Friday, 13 July 2018

ಮಣ್ಣಿನಸ್ನಾನದ ಹಬ್ಬವಾಗಿರುವ ಸ್ನಾನಿಕ ಯೋವಾನ್ನನ ಹಬ್ಬ

    
 ಜೋರ್ಡಾನ್ ನದಿಯ ಹತ್ತಿರದ ಕಾಡು ಪ್ರದೇಶದಲ್ಲಿ ನೆಲೆಸಿದ್ದ, ಒಂಟೆ ತುಪ್ಪಟದ ಹೊದಿಕೆ, ಸೊಂಟದಲ್ಲಿ ತೊಗಲಿನ ನಡುಕಟ್ಟು ತೊಟ್ಟು, ಮಿಡತೆ ಕಾಡು ಜೇನುಗಳನ್ನು ತಿನ್ನುತ್ತಾ ಬದುಕು ಸಾಗಿಸುತ್ತಾ, ಒಳ್ಳೆಯ ಮಾತುಗಳನ್ನು ಹೇಳುತ್ತಾ ಋಷಿಮುನಿಯಂತಿದ್ದ ವ್ಯಕ್ತಿಯ ಹತ್ತಿರ ಆಸುಪಾಸಿನ ಜನರು ಮನಃಶಾಂತಿ ಅರಸಿಕೊಂಡು ಬರುತ್ತಿದ್ದರು.
           "ಸರ್ವೇಶ್ವರನಿಗೆ ಮಾರ್ಗ ಸಿದ್ಧಪಡಿಸಿರಿ, ಆತನಿಗಾಗಿ ಹಾದಿಯನ್ನು ಸರಾಗ ಮಾಡಿರಿ ಎಂದು ಬೆಂಗಾಡಿನಲ್ಲೊಬ್ಬನು ಘೋಷಿಸುತ್ತಾನೆ" ಎಂದು ಪ್ರವಾದಿ ಯೆಶಾಯ ಸೂಚಿಸಿದ ವ್ಯಕ್ತಿ ಈತನೇ ಇರಬೇಕು ಎಂದು ಇಸ್ರೇಲ್ ಸಮುದಾಯದ ಜನರು ವಿಶ್ವಾಸಿಸುತ್ತಿದ್ದರು.
          ಅವರು ಆ ವಿಶ್ವಾಸದಲ್ಲೇ ಆತನ ಬಳಿಗೆ ಬಂದು, ತಮ್ಮ ತಮ್ಮ ಪಾಪಗಳನ್ನು ಒಪ್ಪಿಕೊಳ್ಳುತ್ತಾ ಜೋರ್ಡಾನ್ ನದಿಯಲ್ಲಿ ಆತನಿಂದ ಸ್ನಾನ ದೀಕ್ಷೆ ಪಡೆಯುತ್ತಿದ್ದರು. ಆ ಸ್ನಾನದೀಕ್ಷೆ ಎಂದರೆ, ದೇವರ ನಾಮದಲ್ಲಿ ವಿಶ್ವಾಸಿಕರನ್ನು ಪವಿತ್ರ ಜೋರ್ಡಾನ್ ನದಿಯಲ್ಲಿ ಮುಳುಗಿಸಿ ಏಳಿಸುವುದು.
          "ಪಶ್ಚಾತ್ತಾಪಪಟ್ಟು ಪಾಪಕ್ಕೆ ಮಿಮುಖರಾಗಿ, ದೇವರಿಗೆ ಅಭಿಮುಖರಾಗಿರಿ ಮತ್ತು ಸ್ನಾನದೀಕ್ಷೆ ಪಡೆದುಕೊಳ್ಳಿರಿ: ದೇವರು ನಿಮ್ಮ ಪಾಪಗಳನ್ನು ಕ್ಷಮಿಸಿ ಬಿಡುವರು" ಎಂದು ಅವನು ಸಾರಿ ಹೇಳುತ್ತಿದ್ದನು.
           "ಹೃದಯ ಪರಿವರ್ತನೆಯ ಗುರುತಿಗಾಗಿ ನಾನು ನಿಮಗೆ ನೀರಿನಿಂದ ಜ್ಞಾನಸ್ನಾನ ಕೊಡುತ್ತಿದ್ದೇನೆ. ಆದರೆ, ನನ್ನ ನಂತರ ಬರುವ ಒಬ್ಬರು ನಿಮಗೆ ಪವಿತ್ರಾತ್ಮರಿಂದಲೂ ಅಗ್ನಿಯಿಂದಲೂ ದೀಕ್ಷಸ್ನಾನ ಕೊಡುವರು. ಅವರು, ನನಗಿಂತಲೂ ಶಕ್ತರು. ಅವರ ಪಾದರಕ್ಷೆಗಳನ್ನು ಹೊರಲು ಸಹ ನಾನು ಅರ್ಹನಲ್ಲ" ಎಂಬ ವಿನಮ್ರ ಮಾತುಗಳು ಅವನ ವಿಶ್ವಾಸಿಕರಲ್ಲಿ ಮತ್ತಷ್ಟು ವಿಶ್ವಾಸವನ್ನು ಬಲಪಡಿಸುತ್ತಿತ್ತು.
          ಈ ಜ್ಞಾನಸ್ನಾನದ ದೆಸೆಯಿಂದ ಜಕರೀಯನ ಮಗ ಯೋವಾನ್ನನನ್ನು ಸ್ನಾನಿಕ ಯೋವಾನ್ನ ಎಂದು ಜನ ಗುರುತಿಸುತ್ತಿದ್ದರು. "ಎರಡು ಅಂಗಿಗಳಿದ್ದರೆ, ಒಂದನ್ನು ಇಲ್ಲದವನಿಗೆ ಕೊಡಿ. ನಿಮ್ಮ ಊಟವನ್ನು ಊಟವಿಲ್ಲದವನೊಂದಿಗೆ ಹಂಚಿಕೊಳ್ಳಿ, ನಿಮಗೆ ಬರುವ ಸಂಬಳದಿಂದ ತೃಪ್ತರಾಗಿರಿ" ಇತ್ಯಾದಿ ಬೋಧನೆಗಳಿಂದ ಅವನು ಜನಾನುರಾಗಿಯಾಗಿದ್ದ.
          ಉಳಿದ ಸಾಮಾನ್ಯಜನರಂತೆ ಪ್ರಭು ಯೇಸುಸ್ವಾಮಿ, ಅವನಲ್ಲಿಗೆ ಬಂದು ಜೋರ್ಡಾನ್ ನದಿಯ ನೀರಿನಲ್ಲಿ ಮುಳಿಗೆದ್ದು ಸ್ನಾನದೀಕ್ಷೆ ಪಡೆದಾಗ, `ಫಕ್ಕನೇ ಆಕಾಶದಿಂದ ಪವಿತ್ರಾತ್ಮರು ಪಾರಿವಾಳದ ರೂಪದಲ್ಲಿ ಇಳಿದುಬಂದರು. ಇವನೇ ನನ್ನ ಪುತ್ರ, ನನಗೆ ಪರಮಪ್ರಿಯ. ನನ್ನ ಅಪಾರ ಮೆಚ್ಚುಗೆಗೆ ಪಾತ್ರನು ಎಂಬ ಅಶರೀರವಾಣಿ ಕೇಳಿಸಿತು. ಇಗೋ ನೋಡಿ, ಬಲಿಯರ್ಪಣೆಗಾಗಿ ದೇವರು ನೇಮಿಸಿರುವ ಕುರಿಮರಿ; ಲೋಕದ ಪಾಪಗಳನ್ನು ಪರಿಹರಿಸುವವನು ಇವನೇ ಎಂದು ಸ್ನಾನಿಕ ಯೋವಾನ್ನ ಸಾರಿದ'ಎಂಬುದಾಗಿ ಶ್ರೀಗ್ರಂಥ ಬೈಬಲ್ಲಿನಲ್ಲಿ ದಾಖಲಿಸಲಾಗಿದೆ.
          ರಕ್ಷಕ, ಜಗದೋದ್ಧಾರಕ ಪ್ರಭು ಯೇಸುಸ್ವಾಮಿಗೆ ಸ್ನಾನದೀಕ್ಷೆ ನೀಡಿದ ಯೋವಾನ್ನನನ್ನು ಕಥೋಲಿಕ ಧರ್ಮಸಭೆ ಸಂತನೆಂದು ಗುರುತಿಸಿ ಗೌರವಿಸಿದೆ. ಜೂನ್ ೨೪ ಈ ಸಂತನ ಸ್ಮರಣೆಯ ದಿನ. ಕ್ರಿಸ್ಮಸ್ ಪ್ರಭು ಯೇಸುಸ್ವಾಮಿಯ ಹುಟ್ಟಿದ ದಿನ. ಸ್ನಾನಿಕ ಯೋವಾನ್ನ, ಪ್ರಭು ಯೇಸುಸ್ವಾಮಿಗಿಂತ ಆರು ತಿಂಗಳು ಮೊದಲು ಹುಟ್ಟಿದವ, ಹೀಗಾಗಿ ಸ್ನಾನಿಕ ಯೋವಾನ್ನನ ಹಬ್ಬದ ದಿನವನ್ನು ಕ್ರಿಸ್ಮಸ್ಸಿಗಿಂತ ಆರು ತಿಂಗಳು ಮೊದಲು ಗುರುತಿಸಲಾಗಿದೆ. ಸಂತನ ಹುಟ್ಟು ಹಬ್ಬದ ಸಂದರ್ಭಗಳಲ್ಲಿ, ಮೂರು ಬಲಿಪೂಜೆಗಳು (ಜಾಗರಣೆ, ಹುಟ್ಟು ಹಬ್ಬದ ಮುನ್ನಾದಿನ ಮತ್ತು ಹುಟ್ಟುಹಬ್ಬ) ಹಾಗೂ ಈ ಸಾಂಗ್ಯಗಳಲ್ಲದೇ ವಿವಿಧ ಆಚರಣೆಗಳು ಈ ಸಂತನ ಸುತ್ತ ಹಬ್ಬಿಕೊಂಡಿವೆ.
            ಕ್ರೈಸ್ತರ ಸಂತ ಸ್ನಾನಿಕ ಯೋವಾನ್ನರ ಹುಟ್ಟು ಹಬ್ಬವನ್ನು ಬೇಸಿಗೆಯ ಅಯನ `ಕರ್ಕಾಟಕ ಸಂಕ್ರಾಂತಿ'ಯ ಆಚರಣೆಗೆ ತಗಲು ಹಾಕಲಾಗಿದೆ ಎಂದು ಇತಿಹಾಸಕಾರರು ಅಭಿಪ್ರಾಯ ಪಡುತ್ತಾರೆ. ಏಕೆಂದರೆ, ಕರ್ಕಾಟಕ ಸಂಕ್ರಾಂತಿಯು ಇದೇ ಸಂದರ್ಭದಲ್ಲಿ ಬರುತ್ತದೆ. ಕ್ರೈಸ್ತಧರ್ಮದ ಪೂರ್ವದಲ್ಲಿಯೇ ವಿವಿಧ ದೇಶಗಳಲ್ಲಿನ ಜನರು ಕರ್ಕಾಟಕ ಸಂಕ್ರಾಂತಿಯ ಹಬ್ಬವನ್ನು ಸಡಗರದಿಂದ ಆಚರಿಸುವ ಪರಿಪಾಠ ರೂಢಿಸಿಕೊಂಡಿದ್ದರು. ನಮ್ಮ ನಾಡು ಭಾರತದಲ್ಲಿ ಬೆಂಕಿಯನ್ನು ಸಂಭ್ರಮಿಸುವ ಕಾಮನ ಹಬ್ಬದ ಬೆಂಕಿ, ಜಾತ್ರೆಗಳ ಸಂದರ್ಭದ ಎತ್ತುಗಳನ್ನು ಕಿಚ್ಚು ಹಾಯಿಸುವ, ಭಕ್ತರು ಕಿಚ್ಚು ಹಾಯುವ ಚಟುವಟಿಕೆಗಳಲ್ಲಿ ತೊಡಗುವಂತೆ, ದೀಪಾವಳಿಯಲ್ಲಿ ರಾವಣ ಪ್ರತಿರೂಪಗಳನ್ನು ಬಾಣ ಬಿರುಸುಗಳೊಂದಿಗೆ ಸುಟ್ಟು ಸಂಭ್ರಮಿಸಿದಂತೆ, ಈ ಅವಧಿಯಲ್ಲಿ ಕ್ರೈಸ್ತಧರ್ಮ ವ್ಯಾಪಿಸುವ ಮುಂಚೆ ಇದ್ದ ಯುರೋಪಿನ ಜನ ಕಿಚ್ಚು ಹಚ್ಚಿ ಅದರ ಸುತ್ತ ಕುಣಿದು ಕುಪ್ಪಳಿಸಿ ಸಂಭ್ರಮಿಸುತ್ತಿದ್ದರಂತೆ.
          ಯುರೋಪಿನ ಹಿಂದಿನ ಬೇಸಿಗೆಯ ಕರ್ಕಾಟಕ ಸಂಭ್ರಮ, ಈಗ ಸಂತ ಸ್ನಾನಿಕ ಯೊವಾನ್ನರ ಹುಟ್ಟುಹಬ್ಬದ ಸಂಭ್ರಮವಾಗಿ ಇವೆಲ್ಲಾ ಜರುಗುತ್ತಿವೆ. ಸಂತ ಸ್ನಾನಿಕ ಯೋವಾನ್ನರ ಬೆಂಕಿ, ಕಿಚ್ಚು ಕೆಟ್ಟ ದೃಷ್ಟಿಯನ್ನು ದೂರ ಮಾಡುತ್ತದೆ, ಮಾಟಗಾತಿಯರನ್ನು, ದುಷ್ಟಶಕ್ತಿಗಳನ್ನು ದೂರವಿರಿಸುತ್ತದೆ ಎಂದು ವಿಶ್ವಾಸಿಸಲಾಗುತ್ತದೆ. ಇದಲ್ಲದೇ ಸಂತ ಸ್ನಾನಿಕ ಯೋವಾನ್ನರು ಪ್ರಭು ಯೇಸುಸ್ವಾಮಿಯನ್ನು ನದಿಯಲ್ಲಿ ಮುಳುಗಿಸಿ ಸ್ನಾನದೀಕ್ಷೆ ಕೊಟ್ಟ ಸಂಗತಿಯ ಸ್ಮರಣೆಯಲ್ಲಿ ನದಿಗಳಲ್ಲಿ ಮುಳುಗು ಹಾಕುವ ಸಂಪ್ರದಾಯಗಳು ಅಮೆರಿಕ, ಯುರೋಪು ಮತ್ತು ರಷ್ಯಗಳಲ್ಲಿ ಕಂಡುಬರುತ್ತದೆ.
          ಆಯಾ ದೇಶಗಳ ಸಂಪ್ರದಾಯದ ಬಗೆಯಲ್ಲಿ ಯುರೋಪಿನ ಸಂತ ಸ್ನಾನಿಕ ಯೋವಾನ್ನರ ಹಬ್ಬವು, ಯುರೋಪಿನಲ್ಲಿ ಬಗೆಬಗೆಯ ರೂಪ ತಾಳಿದಂತೆ, ಏಷ್ಯದ ದೇಶಗಳಲ್ಲೂ ಹೊಸಹೊಸ ರೂಪ ತಾಳಿದೆ. ಕರ್ನಾಟಕದ ನೆರೆಯ ಗೋವೆಯಲ್ಲಿ ಕಥೋಲಿಕ ಕ್ರೈಸ್ತ ವಿಶ್ವಾಸಿಗಳು ಎಲೆ, ಹೂವುಗಳನ್ನು ಕಟ್ಟಿಕೊಂಡು ನದಿ, ಕೆರೆ, ಬಾವಿ ಮೊದಲಾದ ಜಲಮೂಲಗಳಲ್ಲಿ ಇಳಿದು, ಜಿಗಿದು ಸಂತ ಸ್ನಾನಿಕ ಯೋವಾನ್ನರ ಹುಟ್ಟು ಹಬ್ಬವನ್ನು ಸಂಭ್ರಮಸಿದರೆ, ಹಿಂದೆ ಕರ್ನಾಟಕದ ಕಾರವಾರ ಜಿಲ್ಲೆಯ ಹೊನ್ನಾವರ, ಕುಮಟಾಗಳಲ್ಲಿ ಪುಟ್ಟ ನಾವೆಗಳ ಸ್ಪರ್ಧೆಗಳು ನಡೆಯುತ್ತಿದ್ದವು.
            ಆದರೆ, ಫಿಲಿಪ್ಪೀನ್ಸ್ ದೇಶದಲ್ಲಿನ ಒಂದು ಹಳ್ಳಿಯಲ್ಲಿ, ಸಂತ ಸ್ನಾನಿಕ ಯೋವಾನ್ನರ ಆಚರಣೆ ಭಿನ್ನ ಬಗೆಯಲ್ಲಿ ರೂಪತಾಳಿದೆ. ಅಲ್ಲಿ ಜನನದಿ, ಕೆರೆ, ಬಾವಿ ಮೊದಲಾದ ಜಲಮೂಲಗಳಲ್ಲಿ ಮುಳುಗುವುದಿಲ್ಲ, ಮಣ್ಣಿನಸ್ನಾನ ಮಾಡುತ್ತಾರೆ. ಅಲ್ಲಲ್ಲ ಮಣ್ಣಲ್ಲಿ ಉರುಳಾಡಿ, ಸಂಭ್ರಮಿಸುತ್ತಾರೆ, ಮೆರವಣಿಗೆ ನಡೆಸುತ್ತಾರೆ.
          ಕರ್ನಾಟಕದ ಕೊಡಗಿನ ಬುಡಕಟ್ಟು ಜನರ ಬೈಗುಳ ಜಾತ್ರೆಯಂತೆ, ಉತ್ತರ ಕರ್ನಾಟಕದ ಊರೊಂದರಲ್ಲಿನ ಸೆಗಣಿಜಾತ್ರೆಯಂತೆ ಇದು ನೆಲ ಮೂಲದ ಆಚರಣೆ. ಸೆಗಣಿ ಮೆತ್ತಿಕೊಂಡ ಎಲ್ಲರೂ ಸಮಾನರೇ, ಅದರಂತೆ ತಮ್ಮತನ ತೊರೆದು ಮಣ್ಣಲ್ಲಿ ಉರುಳಾಡಿದ ಎಲ್ಲರೂ ಸಮಾನರೇ. ಎಲ್ಲರೂ ಮಣ್ಣಿನ ಮಕ್ಕಳು. ಯಾರೂಮೇಲಲ್ಲಕೀಳಲ್ಲ!
            ಸ್ನಾನಿಕಯೋವಾನ್ನರುಕಾಡುಮೇಡುಗಳಲ್ಲಿಜೀವಿಸುತ್ತಿದ್ದುದನ್ನುನೆನೆಸಿಕೊಂಡು, ಮಣ್ಣಿನಸ್ನಾನದನಂತರ ಸೊಂಟಕ್ಕೆಎಲೆಗಳನ್ನುಹುಲ್ಲನ್ನುಕಟ್ಟಿಕೊಳ್ಳುತ್ತಾರೆ!
ಇದು ಬಹುತೇಕ ಕರ್ನಾಟಕದ ವಿವಿಧ ಜಾತ್ರೆಗಳಲ್ಲಿ ನಡೆಯುವ ದಲಿತರ ಹರಕೆಯ ಬೆತ್ತಲೆಸೇವೆ ಅಥವಾ ಬೇವಿನ ಎಲೆ ಸುತ್ತಿಕೊಂಡಂತೆ ಅನ್ನಿಸಿದರೆ ತಪ್ಪಾಗದು. ಏಕೆಂದರೆ, ಫಿಲಿಪ್ಪೀನ್ಸಿನ ಹಳ್ಳಿಯಲ್ಲಿನ, ಸಂತ ಸ್ನಾನಿಕ ಯೋವಾನ್ನರ ಹುಟ್ಟುಹಬ್ಬದ ಸ್ಮರಣೆಯ ಈ ಮಣ್ಣಿನ ಸ್ನಾನ, ಸೊಂಟಕ್ಕೆ ಎಲೆಗಳನ್ನು ಇಲ್ಲವೆ ಹುಲ್ಲು ಕಟ್ಟಿಕೊಳ್ಳುವುದು ಹರಕೆಯ ಆಚರಣೆಯೇ ಆಗಿದೆ!
            ದಕ್ಷಿಣಫಿಲಿಪ್ಪೀನ್ಸಿನನೋವಾಎಸಿಜಾಪ್ರದೇಶದಬೀಬಿಕ್ಲಾಟ್ಹೆಸರಿನಹಳ್ಳಿಯಲ್ಲಿನಕಥೋಲಿಕಕ್ರೈಸ್ತವಿಶ್ವಾಸಿಗಳು, ಸಂತ ಸ್ನಾನಿಕ ಯೋವಾನ್ನರ ಹುಟ್ಟುಹಬ್ಬದ ಸ್ಮರಣೆಯ ಮಣ್ಣಿನ ಸ್ನಾನ, ಸೊಂಟಕ್ಕೆ ಎಲೆಗಳನ್ನು ಇಲ್ಲವೆ ಹುಲ್ಲು ಕಟ್ಟಿಕೊಳ್ಳುವುದು ಅವರ ಹರಕೆಯ ಫಲಶೃತಿಯಾಗಿದೆ.
            ಶತಮಾನಗಳ ಹಿಂದೆ ಬೀಬಿಕ್ಲಾಟ್ ಹೆಸರಿನ ಹಳ್ಳಿಯಲ್ಲಿ ಹಾವುಗಳ ಕಾಟ ವಿಪರೀತವಾಗಿತ್ತಂತೆ. ಆಗ ಊರ ಜನ, ಹಾವುಗಳ ಕಾಟದಿಂದ ತಮ್ಮನ್ನು ಪಾರುಮಾಡಬೇಕೆಂದು ಸಂತ ಸ್ನಾನಿಕ ಯೋವಾನ್ನರನ್ನು ಕೋರಿಕೊಂಡು ಪ್ರಾರ್ಥನೆ ಸಲ್ಲಿಸಿದರಂತೆ. ಸಂತ ಸ್ನಾನಿಕ ಯೋವಾನ್ನರ ಸ್ವರೂಪವನ್ನು ಹಿಡಿದು ಬೆನ್ನಟ್ಟಿದಾಗ ಹಾವುಗಳು ಓಡಿಹೋದವಂತೆ! ಅಂದಹಾಗೆ ಫಿಲಿಪ್ಪೀನ್ಸ್ ಸ್ಥಳೀಯ ಭಾಷೆಯಲ್ಲಿ ಬಿಕ್ಲಾಟ್ ಅಂದರೆ ಹಾವು. ಹೀಗಾಗಿ ಹಳ್ಳಿಯ ಹೆಸರು ಬೀಬಿಕ್ಲಾಟ್ ಎಂದಾಗಿದೆಯಂತೆ!
          ಉಪಕಾರ ಸ್ಮರಣೆಯ ಪ್ರತೀಕವಾಗಿ, ಸಂತ ಸ್ನಾನಿಕ ಯೋವಾನ್ನರ ಧಿರಿಸು ಸೂಚಿಸುವ ದಿಕ್ಕುದೆಸೆ ಇಲ್ಲದ ಬಡ ಬಿಕ್ಷುಕನಂತಿರುವ ಹೀನದೆಸೆಯನ್ನು ಹಳ್ಳಿಯಲ್ಲಿನ ವಿಶ್ವಾಸಿಗಳು ತಮ್ಮ ಮೇಲೆ ಆಹ್ವಾನಿಸಿಕೊಳ್ಳುತ್ತಾರೆ! ಅವರವರ ಭಾವಕ್ಕೆ ಭಕುತಿಗೆ ತಕ್ಕಂತೆ ಆಚರಣೆಗಳು ರೂಪತಾಳುವುದು ಸಹಜ ಸಂಗತಿ ಎನ್ನುವುದನ್ನು ಅಲ್ಲಗಳೆಯಲಾಗದು.

ಎಂಎನ್ಫ್ರಾನ್ಸಿಸ್

No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...