ್ಟಸಾಧ್ಯ.
ಇಂಥ ಪರಿಸ್ಥಿತಿಯಲ್ಲಿ ದೇಶದ ಉಳಿವಿಗೆ ಬುದ್ಧಿಜೀವಿಗಳ ಅವಶ್ಯಕತೆಯಿದೆ. ಬುದ್ಧಿಜೀವಿಗಳನ್ನು ದೇಶದ್ರೋಹ ಹೆಸರಿನಲ್ಲಿ ನಿಂದಿಸುತ್ತಿರುವುದು ಮತ್ತು ಅವರ ದನಿಗಳನ್ನು ಹತ್ತಿಕ್ಕಲು ಹಲ್ಲೆಗಳನ್ನು ನಡೆಸುತ್ತಿರುವುದನ್ನು ಸಹ ದೇಶ ಕಾಣುತ್ತಿದೆ. ಅದರೂ ಬುದ್ಧಿಜೀವಿಗಳು ವಸ್ತುನಿಷ್ಟರಾಗಿ ನಿಷ್ಠುರವಾಗಿ ಮಾತನಾಡಬೇಕಿದೆ. ಸಮಾಜಕ್ಕೆ ಒಗ್ಗಿಕೊಂಡೇ, ಸಮಾಜದಿಂದ ಹೊರನಿಂತು ಅವಲೋಕಿಸುವ, ವಿಶ್ಲೇಷಿಸಿ ಜನರಿಗೆ ಸತ್ಯವನ್ನು ತಿಳಿಸುವ ಪವಿತ್ರ ಕಾರ್ಯವನ್ನು ಮಾಡಬೇಕಾಗಿದೆ. ಬುದ್ಧಿ, ಜ್ಞಾನದ ಜತೆಗೆ ನೈತಿಕತೆಯ ತೀಕ್ಷ್ಣತೆ ಅವರಿಲ್ಲಿರಬೇಕಾಗಿದೆ. ನಮ್ಮ ಜನನಾಯಕರು ಸುಳ್ಳುಗಳಿಂದ, ತಮ್ಮ ಮಾತುಗಾರಿಕೆಯಿಂದ ಜನರನ್ನು ಮರುಳು ಮಾಡುತ್ತಿದ್ದಾರೆ. ಆದರೆ ಚರ್ಚೆ ಸಂವಾದ ನಡೆಸಲು ಅವರು ಭಯಪಡುತ್ತಾರೆ. ನಮಗೆ ಬೇಕಾಗಿರುವುದು ಏಕಮುಖ ಭಾಷಣಗಳಲ್ಲ. ಸತ್ಯಗಳನ್ನು ವಾಸ್ತವವನ್ನು ಬಯಲಾಗಿಸುವ ಸಂವಾದ ಚರ್ಚೆಗಳು.
ಬುದ್ಧಿಜೀವಿಗಳು ಚರ್ಚೆ ಸಂವಾದಗಳಲ್ಲಿ ಭಾಗವಹಿಸಿ ಸತ್ಯಗಳನ್ನು ಹೊರತರಬೇಕಾಗಿದೆ, ಜನನಾಯಕರ ಅಸಲಿ ಮುಖವಾಡಗಳನ್ನು ಕಳಚಬೇಕಾಗಿದೆ. ಮರಳುಗಾಡಿನಲ್ಲಿ ಗಟ್ಟಿಯಾಗಿ ಕೂಗುವ ಪ್ರವಾದಿಯ ದನಿ ಅವರಾಗಬೇಕು. ಅವರ ಮಾತುಗಳು ಖಡ್ಗದಂತೆ ಹರಿತವಾಗಿರಬೇಕಲ್ಲದೆ ಅವರ ನಡೆಗಳು ಸಹ ಮಹತ್ತ್ವಪೂರ್ಣವಾಗಿರಬೇಕು. ಸುಳ್ಳುಗಳನ್ನು ಸತ್ಯವೆಂದು ನಂಬಿಸಿ ಮೋಸ ಮಾಡುವ ಪ್ರಭುತ್ವಕ್ಕೆ ಸತ್ಯವನ್ನು ಸಾರಿ ಹೇಳಬೇಕು. ಇಂದಿನ ರಾಜಕೀಯವು ಬಿಳಿಯನ್ನು ಕಪ್ಪೆಂದು ಕಪ್ಪನ್ನು ಬಿಳಿಯೆಂದು ನಂಬಿಸುವ ಪ್ರಚಾರ ಮತ್ತು ಪ್ರದರ್ಶನಗಳ ಮೇಲೆ ನಡೆಯುತ್ತಿದೆ. ಇಂತಹ ಕೆಟ್ಟ ಚಾಳಿಗೆ ಮಾಧ್ಯಮಗಳೂ ಕೂಡಿಕೊಂಡಿವೆ.
ನಮ್ಮ ದೇಶದ ಇನ್ನೊಂದು ದುರಂತವೆಂದರೆ ಬುದ್ಧಿಜೀವಿಗಳು ಕಣ್ಮರೆಯಾಗುತ್ತಿದ್ದಾರೆ. ವ್ಯವಸ್ಥೆಯನ್ನು ಒಪ್ಪಿಕೊಂಡು ಅನುಸರಿಸಿ ನಡೆಯುವರಿಗೆ ಪ್ರಭುತ್ವ ಮಣೆ ಹಾಕುತ್ತಿದೆ. ಬುದ್ಧಿಜೀವಿಗಳ ಬಾಯಿ ಮುಚ್ಚಿಸಲು ವ್ಯವಸ್ಥೆಯನ್ನು ದುರುಪಯೋಗ ಮಾಡುಕೊಳ್ಳುತ್ತಿರುವ ಪ್ರಭುತ್ವದ ವಿರುದ್ಧ ದೈರ್ಯವಾಗಿ ಮಾತನಾಡಬೇಕು. ವ್ಯವಸ್ಥೆಯ ಹೊರನಿಂತು ವ್ಯವಸ್ಥೆಯ ನೀತಿಗಳನ್ನು ತೂಗಿ ಅಳೆಯಬೇಕಾಗಿದೆ. ನಾವು ಬಂಡಾಯವೇಳಬಾರದು. ಪ್ರೀತಿಯಿಂದಲೇ ಜನರ ತಪ್ಪುಒಪ್ಪುಗಳನ್ನು ತೋರಿಸಬೇಕು.
ಸೂರ್ಯ ಭೂಮಿಯ ಸುತ್ತ ಸುತ್ತುತ್ತಿದೆ ಎಂದು ನಂಬಿದ ಜನರಿಗೆ ಕೋಪರ್ನಿಕಸ್ ’ಇಲ್ಲ ಭೂಮಿಯೇ ಸೂರ್ಯನ ಸುತ್ತ ಸುತ್ತುತ್ತಿದೆ' ಎಂದು ಹೇಳಿದಾಗ ದೊಡ್ಡ ಮಟ್ಟದಲ್ಲೆ ಅವನಿಗೆ ಅಡೆತಡೆಗಳು ಎದುರಾದವು. ಅವನ ಜತೆಗೆ ಗೆಲಿಲಿಯೋ ಮತ್ತು ಬ್ರುನೋ ಕೂಡ ಸೇರಿಕೊಂಡು ತಮ್ಮ ವಾದವನ್ನು ಮಂಡಿಸಿದರು. ಆದರೆ ಅವರನ್ನು ಜೈಲಿಗೆ ತಳ್ಳಲಾಯಿತು. ಸಾಯುವವರೆಗೂ ಗೃಹಬಂಧನದಲ್ಲಿ ಇರಿಸಲಾಯಿತು. 1642ರಲ್ಲಿ ಗೆಲಿಲಿಯೋ ಮರಣವಪ್ಪಿದಾಗ ಆತನನ್ನು ಕ್ರೈಸ್ತರ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ಮಾಡುವುದಕ್ಕೂ ಬಿಡಲಿಲ್ಲ. ಇನ್ನೊಬ್ಬನನ್ನು ಬೆಂಕಿಯಲ್ಲಿ ಸುಡಲಾಯಿತು. ಹೌದು ಸಮಾಜದ ನಂಬಿಕೆಯ ಬುಡವನ್ನು ಅಲುಗಾಡಿಸುವ ಯಾವುದೇ ಪ್ರಯತ್ನಕ್ಕೆ ದೊಡ್ಡ ಮಟ್ಟದಲ್ಲೇ ಅಡೆತಡೆಗಳು ಎದುರಾಗುತ್ತವೆ. ಆದರೆ ಬುದ್ಧಿಜೀವಿಗಳು ಸತ್ಯವನ್ನು ಮಾತ್ರ ಬಿಡಬಾರದು.
ಹೌದು ಭಾರತದ ಇಂದಿನ ಪರಿಸ್ಥಿತಿಯನ್ನು ಅವಲೋಕಿಸಿದಾಗ ಬುದ್ಧಿಜೀವಿಗಳ ಅವಶ್ಯಕತೆಯ ಬಗ್ಗೆ ನಮಗೆ ಹೆಚ್ಚು ಹೆಚ್ಚು ಮನವರಿಕೆಯಾಗುತ್ತಿದೆ. ಪ್ಲೇಟೋ ತನ್ನ ಗ್ರಂಥವಾದ "ರಿಪಬ್ಲಿಕ್" ನಲ್ಲಿ ಕತ್ತಲೆ ಬೆಳಕುಗಳನ್ನು ಹಿನ್ನೆಲೆಯಾಗಿಟ್ಟುಕೊಂಡು, ಜ್ಞಾನಿಯಾದ ವ್ಯಕ್ತಿಯ ಕರ್ತವ್ಯವನ್ನು ಸಮಾಜದ ವಿಷಯದಲ್ಲಿ ಅವನು ಹೊರಬೇಕಾದ ಹೊಣೆಗಾರಿಕೆಯನ್ನು ಸ್ವಾರಸ್ಯಪೂರ್ಣವಾಗಿ ಗುಹೆಯ ದೃಷ್ಟಾಂತದ ಮೂಲಕ ವಿವರಿಸಿದ್ದಾನೆ. ‘ಒಂದು ಗುಹೆಯಿದೆ. ಅದಕ್ಕೆ ಕಿರಿದಾದ ಬಾಗಿಲಿದೆ. ಗುಹೆಯ ಒಳಗಡೆ ಕತ್ತಲು ತುಂಬಿದೆ; ಅದರಲ್ಲಿ ಸಾಮಾನ್ಯ ಮನುಷ್ಯರು ಅಜ್ಞಾನದ ಸಂಕೋಲೆಗಳಿಂದ ಬಿಗಿಯಲ್ಪಟ್ಟಿದ್ದಾರೆ. ಅವರ ಬೆನ್ನು ಬಾಗಿಲಿನ ಕಡೆಗಿರುವುದರಿಂದ ಅವರು ಹಿಂತಿರುಗಿ ನೋಡಲಾರರು; ಅವರು ಮುಂದೆ ಇರುವ ಗೋಡೆಯನ್ನು ಮಾತ್ರ ನೋಡಬಲ್ಲರು. ಗುಹೆಯ ಆಚೆ ಸೂರ್ಯನಿದ್ದಾನೆ; ಸತ್ಯವಾದ ವಸ್ತುಗಳೂ ಇವೆ; ಸೂರ್ಯನ ಕಿರಣಗಳ ದೆಸೆಯಿಂದ ಆ ವಸ್ತುಗಳ ನೆರಳು ಗುಹೆಯೊಳಗಿನ ಗೋಡೆಯ ಮೇಲೆ ವಿಕಾರವಾಗಿ ಕಾಣುತ್ತದೆ. ಆ ನೆರಳನ್ನೇ ಸತ್ಯವೆಂದು ಭ್ರಮಿಸುತ್ತಾರೆ ಗುಹೆಯೊಳಗಿನ ಜನ. ಆದರೆ ಅವರಲ್ಲಿ ಒಬ್ಬ ತನ್ನ ಅಜ್ಞಾನದ ಸಂಕೋಲೆಗಳಿಂದ ವಿಮುಕ್ತನಾಗಿ ಗುಹೆಯಿಂದ ಆಚೆ ಬಂದು ಬೆಳಕನ್ನು ಕಾಣುತ್ತಾನೆ, ಅಲ್ಲಿರುವ ಸತ್ಯವನ್ನು ಅರಿಯುತ್ತಾನೆ. ಅವನು ತತ್ತ್ವಜ್ಞಾನಿ. ತಾನು ಕಂಡ ಸತ್ಯವನ್ನು ಇತರರಿಗೂ ತೋರಿಸಬೇಕೆಂದು, ಗುಹೆಯೊಳಗೆ ಹೋಗಿ ಅವರ ಅಜ್ಞಾನದ ಸಂಕೋಲೆಗಳನ್ನು ಕತ್ತರಿಸಿ, ಬೆಳಕನ್ನು ತೋರಿಸುವುದಕ್ಕಾಗಿ ಅವರನ್ನು ಬಲವಂತವಾಗಿ ಗುಹೆಯಿಂದ ಆಚೆಗೆ ಕರೆತರುತ್ತಾನೆ. ಆದರೆ ಕತ್ತಲೆಯಲ್ಲೇ ಇದ್ದ ಅವರಿಗೆ ಬೆಳಕನ್ನು ಕಾಣುವುದು ಕಷ್ಟವಾಗುತ್ತದೆ. ಇದರಿಂದ ಅವರು ಪುನಃ ಗುಹೆಯೊಳಗೆ ಹೊಕ್ಕು ಅಲ್ಲಿಯೇ ಇರಲು ಬಯಸುತ್ತಾರೆ. ಆದರೆ ತತ್ತ್ವಜ್ಞಾನಿಯು ಅವರನ್ನು ಅಲ್ಲಿ ಇರಗೊಡುವುದಿಲ್ಲ. ಮತ್ತೆ ಮತ್ತೆ ಪಯತ್ನಿಸಿ ಅವರನ್ನು ಅಜ್ಞಾನದಿಂದ ಹೊರತಂದು ಅವರಿಗೆ ಸತ್ಯದ ದರ್ಶನವನ್ನು ಅಭ್ಯಾಸ ಮಾಡಿಸುತ್ತಾನೆ. ಈ ರೀತಿ ಜ್ಞಾನಿಯಾದವನು ತಾನು ಮಾತ್ರ ಜ್ಞಾನಿಯಾಗಿದ್ದರೆ ಸಾಲದು. ಇತರರೂ ಅದನ್ನು ಪಡೆಯುವಂತೆ ಮಾಡಬೇಕಾದುದು ಅವನ ಕರ್ತವ್ಯ.
ಈ ದೃಷ್ಟಾಂತದಲ್ಲಿ ಅತಿ ಮುಖ್ಯವಾದ ತತ್ವಗಳು ಅಡಗಿವೆ. ಮೊದಲನೆಯದು ತಾನು ಪಡೆದುಕೊಂಡ ಜ್ಞಾನವನ್ನು ಇತರರಿಗೂ ನೀಡಬೇಕೆಂದು ಬೋಧಿಸುತ್ತದೆ. ಎರಡನೆಯದಾಗಿ, ಜ್ಞಾನಿಯಾದವನು ಕೇವಲ ವೀಕ್ಷಕನಾಗಿದ್ದರೆ ಸಾಲದು ಅವಶ್ಯಕತೆ ಏರ್ಪಟ್ಟಾಗ, ಕ್ರಿಯಾಶೀಲನಾಗಿ ಮುನ್ನುಗ್ಗಿ ಸಮಾಜವನ್ನು ರಕ್ಷಿಸಬೇಕು ಎನ್ನುತ್ತದೆ.
ಕ್ರಿಸ್ತ ಮಾಡಿದ್ದು ಅದನ್ನೇ. ಅಂಧಕಾರದಿಂದ ಬೆಳಕಿನಡೆಗೆ ಜನರನ್ನು ಕರೆತರಲು ಪ್ರಯತ್ನಿಸಿದ. ಆದರೆ ಕತ್ತಲೆಯಲ್ಲೇ ಇರಲು ಇಷ್ಟಪಟ್ಟ ಜನರು ಕ್ರಿಸ್ತನನ್ನು ಕೊಂದೇ ಬಿಟ್ಟರು.
*******
No comments:
Post a Comment