Thursday, 13 December 2018

‘ಜೊಯ್ ನೋಯೆಲ್’ ಅಥವಾ ‘ಮೆರ್ರಿ ಕ್ರಿಸ್ಮಸ್’.


¨ ಪ್ರಶಾಂತ್ ಇಗ್ನೇಷಿಯಸ್

1914ರ ಮಹಾಯುದ್ಧದ ಸಮಯದಲ್ಲಿ ನಡೆದ ಸತ್ಯ ಘಟನೆಯೊಂದನ್ನು ಆಧರಿಸಿ ನಿರ್ಮಾಣವಾದ ಚಿತ್ರವೇ ’ಜಾಯ್ ನೋಯೆಲ್’ ಅಥವಾ ’ಮೆರ್ರಿ ಕ್ರಿಸ್ಮಸ್’. ಕ್ರಿಸ್ಟಿಯನ್ ಕ್ಯಾರಿಯನ್ ಎಂಬ ಫ್ರೆಂಚ್ ನಿರ್ದೇಶಕ ನಿರ್ದೇಶಿಸಿದ ಈ ಚಿತ್ರ ಅತ್ಯುತ್ತಮ ವಿದೇಶಿ ಚಿತ್ರವೆಂದು ಆಸ್ಕರ್ ಪ್ರಶಸ್ತಿಗೆ ನಾಮಾಂಕಿತವಾಗಿತ್ತು. 2005ರ ಪ್ರತಿಷ್ಠಿತ ಕೇನ್ಸ್ ಚಿತ್ರೋತ್ಸವದಲ್ಲಿ ಪ್ರದರ್ಶಿತವಾಗಿ, ಎಲ್ಲರ ಮೆಚ್ಚುಯನ್ನೂ ಗಳಿಸಿತ್ತು. ಕೇವಲ ಎರಡು ಕೋಟಿ ಅಮೆರಿಕನ್ ಡಾಲರ್ ‍ಗಳಲ್ಲಿ ನಿರ್ಮಾಣಗೊಂಡ ಈ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಅಷ್ಟೇನೂ ಸದ್ದು ಮಾಡದಿದ್ದರೂ ಚಿತ್ರ ನೋಡಿದವರೆಲ್ಲರೂ ಅತ್ಯುತ್ತಮ ಚಿತ್ರವೆಂದು ಇದನ್ನು ಹೊಗಳುತ್ತಾರೆ. ಮೊದಲೇ ತಿಳಿಸಿದಂತೆ ಇದು ಸತ್ಯ ಘಟನೆಯೊಂದನ್ನು ಆಧರಿಸಿದ ಚಿತ್ರವಾಗಿದೆ. ಈ ರೀತಿಯ ಘಟನೆಗಳನ್ನು ಬೆಳ್ಳಿ ತೆರೆಗೆ ತರುವಾಗ ಒಬ್ಬ ನಿರ್ದೇಶಕ ಅನೇಕ ರೀತಿಯ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಚಿತ್ರವನ್ನು ಯಾವ ದೃಷ್ಟಿಕೋನದಲ್ಲಿ ಹೇಗೆ ತೆರೆಯ ಮೇಲೆ ತರಬೇಕೆಂಬ ಅಂಶ ಒಂದು ದೊಡ್ಡ ಸವಾಲಾಗುತ್ತದೆ. ಇಲ್ಲಿ ನಿರ್ದೇಶಕ ಅದನ್ನು ನಿವಾರಿಸಿ ಯುದ್ಧದಲ್ಲಿ ಪಾಲ್ಗೊಂಡಿದ್ದ ಸೈನಿಕರ ಅನುಭವಗಳ ಮೂಲಕ ತೆರೆದಿಡುವ ಪ್ರಯತ್ನವನ್ನು ಮಾಡುತ್ತಾರೆ ಹಾಗೂ ಅದರಲ್ಲಿ ಯಶಸ್ವಿಯೂ ಆಗುತ್ತಾರೆ.
ಚಿತ್ರದ ಬಗ್ಗೆ ಬರೆಯುವ ಮುನ್ನ ಈ ಚಿತ್ರದ ಮೂಲ ವಸ್ತುವಿನ ಹಿನ್ನಲೆಯನ್ನು ಬರೆಯಬೇಕಾಗುತ್ತದೆ. 1914ರಲ್ಲಿ ಇಡೀ ವಿಶ್ವವನ್ನೇ ಕರಾಳತೆಯತ್ತ ದೂಡಿದ ಮೊದಲನೆಯ ಮಹಾ ಯುದ್ಧವು ತನ್ನ ಉತ್ತುಂಗದ ಸ್ಥಿತಿಯಲ್ಲಿರುವಾಗ, ಎಲ್ಲೆಡೆ ದ್ವೇಷ ರೋಷ ಹಾಗೂ ಕಹಿ ಭಾವಗಳೇ ತಾಂಡವವಾಡುತ್ತಿರುತ್ತದೆ. ರಾಜಕೀಯ ಕಾರಣಗಳಿಂದ ಆರಂಭಗೊಂಡ ಈ ಮಹಾಯುದ್ಧದಲ್ಲಿ ಹೆಚ್ಚು ವ್ಯಯಕ್ತಿಕ ಹಾನಿಗೊಳಗಾದವರು ಯುದ್ಧಭೂಮಿಯಲ್ಲಿ ಹೋರಾಡಿದ ಸೈನಿಕರು.
ಜರ್ಮನಿ ಹಾಗೂ ಮಿತ್ರ ದೇಶಗಳ ನಡುವಿನ ಈ ಮಹಾಸಮರ ಎರಡೂ ಕಡೆಗಳಲ್ಲಿ ಅಪಾರ ಸಾವು ನೋವನ್ನು ತಂದಿರುತ್ತದೆ. ಆದರೂ ನಾಯಕರುಗಳ ಮನಸು ಕರಗದೆ ಸಮರ ಮುಂದುವರಿಯುತ್ತದೆ. ಬೆಲ್ಜಿಯಂ ಮೂಲಕ ಫ್ರೆಂಚ್ ನೆಲದ ಮೇಲೆ ಆಕ್ರಮಣ ಮಾಡಿಕೊಂಡು ಬಂದ ಜರ್ಮನ್ ಸೈನ್ಯವನ್ನು ಫ್ರೆಂಚ್ ಹಾಗೂ ಬ್ರಿಟಿಷ್ ಪಡೆ ಯಶಸ್ವಿಯಾಗಿ ತಡೆದು ನಿಲ್ಲಿಸುತ್ತದೆ. ಎರಡು ಕಡೆಯ ಪಡೆಗಳು ಜಗ್ಗದೆ ತಮ್ಮ ಪಟ್ಟುಗಳನ್ನು ಸಡಲಿಸದ ಕಾರಣ ಯುದ್ಧ ಯಾವುದೇ ರೀತಿಯ ಪ್ರಗತಿ ಕಾಣದೇ ಒಂದು ಹಂತದಲ್ಲಿ ನಿಂತ ನೀರಂತೆ ಆಗುತ್ತದೆ.
 ಎರಡು ಪಡೆಗಳು ಮೇಲುಗೈ ಸಾಧಿಸಲು ಸಾಧ್ಯವಾಗದೆ ಆಕ್ರಮಣವನ್ನು ಬಿಟ್ಟು ತಮ್ಮ ನೆಲೆಯನ್ನು ಕಾಪಾಡಿಕೊಳ್ಳುವ ತಂತ್ರಕ್ಕೆ ಮೊರೆ ಹೋಗಿ ಒಂದು ರೀತಿ ಸ್ತಬ್ಧವಾದ ಸ್ಥಿತಿಯಲ್ಲಿರುತ್ತಾರೆ. ಆದರೂ ಎಚ್ಚರದ ಸ್ಥಿತಿಯಲ್ಲಿ ಎರಡೂ ಪಡೆಗಳು ತಮ್ಮ ನೆಲೆಯನ್ನು ಕಾಯುತ್ತಿರುತ್ತದೆ. ಯುದ್ಧ ಭೂಮಿಯಲ್ಲಿನ ದೊಡ್ಡ ಕಂದಕಗಳಲ್ಲಿ ನೆಲೆಸುವ ಪಡೆಗಳ ಸೈನಿಕರು ಒಂದು ರೀತಿಯ ತಾತ್ಕಾಲಿಕ ವಿಶ್ರಾಂತಿಗೆ ಮೊರೆಹೋಗುತ್ತಾರೆ. ಕಂದಕಗಳಲ್ಲಿ ತಾತ್ಕಾಲಿಕ ಗೋಡೆಗಳ ಹಿಂದೆ ಇದ್ದ ಎರಡು ಕಡೆಯ ಸೈನಿಕರು ಒಮ್ಮೊಮ್ಮೆ ಬರುವ ಆಹಾರ ಪದಾರ್ಥಗಳನ್ನು ಪಡೆಯುವ ಸಮಯದಲ್ಲಿ ಒಂದು ಕಡೆ ಸೇರುತ್ತಾರೆ. ಒಂದಷ್ಟು ಮಟ್ಟಿಗೆ ಪರಿಚಯ ಮಾಡಿಕೊಂಡು ಪರಸ್ಪರ ವಿಷಯಗಳನ್ನು ವಿನಿಮಯವೂ ಮಾಡಿಕೊಳ್ಳುತ್ತಾರೆ. ಆದರೆ ಯುದ್ಧ ನೀತಿ ಮಾತ್ರ ಕಠೋರ ನಿರ್ದಯವಾಗಿರುವುದರಿಂದ ತಮ್ಮ ಮೂಲಕ್ಕೆ ಮರಳುತ್ತಾರೆ.
ಹೀಗೆ ಅಲ್ಲೂ ಇಲ್ಲ ಇಲ್ಲೂ ಇಲ್ಲ ಎಂಬ ಸ್ಥಿತಿಗೆ ತಲುಪಿದ ಸಮರದ ಈ ಸಮಯದಲ್ಲಿ ಸಂಧಾನದ ಮಾತುಕತೆಗಳು ನಡೆಯುತ್ತವೆ. ಈ ರೀತಿಯ ಶಾಂತಿ ಸಂಧಾನದ ಮಾತುಕತೆಗಳು ಯಾವುದೇ ಪ್ರಯೋಜನಕ್ಕೆ ಬಾರದೆ ವಿಫಲವಾಗುತ್ತವೆ. ಅಂದಿನ ಪೋಪ್ ಹದಿನೈದನೇ ಬೆನೆಡಿಕ್ಟ್ ಕೂಡಾ ಪಡೆಗಳ ನಡುವಿನ ಶಾಂತಿಗೆ ಪ್ರಯತ್ನಿಸುತ್ತಾರೆ. ಕೊನೆಯ ಪಕ್ಷ ಬಾನಿನಲ್ಲಿ ದೇವದೂತರು ಹಾಡುವ ಕ್ರಿಸ್ಮಸ್ ಹಿಂದಿನ ಸಂಜೆಯಾದರೂ ಗುಂಡು ಮದ್ದುಗಳ ಶಬ್ದವಿಲ್ಲದೆ ಶಾಂತಿ ಇರಲಿ ಎಂದು ಅವರು ಕೇಳಿಕೊಂಡರೂ ಮಿಲಿಟರಿ ಮತ್ತು ರಾಜಕೀಯ ನಾಯಕರು ಅದಕ್ಕೆ ಮನಸು ಕಿವಿಗೊಡದೆ ಕಠಿಣ ನಿಲುವನ್ನು ತೋರಿಸುತ್ತಾರೆ.
ಈ ನಡುವೆ ಸೈನಿಕರು ಮಾತ್ರ ತೀರ ಆಕ್ರಮಣಶೀಲರಾಗದೆ ತಕ್ಕಮಟ್ಟಿಗಿನ ಮಾನವೀಯತೆ ಮೆರೆಯುತ್ತಾ, ಸಾಗುತ್ತಾ ತಮ್ಮ ಕುಟುಂಬಗಳನ್ನು ನೆನೆಯುತ್ತ ಕಾಲ ಕಳೆಯುತ್ತಾರೆ. ಅಲ್ಲಿ ಒಂದು ಅನಧಿಕೃತವಾದ ಸಂಧಾನವೆಂಬಂತೆ ಪ್ರತಿ ಸಂಜೆ ಸೈನಿಕರು ಸ್ವಯಂ ಯುದ್ಧ ವಿರಾಮ ಘೋಷಿಸಿಕೊಂಡು ಸತ್ತ ಸೈನಿಕರ ಸಂಸ್ಕಾರ ಹಾಗೂ ಗಾಯಾಳುಗಳನ್ನು ತಮ್ಮ ಶಿಬಿರಗಳಿಗೆ ತೆಗೆದುಕೊಂಡು ಹೋಗುವ ಶಾಂತಿಯ ಹೆಜ್ಜೆಗಳನ್ನು ಹಿಡಿಯುತ್ತಾರೆ.
ಹಾಗೆ ಶಾಂತಿಯ ಪ್ರಕ್ರಿಯೆ ಗೊತ್ತಿಲ್ಲದೆ ನಡೆದಿರುತ್ತದೆ. ಇದರ ಜೊತೆಗೆ ಸಂಗೀತವೂ ಸಹ ಈ ಪ್ರಕ್ರಿಯೆಯಲ್ಲಿ ಪ್ರಮುಖವಾದ ಪಾತ್ರ ವಹಿಸುತ್ತದೆ. ಸಂಜೆಯಲ್ಲಿ ಸೈನಿಕರು ತಮ್ಮ ನೋವು ದಣಿವನ್ನು ಮರೆಯಲು ತಮ್ಮದೇ ಆದ ರೀತಿಯಲ್ಲಿ ಹಾಡುತ್ತಾ ಕೇಕೆ ಹಾಕುತ್ತಾ, ಕೆಲವು ಸಲ ವಿರೋಧಿ ಸೈನಿಕರ ಕಾಲೆಳೆಯುತ್ತಾ ಹಾಡುಗಳನ್ನು ಹಾಡುತ್ತಿರುತ್ತಾರೆ.
ಈ ಹಿನ್ನೆಲೆಯಲ್ಲಿ ಡಿಸೆಂಬರ್ 24 ರ ರಾತ್ರಿ ಆದ ಘಟನೆಯನ್ನು ಆಧರಿಸಿ ನಿರ್ಮಾಣಗೊಂಡ ಚಿತ್ರವಿದು. ಈ ಚಿತ್ರದಲ್ಲಿ ಯುದ್ಧಭೂಮಿಯಲ್ಲಿ ಸೇವೆ ಸಲ್ಲಿಸಿದ ಆರು ಪ್ರಮುಖ ಪಾತ್ರಧಾರಿಗಳ ಭೂಮಿಕೆಯಲ್ಲಿ ಚಿತ್ರಿಸಲಾಗಿದೆ. ಲೆಫ್ಟಿನೆಂಟ್ ಗಾರ್ಡನ್, ಲೆಫ್ಟಿನೆಂಟ್ ಆಡಿಬೋರ್ಡ್, ಲೆಫ್ಟಿನೆಂಟ್ ಹಾರ್ಸ್ ಮೇಯರ್ ಹಾಗೂ ಅವರನ್ನು ರಂಜಿಸಲು ಬಂದ ಜರ್ಮನಿಯ ಇಬ್ಬರು ಪ್ರಖ್ಯಾತ ಸಂಗೀತಗಾರರಾದ ಸ್ಪ್ರಿಂಕ್ ಹಾಗೂ ಆತನ ಪ್ರೇಯಸಿ ಆನಾರವರ ಪಾತ್ರವೇ ಇಲ್ಲಿ ಪ್ರಮುಖ ಭೂಮಿಕೆ.
ಕ್ರಿಸ್ಮಸ್ ಸಮಯದಲ್ಲಿ ಸೈನಿಕ ಪಡೆಗೆ ತಮ್ಮ ಗಾಯನದ ಮೂಲಕ ಹಾರೈಸುವುದು ಸ್ಪ್ರಿಂಕ್ ಹಾಗೂ ಆನಾರ ಉದ್ದೇಶ. ಈ ಉದ್ದೇಶದಿಂದ ಬಂದ ಸ್ಪ್ರಿಂಕ್ ಕ್ರಿಸ್ಮಸ್ಸಿನ ಹಿಂದಿನ ದಿನ ಅಂದರೆ ಕ್ರಿಸ್ಮಸ್ ಈವ್ನಂದು ಯುದ್ಧ ಭೂಮಿಗೆ ಬರುತ್ತಾರೆ. ಆ ಸಮಯದಲ್ಲಿ ಸ್ಪ್ರಿಂಕ್ ಕ್ರಿಸ್ಮಸ್ಸಿನ ಪ್ರಸಿದ್ಧ ಗೀತೆಯಾದ ’ಸೈಲೆಂಟ್ ನೈಟ್’ ಹಾಡಲು ತೊಡಗುತ್ತಾನೆ.
ಇದು ಜರ್ಮನಿಯ ಶಿಬಿರದಲ್ಲಿ ಮಾತ್ರವಲ್ಲದೆ ವಿರೊಧೀ ಪಡೆಗಳ ಶಿಬಿರದಲ್ಲೂ ಒಂದು ರೀತಿಯ ಸಂಚಲನವನ್ನು ಉಂಟು ಮಾಡುತ್ತದೆ. ಕೇವಲ ಮದ್ದು ಗುಂಡುಗಳ ವಾಸನೆ, ಆಕ್ರಂದನ ಬೇಸರದ ಗೂಡಾಗಿದ್ದ ಕಂದಕದಿಂದ ಕ್ರಿಸ್‍ಮಸ್ ಸಂದೇಶ ಹೊರ ಹೊಮ್ಮುತ್ತದೆ.
 ಜರ್ಮನ್ ಸೈನಿಕರು ಸಹಾ ಪುಟ್ಟ ಪುಟ್ಟ ಕ್ರಿಸ್ಮಸ್ ಟ್ರೀ ಗಳನ್ನು ಮಾಡಿ ಅದನ್ನು ಕಂದಕದ ಮೇಲಿನ ಯುದ್ಧಭೂಮಿಯ ನೆಲದ ಮೇಲೆ ಇಡಲು ಪ್ರಾರಂಭಿಸುತ್ತಾರೆ. ಸಣ್ಣದಾಗಿ ಕ್ರಿಸ್ಮಸ್ಸಿನ ವಾತಾವರಣ ಅಲ್ಲಿ ಸೃಷ್ಟಿಯಾಗುತ್ತದೆ. ಇದನ್ನು ನೋಡಿ ಏನು ಮಾಡುವುದೆಂದು ತಿಳಿಯದೇ ಫ್ರೆಂಚ್ ಮಿತ್ರ ಪಡೆಗಳ ಶಿಬಿರದಲ್ಲಿ ಒಂದು ರೀತಿಯ ಗೊಂದಲ ಆವರಿಸುತ್ತದೆ. ಆದರೆ ಅವರ ಮನದಲ್ಲೂ ಸಹಾ ಕ್ರಿಸ್ಮಸ್ಸಿನ ಸುಂದರ ಭಾವಗಳು ಚಿಗುರುತ್ತವೆ.
ಇತ್ತ ಸ್ಪ್ರಿಂಕ್ ತನ್ನ ’ಸೈಲೆಂಟ್ ನೈಟಿನ’ ಹಾಡನ್ನು ಮುಂದುವರಿಸುತ್ತಾನೆ. ವಿರೋಧಿ ಪಾಳಯದಲ್ಲಿನ ಸ್ಕಾಟ್ ಸೈನಿಕರಲ್ಲಿ ಒಬ್ಬ ತನ್ನ ಬಳಿಯಿದ್ದ ಬ್ಯಾಗ್ ಪೈಪರ್ ವಾದನದಿಂದ  ಸಣ್ಣದಾಗಿ ನುಡಿಸಲು ಪ್ರಾರಂಭಿಸುತ್ತಾನೆ. ಹಾಡಿಗೆ ಬ್ಯಾಗ್ ಪೈಪರ್ ವಾದನ ದನಿಗೂಡಿಸುತ್ತದೆ. ಆ ಸ್ಪೂರ್ತಿ, ಉತ್ತೇಜನ ಇಡೀ ಸೈನಿಕ ಪಡೆಗೆ ಹರಡುತ್ತದೆ.
ಎರಡೂ ಕಡೆಯ ಪಡೆಯ ಸೈನಿಕರಲ್ಲಿ ಒಂದು ರೀತಿಯ ರೋಮಾಂಚನ ಉಂಟಾಗುತ್ತದೆ. ಈ ಹೊತ್ತಿನಲ್ಲಿ ಒಂದು ಅನಿರೀಕ್ಷಿತವಾದ ಘಟನೆ ನಡೆಯುತ್ತದೆ. ಸ್ಪ್ರಿಂಕ್ ಹಾಡುತ್ತಾ ಹಾಡುತ್ತಾ ಕಂದಕದಿಂದ ಮೆಲ್ಲಗೆ ಮೆಟ್ಟಿಲುಗಳನ್ನು ಹತ್ತುತ್ತಾ ಯುದ್ಧ ಭೂಮಿಯ ನೆಲದ ಮೇಲೆ ನಿಂತು ಹಾಡಲು ಪ್ರಾರಂಭಿಸುತ್ತಾನೆ.
 ಜರ್ಮನಿಯ ಪಡೆಯ ಲೆಫ್ಟಿನೆಂಟ್ ಇದನ್ನು ವಿರೋಧಿಸಿದರೂ ಗಮನಕೊಡದೆ ಆತ  ವಿರೋಧಿ ಪಡೆಯುತ್ತ ಹೆಜ್ಜೆ ಹಾಕುತ್ತಾನೆ. ಇತ್ತ ಗನ್ನುಗಳನ್ನು ಇಟ್ಟುಕೊಂಡು ನೋಡುತ್ತಿದ್ದ ಮಿತ್ರ ಪಡೆಯ ಸೈನಿಕರು ಏನೂ ಮಾಡಲು ತೋಚದೆ ನಿಲ್ಲುತ್ತಾರೆ.
ಹಾಡು ಮುಂದುವರಿಯುತ್ತಿದ್ದಂತೆಯೇ ಮದ್ದು ಗುಂಡುಗಳು ನೆಲಕ್ಕೆ ಉರುಳಿ ಮಾನವ ಹೃದಯಗಳು ಸೈನಿಕರ ರೂಪದಲ್ಲಿ ಕಂದಕದಿಂದ ಮೇಲೆ ಬಂದು ಯುದ್ಧ ಭೂಮಿಯ ಆ ನೆತ್ತರಿನ ನಡುವೆ ಸ್ನೇಹದ ಹಸ್ತವನ್ನು ಚಾಚುತ್ತದೆ. ಸ್ಪ್ರಿಂಕ್ ತನ್ನ ಗಾಯನವನ್ನು ಮುಗಿಸಿದ್ದೇ ತಡ ವಿರೋಧಿ ಪಾಳಯದಿಂದ ಚಪ್ಪಾಳೆ ಹಾಗೂ ಕೇಕೆಯ ರೂಪದಲ್ಲಿ ಅಭಿನಂದನೆಯ ಮಹಾಪೂರ ಹರಿದು ಬರುತ್ತದೆ.
ಅಲ್ಲಿಗೆ ಒಬ್ಬೊಬ್ಬರೇ ಸೈನಿಕರು ಎರಡು ಪಡೆಗಳ ನಡುವಿನ ಯಾರಿಗೂ ಸೇರದ ’ನೋ ಮ್ಯಾನ್ ಲ್ಯಾಂಡಿ’ನ ಕಡೆ ಹೆಜ್ಜೆ ಹಾಕುತ್ತಾರೆ ಅಲ್ಲಿಗೆ ಕ್ರಿಸ್ಮಸ್ಸಿನ ಶಾಂತಿ ಪ್ರೀತಿಯ ಸಂದೇಶ ಭೀಕರ ಯುದ್ಧಭೂಮಿಯಲ್ಲಿ ತನ್ನದೇ ಆದ ರೀತಿಯಲ್ಲಿ ಸಾಕಾರಗೊಳ್ಳುತ್ತದೆ.
ಮುಂದೆ ಏನಾಗುತ್ತದೆ ಎನ್ನುವುದನ್ನು ಚಿತ್ರವನ್ನು ನೋಡಿಯೇ ಸವಿಯಬೇಕು. ಮನೋಜ್ಞವಾಗಿ ಮೂಡಿಬಂದಿರುವ ಈ ಚಿತ್ರ ಯುದ್ಧದ ಭೀಕರತೆಯನ್ನು ಮಾನವನ ಅಂತರಾಳದಲ್ಲಿ ಶಾಂತಿಯ ಹಾತೊರೆಯುವಿಕೆ, ಗುಂಪಿನಲ್ಲಿದ್ದರೂ ಕಾಡುವ ಏಕಾಂಗಿತನ, ಪ್ರೀತಿಗಾಗಿಯ ಹಂಬಲವನ್ನು ತೆರೆಯ ಮೇಲೆ ತೆರೆದಿರುತ್ತದೆ.
ಅಂತೆಯೇ ನಾಯಕರುಗಳ ಸ್ವಾರ್ಥದಲ್ಲಿ ಬಲಿಪಶುವಾಗುವ ಸಾಮಾನ್ಯ ಜನರ ತಲ್ಲಣ, ಸೈನಿಕರ ನೋವು, ಅವರ ಕುಟುಂಬದವರ ಕಾತುರ, ಕೊನೆಗೆ ಜಗತ್ತಿನ ಎಲ್ಲಾ ಜನರ ಬಗೆಗಿನ ಕಾಳಜಿ ಅನುಕಂಪವನ್ನು ಚಿತ್ರ ನಿಧಾನವಾಗಿ ತೆರೆದಿರುತ್ತದೆ.
ಆದ್ದರಿಂದಲೇ ಈ ಚಿತ್ರ ನೋಡಲೇಬೇಕಾದ ಚಿತ್ರಗಳ ಸಾಲಿನಲ್ಲಿ ಖಂಡಿತವಾಗಿಯೂ ನಿಲ್ಲುತ್ತದೆ. ಅದರಲ್ಲೂ ಕ್ರಿಸ್ಮಸ್ ಸಮಯದಲ್ಲಿ ಈ ಚಿತ್ರ ಮತ್ತಷ್ಟು ಆಪ್ತವಾಗುತ್ತದೆ.



No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...