Monday, 8 April 2019

ಫ್ರಾನ್ಸ್ನ ಬೆಥರಮ್ ಮಾತೆ - ಶ್ರೀಮತಿ ದೀಪ್ತಿ ಫ್ರಾನ್ಸಿಸ್ಕಾ, ಯಡವನಹಳ್ಳಿ


1503ರ ಒಂದು ದಿನ ಕೆಲವು ಕುರುಬರು ತಮ್ಮ ಕುರಿಗಳನ್ನು ಗೇವ್ ನದಿಯ ತೀರದಲ್ಲಿ ಮೇಯಿಸುತ್ತಿದ್ದಾಗ ಅಲ್ಲಿದ್ದ ಬಂಡೆಗಳಿಂದ ಅಸಾಮಾನ್ಯವಾದ ಬೆಳಕು ಹೊಮ್ಮುವುದನ್ನು ಕಂಡರು. ಹತ್ತಿರಕ್ಕೆ ಹೋಗಿ ಸೂಕ್ಷ್ಮವಾಗಿ ವೀಕ್ಷಿಸಿದಾಗ ಅಲ್ಲಿ ಅವರಿಗೆ ಕನ್ಯಾಮರಿಯಮ್ಮನವರ ಸ್ವರೂಪ ಕಂಡಿತು. ಈ ಸಂಗತಿ ಕಾಳ್ಗಿಚ್ಚಿನಂತೆ ಹರಡಿ ಸುತ್ತಮುತ್ತಲಿನ ಊರುಗಳ ಜನರು ಆ ಸ್ವರೂಪವನ್ನು ಕಾಣಲು ತಂಡೋಪತಂಡವಾಗಿ ಧಾವಿಸಿದರು. ಎಲ್ಲರೂ ಸೇರಿ ಮಾತೆಗಾಗಿ ಒಂದು ಮಂದಿರವನ್ನು ಸ್ಥಾಪಿಸಲು ನಿಶ್ಚಯಿಸಿದರು. ನದಿಯ ಈ ದಡದಲ್ಲಿ ಸ್ಥಳದ ಅಭಾವವಿದ್ದುದರಿಂದ ಆಚೆ ದಡದಲ್ಲಿ ಮಂದಿರ ನಿರ್ಮಾಣವಾಯಿತು. ಮುಂದಿನ ದಿನಗಳಲ್ಲಿ ಸ್ವರೂಪ ಕಂಡುಬಂದ ಅದೇ ತೀರದಲ್ಲಿ ಮಂದಿರವನ್ನು ರೂಪಿಸುವ ಯೋಚನೆಗಳಿದ್ದವು. ಹಾಗೆಯೇ ಮುಂದೊಂದು ದಿನ ಮಾತೆಯ ಪ್ರತಿಮೆ ಸಿಕ್ಕ ಸ್ಥಳದಲ್ಲೇ ಮಂದಿರ ರೂಪುಗೊಂಡಿತು. 



ಸುಮಾರು 1616ರಲ್ಲಿ ಮನ್ಟೌಟ್ ಎಂಬ ಗ್ರಾಮದ ರೈತರು ತಮ್ಮ ದಿನನಿತ್ಯದ ಕೃಷಿ ಕೆಲಸಗಳನ್ನು ಮುಗಿಸಿ ಮನೆಗೆ ಹಿಂತಿರುಗುವಾಗ ಇದ್ದಕ್ಕಿದ್ದಂತೆಯೇ ಭಯಂಕರ ಬಿರುಗಾಳಿಯೊಂದು ಘೋರವಾಗಿ ಆರ್ಭಟಿಸಿತು. ನೋಡನೋಡುತ್ತಿದ್ದಂತೆ ಅಲ್ಲಿದ್ದ ಮರದ ಬೃಹತ್ ಶಿಲುಬೆ ಅತ್ತಿತ್ತ ಓಲಾಡಿ ಭಾರೀ ಶಬ್ದದೊಂದಿಗೆ ನೆಲಕ್ಕೆ ಬಿತ್ತು. ಅತ್ಯಾಶ್ಚರ್ಯವೋ ಎಂಬಂತೆ ಬಿದ್ದ ಶಿಲುಬೆಯನ್ನು ಯಾರೋ ಎತ್ತಿ ನಿಲ್ಲಿಸಿದರೋ ಎಂಬ ಹಾಗೆ ಕೆಳಗೆ ಬಿದ್ದ ಶಿಲುಬೆ ದಿವ್ಯಕಾಂತಿಯೊಂದಿಗೆ ಹೊಳೆದು ಮತ್ತೆ ತಾನಾಗಿ ಮೊದಲಿನಂತೆಯೇ ನಿಂತುಕೊಂಡಿತು. 



ಇದಾದ ನಂತರ ಗೇವ್ ನದಿಯ ತೀರದಲ್ಲಿ ಯುವ ಹುಡುಗಿಯೊಬ್ಬಳು ಹೂವು ಕೊಯ್ಯುವಾಗ ಅಕಸ್ಮಾತಾಗಿ ಜಾರಿ ನದಿಯೊಳಕ್ಕೆ ಬಿದ್ದಳು. ಹುಡುಗಿ ಬಿದ್ದ ಸ್ಥಳದಲ್ಲಿ ಇಳಿಜಾರು ಇದ್ದು, ಅಲ್ಲಿ ನೀರು ಅತಿ ವೇಗವಾಗಿ ಹರಿಯುತ್ತಿತ್ತು. ಅದಾಗಲೇ ನದಿಯ ತೀರದಲ್ಲಿ ಬೆಥರಮ್ ಮಾತೆಯ ಪುಣ್ಯಕ್ಷೇತ್ರ ತಲೆಯೆತ್ತಿತ್ತು. ಆ ಹುಡುಗಿ ಕಿರುಚುತ್ತಾ ಬೆಥರಮ್ ಮಾತೆಗೆ ಮೊರೆಯಿಟ್ಟಳು. ಆ ಕೂಡಲೇ ನದಿಯ ತೀರದಲ್ಲಿ ಬಾಲ ಯೇಸುವನ್ನು ಕರಗಳಲ್ಲಿ ಹಿಡಿದು ನಿಂತಿದ್ದ ಮಾತೆಯನ್ನು ಕಂಡಳು. ಮರಿಯಾ ಮಾತೆಯು ತೋರಿದ ಮರದ ಬೇರು ಹಿಡಿದು ಆ ಹುಡುಗಿ ಸುರಕ್ಷಿತವಾಗಿ ಮೇಲೆ ಬಂದಳು. ನಡೆದ ಈ ಅದ್ಭುತಕ್ಕೆ ಕೃತಜ್ಞತೆಯಾಗಿ ಆ ಹುಡುಗಿ ಚಿನ್ನದ ಬೇರೊಂದನ್ನು ಮಾಡಿಸಿ ದೇವಮಾತೆಗೆ ಕಾಣಿಕೆಯಾಗಿ ಅರ್ಪಿಸಿದಳು. ಅಲ್ಲಿನ ಪ್ರಾದೇಶಿಕ ಭಾಷೆಯಲ್ಲಿ ಬೆಥರಮ್ ಎಂದರೆ ಸುಂದರ ಬೇರು ಎಂದರ್ಥ. 



ಈ ಸುಂದರ ಮರದ ಬೇರಿನ ಹೆಸರೇ ಅಲ್ಲಿನ ಪುಣ್ಯಕ್ಷೇತ್ರದ ಹಾಗೂ ಊರಿನ ಹೆಸರಾಗಿ ಇಂದಿಗೂ ಅಚ್ಚಳಿಯದೆ ಉಳಿದಿದೆ. ಈ ಪುಣ್ಯಸ್ಥಳದಲ್ಲಿ 1620 ರಿಂದ 1642 ರ ಮಧ್ಯೆ ಕುರುಡನಿಗೆ ದೃಷ್ಟಿ, ಪಾರ್ಶ್ವವಾಯುವಿನಿಂದ ಮುಕ್ತಿ, ಕ್ಷಯರೋಗದಿಂದ ಮುಕ್ತಿ ಹೊಂದಿದವರನ್ನೂ ಒಳಗೊಂಡು 82 ಅದ್ಭುತಗಳು ದಾಖಲಾಗಿವೆ. 



ಬೆಥರಮ್ ಮಾತೆಯ ಪುಣ್ಯಕ್ಷೇತ್ರಕ್ಕೆ ಆಗಾಗ ಭೇಟಿ ನೀಡುತ್ತಿದ್ದ ಸಂತ ಬೆರ್ನದೆತ್ ಸೌಬಿರೋ (Bernadette soubirous)ನವರು ಲೂರ್ದು ನಗರದಲ್ಲಿ ಭೂತ ಪ್ರೇತಗಳನ್ನು ಓಡಿಸಲು ಕೈಯಲ್ಲಿ ಹಿಡಿದು ಪ್ರಾರ್ಥಿಸುತ್ತಿದ್ದ ಜಪಮಾಲೆಯು ಬೆಥರಮ್‍ನದ್ದೇ ಆಗಿತ್ತು. ಅವರ ನಂತರ ಬೆಥರಮ್‍ನ ಗುರುಗಳಾದ ಸಂತ ಮೈಕಲ್ ಗ್ಯಾರಿಕೋಸ್‍ನವರನ್ನು ಅದೇ ಕಾರ್ಯಕ್ಕೆ ಕಳುಹಿಸಲಾಗಿತ್ತು. ಈ ಸಂತರೊಬ್ಬರಿಗಷ್ಟೇ ಸಂತ ಬೆರ್ನದೆತ್ ಮಾಡಿದ್ದ ಮಹಾ ಕಾರ್ಯಗಳ ಅರಿವಿತ್ತು. ಹತ್ತನೇ ಭಕ್ತಿನಾಥರು ಬೆಥರಮ್ ಪುಣ್ಯಕ್ಷೇತ್ರಕ್ಕೆ ಬೇರುಗಳಿಂದ ಹೆಣೆದ ಎರಡು ಚಿನ್ನದ ಕಿರೀಟಗಳನ್ನು ಅರ್ಪಿಸಿದ್ದರು. 

ಪುಣ್ಯಕ್ಷೇತ್ರದ ಶಿಲಾಫಲಕದ ಮೇಲೆ ಹೀಗೆ ಬರೆಯಲಾಗಿದೆ: 

ದೇವ ಪುತ್ರನೂ ಅವನ ಮಾತೆಯೂ 

ನಮ್ಮ ಕೊಡುಗೆಗಳನ್ನು ಸ್ವೀಕರಿಸಲಿ, 

ನಮ್ಮ ನಂಬಿಕೆ ನಿರೀಕ್ಷೆಗಳನ್ನು ಹರಸಿ ಒಂದು ದಿನ 

ಮಲಿನವಾಗದ ಮಹಿಮೆಯಲ್ಲಿ ನಮ್ಮನ್ನಿರಿಸಲಿ. 



ಬಿರುಗಾಳಿಯ ಸಂದರ್ಭದಲ್ಲಿ ನಾಶವಾಗದೇ ಉಳಿದ ಮಹಾ ಶಿಲುಬೆಯು ಫ್ರೆಂಚ್ ಕ್ರಾಂತಿಯ ಸಂದರ್ಭದಲ್ಲಿ ಕೆಲ ನಾಸ್ತಿಕರಿಂದ ನಾಶವಾಗಿ, ಆ ಸ್ಥಳವನ್ನು ಆಕ್ರಮಿಸಿಕೊಂಡು ಗುರುಗಳನ್ನು ಓಡಿಸಲಾಯಿತು. 



1833 ರಲ್ಲಿ ಅಲ್ಲಿನ ಧರ್ಮಾಧ್ಯಕ್ಷರು ಗುರುಮಠವನ್ನು ಮುಚ್ಚಿದಾಗ ಅಲ್ಲಿನ ಪುಣ್ಯಕ್ಷೇತ್ರದ ಹಾಗೂ ಯಾತ್ರಿಗಳ ಜವಾಬ್ದಾರಿಯನ್ನು ಫಾದರ್ ಮೈಕಲ್ ಎಂಬುವರಿಗೆ ವಹಿಸಿಕೊಟ್ಟರು. ಆ ಸಂದರ್ಭದಲ್ಲಿ ಫಾದರ್ ಮೈಕಲ್‍ನವರು ಗುರುಗಳಿಗಾಗಿ, ಸಹೋದರರಿಗಾಗಿ ಯೇಸುವಿನ ಪವಿತ್ರ ಹೃದಯಕ್ಕೆ ಸಮರ್ಪಿತವಾದ ಒಂದು ಸಭೆಯನ್ನು ಸ್ಥಾಪಿಸಿದರು. 



ಪೈರ್ನೀಸ್ ಎಂಬಲ್ಲಿನ ಬೆಟ್ಟದಂಚಿನಲ್ಲಿರುವ ಬೆಥರಮ್, ಫ್ರಾನ್ಸ್ನ ಲೂರ್ದುನಗರದಿಂದ 8 ಕಿ. ಮಿ., ದೂರವಿದೆಯಾದರೂ ಈ ಎರಡೂ ಪುಣ್ಯ ಕ್ಷೇತ್ರಗಳು ಒಂದೇ ನದಿಯ ದಂಡೆಯ ಮೇಲಿವೆ. ಈ ಬೆಥರಮ್ ಮಾತೆಯ ಹಬ್ಬವನ್ನು ಪವಿತ್ರ ಧರ್ಮಸಭೆಯು ಪ್ರತಿ ವರ್ಷ ಏಪ್ರಿಲ್ ತಿಂಗಳ 22ನೇ ತಾರೀಖಿನಂದು ಆಚರಿಸುತ್ತದೆ. 

********** 

No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...