Wednesday, 12 December 2018

ಶಾಂತಿ ನೃಪನ ಜನನ



¨ ಫಾದರ್ ವಿಜಯ್ ಕುಮಾರ್, ಬಳ್ಳಾರಿ

ಈ ವಿಶ್ವ ಬಹು ಸುಂದರವಾಗಿದೆ. ತ್ರೈಏಕ ದೇವ ಇದರೊಡೆಯ. ಇಲ್ಲಿ ಕಾಲಾನುಕಾಲಕ್ಕೆ ಹಲವಾರು ಸುಧಾರಕರು, ಕ್ರಾಂತಿ ಪುರುಷರು ಹಾಗೂ ಶಾಂತಿ ಪುರುಷರು ಜನಿಸಿದ್ದಾರೆ. ಕೆಲವರು ತಮ್ಮ ಕಾರ್ಯದಲ್ಲಿ ವಿಜಯಿಗಳಾದರೆ ಇನ್ನೂ ಹಲವರು ಹೀನಾಯವಾದ ಸೋಲನ್ನುಂಡು ಮಡಿದು ಮಾಯವಾಗಿದ್ದಾರೆ ಆದರೆ ಕೆಲವರು ಮಾತ್ರ ದಿಟ್ಟತನದಿಂದ ತಮ್ಮ ಸ್ವಾರ್ಥದ ಎಲ್ಲೆಯನ್ನು ದಾಟಿ ನಿಸ್ವಾರ್ಥದೆಡೆ ಸಾಗಿ ಜಗವನ್ನು ಹಸನುಗೊಳಿಸಿದ್ದಾರೆ. ಅಂಥವರು ಬೆರಳೆಣಿಕೆಯಷ್ಟು ಮಾತ್ರ. ಆದರೆ ಶಾಂತಿಯ ನೃಪನಾಗಿ ಜನಿಸಿದ ಪ್ರಭು ಯೇಸುಕ್ರಿಸ್ತ ವಿಶ್ವಕ್ಕೆ ಶಾಶ್ವತ ಶಾಂತಿಯನ್ನು ನೀಡಲು ತನ್ನನ್ನೇ ಸಂಪೂರ್ಣವಾಗಿ ಬರಿದು ಮಾಡಿಕೊಂಡು ವಿಶ್ವವನ್ನು ವಿಮೋಚಿಸಿದರು. ಇವರೇ ದೇವಮಾನವರ ನಡುವೆ ಮರಿದು ಹೋಗಿದ್ದ ಜೀವಂತ ಸೆಲೆಯ ಸೇತುವೆಯನ್ನು ಪುನರ್ ನಿರ್ಮಿಸಲು ದರೆಗಿಳಿದ "ದೇವಪುತ್ರ". ಈ ಕಾರಣ ಇವರನ್ನು ಶಾಂತಿನೃಪ, ಜಗದೊಡೆಯ, ಲೋಕರಕ್ಷಕ, ಮಾನವಕುಲದ ಉದ್ಧಾರಕ ಎನ್ನುತ್ತೇವೆ.
ಇವರು ಹುಟ್ಟಿದ ದಿನವನ್ನು "ಕ್ರಿಸ್ಮಸ್" ಹಬ್ಬವೆಂದು ಕರೆಯುತ್ತೇವೆ. "ಕ್ರಿಸ್ತ" ಎಂದರೆ ಅಭಿಷೇಕಿಸಲ್ಪಟ್ಟವನು ಎಂದು ಅರ್ಥ. ತಂದೆ ದೇವರಿಂದ ಮಾನವ ಕುಲದ ರಕ್ಷಣೆಗಾಗಿ ವಿಶೇಷವಾಗಿ ಆರಿಸಿ ಅಭಿಷೇಕಿಸಲ್ಪಟ್ಟವರೇ ಪ್ರಭು ಯೇಸುಕ್ರಿಸ್ತ. ಈ ಜಯಂತಿಯನ್ನು ಪ್ರತಿ ವರ್ಷ ಡಿಸೆಂಬರ್ ೨೫ರಂದು ವಿಶ್ವದ ಎಲ್ಲಾ ಕ್ರೈಸ್ತಭಕ್ತರು ಮಾತ್ರವಲ್ಲ, ಇತರರೂ ಸಹ ಬಹು ಉಲ್ಲಾಸ, ಸಡಗರ ಸಂಭ್ರಮದಿಂದ ಆಚರಿಸುತ್ತಾರೆ. ಕ್ರೈಸ್ತರಿಗೆ ಪ್ರಭು ಯೇಸುವೇ ನಿಜದೇವರ ವಾಗ್ದತ್ತ ಪುತ್ರ, ವಿಮೋಚಕ ಹಾಗೂ ಸ್ವಂತರಕ್ಷಕ. ಅವರಿಂದಲೇ ಮಾನವ ಕುಲದ ಉದ್ಧಾರ ಎಂದು ಕ್ರೈಸ್ತ ಭಕ್ತರು ವಿಶ್ವಾಸಿಸುತ್ತಾರೆ.
 ಈ ಜಯಂತಿಯು ಪ್ರಾರಂಭದಲ್ಲಿ ವಿಶ್ವವನ್ನು ಪಸರಿಸಿರಲಿಲ್ಲ. ಆದರೆ ನಾಲ್ಕನೇ ಶತಮಾನದಿಂದ ಇದು ಎಲ್ಲೆಡೆ ಹಬ್ಬಿ ಹರಡಿತು. ಉದ್ಧಾರಕ ಪ್ರಭು ಯೇಸುಕ್ರಿಸ್ತನ ಜನನವನ್ನು ಶತಮಾನಗಳ ಹಿಂದೆಯೇ ಪ್ರವಾದಿಗಳು ಮುಂತಿಳಿಸಿದ್ದರು. ಯೆಶಾಯಪ್ರವಾದಿಯು "ಇಗೋ ಕನ್ಯೆಯೊಬ್ಬಳು ಗರ್ಭತಳೆದು ಪುತ್ರನೊಬ್ಬನನ್ನು ಪ್ರಸವಿಸುವಳು. ಇಮ್ಮಾನುವೇಲ್ ಎಂದು ಆತನಿಗೆ ಹೆಸರಿಡುವಳು" (ಯೆಶಾಯ ೭: ೧೪) ಎಂದು ಮುಂದುವರಿಯುತ್ತ "ಜೆಸ್ಸೆಯನ ಬುಡದಿಂದ ಒಡೆಯುವುದೊಂದು ಚಿಗುರು; ಅದರ ಬೇರಿನಿಂದ ಫಲಿಸುವುದೊಂದು ತಳಿರು" (ಯೆಶಾಯ ೧೧: ೧) ಎಂಬುದಾಗಿ ಘೋಷಿಸಿದ್ದನು. ಅದರಂತೆಯೇ ಶತಮಾನಗಳ ನಂತರ "ಕಾಲವು ಪರಿಪಕ್ವವಾದಾಗ" (ಗಲಾತ್ಯ ೪: ೪-೭) ಪ್ರಭು ಯೇಸುಕ್ರಿಸ್ತ ಸದ್ದು ಗದ್ದಲಗಳಿಲ್ಲದೆ ನಿರಾಡಂಬರವಾಗಿ ಜೆರುಸಲೇಮಿನಿಂದ ಕೆಲವೇ ಕಿಲೋ ಮೀಟರ್ ದೂರದಲ್ಲಿರುವ ಬೆತ್ಲೆಹೇಮಿನಲ್ಲಿ ಸೂಕ್ತ ಸ್ಥಳ ದೊರೆಯದೆ ದನಗಳ ಕೊಟ್ಟಿಗೆಯಲ್ಲಿ ’ಶಾಂತಿ ನೃಪ’ನಾಗಿ ಜನಿಸಿದರು "ಎಫ್ರಾತದ ಬೆತ್ಲೆಹೇಮೇ, ಜುದೇಯದ ಕುಲಗಳಲ್ಲಿ ನೀನು ಅತಿ ಚಿಕ್ಕವಳಾದರೂ ಇಸ್ರಯೇಲನ್ನು ಆಳತಕ್ಕವನು ನಿನ್ನಿಂದಲೇ ಉದಯಿಸುವನು. ಆತನ ಗೋತ್ರದ ಮೂಲ ಪುರಾತನವಾದುದು, ಅನಾದಿಕಾಲದಿಂದ ಬಂದುದು ಎಂದು ಮೀಕ ಪ್ರವಾದಿ ಬೆತ್ಲೆಹೇಮಿನ ಹಿರಿಮೆಯ ಬಗ್ಗೆ ಪ್ರವಾದಿಸಿದ್ದನು (೫: ೨). ಅದರಂತೆಯೇ ಬೆತ್ಲೆಹೇಮಿನಲ್ಲಿ ಕ್ರಿಸ್ತನ ಜನನವಾಯಿತು.
 ಈ ’ಶಾಂತಿ ನೃಪ’ನ ಜನನದ ಸಂದೇಶವನ್ನು ದೂತ ವೃಂದ "ಮಹೋನ್ನತದಲ್ಲಿ ದೇವರಿಗೆ ಮಹಿಮೆ ಭೂಲೋಕದಲ್ಲಿ ದೇವರೊಲಿದ ಮಾನವರಿಗೆ ಶಾಂತಿ ಸಮಾಧಾನ" ಎಂದು ಹಾಡಿ ಹೊಗಳಿ, ಅವರ ಜನನದ ಸಂದೇಶವನ್ನು ಆ ನಾಡಿಗರಿಗೆ ಸಾರಿತು, (ಲೂಕ ೨: ೧೪). ಪ್ರವಾದಿ ಯೆಶಾಯನು ಪ್ರಭುವಿನ ಜನನವನ್ನು ಕುರಿತು ಶತಮಾನಗಳ ಹಿಂದೆಯೇ ಹೀಗೆ ಗುಣಗಾನ ಮಾಡಿದ್ದನು.
"ಮಗುವೊಂದು ಹುಟ್ಟಿತೆಮಗೆ
ವರಪುತ್ರನನು ಕೊಟ್ಟರೆಮಗೆ
ಆತನ ಕೈಯಲ್ಲಿಹುದು ರಾಜ್ಯಾಡಳಿತ
ಅದ್ಭುತಶಾಲಿ’, ಮಂತ್ರಿಶ್ರೇಷ್ಠ’,
ಪರಾಕ್ರಮಿದೇವ’, ’ಅನಂತ ಪಿತ’,
ಶಾಂತಿ ನೃಪ’- ಇವು ಆತನ ನಾಮಾಂಕಿತ.
ಅಂತ್ಯವಿರದಾತನ ರಾಜ್ಯಾಭಿವೃದ್ಧಿಗೆ
ಕೊನೆಯಿರದಾ ರಾಜ್ಯದ ಶಾಂತಿಗೆ,
ಆಸೀನನಾಗುವನಾತ ದಾವೀದನ
ಸಿಂಹಾಸನದ ಮೇಲೆ.
ಅಧಿಕಾರ ನಡೆಸುವನು ಆ ಸಾಮ್ರಾಜ್ಯದ ಮೇಲೆ.
ಬಲಪಡಿಸುವನು ನ್ಯಾಯ ನೀತಿಯಿಂದದನು
ಇಂದಿಗೂ ಎಂದೆಂದಿಗೂ ಸ್ಥಿರಪಡಿಸುವನದನು"
(ಯೆಶಾಯ ೯: ೬-೭)

ಈ ’ಶಾಂತಿ ನೃಪ’ ಪ್ರಭು ಯೇಸುಕ್ರಿಸ್ತನ ಜನನ ಮಾನವ ಕುಲದ ರಕ್ಷಣೆಯ ಅಂತಿಮ ಸಂದೇಶ. ಯಾರು ಈ ರಕ್ಷಣೆಯ ಅಂತಿಮ ಸಂದೇಶವನ್ನು ಸ್ವೀಕರಿಸುತ್ತಾರೂ ಅವರು ರಕ್ಷಣೆಗೆ ಭಾಜನರಾಗುತ್ತಾರೆ. ಆ ಕಾರಣದಿಂದಲೇ ಈ ರಕ್ಷಣೆಯ ಸಂದೇಶವು ಅಂದು ಸರಳ ಮನಸ್ಕರಿಗೆ ಆನಂದವನ್ನು (ಲೂಕ ೨: ೧೫-೨೦), ಜ್ಞಾನಿಗಳಿಗೆ ಸಂತೃಪ್ತಿಯನ್ನು (ಮತ್ತಾಯ ೨: ೧-೧೨) ಉಂಟು ಮಾಡಿದರೆ, ಸ್ವಾರ್ಥದ ಕೋಟೆಗಳನ್ನು ಕಟ್ಟಿಕೊಂಡಿದ್ದ ರಾಜಮಹಾರಾಜರುಗಳಿಗೆ ತಲ್ಲಣವನ್ನು ಉಂಟು ಮಾಡಿತು. ’ಶಾಂತಿ ನೃಪ’ ಜನಿಸಿರುವ ಸಂದೇಶವನ್ನು ಕೇಳಿದ "ಹೆರೋದರಸನು ಬಹಳ ತಳಮಳಗೊಂಡನು; ಅಂತೆಯೇ ಜೆರುಸಲೇಮ್ ಆದ್ಯಂತವೂ ಗಲಿಬಿಲಿಗೊಂಡಿತು (ಮತ್ತಾಯ ೨: ೩). ಅರಸ ಹೆರೋದ ಗಲಿಬಲಿಗೊಳ್ಳಲು ಕಾರಣ ಅವನಲ್ಲಿದ್ದ ಅಧಿಕಾರದ ದಾಹ, ತಾನೇ ಸರ್ವಶೇಷ್ಠ ಅರಸ, ತನ್ನ ಹೊರತು ಬೇರೆ ರಾಜನಿರಲು ಸಾಧ್ಯವಿಲ್ಲ ಎಂಬ ಗರ್ವ! ಪಭು ಕ್ರಿಸ್ತನಿಗೆ ಅಧಿಕಾರದ ಅವಶ್ಯಕತೆಯಾಗಲಿ, ದಾಹವಾಗಲಿ ಇರಲಿಲ್ಲ. ಏಕೆಂದರೆ ಅವರೇ "ಆಲ್ಫಾ" ಮತ್ತು "ಓಮೆಗ"ವಾಗಿದ್ದಾರೆ. ಇದರ ಪರಿಜ್ಞಾನ ಆಹೆರೊದರಸನಿಗಿರಲಿಲ್ಲ ಅದ್ದರಿಂದಲೇ ತನ್ನ ಅಧಿಕಾರ ಉಳಿಸಿಕೊಳ್ಳಲು ಅಂದು ತನ್ನ ಸಾಮ್ರಾಜ್ಯದ ಸುತ್ತಮುತ್ತಲಿನ ಪುಟ್ಟ ಮಕ್ಕಳನ್ನು ಕೊಲೆ ಮಾಡಿಸಲು ಹಿಂಜರಿಯುವುದಿಲ್ಲ (ಮತ್ತಾಯ ೨: ೧೬). ಅಧಿಕಾರದ ಮದ ಸುಜ್ಞಾನದ ಕಣ್ಣುಗಳನ್ನುಮುಚ್ಚಿಹಾಕುತ್ತದೆ.
 ಅಂದು ವಾಟ್ಸಾಪ್, ಫೇಸ್ಬುಕ್ಗಳ ಸದ್ದು ಗದ್ದಲವಿಲ್ಲದೆ ’ಶಾಂತಿ ನೃಪ’ನ ಜನನ ವಿಶ್ವದ ಉದ್ದಗಲಕ್ಕೂ ಶಾಂತಿಯ ಸೆಲೆಯಾಗಿ ಭುವಿಯಲ್ಲೆಲ್ಲ ಪಸರಿಸಿತು. ಅದು ವಿಶ್ವದಲ್ಲಿ ಹೊಸ ಶಕೆಯನ್ನೇ ಪ್ರಾರಂಭಿಸಿತು. ಯೆಶಾಯನು ತಿಳಿಸುವ ಹಾಗೆ ಅವನು"ಶಾಂತಿ ನೃಪ"ನಾಗಿದ್ದನು. ಅವನ ರಾಜ್ಯ ಬೌತಿಕ ರಾಜ್ಯವಾಗಿರಲಿಲ್ಲ. ಅದು ಎಲ್ಲಾ ಬೌತಿಕ, ಲೌಕಿಕ ಎಲ್ಲೆಗಳನ್ನು ಮೀರಿ ಪರಿಪೂರ್ಣ ಶಾಂತಿಯ ದೈವೀ ಸತ್ಸಂಬಂಧಕ್ಕೆ ನಾಂದಿ ಹಾಡಿತು. ಆದರೆ ಇದನ್ನು ಗ್ರಹಿಸದ ಮಾನವರು ಪ್ರಭುವಿನ ಜನನದ ನೈಜಸಂದೇಶವಾದ ಸಮಾನತೆ, ಸೌಹಾರ್ದತೆ, ಸಹಕಾರ, ಸ್ನೇಹ, ಪ್ರೀತಿಯನ್ನು ಮರೆತು ಇನ್ನೂ ಸಹ ಲೌಕಿಕ ಆಶಾಪಾಶಗಳಿಂದಲೇ ತುಂಬಿ ಹೋಗಿದ್ದಾರೆ. ಈ ಕಾರಣ ಇಂದು ಕ್ರಿಸ್ಮಸ್ ಒಂದು ಬಾಹ್ಯ ಆಚರಣೆಯಾಗುತ್ತಿದೆಯೇ ಹೊರತು ದೈವೀಕ ಸತ್ಸಂಬಂಧಕ್ಕೆ ನಾಂದಿಯಾಗದೇ ಇರುವುದು ಶೋಚನೀಯ. ಇದಕ್ಕೆ ಆತ್ಮಾವಲೋಕನ ಅವಶ್ಯಕ.
ಕ್ರಿಸ್ಮಸ್’ ನಮ್ಮೆಲ್ಲರ ರಕ್ಷಣೆಯ ಹಬ್ಬ. ದೇವರು ಮಾನವನನ್ನು ಪಾಪದ ಎಲ್ಲಾ ಸಂಕೋಲೆಗಳಿಂದ ರಕ್ಷಿಸಲು ತಮ್ಮ ಒಬ್ಬನೇ ಮಗನನ್ನು ಕಳುಹಿಸಿದರು (ಯೊವಾನ್ನ ೩: ೧೬). ಅವರನ್ನು ಅಂಗೀಕರಿಸುವ ಎಲ್ಲರಿಗೂ ರಕ್ಷಣೆ ಉಚಿತ ಹಾಗು ಖಚಿತ. ಅದಕ್ಕೆ ಬೇಕಾಗಿರುವುದು ಹಣ, ಆಸ್ತಿ, ಅಂತಸ್ತಲ್ಲ. ಬದಲಾಗಿ ಮನಶುದ್ಧಿ, ತನುಶದ್ಧಿ ಹಾಗೂ ಆತ್ಮಶುದ್ಧಿ. ಮಾನವರು ತಮ್ಮ ಸ್ವಾರ್ಥದ ಭದ್ರಕೋಟೆಗಳಿಂದ ಹೊರಬರಬೇಕು, ತಾನು ಶ್ರೇಷ್ಠ ಇತರರು ಕನಿಷ್ಠ ಎಂಬ ಕುಬ್ಜ ಮನೋಭಾವದಿಂದ ದೂರ ಸರಿದು ವಿಶಾಲ ಮನೋಭಾವ ಬೆಳೆಸಿಕೊಳ್ಳಬೇಕು. ವಿಕೃತ ಪಾಪದ ಕಗ್ಗತ್ತಲಿನಿಂದ ದೈವೀಕ ಬೆಳಕಿನೆಡೆಗೆ ಸಾಗಬೇಕು. ಈ ಲೋಕದಲ್ಲಿ ಯಾವ ಸ್ಥಾನಮಾನವೂ ಸ್ಥಿರವಲ್ಲ, ಯಾವ ಕೋಟ್ಯಧಿಪತಿಯೂ ಇಲ್ಲಿ ನಿರಂತರವಾಗಿ ಇರಲು ಸಾಧ್ಯವಿಲ್ಲ. ಈ ಲೋಕ ಒಂದು ಸುಂದರ ತಾಣ. ಇದು ದೇವರ ಸೃಷ್ಟಿ. ಇದನ್ನು ದೇವರು ಸರ್ವರ ಉಪಯೋಗಕ್ಕಾಗಿ ನಿರ್ಮಿಸಿದ್ದಾರೆ. ಇದು ನಮ್ಮ ಮುಂದಿನ ಸ್ಥಿರವಾದ, ಶಾಶ್ವತ ದೈವೀರಾಜ್ಯಕ್ಕೆ ನಮ್ಮನ್ನು ಸಿದ್ಧಗೊಳಿಸುವ ತಂಗುಧಾಮವಾಗಿದೆ. ಇದರ ಸದುಪಯೋಗವನ್ನು ಬಳಸಿಕೊಳ್ಳುವ ಸರ್ವರೂ ಕ್ರಿಸ್ತನ ಜನನದ ಸಂದೇಶದ ಮೂಲ ತಿರುಳನ್ನು ಅರ್ಥೈಸಿಕೊಂಡು ಪಾವನವಾದಲ್ಲಿ ಸರ್ವರೂ ಶಾಂತಿ ನೃಪನ ಆಸ್ಥಾನದಲ್ಲಿ ಆಸೀನರಾಗುವುದರಲ್ಲಿ ಸಂದೇಹವಿಲ್ಲ! ಆ ವರದಾನವನ್ನು ನೀಡಲೆಂದೇ ಶಾಂತಿ ನೃಪ ನಮಗಾಗಿ ಜನಿಸಿದ್ದಾರೆ.


No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...