Tuesday, 12 June 2018

ಸಿರಿಯಾದೇಶದ ಯೆಹೂದ್ಯ ದಾಸಿ


ಸಂತ ಲೂಕರ ಶುಭವಾರ್ತೆಯ ೪:೨೭ರ ವಚನವನ್ನು ಓದುವಾಗ ಕೆಲವರಿಗೆ ಒಂದು ಪ್ರಶ್ನೆ ಉದ್ಭವವಾಗಬಹುದು. ಸಿರಿಯಾ ದೇಶಕ್ಕೂ ಇಸ್ರಾಯೇಲಿಗೂ ಸದಾ ಬದ್ಧವೈರ, ಯಾವಾಗಲೂ ಕಿರುಕುಳ, ದಾಳಿ, ಯುದ್ಧಗಳೇ. ಹೀಗಿರುವಾಗ ಶುದ್ಧ ಯೆಹೂದ್ಯನಾದ ಪ್ರವಾದಿ ಎಲೀಷನು, ಸಿರಿಯಾ ದೇಶದ ಅಧಿಕಾರಿಯಾಗಿದ್ದ ನಾಮಾನನ ಚರ್ಮರೋಗವನ್ನು ಹೇಗೆ, ಎಲ್ಲಿ ಗುಣಪಡಿಸಿದ? ಒಂದು ಅನಾಮಿಕ ಹೆಣ್ಣುಮಗಳು ಇದಕ್ಕೆ ಕಾರಣಳಾದ ರೋಚಕ ವಿದ್ಯಮಾನದ ಕಥೆಯನ್ನು ನಾಮಾನನ ಬಾಯಿಂದಲೇ ಕೇಳೋಣ. (೨ ಅರಸು ೫:೧-೧೯).
ನಾನು ಅರಾಮ್ಯದೇಶದ ಸೇನಾಪತಿ. ನನಗೆ ಎಲ್ಲವೂ ಇತ್ತು, ಆದರೆ, ನನ್ನನ್ನು ಬಾಧಿಸುತ್ತಿದ್ದ ಚರ್ಮರೋಗದ ಕಾರಣ ನಾನು ಬಹಳ ದುಃಖಿತನಾಗಿದ್ದೆ. ಕೆಲವರು, ಅದನ್ನು ತಪ್ಪಾಗಿ ಕುಷ್ಠರೋಗವೆಂದು ಭಾವಿಸಿದ್ದರು. ಹಾಗೇನಾದರೂ ಇದ್ದಿದ್ದರೆ, ನಾನು ಇಂಥಾ ಉತ್ತಮ ಪದವಿಯಲ್ಲಿ ಇರುತ್ತಿರಲಿಲ್ಲ, ಬದಲಾಗಿ, ನನ್ನನ್ನು ಊರಾಚೆ ಓಡಿಸಿಬಿಡುತ್ತಿದ್ದರು! ಇದು ಬಹುಶಃ ತೊನ್ನಾಗಿರಬಹುದು, ಅನೇಕ ಚರ್ಮದ ಖಾಯಿಲೆಗಳನ್ನು ಕುಷ್ಠವೆಂದೇ ಭಾವಿಸುತ್ತಾರಲ್ಲ? ಆದರೂ, ನನಗೆ ತುಂಬಾ ಮಾನಸಿಕ ವೇದನೆ ಉಂಟುಮಾಡುತ್ತಿದ್ದ ಇದನ್ನು ವಾಸಿಮಾಡಿಕೊಳ್ಳಲು ನಾನು ಹೋಗದ ಸ್ಥಳಗಳಿಲ್ಲ, ನೋಡದ ವೈದ್ಯರಿಲ್ಲ. ನನ್ನ ದೇವದೇವತೆಗಳಿಗೂ ನನಗೇನೂ ಸಹಾಯಮಾಡಲಾಗಲಿಲ್ಲ! ಅವರಿಗೆಲ್ಲಾ ನಾನು ಸಲ್ಲಿಸಿದ ವಿವಿಧ ಹೋಮಗಳು ನಿಷ್ಫಲವೇ.
ಇದೇ ಚಿಂತೆಯಲ್ಲಿ ನಾನು ಮುಳುಗಿರುವಾಗ, ನನ್ನ ಪತ್ನಿ ನನಗೆ ಹೇಳಿ ಕಳುಹಿಸಿದಳು. ಅವಳ ಜೊತೆ ನಾನು ಕೆಲನಿಮಿಷಗಳಾದರೂ ಕಳೆದರೆ, ನನ್ನ ಮನಸ್ಸು ಸ್ತಿಮಿತಕ್ಕೆ ಬರುತ್ತೆಂದು ನನಗೆ ಗೊತ್ತು. ಹಾಗಾಗಿ, ಕೆಲಸಗಳನ್ನೆಲ್ಲಾ ಬದಿಗಿರಿಸಿ, ಅವಳ ಬಳಿ ಬಂದು, “ಏನು ವಿಶೇಷ?” ಎಂದು ಕೇಳಿದೆ. ಅವಳು ಕುರ್ಚಿಯಲ್ಲಿ ಕುಳಿತಿದ್ದರೆ, ಅವಳ ಪಾದಗಳ ಬದಿಯಲ್ಲಿ ಇದ್ದ ಯೆಹೂದ್ಯ ದಾಸಿ, ಅವಳ ಕಾಲುಗಳನ್ನು ಮೃದುವಾಗಿ ಒತ್ತುತ್ತಿದ್ದಳು. ನಾವು ಯುದ್ಧದಲ್ಲಿ ಇಸ್ರಾಯೇಲನ್ನು ಗೆದ್ದಾಗ, ಈ ಹುಡುಗಿಯನ್ನು ಸೆಳೆದುಕೊಂಡು ಬಂದು, ನನ್ನ ಪತ್ನಿಗೆ ದಾಸಿಯನ್ನಾಗಿ ಕೊಟ್ಟಿದ್ದೆವು. ಅವಳ ಹೆಸರಂತೂ ನನಗೆ ತಿಳಿಯದು.
“ಏನೂ ಅಂಥಾ ವಿಶೇಷವಿಲ್ಲ, ಆದರೆ, ಈ ನನ್ನ ದಾಸಿ ಹೇಳುವುದನ್ನು ಸ್ವಲ್ಪ ಕೇಳಿಸಿಕೊಳ್ಳಿ” ಎಂದಳು ನನ್ನ ಪತ್ನಿ.
“ಏನು ಹೇಳುತ್ತಾಳೋ ಹೇಳಲಿ”
ಆ ಹುಡುಗಿ, ಅವಳಿಗೆ ಸುಮಾರು ೧೩-೧೪ ವರ್ಷ ವಯಸ್ಸಿರಬಹುದು, ಸಾತ್ವಿಕತೆ ತುಳುಕಾಡುತ್ತಿದ್ದ ಮುಖ, ನನಗೆ ಬಗ್ಗಿ ನಮಸ್ಕರಿಸಿ, “ಒಡೆಯರೇ , ನಮ್ಮ ಸಮಾರ್ಯ ಸೀಮೆಯಲ್ಲಿ, ಎಲೀಷರೆಂಬ ಪ್ರಸಿದ್ಧ ಪ್ರವಾದಿ ಇದ್ದಾರೆ. ಅವರು ವಾಸಿಮಾಡದ ರೋಗವಿಲ್ಲ, ಅವರಿಂದಾಗದ ಪವಾಡವಿಲ್ಲ. ಇಲ್ಲಿ ತಾವು, ಎಷ್ಟೊಂದು ವೈದ್ಯರ ಬಳಿ ಹೋಗಿದ್ದೀರಿ, ಎಷ್ಟೊಂದು ಪೂಜೆ, ಹೋಮಗಳನ್ನು ಮಾಡಿಸಿದ್ದೀರಿ. ತಮಗೆ, ಇವುಗಳಿಂದ ಏನೂ ಪ್ರಯೋಜನವಾಗಲಿಲ್ಲ. ಕೊನೆಯದಾಗಿ ಎಲೀಷರ ಬಳಿ ಹೋಗಿ ತೋರಿಸಿಕೊಳ್ಳಿರಿ. ತಮಗೆ ಅವರಿಂದ ಪೂರ್ತಿಯಾಗಿ ಗುಣವಾಗುತ್ತೆ ಎಂಬ ಆಳವಾದ ನಂಬಿಕೆ ನನಗಂತೂ ಇದೆ” ಎಂದಳು.
ನನಗೆ ಅವಳ ಮಾತಿನಲ್ಲಿ ಅಷ್ಟಾಗಿ ವಿಶ್ವಾಸ ಹುಟ್ಟಲಿಲ್ಲವಾದರೂ ಈ ಸಂಗತಿಯನ್ನು ಅರಸರ ಮುಂದಿಟ್ಟಾಗ ಆತನು ನನಗೆ ತುಂಬಾ ಪ್ರೋತ್ಸಾಹಿಸಿ, ನನ್ನ ಪ್ರಯಾಣಕ್ಕೆ ಬೇಕಾದದ್ದನ್ನು ಅನುಗ್ರಹಿಸಿದನು. ಜೊತೆಗೆ, ಎಲೀಷ ಪ್ರವಾದಿಗೆ ನೀಡಲು ಅತ್ಯುತ್ತಮ ವಸ್ತ್ರಗಳನ್ನೂ ಬೆಳ್ಳಿಬಂಗಾರವನ್ನೂ ನೀಡಿದನು, ಅಗತ್ಯ ಪತ್ರವನ್ನೂ ಕೊಟ್ಟನು.
ಆದರೆ, ಆ ಪತ್ರವನ್ನು ಓದಿದ ಇಸ್ರಾಯೇಲಿನ ಅರಸನಿಗೆ ಗಾಬರಿಯೇ ಆಯಿತು! “ಇದೇನು, ಆರಾಮ್ಯ ಅರಸನ ಹುನ್ನಾರವೋ? ನಮ್ಮನ್ನು ಮತ್ತೆ ಸೋಲಿಸಬೇಕೆಂಬ ಪಿತೂರಿಯೋ? ನಾನೆಲ್ಲಿ, ಈ ರೋಗವೆಲ್ಲಿ? ಇದು ಜಗಳಕ್ಕೆ ಕಾಲ್ಕೆರೆದು ಬರುವುದೇ ಆಗಿದೆ!” ಎಂದು ಆತನು ಎದೆಯೊಡೆದದ್ದನ್ನು ಕೇಳಿಸಿಕೊಂಡ ಎಲೀಷನು, ಅರಸನಿಗೆ, “ಅವನು ಬರಲಿ. ನಮ್ಮಲ್ಲಿ ಪ್ರವಾದಿ ಇರುವುದು ಅವನಿಗೆ ತಿಳಿಯಲಿ” ಎಂದು ಹೇಳಿದಾಗ ಅರಸನು ಅದೇ ಸಂದೇಶವನ್ನು ಅರಾಮ್ಯ ಅರಸನಿಗೆ ರವಾನಿಸಿದನು.
ನಾನು, ಸಂತೋಷದಿಂದ ಎಲೀಷ ಪ್ರವಾದಿಯಲ್ಲಿಗೆ ಬಂದು, “ಈತನು ನನ್ನನ್ನು ಮುಟ್ಟಿ, ಸವರಿ ವಾಸಿಮಾಡುತ್ತಾನೆ” ಎಂದು ಬಗೆದಿದ್ದೆ. ಆದರೆ, ಆತನಾದರೋ ಒಳಗಿನಿಂದಲೇ “ಹೋಗಿ ಯೋರ್ದನ್ ಹೊಳೆಯಲ್ಲಿ ಏಳುಸಾರಿ ಮುಳುಗೇಳು, ನಿನ್ನ ದೇಹವು ಮುಂಚಿನಂತಾಗುವುದು, ನೀನು ಶುದ್ಧನಾಗುವಿ” ಎಂದು ಹೇಳಿ ಕಳುಹಿಸಿಬಿಟ್ಟನು. ನನ್ನಲ್ಲಿ ಉಕ್ಕಿಬಂದ ಕೋಪ ಅಷ್ಟಿಷ್ಟಲ್ಲ!
“ಏನು, ನಮ್ಮಲ್ಲಿ ಹೊಳೆಗಳಿಲ್ಲವೇ? ಅಲ್ಲಿನ ನೀರು ಇಲ್ಲಿನದಕ್ಕಿಂತ ಉತ್ತಮವಲ್ಲವೇ?” ಹೀಗೆ ನಾನು ಹೇಳಿಕೊಳ್ಳುತ್ತಾ ಸಿರಿಯಾಗೆ ವಾಪಸಾಗಲು ಹೊರಟಿದ್ದಾಗ, ನನ್ನ ಪುಣ್ಯಕ್ಕೆ, ನನ್ನ ಸೇವಕರು, “ಅಪ್ಪನವರೇ, ನೀವಿದೊಂದು ಬಾರಿ ಪ್ರಯತ್ನಮಾಡಿರಿ” ಎಂದು ಒತ್ತಾಯಿಸಿ, ನನ್ನ ಮನಸ್ಸನ್ನು ಬದಲಾಯಿಸಿದರು. ನಾನು, ಯೋರ್ದನ್ ಹೊಳೆಯಲ್ಲಿ ಏಳು ಬಾರಿ ಮುಳುಗಿ ಎದ್ದೆ. ಏನಾಶ್ಚರ್ಯ! ನನ್ನ ದೇಹವು ಕೂಸಿನ ದೇಹದಂತೆ ಶುದ್ಧವಾಯಿತು!
ನನ್ನ ಹೃದಯ ಕೃತಜ್ಞತೆಯಿಂದ ತುಂಬಿಹೋಯಿತು! ನಾನು ತಂದಿದ್ದ ಎಲ್ಲಾ ಅಮೂಲ್ಯ ವಸ್ತ್ರಗಳು ಹಾಗೂ ಬೆಳ್ಳಿಬಂಗಾರಗಳನ್ನು ಆ ದಿವ್ಯಪುರುಷ ಎಲೀಷನಿಗೆ ಕೊಡಲು ಹೋದರೆ ಆತನು ಏನನ್ನೂ ಸ್ವೀಕರಿಸಲಿಲ್ಲ! ಆತನಿಗೆ ಬದಲೇನು ಮಾಡಲಿ? “ ಎಂದು ಚಿಂತಿಸಿ , “ನಾನು ಇನ್ನು ಮೇಲೆ ಏಕದೇವಾರಾಧನೆಯನ್ನು ನನ್ನದಾಗಿಸಿಕೊಳ್ಳುತ್ತೇನೆ” ಎಂದು ಪ್ರತಿಜ್ಞೆಮಾಡಿಕೊಂಡೆ.
ಆದರೆ, ಎಲೀಷನ ಮುಂದೆ ಒಂದು ಕೋರಿಕೆಯನ್ನಿಟ್ಟೆ, “ನನ್ನ ಒಡೆಯನಾದ ಅರಾಮ್ಯ ಅರಸು ಅನ್ಯದೇವರುಗಳಿಗೆ ನಮಿಸುವಾಗ, ನಾನೂ ಹಾಗೆಯೇ ಮಾಡಬೇಕಾಗುತ್ತದೆ. ಇದಕ್ಕಾಗಿ ಸರ್ವೇಶ್ವರನಲ್ಲಿ ಕ್ಷಮೆ ಬೇಡುತ್ತೇನೆ”ಎಂದು ಹೇಳಿ, ನನ್ನ ಸ್ವದೇಶದಲ್ಲಿ ಸರ್ವೇಶ್ವರರಿಗೆ ಸರ್ವಾಂಗಹೋಮವನ್ನು ಸಲ್ಲಿಸಲು ಎರಡು ಹೇಸರಕತ್ತೆಗಳು ಹೊರುವ ಇಸ್ರಾಯೇಲಿನ ಮಣ್ಣನ್ನು ತೆಗೆದುಕೊಂಡು ಹೋದೆ. ಆ ಊರನ್ನು ಬಿಟ್ಟು ಬರುವಾಗ ಎಲೀಷರು “ಸಮಾಧಾನದಿಂದ ಹೋಗು”, ಎಂದು ಆಶೀರ್ವದಿಸಿದರು.
ಹೀಗೆ, ಒಬ್ಬ ಯಃಕಶ್ಚಿತ್, ಅನಾಮಿಕ,ಯೆಹೂದ್ಯ, ಹದಿಹರೆಯದ ದಾಸಿಯ ಮೂಲಕ ನಾಮಾನನಿಗೆ ಚರ್ಮರೋಗ ಗುಣವಾಗಿದ್ದಲ್ಲದೆ ವಿಗ್ರಹಾರಾಧನೆಯಲ್ಲದ ಏಕದೇವೋಪಾಸನೆಯು ಇಸ್ರಾಯೇಲಿನ ಗಡಿಯನ್ನು ದಾಟಿ ಅನ್ಯದೇಶಗಳಲ್ಲಿಯೂ ಹರಡಿತು. ಅಲ್ಲೆಲ್ಲಾ ವ್ಯಾಪಕವಾಗಿದ್ದ ಬಹುದೇವಾರಾಧನೆ ತಗ್ಗಲು ಆಸ್ಪದವಾಯಿತು. ದೇವರ ಮಹಿಮೆ ಎಷ್ಟು ಅಪಾರವಲ್ಲವೇ?
¨ ಡಾ. ಲೀಲಾವತಿ ದೇವದಾಸ್





No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...