Friday, 5 April 2019

ಮಂತ್ರವಾದಿಯೊಬ್ಬ ನಿಮ್ಮ ಊರಕಡೆಗೆ ಬಂದರೆ ಎಚ್ಚರ ಕಟ್ಟೆಚ್ಚರ...ಜೋವಿ


ದೃಶ್ಯ 1 

ಎರಡು ದಿನಗಳ ಹಿಂದೆ ಮೆಜಸ್ಟಿಕ್ಕಿಗೆ ಹೋಗಲು ಒಂದು ಆಟೋ ಹತ್ತಿದೆ. “ಸರ್ ಮೀಟರ್ ಹಾಕಿ” ಎಂದು ಹೇಳಿದ್ದೇ ತಡ “ಸಾರ್ ನಾವ್ ಮೋಸ ಮಾಡುವವರಲ್ಲ… ಮೀಟರ್ ಹಾಕ್ತೀನಿ” ಎಂದು ಆಟೋ ಡ್ರೈವರ್ ಹೇಳಿದ. “ಇಲ್ಲ ಕಳೆದ ಸಲ ಆಟೋ ಡ್ರೈವರ್ ನನಗೆ ಮೋಸ ಮಾಡಿದ…ಅದಕ್ಕೆ ನಿಮ್ಗೆ ಮೀಟರ್ ಹಾಕಲು ಕೇಳಿಕೊಂಡೆ” ಎಂದು ಹೇಳಿ ಸುಮ್ಮನಾದೆ. ಕೆಲ ಹೊತ್ತು ನಾನು ನನ್ನ ಮೊಬೈಲ್ ಪೋನ್‍ನಲ್ಲಿ ಮಗ್ನನಾದೆ. “ಸಾರ್ ಎಲೆಕ್ಷನ್ ಬರ್ತಿದೆ..ಯಾವ ಪಕ್ಷಕ್ಕೆ ನಿಮ್ಮ ಓಟ್” ಎಂದು ಕೇಳಿದ ಡ್ರೈವರ್… “ಒಳ್ಳೆ ಪಕ್ಷಕ್ಕೆ ಓಟ್ ಹಾಕೋಣ ಬಿಡಿ” ಎಂದು ಉದಾಸೀನವಾಗಿ ಮಾತನಾಡಿದ ನನಗೆ ಅದೇ ಪ್ರಶ್ನೆಯನ್ನು ಅವನಿಗೆ ಕೇಳಬೇಕೆನಿಸಿತು. ನೀವು ಯಾರಿಗೆ ಓಟ್ ಹಾಕ್ತೀರಿ? ಎಂದು ಕೇಳಿದ್ದಕ್ಕೆ “ಎಲ್ಲಾ ಪಕ್ಷಗಳು ಒಂದೇ ಸಾರ್…ಯಾರು ಜನರಿಗೆ ಒಳ್ಳೆದು ಮಾಡೋಲ್ಲಾ… ಆದ್ರೆ ಎನ್ ಮಾಡೋದ್ ಸಾರ್ ..ಒಟ್ ಹಾಕ್ದೆ ಸುಮ್ನೆ ಇರಕ್ಕೂ ಆಗಲ್ಲ….ಪಕ್ಷಗಳೇ ಕಡಿಮೆ ಅಪಾಯಕಾರಿ ಪಕ್ಷಕ್ಕಾದ್ರೂ ಓಟ್ ಹಾಕ್ಬೇಕು” ಎಂದು ಹೇಳಿದ. ನಾನು ಮನಸ್ಸಿನಲ್ಲೇ …ಇವನದು theory of lesser evil ಎಂದು ಮನಸ್ಸಿನಲ್ಲೇ ಅಂದುಕೊಂಡೆ. 

ದೃಶ್ಯ 2 

ಲೋಕಸಭೆ ಎಲೆಕ್ಷನ್ ಬರ್ತಿದೆ… ನೀನು ಯಾವ ಪಕ್ಷಕ್ಕೆ ಓಟ್ ಮಾಡ್ತಿಯಾ? ಎಂದು ತುಂಬ ಸಲಿಗೆಯಿಂದಲೇ ನನ್ನ ಗೆಳೆಯನನ್ನು ಪ್ರಶ್ನೆ ಮಾಡಿದೆ. ನಮ್ ಪಕ್ಷ ಬಿಟ್ಟು ಯಾವ ಪಕ್ಷಕ್ಕೆ ಓಟ್ ಹಾಕೋದ್? ಅಗಿನಿಂದಲ್ಲೂ ನಮ್ಮ ಪ್ಯಾಮಿಲಿ ಅಂದ್ರೆ ನನ್ ತಾತ, ಅಪ್ಪ ಅಮ್ಮ ಎಲ್ಲರೂ ಅದೇ ಪಕ್ಷಕ್ಕೆ ಓಟ್ ಹಾಕೊಂಡ್ ಬರ್ತವ್ರೆ..ನಾನು ಕೂಡ ಅದೇ ಪಕ್ಷಕ್ಕೆ ಓಟ್ ಹಾಕೋದ್..” ಎಂದು ಹೇಳಿದ. ಇವನದು ಯಾವ theory ಎಂದು ಯೋಚಿಸುತ್ತಿದ್ದಂತೆ… ಇವನದು theory of tradition or loyalty ಇರ್ಬೇಕು ಎಂದು ಸುಮ್ಮನಾದೆ. 

ದೃಶ್ಯ 3 

ಇದು ನಾನು ಟೀವಿಯಲ್ಲಿ ನೋಡಿದ್ದು. ಚುನಾವಣೆಯ ಸಮೀಕ್ಷೆ ನಡೆಸುತ್ತಿರುವ ಚಾನೆಲ್… ಪ್ರತಿಯೊಂದು ಕ್ಷೇತ್ರಕ್ಕೆ ಹೋಗಿ ಮತದಾರರನ್ನು ಮಾತನಾಡಿಸುವ ಕಾರ್ಯಕ್ರಮವಿದು. ಮಂಡ್ಯ ಜಿಲ್ಲೆಯಲ್ಲಿ ಒಬ್ಬ ಮತದಾರರನ್ನು ಮಾತನಾಡಿಸಿದ ನಿರೂಪಕಿ “ಸರ್ ನಿಮ್ಮ ಮತ ಯಾರಿಗೆ?” ಎಂದು ಕೇಳಿದಾಗ… “ಇದು ಸ್ವಾಭಿಮಾನದ ಪ್ರಶ್ನೆ..ನಮ್ಮ ಮನೆಯ ಹೆಣ್ಮಗಳಿಗೆ ನನ್ನ ಓಟ್” ಎಂದು ಹೇಳಿದ…ಈ ಮನುಷ್ಯನ theory ಏನಿರಬಹುದು? ಎಂದು ಯೋಚಿಸಿದಾಗ…ನನ್ ಜನ, ನಮ್ಮವರು, ನಮ್ ಜಾತಿ, ನಮ್ ಧರ್ಮ ಇವೆಲ್ಲಾ ಸೇರಿ ಇವೆಲ್ಲಾ ಒಂದು ಥಿಯರಿ ಅಗಬಹುದೇನೋ!!! 



ನಾವೆಲ್ಲಾ ಸೇರಿ ನಮ್ಮ ಸರ್ಕಾರವನ್ನು ಆರಿಸಿಕೊಳ್ಳುವ ಅಂದರೆ ನಮ್ಮ ನಮ್ಮ ನಾಯಕರನ್ನು ಆರಿಸಿಕೊಳ್ಳುವ ಕಾಲಘಟ್ಟದಲ್ಲಿದ್ದೇವೆ. ಕೆಲವೇ ದಿನಗಳಲ್ಲಿ ಚುನಾವಣೆ ನಡೆಯಲಿದೆ. ನಮ್ಮದು ಪ್ರಜಾಪ್ರಭುತ್ವ ದೇಶವಾದ್ದರಿಂದ ನಾವು ನಮ್ಮ ಸರ್ಕಾರವನ್ನು ಓಟ್ ಮಾಡುವುದರ ಮೂಲಕ ಆರಿಸಿಕೊಳ್ಳುತ್ತೇವೆ. ನಾವು ಆರಿಸಿಕೊಳ್ಳುವ ಸರ್ಕಾರದ ಅಸ್ತಿತ್ವವು ಸುಮಾರು ಐದು ವರ್ಷಗಳಾದ್ದರಿಂದ ನಮ್ಮ ಆಯ್ಕೆ ಬುದ್ಧಿವಂತಿಕೆಯ ಆಯ್ಕೆ ಆಗಬೇಕು. ಆದರೆ ಈ ಅಯ್ಕೆಯ ಪ್ರಕ್ರಿಯೆ ಸುಲಭದ್ದಲ್ಲ. ನಾನಾ ರೀತಿಯ ಸಿದ್ಧಾಂತಗಳು ರಹಸ್ಯವಾಗಿ ನಮ್ಮ ಆಯ್ಕೆಯನ್ನು ಉತ್ತೇಜಿಸುತ್ತಿರುತ್ತವೆ; ಜಾತಿಯ ಲೆಕ್ಕಾಚಾರವಿರಬಹುದು, ಹುಸಿ ರಾಷ್ಟ್ರಪ್ರೇಮ, ದೇಶಭಕ್ತಿಯ ಆಖ್ಯಾನಗಳಿರಬಹುದು; ಯುದ್ದೋನ್ಮಾದದ ಕಥನಗಳಿರಬಹುದು, ಜಾತಿಧರ್ಮರಕ್ಷಣೆಯ ನೆಪವಿರಬಹುದು. ಜತೆಗೆ ಈ ಅಯ್ಕೆ ಪ್ರಕ್ರಿಯೆಯ ಕೇಂದ್ರಬಿಂದು ಚುನಾವಣೆಯ ಕಾರ್ಯವಿಧಾನದಲ್ಲೂ ಅನೇಕ ನ್ಯೂನತೆಗಳಿರುವುದರಿಂದ ಆಯ್ಕೆಯನ್ನು ಮತ್ತಷ್ಟು ಸಂಕೀರ್ಣಗೊಳಿಸಿದೆ. ಆದರೆ ನಾವು ಮತ ಹಾಕುವುದಕ್ಕಿಂತ ಮತ ಚಲಾಯಿಸಬೇಕಾಗಿದೆ. ಅಂದರೆ ಮತವನ್ನು ನಾವು ಬುದ್ದಿವಂತಿಕೆಯಿಂದ ಚಲಾಯಿಸಬೇಕಾಗಿದೆ. ಮತ ಚಲಾಯಿಸುವ ಗಳಿಗೆಯಲ್ಲಿ ಜನಪರ ಸರ್ಕಾರದ ಆಯ್ಕೆ ಎಂಬ ಸ್ಪಷ್ಟ ಉದ್ದೇಶ ನಮ್ಮ ಪ್ರೇರಣೆಯಾಗಬೇಕಾಗಿದೆ. ಒಂದು ಕೆಟ್ಟ ಸರ್ಕಾರವನ್ನು ಆರಿಸಿಕೊಂಡು ಮುಂದೆ ವಿಷಾದಪಡುವುದಕ್ಕಿಂತ ಮುನ್ನೆಚ್ಚರಿಕೆ ಕ್ರಮವಾಗಿ ಹೆಚ್ಚಿನ ಅರಿವಿನಿಂದ ನಮ್ಮ ಸರ್ಕಾರವನ್ನು ಆರಿಸಿಕೊಳ್ಳುವ ಅನಿವಾರ್ಯ ನಮಗಿದೆ. ಅಯ್ಕೆಯ ವಿಷಯ ಬಂದಾಗ ಎಷ್ಟೋ ಸಲ ನಾವು ಎಡವಿರುವುದನ್ನು ಇತಿಹಾಸ ಪುಟಗಳು ನಮ್ಮ ಮುಂದಿಟ್ಟಿವೆ. ಇಂತಹ ತಪ್ಪುಗಳಿಂದ ನಾವು ಪಾಠಗಳನ್ನು ಕಲಿಯಬೇಕೇ ವಿನಃ ಅಂತಹ ತಪ್ಪುಗಳನ್ನು ನಾವು ಪುನರಾವರ್ತಿಸಿಬಾರದು. 



ಕಳೆದ ತಿಂಗಳಲ್ಲಿ ಮಂಗಳೂರಿನ ಧರ್ಮಕ್ಷೇತ್ರಕ್ಕೆ ಸೇರಿದ ಸುಮಾರು 20 ಯಾಜಕರು ಸೇರಿ ಒಂದು ನಾಟಕವನ್ನು ಅಭಿನಯಿಸಿ ಪ್ರದರ್ಶಿಸಿದರು. ಬರಬ್ಬ ಮತ್ತು ಕ್ರಿಸ್ತ ಈ ಇಬ್ಬರಲ್ಲಿ ಒಬ್ಬರನ್ನು ಬಿಡುಗಡೆಗೆ ಆರಿಸಿಕೊಳ್ಳುವ ಸನ್ನಿವೇಶವೇ ಈ ನಾಟಕದ ಕಥಾವಸ್ತು. ನಾಟಕದೊಳಗೆ ನಾಟಕವೆಂಬಂತೆ ಈ ನಾಟಕದಲ್ಲಿ ಸಮಾನಾಂತರವಾಗಿ ಇನ್ನೊಂದು ಕಥೆ ಮೂಡಿಬರುತ್ತದೆ. ಒಂದು ಕಡೆ ಕ್ರಿಸ್ತ ಮತ್ತು ಬರಬ್ಬನ ಆಯ್ಕೆಯ ವಿಷಯವನ್ನು ಪ್ರಸ್ತಾಪಿಸುತ್ತಲೇ ವರ್ತಮಾನದ ಗಂಭೀರ ವಿಷಯವಾಗಿರುವ ಒಳ್ಳೆ ನಾಯಕ ಮತ್ತು ದುಷ್ಟನಾಯಕನ ಆಯ್ಕೆಯ ಪ್ರಕ್ರಿಯೆಯನ್ನು ಸಹ ಈ ನಾಟಕ ಪ್ರಸ್ತುತಪಡಿಸುತ್ತದೆ. 

ಬರಬ್ಬ ಒಬ್ಬ ಸ್ವಾತಂತ್ರ ಹೋರಾಟಗಾರ ದಂಗೆಕೋರ, ಕೊಲೆಗಾರ. ರೋಮನ್ನರ ವಿರುದ್ಧ ಕತ್ತಿ ಮಸೆದವ, ಹಿಂಸೆಯಿಂದ ಮಾತ್ರ ಜಯ ಸಾಧ್ಯವೆಂಬುದು ಅವನ ನಂಬಿಕೆ. ನಿನ್ನ ಶತ್ರುವನ್ನು ದ್ವೇಷಿಸು; ಅವರನ್ನು ಮಣಿಸಲು ಏನು ಮಾಡಲೂ ಹಿಂಜರಿಕೆ ಬೇಡ ಎಂಬುವುದು ಅವನ ಸಿದ್ಧಾಂತ. 

ಮತ್ತೊಂದು ಕಡೆ ಕ್ರಿಸ್ತ. ಶಾಂತಿಯ ಪ್ರತಿವಾದಕ. ಒಂದು ಕೆನ್ನೆಗೆ ಹೋಡೆದರೆ ಇನ್ನೊಂದು ಕೆನ್ನೆಯನ್ನು ಸಹ ನೀಡು ಎಂದು ಬೋಧಿಸಿದಾತ. ತನಗೆ ಚಿತ್ರಹಿಂಸೆಯನ್ನು ನೀಡಿದ ವ್ಯಕ್ತಿಗಳಿಗೂ ತಂದೆ ದೇವರಲ್ಲಿ ಪ್ರಾರ್ಥಿಸಿದ ಕರುಣಾಮಯಿ. “ನಿನ್ನ ಶತ್ರುಗಳನ್ನು ಪ್ರೀತಿಸು” ಎಂಬುವುದು ಅವನ ಬದುಕಿನ ಪಿಲಾಸಫಿ. 

ಹೌದು ಕ್ರಿಸ್ತ ನಂಬಿಕೆ ಇಟ್ಟಿದು ಶಾಂತಿಯಲ್ಲಿ. ಯುದ್ಧ ಹಿಂಸೆ ಎಂಬುವುದು ಮನುಷ್ಯನ ದೌರ್ಬಲ್ಯ. ಬುದ್ದಿ ಪ್ರೀತಿಯ ಕೊರತೆ ಫಲ ಅದು. ಮನಸ್ಸಿನ ಒರಟುತನ ಅದು. ಮಾನವತೆಯನ್ನೇ ನಿರ್ದಯಿಗಳ ಕೈಗೆ ಒಪ್ಪಿಸುವ ಕೂರತ್ವ ಅದು. ಯಾವಾಗ ನೀನು ನಿನ್ನ ಶತ್ರುಗಳನ್ನು ಪ್ರೀತಿಯ ಮನೋಧರ್ಮದಲ್ಲಿ ಬಂಧಿಸುವೆಯೋ ಆಗ ನೀನು ಶಕ್ತಿಶಾಲಿಯಾಗಿ ಹೊರಹೊಮ್ಮುವೆ. ಹಿಂಸೆಯ ಹುಚ್ಚಾಟಿಕೆಯಿಂದ ಮನಕುಲವನ್ನು ರಕ್ಷಿಸಲು ಸಾಧ್ಯವಿಲ್ಲ ಎಂಬುವುದು ಕ್ರಿಸ್ತನ ನಿಲುವು. 

ತೀರ್ಪಿನ ಸಮಯದಲ್ಲಿ ಜನರು “ಇವನನ್ನು ಮುಗಿಸಿಬಿಡಿ ಬರಬ್ಬನನ್ನು ನಮಗೆ ಬಿಡುಗಡೆ ಮಾಡಿ” ಎಂದು ಒಕ್ಕೊರಲಿನಿಂದ ಬೊಬ್ಬೆಹಾಕಿ ಕ್ರಿಸ್ತನನ್ನು ಶಿಲುಬೆ ಏರಿಸುವ ತೀರ್ಪನ್ನು ಪಡೆಯುವುದರಲ್ಲಿ ಯಶಸ್ಸುಪಡೆದುಕೊಳ್ಳುತ್ತಾರೆ. 

ಮೂಲ ಕಥಾವಸ್ತುವಿನ ಜತೆಗೆ ಸಮಾನಾಂತರವಾಗಿ ನಡೆಯುವ ಕಥೆಯು ಸಹ ಮನೋಜ್ಞವಾಗಿ ಕೊನೆಗೊಳ್ಳುತ್ತದೆ. ಇಬ್ಬರು ರಾಜಕಾರಣಿಗಳು. ಒಬ್ಬನು ಜನರ ಅಭಿವೃದ್ಧಿಗೆ ಸಂಕಲ್ಪತೊಟ್ಟು ದುಡಿಯುವವ. ಇನ್ನೊಬ್ಬ ತನ್ನ ಸುಳ್ಳುಗಳಿಂದ ಪ್ರಚಾರಗಿಟ್ಟಿಸಿಕೊಳ್ಳುವವ. ಒಬ್ಬ ತಾನು ಮಾಡಿದ ಅಭಿವೃದ್ಧಿಯನ್ನು ಆಧಾರಿಸಿ ಮತಕೇಳಿದರೆ, ಮತ್ತೊಬ್ಬ ಚುನಾವಣೆಯನ್ನು ಕೋಮೀಕರಣಗೊಳಿಸಿ ತನ್ನ ಧರ್ಮವನ್ನು ರಕ್ಷಿಸಲು(?) ಅಧಿಕಾರ ಬೇಕೆಂದು ಹಪಹಪಿಸುವ ಷಡ್ಯಂತ್ರ ಕೋಮುವಾದಿ. 



ನಾಟಕದ ಕೊನೆಯಲ್ಲಿ ಕೊಲೆಗಾರ, ಪ್ರತ್ಯೇಕವಾದಿ, ಹಿಂಸಕ ಬರಬ್ಬ ಬಿಡುಗಡೆಗೊಂಡರೆ, ಸಮಾನಾಂತರವಾಗಿ ಮೂಡಿಬಂದ ಇನ್ನೊಂದು ಕಥೆಯಲ್ಲಿ ದುಷ್ಟನಾಯಕ ಚುಣಾವಣೆಯಲ್ಲಿ ಗೆಲ್ಲುತ್ತಾನೆ. ಗೆಲ್ಲುತ್ತಾನೆ ಅನ್ನುವುದಕ್ಕಿಂತ ಜನರು ದುಷ್ಟನಾಯಕನನ್ನು ಆರಿಸಿಕೊಳ್ಳುತ್ತಾರೆ. 

ಎರಡು ಕಡೆಗಳಲ್ಲೂ ಜನರ ಆಯ್ಕೆಗಳಲ್ಲಿ ತಪ್ಪುಗಳನ್ನು ಕಾಣಬಹುದು. ಆದರೆ ಇಂತಹ ತಪ್ಪುಗಳನ್ನು ಇವತ್ತಿಗೂ ಕೂಡ ನಮ್ಮಿಂದ ನಡೆಯುತ್ತಿದೆ. ಆದ್ದರಿಂದ ಚುನಾವಣೆಯ ಹೊಸ್ತಿಲಲ್ಲಿ ಇರುವ ನಾವು ನಮ್ಮ ಓಟುಗಳನ್ನು ಬುದ್ಧಿವಂತ ಜನರಾಗಿ ಚಲಾಯಿಸೋಣ. 



ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್(ಎಡಿಆರ್)ನವರು ದೇಶಾದಾದ್ಯಂತ ನಡೆಸಿದ ಸರ್ವೆಯಲ್ಲಿ ಮತದಾರರು ಮೊದಲ ಹತ್ತು ಆದ್ಯತಾ ಕೇತ್ರಗಳಲ್ಲಿ ಸರ್ಕಾರದ ಸಾಧನೆ ಕಳಪೆಯದಾಗಿದೆ ಎಂದು ಜನರು ತಿಳಿಸಿದ್ದಾರೆ. ಉತ್ತಮ ಉದ್ಯೋಗ ಸೃಷ್ಟಿ, ಆರೋಗ್ಯ ಸೇವೆ, ಶುದ್ಧ ಕುಡಿಯುವ ನೀರಿನ ಲಭ್ಯತೆ, ಉತ್ತಮ ರಸ್ತೆಗಳು, ಉತ್ತಮ ಸಾರ್ವಜನಿಕ ಸಾರಿಗೆ, ವ್ಯವಸಾಯಕ್ಕೆ ಉತ್ತಮ ನೀರಾವರಿ ಸೌಲಭ್ಯ, ಕೃಷಿ ಸಾಲದ ಸುಲಭ ಲಭ್ಯತೆ, ರೈತರಿಗೆ ಸರಿಯಾದ ಬೆಂಬಲ ಬೆಲೆ, ಬೀಜ ಹಾಗು ರಸಗೊಬ್ಬರಕ್ಕೆ ಸರಿಯಾದ ಸಬ್ಸಿಡಿ ಹೀಗೆ ತಮ್ಮ ಆದ್ಯತಾ ಕ್ಷೇತ್ರಗಳನ್ನು ತಿಳಿಸಿರುವ ಜನರು ಒಂದು ಉತ್ತಮ ಸಮರ್ಪಕವಾದ ಸರ್ಕಾರವನ್ನು ಆರಿಸಿ ತಂದು ಅಭಿವೃದ್ಧಿಯ ಬೆಳಕನ್ನು ಕಾಣಲಿ. ಅಭಿವೃದ್ಧಿ ಆಧಾರಿತ ವಿಷಯಗಳನ್ನು ಬದಿಗೆ ಸರಿಸಿ ಜನರ ಗಮನವನ್ನು ಪಾಕಿಸ್ತಾನ, ಉಗ್ರರ ದಾಳಿಯಂಥ ವಿಷಯಗಳಿಗೆ ಸೀಮಿತಗೊಳಿಸಿ ಚುನಾವಣೆ ನಡೆಸುವ ಪ್ರಯತ್ನದಲ್ಲಿರುವವರಿಗೆ ಸರಿಯಾದ ಪಾಠ ಕಲಿಸಲು ಈ ಚುನಾವಣೆ ಸಹಕಾರಿಯಾಗಲಿ. 



ಕೊನೆಗೆ ಆಫ್ರಿಕನ್ ಕವಿತೆಯ ಕೆಲ ಸಾಲುಗಳು. 

‘ಹೊಳೆಹೊಳೆಯುವ ಪಂಜರದಲಿ 

ಗರುಡಪಕ್ಷಿ ಇಟ್ಟುಕೊಂಡು,ಗಿಫ್ಟು ಫಫ್ಟು ಕೊಟ್ಟುಕೊಂಡು 

ಮಂತ್ರವಾದಿಯೊಬ್ಬ ನಿಮ್ಮ ಊರಕಡೆಗೆ ಬಂದರೆ 

ಎಚ್ಚರ ಕಟ್ಟೆಚ್ಚರ ಬದಲಾವಣೆ ಬಂದಿದೆ. 

ಅವನು ತನ್ನ ಮುಷ್ಟಿಯಲ್ಲಿ ಬೂದಿಬ್ರೆಡ್ಡು ತೆಗೆದುಕೊಂಡು 

ಅದನೆ ಜೇನುಕೇಕು ಎಂದು ಮಂಕುಬೂದಿ ಹಾಕುತಾನೆ 

ಮುಗುಳುನಗೆಯೇ ಮಂತ್ರದಂಡ, 

ಮಾತಿನಿಂದ ಇಂದ್ರಜಾಲ, 

ಒಂದನೊಂಬತ್ತು ಎನಿಸಿ,ಸೊನ್ನೆಯಿಂದ ಸ್ವರ್ಗ ಕಟ್ಟಿ 

ನಿಮ್ಮದೆಲ್ಲ ಕಿತ್ತುಕೊಂಡು,ನಾಮ ಹಾಕಿ ಸುಖಿಸುತಾನೆ, 

ಹಣದುಬ್ಬರ ಎನ್ನುತಾನೆ,ನಾನೆ ಬಡವ ಎನ್ನುತಾನೆ, 

ಹೊಳೆ ಹೊಳೆವ ಪಂಜರದಲಿ 

ಗರುಡಪಕ್ಷಿ ಇಟ್ಟುಕೊಂಡು ಗಿಫ್ಟು ಫಫ್ಟು 

ಕೊಟ್ಟುಕೊಂಡು...' 

(‘ಕಪ್ಪು ಕವಿತೆ' ಸಂಕಲನ.ಅಭಿನವ ಪ್ರಕಾಶನ.ಅನುವಾದ-ಎಚ್.ಎಸ್.ರಾಘವೇಂದ್ರರಾವ್) 

ಪುನರುತ್ಥಾನ ಹಬ್ಬದ ಶುಭಾಶಯಗಳು 

ಕ್ರಿಸ್ತನ ಪುನರುತ್ಥಾನ ಒಂದು ಕಲ್ಪನೆಯಲ್ಲ. ಅದುಕಟ್ಟು ಕಥೆಯೂ ಅಲ್ಲ. ಅದು ನಮ್ಮ ಗಾಢವಾದ ವಿಶ್ವಾಸ. ಯೇಸುಸ್ವಾಮಿ ಸತ್ತ ಮೂರನೆಯ ದಿನ ಪುನರುತ್ಥಾನ ಹೊಂದಿದರು. ಅವರಲ್ಲಿ ವಿಶ್ವಾಸವಿಟ್ಟು ಸತ್ತವರು ಪುನಃ ಜೀವಂತವಾಗಿ ಎದ್ದು ಬರುವರು ಎಂಬ ಅಚಲ ನಂಬಿಕೆ ನಮ್ಮದು. ಯೇಸುವಿನ ಪುನರುತ್ಥಾನವೆಂಬುದು ಆತ್ಮವು ಭೌತಿಕ ನಿಧನದ ನಂತರ ಹೊಸ ದೇಹದಲ್ಲಿ ಹೊಸ ಜೀವನವನ್ನು ಕಂಡುಕೊಳ್ಳುವ ಧಾರ್ಮಿಕ ಅಥವಾ ತತ್ವಶಾಸ್ತ್ರೀಯ ಸಿದ್ಧಾಂತವಾದ ಪುನರ್ಜನ್ಮವಲ್ಲ. ಅದು ಲಾಜರನಂತೆ ಪುನರ್ಜೀವನ ಪಡೆದು ಮತ್ತೊಮ್ಮೆ ಸತ್ತ ಪುನರ್ಜೀವವಲ್ಲ. ಯೇಸುವಿನ ಪುನರುತ್ಥಾನಕ್ಕೂ ಲಾಜರನನ್ನು ಪುನಃ ಜೀವಂತಗೊಳಿಸಿದ್ದಕ್ಕೂ ವ್ಯತ್ಯಾಸವಿದೆ. ಲಾಜರನ ದೇಹ ಸಾವಿಗೀಡಾಗುವಂತಹದು. ಆದರೆ ಸತ್ತವರ ಮಧ್ಯದಿಂದ ಪುನಃ ಜೀವಂತಗೊಳಿಸಲ್ಪಟ್ಟ ಕ್ರಿಸ್ತ ಮತ್ತೆಂದೂ ಸಾಯುವವನಲ್ಲ. ಸಾವಿಗೆ ಅವನ ಮೇಲೆ ಇನ್ನು ಅಧಿಕಾರವಿಲ್ಲ (ರೋಮನ್ನರಿಗೆ ಬರೆದ ಪತ್ರ). 

ಪುನರುತ್ಥಾನವೆಂಬುವುದು ನಮ್ಮ ನಶ್ವರತೆಯನ್ನು ಕಳೆದುಕೊಂಡು ಮಹಿಮಾ ರೂಪವನ್ನು ಪಡೆಯುವುದು, ಸ್ವರ್ಗದ ಜೀವವನ್ನು ಪಡೆಯುವುದು ಮತ್ತು ಬದುಕಿನ ಪರಿಪೂರ್ಣತೆಯನ್ನು ದೊರಕಿಸಿಕೊಳ್ಳುವುದು. ಆದ್ದರಿಂದ ಪುನರುತ್ಥಾನವೆಂಬುದು ಕ್ರೈಸ್ತ ವಿಶ್ವಾಸದ ಬುನಾದಿ, ಧರ್ಮದ ಜೀವಾಳ. ಈ ಪುನರುತ್ಥಾನಕ್ಕೆ ಪ್ರಮುಖ ಆಧಾರವೇ ಯೇಸುವಿನ ಪುನರುತ್ಥಾನ. 

ಪುನರುತ್ಥಾನವನ್ನು ಸಾಮಾಜಿಕ ದೃಷ್ಟಿಯಿಂದ ಕಂಡಾಗ, ಅದು ಒಂದು ಸತ್ಯದ ಗೆಲುವು, ಸಮಾಜಿಕ ಕಾಳಜಿಯ ಮುಂದುವರಿಕೆ. ಕ್ರಿಸ್ತ ಅನ್ಯಾಯದ ವಿರುದ್ಧ ಸಿಡಿದೆದ್ದು, ಬಡವರನ್ನು ದುರ್ಬಲರನ್ನು ಶೋಷಿಸುತ್ತಿದ್ದ ಧಾರ್ಮಿಕ ಹಾಗು ರಾಜಕೀಯ ಮುಖಂಡರನ್ನು ಖಂಡಿಸಿದ. ಕೊನೆಗೆ ಮುಖಂಡರ ಕ್ರೌರ್ಯಕ್ಕೆ ಶಿಲುಬೆಯಲ್ಲಿ ಬಲಿಯಾದರೂ, ಅವನು ಸಾಯಲಿಲ್ಲ. ಸಾವಿರಾರು ಜನರಲ್ಲಿ ನ್ಯಾಯದ ಧ್ವನಿಯಾದ, ಸಮಾನತೆಯ ಬೀಜಗಳಾಗಿ ಪುಟಿದೆದ್ದ. ಎರಡು ಸಾವಿರ ವರ್ಷಗಳಾದರೂ ಸಾವಿರಾರು ಮಾನವೀಯತೆಯ ಹೃದಯಗಳಲ್ಲಿ ನ್ಯಾಯದ ಮಿಡಿತವಾಗಿರುವ ಕ್ರಿಸ್ತ ನಮ್ಮೆಲ್ಲರ ಜೀವಂತ ಕ್ರಿಸ್ತ. 

ವೈಯಕ್ತಿವಾಗಿ ಪುನರುತ್ಥಾನ ನಮ್ಮಲ್ಲಿ ಹೊಸತನ ತರುವ ಹಬ್ಬ. ಹತಾಶೆಗೊಂಡಾಗ ಆಶಾಕಿರಣವಾಗುವ ಹಬ್ಬ. ಕಷ್ಟ ಬಂದಾಗ ಧೈರ್ಯದಿಂದ ಎದುರಿಸಲು ಭರವಸೆಯನ್ನು ತುಂಬಿಸುವಂತಹ ಹಬ್ಬ. ಪುನರುತ್ಥಾನ ಕೇವಲ ಒಂದು ಆಚರಣೆಯಾಗದೆ ಕಲಿಕೆಗೆ ಬದುಕಿಗೆ ಆದರ್ಶವಾಗಲಿ, ಹೀಗೆ ಪುನರುತ್ಥಾನ ಆದರ್ಶವಾದಾಗ ಪುನರುತ್ಥಾನಗೊಂಡ ಕ್ರಿಸ್ತ ನಮ್ಮೊಳಗೆ ಹೊಸಮುಖ, ಹೊಸಜೀವ, ಹೊಸ ಉತ್ಸಾಹ ತುಂಬುವರು. ಇದೇ ನಿಜವಾದ ಪುನರುತ್ಥಾನ. 



ಎಲ್ಲರಿಗೂ ಪುನರುತ್ಥಾನ ಹಬ್ಬದ ಶುಭಾಶಯಗಳು 



********* 

No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...