Friday, 13 July 2018

ಬಲಿಪೂಜೆ ಮತ್ತು ನಮ್ಮ ತಪ್ಪುಗಳು


ಬಲಿಪೂಜೆ ಎಂಬುದು ಸರ್ವಶಕ್ತ ದೇವರ ಆರಾಧನೆಯ ಮಧುರ ಸಂಕೇತ ಹಾಗೂ ಕಥೋಲಿಕ ಧರ್ಮಸಭೆಯ ಅಮೂಲ್ಯ ನಿಧಿಯಾಗಿದೆ. ಬಲಿಪೂಜೆಯ ಸಂಪೂರ್ಣ ಅರ್ಥವನ್ನು ತಿಳಿಯಲು ನಾವು ಅದರ ಐತಿಹಾಸಿಕ ಬೆಳವಣಿಗೆಯನ್ನು ಮೊದಲು ಅರ್ಥೈಸಿಕೊಳ್ಳಬೇಕು. ಅಂತೆಯೇ ಅದರ ಮೂಲವು ಪ್ರಭು ಯೇಸು ಮತ್ತು ಅವರ ಶಿಷ್ಯರೊಂದಿಗಿನ ಕೊನೆಯ ಭೋಜನವೆಂಬುದು ನಮಗೆಲ್ಲಾ ತಿಳಿದೇ ಇದೆ. ಅಂದು ಯೇಸು ಮತ್ತು ಶಿಷ್ಯರು ಪವಿತ್ರ ಗ್ರಂಥವನ್ನು ಓದಿದ ನಂತರ ಯೇಸು ರೊಟ್ಟಿ ಮತ್ತು ದ್ರಾಕ್ಷಾರಸವನ್ನು ತೆಗೆದುಕೊಂಡು, ಇದು ನನ್ನ ಶರೀರ ಮತ್ತು ರಕ್ತವೆಂದು ನುಡಿದರು.
ಈ ಮೊದಲ ಬಲಿಪೂಜೆಯ ಕ್ರಿಯೆಯಲ್ಲಿ ನಾವು ನಮ್ಮ ಪ್ರಭು ಕ್ರಿಸ್ತರ ಪಾಡು, ಮರಣ ಮತ್ತು ಪುನರುತ್ಥಾನದ ಸಂಪೂರ್ಣ ಅರ್ಥವನ್ನು ಗ್ರಹಿಸಬಹುದು. ಅಂದಿನಿಂದ ಇಂದಿನವರೆಗೂ ಧರ್ಮಸಭೆಯು ಶಿಷ್ಯರ, ಸಂತರ, ಜಗದ್ಗುರುಗಳ, ಧರ್ಮಾಧ್ಯಕ್ಷರ, ಧರ್ಮ ಗುರುಗಳ ಮುಖೇನ ಬಲಿಪೂಜೆಯನ್ನು ಅರ್ಪಿಸುತ್ತಲೇ ಬಂದಿದೆ. ಈ ದಿವ್ಯ ಬಲಿಪೂಜೆಗೆ ನಾವು ಕೊಡುವ ಪ್ರಾಮುಖ್ಯತೆ ಎಷ್ಟು? ಬಲಿಪೂಜೆಯ ವೇಳೆ ಒಂದರ ಮೇಲೊಂದು ತಪ್ಪುಗಳನ್ನು ಮಾಡಿಕೊಂಡೇ ಬರುತ್ತಿದ್ದೇವೆ. ಆ ತಪ್ಪುಗಳು ಯಾವುವು;

ಪೂಜೆಗೆ ತಡವಾಗಿ ಬರುವುದು
ನಮಗೆ ನಮ್ಮ ಜೀವನದಲ್ಲಿ ಯಾರಾದರೂ ಗಣ್ಯವ್ಯಕ್ತಿ ಅಥವಾ ನೆಚ್ಚಿನ ವ್ಯಕ್ತಿಯನ್ನು ಭೇಟಿ ಮಾಡುವ ಅವಕಾಶ ಸಿಕ್ಕಿದರೆ, ಆ ಭೇಟಿಗಾಗಿ ನಮ್ಮ ತಯಾರಿ ಹೇಗಿರುತ್ತದೆ? ಅದಕ್ಕಾಗಿ ನಮ್ಮ ತಯಾರಿ ಹಿಂದೆಂದಿಗಿಂತಲೂ ವಿಶಿಷ್ಟವಾಗಿಯೇ ಇರುತ್ತದೆ. ಉತ್ತಮ ನಾಜೂಕಿನ ಉಡುಪುಗಳನ್ನು ತೊಟ್ಟು ಅತಿ ಉತ್ಸುಕತೆಯಿಂದ ಓಡಾಡುತ್ತೇವೆ. ಅಡೆತಡೆಗಳು ಬರಬಹುದು, ತಡವಾಗಬಹುದು ಎಂಬ ಅಂಶ ಮನಸಿನಲ್ಲಿಟ್ಟು ಮುಂಚಿತವಾಗಿ ಹೊರಡುತ್ತೇವೆ. ಭೇಟಿಗಾಗಿ ನಿಶ್ಚಯಿಸಿದ ವೇಳೆಗಿಂತ ಇನ್ನೂ ಮುಂಚಿತವಾಗಿಯೇ ಹೋಗಿ ಅಲ್ಲಿ ಕಾದಿರುತ್ತೇವೆ. ಒಬ್ಬ ಮನುಷ್ಯನನ್ನು ಭೇಟಿ ಮಾಡಲು ನಾವು ಎಷ್ಟೆಲ್ಲಾ ಮಾಡುತ್ತೇವೆ. ಆದರೆ ಪರಮ ಪ್ರಸಾದದಲ್ಲಿರುವ ದೇವರನ್ನು ಭೇಟಿ ಮಾಡುವ ಅದ್ಭುತವಾದ ಅವಕಾಶ ಮತ್ತು ಪರಮ ಪ್ರಸಾದದಲ್ಲಿರುವ ಯೇಸುವನ್ನು ಸ್ವೀಕರಿಸುವ ಅವಕಾಶವಿದ್ದಾಗ ನಾವೇನು ಮಾಡುತ್ತೇವೆ? ಎಂದಿನಂತೆ ದಿನನಿತ್ಯದ ಕಾರ್ಯಗಳು ನಡೆಯುತ್ತಿರುತ್ತವೆ, ಕರ್ತವ್ಯಗಳ ಪರಿಪೂರ್ಣತೆಗೆ ಏನು ಮಾಡಬೇಕೋ ಅದನ್ನಷ್ಟೇ ಮಾಡುತ್ತೇವೆ, ಹಾಗೂ ಪೂಜೆಗೆ ತಡವಾಗಿ ಹೋಗುತ್ತೇವೆ.
ನಾವು ದೇವರನ್ನು ಪ್ರೀತಿಸುತ್ತೇವಾದರೆ, ಬಲಿಪೂಜೆಯ ಸಮಯ ದೇವರು ನಮ್ಮ ಮಧ್ಯೆ ನೆಲೆಸಿರುತ್ತಾರೆ ಎಂಬ ವಿಶ್ವಾಸ ನಮ್ಮಲ್ಲಿದ್ದರೆ, ನಾವು ಪೂಜೆಗೆ ಬರುವ ವೇಳೆ ಏಕೆ ತಡವಾಗಿರುತ್ತದೆ? ಯಾವುದೋ ಕಾರಣ ಹೇಳಿ ಸಮರ್ಥಿಸಿಕೊಳ್ಳುತ್ತೇವೆ. ಪೂಜೆ ಶುರುವಾಗುವ ಹದಿನೈದು ನಿಮಿಷ ಮುನ್ನವೇ ತಲುಪುವ ಗುರಿ ಇಟ್ಟುಕೊಂಡರೆ, ಕನಿಷ್ಠ ಪಕ್ಷ ಐದು ಅಥವಾ ಹತ್ತು ನಿಮಿಷ ಮುಂಚಿತವಾಗಿಯೇ ತಲುಪಿ ಪೂಜೆಗೆ ಸಿದ್ದರಾಗಿರಬಹುದಲ್ಲವೇ? ಪೂಜೆ ಶುರುವಾದ ನಂತರ ಯಾವ ಸನ್ನಿವೇಶವನ್ನೂ ಕಳೆದುಕೊಳ್ಳಲು ಇಷ್ಟವಿಲ್ಲದೆ, ಬುಸಗುಟ್ಟಿ ಓಡುವ ಬದಲು ಮುಂಚಿತವಾಗಿಯೇ ದೇವಾಲಯಕ್ಕೆ ತಲುಪಿ ಪ್ರಾರ್ಥಿಸುವುದು ಉತ್ತಮ.
ವಾಚನ ಓದುವವನ ಮೇಲಿನ ಗಮನ
ನಾನು ಉತ್ತಮ ವಾಕ್ಚತುರ ಎಂದು ಬೀಗುವ ಮನೋಭಾವ ನಮ್ಮದು. ವಾಚಕನು ವಾಚನ ಓದುವಾಗ ಅವನ ಉಚ್ಚಾರಣೆ ಸರಿಯಿಲ್ಲ, ಧೈರ್ಯವಿಲ್ಲವೆಂದು ಏನೆಲ್ಲಾ ಹೇಳುತ್ತೇವೆ. ದೇವರು ವಾಚನದ ಮೂಲಕ ನಮಗೆ ಏನನ್ನು ತಿಳಿಸಲು ಯತ್ನಿಸುತ್ತಿದ್ದಾರೆ ಎಂಬುದನ್ನು ಹೊರತುಪಡಿಸಿ, ವಾಚಕನ ನಾಜೂಕು ನಿಯಮಗಳ ಕಡೆ ಗಮನ ಹರಿಸುತ್ತಾ ನಗಾಡುತ್ತೇವೆ. ಇವರೆಲ್ಲರೂ ವಾಚನ ಓದಲು ಏಕೆ ಬರುತ್ತಾರೋ ಎಂದು ಕೊಂಕು ಟೀಕೆ ಮಾಡುತ್ತೇವೆ. ಇವೆಲ್ಲವೂ ಸೈತಾನನ ಪ್ರಲೋಭನೆಗಳು. ಈ ಸೈತಾನನ ಪ್ರೇರಿತ ನಾಚಿಕೆಯ ಸಂಗತಿಗಳು ಬಲಿಪೂಜೆಯ ವೇಳೆ ಸಿಗುವ ದೇವರ ವರದಾನಗಳಾದ ವಾಚನಾಧಾರಿತ ಅಮೂಲ್ಯ ಕೊಡುಗೆಗಳನ್ನು ನಮ್ಮಿಂದ ಕಸಿದುಕೊಳ್ಳುತ್ತವೆ. ಇಂತಹ ದುರಹಂಕಾರದ ಸ್ವಭಾವದಿಂದ ಹೊರಬರಲು, ದೇವರಲ್ಲಿ ಪ್ರಾರ್ಥಿಸಿ, ಕ್ಷಮೆ ಕೋರಿ, ಪೂರ್ಣ ಮನಸಿನಿಂದ ದೇವರ ವಾಕ್ಯ ಆಲಿಸುವುದು ನಮ್ಮ ಆದ್ಯ ಕರ್ತವ್ಯ.

ಪರಮಪ್ರಸಾದ ಸ್ವೀಕಾರದ ನಂತರ ಫ್ಯಾಷನ್ ಶೋ

ಪೂಜಾವೇಳೆಯಲ್ಲಿ ನಾವೇ ಇದನ್ನು ಎಷ್ಟೋ ಬಾರಿ ಮಾಡಿರುತ್ತೇವೆ ಎಂಬುದನ್ನು ಗಮನಕ್ಕೆ ತಂದುಕೊಂಡರೆ ನಾಚಿಕೆಯಾಗುತ್ತದೆ. ಪರಮ ಪ್ರಸಾದ ಸ್ವೀಕರಿಸಿ ನಂತರ ಖುಷಿಯಿಂದ ಬಂದು ನಮ್ಮ ಆಸನದಲ್ಲಿ ಕುಳಿತು ಯಾರು ಯಾರು ಏನೇನು ಧರಿಸಿದ್ದಾರೆ, ಅಂತಹದೊಂದು ನನ್ನ ಬಳಿ ಇರಬೇಕಿತ್ತು, ಅವರು ಸುಂದರವಾಗಿದ್ದಾರೆ, ಇವರ ಉಡುಪು ಸರಿಯಿಲ್ಲ ಎಂದು ಏನೆಲ್ಲಾ ಯೋಚನೆಗಳಲ್ಲಿ ಮಗ್ನರಾಗಿರುತ್ತೇವೆ. ಇವೆಲ್ಲ ನಮ್ಮನ್ನು ನಾಚಿಕೆಗೀಡುಮಾಡುವ ಸಂಗತಿಗಳೇ ಅಲ್ಲವೇ? ದಯಾಮಯ ದೇವರು ಪ್ರಾಯಶ್ಚಿತ್ತ ಪಡುವ ಪ್ರತಿಯೊಬ್ಬ ಪಾಪಿಯನ್ನು ಖಂಡಿತವಾಗಿಯೂ ಕ್ಷಮಿಸುತ್ತಾರೆ. ಪರಮ ಪ್ರಸಾದ ಸ್ವೀಕಾರದ ನಂತರ ಮೌನವಾಗಿ ಧ್ಯಾನಿಸಿ ಪ್ರಾರ್ಥಿಸೋಣ. ಬಲಿಪೂಜೆಯ ಮುಖ್ಯ ಧ್ಯೇಯವನ್ನು ಅನುಸರಿಸಿ ಒಳ್ಳೆಯ ಕಥೋಲಿಕರಾಗಿ ಬಾಳೋಣ.
ನಾನಿಲ್ಲಿ ಪ್ರಮೂಖ ಮೂರು ತಪ್ಪುಗಳನ್ನು ಮಾತ್ರ ಬರೆದಿದ್ದೇನೆ. ಆದರೆ ನಾವು ಮಾಡುವ ತಪ್ಪುಗಳು ಇನ್ನೂ ಎಷ್ಟೋ ಇವೆ;

* ಗಾಯನ ವೃಂದದ ಅಭಾಸಗಳು ನಮ್ಮ ತಪ್ಪಲ್ಲದಿದ್ದರೂ ಅದರಿಂದ ನಮ್ಮ ಗಮನವನ್ನು ಬೇರೆಡೆಗೆ ಹರಿಸುತ್ತೇವೆ.

* ಬಲಿಪೂಜೆ ಆಚರಿಸುತ್ತಿರುವ ಗುರುಗಳನ್ನು ವಿಮರ್ಶಿಸುವುದು.

* ಬಲಿಪೂಜೆಯ ವೇಳೆ ಅಕ್ಕಪಕ್ಕದವರಿಂದಾಗುವ ಉದ್ವೇಗ.

* ಪ್ರಾರ್ಥನೆಗಳನ್ನು ನಯವಾಗಿ ಪ್ರಾರ್ಥಿಸದೆ ಯಾಂತ್ರಿಕವಾಗಿ ಕಾಟಾಚಾರಕ್ಕೆ ಉಚ್ಚರಿಸುವುದು.

* ಅಂತ್ಯ ಗೀತೆ ಮುಗಿಯುವ ಮುನ್ನವೇ ದೇವಾಲಯದಿಂದ ಹೊರಕ್ಕೆ ಓಡುವುದು.

* ಬಲಿಪೂಜೆಯ ವೇಳೆ ಮೊಬೈಲ್ ಫೋನುಗಳನ್ನು ಬಳಸುವುದು.

* ಶುಭಸಂದೇಶವನ್ನು ಪಠಿಸುವಾಗ ಎಲ್ಲರೂ ನಿಂತಿದ್ದರೂ ತಾವು ಮಾತ್ರ ಕುಳಿತಿರುವುದು.

* ಪ್ರತಿಷ್ಠಾಪನೆಯ ಸಂದರ್ಭದಲ್ಲಿ ಎಲ್ಲರೂ ಮೊಣಕಾಲೂರಿರುವಾಗ ನಡುವೆ ಕಂಬದಂತೆ ನಿಂತು ಹಿಂದಿನವರಿಗೆ ತೊಡಕಾಗುವುದು.

* ಎಲ್ಲರೂ ಸಾಮೂಹಿಕ ಪ್ರಾರ್ಥನೆ ಹೇಳುತ್ತಿರುವಾಗ ಜಪಸರ ಹಿಡಿದು ಮಣಮಣ ಎನ್ನುವುದು.

* ಪರಸ್ಪರ ಶಾಂತಿ ಕೋರೋಣ ಎಂದಾಗ ತಟಸ್ಥರಾಗಿ ನಿಲ್ಲುವುದು.

* ಎಲ್ಲರೂ ಹಾಡು ಹಾಡುವಾಗ ಪ್ರಾರ್ಥನೆ ಮಾಡುವಾಗ ತುಟಿ ಪಿಟಕ್ಕೆನ್ನದೇ ಇರುವುದು.

* ಪೀಠದ ಕಡೆ ಗಮನ ಕೇಂದ್ರೀಕರಿಸದೆ ದೇವಾಲಯದ ಗೋಡೆಗಳೆಡೆ ಜನಗಳೆಡೆ ಕಣ್ಣಾಯಿಸುವುದು.

* ಪೂಜೆಯ ಪವಿತ್ರ ವೇಳೆಯಲ್ಲಿ ಪಕ್ಕದವರೊಡನೆ ಗುಸುಗುಸು ಮಾತಾಡುವುದು.


* ಗಾನವೃಂದದವರು ದೇವಾಲಯ ಎಂಬುದನ್ನೂ ಮರೆತು ಕಣ್ಣು ಮಿಟುಕಿಸುವುದು, ಕಿಸಕ್ಕನೇ ನಗುವುದು.
ಇನ್ನೂ ಇಂತಹ ಎಷ್ಟೋ ತಪ್ಪುಗಳನ್ನು ನಾವು ಬಲಿಪೂಜೆಯ ಮಧ್ಯೆ ಮಾಡುತ್ತಿರುತ್ತೇವೆ. ನಾವು ಬಲಿಪೂಜೆಗೆ ಹಾಗೂ ಬಲಿಪೂಜೆಯ ಪರಮ ಪ್ರಸಾದದಲ್ಲಿರುವ ಯೇಸುವಿಗೆ ಸಲ್ಲತಕ್ಕ ಮರ್ಯಾದೆಯನ್ನು, ಗೌರವವನ್ನು ನೀಡದಿದ್ದಲ್ಲಿ ಸೈತಾನನೊಂದಿಗೆ ನಾವು ಭಾಗಿಯಾಗುತ್ತೇವೆ. 

ದೇವರು ನಮಗೆ ಎಷ್ಟೋ ಒಳ್ಳೆಯ ವಿಷಯಗಳಿಂದ ಆಶೀರ್ವದಿಸಿದ್ದಾರೆ. ಅವರಿಗಾಗಿ ನಮ್ಮ ಸಮಯವನ್ನು ಮೀಸಲಿಟ್ಟು ನಮ್ಮನ್ನೇ ಅವರಿಗೆ ಅರ್ಪಿಸಿ ಅವರ ಕೊಡುಗೆಗಳಿಗೆ ಕೃತಜ್ಞರಾಗೋಣ.

ದೀಪ್ತಿ ಪ್ರಾನ್ಸಿಸ್ಕಾ - 

No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...