Friday, 5 April 2019

ಕ್ಷಮೆ - ಸಿ ಮರಿಜೋಸೆಫ್


ಮೃಗಕ್ಕೂ ಮಾನವನಿಗೂ ಇರುವ ವ್ಯತ್ಯಾಸವೇನೆಂದು ಕೇಳಿದರೆ ಹಲವರು ಹಲರೀತಿಯ ಉತ್ತರಗಳನ್ನು ಹೇಳಿಯಾರು. ನಗು ಅಳು ಮಾತು ಸಂವಹನೆ ಆಲೋಚನೆ ಬುದ್ದಿಮತ್ತೆ ವಿಮರ್ಶೆ ಇವೆಲ್ಲವನ್ನೂ ಮಾನವನ ಗುಣಗಳೆಂದು ಹೇಳಬಹುದು. ಆದರೆ ಇವೆಲ್ಲಕ್ಕಿಂತ ಮಿಗಿಲಾಗಿ ಕ್ಷಮೆ ಎಂಬ ಶ್ರೇಷ್ಠವಾದ ಗುಣವೇ ಮೃಗತ್ವದಿಂದ ಮಾನವತ್ವಕ್ಕೆ ಏರಿಸುತ್ತದೆ ಎಂಬುದನ್ನು ಯಾರೂ ಅಲ್ಲಗಳೆಯಲಾಗದು. ಎಲ್ಲ ತಪ್ಪುಗಳನ್ನು ತಾಳಿಕೊಳ್ಳುವ ಗುಣವೇ ಕ್ಷಮಾಗುಣ. ನಾವು ನೆಲೆಸಿರುವ ಭೂಮಿಯನ್ನು ನಾವೆಷ್ಟೇ ತುಳಿದು ಅಗೆದು ಬಗೆದು ಸಂಪನ್ಮೂಲಗಳನ್ನು ಸೋಸಿ ಕೆಟ್ಟವುಗಳನ್ನು ಹೊರಸೂಸಿ ಹಾಳು ಮಾಡಿದರೂ ಭೂಮಿ ನಮಗೆ ಒಳ್ಳೆಯದನ್ನೇ ಮಾಡುತ್ತದೆ. ಅದಕ್ಕಾಗಿಯೇ ಭೂಮಿಯನ್ನು ಕ್ಷಮಾ ಎನ್ನುತ್ತಾರೆ. ಇಳೆ ನೆಲ ತಿರೆ ಮೇದಿನಿ ವಸುಧೆ ಧರೆ ಧರಣಿ ಧರಿತ್ರಿಯಷ್ಟು ಕ್ಷಮಾಗುಣ ಉಳ್ಳವರನ್ನು ಕ್ಷಮಯಾಧರಿತ್ರಿ ಎನ್ನುತ್ತಾರೆ. 

ಕ್ಷಮೆ ಎಂದರೇನು? ನಮಗೆ ಕೇಡು ಬಗೆದವರನ್ನು ಅವರ ಯೋಗ್ಯಾಯೋಗ್ಯತೆಗಳನ್ನು ಲೆಕ್ಕಿಸದೆ ಅವರ ಬಗೆಗಿನ ಸೇಡಿನ ಮತ್ತು ಕಹಿಯ ಮನೋಭಾವಗಳನ್ನು ತೊಡೆದುಬಿಡುವುದೇ ಕ್ಷಮೆ ಎನ್ನುತ್ತಾರೆ ಮನಶಾಸ್ತ್ರಜ್ಞರು. 

ತಪ್ಪು ಮಾಡುವದು ಮಾನವನ ಸಹಜ ಗುಣ. ಎಂಥ ಮಹಾನ್ ಸಾಧಕನೇ ಆಗಲಿ ಏನಾದರೂ ಒಂದು ತಪ್ಪು ಮಾಡಿಯೇ ಮಾಡುತ್ತಾನೆ. 'ಯಾವ ತಪ್ಪನ್ನೂ ಮಾಡದವನು ಮೊದಲ ಕಲ್ಲೆಸೆಯಲಿ' ಎಂದು ಯೇಸು ನುಡಿದಾಗ ಗುಂಪು ಸೇರಿದ್ದವರೆಲ್ಲ ತೆಪ್ಪಗಾಗಿ ಹೊರಟು ಹೋದರಲ್ಲವೇ? ತಪ್ಪುಗಳನ್ನು ನೋಡದೆ ಕೇವಲ ಗುಣಗಳನ್ನು ಮಾತ್ರ ಗಮನಿಸುವುದು ಬಹು ದೊಡ್ಡ ಗುಣ. ಅದನ್ನೇ ಕನ್ನಡದ ಕವಿ ರನ್ನನು 'ಗುಣಕ್ಕೆ ಮಚ್ಚರಮುಂಟೇ?' ಎಂದಿದ್ದಾನೆ. ತಪ್ಪು ಮಾಡಿದವರು ತಿದ್ದಿಕೊಳ್ಳಲು ಅವಕಾಶ ಕೊಡುವುದು ಕ್ಷಮೆ. ಮನುಷ್ಯನನ್ನು ಸರಿದಾರಿಗೆ ತರುವುದೇ ಕ್ಷಮೆ ಎಂದು ಬಹು ಹಿಂದಿನಿಂದಲೂ ನಂಬಿಕೊಂಡು ಬರಲಾಗಿದೆ. 

ಅದನ್ನೇ ಯೇಸು 'ಕಲ್ಲಿಗೆ ಕಲ್ಲು ಹಲ್ಲಿಗೆ ಹಲ್ಲು ಎನ್ನಬೇಡಿ, ಪ್ರೀತಿ ಕ್ಷಮೆಯಿಂದ ತಪ್ಪಿತಸ್ತನನ್ನು ಗೆಲ್ಲಿ' ಎಂದಿದ್ದಾರೆ (ಮತ್ತಾಯ 5:38). 'ದೇವರು ಒಳ್ಳೆಯವರ ಮೇಲೂ ಕೆಟ್ಟವರ ಮೇಲೂ ಸಮಾನವಾಗಿ ಮಳೆಗರೆಯುತ್ತಾರೆ, ಆದ್ದರಿಂದ ನಿಮಗೆ ಕೇಡುಬಗೆಯುವವರಿಗೂ ಸಮಾನ ಪ್ರೀತಿ ತೋರಿರಿ' ಎನ್ನುತ್ತಾರವರು. 

ಆದರೂ ಕ್ಷಮೆ ತೋರುವುದಕ್ಕೆ ಮನಸ್ಸು ದೊಡ್ಡದಾಗಿರಬೇಕು. ಹಾಗೆಯೇ ಕ್ಷಮೆ ಕೋರುವುದಕ್ಕೆ ಬಹಳಷ್ಟು ಧೈರ್ಯ ಬೇಕು. ಕ್ಷಮೆ ನೀಡುವುದು ಕೆಲವೊಮ್ಮೆ ಸ್ವಾಭಿಮಾನಕ್ಕೆ ಪೆಟ್ಟು ನೀಡುವಂತೆ ತೋರುತ್ತದೆ. ಕ್ಷಮೆ ಸ್ವೀಕರಿಸುವವನು ಅದಕ್ಕೆ ಪಾತ್ರನೋ ಅಪಾತ್ರನೋ ಎಂಬ ಜಿಜ್ಞಾಸೆಗೆ ಕಾರಣವಾಗುತ್ತದೆ. ಒಮ್ಮೆ ಯೇಸುವಿನ ಶಿಷ್ಯ ಪೇತ್ರನು 'ಸ್ವಾಮೀ, ನನಗೆ ವಿರುದ್ಧ ದ್ರೋಹ ಮಾಡುತ್ತಾ ಇರುವ ನನ್ನ ಸೋದರನನ್ನು ಎಷ್ಟು ಸಲ ಕ್ಷಮಿಸಬೇಕು? ಏಳು ಸಲವೇ?' ಎಂದು ಕೇಳುತ್ತಾನೆ. ಅದಕ್ಕೆ ಯೇಸು 'ಏಳು ಸಲವಲ್ಲ ಏಳೆಪ್ಪತ್ತು ಸಲ ಕ್ಷಮಿಸಬೇಕು ಎಂದು ನಾನು ನಿನಗೆ ಒತ್ತಿ ಹೇಳುತ್ತೇನೆ' ಎನ್ನುತ್ತಾರೆ. (ಮತ್ತಾಯ 18:21-22) ಆದ್ದರಿಂದ ಕ್ಷಮಿಸುತ್ತಲೇ ಇರೋಣ, ನಿರಾಳವಾಗೋಣ. 

ಕೆಲವೊಮ್ಮೆ ನಮ್ಮ ತಪ್ಪುಗಳನ್ನು ಇತರರ ಮೇಲೆ ಹೊರಿಸಲು ನೋಡುತ್ತೇವೆ. ನಮ್ಮ ತಣಿಗೆಯಲ್ಲಿನ ಕತ್ತೆ ಕಾಣುವುದಿಲ್ಲ ಮತ್ತೊಬ್ಬರ ತಣಿಗೆಯಲ್ಲಿನ ನೊಣ ಕಾಣಿಸುತ್ತೆ ಎಂಬ ಗಾದೆಯೇ ಇದೆಯಲ್ಲ. ಅನೇಕರು ಕ್ಷಮಿಸುವುದು ದೌರ್ಬಲ್ಯದ ಸಂಕೇತವೆಂದು ಭಾವಿಸಿಕೊಳ್ಳುತ್ತಾರೆ. ಕ್ಷಮಿಸಿಬಿಡುವುದು ಎಂದರೆ ಮಾಡಿದ ತಪ್ಪಿಗೆ ಒಪ್ಪಿಗೆ ಕೊಡುವುದಲ್ಲವೆ ಎನ್ನುತ್ತಾರವರು. ಕ್ಷಮೆ ಎಂಬುದು ಏನೂ ಆಗೇ ಇಲ್ಲವೆಂಬಂತೆ ನಡೆದುಕೊಳ್ಳುವುದಲ್ಲ, ಬದಲಿಗೆ ಚೆನ್ನಾಗಿ ಯೋಚಿಸಿ ಮಾಡಿದ ಸ್ವಂತ ಆಯ್ಕೆಯಾಗಿದೆ. ಪ್ರೀತಿಯ ಈ ನಿರ್ಧಾರದಿಂದ ಶಾಂತಿ ನೆಲೆಗೊಳ್ಳುತ್ತದೆ, ಆ ವ್ಯಕ್ತಿಯೊಂದಿಗೆ ಒಳ್ಳೇ ಸಂಬಂಧ ಬೆಸೆಯುತ್ತದೆ. ಅವನು ಮತ್ತೆ ಆ ತಪ್ಪನ್ನು ಮಾಡದಂತೆ ಪ್ರೇಮಪೂರ್ವಕವಾಗಿ ಒತ್ತಾಯಿಸುತ್ತದೆ. 

“ಒಬ್ಬನ ಮೇಲೆ ತಪ್ಪು ಹೊರಿಸಲು ಕಾರಣವಿದ್ದರೂ ಕ್ಷಮಿಸಿಬಿಡಿ. ಪ್ರೀತಿಯೇ ಸಮಸ್ತವನ್ನೂ ಸಂಪೂರ್ಣಗೊಳಿಸುವ ಬಂಧನ" ಎಂದು ಪೌಲನು ಕರೆಕೊಡುತ್ತಾನೆ. (ಕೊಲೊಸ್ಸೆ 3:13) ಆ ಮಾತು ಇಂದಿಗೂ ಅನ್ವಯಿಸುತ್ತದೆ. ಪೌಲ ಇನ್ನೂ ಮುಂದುವರಿದು 'ಯೇಸುಕ್ರಿಸ್ತರಲ್ಲಿ ದೇವರು ನಿಮ್ಮನ್ನು ಕ್ಷಮಿಸಿದಂತೆಯೇ ನೀವೂ ಸಹ ಒಬ್ಬರನ್ನೊಬ್ಬರು ಕ್ಷಮಿಸಿರಿ' ಎನ್ನುತ್ತಾನೆ. (ಎಫೆಸಿಯರಿಗೆ 4:32) 

ಕ್ಷಮೆ ಒಂದು ಶ್ರೇಷ್ಠ ಗುಣವೆಂದು ಹಿರಿಯರು ಹೇಳಿದ್ದಾರೆ. ತುಂಬಾ ಹಟಕ್ಕೆ ಬಿದ್ದು ಮತ್ತೊಬ್ಬರ ಮನಸ್ಸನ್ನು ನೋಯಿಸುವದಕ್ಕಿಂತ ಕ್ಷಮಿಸಿಬಿಟ್ಟರೆ ಬದುಕಿನಲ್ಲಿ ಶತ್ರುಗಳೇ ಇರಲಾರರು. ಕೋಪ ಅಸಮಾಧಾನವನ್ನು ಮನದಲ್ಲಿ ತುಂಬಿಕೊಂಡಿದ್ದರೆ ಜೀವನದಲ್ಲಿ ಸಂತೋಷ ಇರುವುದಿಲ್ಲ, ಅಂಥವರಿಗೆ ಒಳ್ಳೇ ಆರೋಗ್ಯವೂ ಇರುವುದಿಲ್ಲ, ಅವರ ಮುಖದಲ್ಲಿ ಸದಾ ಖಿನ್ನತೆ ಆವರಿಸಿರುತ್ತದೆ. ಕಹಿಭಾವನೆಯಿಂದ ಇತರರೊಂದಿಗೆ ಸಂತೋಷದಿಂದ ಬೆರೆಯಲಾಗದು. ಅದು ಒಂಟಿತನಕ್ಕೆ ಕಾರಣವಾಗುತ್ತದೆ. ತಪ್ಪಿನ ಬಗ್ಗೆಯೇ ಸದಾ ಯೋಚಿಸುವವರು ಜೀವನದ ಪರಮಸುಖವಾದ ಆನಂದವನ್ನೇ ಕಳೆದುಕೊಳ್ಳುತ್ತಾರೆ. ಕ್ಷಮಿಸದೇ ಇರುವುದು ಮಾನಸಿಕ ಒತ್ತಡಕ್ಕೆ ಕಾರಣವಾಗುತ್ತದೆ. ಇದರಿಂದಲೇ ತಲೆನೋವು ಮತ್ತು ಗಂಟುನೋವುಗಳು ಬರುತ್ತವೆಂದು ಮನಶಾಸ್ತ್ರಜ್ಞರು ಹೇಳುತ್ತಾರೆ. 

ಆದ್ದರಿಂದ 'ಬಲಿಪೀಠದ ಮುಂದೆ ಕಾಣಿಕೆಯನ್ನು ಅರ್ಪಿಸಲಿರುವಾಗ, ನಿನ್ನ ಸೋದರನಿಗೆ ನಿನ್ನ ಮೇಲೆ ಏನೋ ಮನಸ್ತಾಪವಿದೆ ಎಂಬುದು ನಿನ್ನ ನೆನಪಿಗೆ ಬಂದರೆ, ನಿನ್ನ ಕಾಣಿಕೆಯನ್ನು ಆ ಬಲಿಪೀಠದ ಮುಂದೆಯೇ ಇಟ್ಟುಬಿಡು. ಮೊದಲು ಹೋಗಿ ನಿನ್ನ ಸೋದರನೊಡನೆ ಸಮಾಧಾನ ಮಾಡಿಕೋ, ಆನಂತರ ಬಂದು ನಿನ್ನ ಕಾಣಿಕೆಯನ್ನು ಒಪ್ಪಿಸು.' (ಮತ್ತಾಯ 5:23-24) ಎಂದಿದ್ದಾರೆ ಯೇಸು. ಹಾಗೆ ನೋಡಿದರೆ ಯೇಸುವಿಗಿಂತ ಸಾವಿರಾರು ವರ್ಷಗಳಿಗೆ ಮೊದಲೇ ಪವಿತ್ರ ಬೈಬಲಿನ ಯಾಜಕಕಾಂಡದಲ್ಲಿ (19:18) ಸರ್ವಶಕ್ತ ದೇವರು ಹೀಗೆಂದಿದ್ದಾರೆ: 'ಸಹೋದರನ ಬಗ್ಗೆ ಒಳಗೊಳಗೇ ಹಗೆ ಇಟ್ಟುಕೊಳ್ಳಬೇಡ ... ಯಾರಿಗೂ ಕೇಡಿಗೆ ಕೇಡು ಇಟ್ಟುಕೊಳ್ಳಬೇಡ; ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸು' 

ಕ್ಷಮೆ ಎಂಬ ಒಂದು ಅಮೂರ್ತ ಪ್ರಕ್ರಿಯೆಯು ಅಪರಾಧಿಯ ಮನದಲ್ಲಿ ತುಮುಲಗಳನ್ನೆಬ್ಬಿಸಿ ಪರಿವರ್ತನೆಗೆ ಕಾರಣವಾಗುತ್ತದೆ. ದಂಡಸಂಹಿತೆಗಳು ಏನೇ ಹೇಳಿದರೂ, ಕಾನೂನಾತ್ಮಕವಾಗಿ ಒಬ್ಬನಿಗೆ ಶಿಕ್ಷೆ ಎಷ್ಟೇ ಸಮರ್ಥನೀಯವಾಗಿದ್ದರೂ ಕ್ಷಮೆ ಎಂಬುದು ಅವೆಲ್ಲವುಗಳಿಗಿಂತ ಮಿಗಿಲಾದುದು ಎಂಬುದನ್ನು ಮರೆಯಲಾಗದು. ಅದಕ್ಕೇ ತಪ್ಪು ಮಾಡುವುದು ಮಾನವ ಸಹಜ ಗುಣ, ಕ್ಷಮಿಸುವುದು ದೈವೀಗುಣ ಎನ್ನುತ್ತಾರೆ. ಕ್ಷಮೆಯ ಪರ ಹೋರಾಡುತ್ತಾ ಮರಣದಂಡನೆ ಶಿಕ್ಷೆಯನ್ನು ವಿರೋಧಿಸಿ ದನಿಯೆತ್ತುವುದನ್ನು ನಾವು ಪತ್ರಿಕೆಗಳಲ್ಲಿ ಓದಿದ್ದೇವೆ. 

'ಜನರನ್ನು ನೀವು ಕ್ಷಮಿಸದಿದ್ದರೆ, ದೇವರು ನಿಮ್ಮ ತಪ್ಪುಗಳನ್ನು ಕ್ಷಮಿಸುವುದಿಲ್ಲ' (ಮತ್ತಾಯ 6:15) ಏಕೆಂದರೆ ದೇವರು ಪರಮದಯಾಳು ಹಾಗೂ ಕ್ಷಮಾರೂಪಿ. 'ಅವರ ಪಾಪಗಳನ್ನು ಕ್ಷಮಿಸುವೆನು, ಅವರ ತಪ್ಪುನೆಪ್ಪುಗಳನು ನೆನಪಿಗೆ ತಂದುಕೊಳ್ಳೆನು' ಎನ್ನುತ್ತಾರೆ ಸರ್ವೇಶ್ವರ ದೇವರು. (ಇಬ್ರಿಯರಿಗೆ 8:12) 

ಹಾಗಾಗಿಯೇ ರಾಷ್ಟ್ರಕವಿ ಗೋವಿಂದ ಪೈಯವರ ಕಥನಕಾವ್ಯ ಗೊಲ್ಗೊಥಾದಲ್ಲಿ ಬರುವ 'ಮರಣವೃಕ್ಷದೊಳಮೃತ ಫಲದಂತೆ' ಎಂಬ ಮಾತಿಗಿಂತ 'ಕ್ಷಮಿಸಿವರನೆಲೆ ತಂದೆ ತಾವೇನೆಸಗಿದಪೆವೆಂದರಿಯರಿವರು' ಎಂಬ ಮಾತು ಎಂದೆಂದಿಗೂ ಜಗದ ಮನ ಕಲಕುತ್ತದೆ. 

———— 

No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...