ನಮ್ಮ ಊರು ಶುರುವಾಗುವಾಗ ಒಂದು ಬದಿಯಲ್ಲಿ ಶಿಲುಬೆಗಲ್ಲು ಇರುವಂತೆ ಇನ್ನೊಂದು ಬದಿಯಲ್ಲಿ ವೆಲಾಂಗಣಿ ಮಾತೆಯ ಪುಟ್ಟ ಗುಡಿಯೊಂದಿದೆ. ಅಸ್ಸಿಸಿಯ ಸಂತ ಫ್ರಾನ್ಸಿಸ್ ಸಭೆಯ ಗುರುಗಳು ತಮ್ಮ ಶಾಲಾ ಕಾಲೇಜುಗಳ ಜೊತೆಯಲ್ಲಿ ಈ ಗುಡಿಯ ನಿರ್ವಹಣೆಯನ್ನೂ ಮಾಡುತ್ತಾರೆ. ನಗರದ ಕೆಲಸ ಕಾರ್ಯಗಳಿಗೆ ಹೊರಡುವ ಜನ ಅರೆಘಳಿಗೆ ಕಣ್ಣುಮುಚ್ಚಿ ದೈವವನ್ನು ನೆನೆದು ಕೈಮುಗಿದು ಹೊರಡುತ್ತಾರೆ. ಒಂದಷ್ಟು ವರ್ಷಗಳ ಹಿಂದೆ - ಪ್ರಾಯಶಃ ಕಾಲೇಜಿಗೆ ಸೇರಿದ ಹೊಸತು - ನಾನಲ್ಲಿಗೆ ಹೋಗಿ ಎಂದಿನಂತೆ ಕೈಮುಗಿದು ಅರಿಕೆಯೊಪ್ಪಿಸಿ, ಅರೆಘಳಿಗೆ ಕಣ್ಣುಮುಚ್ಚಿ ತೆರೆದರೆ ಕಣ್ಣಮುಂದೆ ಬಿಳಿಯ ಬಣ್ಣದ ಒಂದಷ್ಟು ಕಾಗದಗಳಿದ್ದುವು. ಕುತೂಹಲದಿಂದ ತೆರೆದು ಓದಿದಾಗ ದಿಗ್ಭ್ರಮೆಯಾಯಿತು.
‘ವೆಲಾಂಗಣಿ ಮಾತೆಯು ಇಂತಿಂಥ ಊರಲ್ಲಿ, ಇಂತಿಂಥ ಜನರಿಗೆ ಈ ರೀತಿಯಲ್ಲಿ ಕಾಣಿಸಿಕೊಂಡು ಪವಾಡವೆಸಗಿದ್ದಾರೆ. ನೀವೂ ಕೂಡ ಇದರ ಪ್ರತಿ ಮಾಡಿ ಹಂಚಿದರೆ ನಿಮಗೆ ಶುಭವಾಗುತ್ತದೆ, ಇಲ್ಲವಾದರೆ ಕೇಡು ಕಾದಿದೆ ಎಂದು ಯಾರ್ಯಾರು ಇದನ್ನು ಓದಿ ನಿರ್ಲಕ್ಷ್ಯ ಮಾಡಿದರೋ ಅವರಿಗಾದ ಗತಿಯನ್ನು ಉದಾಹರಣೆ ಸಮೇತ ವಿವರಿಸಲಾಗಿತ್ತು. ನನಗೆ ಓದಿ ಬೆವರತೊಡಗಿತು. ಕೂಡಲೇ ಆ ಕಾಗದವನ್ನು ಮಡಿಚಿ ಅಂಗಿಯ ಜೇಬಿನೊಳಗಿಟ್ಟುಕೊಂಡು ಝೆರಾಕ್ಸ್ ಅಂಗಡಿಗೆ ಓಡಿ, ಹತ್ತಿಪ್ಪತ್ತು ಪ್ರತಿ ಮಾಡಿ ಪುನಃ ಅಲ್ಲಿಯೇ ಇಟ್ಟು ಬಂದಿದ್ದೆ. ನನ್ನ ಕೆಲಸವಾಯಿತಲ್ಲಾ! ಇನ್ನು ಅದೇನು ಒಳ್ಳೆಯದಾಗುವುದೋ ಎಂದು ಕಾಯುತ್ತಾ ಕೂತೆ. ಕೆಟ್ಟದ್ದೇನೂ ಆಗಲಿಲ್ಲ. ಒಳ್ಳೆಯದಾಯಿತೇ ? ಗೊತ್ತಿಲ್ಲ. ಆದರೆ ನಾನಿನ್ನೂ ಬದುಕಿದ್ದೆ! ಬದುಕಿರುವುದಕ್ಕಿಂತ ಒಳ್ಳೆಯದು ಏನಿದೆ? ಅದೇ ಕೊನೆ, ಅಮೇಲೆ ಮತ್ತೆ ಅಂಥ ಸಾಹಸಕ್ಕೆ ಕೈ ಹಾಕಲಿಲ್ಲ. ಅಮೇಲಾಮೇಲೆ ಈ ತರಹದ ಕಾಗದಗಳೇನಾದರೂ ಕಂಡರೆ ನೋಡಿಯೂ ನೋಡದಂತಿದ್ದುಬಿಡುತ್ತೇನೆ. ನಾನು ನೋಡದೆ ಉಳಿದಿದ್ದು ಕಾಗದಗಳಿಗೆ ಗೊತ್ತಾಯಿತೇನೊ, ಕಾಗದಗಳ ಬಳಕೆ ಕಡಿಮೆಯಾಗಿ, ಮೊಬೈಲುಗಳು ವಕ್ಕರಿಸಿದಾಗ, ಇದೇ ಸಂದೇಶಗಳು ಬೆಳಗ್ಗೆ ರಾತ್ರಿ ಟ್ರಿನ್ ಎನ್ನತೊಡಗಿದುವು. ಈಗ ಫೇಸ್ ಬುಕ್ಕು, ವಾಟ್ಸಾಪು, ಮೆಸೆಂಜರು, ಇ-ಮೇಲುಗಳ ತುಂಬೆಲ್ಲಾ ಇವುಗಳದೇ ಕಾರುಬಾರು. ಇವುಗಳನ್ನೆಲ್ಲಾ ಯಾರು ಹರಿಯಬಿಡುತ್ತಾರೆ? ಅವರಿಗೆ ಇದರಿಂದ ಆಗುವ ಪ್ರಯೋಜನವೇನು? ಮುಗ್ಧಜನ ಇದನ್ನು ನಂಬಿ ಯಾಮಾರಿದರೆ ಹೊಣೆ ಯಾರು?ಇಂಥವೇ ಪ್ರಶ್ನೆಗಳನ್ನು ಕೇಳಿಕೊಂಡು ಕುಳಿತಿದ್ದೆ. ಮೊಬೈಲು ಟ್ರಿನ್ ಎಂದಿತು. ನೋಡಿದರೆ 'ದನಿ' ಪತ್ರಿಕೆಯ ಪಿಡಿಎಫ್ ಪ್ರತಿ! ಅದೇ ಉಪಾಯವನ್ನು ಪತ್ರಿಕೆಗೆ ಆರೋಪಿಸಿದರೆ ಹೇಗೆ ಎಂದು ಯೋಚಿಸಿದಾಗ ಮುಗುಳುನಗು!
ಸಮೀಶಾ
No comments:
Post a Comment