Tuesday, 12 June 2018

ದಲಿತ ಸಾಹಿತ್ಯ ಚಳವಳಿ - ಅಂದು ಇಂದು !


“ ನಾಡಿನ ಮಕ್ಕಳಲ್ಲಿ ಪ್ರಜ್ಞಾವಂತ ಸಮಾಜದ ಸಸಿಗಳನ್ನು ನೆಟ್ಟು, ಅರಿವು ಮೂಡಿಸಿದಾಗ ಮಾತ್ರ ಮುಂದಿನ ಪೀಳಿಗೆಗಳು ಆ ಮರದ ಸಮಾನತೆಯ ಫಲಗಳನ್ನು ಸವಿಯಲು ಸಾಧ್ಯವಾಗುತ್ತದೆ.”
-------------------------------------------------------------------
     ಪ್ರಸ್ತುತ ದಿನಗಳಲ್ಲಿ ‘ದಲಿತ’ ಎಂಬ ಪದ ಸಾಕಷ್ಟು ಚರ್ಚೆಗೊಳಗಾಗುತ್ತಿದೆ. ಅದರಲ್ಲೂ ಚುನಾವಣೆಯ ನಂತರ ಈ ಚರ್ಚೆ ಸಾಕಷ್ಟು ಬಿರುಸು ಪಡೆದುಕೊಂಡಿದೆ. ರಾಜ್ಯದ ಚುಕ್ಕಾಣಿ ಹಿಡಿದವರ ಪೈಕಿ ದಲಿತರೊಬ್ಬರು ಉಪಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ನಾವು ಕೇಳಿಕೊಳ್ಳಬೇಕಾದ ಪ್ರಶ್ನೆ ಒಬ್ಬ ದಲಿತನನ್ನು ಮುಖ್ಯಮಂತ್ರಿ ಅಥವ ಉಪಮುಖ್ಯಮಂತ್ರಿ ಮಾಡುವುದರಿಂದ ದಲಿತರ ಅಷ್ಟೂ ಸಮಸ್ಯೆಗಳು ಬಗೆ ಹರಿಯುತ್ತವೆಯೇ?
ಭಾರತವು ಎಂಥ ಘನತೆವೆತ್ತ ರಾಷ್ಟ್ರವೆಂದರೆ ಈ ದೇಶದಲ್ಲಿ ಮಲ ಹೊರುವುದಕ್ಕೆ, ಮಲ ಶುಚಿ ಮಾಡುವುದಕ್ಕೇ ಒಂದು ಪ್ರತ್ಯೇಕ ಸಮುದಾಯವನ್ನೇ ಮೀಸಲಿಟ್ಟಿದ್ದಾರೆ. ಶತಶತಮಾನಗಳಿಂದ ಇಲ್ಲಿಯವರೆಗೂ ಅದೆಷ್ಟೋ ಜನ ದಲಿತರು ಜಾಡಮಾಲಿಗಳಾಗಿಯೇ ಉಳಿದುಕೊಂಡಿದ್ದಾರೆ. ಈಗಲೂ ಸಹ ಮ್ಯಾನ್ಹೋಲ್ ಗಳಲ್ಲಿ ಇಳಿದು ಸಾಯುವವರನ್ನು ನಾವು ನೋಡಬಹುದಾಗಿದೆ. ನಮ್ಮ ದೇಶ ತಂತ್ರಜ್ಞಾನದಲ್ಲಿ ಎಷ್ಟೇ ಮುಂದುವರಿದರೂ ಅದು ತನ್ನೊಡಲಲ್ಲಿರುವ ಜಾತಿ, ವರ್ಣಭೇದ ವ್ಯವಸ್ಥೆಗಳಿಂದ ಹೊರ ಬರದಿದ್ದರೆ ಈ ದೇಶದ ಉನ್ನತಿಗೆ ಹಾಗೂ ದೇಶದ ಸುಶಿಕ್ಷಿತ ವರ್ಗಕ್ಕೆ, ಅವರ ಶಿಕ್ಷಣಕ್ಕೆ ಅರ್ಥವಿರುವುದಿಲ್ಲ.
ವರ್ಷದ ಹಿಂದೆ ಸಮಾಜ ಕಲ್ಯಾಣ ಇಲಾಖೆ ಅಂತರಾಷ್ಟ್ರೀಯ ಮಟ್ಟದ ಅಂಬೇಡ್ಕರ್ ವಿಚಾರ ಸಂಕಿರಣವನ್ನು ಬೆಂಗಳೂರಿನಲ್ಲಿ ಏರ್ಪಡಿಸಿತ್ತು. ಈವಿಚಾರ ಸಂಕಿರಣಕ್ಕೆ ಅಂತರಾಷ್ಟ್ರೀಯ ಮಟ್ಟದ ಲೇಖಕರು, ಕವಿಗಳು, ವಿಚಾರವಾದಿಗಳು, ಚಿಂತಕರು ಹಾಗೂ ಇನ್ನಿತರ ಬುದ್ಧಿಜೀವಿಗಳು ಆಗಮಿಸಿದ್ದರು. ಆಕಾರ್ಯಕ್ರಮದಲ್ಲಿ ಅಂಬೇಡ್ಕರರ ತತ್ವ, ಕನಸು, ಆಶಯಗಳ ಬಗ್ಗೆ ಮಾತನಾಡಲಾಯಿತು. ಹಿಂದುಳಿದ ವರ್ಗಗಳ ಅಭ್ಯುದಯದ ಕುರಿತು ಗಂಟೆಗಟ್ಟಲೇ ಮಾತಾಡಿದ್ದಾಯಿತು. ಆದರೆ ಅದರಿಂದ ದಲಿತರಿಗೆ, ಹಿಂದುಳಿದವರಿಗೆ ಆದ ಪ್ರಯೋಜನವಾದರೂ ಏನು ಎಂಬುದೀಗ ಪ್ರಶ್ನೆಯಾಗಿದೆ! ನಾವು ಒಂದಂತೂ ಅರ್ಥಮಾಡಿಕೊಳ್ಳ ಬೇಕಾಗಿದೆ. ಕೇವಲ ಭಾಷಣ ಸಂವಾದಗಳಿಂದ ದಲಿತರ ಹೊಟ್ಟೆ ತುಂಬುವುದಿಲ್ಲ. ಕೇವಲ ಆಶಯ, ವಿಚಾರ ಸಂಕಿರಣಗಳಿಂದ ದಲಿತರ ಸಮಾಜೋ-ಸಾಂಸ್ಕೃತಿಕ ಪರಿಸ್ಥಿತಿಯ ಮಟ್ಟ ಸುಧಾರಿಸುವುದಿಲ್ಲ. ಕೇವಲ ಉಪನ್ಯಾಸಗಳಿಂದ ದಲಿತರ ಅಭ್ಯುದಯ ಕಷ್ಟಸಾಧ್ಯವಾಗುತ್ತದೆ. ಆ ಕಾರ್ಯಕ್ರಮಕ್ಕೆ ವ್ಯಯಿಸಿದ ಕೋಟಿಗಟ್ಟಲೆ ಹಣವನ್ನು ದಲಿತರ ಜ್ವಲಂತ ಸಮಸ್ಯೆಗಳಿಗೆ ವಿನಿಯೋಗಿಸಿದ್ದರೆ ಕಿಂಚಿತ್ತಾದರೂ ಅವರ ಜೈವಿಕ ಗುಣಮಟ್ಟವನ್ನುಸುಧಾರಿಸ ಬಹುದಿತ್ತು.
ಕೆಲವರ ಗೊಡ್ಡು ವಾದವೆಂದರೆ ದಲಿತರಿಗೆ ರಾಜ್ಯದಲ್ಲಿ ಉನ್ನತ ಹುದ್ದೆ, ಪದವಿಗಳು ದೊರೆತಾಗ ಮಾತ್ರ ದಲಿತರ ಅಭ್ಯುದಯ ಸಾಧ್ಯವೆಂಬುದು.ಅವರ ವಾದದ ಪ್ರಕಾರ ನೋಡುವುದಾದರೆ ಈ ದೇಶದ ರಾಷ್ಟ್ರಪತಿಗಳೂ ಸಹ ದಲಿತರೇ. ಇದರಿಂದ ಭಾರತಲ್ಲಿನ ದಲಿತರ ಸ್ಥಿತಿಗತಿಗಳು ಎಷ್ಟರ ಮಟ್ಟಿಗೆಸುಧಾರಿಸಿವೆ? ನಮ್ಮ ದೇಶ ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಪೈಕಿ ಮುಂಚೂಣಿಯಲ್ಲಿದೆ ಎಂದು ಬಡಬಡಿಸುವ ಈ ವ್ಯಕ್ತಿಗಳಿಗೆ ಭಾರತದಲ್ಲಿ ಇಂದಿಗೂಒಂದು ನಿರ್ದಿಷ್ಟ ಸಮುದಾಯವನ್ನು ಮಲ ಹೊರುವುದಕ್ಕಾಗಿಯೇ ಬಳಸಿಕೊಳ್ಳುತ್ತಿರುವ ಒಂದು ಕ್ರೂರ ಪದ್ಧತಿ ಜಾರಿಯಲ್ಲಿದೆ ಎಂಬುದೇಕೆ ಮನದಟ್ಟಾಗುತ್ತಿಲ್ಲ? ಒಂದು ವೇಳೆ ಈ ಅಮಾನವೀಯ ಪದ್ಧತಿಯ ಬಗ್ಗೆ ಅವರಿಗೆ ಮನದಟ್ಟಾದರೂ ಅವರು ಮಾತ್ರ ಜಾಣ ಕುರುಡರಾಗುತ್ತರೆ, ದಿವ್ಯಮೌನ ವಹಿಸುತ್ತಾರೆ. ಎಲ್ಲಿಯವರೆಗೂ ಭಾರತಲ್ಲಿ ಈ ಜಾತಿ ಜಾಡ್ಯದ ಬೇರುಗಳು ನಾಶವಾಗುವುದಿಲ್ಲವೋ ಅಲ್ಲಿಯವರೆಗೂ ನಮ್ಮ ದೇಶದಲ್ಲಿ ದಲಿತರ ಉದ್ಧಾರ ಸಾಧ್ಯವಿಲ್ಲದ ಮಾತು. ಜಾತಿ ವಿನಾಶದ ಬಗ್ಗೆ ನೂರಾರು ಉಪನ್ಯಾಸಗಳನ್ನು ಕೇಳಿದರೂ, ಸಾವಿರಾರು ಪುಸ್ತಕಗಳನ್ನು ಓದಿದರೂ ಅದನ್ನು ತೊಡೆದು ಹಾಕಲಾಗುವುದಿಲ್ಲ. ಮೊದಲು ನಮ್ಮ ಮನಸ್ಸುಗಳಲ್ಲಿರುವ ಜಾತಿ ಬೀಜವನ್ನು ಕಿತ್ತೆಸೆದಾಗ, ನಮ್ಮ ಮನಗಳಲ್ಲಿನ ಭೇಧವನ್ನು ನಿರ್ಮೂಲನೆಗೊಳಿಸಿದಾಗ ಮಾತ್ರ ಭಾರತೀಯ ಸಮಾಜ ಅಭಿವೃದ್ಧಿಯ ನೈಜ ಪಥದಲ್ಲಿ ಸಾಗಲು ಸಾಧ್ಯ. ಇವೆಲ್ಲವನ್ನೂ ಸಾಕಾರಗೊಳಿಸಲು ಭಾರತೀಯ ಶಿಕ್ಷಣ ಪದ್ಧತಿಯಲ್ಲಿ ಹಿಂದೆಂದೂ ಆಗದಂತಹ ಕ್ರಾಂತಿಯಾಗಬೇಕಿದೆ. ನಮ್ಮ ಇಡೀ ಶಿಕ್ಷಣ ಪದ್ಧತಿಯನ್ನು ಬದಲಿಸಬೇಕಿದೆ. ನಾಡಿನ ಮಕ್ಕಳಲ್ಲಿ ಪ್ರಜ್ಞಾವಂತ ಸಮಾಜದ ಸಸಿಗಳನ್ನು ನೆಟ್ಟು, ಅರಿವು ಮೂಡಿಸಿದಾಗ ಮಾತ್ರ ಮುಂದಿನ ಪೀಳಿಗೆಗಳು ಆ ಮರದ ಸಮಾನತೆಯ ಫಲಗಳನ್ನು ಸವಿಯಲು ಸಾಧ್ಯವಾಗುತ್ತದೆ.
¨ ಅಜಯ್ ರಾಜ್



No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...