ಕ್ರಿಸ್ತನ ಬರುವಿಕೆ
ಆಗಮನ ಕಾಲವೆಂದರೆ ಕ್ರಿಸ್ತನ ಬರುವಿಕೆಯನ್ನು ನೆನಪಿಸುವ ಕಾಲ. ಕ್ರಿಸ್ತನ ಬರುವಿಕೆಯು ಮೂರು ರೀತಿಯದ್ದು. ಒಂದು, ಕ್ರಿಸ್ತನು ಮನುಷ್ಯಾವತಾರ ತಾಳಿ ಧರೆಗೆ ಬಂದು ಮನುಷ್ಯಕುಲವನ್ನು ರಕ್ಷಿಸಿದ್ದು. ಇದು ಘಟಿಸಿದ್ದಾಗಿದೆ. ಈ ಒಂದು ಅದ್ಭುತವನ್ನು ಕ್ರಿಸ್ಮಸ್ ಅಚರಣೆಯಲ್ಲಿ ಸಂಭ್ರಮಿಸುತ್ತೇವೆ. ಎರಡನೆಯದು, ಕ್ರಿಸ್ತನ ಎರಡನೆಯ ಬರುವಿಕೆ. ಚಂದ್ರನು ಕಾಂತಿಹೀನನಾಗುವನು; ಅಂತರಿಕ್ಷದಿಂದ ನಕ್ಷತ್ರಗಳು ಬೀಳುವುವು; ಗ್ರಹಶಕ್ತಿಗಳು ಕಂಪಿಸುವುವು. ಆಗ ನರಪುತ್ರನು ಮಹಾಶಕ್ತಿಯಿಂದಲೂ ಮಹಿಮೆಯಿಂದಲೂ ಮೇಘಾರೂಢನಾಗಿ ಬರುವುದನ್ನು ಜನರು ಕಾಣುವರು. ವಿಶ್ವಾಸದ ಪ್ರಕಾರ ಇದು ನಮ್ಮ ಇಹದ ಬದುಕಿನ ಅಂತ್ಯದಲ್ಲಿ ಅಥವಾ ವಿಶ್ವದ ಅಂತ್ಯದಲ್ಲಿ ಕೈಗೂಡಬಹುದಾಗಿದೆ. ಇದು ಭವಿಷ್ಯದಲ್ಲಾಗುವ ಘಟನೆ. ಮೂರನೆಯದು, ನಮ್ಮ ದೈನಂದಿನ ಬದುಕಿಗೆ ಸಂಬಂಧಿಸಿದ್ದು. ನಾವು ಯಾವಾಗ ನಿಜವಾದ ಕ್ರೈಸ್ತ ಜೀವವನ್ನು ಬದುಕುತ್ತೀವೋ ಆಗ ಕ್ರಿಸ್ತ ನಮ್ಮೊಳಗೆ ಬಂದೇ ತೀರುತ್ತಾನೆ. ಇನ್ನೊಂದು ಮಾತಿನಲ್ಲಿ ಹೇಳುವುದಾದರೆ ಕ್ರಿಸ್ತನ ಅನುಭವ ನಮಗಾಗುತ್ತದೆ.
ಎರಡನೇ ಬರುವಿಕೆ, ಹೊಸಯುಗ, ಹೊಸಪರ್ವ ಅದು ಹೊರಜಗತ್ತಿನಲ್ಲಿ ಕಾಣಿಸಿಕೊಳ್ಳುವಂತದಲ್ಲ. ನಮ್ಮ ಪ್ರತಿಕ್ಷಣದ ವೈಯಕ್ತಿಕ ಬದುಕಿನಲ್ಲಿ ಕಾಣಿಸಿಕೊಳ್ಳುವಂತದ್ದು. ನಾವು ಯಾವಾಗ ನಮ್ಮ ಸ್ವಾರ್ಥ ಬಿಟ್ಟು, ಕಷ್ಟದಲ್ಲಿರುವವರಿಗೆ ಸಹಾಯದ ಹಸ್ತ ಚಾಚುತ್ತೇವೆಯೋ ಆಗ ಕ್ರಿಸ್ತ ನಮ್ಮವನಾಗುತ್ತಾನೆ. ಹೊಸಪರ್ವ ಅಲ್ಲಿ ಕಾಣಸಿಗುತ್ತದೆ. ಎಲ್ಲಿ ಶ್ರೀಮಂತ ಮಹಿಳೆಯೊಬ್ಬಳು ನಿರ್ಗತಿಕನಿಗೆ, ಹಸಿದವನಿಗೆ ಊಟ ನೀಡುತ್ತಾಳೋ ಅಲ್ಲಿ ಕ್ರಿಸ್ತ ಬರುತ್ತಾನೆ. ಮನಸ್ತಾಪದ ಬೇಗೆಯಿಂದ ಹಗೆ ಕಾರುತ್ತಿದ್ದ ಸಹೋದರರಲ್ಲಿ ಪ್ರೀತಿಯ ಸಂಧಾನ, ಮೈತ್ರಿ ಸಮನ್ವಯ ಏರ್ಪಟ್ಟಾಗ ಕ್ರಿಸ್ತನ ಆಗಮನ ಅಲ್ಲಾಗುತ್ತದೆ. ಕಾಲೇಜಿನ ಫೀ ಕಟ್ಟಲಾಗದೆ ಕೈಚೆಲ್ಲಿ ಕೂತ ಬಡ ವಿದ್ಯಾರ್ಥಿಗೆ ಇತರ ವಿದ್ಯಾರ್ಥಿಗಳು ಹಣವನ್ನು ಕೂಡಿಸಿ ಕಾಲೇಜ್ ಫೀ ಕೊಟ್ಟಾಗ ಅಲ್ಲಿ ಕ್ರಿಸ್ತನ ಬರುವಿಕೆ, ಕೂಡುವಿಕೆ ಬಯಲಾಗುತ್ತದೆ. ಇಂತಹ ಬದುಕನ್ನು ನಾವು ಬದುಕಿದಾಗ, ತೀರ್ಪುಗಾರನಾಗಿ ಜಗದ ಅಂತ್ಯದಲ್ಲಿ ಅಥವಾ ನಮ್ಮ ಬದುಕಿನ ಅಂತ್ಯದಲ್ಲಿ ಬರುವಾಗ ಭಯ ಪಡುವ ಅಗತ್ಯವೇ ಇರುವುದಿಲ್ಲ.
ಒಬ್ಬ ಉಪಾಧ್ಯಾಯ ಕ್ಲಾಸಿನಲ್ಲಿ ಮಕ್ಕಳಿಗೆ ಒಂದು ಪ್ರಶ್ನೆ ಕೇಳುತ್ತಾನೆ ನಾನು ನನ್ನಲ್ಲಿರುವ ಆಸ್ತಿಪಾಸ್ತಿಯನ್ನೆಲ್ಲಾ ಮಾರಿ ಬಂದ ಹಣವನ್ನು ಚರ್ಚಿಗೆ ಕೊಟ್ಟರೆ ನನಗೆ ಸ್ವರ್ಗ ಸಿಗಬಹುದಾ? ಇಲ್ಲ ಎಂಬ ಉತ್ತರ ವಿದ್ಯಾರ್ಥಿಗಳಿಂದ ಬರುತ್ತದೆ. ಮತ್ತೊಮ್ಮೆ ನಾನು ಪ್ರತಿದಿನ ಚರ್ಚನ್ನು ಸ್ವಚ್ಛಮಾಡಿದರೆ ನನಗೆ ಸ್ವರ್ಗ ಸಿಗಬಹುದಾ? ಎಂದು ಕೇಳಿದಾಗ ಪುನಃ ವಿದ್ಯಾರ್ಥಿಗಳಿಂದ ಇಲ್ಲ ಎಂಬ ಉತ್ತರ ಬರುತ್ತದೆ.... ಹಾಗಾದರೆ ನಾನು ಸ್ವರ್ಗ ಪಡೆಯಲು ಏನು ಮಾಡಬೇಕು ಎಂದು ಉಪಾಧ್ಯಾಯ ಮಕ್ಕಳನ್ನು ಕೇಳಿದಾಗ, ಐದು ವರ್ಷದ ಬಾಲಕ ಹೇಳುತ್ತಾನೆ: ಮೊದಲು ನೀವು ಸಾಯಬೇಕು... ಹೌದು ನಮ್ಮ ಸ್ವಾರ್ಥ/ನಾನು ನನ್ನಲ್ಲಿ ಸಾಯಬೇಕು. ಆಗ ಮಾತ್ರ ಸ್ವರ್ಗ ನಮಗೆ ಪ್ರಾಪ್ತಿಯಾಗುತ್ತದೆ.
ಗುರು ಶಿಷ್ಯರಿಗೆ ಸ್ವರ್ಗಕ್ಕೆ ಯಾರು ಹೋಗಬಹುದು ಎಂದು ಕೇಳಿದಾಗ, ಒಬ್ಬ ಶಿಷ್ಯ ನಾನು ಹೋದರೆ ಹೋದೇನು ಎಂದು ಉತ್ತರಿಸಿದನಂತೆ. ಉತ್ತರವನ್ನು ಕೇಳಿಸಿಕೊಂಡ ಇತರ ಶಿಷ್ಯರು ಕುಪಿತರಾಗಿ ಏನು ಇವನು ಮಾತ್ರ ಸ್ವರ್ಗಕ್ಕೆ ಹೋಗಬಹುದಾ? ನಾವು.. ? ಎಂದು ತಮ್ಮ ತಮ್ಮಲ್ಲೇ ಮಾತನಾಡುತ್ತಿದ್ದಂತೆ. ಗುರು ಹೇಳಿದರಂತೆ... ಹೌದು ನಾನು ಎಂಬುವುದನ್ನು ನಮ್ಮಿಂದ ತೊಡೆದು ಹಾಕಿದರೆ, ಸ್ವರ್ಗಕ್ಕೆ ನಾವೆಲ್ಲರೂ ಹೋಗಬಹುದೆಂದು ಹೇಳಿದರಂತೆ.
No comments:
Post a Comment