1955 ರಲ್ಲಿ ಬಿಡುಗಡೆಯಾದ ಮಾರ್ಸೆಲಿನೋ ಪಾನ್ ಇ ವಿನೋ ಎಂಬುದು ನಿಜಕ್ಕೂ ಶ್ರೇಷ್ಠ ಚಿತ್ರಗಳ ಸಾಲಿನಲ್ಲಿ ನಿಲ್ಲಬಲ್ಲ ಚಿತ್ರ. ಸರಳವಾದ ಕಥೆಯೊಂದನ್ನು ಅತ್ಯಂತ ಸುಂದರ ಹಾಗೂ ಆಪ್ತವಾಗಿ ಚಲನ ಚಿತ್ರದ ಮೂಲಕ ಮುಂದಿಡುವ ಕಾರ್ಯವನ್ನು 50-60ರ ದಶಕದಲ್ಲಿ ಹಲವಾರು ನಿರ್ದೇಶಕರು ಜಾಗತೀಕ ಮಟ್ಟದಲ್ಲಿ ಮಾಡಿದ್ದರು. ’ಮಾರ್ಸೆಲಿನೋ’ ಆ ಚಿತ್ರಗಳ ಸಾಲಿಗೆ ಸೇರಬಹುದಾದಂತ ಚಿತ್ರ. ಲಡಿಸ್ಲೋ ವಜ್ಡ ಎಂಬ ನಿರ್ದೇಶಕನ ಕೈಚಳಕದಲ್ಲಿ ಮೂಡಿ ಬಂದ ಈ ಸ್ಪಾನಿಷ್ ಭಾಷೆಯ ಚಿತ್ರಕ್ಕೆ ಭಾಷೆಯ ಹಂಗಿಲ್ಲ. ಭಾಷೆ ಅರ್ಥವಾಗದಿದ್ದರೂ ಚಿತ್ರ ಹೊರಡಿಸುವ ಭಾವನಾತ್ಮಕ ತರಂಗಗಳು ನೋಡುಗರನ್ನು ತನ್ನ ತೆಕ್ಕೆಗೆ ಸೆಳೆದುಕೊಳ್ಳುತ್ತದೆ. ಒಂದು ಚಿತ್ರ ನಿರ್ಮಾಣದಲ್ಲಿ ಬೇಕಾದ ಅಷ್ಟೂ ಮೂಲಭೂತ ತಾಂತ್ರಿಕ ಪರಿಭಾಷೆಯನ್ನು, ಅಚ್ಚುಕಟ್ಟುತನವನ್ನು, ಕಲಾವಂತಿಕೆಯನ್ನು ಬಳಸಿಕೊಂಡಿರುವ ಈ ಚಲನಚಿತ್ರ ಅಂದಿನ ಕಾಲಕ್ಕೆ ಹಣ ಗಳಿಕೆಯಲ್ಲೂ, ಖ್ಯಾತಿಯಲ್ಲೂ ಯಶಸ್ವಿಯಾಯಿತು.
ಚಿತ್ರದ ವಸ್ತು ಸರಳ. ಸ್ಪೇನಿನ ಹಳ್ಳಿಯೊಂದರಲ್ಲಿ ಫ್ರಾನ್ಸಿಸ್ಕನ್ ಗುರುಗಳು ಬಂದು, ಯುದ್ಧದಿಂದ ಬಿದ್ದು ಹೋಗಿದ್ದ ಹಳೆಯ ಕಟ್ಟಡವೊಂದರಲ್ಲಿ ತಮ್ಮ ಸೇವಾ ಜೀವನ ಆರಂಭಿಸುತ್ತಾರೆ. ಮೂವರಿಂದ ಪ್ರಾರಂಭವಾದ ಅವರ ಗುರುಮಠಕ್ಕೆ ಅಲ್ಲಿನ ಸ್ಥಳೀಯ ಮೇಯರ್ ಆಸರೆಯಾಗಿ ನಿಲ್ಲುತ್ತಾನೆ. ಕ್ರಮೇಣ 12 ಜನರಿರುವ ಗುರು ನಿಲಯಕ್ಕೆ ಅನಪೇಕ್ಷಿತ ಅತಿಥಿಯೊಬ್ಬ ಒಂದು ವಾರದ ಎಳೇಮಗುವಿನ ರೂಪದಲ್ಲಿ ಬರುತ್ತದೆ. ಮಗುವನ್ನು ತಮ್ಮ ಬಳಿ ಇಟ್ಟುಕೊಳ್ಳಬೇಕೆ? ಯಾರಿಗಾದರೂ ಕೊಡಬೇಕೇ? ಎಂಬ ಗೊಂದಲ ಗುರುಗಳದ್ದು. ಮುದ್ದು ಮಗು ತಮ್ಮ ಬಳಿಯೇ ಇರಲಿ ಎಂಬುದು ಅವರ ಆಸೆಯಾದರೂ ತಮ್ಮ ಧಾರ್ಮಿಕ ಜೀವನ ಮಗುವಿನ ಪಾಲನೆಯಲ್ಲಿ ಕಳೆದು ಹೋಗಬಾರದೆಂಬ ಕರ್ತವ್ಯ ಪ್ರಜ್ಞೆ ಅವರಲ್ಲಿ ಜಾಗೃತವಾಗುತ್ತದೆ.
ಹತ್ತಿರದ ಹಳ್ಳಿಗೆ ಹೋಗಿ ಅಲ್ಲಿನ ಅನೇಕರನ್ನು ಕೇಳಿಕೊಂಡರೂ, ಮಗುವನ್ನು ತೆಗೆದುಕೊಳ್ಳಲು ಯಾರೂ ಸಿದ್ದರಿಲ್ಲ. ಹಳ್ಳಿಯಲ್ಲಿನ ವ್ಯಾಪಾರಸ್ಥನೊಬ್ಬ ಮಗುವನ್ನು ಸಾಕಲು ಒಪ್ಪಿದರೂ ಅವನ ಜೀವನ ವಿಧಾನ, ಆತನ ಸ್ವಭಾವವನ್ನು ನೋಡಿ ಗುರುಗಳೇ ಅವನಿಗೆ ಮಗುವನ್ನು ಕೊಡಲು ನಿರಾಕರಿಸುತ್ತಾರೆ. ಮುಂದೆ ಅವನೇ ಆ ಊರಿಗೆ ಮೇಯರ್ ಆಗುತ್ತಾನೆ. ಹಳೆಯ ಮೇಯರ್ ಆ ಗುರುಗಳಿದ್ದ ಜಾಗವನ್ನು ಅವರಿಗೇ ನೊಂದಾಯಿಸಲು ಬಯಸಿದಾಗ, ತಮ್ಮದು ಏನಿದ್ದರೂ ಬೇಡಿ, ದುಡಿಯುವ ಜೀವನ ವಿಧಾನ, ಆಸ್ತಿ ಮಾಡುವುದು ತಮ್ಮ ಸಂಸ್ಥೆಯ ನಿಯಮಕ್ಕೆ ವಿರುದ್ಧ ಎಂದು ಗುರುಗಳು ನಿರಾಕರಿಸುತ್ತಾರೆ.
ಇತ್ತ ಮಗುವನ್ನು ತಾವೇ ಸಾಕಲು ಗುರುಗಳು ನಿರ್ಧರಿಸಿ, ಒಬ್ಬೊಬ್ಬರು ಒಂದೊಂದು ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತಾರೆ. ಮಗು ಆ ಗುರು ನಿಲಯದಲ್ಲೇ ಎಲ್ಲರ ಮುದ್ದಿನ ಮಗುವಾಗಿ ಬೆಳೆಯುತ್ತದೆ. ಮಗು ಬಾಲಕನಾಗಿ, ಮಾರ್ಸೆಲಿನೋ ಎಂಬ ಹೆಸರಿನಿಂದ ಬೆಳೆದು ತನ್ನ ತುಂಟತನದಿಂದ ಎಲ್ಲರ ಪ್ರೀತಿ ಗಳಿಸುತ್ತಾನೆ. ಅಲ್ಲಿನ ಒಂದೊಂದು ಗುರುವಿಗೂ ಒಂದೊಂದು ಅಡ್ಡ ಹೆಸರನ್ನು ಇಟ್ಟು, ಅದೇ ಹೆಸರು ಆ ನಿಲಯದಲ್ಲಿ ಚಾಲ್ತಿಯಲ್ಲಿರುವಂತೆ ನೋಡಿಕೊಳ್ಳುತ್ತಾನೆ. ಅಲ್ಲಿನ 12 ಗುರುಗಳ ಲಾಲನೆ, ಪಾಲನೆ, ಪ್ರೀತಿ ದೊರಕಿದರೂ ತಾಯಿ ಪ್ರೀತಿಗಾಗಿನ ಹಂಬಲ ಮಾರ್ಸೆಲಿನೋನಲ್ಲಿ ಕಾಣುತ್ತದೆ. ತನ್ನ ನಿಲಯಕ್ಕೆ ಬಂದ ತಾಯೊಬ್ಬಳ ಮಗನ ಹೆಸರು ಮಾನುಯೇಲ್ ಎಂದು ತಿಳಿದು, ಕಾಲ್ಪನಿಕ ಮಾನುಯೇಲ್ ಎಂಬ ಗೆಳೆಯನೊಂದಿಗೆ ಮಾತನಾಡುತ್ತಾ ದಿನ ಕಳೆಯುತ್ತಾನೆ. ಗುರುಗಳ ನಡುಕಟ್ಟಿನ ಹಗ್ಗವನ್ನು ಮತ್ತೊಬ್ಬರದಕ್ಕೆ ಕಟ್ಟಿಬಿಡುವುದು, ದೇವಾಲಯದ ಘಂಟೆಯ ಶಬ್ದ ಕೇಳದಂತೆ ಅದಕ್ಕೆ ಬಟ್ಟೆ ಕಟ್ಟುವುದು, ಪಾತ್ರೆಯಲ್ಲಿ ಕಪ್ಪೆಗಳನ್ನು ಇಡುವುದು, ದೇವಾಲಯದ ತೀರ್ಥ ತೊಟ್ಟಿಯಲ್ಲಿ ಕಾಗದದ ದೋಣಿ ಮಾಡಿ ತೇಲಿ ಬಿಡುವುದು... ಹೀಗೆ ಸಾಗುತ್ತದೆ ಅವನ ತುಂಟಾಟ.
ಗುರು ನಿಲಯದ ಮಹಡಿಯಲ್ಲಿ ಹಳೆಯ ವಸ್ತು, ಸಾಮಾನುಗಳನ್ನು ಹಾಕಿರುತ್ತಾರೆ. ಅಲ್ಲಿಗೆ ತುಂಟ ಮಾರ್ಸೆಲಿನೋ ಹೋಗಬಾರದೆಂಬ ಕಾರಣದಿಂದ ’ಮೇಲೆ ಒಬ್ಬ ದೊಡ್ಡ ಮನುಷ್ಯನಿದ್ದಾನೆ, ಅಲ್ಲಿಗೆ ಹೋದರೆ ನಿನ್ನನ್ನು ಅಪಹರಸಿ ಬಿಡುತ್ತಾನೆ’ ಎಂದು ಗುರುಗಳೆಲ್ಲಾ ಮಾರ್ಸೆಲಿನೋನನ್ನು ಹೆದರಿಸಿರುತ್ತಾರೆ. ಆದರೆ ತುಂಟ ಮಾರ್ಸೆಲಿನೋ ಕುತೂಹಲ ಇನ್ನೂ ಹೆಚ್ಚಾಗುತ್ತದೆ. ಆ ಮಹಡಿಗೆ ಹೋಗುವ ಸಾಹಸವನ್ನು ಹಲವಾರು ಬಾರಿ ಮಾಡಿ ಕೊನೆಗೊಮ್ಮೆ ಯಶಸ್ವಿಯಾಗುತ್ತಾನೆ.
ಮೇಲೆ ಹೋದಾಗ ಅವನಿಗೆ ಕಾಣುವುದು ಶಿಲುಬೆ ಮೇಲಿನ ಯೇಸುವಿನ ಪ್ರತಿಮೆ. ಯಾತನೆಯ ಆ ಪ್ರತಿಮೆಯ ಮುಖ ನೋಡಿದಾಗ ’ಈ ವ್ಯಕ್ತಿಯ ಮುಖದಲ್ಲಿ ಹಸಿವು ಕಾಣುತ್ತಿದೆ’ ಎಂದು ಹೋಗಿ ಒಂದಷ್ಟು ರೊಟ್ಟಿ ತರುತ್ತಾನೆ. ಮುಗ್ಧ ಮಾರ್ಸೆಲಿನೋ ಸಹಜವೆಂಬಂತೆ ಯೇಸುವಿನೊಂದಿಗೆ ಮಾತನಾಡುತ್ತಾನೆ. ಪವಾಡ ಸದೃಶ ರೀತಿಯಲ್ಲಿ ಪ್ರತಿಮೆಗೆ ಜೀವ ಬಂದು ಯೇಸುವೇ ಆ ರೊಟ್ಟಿಯನ್ನು ತಿನ್ನುತ್ತಾರೆ. ಇಲ್ಲಿಂದ ಶುರುವಾಗುವ ಅವರಿಬ್ಬರ ನಡುವಿನ ಒಡನಾಟ ಆತ್ಮೀಯವಾಗಿ ಮುಂದುವರಿಯುತ್ತದೆ.
ಇತ್ತ ಮಾರ್ಸೆಲಿನೋ ವರ್ತನೆಯಲ್ಲಿ ಆಗುವ ಬದಲಾವಣೆಗಳು ಗುರುಗಳೆಲ್ಲರ ಗಮನ ಸೆಳೆಯುತ್ತದೆ. ಹಿರಿಯ ಗುರುಗಳು ಮಾರ್ಸೆಲಿನೋಗೆ ಹೆಚ್ಚು ಹತ್ತಿರವಾದ ಅಡುಗೆ ಮನೆಯ ಉಸ್ತುವಾರಿ ಗುರುಗಳ ಬಗ್ಗೆ ಮಾರ್ಸೆಲಿನೋ ಬಗ್ಗೆ ವಿಚಾರಿಸುತ್ತಾರೆ. ಅಡುಗೆ ಉಸ್ತುವಾರಿ ಗುರುಗಳು ಸಹ ಕಾಣೆಯಾಗುತ್ತಿರುವ ರೊಟ್ಟಿ ಹಾಗೂ ದ್ರಾಕ್ಷಾರಸದ ಬಗ್ಗೆ ಕಳವಳ ವ್ಯಕ್ತಪಡಿಸುತ್ತಾರೆ. ಆಗ ಹಿರಿಯ ಗುರುಗಳು ಮಾರ್ಸೆಲಿನೋವನ್ನು ಹಿಂಬಾಲಿಸಿ ಆ ರೊಟ್ಟಿ ಹಾಗೂ ದ್ರಾಕ್ಷಾರಸವನ್ನು ಆತ ಏನು ಮಾಡುತ್ತಿದ್ದಾನೆ ನೋಡಿ ತಿಳಿದುಕೊಳ್ಳಬೇಕೆಂದು ಉಸ್ತುವಾರಿ ಗುರುಗಳಿಗೆ ಹೇಳುತ್ತಾರೆ.
ಅದರಂತೆ ಗುರುಗಳು ಮಾರ್ಸೆಲಿನೋನನ್ನು ಹಿಂಬಾಲಿಸುತ್ತಾರೆ. ಮಹಡಿಯ ಕೋಣೆಯಲ್ಲಿ ಮಾರ್ಸೆಲಿನೋ ಯೇಸುವಿನೊಡನೆ ಆಪ್ತವಾಗಿ ಮಾತನಾಡುತ್ತಿರುವುದನ್ನು ನೋಡಿ ದಂಗಾಗುತ್ತಾರೆ. ಮುಂದೆ ಏನಾಗುತ್ತದೆ ಎಂಬುದನ್ನು ಚಿತ್ರ ನೋಡಿ ಆನಂದಿಸಬೇಕು.
ಅತ್ಯಂತ ಸರಳ ನಿರೂಪಣಾ ಶೈಲಿಯಲ್ಲಿ ಚಿತ್ರಿತವಾಗಿರುವ ಚಿತ್ರ ನೋಡುಗರನ್ನು ಮೊದಲ ದೃಶ್ಯದಿಂದಲೂ ತನ್ನತ್ತ ಸೆಳೆದುಕೊಳ್ಳುತ್ತದೆ. ಯಾವುದೇ ರೀತಿಯ ವೈಭವಗಳು ಇಲ್ಲಿದಿದ್ದರೂ ಚಿತ್ರ ತಾಂತ್ರಿಕವಾಗಿ ಕಥೆಗೆ ಬೇಕಾದಷ್ಟು ಅಚ್ಚುಕಟ್ಟಾಗಿದ್ದು ಕಣ್ಣಿಗೆ ತಂಪೆರೆಯುತ್ತದೆ. ಛಾಯಾಗ್ರಹಣ ಹಾಗೂ ಸಂಕಲನವು ಅತ್ಯಂತ ನೈಜವಾಗಿದ್ದು, ನಿಮ್ಮ ನಡುವಿನ ದೃಶ್ಯಗಳನ್ನೇ ನೋಡುತ್ತಿದ್ದೇವೇನೋ ಎನಿಸದಿರದು. ಹಿನ್ನೆಲೆ ಸಂಗೀತವೂ ಚಿತ್ರಕ್ಕೆ ಪೂರಕವಾಗಿದೆ.
ಆದರೆ ಚಿತ್ರ ಮನದಲ್ಲಿ ನಿಲ್ಲುವುದು ಚಿತ್ರದಲ್ಲಿನ ನಟರ ಆಪ್ತ ಅಭಿನಯದಿಂದ. 12 ಜನ ಗುರುಗಳು ನಿಮ್ಮಲ್ಲಿ ಭಕ್ತಿಯನ್ನು, ಪ್ರೀತಿಯನ್ನು, ಅವರ ಜೀವನ ಶೈಲಿಯ ಬಗ್ಗೆ ಅನುಕಂಪವನ್ನು ಹುಟ್ಟಿಸುತ್ತಾರೆ. ಇನ್ನು ಬಾಲಕನ ಪಾತ್ರದಲ್ಲಿ ಪಬ್ಲಿಟೋ ಕಾಲ್ವೋ ನಟಿಸುವ ಗೋಜೆಗೆ ಹೋಗಿಲ್ಲ. ತನ್ನ ಮುಗ್ದ ಚಲನವಲನವನ್ನು ಕ್ಯಾಮೆರಾ ಮುಂದೆ ಮುಂದುವರಿಸಿದ್ದಾನೇನೋ ಎನಿಸುತ್ತದೆ. ಮುಗ್ಧ ನಗು, ತುಂಟಾಟ, ಯೇಸುವಿನ ಪ್ರತಿಮೆಯ ಮುಂದಿನ ಕಾರುಣ್ಯ, ಕಣ್ಣುಗಳಲ್ಲಿನ ತನ್ಮಯತೆ ಎಲ್ಲದರಲ್ಲೂ ವಯಸ್ಸಿಗೆ ಮೀರಿದ ನಟನೆಯಿಂದ ಕಾಲ್ವೋ ಅಜರಾಮರವಾಗಿ ಉಳಿಯುತ್ತಾನೆ.
ಪ್ರತಿ ದೃಶ್ಯದಲ್ಲೂ ನಿರ್ದೇಶಕರ ಕಲಾ ನೈಪುಣ್ಯತೆ ಎದ್ದು ಕಾಣುತ್ತದೆ. ತಾಂತ್ರಿಕತೆ ಹಾಗೂ ಅಭಿನಯ ಎರಡರಲ್ಲೂ ಪೂರ್ಣವಾದ ಕೆಲಸವನ್ನು ತೆಗೆಯುವಲ್ಲಿ ನಿರ್ದೇಶಕರ ಶ್ರಮ, ಪ್ರೀತಿ ಕಾಣುತ್ತದೆ. ಕೊನೆಗೆ ಇದೊಂದು ಚಲನಚಿತ್ರದಂತೆ ಕಾಣದೆ ದಿನ ನಿತ್ಯದ ಚಲನವಲನದ ದೃಶ್ಯ ದಾಖಾಲಾತಿಯೇನೋ ಎಂಬಂತೆ ಕಾಣುತ್ತದೆ.
ಒಮ್ಮೆ ನೋಡಿ. ಯುಟ್ಯೂಬ್ ನಲ್ಲಿ ಲಭ್ಯವಿದೆ. Marceleno Pan Y Vino ಎಂದು ಹುಡುಕಿ ನೋಡಿ.
*******
No comments:
Post a Comment