(ಒಂದೆರೆಡು ಅಧ್ಯಾಯಗಳು
ನಿಮ್ಮ ಓದಿಗಾಗಿ)
ನಮ್ಮ
ಮುಂದಿನ ಭೇಟಿ ಸ್ವರ್ಗದಲ್ಲೇ
“ಬೆನಿಗ್ನಾ, ನಾವಿನ್ನು ಈ ಲೋಕದಲ್ಲಿ ಭೇಟಿಯಾಗಲು
ಸಾಧ್ಯವಿಲ್ಲ. ಇನ್ನೇನ್ನಿದ್ದರೂ ಸ್ವರ್ಗದಲ್ಲೇ, ಹೋಗಿ ಬರಲೇ?" ಉಕ್ಕಿ ಬಂದ ಅಳು ತಡೆಯಲಾರದೇ ಸಿಸ್ಟರ್ ಮರಿಲೂಸಿ ಈ ಮಾತನ್ನು
ಹೇಳುತ್ತಿದ್ದರೆ ಸಿಸ್ಟರ್ ಬೆನಿಗ್ನಾ ಕೂಡ ಅಷ್ಟೇ ಜೋರಾಗಿ ಅಳುತ್ತಾರೆ. ಅದೆಷ್ಟೋ ಹೊತ್ತು ಹಾಗೆ
ಅತ್ತು ಅತ್ತು ಇಬ್ಬರೂ ಸಮಾಧಾನ ಮಾಡಿಕೊಳ್ಳುತ್ತಾರೆ. ಮಾಡಿಕೊಳ್ಳಲೇಬೇಕು, ದೇವರು ತಮ್ಮ ಸನ್ಯಾಸಿ ಜೀವನದಲ್ಲಿಇತ್ತ ಜವಾಬ್ದಾರಿಗಳನ್ನು ನಿಭಾಯಿಸಲೇಬೇಕು.
ಅಂದು
ಮಾರ್ಚ್ ೬, ೧೯೬೭. ಸಿಸ್ಟರ್ ಬೆನಿಗ್ನಾ ಜೊತೆಯಲ್ಲೇ ಇನ್ನಿತರ
ಹನ್ನೆರಡು ಜನರೊಂದಿಗೆ
ಕಾನ್ವೆಂಟಿಗೆ ಸೇರಿಕೊಂಡಿದ್ದ ಸಿಸ್ಟರ್ ಮರಿಲೂಸಿ ಸಿಸ್ಟರ್ ಬೆನಿಗ್ನಾರನ್ನು ಕೊನೆಯ ಬಾರಿ ನೋಡಿ
ಮಾತನಾಡಿಸಿದ ದಿನ. ಅವರಿಗೆ ಫ್ರಾನ್ಸಿಗೆ ಹೋಗಿ ಸೇವೆ ಮಾಡುವ ಆದೇಶ ಬಂದಿತ್ತು. ಇನ್ನು ಸಿಸ್ಟರ್
ಬೆನಿಗ್ನಾ ಗುಣಮುಖರಾಗಲು ಸಾಧ್ಯವೇ ಇಲ್ಲ ಎಂದು ತಿಳಿದ ಮೇಲೆ, ಫ್ರೇಜರ್ ಟೌನಿನಲ್ಲಿದ್ದ
ಪಾಲಿಕ್ಲಿನಿಕ್ಕಿನ ಡಾ. ಥಾಮಸ್ ಸಿಸ್ಟರ್ ಅವರನ್ನು ಕಾನ್ವೆಂಟಿಗೆ ಕಳುಹಿಸಿಬಿಡುತ್ತಾರೆ. ಅಲ್ಲಿ
ಪ್ರತಿದಿನ ಸಂಜೆ ಬಂದು ಸಿಸ್ಟರ್ ಬೆನಿಗ್ನಾರವರೊಂದಿಗೆ ಮಾತನಾಡುತ್ತಾ, ಪ್ರಾರ್ಥನೆ ಮಾಡುತ್ತಾ
ಇದ್ದವರು ಇದೇ ಸಿಸ್ಟರ್ ಲೂಸಿ. ಕಾಲವು ದೀರ್ಘವಾದಂತೆ ಭಾಸವಾಗುತ್ತಿದ್ದ ಆ ಸಂಜೆಗಳಲ್ಲಿ
ಕ್ರಿಸ್ತನ ಶುಭಸಂದೇಶದ ಓದೇ ಪ್ರಮುಖ ಚಟುವಟಿಕೆ. ಈ ಸಂದರ್ಭದಲ್ಲಿ ಸಿಸ್ಟರ್ ಬೆನಿಗ್ನಾರವರ ಮುಖ
ಅದೆಷ್ಟು ಸಂತೋಷದಿಂದ ಅರಳುತ್ತಿತ್ತು ಎಂದರೆ ಅದು ಒಬ್ಬ ರೋಗಿಯ ಮುಖದಂತೆ ಕಾಣುತ್ತಲೇ ಇರಲಿಲ್ಲ
ಎಂದು ನೆನಪಿಸಿಕೊಳ್ಳುತ್ತಾರೆ ಸಿಸ್ಟರ್ ಲೂಸಿ.
ಸಿಸ್ಟರ್
ಬೆನಿಗ್ನಾ ಇನ್ನು ಹೆಚ್ಚು ಕಾಲ ಬದುಕುವುದಿಲ್ಲ ಎಂದು ಎಲ್ಲರಿಗೂ ತಿಳಿದಿತ್ತು. ಅವರ ದೇಹದಲ್ಲಾಗುತ್ತಿದ್ದ ಆತಂಕಕಾರಿ ಬದಲಾವಣೆಗಳನ್ನು ಕಂಡ ಎಲ್ಲರಿಗೂ
ಅದು ಮನದಟ್ಟಾಗಿತ್ತು. ಸ್ನೇಹಿತೆಯಾಗಿ, ಜೊತೆಗಾರ್ತಿಯಾಗಿ
ಈ ವಿಷಯವನ್ನು ತಿಳಿಸುವುದು ಹೇಗೆ ಎಂಬ ಗೊಂದಲದಲ್ಲೇ ಸಿಸ್ಟರ್ ಲೂಸಿ “ಬೆನಿಗ್ನಾ, ನೀನು ಬಹಳ ಖಾಯಿಲೆಯಿಂದ ನರಳುತ್ತಿರುವೆ
ಎಂದು ನಿನಗೆ ತಿಳಿದಿದೆ ತಾನೇ” ಎಂದು ಕೇಳುತ್ತಾರೆ. “ಲೂಸಿ ನನಗೆ
ಗೊತ್ತು. ನಾನು ಹೆಚ್ಚು ದಿನ ಬದುಕಿರುವುದಿಲ್ಲ. ನಾನು ದೇವರ ಬಳಿ ಹೋಗುತ್ತಿದ್ದೇನೆ” ಎನ್ನುತ್ತಾರೆ ಸಿಸ್ಟರ್ ಬೆನಿಗ್ನಾ. ಗಟ್ಟಿಯಾಗಿ ಕೈಗಳನ್ನು ಹಿಡಿದುಕೊಂಡು ತುಂಬ ಸಮಯದ ತನಕ ಇಬ್ಬರೂ
ಅಳುತ್ತಾರೆ.
ಮಾರ್ಚ್
೧೯, ೧೯೬೭
ಅಂದು
ಮಾರ್ಚ್ ೧೯, ಭಾನುವಾರ. ಗರಿಗಳ ಹಬ್ಬ. ಕಾನ್ವೆಂಟಿನ
ಪಾಲಕ ಜೋಸೆಫರ ಹಬ್ಬ ಕೂಡ. ಭಾನುವಾರವಾದ್ದರಿಂದ, ಅದರಲ್ಲೂ ಗರಿಗಳ ಹಬ್ಬವಾದ್ದರಿಂದ ಗರಿಗಳ
ಹಬ್ಬಕ್ಕೇ ಮೊದಲ ಪ್ರಾಶಸ್ತ್ಯ. ಕಾನ್ವೆಂಟಿನ ಚ್ಯಾಪಲ್ ಹತ್ತಿರವೇ ಇದ್ದ ಸಿಸ್ಟರ್ ಬೆನಿಗ್ನಾರ
ಕೋಣೆಯನ್ನು ದಾಟಿಕೊಂಡೇ ಸಿಸ್ಟರ್‌ಗಳು ಹೋಗುತ್ತಾರೆ. ಅಷ್ಟರಲ್ಲಿ ಅವರ ಸ್ಥಿತಿ ಇನ್ನೂ ಬಿಗಡಾಯಿಸಿತ್ತು
ಕಾನ್ವೆಂಟಿನಲ್ಲಿ
ಜೋಸೆಫರ ಹಬ್ಬವನ್ನು ಮಾರ್ಚ್ ೧೮ರಂದೇ
ಆಚರಿಸಲಾಗಿತ್ತು. ಅದೇ ದಿನ ಸಿಸ್ಟರ್ ಬೆನಿಗ್ನಾರನ್ನು ಫ್ರೇಜರ್ ಟೌನಿನ ಪಾಲಿಕ್ಲಿನಿಕ್ಕಿನಿಂದ
ಕಾನ್ವೆಂಟಿಗೆ ಸ್ಥಳಾಂತರಿಸಲಾಯಿತು. ಪರಿಸ್ಥಿತಿ ಬಹಳ ಕೆಟ್ಟಿದ್ದರಿಂದ ಅಣ್ಣ ಫಾದರ್ ಚಿನ್ನಪ್ಪ,
ತಂದೆ, ತಾಯಿ ಎಲ್ಲರೂ ಬೆಂಗಳೂರಿಗೆ ಬಂದಿದ್ದರು. ಫಾದರ್ ಚಿನ್ನಪ್ಪ ಹಿಂದಿನ ದಿನವೇ ಬಂದು
ಸಿಸ್ಟರ್ ಅವರನ್ನು ನೋಡಿ ಹತ್ತಿರದಲ್ಲೇ ಇದ್ದ ಜರ್ಮನ್ ಶಾಲೆಯಲ್ಲಿ ರಾತ್ರಿ ತಂಗಲು ಹೋದರು. ಅವರ
ಜೊತೆ ಫಾದರ್ ಜೋಸೆಫ್ ಹಾಗೂ ಫಾದರ್ ಎನ್. ಡಿ. ಜೋಸೆಫ್ ಕೂಡ ಇದ್ದರು.
ಮಾರನೆಯ
ದಿನ ಅಂದರೆ ೧೯ರಂದು ಫಾದರ್ ಚಿನ್ನಪ್ಪ, ಸಂತ ಫ್ರಾನ್ಸಿಸರ ಕೆಥೆಡ್ರಲ್‌ನಲ್ಲಿ ಪೂಜೆ ಅರ್ಪಿಸಲು
ಹೋಗಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ, ಅಷ್ಟರಲ್ಲಿ ಸಿಸ್ಟರ್ ನವರ ಆರೋಗ್ಯದಲ್ಲಿ ಬಹಳ
ಏರುಪೇರಾಗಿದೆ ಎಂಬ ಸಂದೇಶ ಬರುತ್ತದೆ. ಪೂಜೆ ಅರ್ಪಿಸದೆ ಫಾದರ್ ರಾಜಪ್ಪ (ನಂತರ ಬಿಷಪ್ ಆದವರು)
ರೊಂದಿಗೆ ಕಾನ್ವೆಂಟಿಗೆ ಅವಸರವಾಗಿ ಹೋಗುತ್ತಾರೆ.
ಅಷ್ಟರಲ್ಲಿ
ಸಿಸ್ಟರ್ ಬೆನಿಗ್ನಾರ ತಂದೆ ಇನ್ನಾಸಪ್ಪ, ತಾಯಿ ಅಂತೋಣಮ್ಮ ಅಲ್ಲಿ ಸೇರಿರುತ್ತಾರೆ. ಪೂಜೆ ಮುಗಿಸಿಕೊಂಡು ಬಂದ
ಸಿಸ್ಟರುಗಳು ಸಿಸ್ಟರ್ ಬೆನಿಗ್ನಾರ ಸುತ್ತ ಸೇರಿದ್ದಾರೆ. ಎಲ್ಲರ ಕೈಯಲ್ಲೂ ಗರಿಗಳು. ಸಿಸ್ಟರ್
ಪೆಟ್ರಿಷಿಯಾ ಆಡಮ್ಸ್ ಅಂದು ಆ ಸ್ಥಳದಲ್ಲಿ ಇರಲಿಲ್ಲ. ಆದರೂ ಅವರು ಕೇಳಿಸಿಕೊಂಡಂತೆ ಅವರ
ಮಾತಿನಲ್ಲೇ ಹೇಳಬಹುದಾದರೆ "ಆ ದೃಶ್ಯ ಒಂದು ರೂಪಕದಂತಿತ್ತು. ಒಂದು ಶುದ್ಧವಾದ ಜೀವಕ್ಕೆ
ವಿಜಯೋದ್ಗಾರದಿಂದ ಕಿರೀಟ ತೊಡಿಸುವ ಸನ್ನಿವೇಶವಾಗಿತ್ತು".
ಕ್ಷಣಗಣನೆ
ಪ್ರಾರಂಭವಾಗಿದೆ. ಮದರ್ ಮಾರಿಸ್ ತಮ್ಮ ಹಸ್ತವನ್ನು ಬೆನಿಗ್ನಾರ ಹಸ್ತದಲ್ಲಿ ಇಡುತ್ತಾರೆ. “ನಾವಿದ್ದೇವೆ” ಎಂಬ ಭರವಸೆಯೇ? “ನಿನ್ನನ್ನು ಬಿಡಲು ಮನಸ್ಸಾಗುತ್ತಿಲ್ಲ” ಎಂಬ ಸಂಕಟವೇ? ಸಿಸ್ಟರ್
ತಮ್ಮ ಸಹಪಾಠಿಯಾದ ಸಿಸ್ಟರ್ ಫ್ರಾನ್ಸಿಸ್ಕರತ್ತ ನೋಡಿ “ನಿಯರರ್ ಮೈ ಗಾಡ್
ಟು ದೀ” ಹಾಡು ಹಾಡಲು ಕೇಳಿಕೊಳ್ಳುತ್ತಾರೆ.
ಹಾಗೇ, ಸಿಸ್ಟರ್ ಫ್ರಾನ್ಸಿಸ್ಕ ಆ ಹಾಡನ್ನು ಹಾಡುತ್ತಿದ್ದರೆ, ಸಿಸ್ಟರ್ ಬೆನಿಗ್ನಾ ಕೂಡ ಹಾಡಿಗೆ ದನಿಗೂಡಿಸುತ್ತಾರೆ. ಅಂತಹ ನೋವಿನಲ್ಲೂ ಸುಂದರ ಹಾಡಿಗೆ ಇಡೀ ಭಗಿನಿಯರ ಸಮೂಹ ತಮ್ಮ ದನಿಯನ್ನೂ
ಸೇರಿಸುತ್ತದೆ.
ಆ
ಸನ್ನಿವೇಶ ಸಿಸ್ಟರ್ ಬೆನಿಗ್ನಾರ ಜೀವನದ ಒಟ್ಟು ಪ್ರತೀಕವಾಗುತ್ತದೆ. "ಜೀವನದ ಸಂತೋಷ
ದುಃಖಗಳಲ್ಲಿ ದೇವರಿಗೆ ಹತ್ತಿರವಾಗೇ ಬಾಳಿದ ವ್ಯಕ್ತಿಯೊಬ್ಬರ ಸಾರ್ಥಕ ಗಳಿಗೆಯದು"
ಎನ್ನುತ್ತಾರೆ ಸಿಸ್ಟರ್ ಲೂಸಿ. ಅಷ್ಟಕ್ಕೂ "Nearer My God to Thee” ಸಿಸ್ಟರ್
ಬೆನಿಗ್ನಾರ ಅಚ್ಚು ಮೆಚ್ಚಿನ ಗೀತೆಯಾಗಿತ್ತು.
ನಿಯರರ್
ಮೈ ಗಾಡ್ ಟು ದೀ
ಬ್ರಿಟನ್‌ನಿಂದ
ಕವಿಯತ್ರಿ ಸಾರಾ ಫ್ರಲ್ಲರ್ ಆಡಮ್ಸ್ ಈ ಹಾಡನ್ನು ರಚಿಸಿದರು. ೧೮೪೮ರಲ್ಲೇ ನಿಧನರಾದ ಸಾರಾ ಈ ಹಾಡನ್ನು ೧೮೪೧ ರಲ್ಲಿ ರಚಿಸಿದರು. ಇದಕ್ಕೆ ಅವರ ಸಹೋದರಿ
ಎಲಿಜಾ ಫ್ಲವರ್ ಸಂಗೀತ ಸಂಯೋಜಿಸುತ್ತಾರೆ. ಮುಂದೆ ಹಲವಾರು ರಾಗಗಳಲ್ಲಿ ಈ ಹಾಡನ್ನು
ಹಾಡಲಾಗುತ್ತದೆ.
ಆದಿಕಾಂಡದಲ್ಲಿ
ಇಸಾಕನ ಮಗನಾದ ಯಾಕೋಬ ತನ್ನ ಅಣ್ಣ ಏಸಾವನಿಗೆ ಮೋಸ ಮಾಡಿ ಅವನಿಗೆ ತನ್ನ ತಂದೆ ಇಸಾಕನಿಂದ ಬರಬೇಕಾದ
ಆಶೀರ್ವಾದವನ್ನು ತಾನು ಪಡೆದುಕೊಳ್ಳುತ್ತಾನೆ. ಇದರಿಂದ ಏಸಾವನಿಗೆ ಬಹಳ ಕೋಪ ಬರುತ್ತದೆ. ತನ್ನ
ತಮ್ಮನನ್ನು ಹಿಡಿದು ಕೊಲ್ಲಬೇಕೆಂದು ಕೋಪದಿಂದ ಕುದಿಯ ತೊಡಗುತ್ತಾನೆ. ಆಗ ತಾಯಿ ರೆಬೆಕ್ಕ
ಯಾಕೋಬನನ್ನು ತನ್ನ ಸಹೋದರನಾದ ಲಾಬಾನನ ಬಳಿಗೆ ಕಳುಹಿಸಿಬಿಡುತ್ತಾಳೆ. ದೂರದ ಕಾನಾನಿನ ಊರಿಗೆ
ಹೊರಟ ಯಾಕೋಬ ರಾತ್ರಿಯಾಯಿತೆಂದು ಒಂದು ಕಡೆ ಮಲಗುತ್ತಾನೆ. ಅಲ್ಲಿ ತಲೆದಿಂಬಾಗಿ ಒಂದು ಕಲ್ಲನ್ನು
ಇಟ್ಟುಕೊಳ್ಳುತ್ತಾನೆ.
ಆಗ
ಅವನಿಗೆ ನಿದ್ರೆಯಲ್ಲಿ ಒಂದು ಕನಸು ಕಾಣುತ್ತದೆ. ಆ ಕನಸಿನಲ್ಲಿ ಅವನಿಗೆ ನೆಲದಿಂದ ಸ್ವರ್ಗದವರೆಗೂ
ಚಾಚಿಕೊಂಡ ದೊಡ್ಡ ಏಣಿಯೊಂದು ಕಾಣಿಸುತ್ತದೆ. ಆ ಏಣಿಯಿಂದ ದೇವದೂತರು ಸ್ವರ್ಗದಿಂದ ಭೂಮಿಗೂ,
ಭೂಮಿಯಿಂದ ಸ್ವರ್ಗಕ್ಕೂ ಹತ್ತಿ ಇಳಿಯುತ್ತಿರುತ್ತಾರೆ. ಎಚ್ಚರಗೊಂಡ ಯಾಕೋಬ ಈ ಕನಸಿನಿಂದ
ಪ್ರೇರಣೆಗೊಳ್ಳುತ್ತಾನೆ. ಮಲಗಿದ್ದ ಜಾಗದಲ್ಲಿ ತಲೆದಿಂಬಾಗಿ ಇಟ್ಟಕೊಂಡ ಕಲ್ಲನ್ನು ನೆಟ್ಟು ಆ
ಜಾಗವನ್ನು `ಬೇತೆಲ್' ಎಂದು ಕರೆಯುತ್ತಾನೆ. ಬೇತೆಲ್ ಎಂದರೆ `ದೇವಮಂದಿರ'.
‘Nearer
My God to Thee’ ಬೈಬಲ್‌ನ ಈ ಘಟನೆಯ ಮೇಲೆ ಆಧಾರಿತವಾದ
ಹಾಡು. ಅನೇಕ ಗಣ್ಯವ್ಯಕ್ತಿಗಳ ಅಂತಿಮ ಸಂಸ್ಕಾರದ ವೇಳೆ ಈ ಗೀತೆಯನ್ನು
ಹಾಡಲಾಗಿದೆ. ೧೯೦೧ ರಲ್ಲಿ ಅಮೆರಿಕಾದ ಅಧ್ಯಕ್ಷರಾದ ವಿಲಿಯಂ ಮೆಕ್ನಿಸ್ಲೀರವರನ್ನು
ಕೊಲ್ಲಲಾಯಿತು. ಆ ಸಮಯದಲ್ಲಿ ಅಧ್ಯಕ್ಷರು ಈ ಗೀತೆಯನ್ನು ಉಸುರುತ್ತಾ ಪ್ರಾಣ ಬಿಟ್ಟರು
ಎನ್ನುವುದು ಒಂದು ಮಹತ್ವದ ಮಾಹಿತಿ. ಅಂತೆಯೇ ೧೯೧೩ ರಲ್ಲಿ ಕಡಲಿನಲ್ಲಿ
ಮುಳುಗಿದ ಟೈಟಾನಿಕ್ ಹಡಗಿನಲ್ಲಿ ಮುಳುಗುವ ಮುಂಚೆ ಈ ಗೀತೆಯನ್ನು ಹಡಗಿನ ಗಾನವೃಂದ ಹಾಡಿತು
ಎಂಬುದು ದಂತಕತೆ. ಇದನ್ನು `ಟೈಟಾನಿಕ್' ಚಲನಚಿತ್ರದಲ್ಲಿ ಬಹಳ ಮನೋಜ್ಞವಾಗಿ
ತೋರಿಸಲಾಗಿದೆ.
No comments:
Post a Comment