Tuesday, 12 June 2018

ಭಾರತವೆನ್ನುವುದು ಬಹು/ತತ್ವ/ಬಹುತ್ವ…


 ದೌರ್ಜನ್ಯ, ದಬ್ಬಾಳಿಕೆ, ಅನ್ಯಾಯಗಳು ಇದ್ದ ಕಡೆ, ಹೋರಾಟ, ಪ್ರತಿಭಟನೆಗಳು, ಪ್ರತಿರೋಧಗಳು ಇರಲೇಬೇಕು. ಅದು ಮನುಷ್ಯನ ಹುಟ್ಟುಗುಣ, ಮಣ್ಣಿನ ಮೂಲಗುಣವೂ ಹೌದು. ಈ ಹೋರಾಟ, ಪ್ರತಿಭಟನೆಗಳು, ಪ್ರತಿರೋಧಗಳು, ಚಳವಳಿಗಳು ರೂಪುಗೊಳ್ಳುವ ರೀತಿಯಲ್ಲಿ ವ್ಯತ್ಯಾಸವಿರಬಹುದು, ಅವುಗಳ ರೀತಿ ನಡೆಗಳಲ್ಲಿ ತೋರಿಕೆಗಳಲ್ಲಿ, ಸಂಘಟಿಸುವ ಮಾದರಿಗಳಲ್ಲಿ ಭಿನ್ನವಿರಬಹುದು, ಆದರೆ ಶೋಷಣೆ ಇರುವ ತನಕ ಹೋರಾಟ, ಚಳವಳಿಗಳ ಅಸ್ತಿತ್ವದ ಬಗ್ಗೆ ಯಾರೂ ಚಕಾರವೆತ್ತಲು ಸಾಧ್ಯವೇ ಇಲ್ಲ. ಏಕೆಂದರೆ ಬೆಂಕಿ ಇದ್ದ ಕಡೆ ಹೊಗೆ ಇರಲೇ ಬೇಕಲ್ಲವೇ! ಒಬ್ಬ ಮನುಷ್ಯ ಎಷ್ಟೇ ಸಾಧು ಸಂತನಾಗಿರಬಹುದು, ಅವನ ಮೇಲೆ ನಿರಂತರ ದೌರ್ಜನ್ಯವೆಸಗಿದರೆ ಅವನು ಸುಮ್ಮನೆ ಕೈಕಟ್ಟಿಕೊಂಡು ಕೂರಲಾರ. ಅವನಿಂದ ಪ್ರತಿರೋಧ ಬಂದೇ ಬರುತ್ತದೆ. ಹೌದು, ಕೆಲವೊಂದು ಹೋರಾಟಗಳು, ಚಳವಳಿಗಳು ತಮ್ಮ ಮೂಲ ಉದ್ದೇಶಗಳ ದಾರಿಗಳನ್ನು ಬಿಟ್ಟು, ಅಡ್ಡ ದಾರಿಗಳನ್ನು ಹಿಡಿಯಬಹುದು. ಸಾರ್ವಜನಿಕ ಬೆಂಬಲ, ವಿಶ್ವಾಸ ಗಳಿಸದೆ ಸೋಲಬಹುದು. ಕೆಲ ಹೋರಾಟಗಳು ಅಧಿಕಾರದ ಹಣಕ್ಕೆ ತಮ್ಮನ್ನೇ ಮಾರಿಕೊಳ್ಳಬಹುದು. ಆದರೆ, ಮೂಲತಃ ದೌರ್ಜನ್ಯ, ದಬ್ಬಾಳಿಕೆ, ಅನ್ಯಾಯಗಳ ಬುಡಕ್ಕೆ ಕೊಡಲಿ ಹಾಕುವುದೇ ಈ ಹೋರಾಟ, ಚಳವಳಿಗಳ ಮೂಲಧ್ಯೇಯ. ಇಲ್ಲವಾದಲ್ಲಿ, ಅವುಗಳನ್ನು ಹೋರಾಟ, ಚಳವಳಿ ಎಂದು ಹೇಳಲಾಗುವುದಿಲ್ಲ. ಪ್ರಸ್ತತ ನಮ್ಮ ದೇಶದ ವಿದ್ಯಮಾನಗಳನ್ನು ಗಮನಿಸಿದಾಗ, ನಮ್ಮಲ್ಲಿ ಆಶಾಭಾವ ಮೂಡುವುದಕ್ಕಿಂತ, ಹತಾಶಭಾವದ ಬೋಗುಣಿಯೇ ತುಂಬಿ ತುಳುಕಬಹುದು. ದೇಶದಲ್ಲಿ ದೌರ್ಜನ್ಯಗಳು, ದಬ್ಬಾಳಿಕೆಗಳ, ಅನ್ಯಾಯಗಳ ಹಾವಳಿ ಹೆಚ್ಚಾಗಿಬಿಟ್ಟಿದೆ. ಅವುಗಳನ್ನು ತಡೆಗಟ್ಟಬೇಕಾದ ಯಂತ್ರಗಳು ವಿಫಲವಾಗುತ್ತಿವೆ. ಮೀಸೆ ಬಿಟ್ಟ ಒಂದೇ ಕಾರಣಕ್ಕೆ ದಲಿತನನ್ನು ಕೊಲೆ ಮಾಡಲಾಗಿದೆ. ಸಂವಿಧಾನದ ಉಳಿವಿಗಾಗಿ ಪ್ರಾರ್ಥನೆ ಮಾಡಿ ಎಂಬ ಬಿಷಪ್ಪರ ಕರೆ ದೇಶವಿರೋಧಿ ಕೆಲಸದಂತೆ ತೋರುತ್ತದೆ. ಮಗಳ ಅತ್ಯಾಚಾರವನ್ನು ಪ್ರತಿಭಟಿಸಿದ ತಂದೆಯು ನಿಗೂಢ ರೀತಿಯಲ್ಲಿ ಸಾವಿಗೀಡಾಗಿದ್ದಾನೆ. ಗೋಮಾತೆಗಳ ರಕ್ಷಣೆಯ ಹೆಸರಲ್ಲಿ ಅನೇಕ ಮುಗ್ಧರ ಮೇಲೆ ಹಲ್ಲೆಗಳಾಗುತ್ತಿವೆ. ತಿನ್ನುವ ಆಹಾರ ಪದ್ಧತಿಯ ಮೇಲೂ ಸಹ ನಿರ್ಬಂಧಗಳನ್ನು ಹೇರಲಾಗುತ್ತಿದೆ. ಇವುಗಳಲ್ಲಿ ಹೆಚ್ಚಿನವು ಸರ್ಕಾರಗಳ ಕೃಪಾಶಿರ್ವಾದಗಳೊಂದಿಗೆ ನಡೆಯುತ್ತಿರುವುದು ಅತ್ಯಂತ ಅಪಾಯಕಾರಿ ಸಂಗತಿಯಾಗಿದೆ. ಜತೆಗೆ ಮಾಧ್ಯಮದವರು ಸರ್ಕಾರಗಳ ಜತೆ ಶಾಮಿಲಾಗಿರುವುದು ಕೂಡ ಭಯಹುಟ್ಟಿಸುವಂತದ್ದು. ಇಂತಹ ಅಮಾನವೀಯ ವಿಕೃತಿಗಳು ದಿನದಿನಕ್ಕೆ ಹೆಚ್ಚಾಗುತ್ತಿರುವುದಲ್ಲದೆ, ಅವುಗಳನ್ನು ಸಮರ್ಥಿಸಿಕೊಳ್ಳುತ್ತಿರುವ ಸರ್ಕಾರ, ಮಾಧ್ಯಮ ಮತ್ತು ಭಕ್ತರನ್ನು ನೋಡಿದರೆ, ಏಕೋ ಎನೋ ನಾವೆಲ್ಲಾ ವಿಪತ್ತಿನ ಕಾಲವನ್ನು ತಂದುಕೊಳ್ಳುತ್ತಿದ್ದೇವೆ ಎನಿಸದಿರದು.
ಇಂತಹ ವಿಷಮ ಘಟ್ಟದಲ್ಲಿ ನನ್ನ ಆತ್ಮೀಯರಾದ ಕವಿ ಬಸೂ ಅವರು ತಮ್ಮ ಇತರ ಸಂಗಾತಿಗಳ ಜತೆಗೂಡಿ ಆಯೋಜಿಸಿದ ಮೇ ಸಾಹಿತ್ಯ ಮೇಳ ನಿಜವಾಗಿಯೂ ಮೆಚ್ಚತಕ್ಕದ್ದು ಮಾತ್ರವಲ್ಲ ಅನುಕರಿಸುವಂತಹ ಉತ್ತಮ ಕಾರ್ಯ. ಬಹುತ್ವ ಭಾರತ ಇಂದು ಮತ್ತು ನಾಳೆ ಎಂಬ ಪ್ರಸ್ತುತ ವಿಷಯದ ಮೇಲೆ ಆಯೋಜಿತವಾಗಿದ್ದ ಈ ಸಮ್ಮೇಳನವು ನನಗೆ ಒಂದು ಪ್ರತಿಭಟನೆಯಂತೆ ಕಂಡು ಬಂತು. ಜೀವಪರ ವ್ಯಕ್ತಿಗಳು, ಬುದ್ಧಿಜೀವಿಗಳು ವ್ಯವಸ್ಥಿತವಾಗಿ ಒಟ್ಟು ಸೇರಿ, ಒಂದೇ ವೇದಿಕೆಯ ಮೇಲೆ ನಿಂತು ಅನ್ಯಾಯಗಳನ್ನು ಖಂಡಿಸಿದ್ದು, ಶೋಷಣೆಗಾರರನ್ನು ಪ್ರಶ್ನಿಸಿದ್ದು ಪ್ರತಿಭಟನೆಯೇ ಸರಿ. ಇನ್ನೊಂದು ಕಡೆ, ನಮ್ಮ ದೇಶದ ಈಗಿನ ಪರಿಸ್ಥಿತಿಯನ್ನು ಸರಿಯಾಗಿ ಗ್ರಹಿಸಲು, ಚರ್ಚಿಸಲು ಈ ಸಮ್ಮೇಳನವು ನಮಗೆ ಒಂದು ವೇದಿಕೆಯನ್ನು ಕಲ್ಪಿಸಿಕೊಟ್ಟಿತೆಂದರೆ ಅತ್ಯುಕ್ತಿಯ ಮಾತಾಗದು. ಸಮ್ಮೇಳನದಲ್ಲಿ ನಡೆದ ಪ್ರತಿಯೊಂದು ಗೋಷ್ಠಿಯೂ ಒಂದು ರೀತಿಯಲ್ಲಿ ಸಾಮಾಜಿಕ ವಿಶ್ಲೇಷಣೆಯ ತರಗತಿಗಳಂತೆ ಕಂಡು ಬಂದವು. ನಮ್ಮ ದೇಶದ ಬಹುತ್ವದ ಬೇರುಗಳನ್ನು ಗಟ್ಟಿಗೊಳಿಸಿಕೊಳ್ಳಲು, ಮರು ಮನನ ಮಾಡಿಕೊಳ್ಳಲು ಎರಡು ದಿನಗಳ ಮೇ ಸಾಹಿತ್ಯಮೇಳ ಬಹಳ ಅನುಕೂಲವಾಯಿತು. ಮತ್ತೊಂದು ರೀತಿಯಲ್ಲಿ ನೋಡಿದರೆ ಮೇಳವು ಬುದ್ಧಿಜೀವಿಗಳಲ್ಲಿ, ಹೋರಾಟಗಾರರಲ್ಲಿ ಅಗತ್ಯವಾಗಿ ಇರಬೇಕಾದ ಬೌದ್ಧಿಕ ಸ್ಪಷ್ಟತೆಯನ್ನು ಸಹ ತಂದುಕೊಟ್ಟಿತ್ತು. ನಮ್ಮ ದೇಶದ ಈಗಿನ ಪರಿಸ್ಥಿತಿ ಹೇಗಿದೆ? ಈ ವಿಷಮ ಪರಿಸ್ಥಿತಿಗೆ ಮೂಲ ಕಾರಣಗಳೇನು? ಈ ಪರಿಸ್ಥಿತಿಯ ಉಸ್ತುವಾರಿ ವಹಿಸಿರುವವರು ಯಾರು? ಏಕಾಗಿ ದೇಶದಲ್ಲಿ ಈ ರೀತಿಯ ವಾತಾವರಣ ಸೃಷ್ಟಿಯಾಗುತ್ತಿದೆ? ಮುಂದಿನ ದಿನಗಳಲ್ಲಿ ಈ ಸ್ಥಿತಿಯು ಗಂಭೀರ ಸ್ವರೂಪವನ್ನು ಪಡೆದುಕೊಳ್ಳುವುದೇ? ದಬ್ಬಾಳಿಕೆ, ದೌರ್ಜನ್ಯಗಳು ಉಲ್ಬಣವಾಗಬಹುದೇ? ಇಂತಹ ಪೈಶಾಚಿಕ ಪರಿಸ್ಥಿತಿಯನ್ನು ಹಿಮ್ಮೆಟ್ಟಿಸಲು ನಾವು ಏನು ಮಾಡಬೇಕು? ಯಾವ ರೀತಿ ನಾವೆಲ್ಲಾ ಒಗ್ಗೂಡಬೇಕು? ಈ ರೀತಿಯ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಳ್ಳಲು ಈ ಮೇಳವು ಪ್ರಯೋಜನಕಾರಿಯಾಗಿ ಪರಿಣಮಿಸಿತ್ತು. ಕೊನೆಗೆ, ನನ್ನನ್ನು ಕಾಡಿದ್ದು, ಒಂದೇ ಒಂದು ಭೇಟಿಯಲ್ಲೇ ತುಂಬಾ ಆಪ್ತರಾದ ಬರಹಗಾರ ಸೂರ್ಯಪ್ರಕಾಶ್‍ ಅವರ ಕೆಲವೊಂದು ಪ್ರಶ್ನೆಗಳು. ತಾನು ಬರೆದ ವರ್ಣ ಎಂಬ ಕಾದಂಬರಿಯನ್ನು ನನ್ನ ಕೈಗಿಟ್ಟ ಸೂರ್ಯಪ್ರಕಾಶ್ ಶಿವಮೊಗ್ಗದಿಂದ ಸಮ್ಮೇಳನದಲ್ಲಿ ಭಾಗವಹಿಸಲು ಬಂದಿದ್ದರು. ನಾನು ಒಬ್ಬ ಕ್ರೈಸ್ತ ಪಾದ್ರಿ ಎಂದು ತಿಳಿದು, ಪಾದ್ರಿಯೊಬ್ಬ ಇಂತಹ ಸಮ್ಮೇಳನದಲ್ಲಿ ಭಾಗವಹಿಸುವುದರ ಬಗ್ಗೆ ಆಶ್ಚರ್ಯ ಮತ್ತು ಖುಷಿಯನ್ನು ಒಮ್ಮೆಲೇ ವ್ಯಕ್ತಪಡಿಸಿದ ಅವರು ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಂಡರು. ಕನ್ನಡ ಸಾಹಿತ್ಯಕ್ಕೆ ಕ್ರೈಸ್ತರ ಕೊಡುಗೆ ಅಪಾರವೆಂಬ ಸತ್ಯವನ್ನು ಹೇಳುತ್ತಲೇ ಕೆಲವೊಂದು ಪ್ರಶ್ನೆಗಳನ್ನು ಹಾಕಿ ನನ್ನ ಉತ್ತರಕ್ಕೆ ಕಾದರು; ಕ್ರೈಸ್ತರು ಏಕೆ ಇಂತಹ ಜೀವಪರ ಸಮ್ಮೇಳನಗಳನ್ನು ಆಯೋಜಿಸುವುದಿಲ್ಲ? ಆಯೋಜಿಸದಿದ್ದರೂ ಪರವಾಗಿಲ್ಲ ಇಂತಹ ಸಮ್ಮೇಳನಗಳಲ್ಲಿ ಅವರೇಕೆ ಭಾಗವಹಿಸುವುದಿಲ್ಲ? ಯಾಕಾಗಿ ಈ ರೀತಿಯ ರಾಜಕೀಯ ನಿರಾಸಕ್ತಿ? ಹೀಗೆ ಅವರಿಂದ ಬಂದ ಸರಣಿ ಪ್ರಶ್ನೆಗಳನ್ನು ಕೇಳಿಸಿಕೊಳ್ಳುತ್ತಾ ಉತ್ತರಿಸಲಾಗದೆ ಗೊಂದಲಗೊಂಡೆ. ಈಗಲೂ ಅವರ ಪ್ರಶ್ನೆಗಳು ಮನಸ್ಸಿನಲ್ಲಿ ಉಳಿದುಕೊಂಡು ನನ್ನನ್ನು ಕಾಡುತ್ತಿವೆ. ದಕ್ಷಿಣ ಆಫ್ರಿಕಾದಲ್ಲಿ ವರ್ಣಭೇದ ವ್ಯವಸ್ಥೆ ನಿರ್ಮೂಲನಗೊಳ್ಳುವ ಮುನ್ನ, ಒಂದು ದಿನ ಈ ದುಷ್ಟ ವರ್ಣಭೇದವನ್ನು ಹಿಮ್ಮೆಟ್ಟಿಸಬಹುದೆಂಬ ಭರವಸೆಯ ಚಿಹ್ನೆಯಾಗಿ ಜನರು ಮೋಂಬತ್ತಿಗಳನ್ನು ಹಚ್ಚಿ ಕಿಟಕಿಗಳ ಹತ್ತಿರ ಇಡುತ್ತಿದ್ದರಂತೆ. ಇದು ಪ್ರತಿಭಟನೆಯೋ ಪ್ರತಿರೋಧವೋ ಗಲಿಬಿಲಿಗೊಂಡ ಅಲ್ಲಿನ ಸರ್ಕಾರ ಗನ್‍ಗಳನ್ನು ಇಟ್ಟುಕೊಳ್ಳುವುದು ಹೇಗೆ ಕಾನೂನುಬಾಹಿರವೋ ಹಾಗೆಯೇ ದೀಪ ಹಚ್ಚಿ ಕಿಟಕಿಯ ಬಳಿ ಇಡುವುದು ಕೂಡ ಕಾನೂನುಬಾಹಿರವೆಂದು ನಿಷೇಧಿಸಿತಂತೆ. ನಮ್ಮ ಸರ್ಕಾರಕ್ಕೆ ಬೆಳಗುವ ಮೋಂಬತ್ತಿ ಕಂಡರೂ ಹೆದರಿಕೆ ಎಂದು ಮಕ್ಕಳು ಲೇವಡಿ ಮಾಡುತ್ತಿದ್ದರಂತೆ. ಕೊನೆಯಲ್ಲಿ, ವರ್ಣಭೇದ ವ್ಯವಸ್ಥೆ ಕೊನೆಗೊಂಡಾಗ ಗೊತ್ತಾಗಿದ್ದು: ಬೆಳಗುವ ದೀಪಗಳು ಬಂದೂಕುಗಳಿಗಿಂತ ಶಕ್ತಿಶಾಲಿ ಎಂದು. ಅಂತದೇ ಶಕ್ತಿ ಮೇ ಸಾಹಿತ್ಯ ಮೇಳಕ್ಕಿದೆ. ಈ ಸಾಹಿತ್ಯ ಸಮ್ಮೇಳನ ನಿರಂತರವಾಗಿ ನಡೆಯಲಿ ಎಂದು ಹೇಳುತ್ತಾ ನನ್ನ ಮಾತುಗಳನ್ನು ಈ ಸಾಲುಗಳಲ್ಲಿ ಮುಗಿಸುತ್ತೇನೆ: ಭಾರತವೆನ್ನುವುದು ಒಂದು ಬಣ್ಣವಲ್ಲ ಏಳು ಬಣ್ಣಗಳ ಕಾಮನಬಿಲ್ಲು ಯೋಗಿಯಲ್ಲ, ಭೋಗಿಯಲ್ಲ ಭಾರತವೆನ್ನುವುದು ಬಹು/ತತ್ವ/ಬಹುತ್ವ… 
- ಜೋವಿ

No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...