ದಿದುಮನೆಂಬ
ತೋಮನು ಪ್ರಭು ಯೇಸುವಿನ ಹನ್ನೆರಡು ಪ್ರೇಷಿತರಲ್ಲಿ ಪ್ರಮುಖ ಸ್ಥಾನ ಹೊಂದಿದವನು. ಇವನು ಒಂದನೇ
ಶತಮಾನದಲ್ಲಿ ಇಸ್ರಾಯೇಲಿನ ಗಲೀಲಿಯದಲ್ಲಿ ಜನಿಸಿದವನು. ಪ್ರಭು ಯೇಸು ಪುನರುತ್ಥಾನರಾಗಿ
ಪ್ರೇಷಿತರಿಗೆ ಕಾಣಿಸಿಕೊಂಡಾಗ ಅವನು ಅಲ್ಲಿರಲಿಲ್ಲ. ಎಂಟು ದಿನಗಳ ತರುವಾಯ ಪ್ರಭು ಮತ್ತೆ ಕಾಣಿಸಿಕೊಂಡು
ತೋಮನಿಗೆ "ಇಗೋ ನೋಡು, ನನ್ನ ಕೈಗಳು; ನಿನ್ನ ಬೆರಳನ್ನು ತಂದು ಇಲ್ಲಿಡು.
ನಿನ್ನ ಕೈಯನ್ನು ಚಾಚಿ ನನ್ನ ಪಕ್ಕೆಯಲ್ಲಿಡು. ವಿಶ್ವಾಸ ರಹಿತನಾಗಿರಬೇಡ; ವಿಶ್ವಾಸಿಸು"
(ಯೊವಾನ್ನ ೨೦:೨೭) ಎಂದು ಹೇಳಿದಾಗ ತೋಮಸ್, "ನನ್ನ ಪ್ರಭು ನನ್ನ ದೇವ" ಎಂದು
ಉದ್ಗರಿಸಿದ. ಆ ಮೂಲಕ ತನ್ನ ಅಂತರಾಳದಲ್ಲಿ ಸದೃಢವಾಗಿ ಹುದುಗಿದ್ದ ವಿಶ್ವಾಸವನ್ನು ಬಹಿರಂಗಗೊಳಿಸಿ
ಸ್ಥಿರಪಡಿಸಿಕೊಂಡ ತೋಮ ತನ್ನ ಕೊನೆ ಉಸಿರಿರುವ ತನಕ ಕ್ರಿಸ್ತನಿಗಾಗಿಯೇ ತವಕಿಸುತ್ತಾನೆ. ತನ್ನ
ಸಂಸ್ಕೃತಿ, ತನ್ನ ಜನ, ತನ್ನ ಬಂಧು ಬಳಗ ಎಲ್ಲವನ್ನು ಬಿಟ್ಟು ಕ್ರಿಸ್ತನ
ಪುನರುತ್ಥಾನದ ಮಹಿಮೆಯನ್ನು, ಅವರ ಶುಭಸಂದೇಶವನ್ನು ಸರ್ವಜನರಿಗೂ ಸಾರಲು ತನ್ನನ್ನು
ಸಂಪೂರ್ಣವಾಗಿ ಸಮರ್ಪಿಸಿಕೊಳ್ಳುತ್ತಾನೆ.
ಅಂದಿನಿಂದ
ಅವನ ಬದುಕಿನ ಚಿತ್ರಣ ಹೊಸ ರೂಪವನ್ನು ಪಡೆದುಕೊಳ್ಳುತ್ತದೆ. ಆದರೆ ಅದು ದುಃಖ-ದುಮ್ಮಾನಗಳಿಂದಲೂ
ಏರಿಳಿತಗಳಿಂದಲೂ ಕೂಡಿತ್ತು. ಅರೆಊಟ, ಅರೆನಿದ್ದೆ, ಭಯದ ವಾತಾವರಣ ಹಾಗೂ ಯಾವುದೇ
ರಕ್ಷಣೆಗಳಿಲ್ಲದ ಜೀವನದ ಜಂಜಾಟಗಳಿದ್ದರೂ ಕ್ರಿಸ್ತನನ್ನು ತನ್ನ ಹೃದಯದ ಬಡಿತದಲ್ಲಿ ನಿತ್ಯವೂ
ಅನುಭವಿಸುತ್ತಾನೆ. ಆ ಅನಿಶ್ಚಿತತೆಯ ಜೀವನದ ಕ್ಷಣಕ್ಷಣವೂ ಅವನ ಪ್ರಾರ್ಥನೆ "ನನ್ನ ಪ್ರಭು
ನನ್ನ ದೇವ" ಎಂಬುದಾಗಿತ್ತು. ಪುನರುತ್ಥಾನಿ ಕ್ರಿಸ್ತ ಅವನ ಜೀವನದ ಅವಿಭಾಜ್ಯ ಅಂಗವಾಗಿ
ಬೆರೆತುಹೋಗಿದ್ದ.
ಪ್ರಭು
ಕ್ರಿಸ್ತ ಎಪ್ಪತ್ತೆರಡು ಮಂದಿಯನ್ನು ವಿಶೇಷವಾಗಿ ಶುಭಸಂದೇಶದ ಸೇವೆಗೆ ಆರಿಸಿಕೊಂಡರು. ಅದರಲ್ಲಿ
ಹನ್ನೆರಡು ಜನರನ್ನು ಪ್ರತ್ಯೇಕಿಸಿ ಅವರನ್ನು ಪ್ರೇಷಿತರೆಂದು ಕರೆದರು. "ಒಮ್ಮೆ
ಯೇಸುಸ್ವಾಮಿ ಪ್ರಾರ್ಥನೆ ಮಾಡಲು ಬೆಟ್ಟವನ್ನೇರಿದರು. ರಾತ್ರಿಯೆಲ್ಲಾ ದೇವರ ಪ್ರಾರ್ಥನೆಯಲ್ಲಿ
ಕಳೆದರು. ಬೆಳಗಾದಾಗ ತಮ್ಮ ಶಿಷ್ಯರನ್ನು ಕರೆದು, ಅವರಲ್ಲಿ ಹನ್ನೆರಡು ಮಂದಿಯನ್ನು ಆರಿಸಿಕೊಂಡು
ಅವರಿಗೆ 'ಪ್ರೇಷಿತರು' ಎಂದು ಹೆಸರಿಟ್ಟರು" (ಲೂಕ೬:೧೨-೧೩). ಹೀಗೆ ಆಯ್ಕೆಯಾದವರ
ಪಟ್ಟಿಯಲ್ಲಿ ತೋಮ ಎಂಟನೆಯ ಸ್ಥಾನವನ್ನು ಅಲಂಕರಿಸುತ್ತಾನೆ (ಲೂಕ ೬:೧೪).
ಪ್ರಾರಂಭದಿಂದಲೂ
ಕ್ರಿಸ್ತನನ್ನು ಬಹಳ ಹತ್ತಿರದಿಂದ ಅನುಸರಿಸಿದವನು ತೋಮ. ಆ ಕಾರಣದಿಂದಲೇ ಪ್ರಭು ಲಾಜರನ ಮರಣದ
ನಂತರ "ಬನ್ನಿ ಜುದೇಯಕ್ಕೆ ಮರಳಿ ಹೋಗೋಣ" ಎನ್ನಲು ಇತರ ಶಿಷ್ಯರು "ಗುರುದೇವಾ,
ಇತ್ತೀಚೆಗೆ ತಾನೆ ಯೆಹೂದ್ಯರು ನಿಮ್ಮನ್ನು ಹೊಡೆಯಬೇಕೆಂದಿದ್ದರು, ಪುನಃ ಅಲ್ಲಿಗೆ
ಹೋಗಬೇಕೆಂದಿರುವಿರಾ?" (ಯೊವಾನ್ನ ೧೧:೭) ಎಂದು ಆತಂಕ ವ್ಯಕ್ತಪಡಿಸುತ್ತಾರೆ. ಆದರೆ
ತೋಮನು ತನ್ನ ಜೊತೆ ಶಿಷ್ಯರಿಗೆ "ನಾವು ಕೂಡ ಪ್ರಭುವಿನೊಡನೆ ಹೋಗಿ ಸಾಯೋಣ" (ಯೊವಾನ್ನ
೧೧:೧೬) ಎನ್ನುತ್ತಾನೆ. ಇದರ ಮೂಲಕ ಅವನು ಪ್ರಭುವಿನ್ನಲ್ಲಿಟ್ಟಿರುವ ಬದ್ಧತೆಯನ್ನು
ವ್ಯಕ್ತಪಡಿಸುತ್ತಾನೆ. ಅವನು ಆಂತರ್ಯದಲ್ಲಿ ಕ್ರಿಸ್ತನ ಜೀವನ ಶೈಲಿಗೆ ಮಾರುಹೋಗಿ
ಕ್ರಿಸ್ತಮಯನಾಗಿದ್ದ. ಆ ಬದ್ದತೆಯ ಬೆಂಕಿ ಅವನಿಗೆ ಶುಭಸಂದೇಶದ ಸೇವೆಯ ಕಿಚ್ಚನ್ನು ಆಗಲೇ
ಹಚ್ಚಿತು.
ಪ್ರಭು
ಕ್ರಿಸ್ತ ತಾನು ಕಠಿಣವಾದ ಮರಣವನ್ನು ಅನುಭವಿಸುವುದರ ಬಗ್ಗೆ ಮುಂಚಿತವಾಗಿಯೇ ತಮ್ಮ ಶಿಷ್ಯರಿಗೆ
ಮೂರು ಬಾರಿ ತಿಳಿಸಿದ್ದರು. ಆದರೆ ಆ ಕಠಿಣವಾದ ಮರಣದ ಬಗ್ಗೆ ಯಾರೂ ಸಹ ಸರಿಯಾಗಿ
ಗ್ರಹಿಸಿಕೊಂಡಿರಲಿಲ್ಲ ಹಾಗೂ ಅದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಕೊನೆಯ ರಾತ್ರಿಯ ಬೋಜನದ
ನಂತರ ಶಿಷ್ಯರು ಬಹು ದುಃಖದಿಂದ ಕೂಡಿದ್ದರು. ಆಗ ಯೇಸು ಅವರಿಗೆ "ನೀವು ಹೃದಯದಲ್ಲಿ
ಕಳವಳಗೊಳ್ಳದಿರಿ; ದೇವರಲ್ಲಿ ವಿಶ್ವಾಸವಿಡಿ" ಎಂದು ಅವರ ಭಯದ ಆತಂಕವನ್ನು ದೂರ
ಸರಿಸುತ್ತಾ "ನಾನಿರುವೆಡೆಯಲ್ಲಿಯೇ ನೀವೂ ಇರಬೇಕು. ನಾನು ಹೋಗುವ ಎಡೆಗೆ ಮಾರ್ಗವು ನಿಮಗೆ
ತಿಳಿದೇ ಇದೆ" ಎಂದಾಗ ತೋಮನು "ಪ್ರಭುವೇ, ನೀವು ಎಲ್ಲಿಗೆ ಹೋಗುತ್ತೀರೆಂದು
ನಮಗೆ ತಿಳಿಯದು; ಅಂದ ಮೇಲೆ ಅಲ್ಲಿಗೆ ಹೋಗುವ ಮಾರ್ಗವು ಹೇಗೆ ತಿಳಿದೀತು?" ಎನ್ನಲು
ಪ್ರಭು ಯೇಸು "ಮಾರ್ಗವೂ ಸತ್ಯವೂ ಜೀವವೂ ನಾನೇ ನನ್ನ ಮುಖಾಂತರ ಬಾರದ ಹೊರತು ಯಾರೂ ಪಿತನ
ಬಳಿಗೆ ಬರಲಾರರು. ನೀವು ನನ್ನನ್ನು ಅರಿತವರಾಗಿದ್ದರೆ ನನ್ನ ಪಿತನನ್ನು ಕೂಡ ಅರಿತವರಾಗುತ್ತೀರಿ,
ಈಗಿನಿಂದ ಅವರನ್ನು ನೀವು ಅರಿತವರಾಗಿದ್ದೀರಿ ಹಾಗೂ ಕಂಡೂ ಇದ್ದೀರಿ" (ಯೊವಾನ್ನ ೧೪:೬-೮)
ಎಂದಾಗ ತೋಮ, ಆ ಸತ್ಯವನ್ನು ಅರಗಿಸಿಕೊಳ್ಳಲು ಪ್ರಯತ್ನಿಸುತ್ತಾನೆ ಹಾಗೂ ಆ ಸತ್ಯಕ್ಕೆ
ಸಾವಿಲ್ಲ ಎಂಬುದು ತೋಮನ ಮನದಾಳದಲ್ಲಿ ಆಳವಾಗಿ ಬೇರೂರುತ್ತದೆ. ಅದೇ ವಿಶ್ವಾಸದಲ್ಲಿ
ಸಬಲನಾಗುತ್ತಿದ್ದ ತೋಮನಿಗೆ ಕ್ರಿಸ್ತನ ಯಾತನೆ ಮತ್ತು ಮರಣವು ಅಗಾಧವಾದ ನೋವನ್ನು ಉಂಟು
ಮಾಡುತ್ತದೆ. ಆ ನೋವಿನ ಸುಳಿಯಲ್ಲಿ ಸಿಲುಕಿ ಶೂನ್ಯವನ್ನು ತಲುಪಿ ದಿಕ್ಕು ತೋಚದೆ
ಚಡಪಡಿಸುತ್ತಾನೆ.
ಇತ್ತ
ಇತರ ಶಿಷ್ಯರು ಯೆಹೂದ್ಯರಿಗೆ ಅಂಜಿ ಮನೆಯ ಬಾಗಿಲನ್ನು ಮುಚ್ಚಿಕೊಂಡು ಕುಳಿತಿದ್ದಾಗ ಯೇಸು ಬಂದು
ಅವರ ನಡುವೆ ನಿಂತು "ನಿಮಗೆ ಶಾಂತಿ" ಎಂದು ಹೇಳಿ ತಮ್ಮ ಕೈಗಳನ್ನು ಮತ್ತು
ಪಕ್ಕೆಗಳನ್ನು ತೋರಿಸಿದರು. ಪ್ರಭುವನ್ನು ಕಂಡು ಶಿಷ್ಯರಿಗೆ ಮಹದಾನಂದವಾಯಿತು (ಯೊವಾನ್ನ ೨೦:೨೦).
ಆದರೆ ತೋಮ ಆ ಕ್ಷಣದಲ್ಲಿ ಅಲ್ಲಿರಲಿಲ್ಲ. ಆತ ಹಿಂದಿರುಗಿದಾಗ ಉಳಿದ ಶಿಷ್ಯರು "ನಾವು
ಪ್ರಭುವನ್ನು ನೋಡಿದೆವು" ಎಂದು ಹೇಳಿದರು. ಕ್ರಿಸ್ತನ ಬೆಳಕಿಲ್ಲದೆ ಸೊರಗಿ ಕತ್ತಲೆಯಲ್ಲಿ
ತೊಳಲುತ್ತಿದ್ದ ತೋಮನ ಪ್ರತಿಕ್ರಿಯೆ ವಿಚಿತ್ರವಾಗಿತ್ತು "ಅವರ ಕೈಗಳಲ್ಲಿ ಮೊಳೆಗಳಿಂದಾದ
ಗಾಯದ ಕಲೆಯನ್ನು ನಾನು ನೋಡಬೇಕು, ಮೊಳೆಗಳು ಜಡಿದಿದ್ದ ಜಾಗದಲ್ಲಿ ನನ್ನ ಬೆರಳನ್ನಿಡಬೇಕು, ಅವರ
ಪಕ್ಕೆಯಲ್ಲಿ ನನ್ನ ಕೈಯನ್ನು ಇಟ್ಟು ನೋಡಬೇಕು, ಆ ಹೊರತು ನಾನು ನಂಬುವುದೇ ಇಲ್ಲ"
ಎಂದುಬಿಟ್ಟನು (ಯೊವಾನ್ನ ೨೦-೨೪-೨೫).
ಇದನ್ನು
ಓದುವ ನಮಗೂ ತೋಮ ಇಷ್ಟು ಅಪನಂಬಿಕೆ ಪಡಬಾರದಿತ್ತು ಎನಿಸವುದರಲ್ಲಿ ಸೋಜಿಗವೇನೂ ಇಲ್ಲ. ಆದರೆ
ಸತ್ಯವೇ ಬೇರೆ. ಅದೇನೆಂದರೆ ತೋಮ ಕ್ರಿಸ್ತನನ್ನು ಆಳವಾಗಿ ಅರಿತಿದ್ದ, ಅವರೊಡನೆ ಸಾಯಲೂ ಸಹ ಸಿದ್ದನಿದ್ದ
(ಯೊವಾನ್ನ ೧೧:೧೬). ತಾನು ಕಂಡುಕೊಂಡಿದ್ದ ಕ್ರಿಸ್ತ ಈಗ ಪುನರುತ್ಥಾನ ಹೊಂದಿರುವ ಕ್ರಿಸ್ತ ಒಂದೇ
ಆಗಿರುವರೇ ಅವರು ಹೇಗಿರಬಹುದು? ಅವರನ್ನು ಮುಟ್ಟಿ ನೋಡಲು ಸಾಧ್ಯವೇ? ಅವರನ್ನು ತಾನೂ
ಮುಖಾಮುಖಿಯಾಗಿ ನೋಡಲು ಸಾದ್ಯವೇ? ಇತರ ಶಿಷ್ಯರಿಗೆ ಲಭಿಸಿದ ಭಾಗ್ಯ ತನಗೂ ಲಭಿಸುವುದೇ?
ಎಂಬ ಸಂಶಯಗಳು ಅವನಲ್ಲಿತ್ತೇ ಹೊರತು ಪ್ರಭುವಿನ ಪುನರುತ್ಥಾನದಲ್ಲಿ ಅವನಿಗೆ ಅಪನಂಬಿಕೆ
ಇರಲಿಲ್ಲ ಎಂದರೆ ಅತಶಯೋಕ್ತಿಯೇನಲ್ಲ. ತೋಮನಲ್ಲಿ ಆ ಕ್ಷಣದಿಂದ ತಾನೂ ಪ್ರಭುವನ್ನು ಕಾಣಬೇಕೆಂಬ
ಉತ್ಕಟ ಆಸೆ ಹೆಮ್ಮರವಾಗಿ ಬೆಳೆಯುತ್ತಿತ್ತು. ಆ ಕಾರಣ ಆ ನಂತರದ ದಿನಗಳಲ್ಲಿ ಅವನು ಕ್ರಿಸ್ತನ
ಬರುವಿಕೆಗಾಗಿ ಚಡಪಡಿಸುತ್ತಾ, ಕಾಯುತ್ತಾನೆ, ಶಿಷ್ಯರ ಸಂಗಡವೇ ಇರುತ್ತಾನೆ.
ಎಂಟು
ದಿನಗಳ ತರುವಾಯ ಪುನರುತ್ಥಾನಿ ಪ್ರಭುಕ್ರಿಸ್ತ ಅವರ ನಡುವೆ ನಿಂತು "ನಿಮಗೆ ಶಾಂತಿ"
ಎಂದಾಗ ತೋಮ ಪುಳಕಗೊಳ್ಳುತ್ತಾನೆ. ಪ್ರಭು ಅವನ ಹೆಸರಿಡಿದು ಕರೆದು ತೋಮ "ಇಗೋ ನೋಡು, ನನ್ನ
ಕೈಗಳು; ನಿನ್ನ ಬೆರಳನ್ನು ತಂದು ಇಲ್ಲಿಡು. ನಿನ್ನ ಕೈಯನ್ನು ಚಾಚಿ ನನ್ನ
ಪಕ್ಕೆಯಲ್ಲಿಡು" ಎಂದಾಗ ತೋಮ ಕರಗಿಹೋಗುತ್ತಾನೆ. ಪ್ರಭುವಿನ ದಿವ್ಯಮಹಿಮೆಯನ್ನು ತನ್ನ
ಮನೋನೇತ್ರಗಳಲ್ಲಿ ತುಂಬಿಕೊಂಡು ಪಾವನನಾಗುತ್ತಾನೆ. ಅವನ ಅಂತರಂದಲ್ಲಿ ಪ್ರಭು ಮನೆಮಾಡುತ್ತಾರೆ.
ಆಗ ಅವನ ಅಂತರಾಳದಿಂದ "ನನ್ನ ಪ್ರಭು ನನ್ನ ದೇವ" ಎಂಬ ಸದೃಢ ವಿಶ್ವಾಸದ ಉದ್ಗಾರ ಹೊರ
ಹೊಮ್ಮುತ್ತದೆ. ಆ ಸದೃಢ ವಿಶ್ವಾಸ ಆ ಕ್ಷಣಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ಅದು ತೋಮನ ಜೀವನದುದ್ದಕ್ಕೂ
ಸ್ಥಿರವಾಗುತ್ತಲೇ ಸಾಗಿತು. ಮಾತ್ರವಲ್ಲದೆ ಆ ಸದೃಢ ವಿಶ್ವಾಸವೇ ಅವನು ಕ್ರಿಸ್ತನ ಸಂದೇಶವನ್ನು
ಹೊತ್ತು ಸಾಗಲು ಚಾಲನೆ ನೀಡಿತು ಹಾಗೂ ಆ ಕ್ಷಣದಿಂದ ಅವನ ಬದುಕು ಕ್ರಿಸ್ತಮಯವಾಯಿತು.
ತೋಮ
ಆ ವಿಶ್ವಾಸದ ಬೆಳಕನ್ನು ತಾನು ಹೋದೆಡೆಯಲ್ಲೆಲ್ಲ ಪ್ರಜ್ವಲಿಸುವಂತೆ ಮಾಡಲು ತನ್ನನ್ನೇ
ಸವೆಸಿಕೊಳ್ಳುತ್ತಾನೆ. ತಾನು ತನ್ನ ವಿಶ್ವಾಸವನ್ನು ಬಿಟ್ಟು ಕದಲುವುದಿಲ್ಲ, ಅದನ್ನು
ಕಾಪಾಡಿಕೊಳ್ಳಲು ತನ್ನ ಪ್ರಾಣವನ್ನೇ ಮುಡಿಪಾಗಿಡುತ್ತಾನೆ.
ತೋಮಸ್
ವಿರೋಧಿಗಳ ಕಂಗಣ್ಣಿಗೆ ಗುರಿಯಾಗಿ ತಮಿಳುನಾಡಿನ ಚೆನ್ನೈ (ಮದ್ರಾಸ್)ನ ರಾಮಾಪುರದಲ್ಲಿರುವ
ಚಿಕ್ಕಬೆಟ್ಟದಲ್ಲಿ ಡಿಸೆಂಬರ್ ೨೧, ೭೨ರಲ್ಲಿ ಕೊಲೆಗೀಡಾದರು. ಅವರ ವಿರೋಧಿಗಳು ಅವರನ್ನು
ಈಟಿಯಿಂದ ತಿವಿದು ಕೊಲ್ಲುತ್ತಾರೆ. ಆವರ ಶರೀರವನ್ನು (ಅವಶೇಷವನ್ನು) ಅಂದು ಮೈಲಾಪುರದಲ್ಲಿದ್ದ
ದೇವಾಲಯದಲ್ಲಿ ಭೂಸ್ಥಾಪನೆ ಮಾಡಲಾಯಿತು. ೧೬ನೇ ಶತಮಾನದಲ್ಲಿ ಪೋರ್ಚುಗೀಸರು ಅಲ್ಲಿ ಒಂದು
ಮಹಾದೇವಾಲಯವನ್ನು (ಬೆಸಿಲಿಕ) ಕಟ್ಟಿದರು. ೧೮೯೩ರಲ್ಲಿ ಬ್ರಿಟಿಷರು ಅದನ್ನು ಮರು ನಿರ್ಮಿಸಿದರು.
ಅವರ
ಹಬ್ಬವನ್ನು ಪ್ರೊಟೆಸ್ಟೆಂಟರು ಇಂದಿಗೂ ಡಿಸೆಂಬರ್ ೨೧ರಂದು ಆಚರಿಸುತ್ತಾರೆ. ೧೯೬೦ರಲ್ಲಿ ಕಥೋಲಿಕ
ಪಂಚಾಂಗವು ಕ್ರಿಸ್ಮಸ್ ಹಬ್ಬಕ್ಕೆ ಅಡ್ಡಿಯಾಗದಂತೆ ಡಿಸೆಂಬರ್ ೨೧ಕ್ಕೆ ಬದಲಾಗಿ ಜುಲೈ ೩ಕ್ಕೆ
ಹಬ್ಬವನ್ನು ಆಚರಣೆ ಮಾಡುತ್ತಿದೆ. ತೋಮ ಹಚ್ಚಿದ ವಿಶ್ವಾಸದ ಕಿಡಿ ಇಂದು ಭಾರತದ ಉದ್ದಗಲಕ್ಕೂ
ಹೊತ್ತಿ ಉರಿಯುತ್ತಿದೆ. ನಾನೇ ಮಾರ್ಗ, ನಾನೇ ಸತ್ಯ ಎಂದು ಹೇಳಿದ್ದ ಪ್ರಭುವನ್ನು ನೋಡಿ
ಪುಳಕಿತನಾದ ತೋಮನ ವಿಶ್ವಾಸದ ಉದ್ಗಾರ "ನನ್ನ ಪ್ರಭು ನನ್ನ ದೇವ" ನಮ್ಮ
ಅಂತರಂಗದಲ್ಲಿಯೂ ರಿಂಗಣವಾಗಲಿ.
ಫಾದರ್ ವಿಜಯ್ ಕುಮಾರ್, ಬಳ್ಳಾರಿ
No comments:
Post a Comment