ವಿಶ್ವಾಸ
ಹುಲಿಯೊಂದು ಅಟ್ಟಿಸಿಕೊಂಡು ಬಂದದ್ದರಿಂದ ಒಬ್ಬ ಕೋಡುಗಲ್ಲಿನ ಅಂಚಿನಿಂದ ಕೆಳಕ್ಕೆ ಬಿದ್ದ. ಬೀಳುತ್ತಿರುವಾಗ ಅದೃಷ್ಟವಶಾತ್ ಕೈಗೆ ಸಿಕ್ಕಿದ ಕೊಂಬೆಯೊಂದನ್ನು ಹಿಡಿದು ನೇತಾಡತೊಡಗಿದ. ಅವನಿಂದ ಆರು ಅಡಿ ದೂರದಲ್ಲಿ ಮೇಲೆ ಹುಲಿ ಘರ್ಜಿಸುತ್ತಾ ನಿಂತಿತ್ತು. ಕೆಳಗೆ ನೂರು ಅಡಿ ದೂರದಲ್ಲಿ ತುಂಬ ಅಪಾಯಕಾರಿಯಾಗಿ ಗೋಚರಿಸುತ್ತಿದ್ದ ಬಂಡೆಗಳಿಗೆ ಪ್ರಕ್ಷುಬ್ದ ಸಮುದ್ರದ ಅಲೆಗಳು ಅಪ್ಪಳಿಸುತ್ತಿದ್ದವು. ಅವನು ಹಿಡಿದುಕೊಂಡಿದ್ದ ಕೊಂಬೆಯ ಬುಡವನ್ನು ಎರಡು ಇಲಿಗಳು ಒಂದೇ ಸಮನೆ ಕಡಿಯುತ್ತಿದ್ದುದನ್ನು ಗಮನಿಸಿ ಆತ ಭಯಭೀತನಾದ. ತನ್ನ ಅವಸಾನ ಕಾಲ ಸಮೀಪಿಸುತ್ತಿದೆಯೆಂದು ಭಾವಿಸಿದ ಆತ ಜೋರಾಗಿ ಕಿರುಚಿದ, “ಓ ದೇವರೇ, ನನ್ನನ್ನು ರಕ್ಷಿಸು” ತಕ್ಷಣ ಅಶರೀರವಾಣಿಯೊಂದು ಕೇಳಿಸಿತು,
“ಖಂಡಿತ ರಕ್ಷಿಸುತ್ತೇನೆ. ಆದರೆ ಅದಕ್ಕೂ ಮುನ್ನ ಆ ಕೊಂಬೆಯನ್ನು ಬಿಟ್ಟುಬಿಡು”
ನೀನೇ ನಾನು
ಸೂಫಿ ಮತದ ಉದ್ದೇಶವನ್ನು ಬಾಯ್ಸೀದ್ ಬಹಳ ಚೆನ್ನಾಗಿ ತಿಳಿಸಿದ್ದಾರೆ, “ಒಂದೆಡೆಯಿಂದ ಮತ್ತೊಂದೆಡೆಗೆ ದೇವರನ್ನು ಅರಸುತ್ತಾ ಹೋದೆ. ಅಂತರಂಗದ ದನಿ ಹೇಳಿತು, ನೀನೇ ನಾನು”. ರೂಮಿ ಎಂಬ ಸೂಫಿಯು ತನ್ನ ಎಲ್ಲಾ ಶಿಷ್ಯರೂ ಈ ಪದ್ಯವನ್ನು ಬಾಯಿಪಾಠ ಮಾಡುವಂತೆ ಹೇಳುತ್ತಿದ್ದರು.
ದೇವರೊಂದು ಮನೆಯಿಲ್ಲದೆ ನಿರಾಶ್ರಿತರಾದರು!!
ಒಂದಾನೊಂದು ಕಾಲದಲ್ಲಿ ಅರಣ್ಯವೊಂದರಲ್ಲಿ ಹಗಲೊತ್ತು ಹಕ್ಕಿಗಳು ಚಿಲಿಪಿಲಿಗುಟ್ಟುತ್ತಾ ಹಾಡುತ್ತಿದ್ದವು. ರಾತ್ರಿಯ ಹೊತ್ತು ಹುಳಹುಪ್ಪಟೆಗಳು, ಕ್ರಿಮಿಕೀಟಗಳು ಝೇಂಗುಡುತ್ತಿದ್ದವು. ಮರಗಿಡಬಳ್ಳಿಗಳು ಆ ಅರಣ್ಯದಲ್ಲಿ ನಳನಳಿಸುತ್ತಿದ್ದವು. ಹೂಗಳು ಅರಳುತ್ತಿದ್ದವು ಮತ್ತು ಪ್ರಾಣಿಗಳೆಲ್ಲವೂ ಸ್ವತಂತ್ರವಾಗಿ ಓಡಾಡಿ ಜೀವಿಸುತ್ತಿದ್ದವು. ಅರಣ್ಯವನ್ನು ಪ್ರವೇಶಿಸಿದವರೆಲ್ಲರಿಗೂ ಆ ಪ್ರಶಾಂತ ವಾತಾವರಣದಲ್ಲಿ ಹುದುಗಿರುವ ದೇವರ ಅನುಭವಾಗುತ್ತಿತ್ತು. ಆ ಸ್ವಾಭಾವಿಕ ಸೌಂದರ್ಯದ ಸ್ಥಾನ ದೇವರ ವಾಸಸ್ಥಾನವಾಗಿತ್ತು.
ಆದರೆ ಅಧುನಿಕ ಯುಗದ ಆಗಮನವಾದಾಗ ಜನರಿಗೆ ಕ್ಷಣ ಮಾತ್ರದಲ್ಲಿ ಮರಗಳನ್ನು ಕಡಿದು, ಹರಿಯುತ್ತಿದ್ದ ಹಳ್ಳಕೊಳ್ಳ ತೊರೆಗಳಿಗೆ ಅಣೆಕಟ್ಟು ಕಟ್ಟಿ ಸಾವಿರಾರು ಅಡಿಗಳಷ್ಟೆತ್ತರದ ಕಟ್ಟಡಗಳನ್ನು ನಿರ್ಮಿಸಲು ಸಾಧ್ಯವಾಯಿತು. ಕಡಿದ ಮರಗಳಿಂದಲೂ, ಅರಣ್ಯದ ಮಣ್ಣಿನಡಿಯಲ್ಲಿದ್ದ ಕಲ್ಲುಗಳಿಂದಲೂ ದೇವಾಲಯಗಳನ್ನು ಕಟ್ಟಲಾಯಿತು. ದೇವಾಲಯದ ಗೋಪುರಗಳು ಆಕಾಶದೆಡೆಗೆ ಚಾಚಿದವು. ಗಾಳಿಯಲ್ಲೆಲ್ಲಾ ದೇವಾಲಯದ ಘಂಟೆಗಳ, ಪಠಿಸಿದ ಮಂತ್ರಗಳ, ಪ್ರಾರ್ಥನೆಯ ಹಾಡಿನ ಸ್ವರಗಳ ಸುಂದರ ನಿನಾದ. ಪರಿಣಾಮ? ದೇವರೊಂದು ಮನೆಯಿಲ್ಲದೆ ನಿರಾಶ್ರಿತರಾದರು!!!
No comments:
Post a Comment