Tuesday, 12 June 2018

ಕೊನೇ ಮಾತು. . .




ಕತಾರು, ಮತ್ಯಾರು?


ಕಳೆದ ಕ್ರಿಸ್ತಜಯಂತಿಯ ಹೊತ್ತಲ್ಲಿ ಕತಾರ್ ದೇಶವನ್ನು ಸುತ್ತಿ ಬರುವ ಅವಕಾಶ ಸಿಕ್ಕಿತು. ಬೆಂಗಳೂರಿನಿಂದ ಐದಾರು ಗಂಟೆಗಳ ಪಯಣ. ವಿಮಾನದಲ್ಲಿ ಕೇಳಿದ್ದೆಲ್ಲವನ್ನೂ ಕೊಡುತ್ತಾರೆ ಎಂಬ ಮಾಹಿತಿ ನಂಬಿ ಕುಳಿತರೆ, ಎದುರಾಗಿದ್ದು ಗುಲಗಂಜಿ. ಮತ್ತೊಮ್ಮೆ ಕೇಳಲು ಸಂಕೋಚ. ಹಾಗಾಗಿ ಅರ್ಧಹೊಟ್ಟೆ! ಕತಾರಿನ ಸಮಯ ಭಾರತಕ್ಕಿಂತ ಎರಡೂವರೆ ತಾಸು ಹಿಂದಿದೆ. ಹಾಗಾಗಿ ನಿದ್ದೆಯಲ್ಲಿ ವ್ಯತ್ಯಾಸವಾಯಿತು. ಸಂಜೆ ನಾಲ್ಕಕ್ಕೆಲ್ಲಾ ಕತ್ತಲು ಕವಿಯುತ್ತಿತ್ತು. ಬೆಳಗ್ಗೆ ಬೇಗನೆ ಬೆಳಗು. ಹನ್ನೊಂದಕ್ಕೆಲ್ಲಾ ಸುಡುಬಿಸಿಲು. ದಾರಿ ಬಿಕೋ ಎನ್ನುತ್ತಿತ್ತು. ನಮ್ಮೂರಿನ ಹಾಗೆ ಕಿಕ್ಕಿರಿದ ಜನಸಂದಣಿಯಿಲ್ಲ. ಜನ ನೋಡಬೇಕೆಂದರೆ ಅಲ್ಲಿನ ಬೆಂಕಿಪೆಟ್ಟಿಗೆಗಳಂಥ ಲೇಬರ್ ಕ್ಯಾಂಪುಗಳನ್ನು ಸುತ್ತಿ ಬರಬೇಕು. ಇಲ್ಲವೇ ಮಾಲ್ ಗಳನ್ನು ಹತ್ತಿಳಿಯಬೇಕು. ವಾಣಿಜ್ಯ ಕಟ್ಟಡಗಳನ್ನು ಹೊರತುಪಡಿಸಿ, ಮಿಕ್ಕ ಮನೆಗಳೆಲ್ಲಾ ಒಂದು ಮಹಡಿಯವೇ ಹಾಗೂ ಇಂತಿಷ್ಟು ವರ್ಷಗಳಲ್ಲಿ ನೆಲಸಮ ಮಾಡಬೇಕೆಂಬ ಷರತ್ತಿದೆ. ಎಲ್ಲ ಮನೆಗಳಿಗೂ ಸಾಮಾನ್ಯವಾಗಿ ಒಂದೇ ಬಣ್ಣ. ಎತ್ತರದ ಕಾಂಪೌಂಡು ಗೋಡೆ. ಕತಾರಿನಲ್ಲಿ ಕತ್ತಲು ಬೆಳಕು ಎನ್ನುವ ವ್ಯತ್ಯಾಸವಿಲ್ಲ. ಬಹುತೇಕ ಎಲ್ಲಾ ಕಟ್ಟಡಗಳು ನೀಲಿ, ಹಳದಿ, ಕೆಂಪು, ಹಸಿರು ಇನ್ನಿತ್ಯಾದಿ ಬಣ್ಣಗಳಿಂದ ನೂರ್ಕಾಲ ಝಗಮಗಿಸುತ್ತಾ ಇರುತ್ತವೆ. ನಗರದ ಒಂದು ಕಡೆಯಲ್ಲಿ ನಿಂತು ನೋಡಿದರೆ ಅರ್ಧರಾತ್ರಿಯಲ್ಲೂ ಅರ್ಧ ಫರ್ಲಾಂಗುವರೆಗೆ ಸ್ಪಷ್ಟ ಕಾಣುವಷ್ಟು ಬೆಳಕಿದೆ. ಕರ್ನಾಟಕದಷ್ಟೇ ವಿಸ್ತೀರ್ಣ ಹೊಂದಿದ್ದರೂ ಜಗತ್ತಿನ ಅತ್ಯಂತ ಶ್ರೀಮಂತ ದೇಶ ಕತಾರ್.
ಇತ್ತೀಚಿನ ಬೆಳವಣಿಗೆಗಳಲ್ಲಿ ಎಲ್ಲಾ ರಾಷ್ಟ್ರಗಳು ತಮ್ಮ ಬೆಂಬಲವನ್ನು ಹಿಂತೆಗೆದುಕೊಂಡಾಗ, ಇಡೀ ಕತಾರ್ ದೇಶವೇ ನಾವಿದ್ದೇವೆಎಂದು ಅಲ್ಲಿನ ರಾಜಕುಮಾರರಿಗೆ ನೈತಿಕ ಬೆಂಬಲ ನೀಡಿತು. ಅದರ ಪರಿಣಾಮವಾಗಿ ಮನೆಗಳಲ್ಲಿ, ಮಹಲ್ಲುಗಳಲ್ಲಿ, ಅಂಗಡಿಗಳಲ್ಲಿ, ಟ್ಯಾಕ್ಸಿಗಳ ಮೇಲೆ, ಎಲ್ಲೆಂದರಲ್ಲಿ ರಾಜಕುಮಾರನ ಚಿತ್ರ ಅಂಟಿಸಿದ್ದಾರೆ. ತರದ ನೈತಿಕ ಬೆಂಬಲ ದೊರೆತ ಮೇಲೆ ಪ್ರಪಂಚದ ಬೆಂಬಲವಿಲ್ಲದಿದ್ದರೂ ಕತಾರ್ ಎಂದಿನದೇ ಸ್ಥಾನದಲ್ಲಿದೆ.
ಕತಾರಿನ ದೋಹಾ ಎಂಬಲ್ಲಿ ಜಪಮಾಲೆ ಮಾತೆಯ ದೇವಾಲಯವಿದೆ. ನಾವು ಚರ್ಚುಗಳನ್ನು ಶಿಲುಬೆ ನೋಡಿ ಗುರುತು ಹಿಡಿಯುತ್ತೇವಲ್ಲಾ, ಅಲ್ಲಿ ಚರ್ಚುಗಳ ಮೇಲೆ ಶಿಲುಬೆ ಇರುವುದಿಲ್ಲ. ಅದಕ್ಕೆ ಅವಕಾಶವೂ ಇಲ್ಲ. ಬಲಿಪೀಠದ ಬಳಿಯಲ್ಲಿರುವ ದೇವದಂಡವನ್ನು ಹೊರತುಪಡಿಸಿದರೆ ಎಲ್ಲಿಯೂ ಶಿಲುಬೆಯ ಸುಳಿವಿಲ್ಲ. ಭಕ್ತಾದಿಗಳು ಶಿಲುಬೆ ಗುರುತು ಹಾಕುವಾಗ ಮಾತ್ರ ಶಿಲುಬೆ ಎಲ್ಲರಲ್ಲೂ ಕಾಣುತ್ತದೆ. ಅವಶ್ಯ ಭದ್ರತೆಯ ಮೇರೆಗೆ ಪ್ರಾರ್ಥಿಸಲು, ಬಲಿಪೂಜೆ ಸಲ್ಲಿಸಲು ಚರ್ಚುಗಳಿಗೆ ಅವಕಾಶ ಕಲ್ಪಿಸಲಾಗಿದೆ. ಆಂಗ್ಲ, ಫಿಲಿಪ್ಪಿಯನ್, ಅರಬ್ಬಿ ಮುಂತಾದ ಭಾಷೆಗಳ ಜೊತೆಯಲ್ಲಿ, ಮಲಯಾಳಂ ಸಹ ಇದೆ. ಶುಭಸಂದೇಶ ಓದುವಾಗ ಮೇಣದ ಬತ್ತಿಯ ಬೆಳಕಿರುತ್ತದೆ. ಶಾಂತಿ ಕೋರುವಾಗ ಅಕ್ಕಪಕ್ಕದವರಿಗೆ ಮಾತ್ರವಲ್ಲದೆ, ತಮ್ಮ ಸುತ್ತಮುತ್ತ ಇರುವ ಎಲ್ಲರಿಗೂ ಶಾಂತಿ ಕೋರಿದ್ದು ವಿಶೇಷವಾಗಿ ತೋರಿತು. ದೇವಾಲಯದಲ್ಲಿ ಶಿಶು ಹಾಗೂ ತಾಯಂದಿರಿಗಾಗಿ ಪ್ರತ್ಯೇಕ ಏಂಜೆಲ್ ರೂಮ್ಕೊಠಡಿ ಇದೆ. ಚಿಕ್ಕ ಕೆಫೆಟೇರಿಯವೂ, ಶೌಚಾಲಯವೂ ಇದೆ. ಲೂರ್ದುಮಾತೆಯ ಗವಿಯಲ್ಲಿ ನೀರ ಹರಿವು ಸದಾಕಾಲ ಇತ್ತು. ಬಲಭಾಗದಲ್ಲಿ ಮೇಣದ ಬತ್ತಿ ಹಚ್ಚಿಡಲು ವ್ಯವಸ್ಥೆಯಿತ್ತು. ಗಾಳಿಗೆ ದೀಪ ಆರಿ ಹೋಗದಂತೆ ಗಾಜಿನ ಕಿಟಕಿ ಇತ್ತು.

¨ ಸಮೀಶಾ


No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...