“ಈ ಜೂನ್ ತಿಂಗಳ 17 ರಂದು ಅಪ್ಪನಿಗೋಸ್ಕರ ಕೊಂಚ ಸಮಯ ಮಾಡಿಕೊಂಡು
ನಮ್ಮ ಜೀವನದಲ್ಲಿ ಅವರಿಗಿರುವ ಪ್ರಾಮುಖ್ಯತೆಯನ್ನು ತೋರಿಸಿಕೊಡೋಣ”
--------------------------------------------------------------------------------------------------------------------------
ಕಳೆದ ತಿಂಗಳ ಎರಡನೆಯ ಭಾನುವಾರದಂದು ನಾವು ವಿಶ್ವ ತಾಯಂದಿರ ದಿನವನ್ನು ಆಚರಿಸಿದೆವು. ನಮ್ಮ ನಮ್ಮ ತಾಯಂದಿರಿಗೆ ವಿವಿಧ ರೀತಿಯ ಉಡುಗೊರೆಗಳ ಮುಖೇನ ಖುಷಿ ಪಡಿಸಿದೆವು. ಆದರೆ ಅಪ್ಪನ ದಿನ ನಮ್ಮಲ್ಲಿ ಎಷ್ಟು ಮಂದಿಗೆ ಗೊತ್ತಿದೆ. ಅಪ್ಪ ಎಂಬ ಆ ವೀರನನ್ನು ಅಂದು ನಾವು ಎಷ್ಟು ಖುಷಿ ಪಡಿಸುತ್ತೇವೆ? ಹೌದು ಪ್ರತಿ ವರ್ಷ ಮೇ ಎರಡನೆಯ ಭಾನುವಾರದಂದು ತಾಯಂದಿರ ದಿನವನ್ನು ಆಚರಿಸುವಂತೆ ವಿಶ್ವವು ಜೂನ್ ತಿಂಗಳ ಮೂರನೇ ಭಾನುವಾರವನ್ನು ತಂದೆಯಂದಿರ ದಿನವನ್ನಾಗಿ ಆಚರಿಸುವುದು. ಈ ದಿನವನ್ನೊಮ್ಮೆ ಮನಸ್ಸಿನಲ್ಲಿಟ್ಟು ನಮ್ಮ ಬದುಕು ರೂಪಿಸಿ, ಜೀವನದ ಪಾಠ ಕಲಿಸಿ, ಕೈಬೆರಳು ಹಿಡಿದು ಮುನ್ನಡೆಸಿದ ವೀರನನ್ನು ನಾವೊಮ್ಮೆ ಉತ್ತುಂಗಕ್ಕೇರಿಸಿ, ಗೌರವದಿಂದ ಶುಭ ಕೋರಿ ಖುಷಿಪಡಿಸೋಣ. ಇದನ್ನೇ ದೇವರು ನಮಗಿತ್ತ ಆಜ್ಞೆಗಳಲ್ಲಿ ಸಹ ನಾವು ಕಾಣುತ್ತೇವೆ. ದೇವರ ನಾಲ್ಕನೆಯ ಆಜ್ಞೆ ನಮಗೆ ಹೇಳುವಂತೆ ನಾವು ನಮ್ಮ ತಂದೆ ತಾಯಿಗಳನ್ನು ನಾವು ಗೌರವಿಸಬೇಕು. ತಂದೆ ತಾಯಿಯರಿಗೆ ನಾವು ಸಮಾನ ಗೌರವವನ್ನು ನೀಡಿ ಧನ್ಯರಾಗೋಣ.
1909ರಲ್ಲಿ ಸ್ಪೋಕೇನ್ನ ಸೆಂಟ್ರಲ್ ಮೆಥೊಡಿಸ್ಟ್ ಎಪಿಸ್ಕೊಪಲ್ ಚರ್ಚಿನ ಒಂದು ಭಾನುವಾರ ಮಾತೃ ದಿನದಾಚರಣೆಯ ಧರ್ಮೋಪದೇಶವನ್ನು ಆಲೈಸುತ್ತಾ ವಾಷಿಂಗ್ಟನ್ನ ಸೊನೋರಾ ಸ್ಮಾರ್ಟ್ ದೋಡ್ ತಂದೆಯನ್ನು ಗೌರವಿಸಲು ಯೋಚಿಸಿ ಮತ್ತು 1910ರ ಜೂನ್ 19 ರಂದು ತಂದೆಯನ್ನು ಸನ್ಮಾನಿಸಿದಳು. ಪಿತೃಸಮಾನರೆಲ್ಲರನ್ನೂ ಗೌರವಿಸುವ ಆಚರಣೆಗೆ ಅಧಿಕೃತವಾಗಿ ಚಾಲನೆ ಕೊಟ್ಟ ಮೊದಲಿಗಳಾದಳು ಆಕೆ.
ಇದನ್ನು ಅಧಿಕೃತ ರಜಾದಿನವೆಂದು ಪರಿಗಣಿಸಲು ಅನೇಕ ವರ್ಷಗಳೇ ಹಿಡಿದವು. YWCA, YMCA ಮತ್ತು ಚರ್ಚುಗಳ ಬೆಂಬಲವಿದ್ದರೂ ಕೂಡಾ ಕ್ಯಾಲೆಂಡರಿನಲ್ಲಿ ಇದು ತಪ್ಪಿ ಹೋಗಿ ಬಿಡುತ್ತಿತ್ತು. ಮಾತೃ ದಿನಾಚರಣೆಯನ್ನು ಹುಮ್ಮಸ್ಸಿನಿಂದ ಆಚರಿಸಿದರೆ ತಂದೆಯ ದಿನಾಚರಣೆಯು ನಗೆಪಾಟಲಿಗೆ ಈಡಾಯಿತು. ನಿಧಾನವಾಗಿ ಗಂಭೀರ ಚಿಂತನೆ ಶುರುವಾಯಿತಾದರೂ ಅದು ಸದುದ್ದೇಶದಿಂದ ಕೂಡಿರಲಿಲ್ಲ. ಪತ್ರಿಕೆಗಳಲ್ಲಿ ಹಾಸ್ಯಕ್ಕೀಡಾದ ಇದು ಕುಚೋದ್ಯಕ್ಕೆ, ವಿಕೃತ ಅಣಕಬರಹಕ್ಕೆ ಮತ್ತು ಹಾಸ್ಯಕ್ಕೆ ಗುರಿಯಾಯಿತು. ಮುಂದೊಂದು ದಿನ "ತಾತಂದಿರ ದಿನ", "ವೃತ್ತಿಪರ ಕಾರ್ಯದರ್ಶಿಗಳ ದಿನ" ಎಂದು ಕ್ಯಾಲೆಂಡರ್ ತುಂಬುವುದಕ್ಕೆ ದಾರಿಯಾಗುತ್ತಾ ಕೊನೆಗೆ "ಮೇಜನ್ನು ಸ್ವಚ್ಛಗೊಳ್ಳಿಸುವ ರಾಷ್ಟೀಯ ದಿನ" ಅನ್ನುವ ಮಟ್ಟಕ್ಕೂ ಇದು ಇಳಿದು ಬಿಡುತ್ತದೆ ಎಂದು ಅನೇಕರು ಹುಬ್ಬೇರಿಸಿದರು.
1913 ರಲ್ಲಿ ಇದಕ್ಕೊಂದು ಮಸೂದೆಯನ್ನು ಮಂಡಿಸಲಾಯಿತು. ಅಮೇರಿಕಾದ ಅಧ್ಯಕ್ಷ ಕಾಲ್ವಿನ್ ಕೂಲಿಡ್ಜ್ 1924 ರಲ್ಲಿ ಇದನ್ನು ಬೆಂಬಲಿಸಿದರು ಮತ್ತು 1930ರಲ್ಲಿ ರಜೆಯನ್ನು ಅಧಿಕೃತಗೊಳಿಸಬೇಕೇ ಎಂಬುದನ್ನು ಪರಿಶೀಲಿಸಲು ವರ್ತಕರನ್ನೊಳಗೊಂಡ ರಾಷ್ಟೀಯ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷ ಲಿಂಡನ್ ಜಾನ್ಸನ್ 1966ರಲ್ಲಿ ಹೊರಡಿಸಿದ ಆಜ್ಞೆಯಿಂದಾಗಿ ಜೂನ್ ಮೂರನೆಯ ಭಾನುವಾರವು ಅಪ್ಪನ ದಿನದ ಸಲುವಾಗಿ ಸಾರ್ವತ್ರಿಕ ರಜಾ ದಿನವಾಯಿತು. ಈ ಆಚರಣೆ ಭಾರತದಲ್ಲೂ ಸಹ ಪ್ರಾಮುಖ್ಯತೆ ಪಡೆದುಕೊಂಡಿತು.
ಅಪ್ಪ ಎಂದಾಗ ಎದುರ್ಗೊಳ್ಳುವ ಅದೆಂತದೋ ಸೆಳೆತ. ಪ್ರತಿ ಮಗುವಿಗೂ ತಿದ್ದಿ ತೀಡುವ ತಂದೆ-ತಾಯಿ ದೇವರ ಸಮಾನ ಎಂದೇ ಭಾವಿಸುವ ಸಂಸ್ಕೃತಿ ನಮ್ಮದು. ಈ ಸಂಸ್ಕೃತಿಯೇ ಕೂಡು ಕುಟುಂಬದ ಸೂತ್ರವೂ ಹೌದು. ಆದರೆ ಇತ್ತೀಚಿನ ದಿನಗಳಲ್ಲಿ ಆಧುನಿಕತೆ, ಔದ್ಯೋಗಿಕ ಪರಿಸರ,ನಾಗರಿಕತೆ ಬೆಳೆದಂತೆ ಅವಿಭಕ್ತ ಕುಟುಂಬಗಳು ಮರೆಯಾದರೂ ತಂದೆತಾಯಿ ಮಕ್ಕಳೊಂದಿಗೆ ಜೀವನ ನಡೆಸುವ ಪುಟ್ಟ ಕುಟುಂಬಗಳು ಹೆಚ್ಚಾಗುತ್ತಿವೆ.
ಇದರಲ್ಲಿ ತಂದೆತಾಯಿ ತಮ್ಮ ಪ್ರೀತಿಯ ಧಾರೆಯನ್ನೆಲ್ಲ ಇರುವ ಒಂದಿಬ್ಬರು ಮಕ್ಕಳಿಗೆ ಎರೆದಿರುತ್ತಾರೆ. ಅದೇ ರೀತಿ ಮಕ್ಕಳಿಂದ ತಂದೆತಾಯಿ ಸಹ ಅದೆಷ್ಟೋ ಭರವಸೆಗಳನ್ನಿಟ್ಟುಕೊಂಡು ಬದುಕುವುದು ಸಾಮಾನ್ಯ. ತಾಯಿಯನ್ನು ಕಂಡರೆ ಸಲುಗೆ, ಏನೇ ಮಾಡಿದರೂ ಅಮ್ಮ ಬುದ್ದಿ ಹೇಳಿ ಸಲಹುವ ರೀತಿಯೇ ಬೇರೆ. ತಂದೆ ಎಂದರೆ ಏನೋ ಒಂದು ರೀತಿ ಅವ್ಯಕ್ತ ಭಯ. ಮೊದಲೆಲ್ಲ ಅಪ್ಪನ ಗದರಿಕೆ ಮಾತ್ರ ಕಾಣುತ್ತಿದ್ದ ಕಣ್ಣಿಗೆ ಬೆಳೆಯುತ್ತಿದ್ದಂತೆ ರಕ್ಷಣೆಯ ದ್ಯೋತಕವಾಗಿ ನಮ್ಮನ್ನೆಲ್ಲ ಪೊರೆಯುವ ಪಾಲಕನಾಗಿ ಎಲ್ಲ ಅವಶ್ಯಕತೆಗಳನ್ನು ಪೂರೈಸುವವರಾಗಿ ಗೋಚರಿಸುತ್ತಾರೆ.
ಅಪ್ಪ ಎಂದರೆ ರಕ್ಷಣೆ, ಅಮ್ಮ ಎಂದರೆ ಪ್ರೀತಿ ಎಂದೇ ವ್ಯಾಖ್ಯಾನಿಸಲಾಗುವ ಈ ಸಂಬಂಧದ ಬಗ್ಗೆ ಹೇಳುವುದು ಕಷ್ಟವಾದರೂ ಪ್ರತಿ ಮಗು ಅಪ್ಪನೊಂದಿಗೆ ಹೊಂದಿರುವ ಬಾಂಧವ್ಯವನ್ನು ಅನುಭವಿಸಿಯೇ ಬೆಳೆಯಬೇಕು. ಅದು ಮಕ್ಕಳ ಏಳಿಗೆಯಲ್ಲಿ ಪ್ರತಿಫಲನವಾಗದೇ ಇರದು. ತಾಯಿಯೊಂದಿಗೆ ನಕ್ಕು ನಲಿಯುವ ಮಕ್ಕಳು ತಂದೆಯಿಂದ ಅನತಿ ದೂರದಲ್ಲೇ ನಿಂತು ಆಜ್ಞೆಗಳನ್ನು ಪಾಲಿಸುತ್ತಾ ಅವಶ್ಯಕತೆಗಳು ಬಂದಾಗ ಹಿಂಜರಿಯುತ್ತಲೇ ಅಪ್ಪನಿಗೆ ಹೇಳುತ್ತಿದ್ದ ಮಕ್ಕಳು ಅಪ್ಪನ ಮಾತುಗಳನ್ನು ಮೀರದೆ ಆ ಸಂಬಂಧಕ್ಕೆ ಒಂದು ಗೌರವ ತಂದುಕೊಟ್ಟಿರುತ್ತಾರೆ.
ಈ ಜೂನ್ ತಿಂಗಳ 17 ರಂದು ಅಪ್ಪನಿಗೋಸ್ಕರ ಕೊಂಚ ಸಮಯ ಮಾಡಿಕೊಂಡು ನಮ್ಮ ಜೀವನದಲ್ಲಿ ಅವರಿಗಿರುವ ಪ್ರಾಮುಖ್ಯತೆಯನ್ನು ತೋರಿಸಿಕೊಡೋಣ.
¨ ದೀಪ್ತಿ ಪ್ರಾನ್ಸಿಸ್ಕಾ
No comments:
Post a Comment