ಸಂತ ಪೇತ್ರ ಮತ್ತು ಪೌಲರು ಪುನರುತ್ಥಾನಿ ಪ್ರಭು ಯೇಸುಕ್ರಿಸ್ತ ಅಸ್ತಿವಾರ ಹಾಕಿದ ಕಥೋಲಿಕ ಕ್ರೈಸ್ತ ಪವಿತ್ರ ಧರ್ಮಸಭೆಯನ್ನು ಮುನ್ನಡೆಸಿ ಬೆಳೆಸಲು ತಮ್ಮನ್ನೇ ಸಂಪೂರ್ಣವಾಗಿ ಸಮರ್ಪಿಸಿಕೊಂಡ ಮಹಾನುಭಾವರಲ್ಲಿ ಅಗ್ರಗಣ್ಯರು. ಅಂದಿನ ಏಳು ಬೀಳುಗಳನ್ನು ದಿಟ್ಟತನದಿಂದ ಮೆಟ್ಟಿನಿಂತು ಪವಿತ್ರ ಧರ್ಮಸಭೆಯನ್ನು ಸಮೃದ್ಧಿಗೊಳಿಸಲು ಸದಾ ಸನ್ನದ್ದರಾಗಿ ಎದೆಯೊಡ್ಡಿ ನಿಂತವರು. ಇವರು ಅಂಜಲಿಲ್ಲ ಅಳುಕಲಿಲ್ಲ ಬದಲಾಗಿ ತಮ್ಮ ದಿಟ, ದೃಢ ವಿಶ್ವಾಸದಲ್ಲಿ ಸ್ಥಿರವಾಗಿ ನೆಲೆನಿಂತು ಪ್ರಭುವಿನಿಂದ ವಿಜಯಮಾಲೆ ಪಡೆದವರು. ಅಂತಹ ವೀರ ಸೇವಕರ ಜೀವನದ ಕೆಲ ಘಟನೆಗಳೆಡೆ ಕಣ್ಣಾಯಿಸೋಣ.
ಸಂತ ಪೇತ್ರ
ಪೇತ್ರ ವೃತ್ತಿಯಲ್ಲಿ ಬೆಸ್ತ. ಗಲಿಲೇಯ ಸರೋವರದಲ್ಲಿ ತನ್ನ ಸಹೋದರ ಅಂದ್ರೆಯನೊಡನೆ ಮೀನು ಹಿಡಿಯಲು ಬಲೆ ಬೀಸುತ್ತಾ ಇದ್ದಾಗ "ನನ್ನನ್ನು ಹಿಂಬಾಲಿಸಿ ಬನ್ನಿ, ನಿಮ್ಮನ್ನು ಮನುಷ್ಯರನ್ನೇ ಹಿಡಿಯುವವರನ್ನಾಗಿ ಮಾಡುವೆನು" (ಮತ್ತಾಯ ೪:೧೯) ಎಂದು ಯೇಸು ಕರೆದಾಗ ತಕ್ಷಣವೇ ಬಲೆಗಳನ್ನು ಬಿಟ್ಟು ಯೇಸುವನ್ನು ಹಿಂಬಾಲಿಸಿದರು. ಅಂದಿನಿಂದ ಅವನ ಜೀವನದ ದಿಕ್ಕೇ ಬದಲಾಯಿಸಿತು. ಮೀನು ಹಿಡಿಯುವ ಕಾಯಕದಿಂದ ಮನುಷ್ಯರನ್ನೇ ಹಿಡಿಯುವ ಕಾಯಕಕ್ಕೆ ತನ್ನನ್ನೇ ತೊಡಗಿಸಿಕೊಂಡ. ಕ್ರಿಸ್ತನ ಸರಳ ಜೀವನ ಶೈಲಿ, ಅವರ ಸ್ಪಷ್ಟ ನಿಲುವು, ವಿಭಿನ್ನ ಬೋಧನೆ, ನೇರ ಮತ್ತು ದಿಟ್ಟ ನುಡಿಗಳು ಅವನ ಜೀವನದ ಮೇಲೆ ಅಪಾರ ಪರಿಣಾಮವನ್ನು ಉಂಟುಮಾಡಿತು. ವಿಶೇಷವಾಗಿ ಆಯ್ಕೆಯಾದ ಹನ್ನೆರಡು ಮಂದಿ ಶಿಷ್ಯರಲ್ಲಿ ತಾನು ಪವಿತ್ರ ಧರ್ಮಸಭೆಯ ಮೂಲ ಬಂಡೆಯಾಗುವೆನೆಂದು ಆತ ಕನಸು ಮನಸಿನಲ್ಲಿಯೂ ನೆನೆಸಿರಲಿಲ್ಲ. "ಈ ಬಂಡೆಯ ಮೇಲೆ ನನ್ನ ಧರ್ಮಸಭೆಯನ್ನು ಕಟ್ಟುವೆನು. ಪಾತಾಳಲೋಕದ ಶಕ್ತಿಯು ಅದನ್ನು ಎಂದಿಗೂ ಜಯಿಸಲಾರದು. ಸ್ವರ್ಗಸಾಮ್ರಾಜ್ಯದ ಬೀಗದ ಕೈಗಳನ್ನು ನಿನಗೆ ಕೊಡುವೆನು. ಇಹದಲ್ಲಿ ನೀನು ಏನನ್ನು ಬಂಧಿಸುತ್ತೀಯೋ ಅದನ್ನು ಪರದಲ್ಲಿಯೂ ಬಂಧಿಸಲಾಗುವುದು, ಇಹದಲ್ಲಿ ನೀನು ಏನನ್ನು ಬಿಚ್ಚುತ್ತೀಯೋ ಅದನ್ನು ಪರದಲ್ಲಿಯೂ ಬಿಚ್ಚಲಾಗುವುದು (ಮತ್ತಾಯ ೧೬:೧೮-೧೯) ಎಂದಾಗ ಪೇತ್ರ ಅದನ್ನು ಗ್ರಹಿಸಲಿಲ್ಲ. ಆದರೆ ಕ್ರಿಸ್ತ ಎಸಗಿದ ಪ್ರಮುಖ ಅದ್ಭುತಗಳ ಸಮಯದಲ್ಲಿ ಪೇತ್ರ ಉಪಸ್ಥಿತನಿದ್ದ. ವಿಶೇಷವಾಗಿ ಪ್ರಭುಯೇಸು ಮರುರೂಪ ತಾಳಿದಾಗ ಆನಂದದ ತುತ್ತತುದಿಯನ್ನು ತಲಪಿದ ಪೇತ್ರ "ಪ್ರಭೂ, ನಾವು ಇಲ್ಲೇ ಇರುವುದು ಎಷ್ಟು ಒಳ್ಳೆಯದು!" (ಮತ್ತಾಯ ೧೭:೪) ಎಂದು ಉದ್ಗರಿಸಿದ್ದ. ಅದೇ ಕ್ರಿಸ್ತ ಯೆಹೂದ್ಯ ಪ್ರಮುಖರ ಕೈವಶವಾದಾಗ ದಾಸಿಯೊಬ್ಬಳು "ನೀನು ಸಹ ಗಲಿಲೇಯದ ಯೇಸುವಿನೊಂದಿಗೆ ಇದ್ದವನು" ಎಂದಾಗ "ನೀನು ಹೇಳುವುದು ಏನೆಂದು ನನಗೆ ತಿಳಿಯದು" (ಮತ್ತಾಯ ೨೬:೭೦) ಎಂದು ಸಾರಾಸಗಟಾಗಿ "ಆ ಮನುಷ್ಯನನ್ನು ನಾನು ಖಂಡಿತವಾಗಿ ಅರಿಯೆನು" ಎಂದು ಆಣೆಯಿಟ್ಟು ನಿರಾಕರಿಸುತ್ತಾನೆ. ಆದರೆ ತಕ್ಷಣ ತಪ್ಪಿನ ಅರಿವಾಗಿ ಬಹಳವಾಗಿ ವ್ಯಥೆಪಟ್ಟು ಅಳುತ್ತಾನೆ. ಪೇತ್ರನದು ಬಹು ವಿಚಿತ್ರ ಸ್ವಭಾವ. ಯೇಸು ತಮ್ಮನ್ನು ಹಿಂಬಾಲಿಸುತ್ತಿದ್ದ ಜನ ತಮ್ಮ ಬೋಧನೆ ಪಾಲಿಸಲು ಕಷ್ಟ ಎಂದು ಹಿಂದೆ ಸರಿಯಲು ಪ್ರಾರಂಭಿಸಿದಾಗ ತಮ್ಮ ಶಿಷ್ಯರನ್ನು ನೋಡಿ ನೀವು ಸಹ ಹಿಂದೆ ಸರಿಯುವಿರಾ?” ಎಂದು ಕೇಳಿದಾಗ ಪೇತ್ರ "ಪ್ರಭುವೇ, ನಾವು ಹೋಗುವುದಾದರೂ ಯಾರ ಬಳಿಗೆ?” ನಿತ್ಯ ಜೀವವನ್ನು ಈಯುವ ನುಡಿ ಇರುವುದು ತಮ್ಮಲ್ಲೇ, ತಾವೇ ದೇವರಿಂದ ಬಂದ ಪರಮಪೂಜ್ಯರು" (ಯೊವಾನ್ನ ೬:೬೮-೬೯) ಎಂದು ತನ್ನ ಅಚಲ ವಿಶ್ವಾಸವನ್ನು ವ್ಯಕ್ತಪಡಿಸುತ್ತಾನೆ.
ಪೇತ್ರನಲ್ಲಿ ಆಳವಾಗಿ ಬೇರು ಬಿಟ್ಟಿದ್ದ ವಿಶ್ವಾಸದ ಅಳವನ್ನು ಪ್ರಭು ಅರಿತಿದ್ದರು. ಆದ್ದರಿಂದಲೇ ಪುನರುತ್ಥಾನದ ನಂತರ ಸಿಮೋನ ಪೇತ್ರನನ್ನು ನೋಡಿ, ಯೊವಾನ್ನನ ಮಗನಾದ ಸಿಮೋನನೇ, ಇವರಿಗಿಂತಲೂ ಹೆಚ್ಚಾಗಿ ನೀನು ನನ್ನನ್ನು ಪ್ರೀತಿಸುತ್ತೀಯಾ? ಎಂದು ಮೂರು ಬಾರಿ ಕೇಳಿದಾಗ ಪೇತ್ರ ನೊಂದುಕೊಂಡು "ಪ್ರಭುವೇ, ನಿಮಗೆ ಎಲ್ಲವೂ ತಿಳಿದೇ ಇದೆ" ಎನ್ನುತ್ತಾನೆ. ಇದರ ಮೂಲಕ ಅವನು ತನ್ನನ್ನು ಸಂಪೂರ್ಣವಾಗಿ ಪ್ರಭುವಿಗೆ ಸಮರ್ಪಿಸುತ್ತಾನೆ. ಆತನ ಸಮರ್ಪಣೆಯಲ್ಲಿ ಭರವಸೆ ಇಟ್ಟು "ನನ್ನ ಕುರಿಗಳನ್ನು ಮೇಯಿಸು" (ಯೊವಾನ್ನ ೨೧:೧೫-೧೭) ಎನ್ನುತ್ತಾರೆ ಪ್ರಭು. ಆ ಕ್ಷಣದಿಂದ ಪೇತ್ರ ಕ್ರಿಸ್ತನ ಪರಿಪೂರ್ಣ ದಾಸನಾದ. ತನ್ನತನವನ್ನು ತ್ಯಜಿಸಿ ಕಿಸ್ತನ ಗುಲಾಮನಾದ. ಈಗ ಪೇತ್ರ ಸಂಪೂರ್ಣ ಕ್ರಿಸ್ತಮಯನಾಗಿದ್ದಾನೆ.
ಕ್ರಿಸ್ತನನ್ನು ಹಿಂಬಾಲಿಸಲು ಬದ್ಧತೆ ಬೇಕು ಆ ಬದ್ದತೆಯನ್ನು ಪ್ರಭು ಪೇತ್ರನಲ್ಲಿ ಗುರುತಿಸಿದರು. ಪೇತ್ರ ತನ್ನ ಬದ್ದತೆಯನ್ನು ಉಳಿಸಿಕೊಳ್ಳುತ್ತಾನೆ. ರೋಮ್ ಅಧಿಪತಿ ನೀರೋ ಕ್ರೈಸ್ತರನ್ನು ಹಿಂಸಿಸುತ್ತಿದ್ದ ಅಗ ಕ್ರೈಸ್ತರು ವಿಶ್ವಾಸವನ್ನು ಕಳೆದುಕೊಳ್ಳಬಾರದೆಂದು ಪೇತ್ರ ಹುರಿದುಂಬಿಸಿ ಪ್ರೋತ್ಸಾಹಿಸುತ್ತಾನೆ. ಆದರೆ ತಾನೇ ಆ ಹಿಂಸೆಯಲ್ಲಿ ಸಿಲುಕಿ ಸುಮಾರು ಕ್ರಿಸ್ತಶಕ ೬೪ರಲ್ಲಿ ಶಿಲುಬೆಯಲ್ಲಿ ತಲೆಕೆಳಗಾಗಿ ಜಡಿಸಿಕೊಂಡು ರಕ್ತಸಾಕ್ಷಿಯಾಗುತ್ತಾನೆ.
ಪೇತ್ರನ ಬೋಧನೆಯನ್ನು ಹಾಗೂ ಆತನ ಅಚಲ ವಿಶ್ವಾಸವನ್ನು ಏಷ್ಯಾ ಮೈನರ್ ಸೀಮೆಯ ಉತ್ತರಭಾಗದಲ್ಲಿ ಚದುರಿದ ಕ್ರೈಸ್ತವಿಶ್ವಾಸಿಗಳಿಗೆ ಬರೆದಿರುವ ಎರಡು ಪತ್ರಗಳಲ್ಲಿ ಓದಿ ತಿಳಿದುಕೊಳ್ಳಬಹುದು. ಪ್ರಮುಖವಾಗಿ ಕ್ರೈಸ್ತರು ವಿಶ್ವಾಸವನ್ನು ಕಳೆದುಕೊಳ್ಳಬಾರದು ಹಿಂಸೆಬಾಧೆಗಳು ನಮ್ಮ ವಿಶ್ವಾಸವನ್ನು ಪರಿಶೋಧಿಸುವ ಅಗ್ನಿಕುಂಡ. ನಮ್ಮ ವಿಶ್ವಾಸಕ್ಕೆ ಸಜ್ಜೀವವೆಂಬ ಸತ್ಫಲ ದೊರಕುತ್ತದೆ ಎಂಬ ಅಭಯವನ್ನು ನೀಡುತ್ತಾನೆ. ತಾನೂ ಸಹ ಅಂತಹ ಸತ್ಫಲಕ್ಕಾಗಿ ಸದೃಢ ವಿಶ್ವಾಸದಿಂದ ಎದುರುನೋಡುತ್ತಾ ಕಮರುತ್ತಿದ್ದ ಭರವಸೆ ಚಿಗುರುವಂತೆ ಮಾಡುತ್ತಾನೆ. ಇಂದೂ ಸಹ ಆ ಭರವಸೆಯ ಚಿಗುರು ಬೆಳೆಯುತ್ತಲೇ ಸಾಗಿದೆ.
ಸಂತ ಪೌಲ
ಯೆಹೂದ್ಯ ಧರ್ಮದ ನಿಷ್ಠಾವಂತ ಅನುಯಾಯಿ ಹಾಗೂ ಕ್ರೈಸ್ತ ಧರ್ಮದ ಕಟ್ಟಾ ವಿರೋಧಿಯಾಗಿದ್ದ ಪೌಲ ದಮಸ್ಕಸಿನ ಹಾದಿಯಲ್ಲಿ ಕ್ರಿಸ್ತನ ದರ್ಶನವಾದ ನಂತರ ಸಂಪೂರ್ಣವಾಗಿ ಬದಲಾವಣೆ ಹೊಂದಿದ ವೀರ ಧರ್ಮಪ್ರಚಾರಕ. ತಾರ್ಸುಸ್ ಇವನ ಹುಟ್ಟೂರು. ಅಪ್ಪಟ ಪರಿಸಾಯನಾಗಿದ್ದ ಪೌಲನ ಕಸುಬು ಗುಡಾರ ಕಟ್ಟುವುದು. ಸ್ವಾಭಿಮಾನಿ, ನಿಷ್ಠಾವಂತ ಕ್ರಿಸ್ತನ ಬೋಧನೆಗಳನ್ನು ಪ್ರಾಮಾಣಿಕವಾಗಿ ಪಾಲಿಸಲು ಹಗಳಿರುಳು ಶ್ರಮಿಸಿದ ಅದ್ವಿತೀಯ. ಪ್ರಾರ್ಥನೆ ಇವನ ಉಸಿರಾಗಿತ್ತು. ಪ್ರಭುಕ್ರಿಸ್ತನಲ್ಲಿ ಅನನ್ಯ ಭಕ್ತಿ ವಿಶ್ವಾಸವನ್ನಿಟ್ಟಿದ್ದನು. ಅವರೇ ಮಾನವಕುಲದ ರಕ್ಷಕ. ಅವರಲ್ಲಿ ವಿಶ್ವಾಸವಿಟ್ಟವರು ರಕ್ಷಣೆಹೊಂದುವರು ಎಂದು ಬಹಿರಂಗವಾಗಿ ಬೋಧಿಸುತ್ತಿದ್ದನು. ಮಾತ್ರವಲ್ಲದೆ ರಕ್ಷಣೆಹೊಂದಲು ಪ್ರಭುಕ್ರಿಸ್ತನಲ್ಲಿ ಪೂರ್ಣವಿಶ್ವಾಸವೇ ಅಡಿಗಲ್ಲು. ಅವರ ಬೋಧನೆಗಳನ್ನು ಸಿದ್ದಿಗೆ ತರುವುದರಲ್ಲಿ ರಕ್ಷಣೆಯ ದ್ವಾರ ತೆರೆದುಕೊಳ್ಳುತ್ತದೆ. ಈ ರಕ್ಷಣೆ ಯೆಹೂದ್ಯರಿಗೆ ಮಾತ್ರ ಸೀಮಿತವಲ್ಲ. ಪ್ರಭು ಯೇಸುವೇ ’ಕ್ರಿಸ್ತ’ ಎಂದು ಯಾರು ಪೂರ್ಣ ನಂಬಿಕೆ ಇಡುತ್ತಾರೋ ಅವರೆಲ್ಲರು ರಕ್ಷಣೆಗೆ ಅರ್ಹರು ಎಂದು ಅನ್ಯಧರ್ಮೀರನ್ನೂ ಕ್ರಿಸ್ತನ ಅನುಯಾಯಿಗಳಾಗಲು ಮುಕ್ತವಾಗಿ ಆಹ್ವಾನಿಸುತ್ತಾನೆ.
ಕ್ರಿಸ್ತನಲ್ಲಿ ರಕ್ಷಣೆ ಹೊಂದಲು ಯೆಹೂದ್ಯ ಧರ್ಮದ ಸುನ್ನತಿ ಅವಶ್ಯಕತೆ ಇಲ್ಲ ಎಂದು ಸ್ಪಷ್ಟವಾಗಿ ಹೇಳಿ ತನ್ನ ಮೂಲಧರ್ಮದವರಲ್ಲಿದ್ದ ತಪ್ಪು ಕಲ್ಪನೆಗೆ ತಿಲಾಂಜಲಿ ಹಾಡಿ ಆ ಧರ್ಮದ ಪ್ರಮುಖರ ಕೊಪಾಗ್ನಿಗೆ ಒಳಗಾದರೂ ತನ್ನ ನಂಬಿಕಯನ್ನೂ ಮಾತ್ರ ಬದಲಾಯಿಸಿಕೊಳ್ಳಲಿಲ್ಲ. ಬದಲಾಗಿ ದಿಟ್ಟತನದಿಂದ ಕ್ರಿಸ್ತನ ಸುವಾರ್ತೆ ಸಾರುವುದರಲ್ಲಿ ತನ್ನನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳುತ್ತಾನೆ. ವಿಶೇಷವಾಗಿ ಪ್ರಭು ನಮಗೋಸ್ಕರ ಪ್ರಾಣತ್ಯಾಗ ಮಾಡಿದರು ಎಂಬುದನ್ನು ಹೀಗೆ ಹೇಳತ್ತಾನ. ನೀತಿವಂತನಿಗಾಗಿ ಒಬ್ಬನು ತನ್ನ ಪ್ರಾಣಕೊಡುವುದು ವಿರಳ. ಸತ್ಪುರುಷನಿಗಾಗಿ ಒಬ್ಬನು ತನ್ನ ಪ್ರಾಣವನ್ನು ಕೊಟ್ಟರೂ ಕೊಟ್ಟಾನು. ಆದರೆ ನಾವಿನ್ನೂ ಪಾಪಿಗಳಾಗಿರುವಾಗಲೇ ಕ್ರಿಸ್ತಯೇಸು ನಮಗೋಸ್ಕರ ಪ್ರಾಣತ್ಯಾಗ ಮಾಡಿದರು (ರೋಮಾ ೫:೭) ಎಂದು ಸ್ಪಷ್ಟಪಡಿಸುತ್ತಾನೆ. ಪ್ರಭುವಿನಿಂದ ಮಾತ್ರ ಮಾನವಕುಲದ ರಕ್ಷಣೆ ಎಂಬುದನ್ನು ಈ ಮೂಲಕ ದೃಢೀಕರಿಸುತ್ತಾ: ’ಇಹಲೋಕದ ಆಚಾರವಿಚಾರಗಳಿಗೆ ಮಾರುಹೋಗಬೇಡಿ. ಬದಲಿಗೆ, ಮಾನಸಾಂತರಗೊಂಡು ನೂತನ ಜೀವಿಗಳಾಗಿ ಬಾಳಿರಿ. ಆಗ ನೀವು ದೇವರ ಚಿತ್ತಾನುಸಾರ ಯಾವುದು ಉತ್ತಮವಾದುದು, ಯಾವುದು ಉನ್ನತವಾದುದು, ಯಾವುದು ಉತ್ಕೃಷ್ಟವಾದುದು ಎಂಬುದನ್ನು ಅರಿತುಕೊಳ್ಳುವಿರಿ’ (ರೋಮಾ ೧೨:೨) ಎಂದು ಎಚ್ಚರಿಸುತ್ತಾ ಕ್ರಿಸ್ತನಿಗೆ ಮೆಚ್ಚುಗೆಯಾಗುವ ಜೀವನದೆಡೆಗೆ ತಿರುಗಿಕೊಳ್ಳಲು ನಿಮ್ಮ ಪ್ರೀತಿ ನಿಷ್ಕಪಟವಾಗಿರಲಿ. ಕೆಟ್ಟದ್ದನ್ನು ದ್ವೇಷಿಸಿರಿ. ಒಳ್ಳೆಯದನ್ನು ಕೈಬಿಡದಿರಿ. ಸೋದರಭಾವನೆಯಿಂದ ಒಬ್ಬರನ್ನೊಬ್ಬರು ಪ್ರೀತಿಸಿರಿ. ಗೌರವ ತೋರಿಸುವುದರಲ್ಲಿ ಒಬ್ಬರಿಗಿಂತ ಒಬ್ಬರು ಮುಂದಾಗಿರಿ. ಪ್ರಭುವಿನ ಸೇವೆಯಲ್ಲಿ ಆಲಸಿಗಳಾಗದೆ ಅತ್ಯಾಸಕ್ತರಾಗಿರಿ. ನಂಬಿಕೆ ನಿರೀಕ್ಷೆಯನ್ನು ಹೊಂದಿರುವ ನೀವು ಉಲ್ಲಾಸದಿಂದಿರಿ. ಸಂಕಟ ಬಂದಾಗ ಸಹನೆಯಿಂದಿರಿ. ಬೇಸರಗೊಳ್ಳದೆ ಪ್ರಾರ್ಥನೆ ಮಾಡಿರಿ. ಕೊರತೆಯಲ್ಲಿರುವ ದೇವಜನರಿಗೆ ನೆರವುನೀಡಿರಿ. ಅತಿಥಿಸತ್ಕಾರದಲ್ಲಿ ತತ್ಪರರಾಗಿರಿ’ ಎಂದು ಕರೆ ನೀಡುತ್ತಾನೆ. ಹಾಗೆಯೇ ತನ್ನ ಬೋಧನೆಯನ್ನು ಮುಂದುವರಿಸುತ್ತ ನಿಮ್ಮನ್ನು ಹಿಂಸಿಸುವವರನ್ನು ಆಶೀರ್ವದಿಸಿರಿ. ಹೌದು, ಶಪಿಸದೆ ಆಶೀರ್ವದಿಸಿರಿ. ಸಂತೋಷ ಪಡುವವರೊಂದಿಗೆ ಸಂತೋಷಪಡಿರಿ; ದುಃಖಿಸುವವರೊಡನೆ ದುಃಖಿಸಿರಿ. ನಿಮ್ಮನಿಮ್ಮಲ್ಲಿ ಸಾಮಸ್ಯವಿರಲಿ, ದೊಡ್ಡಸ್ತಿಕೆಯಿಂದ ವರ್ತಿಸಬೇಡಿ. ದೀನದಲಿತರೊಡನೆ ಗೆಳೆತನ ಬೆಳೆಸಿರಿ. ನೀವೇ ಜಾಣರೆಂದು ಭಾವಿಸದಿರಿ. ಕೇಡಿಗೆ ಪ್ರತಿಯಾಗಿ ಕೇಡನ್ನು ಮಾಡದಿರಿ. ಎಲ್ಲರ ದೃಷ್ಟಿಯಲ್ಲಿ ಯಾವುದು ಮಾನ್ಯವೋ ಅದನ್ನೇ ಮಾಡಿರಿ. ಸಾಧ್ಯವಾದ ಮಟ್ಟಿಗೆ ಸರ್ವರೊಂದಿಗೂ ಸಮಾಧಾನದಿಂದ ಬಾಳಿರಿ. ಪ್ರಿಯರೇ, ಮುಯ್ಯಿಗೆ ಮುಯ್ಯಿ ತೀರಿಸಬೇಡಿ (ರೋಮಾ ೧೨:೯-೧೯) ಎಂದು ಕ್ರಿಸ್ತನ ಅನುಯಾಯಿಗಳಲ್ಲಿ ಇರಬೇಕಾದ ಸದ್ಗುಣಗಳ ಬಗ್ಗೆ ಸವಿವರವಾಗಿ ವಿವರಿಸಿ ದೇವಜನರನ್ನು ಸದಾ ಸನ್ಮಾರ್ಗದಲ್ಲಿ ಸಾಗಲು ಪ್ರೇರಣೆಯನ್ನೀಯುತ ಮುನ್ನೆಡೆಸಿದ ಪ್ರಾಮಾಣಿಕ ಸೇವಕ ಪೌಲ.
ಪೌಲನಂತವರು ವಿಶ್ವದಲ್ಲಿ ಮತ್ತೆ ಹುಟ್ಟುವರೇ ... ಕಂಡಿತವಾಗಿಯೂ ಇಲ್ಲ ಎಂತಲೇ ಹೇಳಬಹುದು ಏಕೆಂದರೆ ದೇವರ ಸೃಷ್ಟಿ ಬಹು ವಿಚಿತ್ರವಾದುದು, ಅಗಾಧವಾದುದು ಅನನ್ಯವಾದುದು. ಪೌಲ ಒಬ್ಬ ವಿಶೇಷ ಹಾಗೂ ವಿಶಿಷ್ಟ ವ್ಯಕ್ತಿ. ಆತನ ಅಂತಿಮ ಕ್ಷಣಗಳ ಬಗ್ಗೆ ಖಚಿತ ಮಾಹಿತಿಗಳಿಲ್ಲ, ಆತ ಸುಮಾರು ಕ್ರಿಸ್ತಶಕ ೬೨-೬೪ರಲ್ಲಿ ರೋಮಿನ ಇಟಲಿಯಲ್ಲಿ ತಾನು ಹಿಂಸಿಸಿ ಪ್ರೀತಿಸಿದ ಪ್ರಭುಕ್ರಿಸ್ತನಿಗಾಗಿ ರಕ್ತಸಾಕ್ಷಿಯಾಗುತ್ತಾನೆ. ಅವನ ಬದುಕು ಕ್ರಿಸ್ತಮಯವಾಗಿತ್ತು ಹಾಗೂ ವಿಶ್ವಾಸದ ಉತ್ತುಂಗ ಶಿಖರವಾಗಿತ್ತು.
¨ ಫಾದರ್ ವಿಜಯ ಕುಮಾರ್ ಪಿ. ಬಳ್ಳಾರಿ
No comments:
Post a Comment