ಕಳೆದ ಒಂದು ದಶಕ ನಿಜಕ್ಕೂ ಮಹತ್ತರವಾದ ದಶಕವೆಂದೇ ಹೇಳಬಹುದು. ವಿಕಾಸ ಹಾಗೂ ಒಂದು ರೀತಿಯ ವಿನಾಶವೂ ಜೊತೆ ಜೊತೆಯಾಗಿ ಹೆಜ್ಜೆ ಹಾಕಿದೆ. ಕಳೆದ ಈ ದಶಕವನ್ನು ಫೇಸ್ಬುಕ್, ವಾಟ್ಸಪ್ಪ್, ಟ್ವಿಟ್ಟರ್, ಐಫೋನ್ ಗಳದ್ದೇ ದಶಕವೆಂದರೆ ತಪ್ಪಾಗಲಾರದೇನೋ. ಈ ದಶಕದಲ್ಲಿ ಇವುಗಳು ಮಾಡಿರುವ ಕ್ರಾಂತಿ ಸಣ್ಣದೇನಲ್ಲ. ಇಡೀ ಜಗತ್ತು ಬೆರಳುಗಳಲ್ಲಿ ಕ್ರಿಯಾಶೀಲವಾಗಿದೆ.
ಇದರ ನಡುವೆ ಐತಿಹಾಸಿಕ ಮಹತ್ತರವಾದುದೆಲ್ಲಾ ತನ್ನ ಮಹತ್ವವನ್ನು ಕಳೆದುಕೊಳ್ಳುತ್ತಿದೆಯೇ ಅಥವಾ ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗುತ್ತಿದೆಯೇ ಎಂಬ ಭಯ ಆತಂಕ ಮೂಡುತ್ತಿರುವಂತೆಯೇ, 'ಇಲ್ಲ, ಫೇಸ್ಬುಕ್ ಇತ್ಯಾದಿಗಳು ಇತಿಹಾಸ, ಸಂಸ್ಕೃತಿಗೆ ಸಹಾಯಕವೂ ಆಗಬಲ್ಲದು ಎಂಬುದನ್ನು ಆಗಾಗ್ಗೆ ತೋರಿಸುತ್ತಲೇ ಬಂದಿದೆ. ಇತ್ತೀಚಿನ ಹತ್ತಿರದ ಉದಾಹರಣೆ ಎಂದರೆ 'ಮಲೆಗಳಲ್ಲಿ ಮಳೆ ಮಗಳು’ ಪ್ರದರ್ಶನಕ್ಕೆ ಕಿಕ್ಕಿರಿದ್ದು ಬರುತ್ತಿದ್ದ ಯುವ ಮನಸುಗಳು. ಬಹುತೇಕರು ಅದಕ್ಕೆ ಬುಕ್ ಮೈ ಷೋ ಸಹಾಯದಿ೦ದಲೇ ಟಿಕೆಟ್ ಕಾಯ್ದಿರಿಸಿದ್ದು.
ಇಷ್ಟೆಲ್ಲಾ ಯೋಚನೆ ಬಂದದ್ದು, ಜರ್ಮನಿಯ ಒಬೆರಾಮೋರ್ ಗಾವ್ ನಲ್ಲಿ ಪ್ರತಿ ಹತ್ತು ವರ್ಷಕೊಮ್ಮೆ ನಡೆಯುವ 'ಯೇಸು ಕ್ರಿಸ್ತನ ಪ್ಯಾಷನ್ ಪ್ಲೇ' ಬಗ್ಗೆ ಯೋಚಿಸುತ್ತಾ ಕುಳಿತಾಗ. ಸುಮಾರು 400ವರ್ಷ ಇತಿಹಾಸವಿರುವ ಈ ಪ್ರದರ್ಶನ ಇದೇ 2020ರಲ್ಲಿ ಮತ್ತೆ ಪ್ರದರ್ಶನಗೊಳ್ಳುತ್ತದೆ. 2010ರಲ್ಲಿ ನಡೆದ ಹಿಂದಿನ ಪ್ರದರ್ಶನ ಎಂದಿನಂತೆಯೇ ಯಶಸ್ವಿಯಾಯಿತು. ಮೊಬೈಲ್ ಕ್ರಾಂತಿ ತನ್ನ ಉತ್ತುಂಗದಲ್ಲಿರುವ ಈ ಸಮಯದಲ್ಲಿ ಈ ಪ್ರದರ್ಶನಕ್ಕೆ ಯಾವ ರೀತಿಯ ಪ್ರತಿಕ್ರಿಯೆ ದೊರಕಬಹುದು ಎನ್ನುವ ಕುತೂಹಲ ನನ್ನದು.
ಮೊದಲಿಗೆ 1633ರಲ್ಲಿ ಆರಂಭಗೊಂಡ ಒಬೆರಾಮೋರ್ ಗಾವ್ ನ ಒಂದಷ್ಟು ಇತಿಹಾಸ ಹಾಗೂ ಆಸಕ್ತಿಕರ ಮಾಹಿತಿಗಳು ಇಂತಿವೆ –
1618 ರಿಂದ 1648 - ಸ್ವೀಡ್ಸ್ ಯುದ್ಧವೆಂಬ ಮಹಾ ಪಿಡುಗಿಗೆ ಜರ್ಮನಿಯ ಒಬೆರಾಮೊರ್ಗಾವ್ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರು ತತ್ತರಿಸಿ ಹೋಗಿರುತ್ತಾರೆ.
1632- ಸ್ವಾಬಿಯಾ, ಬಾವಾರಿಯಾಗೆ ತಗಲಿಕೊಂಡ ಪ್ಲೇಗ್ ರೋಗ ಈ ಗ್ರಾಮಕ್ಕೂ ಒಬ್ಬ ವ್ಯಕ್ತಿಯ ಮೂಲಕ ಅಟ್ಟಹಾಸದೊಂದಿಗೆ ಪ್ರವೇಶಿಸುತ್ತದೆ.
1632 ಅಕ್ಟೊಬರ್ - ಸಾವಿರಕ್ಕೆ ಒಬ್ಬರಲ್ಲಿ ಕಾಣಿಸಿಕೊಂಡ ರೋಗ ಮುಂದಿನ ಮಾರ್ಚ್ ಹೊತ್ತಿಗೆ ಸಾವಿರದಲ್ಲಿ ೨೦ ಜನಕ್ಕೆ ಹರಡುತ್ತದೆ. ಇಡೀ ಗ್ರಾಮವೇ ರೋಗದ ಸಾವು ನೋವಿಗೆ ತತ್ತರಗೊಳ್ಳುತ್ತದೆ.
1633- ಒಟ್ಟಾಗಿ ಸೇರಿದ ಜನರು ಹಾಗೂ ನಾಯಕರು ಒಂದು ನಿರ್ಧಾರಕ್ಕೆ ಬರುತ್ತಾರೆ. ಅಲ್ಲಿಯವರೆಗೂ ಅಲ್ಲಿ ಇಲ್ಲಿ, ಆಗಾಗ ನಡೆಸಿಕೊಂಡು ಬರುತ್ತಿದ್ದ ಕ್ರಿಸ್ತನ ಜೀವನದ ನಾಟಕ ಪ್ರದರ್ಶನವನ್ನು, ಇನ್ನು ಮುಂದೆ ಪ್ರತಿ ಹತ್ತು ವರ್ಷಕೊಮ್ಮೆ ತಪ್ಪದೆ ನೆಡೆಸಿಕೊಂಡು ಹೋಗುವ ವ್ರತ ಮಾಡುತ್ತಾರೆ. ಅಚ್ಚರಿ ಎಂಬಂತೆ, ಅಂದಿನಿಂದ ರೋಗದಿಂದ ಸಾಯುವುದು ಕಡಿಮೆಯಾಗುತ್ತದೆ. ನಾಟಕದ ಇತಿಹಾಸದ ಮಾಹಿತಿ ಪ್ರಕಾರ ವ್ರತದ ನಂತರ ಒಬ್ಬರೂ ಸಾಯಲಿಲ್ಲ.
1634 - ಮೊದಲ ಪ್ರದರ್ಶನ ನಡೆಯುತ್ತದೆ. ಪ್ಲೇಗ್ ರೋಗದಿಂದ ಸತ್ತ ಜನರ ಸಮಾಧಿಯ ಆವರಣವೇ ಪ್ರದರ್ಶನದ ಸ್ಥಳವಾಗುತ್ತದೆ.
1664 - ನಾಲ್ಕನೆಯ ಪ್ರದರ್ಶನದ ವೇಳೆ ಸಿದ್ಧಗೊಂಡ ನಾಟಕದ ಸ್ಕ್ರಿಪ್ಟ್, ಈ ನಾಟಕದ ಅತ್ಯಂತ ಹಳೆಯ ಲಭ್ಯವಿರುವ ದಾಖಲೆಯಾಗಿದೆ. ಊರಿನ ಶಿಕ್ಷಕರಾಗಿದ್ದ ಜಾರ್ಜ್ ಕೈಸರ್ ಇದರ ಲೇಖಕ.
1680 - ಈ ಪ್ರದರ್ಶನವನ್ನು 'ಸೊನ್ನೆ' ಯಿಂದ ಕೊನೆಗೊಳ್ಳುವ ವರ್ಷಗಳಲ್ಲಿ ನಡೆಸುವ ಪ್ರತೀತಿ ಪ್ರಾರಂಭವಾಯಿತು. ಅಂದಿನಿಂದ ಇದು ನಡೆದುಕೊಂಡು ಬಂದಿದೆ.
1801 - ಗ್ರಾಮದ ಆರ್ಥಿಕ ಪರಿಸ್ಥಿತಿ ಸುಧಾರಿಸಲು 1800ರ ಮುಂದುವರಿದ ಭಾಗವಾಗಿ ಪ್ರದರ್ಶನಗಳು ನಡೆಯುತ್ತದೆ.
1920 - ಮೊದಲ ಮಹಾಯುದ್ಧದಲ್ಲಿ ಇದರ ಅನೇಕ ನಟರು ಸಂಗೀತಗಾರರು ಪಾಲ್ಗೊಂಡಿದ್ದರಿಂದ 1920ರಲ್ಲಿ ಪ್ರದರ್ಶನ ನಡೆಯದೆ 1922 ರಲ್ಲಿ ನಡೆಯುತ್ತದೆ.
1934 - 300ನೇ ವರ್ಷದ ನೆನಪಿಗಾಗಿ ವಿಶೇಷ ಪ್ರದರ್ಶನ. ವಿಶೇಷ ಪ್ರದರ್ಶನಕ್ಕೆ ಹಿಟ್ಲರ್ ತನ್ನ ನಾಜಿ ಹಿಂಡಿನ ಜೊತೆ ಬಂದು ವೀಕ್ಷಿಸಿತ್ತಾನೆ. ಜರ್ಮನಿಯ ಮಣ್ಣಿನ ಸೊಗಡಿನ ಪ್ರತೀಕವೆಂದು ಇದನ್ನು ಬಣ್ಣಿಸುತ್ತಾನೆ.
1940 - ಎರಡನೆಯ ಮಹಾ ಯುದ್ಧದಿಂದಾಗಿ ಪ್ರದರ್ಶನ ನಡೆಯುವುದಿಲ್ಲ.
1984 – 350 ವರ್ಷಗಳ ನೆನಪಿಗಾಗಿ ವಿಶೇಷ ಪ್ರದರ್ಶನ ನಡೆಯುತ್ತದೆ. ಆಡಳಿತ ಮಂಡಳಿಯಲ್ಲಿ ಭಾರಿ ಬದಲಾವಣೆ. ಕೇವಲ 24 ವರ್ಷದ ಕ್ರಸ್ಟ್ರಿಯನ್ ಸ್ಟಾಕ್ಲ್ ನನ್ನು ನಿರ್ದೇಶಕನಾಗಿ ಆಯ್ಕೆ ಮಾಡುವ ಕ್ರಾಂತಿಕಾರಕ ನಿರ್ಧಾರ. ಹೊಸ ಪ್ರಯೋಗ ಹಾಗೂ ಆಧುನಿಕತೆಗೆ ತೆರೆದುಕೊಳ್ಳುವ ನಿರ್ಧಾರ.
2010ರಂದು 42ನೇ ಪ್ರದರ್ಶನ. 2020ರಲ್ಲಿ ಮುಂದಿನ ಪ್ರದರ್ಶನ.
(ಮುಂದುವರಿಯುವುದು)
¨ ಪ್ರಶಾಂತ್ ಇಗ್ನೇಷಿಯಸ್
No comments:
Post a Comment