ಕರ್ನಾಟಕದಲ್ಲಿ ರೈತರ ಕೃಷಿ ಸಾಲ ಮನ್ನಾದ ಬಗ್ಗೆ ಸರ್ಕಾರದ ಮಟ್ಟದಲ್ಲಿ
ಚಿಂತನೆ ನಡೆಯುತ್ತಿದ್ದರೆ, ನೆರೆಯ ರಾಜ್ಯ ಕೇರಳದಲ್ಲಿ ಕಥೋಲಿಕ ಧರ್ಮಸಭೆಯ ಗುರುಗಳೊಬ್ಬರು
ನೂರಾರು ರೈತರಿಗೆ ಗೊತ್ತಿಲ್ಲದಂತೆ ಅವರ ಹೆಸರಲ್ಲಿ ಸಾಲಪಡೆದು ಅವರನ್ನುಸಾಲದ ಸಂಕೋಲೆಗೆ
ಸಿಲುಕಿಸಿದ್ದಾರೆಂಬ ಪ್ರಕರಣ ವರದಿಯಾಗಿದೆ.
ಕೃಷಿಕರ ಸಾಲದ
ಅವ್ಯವಹಾರಕ್ಕೆ ಸಂಬಂಧಿಸಿದಂತೆ, ಕೇರಳ ರಾಜ್ಯದ ಚಂಗನಸೆರಿ ಕಥೋಲಿಕ ಧರ್ಮಪ್ರಾಂತ್ಯದ ಫಾದರ್
ಥೋಮಸ್ ಪೀಲಿಯನಿಕಲ್ ಅವರನ್ನು ಜೂನ್ ೧೯ರಂದು ಪೋಲಿಸರು ಬಂಧಿಸಿದ್ದಾರೆ. ಅವರನ್ನು ೧೪ ದಿನಗಳ ಕಾಲ
ನ್ಯಾಯಾಂಗದ ವಶಕ್ಕೆ ಒಪ್ಪಿಸಲಾಗಿದೆ.
ಕುಟ್ಟನಾಡ
ಅಭಿವೃದ್ಧಿ ಮಂಡಳಿಯ ಆಡಳಿತ ನಿರ್ದೇಶಕರಾಗಿದ್ದ ಫಾದರ್ ಪೀಲೊಯನಿಕಲ್ ಅವರು, ಕೇರಳದ ಭತ್ತದ
ಕಣಜವಾಗಿರುವ ಕುಟ್ಟನಾಡಿನ ಹಲವಾರು ರೈತರಿಗೆ ಅರಿವಿಲ್ಲದಂತೆ ಅವರ ಒಡೆತನದ ಭೂಮಿಯ ಖೊಟ್ಟಿ
ದಾಖಲೆಗಳನ್ನು ಬಳಸಿಕೊಂಡು ಬ್ಯಾಂಕುಗಳಿಂದ ಕೋಟಿಗಟ್ಟಲೇ ಹಣ ಸಾಲಪಡೆದು ಅವರನ್ನು ಸಂಕಷ್ಟಕ್ಕೆ
ದೂಡಿದ್ದಾರೆ ಎಂದು ಆಪಾದಿಸಲಾಗಿದೆ.
ಸಾಲದ
ಮರುಪಾವತಿಗೆ ಆಗ್ರಹಿಸಿ ತಮ್ಮ ಮನೆಗಳಿಗೆ ಬ್ಯಾಂಕುಗಳಿಂದ ನೋಟಿಸ್ ಬಂದಾಗಲೇ, ಈ ರೈತರಿಗೆ ತಮ್ಮ
ಹೆಸರಿನಲ್ಲಿ ಸಹಕಾರ ಸಂಘಗಳ ಮೂಲಕ ಬ್ಯಾಂಕುಗಳಿಂದ ಸಾಲ ಪಡೆಯಲಾಗಿದೆ ಎಂಬ ಮಾಹಿತಿ ಸಿಕ್ಕಿದೆ. ಈ
ಹಗರಣದ ಪ್ರಮುಖ ಆರೋಪಿ ರೋಜೊ ಜೋಸೆಫ್ ಪ್ರಕರಣ ಬೆಳಕಿಗೆ ಬಂದ ದಿನದಿಂದ ನಾಪತ್ತೆಯಾಗಿದ್ದಾರೆ.
ಜೋಸೆಫ್ ಅವರ ಹೆಂಡತಿ ಮತ್ತು ಇನ್ನಿಬ್ಬರು ಕುಟ್ಟನಾಡ ಅಭಿವೃದ್ಧಿ ಮಂಡಳಿಯ ಪದಾಧಿಕಾರಿಗಳೂ
ಇದರಲ್ಲಿ ಶಾಮೀಲಾಗಿದ್ದಾರೆ ಎಂದು ಪೋಲಿಸರು ತಿಳಿಸಿದ್ದಾರೆ.
ಸುದ್ದಿಯಾಗದ ಸುದ್ದಿ, ಸುದ್ದಿಯಾಗುವ ಸುದ್ದಿ
ಶತಮಾನಗಳ ಹಿಂದೆ, ಸಿಪಾಯಿ ದಂಗೆ ನಡೆದ ಸಂದರ್ಭದಲ್ಲಿ ಕನ್ನಡ ನಾಡಿನ
ಸುರಪುರದಲ್ಲಿ ನೆಲೆಸಿದ್ದ ಬ್ರಿಟಿಷ್ ಅಧಿಕಾರಿ ಮೆಡೋಸ್ ಟೇಲರ್ ಕಟ್ಟಿದ ಗುಡ್ಡದ ಮೇಲಿನ ಮನೆ
ಇನ್ನೂ ಇದೆ. ಆದರೆ ಆತ ದಾಖಲಿಸಿದ್ದ ರಾಯಚೂರು ಜಿಲ್ಲೆಯ ಮುದಗಲ್ ನಲ್ಲಿದ್ದ ಕಥೋಲಿಕ ಕ್ರೈಸ್ತರ
ಪುರಾತನ ಚರ್ಚು ಹೊಸ ಚರ್ಚಿಗೆ ದಾರಿ ಮಾಡಿಕೊಡಲು ದಶಕಗಳ ಹಿಂದೆ ಕಾಲಗರ್ಭ ಸೇರಿತು.
ನಾಲ್ಕಾರು
ವರ್ಷಗಳ ಹಿಂದೆ, ಕರ್ನಾಟಕದ ಕಲ್ಬುರ್ಗಿ ಜಲ್ಲೆಯಲ್ಲಿನ ಪುರಾತನವೆಂದು ಹೇಳಲಾಗುತ್ತಿದ್ದ
ಚಿತ್ತಾಪುರದಲ್ಲಿನ ಹಳೆಯ ಚರ್ಚು ಹೊಸ ಚರ್ಚ್ ಕಟ್ಟೋಣಕ್ಕಾಗಿ ನೆಲಸಮವಾದದ್ದು ಸುದ್ದಿಯಾಗಲಿಲ್ಲ.
ಬೆಂಗಳೂರಿನ ಮಡಿಲು ಸೇರಿದ, ಮುಂಚೆ ನಗರದ ಹೊರ ವಲಯದಲ್ಲಿದ್ದ ಕಥೋಲಿಕ
ಕ್ರೈಸ್ತ ಒಕ್ಕಲುಗಳಿದ್ದ ಹಳ್ಳಿಗಳಲ್ಲಿನ ಶತಮಾನಗಳನ್ನು ಕಂಡಿದ್ದ ಪುರಾತನ ಕಲ್ಲುಕಟ್ಟಡಗಳ
ಚರ್ಚುಗಳು ಈಚೆಗೆ ಒಂದೊಂದಾಗಿ ಕಾಲಗರ್ಭ ಸೇರಿದ್ದು ಸುದ್ದಿಯಾಗಲಿಲ್ಲ.
ಆದರೆ, ದೂರದ
ತೈವಾನ್ ನಲ್ಲಿ ಅಲ್ಲಿನ ಸರ್ಕಾರವೇ ಗುರುತಿಸಿದ್ದ ಐಲಾನ್ ಜಿಲ್ಲೆಯ ಚಿಹೋಷಿ ಗ್ರಾಮದಲ್ಲಿದ್ದ
ಬಳಸದ ಹಳೆಯ ಪಾರಂಪರಿಕ ಚರ್ಚ್ ಕಟ್ಟಡವನ್ನು ಅಲ್ಲಿನ ಕಥೋಲಿಕ ಕ್ರೈಸ್ತ ಸಮುದಾಯ ನೆಲಸಮ ಮಾಡಿದ್ದ
ಸುದ್ದಿ, ನಮ್ಮ ದೇಶದ ಹಲವಾರು ಕಥೋಲಿಕರ ಸುದ್ದಿ ಮನೆಗಳಲ್ಲಿ ಸುದ್ದು ಮಾಡುತ್ತಿದೆ. ನಡುಗಡ್ಡೆ
ದೇಶ ತೈವಾನ್ ೩೬, ೦೦೦ ಚದುರ ಕಿ. ಮೀ ವ್ಯಾಪ್ತಿ ಹೊಂದಿದ್ದರೆ, ಕರ್ನಾಟಕ ರಾಜ್ಯದ ಭೌಗೋಳಿಕ
ಪ್ರದೇಶ ಒಟ್ಟು ಸುಮಾರು ೨ ಲಕ್ಷ ಚದುರ ಕಿ. ಮೀ ಇದೆ.
ಬೆಂಗಳೂರು ಮಹಾಧರ್ಮಕ್ಷೇತ್ರಕ್ಕೆ ನೂತನ ಆರ್ಚ್ ಬಿಷಪ್ಪರು
ಇದುವರೆಗೂ
ಬೆಳಗಾವಿ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾಗಿದ್ದ ಪರಮ ಪೂಜ್ಯ ಡಾ. ಪೀಟರ್ ಮಚಾಡೋ ಅವರು ಈಚೆಗೆ,
ಬೆಂಗಳೂರಿನ ಸಂತ ಫ್ರಾನ್ಸಿಸ್ ಝೇವಿಯರ್ ಪ್ರಧಾನಾಲಯದಲ್ಲಿ ನಡೆದ ದಿವ್ಯ ಬಲಿಪೂಜೆಯ ಧಾರ್ಮಿಕ
ವಿಧಿವಿಧಾನಗಳಲ್ಲಿ ಬೆಂಗಳೂರು ಮಹಾಧರ್ಮಕ್ಷೇತ್ರದ ಮಹಾಧರ್ಮಾಧಕ್ಷರಾಗಿ ಪೀಠಾರೋಹಣ ಮಾಡಿದರು.
ಹಿಂದಿನ ಮಹಾಧರ್ಮಾಧ್ಯಕ್ಷ ಪರಮ ಪೂಜ್ಯ ಬರ್ನಾಡ್ ಮೊರಾಸ್ ಅವರಿಂದ ಅಧಿಕಾರ ಹಸ್ತಾಂತರ ನಡೆಯಿತು.
ಕಥೋಲಿಕರ ಪರಮೋಚ್ಚ ಗುರು, ಪೋಪ್ ಫ್ರಾನ್ಸಿಸ್ ಅವರು, ತಮ್ಮ
ಪೀಠವಾಗಿರುವ ರೋಮಿನಲ್ಲಿ ಮಾರ್ಚ್ ತಿಂಗಳ ಸಂತ ಜೋಸೆಫ್ ರ ಹಬ್ಬದಂದು, ಬೆಂಗಳೂರು
ಮಹಾಧರ್ಮಕ್ಷೇತ್ರದ ನೂತನ ಮಹಾಧರ್ಮಾಧ್ಯಕ್ಷರನ್ನಾಗಿ ಬೆಳಗಾವಿ ಧರ್ಮಕ್ಷೇತ್ರದ ಡಾ. ಪೀಟರ್ ಮಚಾಡೋ
ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದರು.
ನೂರಾರು ಯಾಜಕರ, ಕನ್ಯಾಸ್ತ್ರೀಯರ
ಹಾಗೂ ಸಾವಿರಾರು ಸಂಖ್ಯೆಯ ಕಥೋಲಿಕ ಧರ್ಮಸಭೆಯ ವಿಶ್ವಾಸಿಕರ ಉಪಸ್ಥಿತಿಯಲ್ಲಿ ಬೆಂಗಳೂರು
ಮಹಾಧರ್ಮಕ್ಷೇತ್ರದ ನೂತನ ಮಹಾಧರ್ಮಾಧ್ಯಕ್ಷರ ಪೀಠಾರೋಹಣ ಹಾಗೂ ನಿರ್ಗಮಿತ ಹಿಂದಿನ
ಮಹಾಧರ್ಮಾಧ್ಯಕ್ಷರ ಬೀಳ್ಕೊಡುಗೆಯ ಸವಿನೆನಪಿನ ದಿವ್ಯ ಬಲಿಪೂಜೆ ಸಂತ ಫ್ರಾನ್ಸಿಸ್ ಝೇವಿಯರ್
ಪ್ರಧಾನಾಲಯದಲ್ಲಿ ನಡೆಯಿತು.
No comments:
Post a Comment