Tuesday, 12 June 2018

ಧಾರ್ಮಿಕ ಸಾಹಿತ್ಯದ ಅನುವಾದ


ನಮೋ ಮರಿಯಾ, ಪ್ರಾರ್ಥನೆಯಲ್ಲಿ ’ನಿಮ್ಮ ಉದರದ ಫಲ’ ಎಂಬ ಒಂದು ಮಾತು ಬರುತ್ತದೆ. ನಿಮ್ಮ ಉದರದ ಫಲ ಎಂಬುದನ್ನು ಈ ಒಂದು ಪ್ರಾರ್ಥನೆಯ ಹೊರತು ಕನ್ನಡದ ಇನ್ನಾವುದೇ ಸಾಹಿತ್ಯದ ಭಾಗದಲ್ಲಾಗಲೀ ಮಾತುಗಾರಿಕೆಯಲ್ಲಾಗಲೀ ನಾವು ಕಾಣುವುದಿಲ್ಲ. ಇದೇಕೆ ಹೀಗೆ ನಮ್ಮ ಪ್ರಾರ್ಥನೆ ಜಪಗಳೆಲ್ಲ ನಮ್ಮ ಆಡುಮಾತಿಗೆ ಸಮೀಪವಾಗಿಲ್ಲ. ಪ್ರಾರ್ಥನೆಯೆಂಬುದು ಹೃದಯದಿಂದ ಬರತಕ್ಕದ್ದು, ಅದು ಜಪಿಸುವವನ ಮನಸಿನಲ್ಲಿ ಮೂಡಿ ಓತಪ್ರೋತವಾಗಿ ಸರಾಗ ಸಲಿಲವಾಗಿ ಹರಿದುಬರಬೇಕು. ಆ ಮೂಲಕ ದೇವರೊಂದಿಗೆ ನೇರ ಸಂವಾದ ಉಂಟಾಗಿ ಆಪ್ತತೆ ಬೆಸೆಯಬೇಕು. ಎಂದೋ ಯಾರೋ ತಮ್ಮ ಪಾಂಡಿತ್ಯದ ನೇರದಲ್ಲಿ ಬರೆದಿಟ್ಟ ಅಥವಾ ಅನುವಾದಿಸಿದ ಪ್ರಾರ್ಥನೆಗಳನ್ನು ಬಾಯಿಪಾಠ ಮಾಡಿ ಮಂತ್ರದಂತೆ ಜಪಿಸುವುದು ಜನರ ಮನದ ಮಾತಾಗಲಾರವು.
ನಿಮ್ಮ ಉದರದ ಫಲ ಎಂಬುದು ಲತೀನಿನ ಫ್ರುಕ್ತುಸ್ ವೆಂತ್ರಿಸ್ ತುಯಿ (fructus ventris tui) ಅಥವಾ ಇಂಗ್ಲಿಷಿನ ಫ್ರೂಟ್ ಆಪ್ ದೈ ವೂಂಬ್(fruit of thy womb) ಎನ್ನುವುದರ ಅನುವಾದವಾಗಿದೆ. ಈ ಪದಗುಚ್ಛ ಕನ್ನಡದ ಜಾಯಮಾನಕ್ಕೆ ಸುತಾರಾಂ ಹೊಂದುವುದಿಲ್ಲ. ಇದನ್ನೇ ನಾವು “ನಿಮ್ಮಕರುಳಕುಡಿ” ಎಂದಿದ್ದರೆ ಹೆಚ್ಚು ಆಪ್ತವಾಗುತ್ತಿತ್ತು. ಕಣ್ಣು ತಿಳಿಯದಿದ್ದರೂ ಕರುಳು ಅರಿಯುವುದು, “ಕಣ್ಣರಿಯದಿರ್ದೊಡೇಂ ಕರುಳರಿಯದೇ” ಎಂಬ ಮಾತು ಕನ್ನಡ ಕಾವ್ಯಗಳಲ್ಲಿ ಪ್ರಸ್ತಾಪವಾಗುತ್ತದೆ.
ಕನ್ನಡಿಗರು ಮಕ್ಕಳನ್ನು ಕರುಳಕುಡಿ ಎನ್ನುತ್ತಾರೆ. ಮಕ್ಕಳ ಅಳುವನ್ನು ಕರುಳಿನ ಕರೆ ಎನ್ನುತ್ತಾರೆ. ಹೊಕ್ಕಳಬಳ್ಳಿಯನ್ನೂ ಕರುಳಿನ ಭಾಗ ಎಂದು ತಿಳಿದುಕೊಳ್ಳುವುದೇ ಈ ಭಾವನೆಗೆ ಕಾರಣ. ಕನ್ನಡದ ಕರುಳನ್ನು ಇಂಗ್ಲಿಷಿನ womb ಅಥವಾ ಗರ್ಭಾಶಯಕ್ಕೆ ಸರಿಸಮನಾಗಿ ಭಾವಿಸಲಾಗುತ್ತದೆ. ಆದ್ದರಿಂದ ತರ್ಜುಮೆಗಳಲ್ಲಿ ನೆಲದ ಸೊಗಡನ್ನು ಬಿಂಬಿಸುವುದು ಅತ್ಯಂತ ಸೂಕ್ತ ಎಂದು ನನ್ನ ಅಭಿಪ್ರಾಯ.
ಈ ಜಪದ ಎರಡನೇ ಭಾಗದಲ್ಲಿ 'ಸಂತ ಮರಿಯಾ ದೇವಮಾತೆಯೇ' ಎಂದು ಬಳಕೆಯಲ್ಲಿದೆ. ಲತೀನಿನ ಸಾಂಕ್ತಾ ಮರಿಯಾ ಮಾತೆರ್ ದೇಇ ಎಂಬುದಕ್ಕೆ ಈ ಅರ್ಥ ಕೊಡಲಾಗಿದೆ. ಆದರೆ ಸಂತ ಎಂಬುದು ಲತೀನಿನ ಸಾಂಕ್ತಾ ಎಂಬುದಕ್ಕೆ ಸಂವಾದಿಯೇ ಎಂದು ನೋಡೋಣ. ಲತೀನಿನ 'sancta sanctorum' ಎಂದರೆ holy of holies ಎಂದರ್ಥವಿದೆ. ಇದನ್ನು ನೋಡಿದರೆ sancta>sanctus = holy > ಪರಿಶುದ್ಧ ಎಂಬ ಪದ ಹೊರಡುತ್ತದೆ. ಆದರೆ ಇದು ಸಂತ ಹೇಗಾಯ್ತು? ಪ್ರಾಚೀನ ಲತೀನ್ ನುಡಿಯಲ್ಲಿ ಸಾಂಕ್ತಾ ಪದವು ಪರಿಶುದ್ಧತೆಯನ್ನು ಪ್ರತಿನಿಧಿಸಿದರೆ ಆಧುನಿಕ ಲತೀನ್ ಸೊಲ್ಲಿನಲ್ಲಿ ಸಾಂಕ್ತಾ ಗೆ ಸಂತ ಎಂಬ ಅರ್ಥವನ್ನು ಆರೋಪಿಸಲಾಗುತ್ತದೆ.
ಆದರೆ ವಾಸ್ತವದಲ್ಲಿ ಸಂತ ಎಂಬುದು ಪರಿಶುದ್ಧತೆಗೆ ಸಮಾನವೇ? ಹೌದು. ಹೇಗೆಂದರೆ ಸಂತ ಪದವನ್ನು ನಾವು ಸಂಸ್ಕೃತ ನುಡಿಯಿಂದ ಎರವಲುಪಡೆದಿದ್ದೇವೆ. ಅದು ಸತ್ ಅಥವಾ ಸದ್ ಎಂಬ ವಿಶೇಷಣ ಪ್ರತ್ಯಯದ ನಾಮರೂಪವಾಗಿದೆ. ಸತ್ ಇಂದ ಸತ್ಸಂಗ, ಸದ್ಗುರು, ಸಜ್ಜನ, ಸದ್ವಾಕ್ಯ, ಸದ್ವರ್ತನೆ, ಸತ್ಫಲ, ಸನ್ಮುಕ್ತಿ ಇರುವ ಹಾಗೆಯೇ ಸಾತ್ವಿಕ, ಸಾಧು, ಸಾಧ್ವಿ ಎಂಬ ಪದಗಳೂ ಹೊರಡುತ್ತವೆ. ಇದೇ ನೇರದಲ್ಲಿ ನಾವು Holy Eucharist ಅನ್ನು ಸತ್ ಪ್ರಸಾದ > ಸತ್ಪ್ರಸಾದ ಎನ್ನುತ್ತೇವೆ.
ಇತ್ತೀಚೆಗೆ ಸತ್ಪ್ರಸಾದ ಬದಲಿಗೆ ಪರಮಪ್ರಸಾದ ಎಂಬ ಪ್ರಯೋಗ ಬಳಕೆಯಲ್ಲಿ ಬಂದಿದೆ. ಇಲ್ಲಿ ಪರಮ ಎಂಬುದು ಹೇಗೆ ಬಂತು? ಪರಮ ಎಂದರೆ ಉತ್ತಮ, ಉತ್ಕೃಷ್ಟ, ಶ್ರೇಷ್ಠ ಎಂಬರ್ಥಗಳಿವೆ. ಹಾಗಿದ್ದರೆ ಹೋಲಿ ಯೂಕರಿಸ್ಟ್ ಎಂಬುದನ್ನು ಶ್ರೇಷ್ಠ ಪ್ರಸಾದ ಎಂದು ಕರೆದಿದ್ದಾರೆಯೇ? ಪರಿಶುದ್ಧ ಎಂಬುದನ್ನು ಪವಿತ್ರ ಎಂದು ಕರೆದು, ಆನಂತರ ಪವಿತ್ರಾತ್ಮ ಪರಮಾತ್ಮಗಳನ್ನು ಸಮೀಕರಿಸಿ ಅದೇ ಪರಮವನ್ನು ಪ್ರಸಾದಕ್ಕೆ ತಗುಲಿಹಾಕಿದ್ದಾರೆ ಎಂದು ನನಗನ್ನಿಸುತ್ತೆ.
ನಮ್ಮ ಇನ್ನೊಂದು ಜ್ಞಾತಿನುಡಿಯಾದ ಮಲಯಾಳದಲ್ಲಿ ಸಂತ ಪದಕ್ಕೆ ವಿಶುದ್ಧ ಎಂದು ಬಳಸುತ್ತಾರೆ. ವಿಶುದ್ಧ ಮತ್ತು ಪರಿಶುದ್ಧ ಎರಡೂ ಒಂದೇ. ಸಂತನಿಗೆ ತೆಲುಗಿನಲ್ಲಿ సత్పురుషుడు (ಸತ್ಪುರುಷುಡು = holy man) ಎನ್ನುತ್ತಾರೆ. ಹಿಂದೀ ಭಾಷೆಯಲ್ಲಿ ಸಂತರನ್ನು ಧರ್ಮಾತ್ಮ (धर्मात्मा) ಎನ್ನುವರಾದರೂ ಕಥೋಲಿಕ ಹಿಂದೀ ಪಠ್ಯಗಳಲ್ಲಿ ಸಂತ ಪದವೇ ಚಾಲ್ತಿಯಲ್ಲಿದೆ.
ನಮಗೆ ಕನ್ನಡ ಧಾರ್ಮಿಕ ಗ್ರಂಥಗಳನ್ನು ಮುದ್ರಿಸಿಕೊಟ್ಟ ಫ್ರೆಂಚ್ ಮಿಷನರಿಗಳು ಪಾಂಡಿಚೇರಿಯಲ್ಲಿ ತಮ್ಮ ಕೇಂದ್ರ ಹೊಂದಿದ್ದು ಅನುವಾದದ ಕೆಲಸವನ್ನು ಮೊದಲು ತಮಿಳಿನಲ್ಲಿ ಮಾಡಿದ್ದರು. ನಮ್ಮ ಹೆಚ್ಚಿನ ಜಪಗಳು ಲತೀನಿನಿಂದ ತಮಿಳಿಗೆ ಮೊದಲು ತರ್ಜುಮೆಯಾಗಿ ಆನಂತರದಲ್ಲಿ ಕನ್ನಡಕ್ಕೆ ಬಂದವು ಎಂಬುದನ್ನು ವೇದ್ಯವಾಗಿಸಿಕೊಂಡಾಗ ಸಂತ ಪದನಿಷ್ಪತ್ತಿಯ ಅರಿವಾಗುತ್ತದೆ.
ತಮಿಳಿನಲ್ಲಿ அர்ச்சியேஸ்ட மரியாயே (ಅರ್ಚಿಯೇಸ್ಟ ಮರಿಯಾಯೇ) ಎಂಬುದನ್ನೇ ಕನ್ನಡದಲ್ಲಿ ಅರ್ಚಶಿಷ್ಟ ಮರಿಯೇ ಎಂದು ಕರೆಯಲಾಗುತ್ತಿತ್ತು. ದ್ವಿತೀಯ ವ್ಯಾಟಿಕನ್ ಸುಧಾರಣೆಗಳು ಜಾರಿಗೆ ಬಂದು ಕನ್ನಡದ ಜಪಗಳಲ್ಲಿ ಭಾಷಿಕ ಸಂಕ್ರಮಣಗಳು ನಡೆದು ಅರ್ಚಶಿಷ್ಟದ ಬದಲಿಗೆ ಸಂತ ಎಂಬ ಪದಬಳಕೆ ಸರ್ವವ್ಯಾಪಿಯಾಯಿತು.
ಅದೇ ರೀತಿ ಕನ್ನಡದ ಆಡುನುಡಿಯಲ್ಲಿ ’ಮರಣದ ಸಮಯ’ ಎಂಬ ಪದ ಹೆಚ್ಚು ಬಳಕೆಯಲ್ಲಿಲ್ಲ, ಸಾಯೋ ಗಳಿಗೆ ಅನ್ನೋದು ಹೆಚ್ಚು ಚಲಾವಣೆಯಲ್ಲಿದೆ, The Lord ಎಂಬುದಕ್ಕೆ ಕನ್ನಡದಲ್ಲಿ ಒಡೆಯ, ಸ್ವಾಮಿ, ಧಣಿ, ಯಜಮಾನ ಮುಂತಾದ ಸಮಾನಪದಗಳಿವೆ. ಆದರೂ ಅದನ್ನು ಕರ್ತರು, ಪ್ರಭುವು ಎಂದು ಅನುವಾದಿಸಲಾಗಿದೆ. ಇವನ್ನೆಲ್ಲಾ ಗಮನಿಸಿದಾಗ ನಮೋ ಮರಿಯಾ ಜಪವನ್ನು ಜನಮನಕ್ಕೆ ಇನ್ನಷ್ಟು ಹತ್ತಿರವಾಗಿಸುವ ಪ್ರಯತ್ನಗಳು ಆಗಬೇಕಿದೆ ಎನಿಸುತ್ತದೆ.
ಈ ನೇರದಲ್ಲಿ ನಮೋ ಮರಿಯಾ ಪ್ರಾರ್ಥನೆಯನ್ನು ಮೂಲ ಪಠ್ಯದೊಂದಿಗೆ ಮತ್ತೊಮ್ಮೆ ಅವಲೋಕಿಸಿ ನೋಡೋಣ.
ಲತೀನ್ ನುಡಿಯಲ್ಲಿ ಇರುವ Ave Maria, gratia plena, Dominus tecum, benedicta tu in mulieribus, et benedictus fructus ventris tui Iesus. Sancta Maria mater Dei, ora pro nobis peccatoribus, nunc, et in hora mortis nostrae.
ಇದನ್ನು ಕನ್ನಡದಲ್ಲಿ ಕಳೆದ ಐದು ದಶಕಗಳಿಂದ ಹೀಗೆ ಬಳಸುತ್ತಿದ್ದೇವೆ. ‘ನಮೋ ಮರಿಯಾ, ಪ್ರಸಾದಪೂರ್ಣೇ, ಕರ್ತರು ನಿಮ್ಮೊಡನೆ ಇದ್ದಾರೆ, ಸ್ತ್ರೀಯರಲ್ಲಿ ನೀವು ಧನ್ಯರು, ಮತ್ತು ನಿಮ್ಮ ಉದರದ ಫಲವಾದ ಯೇಸು ಧನ್ಯರು | ಸಂತ ಮರಿಯಾ ದೇವಮಾತೆಯೇ ಪಾಪಿಗಳಾಗಿರುವ ನಮಗಾಗಿ ಈಗಲೂ ನಮ್ಮ ಮರಣದ ಸಮಯದಲ್ಲಿಯೂ ಪ್ರಾರ್ಥಿಸಿರಿ ಆಮೆನ್.’
ಇದೇ ಪ್ರಾರ್ಥನೆಯನ್ನು ನಾನು ಈ ರೀತಿ ಅನುವಾದಿಸುತ್ತೇನೆ: ‘ನಮೋ ಮರಿಯಮ್ಮ, ಕೃಪಾಪೂರ್ಣೆಯೇ, ಸ್ವಾಮಿಯು ನಿನ್ನ ಸಂಗಡ ಇದ್ದಾನೆ. ಹೆಂಗಸರಲ್ಲೆಲ್ಲಾ ನೀನು ಪುಣ್ಯವಂತೆ; ನಿನ್ನ ಕರುಳಕುಡಿಯಾದ ಶ್ರೀಯೇಸುವೂ ಪುಣ್ಯಪುರುಷ | ಪರಿಶುದ್ಧ ಮರಿಯಮ್ಮಾ, ದೇವರ ತಾಯೇ, ಪಾಪಿಗಳಾದ ನಮಗಾಗಿ, ಈಗಲೂ ನಾವು ಸಾಯುವ ಗಳಿಗೆಯಲ್ಲೂ ಬೇಡಿಕೊಳ್ಳಮ್ಮಾ. ಆಮೆನ್.’
ಬೆನೆದಿಕ್ತಾ ಎಂಬುದಕ್ಕೆ ಆಶೀರ್ವದಿಸಲ್ಪಟ್ಟವರು ಎಂಬ ಅರ್ಥ ಹೊರಡುತ್ತದೆ. ಅದನ್ನು ಕನ್ನಡದ ಸೊಗಡಿನಲ್ಲಿ ‘ಪುಣ್ಯ ಮಾಡಿದ್ದೀಯ ಕಣವ್ವ’, ‘ಪುಣ್ಯಮಾಡವ್ನೆ’ ಅನ್ನುತ್ತಾರೆ ಎಂಬುದನ್ನು ಗಮನಿಸಿದಾಗ ಹೆಂಗಸರಲ್ಲೆಲ್ಲಾ ನೀನು ಪುಣ್ಯವಂತೆ ಎಂದೆನ್ನುವುದು ಹೆಚ್ಚು ಆತ್ಮೀಯವಾಗುತ್ತದೆ.
ಹಾಗೆಂದು ನಾನು ಯಾರನ್ನೂ ಟೀಕಿಸುತ್ತಿಲ್ಲ ಅಥವಾ ನನ್ನದೇ ಸರಿ ಎಂದು ದಾರ್ಷ್ಟ್ಯದಿಂದ ವಾದಿಸುತ್ತಿಲ್ಲ. ನಮ್ಮ ಕನ್ನಡದ ಧಾರ್ಮಿಕ ಅನುವಾದಗಳು ಹೆಚ್ಚುಹೆಚ್ಚಾಗಿ ನೆಲದ ಸೊಗಡಿನಿಂದ ಕೂಡಿ ಜನಮಾನಸಕ್ಕೆ ಹತ್ತಿರವಾಗಿರಬೇಕು ಆಡುಮಾತಿನಲ್ಲಿ ಇರಬೇಕು ಎನ್ನುವುದಷ್ಟೇ ನನ್ನ ಕಾಳಜಿ.
¨ ಸಿ ಮರಿಜೋಸೆಫ್




No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...