ಈ ಚರ್ಚಿನಲ್ಲಿ ಜ್ಞಾನಸ್ನಾನ ಕೊಡಿಸುವುದು ಎಂದರೆ ಮಾಡು ಇಲ್ಲವೆ ಮಡಿ ಎಂಬಂತೆಯೇ. ಆದರೂ, ಸ್ಥಳೀಯರು ಈ ಬೆಟ್ಟದ ಚರ್ಚಿನಲ್ಲಿಯೇ ತಮ್ಮ ಮಗುವಿಗೆ ಜ್ಞಾನಸ್ನಾನ ಕೊಡಿಸಲು ಮುಂದಾಗುತ್ತಾರೆ.
--------------------------------------------------------------------------------------------------------------------------
ಮೋರಿಯ ಪ್ರಾಂತದ ಪರ್ವತದ ತುದಿಯೊಂದರಲ್ಲಿ ಮಗನನ್ನು ಬಲಿಕೊಡಲು ಹೋದಾಗ ಅಬ್ರಾಮನಿಗೆ ದೇವರ ಧ್ವನಿ ಕೇಳಿಸಿತ್ತು. ಪ್ರವಾದಿ ಮೋಸೆಸ್ನಿಗೆ ‘ಹೊರೆಬ್ ಎಂಬ ದೇವರ ಬೆಟ್ಟದಲ್ಲಿ ಮುಳ್ಳಿನ ಪೊದೆಯೊಂದರಲ್ಲಿ ಜ್ವಾಲೆಯ ಸ್ವರೂಪದಲ್ಲಿ ದೇವರು ತಮ್ಮ ದರ್ಶನ ನೀಡಿದ್ದರು. ಪ್ರಭು ಯೇಸುಸ್ವಾಮಿ ಶಿಲುಬೆ ಮರಣದ ಶಿಕ್ಷೆ ಅನುಭವಿಸಿ, ಸಮಾಧಿ ಮಾಡಲ್ಪಟ್ಟು ಮೂರನೇ ದಿನ, ಪುನರ್ ಜೀವಂತರಾಗಿ ಎದ್ದು ಬಂದ ನಂತರದಲ್ಲಿ ಶಿಷ್ಯರನ್ನು ಕಂಡು ಗಲಿಲೇಯದ ಪರ್ವತವೊಂದರಲ್ಲಿ ಅಂತಿಮ ದರ್ಶನ ನೀಡಿ ಸ್ವರ್ಗಾರೋಹಣ ಮಾಡುತ್ತಾರೆ.
ಭಾರತದ ಶಿಷ್ಟ ದೇವತೆಗಳಲ್ಲಿ ಪ್ರಮುಖರಾದ ಬ್ರಹ್ಮ, ವಿಷ್ಣು, ಮಹೇಶ್ವರರಲ್ಲಿ ಕೊನೆಯವನಾದ, ಪಶುಪತಿ ಶಿವನ ನೆಲೆ ಕೈಲಾಸ ಪರ್ವತ. ವಿಷ್ಣುವಿನ ಇನ್ನೊಂದು ರೂಪದ ತಿರುಪತಿ ನೆಲೆಸಿದ್ದು ತಿರುಪತಿಯ ಬೆಟ್ಟದಲ್ಲಿ. ಉತ್ತರ ಕರ್ನಾಟಕದ ಬಯಲು ಸೀಮೆಯ ಮೈಲಾರ ನೆಲೆಸಿದ್ದು ಮೈಲಾರ ಲಿಂಗ ಗುಡ್ಡದಲ್ಲಿ, ಸೌದತ್ತಿಯ ಎಲ್ಲಮ್ಮ ಸೌದತ್ತಿ ಗುಡ್ಡದಲ್ಲಿ ನೆಲೆಸಿದ್ದಾಳೆ. ದಕ್ಷಿಣದ ಹಳೆಮೈಸೂರು ಸೀಮೆಯ ಆರಾಧ್ಯ ದೈವ ರಂಗಯ್ಯ ಬಿಳಿಗಿರಿ ಬೆಟ್ಟದಲ್ಲಿ ನೆಲೆಸಿದ್ದಾನೆ. ಮೈಸೂರಿನ ಚಾಮುಂಡೇಶ್ವರಿ ನೆಲೆಸಿದ್ದು ಚಾಮುಂಡಿ ಬೆಟ್ಟದಲ್ಲಿ. ಮಾನವ ಎಲ್ಲೇ ಇರಲಿ, ಅವನು ದೇವರ ನಲೆಯನ್ನು ಹುಡುಕುವುದು ಬೆಟ್ಟಗುಡ್ಡಗಳಲ್ಲಿಯೇ ಎಂದೆನಿಸುತ್ತದೆ.
ಕ್ರೈಸ್ತರಲ್ಲಿನ ಜ್ಞಾನಸ್ನಾನ ಸಂಸ್ಕಾರ ಒಂದು ಪ್ರಮುಖ ಸಂಸ್ಕಾರ. ಇದನ್ನು ದೀಕ್ಷಾಸ್ನಾನವೆಂದೂ ಕರೆಯಲಾಗುತ್ತದೆ. ಕಥೋಲಿಕ ಧರ್ಮಸಭೆಯು ನಿಗದಿ ಪಡಿಸಿರುವ ಏಳು ಧಾರ್ಮಿಕ ಸಂಸ್ಕಾರಗಳಲ್ಲಿ ಇದು ಮೊದಲ ಸ್ಥಾನದಲ್ಲಿದೆ. ಸಾಮಾನ್ಯ ತಿಳುವಳಿಕೆಯಂತೆ ಜ್ಞಾನಸ್ನಾನ ಹೊಂದುವುದು ಎಂದರೆ ಕ್ರೈಸ್ತ ಧರ್ಮದವನಾಗುವುದು. ಹುಟ್ಟಿದ ಮಗುವಿಗೆ ನಲವತ್ತು ದಿನಗಳ ನಂತರದಲ್ಲಿ, ಮನೆಯ ಹತ್ತಿರದ ಚರ್ಚುಗಳಲ್ಲಿ ಜ್ಞಾನಸ್ನಾನ ಮಾಡಿಸುವುದು ಒಂದು ಸಂಪ್ರದಾಯವಾಗಿ ಬೆಳೆದುಬಂದಿದೆ.
ಇಂಥ ಜ್ಞಾನಸ್ನಾನ ಸಂಸ್ಕಾರಕ್ಕಾಗಿ, ಕ್ರೈಸ್ತರ ಪುರಾತನ ನೆಲೆಯಾಗಿರುವ ಇಥಿಯೋಪಿಯಾದಲ್ಲಿ ಕ್ರೈಸ್ತ ವಿಶ್ವಾಸಿಗಳು ಕಡಿದಾದ ಪರ್ವತವೊಂದನ್ನು ಶ್ರಮಪಟ್ಟು ಏರಿ ಅಲ್ಲಿನ ಚರ್ಚ್ ಅನ್ನು ತಲುಪಿ, ತಮ್ಮ ವಿಶ್ವಾಸವನ್ನು ಬಲಪಡಿಸುವ ಪರಿ ನಿಜಕ್ಕೂ ಒಂದು ವಿಸ್ಮಯಕಾರಕ ಸಂಗತಿಯಾಗಿದೆ.
ಪ್ರಾಚೀನ ಈಜಿಪ್ತ ದೇಶದ ಕೆಳಗೆ, ಆಫ್ರಿಕಾ ಖಂಡದ ಈಶಾನ್ಯ ದಿಕ್ಕಿನಲ್ಲಿರುವ ಇಥಿಯೋಪಿಯಾ ಕ್ರೈಸ್ತರ ಬಹು ಪುರಾತನ ನೆಲೆ. ಪೂರ್ವಾತ್ಯ ಮತ್ತು ಪಾಶ್ಚಿಮಾತ್ಯ ಕ್ರೈಸ್ತ ಧರ್ಮಸಭೆಗಳು ರೂಪತಾಳುವ ಮುಂಚೆಯೆ ತಮ್ಮದೇ ಆದ ಕ್ರೈಸ್ತ ಪದ್ಧತಿಗಳು ರೂಢಿಸಿಕೊಂಡಿರುವ ಕ್ರೈಸ್ತ ಸಮುದಾಯ ಅಲ್ಲಿ ಇನ್ನೂ ಅಸ್ತಿತ್ವದಲ್ಲಿದೆ. ಅವರಾರೂ ನಮ್ಮ ಪಾಶ್ಚಿಮಾತ್ಯ ಕ್ರೈಸ್ತರನ್ನು ಹೋಲುವುದಿಲ್ಲ. ಅವರ ಚರ್ಚುಗಳು ಗಗನ ಚುಂಬಿ ಕಟ್ಟಡಗಳಲ್ಲ. ಅವು ನೆಲದಾಳದಲ್ಲಿನ ಬೃಹತ್ ಕಲ್ಲುಗಳಲ್ಲಿ, ಬೆಟ್ಟದ ತುದಿಯಲ್ಲಿನ ದೊಡ್ಡ ಬಂಡೆಗಳಲ್ಲಿ ಕೊರೆದ ಕಟ್ಟಡಗಳು.
ಇಥಿಯೋಪಿಯಾದ ಟೈಗ್ರೆ ಪ್ರದೇಶದ ಹವಜನ್ ವರೆದಾ ಎಂಬಲ್ಲಿ ಅಬುನಾ ಎಮಟಾ ಗುಹ್ ಎಂಬ ಹೆಸರಿನ ಬೆಟ್ಟದ ಮೇಲೆ ಬಂಡೆಯಲ್ಲಿ ಅಖಂಡ ಶಿಲೆಯಲ್ಲಿ ಕೊರೆದ ಚರ್ಚು ಇದ್ದು, ಅದು ೮೬೪೦ ಅಡಿ ಎತ್ತರದಲ್ಲಿದೆ. ಅಲ್ಲಿಗೆ ಬರಿಗಾಲಲ್ಲಿ ಮಾತ್ರ ತಲುಪಬಹುದು. ಆ ಚರ್ಚು, ಹದಿನೈದನೇ ಶತಮಾನದಲ್ಲಿ ನಿರ್ಮಿಸಲಾಗಿರುವ ಅದರಲ್ಲಿನ ಗುಮ್ಮಟ ಮತ್ತು ವರ್ಣಚಿತ್ರಗಳಿಂದಲೂ ಪ್ರಸಿದ್ಧಿ ಪಡೆದಿದೆ. ಇದು, ದೇವರ ನೆಲೆಯಾದ ಸ್ವರ್ಗಕ್ಕೆ ಹತ್ತಿರದ ಚರ್ಚು.
ಅಲ್ಲಿಗೆ ತಲುಪ ಬೇಕಾದರೆ, ವಿಶ್ವಾಸಿಗಳು ಮತ್ತು ಆಸಕ್ತರು ಬರಿಗಾಲಿನಲ್ಲಿಯೇ ಕಡಿದಾದ ಕಣಿವೆಯ ೨೫೦ ಎತ್ತರದಲ್ಲಿನ ಕಲ್ಲಿನ ಸೇತುವೆಯನ್ನು ಮೊದಲು ದಾಟಬೇಕು, ನಂತರ ಕಿರಿದಾದ ಮರದ ಸೇತುವೆ ದಾಟಿ ಮುಂದೆ ಸಾಗಿದ ನಂತರ, ಗೋಡೆಯಂತೆ ನಿಂತ ಬಂಡೆಯಲ್ಲಿನ ತೂತುಗಳಲ್ಲಿ ಹಲ್ಲಿಯಂತೆ ಕೈ ಕಾಲುಗಳನ್ನು ಇರಿಸಿ, ಬಂಡೆಯನ್ನು ಬಿಗಿದಪ್ಪಿ ಹತ್ತಬೇಕು. ಇಷ್ಟಾದ ಮೇಲೆ ೩೦೦ ಮೀಟರ್ ಎತ್ತರದ ಕಣಿವೆಯ ಮೇಲಿನ ೫೦ ಸೆಂಟಿ ಮೀಟರ್ ಅಗಲದ ಬಂಡೆಯ ಕಾಲುದಾರಿಯಲ್ಲಿ ಸಾಗಿ ಆ ಚರ್ಚನ ಬಾಗಿಲನ್ನು ಮುಟ್ಟಬೇಕು!
ಬೆಟ್ಟದ ಮೇಲಣ ಆ ಚರ್ಚಿನಲ್ಲಿನ ಯಾಜಕರು ತಲೆಗೊಂದು ಟವೆಲ್ ಸುತ್ತಿಕೊಂಡಿರುತ್ತಾನೆ. ಅಂಗಿ ಸೀರೆಯಂತೆ ಬಿಳಿ ಉಟ್ಟುಕೊಂಡಿರುವ ಆತನ ಕೈಯಲ್ಲಿ ಶಿಲುಬೆ ಜೊತೆಗೆ ನಮ್ಮ ನಾಡಿನ ಋಷಿಮುನಿಗಳ ಕೈಯಲ್ಲಿರುವ ಧ್ಯಾನಕ್ಕೆ ಕುಳಿತಾಗ ಕೈ ಇರಿಸಿಕೊಳ್ಳುವ ದಂಡದಂತಹ ದಂಡವನ್ನು ಹಿಡಿದುಕೊಂಡಿರುತ್ತಾರೆ.
ಎಲ್ಲಾ ದೇವರ ಆಟ ಎನ್ನುವಾಗ ಹಾಗನ್ನುವವರ ಮುಖ ಆಕಾಶದ ಕಡೆಗೆ ಮುಖಮಾಡಿರುತ್ತದೆ. ದೇವರು ಪರಲೋಕದಲ್ಲಿ ನಲೆಸಿದ್ದಾನೆ. ಆ ಪರಲೋಕ ಎನ್ನುವುದು ಆಕಾಶದಲ್ಲಿದೆ ಎಂಬುವುದು ಮಾನವನ ನಂಬಿಕೆ. ಅದರಂತೆಯೇ ನರಕವನ್ನು ಅಧೋಲೋಕ ಎನ್ನಲಾಗುತ್ತದೆ.
ಅಲ್ಲಿನ ತಾಯಂದಿರು ದೇವರ ನೆಲೆಗೆ ಹತ್ತಿರವಾದ, ಈ ಪುರಾತನ ಚರ್ಚಿನಲ್ಲಿ ಜ್ಷಾನಸ್ನಾನ ಪಡೆದರೆ ತಮ್ಮ ಮಗುವಿನ ಮೇಲೆ ಬಲವಾದ ದೇವರ ರಕ್ಷಣೆ ಲಭಿಸುತ್ತದೆ ಎಂದು ಭಾವಿಸುತ್ತಾರೆ. ಕೆಳಗೆ ಬಯಲು ಪ್ರದೇಶದಲ್ಲಿನ ಚರ್ಚುಗಳಿಗಿಂತ ಈ ಬೆಟ್ಟದ ಮೇಲಿನ, ಆಗಸವನ್ನು ಚುಂಬಿಸುವ ಸ್ವರ್ಗಕ್ಕೆ ಹತ್ತಿರದವಾದ ಚರ್ಚು ಹೆಚ್ಚು ಪ್ರಭಾವಶಾಲಿ ಎಂಬುದಾಗಿ ಅಲ್ಲಿನ ಜನ ನಂಬಿದ್ದಾರೆ. ಈ ಚರ್ಚಿನಲ್ಲಿ ಜ್ಞಾನಸ್ನಾನ ಕೊಡಿಸುವುದು ಎಂದರೆ ಮಾಡು ಇಲ್ಲವೆ ಮಡಿ ಎಂಬಂತೆಯೇ. ಆದರೂ, ಸ್ಥಳೀಯರು ಈ ಬೆಟ್ಟದ ಚರ್ಚಿನಲ್ಲಿಯೇ ತಮ್ಮ ಮಗುವಿಗೆ ಜ್ಞಾನಸ್ನಾನ ಕೊಡಿಸಲು ಮುಂದಾಗುತ್ತಾರೆ.
¨ ಎಫ್. ಎಂ. ನಂದಗಾವ್
No comments:
Post a Comment