ನಾವು ಬದುಕುಳಿದೆವು ನೆಮ್ಮದಿ ನಮ್ಮದಾಯಿತು. ಯಾವುದು ನಡೆಯಬಾರದು ಎಂದು ನಿರೀಕ್ಷಿಸುತ್ತೇವೊ ಕೆಲವೊಮ್ಮ ಅದೇ ಅನಿರಿಕ್ಷಿತವಾಗಿ ನಡೆದು ಹೋಗುತ್ತೆ, ಯಾವುದು ನಡೆಯಬೇಕು ಎಂದುಕೊಳ್ಳುತ್ತೇವೊ ಅದು ಕಾಲಕ್ರಮೇಣ ನಡೆಯುವುದೇ ಇಲ್ಲ. ಇಂತದ್ದೇ ವಿಪರ್ಯಾಸದೊಳು ಚಿಂತೆಗೀಡಾದೆವು ನಾವು ಅಲ್ಪಸಂಖ್ಯಾತರು. ಚರ್ಚುಗಳಿಗೆ ಬರುವ ಮುಗ್ಧ ಭಕ್ತರು ಅಸಹಾಯಕರಾಗಿ ಕ್ರಿಸ್ತನಿಂದ ಬದುಕಲು ಬಯಸುತ್ತಿದ್ದರು, ಅಂತಹದರಲ್ಲಿ ನಮ್ಮ ರಾಜ್ಯದ ಚರ್ಚುಗಳ ಉತ್ಸಾಹ ಮೂರು ದಿನಗಳು ಕಳೆದೇಹೋಗಿದ್ದವು ನೋಡಿ. ಈ ಚುನಾವಣೆ ಪ್ರಾರಂಭದಿಂದಲೂ ಅಧಿಕಾರ ಸ್ವೀಕಾರದವರೆಗೆ ಸರಕಾರ ಯಾರದ್ದಾಗಬಹುದು ಎಂಬ ಗಂಭೀರ ಪ್ರಶ್ನೆ ಎಲ್ಲರನ್ನೂ ಕಾಡಿತ್ತು. ಒಟ್ಟಾರೆ ಐ. ಪಿ. ಎಲ್. ಪಂದ್ಯಾವಳಿಗೆ ಕಾದು ಕುಳಿತಂತೆ ನಮ್ಮನ್ನು ಈ ಚುನಾವಣೆ ಕಾಯಿಸಿತ್ತು ನೋಡಿ. ಈ ಚುನಾವಣೆಯಲ್ಲಂತೂ ಚಿಪ್ಪು ನಮ್ಮದಲ್ಲ ಬಿಡಿ. ಕುಮಾರಣ್ಣ ಸಿದ್ದಣ್ಣ ಇಬ್ಬರು ಸೇರಿ ನಮ್ಮ ಭೀತಿಯನ್ನು ತಣ್ಣಗಾಗಿಸಿದರು.
ತಾಯಿ ಮಗುವನ್ನು ಬೇರೆಯವರ ಕೈಗೊಪ್ಪಿಸಿರುವಾಗ ಆ ಮಗುವಿನಲ್ಲಿ ಇರುವ ತೊಳಲಾಟ ಇಂದು ನಮ್ಮೆಲ್ಲರಲ್ಲಿಯೂ ಕಾಡುತ್ತಿದೆ. ನಮ್ಮ ಮಾತುಗಳು ಅವಮಾನ ಸೂಚಕವಲ್ಲ ಅನ್ಯಾಯದ ಬೇಜವಾಬ್ದಾರಿತನದ ದ್ಯೋತಕವಾಗಿದೆ. ಈ ಕೂಗಿನೊಳು ಎಲ್ಲೋ ಒಂದು ಕಡೆ ಕ್ರಿಸ್ತನಿಂದ ಸಾಂತ್ವನವನ್ನು ಅಪೇಕ್ಷಿಸುವಂತದ್ದಾಗಿದೆ. ಅಧಿಕಾರ ಪಡೆಯವವನು ತನ್ನದೇ ಧರ್ಮವನ್ನ ಉಳಿಸುವುದಕ್ಕಿಂತಲೂ ಇತರೆ ಧರ್ಮಗಳನ್ನು ಸಹ ತನ್ನ ಧರ್ಮವೆಂದು ಭೇದವನ್ನೆಣಿಸದೆ ಕಾಪಾಡುವುದು ಒಳಿತು. ಓರ್ವ ಸಾಮಾನ್ಯನು ಅಧಿಕಾರಿಯಿಂದ ಬಯಸುವುದು ಮೇಲುಕೀಳು ಭೇದವಿಲ್ಲದ ಭ್ರಷ್ಟಮುಕ್ತ ಆಡಳಿತ.
ಬಹುಮತ ಪಡೆದು ಕೈಗೆ ಬಂದ ಬೆಲ್ಲ ಬಾಯಿಗೆ ಸಿಗದಂತೆ ನಿಂತಿರುವ ಬಿಜೆಪಿ ಮುಖಂಡರು ಮುಂದಿನ ಚುನಾವಣೆಯಲ್ಲಾದರೂ ಗೆಲ್ಲಲು ನಿರೀಕ್ಷಿಸುತ್ತಿದ್ದಾರೆ. ಅಲ್ಲಿಯವರೆಗಾದರೂ ನಾವು ಅಲ್ಪಸಂಖ್ಯಾತರು ಭಯಮುಕ್ತ ಜೀವನ ನಡೆಸಬಹುದು. ನಮ್ಮ ಚರ್ಚುಗಳ ಮೇಲೆ ಯಾವ ದಾಳಿ ಇರೊಲ್ಲ. ನನಗೆ ಯೆಡ್ಯೂರಪ್ಪನವರು ಮುಖ್ಯಮಂತ್ರಿಗಳಾಗಿದ್ದಾಗ ಮಂಗಳೂರಿನಲ್ಲಿ ನಡೆದಂತಹ ಘಟನೆ ಈಗಲೂ ನೆನಪಿದೆ. ಹಲವಾರು ಕ್ರೈಸ್ತರ ಮೇಲೆ ಶ್ರೀಧರ್ಮಸಭೆಯಮೇಲೆ ಹಲ್ಲೆ ನಡೆದ ಘಟನೆಗಳು ಅಲ್ಲದೆ ಪೋಲೀಸರ ಹಾವಳಿ ಇನ್ನೂ ನೆನಪಿದೆ. ಪದೆಪದೇ ಈ ನೆನಪು ಮರುಕಳಿಸಿದಾಗಲೆಲ್ಲಾ ಕಂಗಳು ಹನಿಗೂಡುತ್ತವೆ. ಅಮಾಯಕರ ನೆಮ್ಮದಿಯನ್ನು ಕಿತ್ತುಕೊಂಡು ಕಕ್ಕಾಬಿಕ್ಕಿಯಾಗಲು ಎಡೆಮಾಡಿಕೊಟ್ಟ ಸರಕಾರವನ್ನ ನೆನೆಸಿಕೊಂಡರೆ ಮನಸ್ಸು ಆತಂಕಕ್ಕೆ ಈಡಾಗುತ್ತದೆ. ಮತ್ತೆಲ್ಲಿ ಅದೇ ರೀತಿ ಅನಾಹುತ ಆಗುವುದೋ, ಬಿಜೆಪಿ ಸರಕಾರ ಬಂದರೆ ನಮ್ಮ ಚರ್ಚುಗಳು, ಕ್ರೈಸ್ತರು ಏನಾಗುವರೋ ಎಂಬ ಪ್ರಶ್ನೆ ಕಾಡುತ್ತೆ. ಇದು ನನ್ನ ಪ್ರಶ್ನೆಯಲ್ಲ ಕರ್ನಾಟಕದ ಸಮಸ್ತ ಅಲ್ಪಸಂಖ್ಯಾತರ ಪ್ರಶ್ನೆಯಾಗಿದೆ. ಅನೇಕ ಚರ್ಚುಗಳ ಮೇಲೆ ದಾಳಿಯಾದಾಗ ಮೂಕರಾದಂತಹ ಬಿಜೆಪಿಯ ಸರಕಾರ ಮತ್ತೆಲ್ಲಿ ತಮ್ಮ ಧೂರ್ತ ವರ್ತನೆಯಿಂದ ಅವಘಡಗಳಿಗೆ ಆಸ್ಪದ ನೀಡುತ್ತಾರೋ ಎಂಬ ಪ್ರಶ್ನೆ ನಮ್ಮನ್ನು ಕಾಡುತ್ತಿತ್ತು. ಪ್ರಾಯಶಃ ಈ ಕಾಂಗ್ರೆಸ್ ಸರಕಾರ ಐದು ವರ್ಷಗಳ ಕಾಲ ನಾಡಿನ ಜನತೆಗಾಗಿ ನಾಡಿನ ಏಳಿಗೆಗಾಗಿ ದುಡಿದು, ಅವರ ನಡುವಳಿಕೆಯ ಕಾರಣ ಸಮಸ್ತ ಅಲ್ಪಸಂಖ್ಯಾತರು ಕೊಂಚ ಕಾಲ ಉಸಿರಾಡುವಂತಾಗಿದೆ.
ಕ್ರಿಸ್ತನ ಪ್ರೇರಣೆಯಿಂದ ಬೆಳೆದಿರತಕ್ಕಂತಹ ಕ್ರೈಸ್ತ ಧರ್ಮಸಭೆ, ಚರ್ಚುಗಳು ಸುಲಭವಾಗಿ ಒಡೆದುಹೋಗಲು ಸಾಧ್ಯವಿಲ್ಲ. ಅದನ್ನು ಒಡೆಯಲು ಪ್ರಯತ್ನಿಸಿದಂತೆಲ್ಲಾ ಉಳಿದ ಚೂರು ಪಾರುಗಳಿಂದಲೂ ಕ್ರಿಸ್ತ ಮತ್ತೆ ಮತ್ತೆ ಹುಟ್ಟಿಕೊಳ್ಳುತ್ತಲೇ ಇರುತ್ತಾನೆ. ಅಂತೂ ಇಂತೂ ಭೀತಿಯಂತೂ ಕಡಿಮೆಯಾಗಿದೆ. ಮತ್ತೇನಿದ್ದರೂ ಮುಂಬರುವ ರಾಷ್ಟ್ರ ಚುನಾವಣೆಗೆ ಎದುರು ನೋಡಬೇಕು ಅಷ್ಟೆ. ನಮ್ಮ ರಾಷ್ಟ್ರದ ಪ್ರಜಾಪ್ರಭುತ್ವವನ್ನು ಎತ್ತಿಹಿಡಿಯುವ ಅದನ್ನು ಉಳಿಸಿಕೊಂಡು ಬರುವ ಹೋರಾಟ ನಮ್ಮದಾಗಿರಬೇಕು.
ಏನಿದ್ದರೂ ಅಳಿವು ಉಳಿವಿನ ಮಧ್ಯೆ ನಮ್ಮ ಕೂಗು ಹೀಗಿದೆ. . . ನಮಗೊಬ್ಬ ನಾಯಕ ಬೇಕು. ಅವನೊಬ್ಬ ನ್ಯಾಯ ನಿಷ್ಠೆಯುಳ್ಳವನಾಗಿ ಸಮಾಜಕ್ಕೆ ದುಡಿಯವವನಾಗಿರಬೇಕು. ಚರ್ಚ್, ಗುಮ್ಮಟ ಹಾಗೂ ದೇವಸ್ಥಾನ ಎಂದು ಭೇದವನ್ನೆಣಿಸದವನು ನಮಗೆ ಬೇಕು. ನಾವು ಅಲ್ಪಸಂಖ್ಯಾತರು, ಆದರೆ ನಮ್ಮನ್ನು ಅಲ್ಪವಾಗಿ ಕಾಣದವನು ನಮ್ಮ ನಾಯಕನಾಗಬೇಕು. . . ಸದ್ಯಕ್ಕೆ ಕುಮಾರಣ್ಣನ ಅಧಿಕಾರ ಸ್ವೀಕಾರ, ಕಾಂಗ್ರೆಸ್ಸಿನ ಸಹಕಾರ ನಮ್ಮೆಲ್ಲರ ಹಾಗೂ ಚರ್ಚುಗಳ ನೆಮ್ಮದಿ ಬೆಳಗಿಸಿದೆ.
¨ ನವೀನ್ ಮಿತ್ರ, ಬೆಂಗಳೂರು
No comments:
Post a Comment