Friday, 1 March 2019

ತೆರೆಮರೆಗೆ ಸರಿದ ಅಪ್ರತಿಮ ಪ್ರತಿಭೆ: ಮೊನ್ಸಿಙೋರ್ ಡಾ. ಎನ್ ಎಸ್ ಮರಿಜೋಸೆಫ್ - ಎಡ್ವರ್ಡ್‌ ಕ್ರಿಸ್ಟೋಫರ್‌ ಕೆ.ಜೆ.ಜಾರ್ಜ್‌


ದಿನಾಂಕ 05-02-2019ರ ಮುಂಜಾವಿನ ವೇಳೆಯಲ್ಲಿ ಮತ್ತೊಂದು ಕ್ರೈಸ್ತ ಚೇತನವು ನಮ್ಮನ್ನಗಲಿ ದೇವಲೋಕಕ್ಕೆ ತೆರಳಿತು. ಅವರು ಬೇರಾರೂ ಅಲ್ಲ; ಕ್ರೈಸ್ತ ಸಂಗೀತಲೋಕಕ್ಕೆ ಹೊಸ ಪರಂಪರೆಯನ್ನೇ ಬರೆದು ಬಲಿಪೂಜೆಗೆ ನಾವೀನ್ಯತೆಯ ಹೊಳಪನ್ನು ನೀಡಿದ, ಯಾಜಕಲೋಕದಲ್ಲಿ 'ಮರಿಜೋ' ಎಂದೇ ಪ್ರಖ್ಯಾತರಾಗಿದ್ದ, ಸ್ವಾಮಿಗಳಾದ ಡಾ. ಎನ್‌.ಎಸ್‌. ಮರಿಜೋಸೆಫ್‌ (ನಾರ್ಗೇನಳ್ಳಿ ಶಾಂತಪ್ಪ ಮರಿಜೋಸೆಫ್‌) ನವರು. ಇವರು ಸ್ವರ್ಗಸ್ಥರಾಗುವುದರ ಮೂಲಕ ಕನ್ನಡ ಕ್ರೈಸ್ತ ಸಮುದಾಯದಲ್ಲಿ ಶೂನ್ಯಭಾವವನ್ನು ಮೂಡಿಸಿದ್ದು ಸುಳ್ಳಲ್ಲ.

ಅವರು ಸಾಮಾನ್ಯ ಯಾಜಕರಾಗಿರಲಿಲ್ಲ. ಯಾಜಕರಲ್ಲಿ ಅದ್ವಿತೀಯರಾಗಿದ್ದರು. ಬಹುಮುಖ ಪ್ರತಿಭೆ ಅವರಲ್ಲಿ ಮೇಳೈಸಿತ್ತು. ಬರವಣಿಗೆಯಲ್ಲಿ ಮಾತ್ರವಲ್ಲ ಮಾತಿನಲ್ಲೂ ಅವರು ತೂಕದ ವ್ಯಕ್ತಿಯಾಗಿದ್ದರು. ಯಾವುದೇ ಕೆಲಸಕ್ಕೆ ಕೈಹಾಕಿದರೂ ಯೋಚಿಸದೆ ಕೈಹಾಕುತ್ತಿರಲಿಲ್ಲ. ಅದೇನಾಗುತ್ತೋ ನೋಡಿಯೇ ಬಿಡೋಣ ಎಂಬ ಹುಂಬತನ ಅವರಲ್ಲಿರಲಿಲ್ಲ. ಸಾಧಕ ಬಾಧಕಗಳನ್ನು ಲೆಕ್ಕ ಹಾಕಿಯೇ ಅವರು ಮುಂದಡಿ ಇಡುತ್ತಿದ್ದುದು. ಹಾಗಾಗಿಯೇ ಆಡಳಿತದಲ್ಲಿ ಅವರು ದಕ್ಷತೆಯನ್ನು ಮೆರೆದಿ‌ದ್ದು. ನೋಡಲು ಒರಟರಂತೆ ಕಂಡರೂ ಹೃದಯ ವೈಶಾಲ್ಯತೆಗೇನೂ ಅವರಲ್ಲಿ ಕೊರತೆಯಿರಲಿಲ್ಲ. ಬರವಣಿಗೆಯಲ್ಲಾಗಲಿ ಮಾತಿನಲ್ಲಾಗಲಿ ಅವರಿಗೆ ಅವರೇ ಸಾಟಿ. 

ಆರಾಧನಾ ಗೀತೆಗಳನ್ನು ರಚಿಸುವುದರಲ್ಲಿ ಅವರು ಎತ್ತಿದ ಕೈ; ಹಾಗೆಯೇ ಹಾಡುವುದರಲ್ಲೂ ಸಹ. ಅನೇಕ ಧ್ವನಿ ಸುರುಳಿಗಳನ್ನು ಹೊರತಂದಿರುವ ಪೂಜ್ಯರು ಕೆಲವು ಧ್ವನಿಸುರುಳಿಗಳಲ್ಲಿ ತಮ್ಮ ಕಂಠದಾನವನ್ನೂ ಮಾಡಿದ್ದಾರೆ. ತಾವೇ ರಚಿಸಿ ಹಾಡಿರುವ 'ಕಂಡಿತೀ ಮ್ಹಾಚಿಹ್ನೆ ಗಗನದೊಳು...' ಗೀತೆಯಂತೂ ಎಲ್ಲರ ಮನೆಮನಗಳಲ್ಲೂ ವಿರಾಜಿಸಿರುವುದು ಉತ್ಪ್ರೇಕ್ಷೆಯಲ್ಲ.

ಪೂಜ್ಯರು ಹುಟ್ಟಿದ್ದು 1942, ಅಕ್ಟೋಬರ್‌ 16ರಂದು. ಹುಟ್ಟೂರು ಮಂಡ್ಯ ಜಿಲ್ಲೆ ಕೆ ಆರ್ ಪೇಟೆ ಬಳಿಯ ನಾರ್ಗೇನಳ್ಳಿ ಎಂಬ ಕುಗ್ರಾಮ. ತಂದೆ ನಾರ್ಗೇನಳ್ಳಿ ಶಾಂತಪ್ಪ, ತಾಯಿ ಚೌರಮ್ಮ. ಮಗನ ಪುಟ್ಟ ವಯಸ್ಸಿನಲ್ಲೆ ಪತಿಯನ್ನು ಕಳೆದುಕೊಳ್ಳುವ ತಾಯಿ ಚೌರಮ್ಮನವರು ಮಕ್ಕಳನ್ನು ಕರೆದುಕೊಂಡು ತಮ್ಮ ತವರೂರು ಗಂಜಾಮಿಗೆ ಬಂದು ನೆಲೆನಿಲ್ಲುತ್ತಾರೆ. ಆಮೇಲೆ ಅವರ ವಾಸ್ತವ್ಯ ಮೈಸೂರಿನಲ್ಲಾಗುತ್ತದೆ. ಮೈಸೂರಿನ ಪ್ರಧಾನಾಲಯದಲ್ಲೇ ಜ್ಞಾನಸ್ನಾನ ದೀಕ್ಷೆ ಪಡೆಯುವ ಸ್ವಾಮಿಗಳು ಮರಿಯಮ್ಮನವರ ಮತ್ತು ಜೋಸೆಫರ ಹೆಸರು ಹೊತ್ತು ಮರಿಜೋಸೆಫ್ ಆಗುತ್ತಾರೆ. 

ಇವರಿಗೆ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಣ ದೊರೆತದ್ದು ಮೈಸೂರಿನಲ್ಲಿ. ಹತ್ತನೆಯ ತರಗತಿ ತೇರ್ಗಡೆಯಾದ ಬಳಿಕ ಅವರು ನಡೆದದ್ದು ಮೈಸೂರಿನ ಸಂತ ಮರಿಯಮ್ಮನವರ ಗುರುವಿದ್ಯಾಲಯಕ್ಕೆ. ಅಲ್ಲಿಂದ ಮುಂದೆ ಬೆಂಗಳೂರಿನ ಸಂತ ಪೇತ್ರರ ಗುರುವಿದ್ಯಾಲಯಕ್ಕೆ ತೆರಳಿ ಗಳಿಸಿದ್ದು ತತ್ವಶಾಸ್ತ್ರ ಹಾಗೂ ದೈವಶಾಸ್ತ್ರ ಪದವಿಗಳನ್ನು. 1966, ಸೆಪ್ಟೆಂಬರ್ 28ರಲ್ಲಿ ಅತಿ ಪೂಜ್ಯ ಜೇಮ್ಸ್‌ ನಾಕ್ಸ್‌ ನವರಿಂದ ಉಪಯಾಜಕದೀಕ್ಷೆ ಪಡೆದು ಮರುವರ್ಷವೇ ಮೈಸೂರಿನ ಅಂದಿನ ಧರ್ಮಾಧ್ಯಕ್ಷ ಅತಿ ಪೂಜ್ಯ ಮಥಿಯಾಸ್‌ ಫೆರ್ನಾಂಡಿಸ್‌ ನವರಿಂದ ಯಾಜಕದೀಕ್ಷೆ ಪಡೆಯುವ ವೇಳೆಗೆ ಅವರ ಕುಟುಂಬವು ಸಂತ ಅಂತೋಣಿಯವರ ಪುಣ್ಯಕ್ಷೇತ್ರ ದೋರನಹಳ್ಳಿಗೆ ವಸತಿ ಬದಲಾಯಿಸಿತ್ತು.

ದೀಕ್ಷೆಯ ಬಳಿಕ ಮೊದಲು ಸೇವೆ ಸಲ್ಲಿಸಿದ್ದು ಮೈಸೂರಿನ ಪ್ರಧಾನಾಲಯದಲ್ಲಿ ಉಪಯಾಜಕರಾಗಿ. ಬಳಿಕ ಮೈಸೂರು ದಕ್ಷಿಣದ ಸಂತ ತೆರೇಸಮ್ಮನವರ ದೇವಾಲಯದಲ್ಲಿ ಸಹಾಯಕ ಗುರುಗಳಾಗಿ ಸೇವೆ. 1970 ಹಾಗೂ 1971ರಲ್ಲಿ ಮಾರ್ಟಳ್ಳಿಯ ಲೂರ್ದುಮಾತೆಯ ಹಾಗೂ ಪಿ.ಜಿ.ಪಾಳ್ಯದ ಸಂತ ಜೋಸೆಫರ ದೇವಾಲಯಗಳ ಧರ್ಮಗುರುಗಳಾಗಿ ತಲಾ ಒಂದು ವರ್ಷದ ಸೇವೆ. ಆಮೇಲೆ ಉನ್ನತ ವ್ಯಾಸಂಗಕ್ಕಾಗಿ ರೋಮ್‌ ನಗರಕ್ಕೆ ಹೊರಟ ಪೂಜ್ಯರು ಮರಳಿದ ಬಳಿಕ ಸೇವೆ ಸಲ್ಲಿಸಿದ್ದು ಮೈಸೂರು ವಿಶ್ವವಿದ್ಯಾಲಯದ 'ಕ್ರೈಸ್ತಧರ್ಮ ಪೀಠ'ದಲ್ಲಿ ಉಪನ್ಯಾಸಕರಾಗಿ. ಆ ವಿಭಾಗದ ಮುಖ್ಯಸ್ಥರಾಗಿಯೂ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ ಹೆಗ್ಗಳಿಕೆ ಅವರದು. ಈ ನಡುವೆ ಅವರು ಬಡವರ ಮಾತೆಯ ದೇವಾಲಯದ ಗುರುವಾಗಿಯೂ ಸೇವೆ ಸಲ್ಲಿಸಿದರು. 1995 ಹಾಗೂ 2009ರಲ್ಲಿ ಎರಡು ಬಾರಿ ಮೈಸೂರು ಧರ್ಮಪ್ರಾಂತ್ಯದ ಶ್ರೇಷ್ಠಗುರುಗಳಾಗಿ ಆಯ್ಕೆಯಾದ ಇವರು, 'ಮೈಸೂರು ಧರ್ಮಕ್ಷೇತ್ರದ ಶಿಕ್ಷಣ ಸಂಸ್ಥೆ'ಗಳ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದರು. ಮುಂದೆ ಪ್ರಧಾನಾಲಯದ ಪ್ರಧಾನ ಗುರುಗಳಾಗಿಯೂ, “ದೂತ” ಪತ್ರಿಕೆಯ ಸಂಪಾದಕರಾಗಿಯೂ ಸೇವೆ ಸಲ್ಲಿಸಿದ ಬಳಿಕ ಇವರು 2018ರಲ್ಲಿ ಬೋಗಾದಿಯ ಸಂತ ಪೇತ್ರರ ದೇವಾಲಯದ ಧರ್ಮಗುರುಗಳಾಗಿ ಸೇವೆ ಸಲ್ಲಿಸಿ ವಯೋಮಾನದ ಕಾರಣ ಗುರುಪದವಿಯಿಂದ ನಿವೃತ್ತರಾದರು. 

'ಮರಿಜೋ' ಸ್ವಾಮಿಯವರು ಬಳಿಕ ಧಾರ್ಮಿಕ ಸೇವೆಗಳಿಂದ ಮುಕ್ತರಾಗಿ ವಿಶ್ರಾಂತಿಗಾಗಿ ಮೈಸೂರಿನ 'ಪ್ರಶಾಂತ ನಿಲಯ'ದಲ್ಲಿ ನೆಲೆನಿಂತರು. ಇತ್ತೀಚೆಗೆ ತೀವ್ರ ಅಸ್ವಸ್ಥತೆಗೆ ಒಳಗಾದ ಇವರನ್ನು ಬೆಂಗಳೂರಿನ ಸಂತ ಜಾನ್ಸ್‌ ಮೆಡಿಕಲ್‌ ಕಾಲೇಜಿಗೆ ದಾಖಲಿಸಿದಾಗ ಅವರಿಗೆ 'ಎಲುಬುಮಜ್ಜೆಯ ಕ್ಯಾನ್ಸರ್‌' ಇರುವುದು ತಿಳಿದು ಬಂದಿತ್ತು. ಜೊತೆಗೆ ಬಹು ಅಂಗಾಂಗಗಳ ವೈಫಲ್ಯವೂ ಅವರನ್ನು ಕಾಡಿತ್ತು. ಇವೆಲ್ಲದರ ಫಲವಾಗಿ ಅವರು ದಿನಾಂಕ 05-02-2019ರ ಬೆಳಗ್ಗೆ 3.15ಕ್ಕೆ ಕೊನೆಯುಸಿರೆಳೆದರು. 

ಪೂಜ್ಯರ ಶರೀರವನ್ನು ಸಂತ ಮರಿಯಮ್ಮನವರ ಗುರು ಮಂದಿರದಲ್ಲಿ ಸಾರ್ವಜನಿಕರ ದರ್ಶನಕ್ಕಾಗಿ ಇಡಲಾಯಿತು. ದಿನಾಂಕ 06-02-2019ರಂದು ಮೈಸೂರಿನ ಸಂತ ಜೋಸೆಫರ ಪ್ರಧಾನಾಲಯದಲ್ಲಿ ಅವರ ಅಂತ್ಯಸಂಸ್ಕಾರದ ಬಲಿಪೂಜೆಯು ನೆರವೇರಿದ ಬಳಿಕ ಅವರ ಪಾರ್ಥೀವ ಶರೀರವನ್ನು ಮೆರವಣಿಗೆಯಲ್ಲಿ ತಂದು ಮೈಸೂರಿನ ಕೆಸರೆ ಬಳಿಯ ಸಂತ ಮೈಕೇಲರ ಫಾರ್ಮನಲ್ಲಿ ಸಮಾಧಿ ಮಾಡಲಾಯಿತು. 



************



No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...