Friday, 5 April 2019

ಪರಿವರ್ತನೆ!  ಫಾದರ್ ಪಿ ವಿಜಯಕುಮಾರ್, ಬಳ್ಳಾರಿ


ಪರಿವರ್ತನೆ ಜಗದ ನಿಯಮ. ಪರಿವರ್ತನೆ ಸ್ಥಗಿತಗೊಂಡರೆ ಜಗತ್ತೇ ಒಂದು ಕ್ಷಣ ಸ್ತಬ್ಧವಾಗಬಹುದೇನೋ! ಈ ಪ್ರಕೃತಿಯ ಮಡಿಲಿನಲ್ಲಿ ಮಾನವನ ಪರಿವರ್ತನೆ ನಿರಂತರವೂ ಸಾಗುತ್ತಲೇ ಇದೆ. ಅದು ಸಕಾರಾತ್ಮಕವಾದಾಗ ಬದುಕು ಎಡಬಿಡದೆ ನೈಜ ಪ್ರಗತಿ ಹಾಗೂ ಪರಿಪೂರ್ಣತೆಯತ್ತ ಸಾಗುತ್ತಲಿರುತ್ತದೆ. ಆದರೆ ಇಂದು ಮಾನವನ ಭೌತಿಕ ಹಾಗೂ ಸುತ್ತಮುತ್ತಲಿನ ಬದಲಾವಣೆಗಿಂತ ಆಂತರಿಕ ಬದಲಾವಣೆ ಬಹುಮುಖ್ಯ. ಇದನ್ನು ಕಥೋಲಿಕ ಧರ್ಮಸಭೆಯ ಧಮೋಪದೇಶ (ಸಿಸಿಸಿ) 1430ರಲ್ಲಿ conversion of heart, interior conversion"(ಹೃದಯ ಪರಿವರ್ತನೆ ಹಾಗೂ ಆಂತರಿಕ ಪರಿವರ್ತನೆ) ಎಂದು ಸ್ಪಷ್ಟವಾಗಿ ವಿವರಿಸಲಾಗಿದೆ. ನೈಜ ಪರಿವರ್ತನೆಯಲ್ಲಿ ಮಾನವನ ನಡೆ-ನುಡಿ, ಅಲೋಚನೆ, ಮಾಡುವ ಕಾಯಕ ಹಾಗೂ ಎಲ್ಲದರಲ್ಲಿಯೂ ಪಾರದರ್ಶಕತೆ, ನಿಷ್ಠೆ ಹಾಗೂ ಪ್ರಾಮಾಣಿಕತೆಗಳು ಮನೆಮಾಡುತ್ತವೆ. ಒಟ್ಟಾರೆ ಮಾನವ ತನ್ನನ್ನು ತಾನು ಅರಿತುಕೊಂಡು ತನ್ನ ಸೃಷ್ಟಿಕರ್ತನೆಡೆಗೆ ಸಾಗಿ ಅನಂತನಲ್ಲಿ ಅನಂತನಾಗಲು ತನುಮನಗಳ ಪರಿವರ್ತನೆ ಅತ್ಯಗತ್ಯ. ಮಾನವ ತನ್ನ ಸಮಗ್ರ ಜೀವನಕ್ಕೆ ಹಾಗೂ ಆಧ್ಯಾತ್ಮಿಕವಾಗಿ ದೇವರೆಡೆಗೆ ಸಂಪೂರ್ಣವಾಗಿ ಅಭಿಮುಖನಾಗಲು ಮನಪರಿವರ್ತನೆಯ ಕ್ರಿಯೆ ಪ್ರಾಮಾಣಿಕವಾಗಿ ಸಾಗುತ್ತಲಿರಬೇಕು. ಇದೊಂದು ನಿತ್ಯ ಸತ್ಯ ಹಾಗೂ ನಿರಂತರ ಪ್ರಕ್ರಿಯೆ. ಈ ಪ್ರಕ್ರಿಯೆಗೆ ಎಲ್ಲಕ್ಕಿಂತ ಮಿಗಿಲಾಗಿ ದೈವೀಸ್ಪರ್ಶ ಅವಶ್ಯಕ.ಇದು ಮಾನವನ ಬೌತಿಕ ಶಕ್ತಿಗೆ ನಿಲುಕದ್ದು. 

ಮಾನವ ದೈವೀಸ್ಪರ್ಶದಿಂದ ಭೂಷಿತನಾಗಿ, ಆಧ್ಯಾತ್ಮಿಕವಾಗಿ ಪ್ರಗತಿಯಾಗಲು ನಿರಂತರ ಪ್ರಾರ್ಥನೆ, ಉಪವಾಸ ಹಾಗೂ ದಾನ-ಧರ್ಮಗಳು ಸರಳ ಸಾಧನಗಳಾಗಿವೆ. ಇವುಗಳನ್ನು ನಿಷ್ಠೆಯಿಂದ ಪಾಲಿಸಿದಾಗ ಅದು ಸಕಾರಾತ್ಮಕ ಹಾಗೂ ಫಲಭರಿತ ಮನಪರಿವರ್ತನೆಗೆ ಚಾಲನೆ ನೀಡುತ್ತದೆ. ಪ್ರಾರ್ಥನೆಯು ಮಾನವ ಮತ್ತು ದೈವೀಕ ಸಂಬಂಧವನ್ನು ಬೆಸೆದರೆ, ಉಪವಾಸ ಅದನ್ನು ಬಲಗೊಳಿಸುತ್ತದೆ, ದಾನ-ಧರ್ಮ ಅದನ್ನು ವೃದ್ಧಿಗೊಳಿಸುತ್ತದೆ. ಮಾನವ ಮತ್ತು ದೇವರ ಸಂಬಂಧ ಸ್ಥಿರವಾಗಬೇಕಾದರೆ ಈ ಮೂರೂ ಅನರ್ಘ್ಯ ರತ್ನಗಳು ಬಹಳ ಪ್ರಮುಖವಾಗುತ್ತವೆ. ಇವು ಒಂದಕ್ಕೊಂದು ಪೂರಕವಾಗಿ ಕಾರ್ಯ ನಿರ್ವಹಿಸುತ್ತವೆ. ಇವು ಮಾನವನ ಆಧ್ಯಾತ್ಮಿಕ ಪ್ರಗತಿಯ ಸ್ಥಿರ ಮೆಟ್ಟಲುಗಳು! ಆದರೆ ಹೃದಯ ಪರಿವರ್ತನೆ "cumpunctio cordis"- "repentance of heart" ಆಗದಿದ್ದಲ್ಲಿ ಇವುಗಳ ಅನುಸರಣೆ ವ್ಯರ್ಥವೆನ್ನುತ್ತಾರೆ ನಮ್ಮ ಧರ್ಮಸಭೆಯ ಪಿತಾಮಹರು 

ತಾಯಿ ಪವಿತ್ರ ಧರ್ಮಸಭೆಯು ತನ್ನ ಪ್ರೀತಿಯ ಮಕ್ಕಳು ತಮ್ಮ ಸ್ವಾರ್ಥದ ಸೆರೆಯಿಂದ ಬಿಡುಗಡೆಯಾಗಿ ಆಧ್ಯಾತ್ಮಿಕ ಪರಿಪಕ್ವತೆಗೆ ಅವಶ್ಯವಿರುವ ದೈವಜ್ಞಾನವನ್ನು ಹೊಂದಲು, ವಿಶೇಷವಾಗಿ, ತಡೆಗೋಡೆಗಳಂತಿರುವ ಸ್ವಾರ್ಥ, ಅಸೂಯೆಗಳಿಂದ ಮುರಿದ, ಮಾನವ ಮತ್ತು ದೈವ ಸಂಬಂಧಗಳನ್ನು ಸರಿಪಡಿಸಿಕೊಳ್ಳಲು ಪ್ರತಿ ವರ್ಷ ತಪಸ್ಸು ಕಾಲವನ್ನು ವರದಾನವಾಗಿ ನೀಡುತ್ತಾಳೆ ಹಾಗೂ ಮಾನಸಾಂತರ ಹೊಂದಿ ಹೃದಯ ಪರಿವರ್ತನೆಹೊಂದಲು ಪ್ರಾರ್ಥನೆ, ಉಪವಾಸ ಹಾಗೂ ದಾನ-ಧರ್ಮಗಳಲ್ಲಿ ನಿರತರಾಗುವಂತೆ ಕರೆನೀಡುತ್ತಾಳೆ. ಯಾರು ಆಕೆಯ ಕರೆಗೆ ಓಗೊಟ್ಟು ಈ ಮೂರು ಅನರ್ಘ್ಯ ರತ್ನಗಳನ್ನು ಕ್ರಿಯಾತ್ಮಕವಾಗಿ ಅಳವಡಿಸಿಕೊಳ್ಳುತ್ತಾರೋ ಅವರು ಪವಿತ್ರಾತ್ಮರ ಅನುಗ್ರಹಕ್ಕೆ ಪಾತ್ರರಾಗಿ ನೈಜ ಮನಪರಿವರ್ತನೆಗೆ ತೆರೆದುಕೊಳ್ಳುತ್ತಾರೆ. 

ಮನಪರಿವರ್ತನೆಯ ಪ್ರಥಮ ಹೆಜ್ಜೆ ಮಾಡಿದ ಪಾಪಕ್ಕೆ ಪ್ರಾಯಶ್ಚಿತ್ತ. ಹಳೆಯ ಕಾಲದಲ್ಲಿ ಪ್ರವಾದಿಗಳು ದೇವಜನರನ್ನು ಎಚ್ಚರಿಸಿದಾಗ ಅವರು ಪ್ರಾಯಶ್ಚಿತ್ತದ ಸಂಕೇತವಾಗಿ ತಮ್ಮ ಬಟ್ಟೆನ್ನು ಹರಿದುಕೊಂಡು,ಗೊಣಿತಟ್ಟನ್ನು ತೊಟ್ಟುಕೊಂಡು, ಮೈಗೆ ಬೂದಿಯನ್ನು ಬಳಿದುಕೊಂಡು, ಬೂದಿಯ ಮೇಲೆ ಕುಳಿತು ಕಠಿಣ ತಪಸ್ಸು ಮಾಡುತ್ತಿದ್ದರು. ಇದು ಕಾಲ ಉರುಳಿದಂತೆ ನೈಜತೆಗಿಂತ, ಅಧಿಕವಾಗಿ ತೋರಿಕೆಯ ತಪಸ್ಸಾಗಿ ಪರಿಣಮಿಸಿತ್ತು. ಇದನ್ನು ಗಮನಿಸಿದ ಪ್ರವಾದಿ ಯೊವೇಲನು ದೇವರಿಂದ ದೂರ ಸರಿದಿದ್ದ ಇಸ್ರಯೇಲ್ ಜನಾಂಗದವರಿಗೆ "ಈಗಲಾದರೊ ಮನ:ಪೂರಕವಾಗಿ ನನ್ನ ಕಡೆ ತಿರುಗಿಕೊಳ್ಳಿ. ಉಪವಾಸ ಕೈಗೊಂಡು, ಅತ್ತುಗೋಳಾಡಿ. ನಿಮ್ಮ ಉಡುಪುಗಳನ್ನು ಅಲ್ಲ ಹೃದಯಗಳನ್ನು ಸೀಳಿರಿ: ನಿಮ್ಮ ದೇವರಾದ ಸರ್ವೇಶ್ವರ ಸ್ವಾಮಿಯ ಕಡೆಗೆ ತಿರುಗಿಕೊಳ್ಳಿ; ಅವರು ದಯಾವಂತರು, ಕರುಣಾಮೂರ್ತಿ, ಸಹನಶೀಲ, ಪ್ರೀತಿಮಯ. ವಿಧಿಸಬೇಕಾದ ದಂಡನೆಗಾಗಿ ಮನ ನೊಂದುಕೊಳ್ಳುವಂಥವರು" (2:12-13) ಎಂದು ಎಚ್ಚರಿಸಿ ನೈಜ ಪ್ರಾಯಶ್ಚಿತ್ತಕ್ಕೆ ಕರೆನೀಡುತ್ತಾನೆ. ಇಂತಹ ಕರೆ ಇಂದೂ ಸಹ ಪ್ರಸ್ತುತವಾಗಿದೆ! ಮನಪರಿವರ್ತನೆಯ ಎರಡನೆಯ ಹೆಜ್ಜೆ ದೃಢ ನಿಧಾರ. ಲೂಕನ ಸುವಾರ್ತೆಯ 15:11-32ರಲ್ಲಿ ನಾವು ದುಂದುಗಾರನ ಸಾಮತಿಯನ್ನು ಓದುತ್ತೇವೆ. ಅಲ್ಲಿ ತಂದೆಯಿಂದ ದೂರ ಸರಿದಿದ್ದ ಕಿರಿಯ ಮಗನಿಗೆ ತನ್ನ ತಪ್ಪಿನ ಅರಿವಾದಾಗ "ಅಪ್ಪಾ, ದೇವರಿಗೂ ನಿಮಗೂ ವಿರುದ್ಧವಾಗಿ ಪಾಪಮಾಡಿದ್ದೇನೆ; ನಿಮ್ಮ ಮಗನೆನಿಸಿಕೊಳ್ಳುವ ಯೋಗ್ಯತೆಯೂ ನನಗಿಲ್ಲ; ನನ್ನನ್ನು ನಿಮ್ಮ ಮನೆಯ ಕೂಲಿಯಾಳುಗಳಲ್ಲಿ ಒಬ್ಬನನ್ನಾಗಿ ಇಟ್ಟುಕೊಳ್ಳಿ ಎಂದು ಬೇಡಿಕೊಳ್ಳುತ್ತೇನೆ" ಎಂದು ನಿರ್ಧರಿಸಿ ತನ್ನ ತಪ್ಪಿಗೆ ಪ್ರಾಯಶ್ಚಿತ್ತ ಪಡುತ್ತಾ ತಂದೆಯ ಬಳಿಗೆ ಹೊರಟ. ತಂದೆ ಅವನ ಬರುವಿಕೆಗಾಗಿ ತವಕಿಸುತ್ತಿದ್ದ. ಆತನ ತಪ್ಪನ್ನು ಲೆಕ್ಕಿಸದೆ ಆತನನ್ನು ಯಾವ ನಿಬಂಧನೆಗಳಿಲ್ಲದೆ ಮುಕ್ತವಾಗಿ ತನ್ನ ಮನೆಗೆ ಸೇರಿಸಿಕೊಳ್ಳುತ್ತಾನೆ. ಪ್ರತಿ ಮಾನವನಿಗೂ ಅವನವನ ತಪ್ಪಿನ ಅರಿವಾಗಬೇಕು. ಆಗ ಮನಪರಿವರ್ತನೆಯ ನೈಜ ಪ್ರಕ್ರಿಯೆ ತನಗರಿವಿಲ್ಲದಂತೆ ಚಾಲನೆಗೊಳ್ಳುತ್ತದೆ. ಅದು ದೃಢನಿರ್ಧಾರವನ್ನು ಕೈಗೊಳ್ಳಲು ಆತ್ಮರ ಶಕ್ತಿಯನ್ನು ನೀಡುತ್ತದೆ. 

ಮನಪರಿವರ್ತನೆಯ ಮೂರನೆಯ ಹೆಜ್ಜೆ ಪವಿತ್ರ ಸಂಸ್ಕಾರಗಳ ಸ್ವೀಕಾರ. ಕಥೋಲಿಕ ಕ್ರೈಸ್ತರಿಗೆ ಪವಿತ್ರ ಸಂಸ್ಕಾರಗಳು ದೇವರ ಕೃಪಾವರದ ಹೊನಲನ್ನು ಹರಿಸುತ್ತವೆ. ಇವು ಮಾನವನ ಅಂತರಂಗವನ್ನು ಶುದ್ಧೀಕರಿಸಿ,ಬೆಳಗಿಸಿ ದೇವರ ವಾಸಕ್ಕೆ ಯೋಗ್ಯವಾಗಿಸುತ್ತವೆ. ವಿಶೇಷವಾಗಿ ಪಾಪ ನಿವೇದನೆಯ ಸ್ವೀಕಾರದಿಂದ ಪಾಪದ ಕತ್ತಲು ಅಳಿದು, ಜ್ಞಾನದ ಬೆಳಕು ಉದಯಿಸುತ್ತದೆ. ಆ ಬೆಳಕಿನ ಬಲ ಪಾಪವನ್ನು ವರ್ಜಿಸಲು ಆಧ್ಯಾತ್ಮಿಕ ಶಕ್ತಿನೀಡುತ್ತದೆ. ಆ ಅಳಿಯದ ದೈವಿಕ ಬೆಳಕಿನಲ್ಲಿರುವವರೆಗೂ ಪಾಪದಲ್ಲಿ ಬೀಳಲು ಸಾಧ್ಯವಿಲ್ಲ. ಆ ಅಳಿಯದ ಬೆಳಕು ಸೈತಾನನ ಕುತಂತ್ರಗಳನ್ನು ಸಮಗ್ರವಾಗಿ ನಿಯಂತ್ರಿಸುತ್ತದೆ. ಪ್ರಭು ಕ್ರಿಸ್ತನೇ ಆ ಶಾಶ್ವತ ಬೆಳಕು! ಅವರು ತಮ್ಮ ಪವಿತ್ರ ರಕ್ತದಿಂದ ಇಡೀ ಲೋಕವನ್ನು ಪಾವನಗೊಳಿಸಿ ಸೈತಾನನ ಸಾಮ್ರಾಜ್ಯವನ್ನು ದ್ವಂಸಗೊಳಿಸಿದ್ದಾರೆ. ಅವರ ಪ್ರೀತಿ ಶಾಶ್ವತ, ಅವರ ಕ್ಷಮೆ ನಿರಂತರ! "ಕೃಪಾಳು, ದೇವಾ ಕರುಣಿಸೆನ್ನನು, ಕರುಣಾನಿಧಿ, ಅಳಿಸೆನ್ನ ದೋಷವನು. ತೊಳೆ ಪೂರ್ತಿಯಾಗಿ ಪಾಪದಿಂದೆನ್ನನು, ದೋಷ ಪರಿಹರಿಸಿ ಶುದ್ಧಗೊಳಿಸೆನ್ನನು" (ಕೀರ್ತನೆ 51:1-2) ಎಂದು ಪಾಪಕ್ಕೆ ನೈಜ ಪ್ರಾಯಶ್ಚಿತ್ತಪಟ್ಟು, ಪಾಪ ನಿವೇದನೆಯ ಸಂಸ್ಕಾರವನ್ನು ಪೂರ್ಣವಿಶ್ವಾಸದಿಂದ ಸ್ವೀಕಾರ ಮಾಡಿ, ದೀನ ಹೃದಯದಿಂದ ಪ್ರಾರ್ಥಿಸಿದರೆ ಪಾಪ ಕ್ಷಮೆ ದೊರೆಯುವುದರಲ್ಲಿ ಯಾವ ಸಂಶಯವೂ ಇಲ್ಲ. ಈ ಕಾರಣದಿಂದಲೇ ಕೀರ್ತನೆಕಾರ "ಬಲಿಯರ್ಪಣೆಯಲಿ ನಿನಗೊಲವಿಲ್ಲ, ದಹನಬಲಿಯಿತ್ತರೂ ನಿನಗೆ ಬೇಕಿಲ್ಲ, ಮುರಿದ ಮನವೇ ದೇವನೊಲಿವ ಯಜ್ಞವು, ನೊಂದು ಬೆಂದ ಮನವನಾತ ಒಲ್ಲೆಯೆನನು" (51:16-17) ಎನ್ನುತ್ತಾನೆ. 

ಮನಪರಿವರ್ತನೆಯ ಅಂತಿಮ ಹೆಜ್ಜೆ ಸೇವೆ. ಸೇವೆ ಕ್ರೈಸ್ತ ಜೀವನದ ಅವಿಬಾಜ್ಯ ಅಂಗ. ಸೇವೆ ಕ್ರೈಸ್ತ ಜೀವನವನ್ನು ಪರಿಪೂರ್ಣಗೊಳಿಸುತ್ತದೆ. ನಿಸ್ವಾರ್ಥ ಹಾಗೂ ಫಲಾಪೇಕ್ಷೆ ಇಲ್ಲದೆ ಸೇವೆ ಮಾಡುವುದು ಪ್ರತಿಯೊಬ್ಬ ಕ್ರೈಸ್ತನ ಆದ್ಯ ಕರ್ತವ್ಯ. ಇದು ಮನಪರಿವರ್ತನೆಯ ಫಲವೂ ಹೌದು! ಸೇವೆ ಮಾಡಲು ಯಾರೂ ಹಿಂಜರಿಯಬಾರದೆಂದು ಪ್ರಭುವೇ ಸೇವೆ ಮಾಡಲು ಟೊಂಕಕಟ್ಟಿ ನಿಂತರು. "ನಾನು ಸೇವೆ ಮಾಡಿಸಿಕೊಳ್ಳುವುದಕ್ಕೆ ಅಲ್ಲ ಸೇವೆ ಮಾಡಲು ಬಂದಿದ್ದೇನೆ" (ಮತ್ತಾಯ 20:28) ಎಂದು ತಮ್ಮ ಶಿಷ್ಯರ ಕಾಲುಗಳನ್ನು ತೊಳೆದು ತಮ್ಮ ಶಿಷ್ಯರಿಗೆ ಸೇವೆಯ ಮಹತ್ವವನ್ನು ತಿಳಿಸಿದರು. ಹೀಗಿರುವಾಗ ಕ್ರೈಸ್ತ ಭಕ್ತರು ಸೇವೆ ಮಾಡಲು ಯಾವಾಗಲು ಸನ್ನದ್ದರಾಗಿರಬೇಕು. ದೀನರ, ನಿರಾಶ್ರಿತರ, ಬಡವರ, ನೊಂದವರ, ಹಾಗೂ ತಿರಸ್ಕೃತರ ಸೇವೆ ಮಾಡಲು ಅವಕಾಶಕ್ಕಾಗಿ ಕಾಯುವ ಮನಸ್ಸು ಮತ್ತು ಸಮಯ ದೊರಕಿದಾಗ ಮುಕ್ತ ಮನದಿಂದ ಹಾಗೂ ಪೂರ್ಣಪ್ರೀತಿಯಿಂದ ಸೇವೆ ಮಾಡಲು ತವಕಿಸಬೇಕು. ಪ್ರೀತಿ ಇಲ್ಲದ ಸೇವೆ ಸೇವೆಯಲ್ಲ! ಸೇವೆ ಮುಕ್ತವಾಗಿರಬೇಕು. ಅದು ನಮ್ಮ ಕುಟುಂಬಕ್ಕೆ, ನಮ್ಮ ಸಮುದಾಯಕ್ಕೆ, ಧರ್ಮಕ್ಕೆ ಸೀಮಿತವಾಗಿರಬಾರದು. ಆದಿ ಕವಿ ಪಂಪ ಹೇಳಿದಹಾಗೆ "ಮಾನವಕುಲಂ ತಾನೊಂದೇ ವಲಂ" ಎಂಬ ವಿಶಾಲವಾದ ಮನೋಭಾವ ಬೆಳೆಯುತ್ತಿರಬೇಕು. "ವಸುಧೈವ ಕುಟುಂಬಕಂ" ಅಂದರೆ ಈ ವಿಶ್ವವೇ ಒಂದು ಕುಟುಂಬವೆಂದು ತಿಳಿದು ನಿಸ್ವಾರ್ಥ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು. ಇಂತಹ ನಿಸ್ವಾರ್ಥ ಸೇವೆಯ ನೈಜ ಸಂದೇಶವನ್ನು ಸಾರುವುದೇ ತಪಸ್ಸುಕಾಲದ ಪ್ರಮುಖ ಉದ್ದೇಶ ಹಾಗೂ ಧ್ಯೇಯ. ಇದನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ಪ್ರತಿಯೊಬ್ಬರೂಸಮಗ್ರವಾಗಿ ಪರಿವರ್ತನೆಗೊಳ್ಳಲೇ ಬೇಕು. ಇಲ್ಲದಿದ್ದಲ್ಲಿ ಸಮುದ್ರದ ನೀರು ಎಷ್ಟಿದ್ದರೇನಂತೆ ಕುಡಿಯಲು ಸಾಧ್ಯವೇ! 

———— 

No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...