Friday, 13 July 2018

ಬೈಬಲ್ ದನಿ


ವ್ಯಭಿಚಾರದಲ್ಲಿ ಸಿಕ್ಕಿಬಿದ್ದ ಸ್ತ್ರೀ
- ಡಾ. ಲೀಲಾವತಿ ದೇವದಾಸ್
            ಶಾಸ್ತ್ರಿಗಳೂ ಫರಿಸಾಯರೂ ಯೇಸುಕ್ರಿಸ್ತರನ್ನು ಹೇಗಾದರೂ ಮಾಡಿ, ತೊಡಕಿನಲ್ಲಿ ಸಿಕ್ಕಿಸಿ, ಅವರನ್ನು ಜನರ ಮುಂದೆ ಅಪಮಾನಗೊಳಿಸಿ, ವೃದ್ಧಿಸುತ್ತಿದ್ದ ಅವರ ವರ್ಚಸ್ಸನ್ನು ತಗ್ಗಿಸಬೇಕೆಂದು ಕಾಯುತ್ತಿದ್ದರು. ಕ್ರಿಸ್ತರು, ಎಂದಿನಂತೆ ತಮ್ಮ ಏಕಾಂತ ಪ್ರಾರ್ಥನೆಯನ್ನು ಮುಗಿಸಿ, ದೇವಾಲಯದಲ್ಲಿ ಉಪದೇಶ ಮಾಡುತ್ತಿರುವಾಗ, ಒಂದು ರೋಚಕ ಘಟನೆ ಜರುಗಿತು. ಈ ಘಟನೆ, ಯೋಹಾನರ ಸುವಾರ್ತೆಯಲ್ಲಿ ಮಾತ್ರ ದಾಖಲಾಗಿರುವುದೂ ಒಂದು ವಿಶೇಷವೇ.
          ಮುಂಜಾನೆಯ ತಂಪು ತಾಜಾತನ. ಪವಿತ್ರ ದೇವಾಲಯದ ಪಾವನ ಪರಿಸರ. ಯೇಸುಕ್ರಿಸ್ತರ ಬೋಧನೆಯನ್ನು ತಲ್ಲೀನರಾಗಿ ಆಲಿಸುತ್ತಿದ್ದ ವಿಶ್ವಾಸಿಗಳು. ದಿಢೀರೆಂದು ಒಳನುಗ್ಗಿದ ಆ ಕಟ್ಟಾ ಯೆಹೂದ್ಯರು, ತಮ್ಮ ಜೊತೆಗೆ, ವ್ಯಭಿಚಾರದಲ್ಲಿ ಸಿಕ್ಕಿಬಿದ್ದ ಒಬ್ಬ ಅನಾಮಿಕ ಹೆಣ್ಣನ್ನು ಸೆಳೆತಂದು, ಕ್ರಿಸ್ತರ ಮುಂದೆ ತಳ್ಳಿದರು. "ಈ ವ್ಯಭಿಚಾರಿ ಮಾಡಿದ್ದು ಸರಿಯೇ? ನಮ್ಮ ಪ್ರವಾದಿ ಮೋಶೆ ಹೇಳಿದ ಕಲ್ಲೆಸೆತದ ಶಿಕ್ಷೆಯನ್ನು ಇವಳಿಗೆ ವಿಧಿಸಬೇಡವೆ?" ಯೇಸುಕ್ರಿಸ್ತರನ್ನು ಆ ಕುಹಕಿಗಳು ಪ್ರಶ್ನಿಸುವಾಗ, ಅವರನ್ನು ಬಿಕ್ಕಟ್ಟಿಗೆ ಸಿಕ್ಕಿಸಿದ್ದೇವೆ, ಎನ್ನುವ ವಿಜಯೋಲ್ಲಾಸದ ಧೋರಣೆ ಅವರಲ್ಲಿ ಕಾಣುತ್ತಿತ್ತು!
          ಯಾಜಕ ೨೦:೧೦ ರಲ್ಲಿನ ನಿಯಮದಂತೆ ವ್ಯಭಿಚಾರದಲ್ಲಿ ಸಿಕ್ಕಿಬಿದ್ದ ಗಂಡು, ಹೆಣ್ಣು ಇಬ್ಬರಿಗೂ ಮರಣಶಿಕ್ಷೆಯಾಗಬೇಕೆಂದಿದೆ. ಆದರೆ, ಇಲ್ಲಿ, ಆ ಪುರುಷನು ಓಡಿಹೋಗಿದ್ದಾನೆ. ಯೇಸುಕ್ರಿಸ್ತರು, "ಇವಳನ್ನು ಕಲ್ಲೆಸೆದು ಕೊಲ್ಲಿರಿ" ಎಂದು ಹೇಳಿದ್ದರೆ, ಅದು ತಪ್ಪಾಗುತ್ತಿತ್ತಲ್ಲದೆ ಆತನ ಪಾಪಿಗಳ ಪರವಾದ ಹಾಗೂ ಸ್ತ್ರೀಪರವಾದ ಧೋರಣೆಗೆ ಧಕ್ಕೆಯಾಗುತ್ತಿತ್ತು. "ಇವಳನ್ನು ಬಿಟ್ಟುಬಿಡಿ" ಎಂದು ಹೇಳಿದ್ದರೆ, ಮಹಾ ಪ್ರವಾದಿ ಮೋಶೆಗೆ ವಿರುದ್ಧವಾಗಿ ಹೇಳಿದರೆಂಬ ಆರೋಪ ಏಳುತ್ತಿತ್ತು ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಯೇಸು ಏನು ತೀರ್ಪು ಕೊಡುತ್ತಾರೋ ಎಂದು ಎಲ್ಲರೂ ಕುತೂಹಲದಿಂದ ಕಾಯುತ್ತಿದ್ದರು.
          ಯೇಸುಕ್ರಿಸ್ತರು ಸಾಮಾನ್ಯರಲ್ಲವಲ್ಲಾ! ಅವರು ಯಾರ ಬಲೆಗೂ ಬೀಳುವವರಲ್ಲ! ಅವರು ಮೌನವಾಗಿದ್ದು ಮರಳಲ್ಲಿ ಬೆರಳಾಡಿಸುತ್ತಾ ಇದ್ದರೂ, ಶಾಸ್ತ್ರಿಗಳ ಹಾಗೂ ಫರಿಸಾಯರ ಮಾತುಗಳನ್ನು ಕೇಳಿಸಿಕೊಳ್ಳುವುದು ಮಾತ್ರವಲ್ಲ, ಅವರ ಹೃದಯದ ಆಲೋಚನೆಗಳನ್ನೂ ಬಲ್ಲವರಾಗಿದ್ದರು! ಅವರೆಲ್ಲರೂ ಪಾಪದ ಮೂಟೆಗಳಾಗಿದ್ದರೂ ಈ ಪ್ರಕರಣದಲ್ಲಿ ಆ ಹೆಂಗಸಿನ ಶಿಕ್ಷೆಗಾಗಿ ಇಷ್ಟು ಕಾತರರಾಗಿದ್ದಾರಲ್ಲಾ ಎಂದು ಯೇಸುವಿಗೆ ಅನ್ನಿಸಿತ್ತು.
          ಯೇಸುಕ್ರಿಸ್ತರು ತಲೆಯೆತ್ತಿದರು. ತಮ್ಮ ಮೌನವನ್ನು ಮುರಿದರೂ ಆ ಸ್ತ್ರೀಯ ಬಗ್ಗೆ ಏನೂ ಹೇಳಲಿಲ್ಲ. 'ಮೋಶೆಯ ಆಜ್ಞೆಯನ್ನು ಪಾಲಿಸುವುದೇ ಸರಿ', ಎಂದು ಒಪ್ಪಿ, "ನಿಮ್ಮಲ್ಲಿ ಪಾಪವಿಲ್ಲದವನು ಯಾರೋ, ಅವನೇ ಮೊದಲು ಇವಳ ಮೇಲೆ ಕಲ್ಲನ್ನು ಎಸೆಯಲಿ" ಎಂಬ ಅರ್ಥಪೂರಿತವಾದ ನಿರ್ಧಾರವನ್ನು ತಿಳಿಸಿ, ಮತ್ತೆ ಮೌನದಲ್ಲಿ ತಮ್ಮ ಮರಳ ಬರವಣಿಗೆಯನ್ನು ಮುಂದುವರಿಸಿದರು.
          ಈಗ, ಆರೋಪವನ್ನು ತಂದಿದ್ದವರ ಆತ್ಮಸಾಕ್ಷಿ ಮಾತಾಡತೊಡಗಿತು! `ದೇವಾಲಯಕ್ಕೆ ಮೋಸ ಮಾಡಿದ್ದೇನೆ', `ದಶಮಾಂಶದಲ್ಲಿ ವಂಚಿಸಿದ್ದೇನೆ', 'ನನ್ನ ತಂದೆತಾಯಿಗಳನ್ನು ನೋಡಿಕೊಳ್ಳಲಿಲ್ಲ, ಓಡಿಸಿಬಿಟ್ಟಿದ್ದೇನೆ', `ಕಪಟಿಯಾಗಿ, ಒಳಗೊಂದು ಹೊರಗೊಂದು ಇಟ್ಟುಕೊಂಡು. ಸುಣ್ಣ ಹಚ್ಚಿದ ಸಮಾಧಿಯಂತೆ ಜನರ ಕಣ್ಣಿಗೆ ಮಣ್ಣೆರಚಿದ್ದೇನೆ', 'ಪರರ ವಸ್ತುಗಳನ್ನು ಆಶಿಸಿದ್ದೇನೆ',
          `ಪರಸ್ತ್ರೀಯ ಮೇಲೆ ಕಣ್ಣಿಟ್ಟಿದ್ದೇನೆ'? ಹೀಗೆ ಅವರ ಪಾಪಗಳು ಒಂದರ ಮೇಲೊಂದರಂತೆ ಎದ್ದು, ಅವರನ್ನು ಹಂಗಿಸತೊಡಗಿದವು! ಯಾವ ಉತ್ತರವನ್ನೂ ಕೊಡಲಾಗದೆ, ಅಲ್ಲಿ ನಿಲ್ಲಲೂ ಆಗದೆ, ಒಬ್ಬೊಬ್ಬರಾಗಿ ಮೆಲ್ಲಗೆ ಜಾರಿಕೊಂಡರು!
          ಅಲ್ಲೇ, ಪಶ್ಚಾತ್ತಾಪದಿಂದ ದಗ್ಧಳಾಗಿ, ಕಣ್ಣೀರಿಡುತ್ತಾ, ತನ್ನ ಕೃತ್ಯಕ್ಕೆ ನಾಚಿ, ಭಯದಿಂದ ನಡುಗುತ್ತಾ, ಅಪಮಾನದಿಂದ ಕುಸಿದುಹೋಗಿದ್ದ ಆ ಸ್ತ್ರೀಯನ್ನು ಕ್ರಿಸ್ತರು ಕರುಣೆಯಿಂದ, "ಏನಮ್ಮಾ, ನಿನ್ನ ಮೇಲೆ ಆರೋಪ ಹೊರಿಸಿದವರೆಲ್ಲಾ ಎಲ್ಲಿ? ನಿನ್ನ ಮೇಲೆ ಒಂದು ಕಲ್ಲೂ ಬೀಳಲಿಲ್ಲವಲ್ಲಾ?" ಎಂದಾಗ ಅವಳು ದೈನ್ಯದಿಂದ "ಯಾರೂ ನನಗೆ ಶಿಕ್ಷೆ ವಿಧಿಸಲಿಲ್ಲ, ಸ್ವಾಮೀ" ಎಂದು ಕ್ಷೀಣಸ್ವರದಲ್ಲಿ ನುಡಿದಳು. ಯೇಸುವೂ ಅವಳಿಗೆ, "ನಾನೂ ನಿನಗೆ ಯಾವ ಶಿಕ್ಷೆಯನ್ನೂ ವಿಧಿಸುವುದಿಲ್ಲ, ಆದರೆ ಮತ್ತೆ ಪಾಪ ಮಾಡಬೇಡ" ಎಂದು ಅವಳನ್ನು ಕಳುಹಿಸಿಬಿಟ್ಟರು!
          ಪ್ರಿಯರೆ, ಸಮಾಜ, ಇಂದಿಗೂ ಬದಲಾಗಿಲ್ಲ! ನಮ್ಮೊಳಗೆ ಸಕಲ ಪಾಪಗಳನ್ನು ತುಂಬಿಸಿಕೊಂಡೂ, ಇನ್ನೊಬ್ಬರ ಮೇಲೆ ಆರೋಪ ತಂದು, ಅವರಿಗೆ ಶಿಕ್ಷೆ ವಿಧಿಸಬೇಕೆಂದು ಕೂಗಾಡುವವರು ನಾವು.
          "ಕುಂಬಳಕಾಯಿ, ಕತ್ತಿಯ ಮೇಲೆ ಬಿದ್ದರೂ ಒಂದೇ, ಕತ್ತಿ ಕುಂಬಳಕಾಯಿಯ ಮೇಲೆ ಬಿದ್ದರೂ ಒಂದೇ? ಹೋಳಾಗುವದು ಕುಂಬಳಕಾಯಿಯೇ" ಮತ್ತು, " ಬಟ್ಟೆ ಬೇಲಿ ಮೇಲೆ ಬಿದ್ದಾಗಲೂ ಬೇಲಿಗೆ ಏನೂ ಆಗುವುದಿಲ್ಲ, ಬದಲಾಗಿ, ಹರಿಯುವುದು ಬಟ್ಟೆಯೇ!" ಹೀಗೆಲ್ಲಾ ಹೇಳುತ್ತಾ ಸ್ತ್ರೀವಿರೋಧೀ ಧೋರಣೆಯನ್ನು ಘೋಷಿಸುತ್ತಿರುವ ನಾವು, ಇಂದಿಗೂ ಶಾಸ್ತ್ರಿ, ಫರಿಸಾಯರಿಗಿಂತ ಭಿನ್ನರಲ್ಲ!
          ಅದನ್ನು ನಮ್ಮ ಯೇಸುಕ್ರಿಸ್ತರು ಚೆನ್ನಾಗಿ ಬಲ್ಲರು. "ಮೊದಲು, ನಿನ್ನನ್ನು ನೀನು ಶುಚಿಮಾಡಿಕೊ. ನಂತರ, ಆರೋಪಿಗೆ ಶಿಕ್ಷೆ ವಿಧಿಸಲು ಬಾ" ಎನ್ನುವ ಸ್ವಾಮಿಯ ದಿವ್ಯವಾಕ್ಯಗಳನ್ನು ಮನನಮಾಡೋಣ, ಅನುಸರಿಸೋಣ. ಒಂದು ತೋರುಬೆರಳು ಇನ್ನೊಬ್ಬರನ್ನು ಆರೋಪಿಸಿದರೆ, ಅದರ ಮೂರರಷ್ಟು ಬೆರಳುಗಳು ನಮ್ಮನ್ನು ಆರೋಪಿಸುತ್ತವೆ, ನೆನಪಿರಲಿ!

No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...